ಬೆಂಗಳೂರು: ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಅಮೆರಿಕ ಪ್ರವಾಸ ಮುಗಿಸಿ ರಾಜ್ಯಕ್ಕೆ ಮರಳಿದ್ದು, ಇದೀಗ ಅವರ ಮುಂದಿನ ನಡೆ ಏನು ಎಂಬುದು ರಾಜ್ಯ ರಾಜಕೀಯ ವಲಯದಲ್ಲಿ ಭಾರೀ ಕುತೂಹಲಕ್ಕೆ ಕಾರಣವಾಗಿದೆ.ಅಮೆರಿಕ ಪ್ರವಾಸಕ್ಕೂ ಮುನ್ನ ನಡೆದ ಸುದ್ದಿಗೋಷ್ಠಿಯಲ್ಲಿ ಕುಮಾರಸ್ವಾಮಿ ಅವರು, ‘ನಾನು ವಾಪಸ್ ಬಂದ ಮೇಲೆ ದೇಶ ಹಾಗೂ ರಾಜ್ಯದಲ್ಲೇ ಅಲ್ಲೋಲ-ಕಲ್ಲೋಲವಾಗಲಿದೆ’ ಎಂದು ಹೇಳಿದ್ದರು. ಈ ಹೇಳಿಕೆ ಇದೀಗ ರಾಜಕೀಯ ವಲಯದಲ್ಲಿ ಮತ್ತೆ ಚರ್ಚೆಗೆ ಗ್ರಾಸವಾಗಿದೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರರ ನೇಮಕಾತಿ ವಿವಾದ, ಬಿಡದಿ ಟೌನ್ಶಿಪ್, ನೈಸ್ ಸೇರಿದಂತೆ ಹಲವು ವಿಚಾರಗಳಲ್ಲಿ ಅವರು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು.
ಇದೀಗ ಕುಮಾರಸ್ವಾಮಿ ಅವರು ಯಾವ ವಿಚಾರಗಳನ್ನು ಮುಂದಿಟ್ಟುಕೊಂಡು ಸರ್ಕಾರದ ವಿರುದ್ಧ ಹೊಸ ಆರೋಪಗಳನ್ನು ಮಾಡಲಿದ್ದಾರೆ ಎಂಬ ಚರ್ಚೆ ತೀವ್ರಗೊಂಡಿದೆ. ಕೆಪಿಎಸ್ಸಿ ಹಗರಣ, ನೈಸ್ ವಿವಾದ, ಅಧಿಕಾರಿಗಳ ವರ್ಗಾವಣೆಯಲ್ಲಿ ಅವ್ಯವಹಾರ ಸೇರಿದಂತೆ ಹಲವು ವಿಷಯಗಳನ್ನು ಅವರು ಪ್ರಸ್ತಾಪಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಗೌರಿ-ಗಣೇಶ ಹಬ್ಬದ ಬಳಿಕ ಎರಡು-ಮೂರು ದಿನಗಳಲ್ಲಿ ಕುಮಾರಸ್ವಾಮಿ ಅವರು ಸುದ್ದಿಗೋಷ್ಠಿ ನಡೆಸುವ ಸಾಧ್ಯತೆ ಇದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ. ಹೀಗಾಗಿ ಅವರ ಸುದ್ದಿಗೋಷ್ಠಿಯತ್ತ ಇದೀಗ ಎಲ್ಲರ ಗಮನ ನೆಟ್ಟಿದೆ.






