ಬೆಂಗಳೂರು: ರಾಜ್ಯದ ಆಸ್ತಿ ಮಾಲೀಕರಿಗೆ ಸರ್ಕಾರ ಸಿಹಿಸುದ್ದಿ ನೀಡಿದ್ದು, ಬಿ ಖಾತಾದಿಂದ ಎ ಖಾತಾಗೆ ಪರಿವರ್ತನೆ ಮಾಡಿಕೊಳ್ಳುವ ಅವಧಿಯನ್ನು 2027ರ ಡಿಸೆಂಬರ್ 31ರವರೆಗೆ ವಿಸ್ತರಿಸಿದೆ. ಕೆಲವೊಂದು ಷರತ್ತುಗಳೊಂದಿಗೆ ಈ ಅವಧಿ ವಿಸ್ತರಣೆಗೆ ಸರ್ಕಾರ ಆದೇಶ ಹೊರಡಿಸಿದೆ.ಈ ನಿರ್ಧಾರದಿಂದ ಬೆಂಗಳೂರಿನಲ್ಲಿ ಸೇರಿದಂತೆ ರಾಜ್ಯದ ಹಲವು ನಗರ ಹಾಗೂ ಗ್ರಾಮೀಣ ಪ್ರದೇಶಗಳ ಅರ್ಹ ಆಸ್ತಿ ಮಾಲೀಕರಿಗೆ ಅನುಕೂಲವಾಗಲಿದೆ. ಎ ಖಾತಾಗೆ ಪರಿವರ್ತನೆಯಿಂದ ಆಸ್ತಿಯ ಕಾನೂನುಬದ್ಧ ದಾಖಲೆ, ಬ್ಯಾಂಕ್ ಸಾಲ ಪಡೆಯುವುದು ಹಾಗೂ ಆಸ್ತಿ ಮಾರಾಟದ ಸಂದರ್ಭದಲ್ಲಿ ಎದುರಾಗುವ ಹಲವು ತೊಡಕುಗಳು ನಿವಾರಣೆಯಾಗುವ ನಿರೀಕ್ಷೆಯಿದೆ.
ನಗರ ಸ್ಥಳೀಯ ಸಂಸ್ಥೆಗಳು ಅಥವಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಗರಿಷ್ಠ 1,000 ಚದರ ಮೀಟರ್ (ಸುಮಾರು 10,764 ಚದರ ಅಡಿ) ವಿಸ್ತೀರ್ಣದ ನಿವೇಶನ, ಪ್ಲಾಟ್ ಅಥವಾ ಭೂಮಿಗೆ ಈ ಯೋಜನೆ ಅನ್ವಯವಾಗಲಿದೆ. ಆಸ್ತಿಯನ್ನು ಈಗಾಗಲೇ ಕೃಷಿಯೇತರ ಉದ್ದೇಶಕ್ಕೆ ಬಳಸುತ್ತಿರಬೇಕು.
ಅಲ್ಲದೆ, ಆಸ್ತಿಯು ಸಂಬಂಧಪಟ್ಟ ನಗರದ ಮಾಸ್ಟರ್ ಪ್ಲಾನ್‌ನ ವಲಯ ನಿಯಮಾವಳಿಗಳು ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದ ನಿಯಮಗಳಿಗೆ ಅನುಗುಣವಾಗಿರಬೇಕು.
ಸರ್ಕಾರದ ಪ್ರಮುಖ ಷರತ್ತುಗಳು
- ನಗರ ಪ್ರದೇಶದಲ್ಲಿ 2024ರ ಸೆಪ್ಟೆಂಬರ್ 10ರಂದು ಅಥವಾ ಅದಕ್ಕೂ ಮುನ್ನ ಬಿ ಖಾತಾ ದಾಖಲಾಗಿರಬೇಕು.
- ಗ್ರಾಮೀಣ ಪ್ರದೇಶದಲ್ಲಿ 2025ರ ಏಪ್ರಿಲ್ 7ರಂದು ಅಥವಾ ಅದಕ್ಕೂ ಮುನ್ನ ಬಿ ಖಾತಾ ದಾಖಲಾಗಿರಬೇಕು.
- ಗರಿಷ್ಠ 1,000 ಚದರ ಮೀಟರ್ ವಿಸ್ತೀರ್ಣದ ಆಸ್ತಿಗಳಿಗೆ ಮಾತ್ರ ಅನ್ವಯ.
- ಆಸ್ತಿಯನ್ನು ಕಡ್ಡಾಯವಾಗಿ ಕೃಷಿಯೇತರ ಉದ್ದೇಶಕ್ಕೆ ಬಳಸುತ್ತಿರಬೇಕು.
- ಸಂಬಂಧಪಟ್ಟ ಮಾಸ್ಟರ್ ಪ್ಲಾನ್ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದ ನಿಯಮಗಳನ್ನು ಆಸ್ತಿ ಪಾಲಿಸಿರಬೇಕು.

ಆನ್‌ಲೈನ್‌ನಲ್ಲಿ ಎ ಖಾತಾಗೆ ಅರ್ಜಿ ಸಲ್ಲಿಸುವುದು ಹೇಗೆ?
ಅರ್ಹ ಆಸ್ತಿ ಮಾಲೀಕರು ಅಧಿಕೃತ BBMP-GBA e-Aasthi/Khata ಪೋರ್ಟಲ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.
- ಅಧಿಕೃತ ಪೋರ್ಟಲ್‌ಗೆ ತೆರಳಿ ಇ-ಮೇಲ್ ಅಥವಾ ಮೊಬೈಲ್ ಸಂಖ್ಯೆ ಮೂಲಕ ಲಾಗಿನ್ ಆಗಬೇಕು.
- ಆಸ್ತಿಯ EP ID/PID ಸಂಖ್ಯೆ ಹಾಗೂ ವಿಳಾಸದ ವಿವರಗಳನ್ನು ನಮೂದಿಸಿ ಮಾಲೀಕತ್ವದ ಮಾಹಿತಿಯನ್ನು ಪರಿಶೀಲಿಸಬೇಕು.
- ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ ಆಧಾರ್ e-KYC ಪೂರ್ಣಗೊಳಿಸಬೇಕು.
- ಆಸ್ತಿಯ ಎಲ್ಲ ಮಾಲೀಕರ ಆಧಾರ್ ವಿವರಗಳನ್ನು ನಮೂದಿಸಿ OTP ಮೂಲಕ e-KYC ಪ್ರಕ್ರಿಯೆ ಪೂರ್ಣಗೊಳಿಸಬೇಕು.
- ನಿಗದಿತ ಅರ್ಜಿ ಶುಲ್ಕ ಪಾವತಿಸಿ ಅರ್ಜಿಯನ್ನು ಸಲ್ಲಿಸಬೇಕು.
- ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಆನ್‌ಲೈನ್‌ನಲ್ಲೇ ಡಿಜಿಟಲ್ ಎ ಖಾತಾ ಪ್ರಮಾಣಪತ್ರವನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.

ಆಸ್ತಿ ಖರೀದಿ ಅಥವಾ ಮಾರಾಟದ ಸಂದರ್ಭದಲ್ಲಿ ಖಾತಾ ಪ್ರಮುಖ ದಾಖಲೆಯಾಗಿರುವುದರಿಂದ, ಬಿ ಖಾತಾದಿಂದ ಎ ಖಾತಾಗೆ ಪರಿವರ್ತನೆಗೆ ಸರ್ಕಾರ ನೀಡಿರುವ ಈ ಅವಕಾಶವನ್ನು ಅರ್ಹ ಆಸ್ತಿ ಮಾಲೀಕರು ಬಳಸಿಕೊಳ್ಳಬಹುದಾಗಿದೆ.







