ಮಕ್ಕಳಿಂದ ಹೆತ್ತವರನ್ನು ಬೇರ್ಪಡಿಸುತ್ತಿರುವ ಕೋವಿಡ್: ದೇಶದಲ್ಲಿ 577 ಮಕ್ಕಳು ಅನಾಥ

ಮದುವೆಯಾಗಿ 9 ವರ್ಷಗಳಾದರೂ ಮಕ್ಕಳಾಗಲಿಲ್ಲವೆಂಬ ಆ ದಂಪತಿಯ ಆಸೆಯು ಕೊರೋನಾ ಸಾಂಕ್ರಾಮಿಕದ ನಡುವೆಯೂ ಅಚ್ಚರಿಯೆಂಬಂತೆ ಈಡೇರಿತು. ಆದರೆ ಮುದ್ದಾದ ಈ ಹೆಣ್ಣು ಮಗುವನ್ನು ಮುದ್ದಾಡುವ ಮೊದಲೇ ಆ ದಂಪತಿಯನ್ನು ಕೋವಿಡ್ ಬಲಿ ತೆಗೆದುಕೊಂಡುಬಿಟ್ಟಿತು!

ಮಂಡ್ಯ ಜಿಲ್ಲೆಯ ದೊಡ್ಡೇನಹಳ್ಳಿ ಗ್ರಾಮದ ನಂಜುಂಡೇ ಗೌಡ (45) ಮತ್ತು ಮಮತಾ (31) ಅವರ ದಾಂಪತ್ಯ ಜೀವನದ ಎಂಟು ವರ್ಷಗಳು ಮಕ್ಕಳಿಲ್ಲದ ಕೊರಗಿನಿಂದಲೇ ಕಳೆದುಹೋಗಿತ್ತು. ಕಳೆದ ವರ್ಷ ಕೋವಿಡ್ ಸಾಂಕ್ರಾಮಿಕದ ನಡುವೆಯೇ ಮಮತಾ ಗರ್ಭವತಿಯಾದರು. ಇನ್ನೇನು ದೇವರು ಕಣ್ಣು ಬಿಟ್ಟ, ನಮ್ಮ ಕನಸು ಕೈಗೂಡಿತು ಎಂದು ಸಂಭ್ರಮಿಸುತ್ತಾ ಭೂಮಿಗೆ ಕಾಲಿಡಲಿದ್ದ ತಮ್ಮ ಭಾವಿ ಮಗುವಿನ ಬಗ್ಗೆ ಕನಸು ಕಾಣುತ್ತಿದ್ದ ಮಮತಾಗೆ ಏಪ್ರಿಲ್ 30 ರಂದು ಬರಸಿಡಿಲಿನಂಥ ಸುದ್ದಿ ಬಂದೆರಗಿತ್ತು. ಕೋವಿಡ್ ಗೆ ತುತ್ತಾಗಿದ್ದ ಆಕೆಯ ಪತಿ ನಂಜುಂಡೇ ಗೌಡರು ಬೆಂಗಳೂರಿನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ಸುದ್ದಿಯದು. ಇನ್ನೊಂದೆಡೆ, ಕೋವಿಡ್ ಸೋಂಕಿನಿಂದ ಬಳಲುತ್ತಿದ್ದ ಮಮತಾ ಕೂಡ ಅದಾಗಿ ನಾಲ್ಕೇ ದಿನಗಳಿಗೆ ಮಂಡ್ಯದ ಜಿಲ್ಲಾಸ್ಪತ್ರೆಯಲ್ಲಿ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿ, ಕಣ್ಣು ಮುಚ್ಚಿದರು.

ದಂಪತಿಯ ಒಂಬತ್ತು ವರ್ಷಗಳ ಕನಸುಗಳನ್ನು ಸಾಕಾರಗೊಳಿಸಿರುವ ಪುಟ್ಟ ಹೆಣ್ಣು ಮಗುವೀಗ ಅನಾಥವಾಗಿದೆ. ಮಮತಾ ಅವರ ಸಹೋದರನ ಕುಟುಂಬವು ಈ ಹೆಣ್ಣು ಮಗುವನ್ನು ದತ್ತು ತೆಗೆದುಕೊಳ್ಳಲು ಮುಂದೆ ಬಂದಿದೆ.

ಬೆಂಗಳೂರಿನ ಯಲಹಂಕದಲ್ಲಿ ವಾಸವಿದ್ದ ಇನ್ನೊಂದು ದಂಪತಿ ಕೋವಿಡ್ ಗೆ ಬಲಿಯಾಗಿದ್ದು, ಅವರ ಮೂರು ಮಕ್ಕಳು ಅನಾಥರಾಗಿದ್ದಾರೆ.

ಕೋವಿಡ್ ಮಹಾಮಾರಿಯ ಎರಡನೇ ಅಲೆಯಲ್ಲಿ ಇಂಥ ನೂರಾರು ದಾರುಣ ಘಟನೆಗಳು ಮಕ್ಕಳನ್ನು ತಮ್ಮ ಅಪ್ಪ, ಅಮ್ಮನಿಂದ ದೂರವಾಗುವಂತೆ ಮಾಡಿದೆ. ಸಾವಿರಾರು ಮಕ್ಕಳು ತಮ್ಮ ಅಪ್ಪ, ಇಲ್ಲವೇ ಅಮ್ಮನನ್ನು ಕಳೆದುಕೊಂಡು ಕಣ್ಣೀರಿಡುತ್ತಿದ್ದಾರೆ.

ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆಯಲ್ಲಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ 12 ಮಕ್ಕಳು ತಮ್ಮ ಹೆತ್ತವರಿಬ್ಬರನ್ನೂ ಕೋವಿಡ್ ವೈರಸ್ ನಿಂದಾಗಿ ಕಳೆದುಕೊಂಡಿದ್ದಾರೆ. 231 ಮಕ್ಕಳು ತಮ್ಮ ಹೆತ್ತವರಿಬ್ಬರ ಪೈಕಿ ಒಬ್ಬರನ್ನು ಕಳೆದುಕೊಂಡಿದ್ದಾರೆ. ಅಂದಮೇಲೆ ಕೊರೋನಾ ಎರಡನೇ ಆಲೆಯ ವೇಳೆ ಇಡೀ ದೇಶದಲ್ಲಿ ಎಷ್ಟು ಸಾವಿರ ಮಕ್ಕಳು ತಮ್ಮ ಹೆತ್ತವರಿಬ್ಬರನ್ನೂ ಅಥವಾ ಅವರಿಬ್ಬರ ಪೈಕಿ ಒಬ್ಬರನ್ನು ಕಳೆದುಕೊಂಡಿರಬಹುದು ಊಹಿಸಿ ನೋಡಿ!

ಕೋವಿಡ್ ಎರಡನೇ ಅಲೆಯಲ್ಲಿ 577 ಮಕ್ಕಳು ಅನಾಥ:

ಕೇಂದ್ರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಮಂಗಳವಾರ ಬಹಿರಂಗಪಡಿಸಿರುವ ಅಂಕಿಅಂಶದ ಪ್ರಕಾರ, ಕಳೆದ 55 ದಿನಗಳಲ್ಲಿ ದೇಶದಾದ್ಯಂತ 577 ಮಕ್ಕಳು ತಮ್ಮ ಇಬ್ಬರೂ ಹೆತ್ತವರನ್ನು ಕಳೆದುಕೊಂಡು ಅನಾಥರಾಗಿದ್ದಾರೆ.

ಇದು ಕೋವಿಡ್ 19 ಎರಡನೇ ಅಲೆಯ ಕರಾಳ ಛಾಯೆಗೆ ಸಾಕ್ಷಿಯಾಗಿದ್ದು, ಈ ಮಹಾಮಾರಿ ತನ್ನ ಅಟ್ಟಹಾಸವನ್ನು ಮುಂದುವರಿಸಿರುವುದರಿಂದ ಇನ್ನೆಷ್ಟು ಮಕ್ಕಳು ಹೆತ್ತವರನ್ನು ಕಳೆದುಕೊಳ್ಳುವರೋ ಎಂಬ ಆತಂಕ ಕಾಡಲಾರಂಭಿಸಿದೆ.

“ಎಲ್ಲ ರಾಜ್ಯಗಳೂ ಜಿಲ್ಲಾವಾರು ಮಟ್ಟದಲ್ಲಿ ಕೋವಿಡ್‍ನಿಂದ ಹೆತ್ತವರನ್ನು ಕಳೆದುಕೊಂಡ ಅನಾಥ ಮಕ್ಕಳ ಪಟ್ಟಿಯನ್ನು ನೀಡುವಂತೆ ಕೋರಲಾಗಿದೆ. ಆದರೆ ಎಲ್ಲ ರಾಜ್ಯಗಳು ತಮ್ಮ ಪಟ್ಟಿಯನ್ನು ಸಲ್ಲಿಸಿಲ್ಲ. ಸದ್ಯಕ್ಕೆ ಸಲ್ಲಿಕೆಯಾಗಿರುವ ಪಟ್ಟಿಯ ಪ್ರಕಾರ 577 ಮಕ್ಕಳು ಅನಾಥರಾಗಿದ್ದಾರೆ ಎಂದು ಲೆಕ್ಕ ಸಿಕ್ಕಿದೆ” ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಅದರರ್ಥ, ಎಲ್ಲ ರಾಜ್ಯಗಳಿಂದ ಮಾಹಿತಿ ಲಭ್ಯವಾದರೆ ಈಗಾಗಲೇ ಕೋವಿಡ್ ಎರಡನೇ ಅಲೆಗೆ ಅನಾಥರಾದ ಮಕ್ಕಳ ಸಂಖ್ಯೆ ಇನ್ನಷ್ಟು ಏರಲಿದೆ!

ರಾಜ್ಯದಲ್ಲಿ ಸಹಾಯವಾಣಿಗೆ ಬರುತ್ತಿದೆ ಕರೆಗಳ ಮಹಾಪೂರ:

ರಾಜ್ಯದಲ್ಲಿ ಮೊಲೆ ಹಾಲು ಉಣ್ಣಿಸುವ ತಾಯಂದಿರನ್ನು ಕಳೆದುಕೊಂಡ ಮಕ್ಕಳ ಪರವಾಗಿ ಎದೆಹಾಲು ನೀಡುವ ಮನವಿ ಮಾಡುವ ಹಲವಾರು ಸಂದೇಶಗಳು ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಹಾಯವಾಣಿ1098 ಸಂ‍ಖ್ಯೆಗೆ ದಿನದ 24 ಗಂಟೆಯೂ ಇಂಥ ಕರೆಗಳು ಬರುತ್ತಿದೆ. ಸದ್ಯ ಸಹಾಯವಾಣಿ ಸಂಖ್ಯೆ 14499 ಬೆಳಗ್ಗೆ 8ರಿಂದ ರಾತ್ರಿ 8 ರವರೆಗೆ ಮಾತ್ರ ತೆರೆದಿದ್ದು, ಇದಕ್ಕೂ ಕರೆಗಳು ಅವ್ಯಾಹತವಾಗಿ ಬರುತ್ತಿದೆ. ಈ ಸಂಖ್ಯೆಯನ್ನು ದಿನದ 24 ಗಂಟೆ ಚಾಲೂ ಇಡಲು ಇಲಾಖೆ ಚಿಂತಿಸುತ್ತಿದೆ.

50 ವರ್ಷಗಳಿಗಿಂತ ಕಡಿಮೆ ವಯಸ್ಸಿನ ದಂಪತಿಗಳು ಕೋವಿಡ್ ನಿಂದ ಅಸು ನೀಗಿದಾಗ ಅವರ ಮಕ್ಕಳ ಪರವಾಗಿ ಬಂಧುಬಾಂಧವರ ಕರೆಗಳು ಸಹಾಯವಾಣಿಗೆ ಕರೆ ಮಾಡುತ್ತಿದ್ದು, ಎರಡನೇ ಅಲೆಯ ಬಳಿಕ ಇಂಥ ಕರೆಗಳ ಸಂಖ್ಯೆಯಲ್ಲಿ ಭಾರಿ ಏರಿಕೆಯಾಗುತ್ತಿದೆ. ಕೇಂದ್ರ, ರಾಜ್ಯ ಸರಕಾರಗಳು, ಜಿಲ್ಲಾಡಳಿತಗಳು ಇಂಥ ಅನಾಥ ಮಕ್ಕಳ ರಕ್ಷಣೆ, ಆರೈಕೆಗೆ ತೆಗೆದುಕೊಳ್ಳಬೇಕಾದ ಕ್ರಮಗಳ ಕಡೆಗೆ ಗಮನ ಹರಿಸುತ್ತಿವೆ.

ಅಲ್ಲದೆ ಖಾಸಗಿಯಾಗಿ ಎನ್‍.ಜಿ.ಒ.ಗಳು, ಮಕ್ಕಳ ರಕ್ಷಣಾ ಕೇಂದ್ರಗಳು ಕೂಡ ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿವೆ. ಅವುಗಳಿಗೂ ಸಾಕಷ್ಟು ಕರೆಗಳು ಬರುತ್ತಿವೆ. ಅಪ್ಪ, ಅಮ್ಮನನ್ನು ಕಳೆದುಕೊಂಡ ಮಕ್ಕಳ ಮನಸ್ಸಿನ ಸ್ಥಿತಿಯೂ ನಾಜೂಕಾಗಿರುತ್ತದೆ. ಹೆತ್ತವರ ಅಗಲಿಕೆಯ ನೋವಿನಿಂದ ಹೊರಬರಲು ಅವರಿಗೆ ಸಾಕಷ್ಟು ಸಮಯ ಹಾಗೂ ಸಾಂತ್ವಾನದ ಅಗತ್ಯವಿರುತ್ತದೆ. ಸಂಕಷ್ಟದ ಪರಿಸ್ಥಿತಿಯಲ್ಲಿ ಮಕ್ಕಳ ಮನೋಬಲ ಹೆಚ್ಚಿಸುವ ಹಾಗೂ ಧೈರ್ಯ ತುಂಬುವ ಕೆಲಸಗಳನ್ನು ಮಾಡುವುದು ಕೂಡ ಅಗತ್ಯವಾಗಿರುತ್ತದೆ. ಇದನ್ನು ಸರಕಾದ ಸಂಸ್ಥೆಗಳ ಜತೆ ಎನ್.ಜಿ.ಒ.ಗಳು ಹಾಗೂ ಮಕ್ಕಳ ರಕ್ಷಣಾ ಕೇಂದ್ರಗಳು ಕೂಡ ಮಾಡುತ್ತಿವೆ.

ಸಹಾಯ ಹಸ್ತ ಚಾಚಿದ ಕೇಂದ್ರ, ರಾಜ್ಯ ಸರಕಾರಗಳು:

“ಕೋವಿಡ್ 19 ನಿಂದ ತಮ್ಮ ಹೆತ್ತವರಿಬ್ಬರನ್ನೂ ಕಳೆದುಕೊಂಡ ಅನಾಥ ಮಕ್ಕಳಿಗೆ ಸಹಾಯ ಹಾಗೂ ಸುರಕ್ಷೆ ನೀಡಲು ಕೇಂದ್ರ ಸರಕಾರ ಬದ್ಧವಾಗಿದೆ. ಈ ಮಕ್ಕಳ ಆರೈಕೆಗಾಗಿ ದೇಶದ ಪ್ರತಿ ಜಿಲ್ಲೆಗೂ ತಲಾ 10 ಲಕ್ಷ ರೂ. ನೀಡಲಾಗಿದ್ದು, ಆಯಾ ಜಿಲ್ಲಾಧಿಕಾರಿಗಳು ಸಮಗ್ರ ಶಿಶು ರಕ್ಷಣೆ ಯೋಜನೆಯಡಿ ಮಕ್ಕಳಿಗೆ ಅದನ್ನು ಹಂಚಿಕೆ ಮಾಡಲಿದ್ದಾರೆ. ಮಕ್ಕಳು ತಮ್ಮ ಕುಟುಂಬ ಹಾಗೂ ಸಮುದಾಯ ವ್ಯವಸ್ಥೆಯೊಳಗೇ ಇದ್ದು ಬೆಳೆಯುವಂತಾಗುವುದಕ್ಕೆ ನಮ್ಮ ಮೊದಲ ಆದ್ಯತೆ ಇರಲಿದೆ.” ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆಯ ಸಚಿವ ಸ್ಮೃತಿ ಇರಾನಿ ಟ್ಟೀಟ್ ಮೂಲಕ ಹೇಳಿದ್ದಾರೆ.

ಅಲ್ಲದೆ 2021ರ ಏಪ್ರಿಲ್ 1ರ ಮಧ‍್ಯಾಹ್ನ 2 ಗಂಟೆಯಿಂದ ಈವರೆಗೆ ದೇಶದಲ್ಲಿ 577 ಮಕ್ಕಳು ಅನಾಥರಾಗಿರುವುದನ್ನು ಖಚಿತಪಡಿಸಿದ್ದಾರೆ.

ಇದಲ್ಲದೆ ದಿಲ್ಲಿ, ಪಂಜಾಬ್‍, ಕರ್ನಾಟಕ, ಮಧ್ಯಪ್ರದೇಶ, ರಾಜಸ್ಥಾನ, ಉತ್ತರಾಖಂಡ್, ಆಂಧ್ರಪ್ರದೇಶ ಮುಂತಾದ ರಾಜ್ಯ ಸರಕಾರಗಳು ಕೂಡ ಕೋವಿಡ್ ನಿಂದ ಅನಾಥರಾದ ಮಕ್ಕಳ ನೆರವಿಗೆ ಧಾವಿಸಿವೆ. ಇವುಗಳ ಪೈಕಿ ದಿಲ್ಲಿ, ಪಂಜಾಬ್, ಮಧ್ಯಪ್ರದೇಶ ಸರಕಾರಗಳು ಅಂಥ ಮಕ್ಕಳಿಗೆ ಆರ್ಥಿಕ ಸಹಾಯವಲ್ಲದೆ, ಉಚಿತ ಶಿಕ್ಷಣವನ್ನೂ ಘೋಷಿಸಿವೆ. ಕರ್ನಾಟಕ, ಉತ್ತರಾಖಂಡ್, ಆಂಧ್ರಪ್ರದೇಶ ಸರಕಾರಗಳು ಇಂಥ ಮಕ್ಕಳಿಗಾಗಿ ವಿವಿಧ ಕಲ್ಯಾಣ ಕಾರ್ಯಕ್ರಮಗಳನ್ನು ರೂಪಿಸಿವೆ.

ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ತಮ್ಮ ಸರಕಾರವು ಕೋವಿಡ್ ನಿಂದ ಹೆತ್ತವರನ್ನು ಕಳೆದುಕೊಂಡು ಅನಾಥರಾದ ಮಕ್ಕಳನ್ನು ಬೆಳೆಸುವ ಮತ್ತು ಉಚಿತ ಶಿಕ್ಷಣ ಕೊಡುವುದಾಗಿ ಪ್ರಕಟಿಸಿದ್ದಾರೆ. ಪಂಜಾಬ್ ಸರಕಾರವು ಅನಾಥವಾದ ಪ್ರತಿ ಮಕ್ಕಳಿಗೂ ಅವರು ತಮ್ಮ ಪದವಿ ಶಿಕ್ಷಣ ಪೂರ್ಣಗೊಳಿಸುವವರೆಗೂ ತಿಂಗಳಿಗೆ 1,500 ರೂ ಕೊಡಲಿದೆ. ಜತೆಗೆ ಉಚಿತ ಶಿಕ್ಷಣವನ್ನೂ ನೀಡಲಿದೆ ಎಂದು ಪಂಜಾಬ್‍ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಹೇಳಿದ್ದಾರೆ. 

ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಬಿಜೆಪಿ ಆಡಳಿತವಿರುವ ರಾಜ್ಯಗಳು ಅನಾಥ ಮಕ್ಕಳಿಗೆ ಹೇಗೆ ಸಹಾಯ ಮಾಡಬೇಕೆಂಬ ಮಾರ್ಗಸೂಚಿ ತಯಾರಿಸಿ ಕೊಟ್ಟಿದ್ದಾರೆ.

“ಕರ್ನಾಟಕ ಸರಕಾರವೂ ಇಂಥ ಅನಾಥ ಮಕ್ಕಳ ನೆರವಿಗೆ ಧಾವಿಸಿದ್ದು, ರಾಜ್ಯದ 30 ಜಿಲ್ಲೆಗಳಲ್ಲೂ ಮಕ್ಕಳ ಆರೈಕೆ ಕೇಂದ್ರಗಳನ್ನು ಆರಂಭಿಸುವ ಯೋಜನೆ ಹಾಕಿಕೊಂಡಿದೆ. 18 ವರ್ಷಕ್ಕಿಂತ ಕೆಳಗಿನವರಿಗೆ ಸರಕಾರ ಪುನರ್ವಸತಿಗೆ ವ್ಯವಸ್ಥೆ ಮಾಡಲಿದೆ” ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಹೇಳಿದ್ದಾರೆ. ಅಲ್ಲದೆ ಅನಾಥ ಮಕ್ಕಳಿಗೆ ಸೂಕ್ತ ರಕ್ಷಣೆ, ಆರೈಕೆ ದೊರಕಿಸಲು ಹಿರಿಯ ಐಎಎಸ್ ಅಧಿಕಾರಿ ಮೋಹನ್ ರಾಜ್ ಅವರನ್ನು ನೋಡಲ್ ಅಧಿಕಾರಿಯಾಗಿ ನೇಮಕ ಮಾಡಲಾಗಿದೆ.

ಕರ್ನಾಟಕದ ಮಠ, ಮಾನ್ಯಗಳೂ ಕೂಡ ಅನಾಥ ಮಕ್ಕಳ ನೆರವಿಗೆ ಧಾವಿಸಿವೆ. ಆದಿಚುಂಚನಗಿರಿ, ಜಗದ್ಗುರು ಶ್ರೀ ಶಿವರಾತ್ರೀಶ್ವರ (ಜೆಎಸ್ಸೆಸ್) ನಂಥ ಮಠಗಳು ಮಕ್ಕಳನ್ನು ದತ್ತು ತೆಗೆದುಕೊಳ್ಳಲು, ಅವರ ಭವಿಷ್ಯವನ್ನು ಕಟ್ಟಿಕೊಡಲು ಮುಂದೆ ಬಂದಿವೆ.

ಮಕ್ಕಳು ಅನಾಥರಾಗಿದ್ದು, ಸಂಕಷ್ಟದಲ್ಲಿದ್ದಾಗ ಏನು ಮಾಡಬಹುದು?

ಕೋವಿಡ್ ನಂಥ ಮಾರಕ ಸಂಕ್ರಾಮಿಕ ಕಾಯಿಲೆಯ ಈ ಸಂದರ್ಭದಲ್ಲಿ ಈ ರೋಗ ನಿರ್ನಾಮವಾಗುವವರೆಗೂ ಜಗತ್ತಿನ ನಾನಾ ದೇಶಗಳಲ್ಲೂ ರಾಜ್ಯಗಳಲ್ಲೂ ಸಾವಿನ ಸಂಖ್ಯೆಯಲ್ಲಿ ಏರಿಕೆಯಾಗುತ್ತಲೇ ಇರುತ್ತದೆ. ಈಗಾಗಲೇ ದೇಶದಲ್ಲಿ ಕೋವಿಡ್ ಗೆ 3 ಲಕ್ಷಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಸಂಖ್ಯೆ ಏರುತ್ತಲೇ ಇದೆ. ನಾವು ಕೂಡ ಯಾವುದೋ ಮಕ್ಕಳು ಅಪ್ಪ ಇಲ್ಲವೇ ಅಮ್ಮ ಇಲ್ಲವೇ ಇಬ್ಬರು ಹೆತ್ತವರನ್ನೂ ಕಳೆದುಕೊಳ್ಳುವ ಸಂದರ್ಭಗಳಿಗೂ ಸಾಕ್ಷಿಯಾಗುತ್ತಿದ್ದೇವೆ. ಅಂಥ ಸಂದರ್ಭಗಳಲ್ಲಿ ನಾಗರಿಕರಾಗಿ ನಮ್ಮ ಜವಾಬ್ದಾರಿಯನ್ನು ನಾವು ನಿರ್ವಹಿಸಬೇಕಾದ ಅನಿವಾರ್ಯತೆ ಎದುರಾಗುತ್ತಿದೆ.

‘ಕೋವಿಡ್ ನಿಂದ ಅಪ್ಪ, ಅಮ್ಮನನ್ನು ಕಳೆದುಕೊಂಡು ಮಕ್ಕಳು ಅನಾಥರಾಗಿದ್ದಾರೆ. ದತ್ತು ತೆಗೆದುಕೊಳ್ಳಬಹುದು’ ಎಂಬಿತ್ಯಾದಿ ಸಂದೇಶಗಳು ವಾಟ್ಸ್ಯಾಪ್ ನಂಥ ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಳ್ಳುತ್ತಿದೆ. ದಯವಿಟ್ಟು ಇಂಥ ಸಂದೇಶಗಳನ್ನು ಫಾರ್ವರ್ಡ್ ಮಾಡದಿರಿ. ಕಳುಹಿಸಿದವರ ಉದ್ದೇಶ ಉದಾತ್ತವೇ ಆಗಿದ್ದರೂ ಹೀಗೆ ಮಕ್ಕಳನ್ನು ಬೇರೆಯವರಿಗೆ ಕೊಡಲು ಹೊರಟಿರುವುದು ಬೇಜವಾಬ್ದಾರಿಯ ಹಾಗೂ ಕಾನೂನು ಬಾಹಿರವಾದ ಕ್ರಮವಾಗಿದೆ. ಸೂಕ್ತ ಕಾನೂನು ಕ್ರಮ ಪಾಲಿಸದೆ ಅನಾಥ ಮಕ್ಕಳನ್ನು ಅಪರಿಚಿತರಿಗೆ ಹಸ್ತಾಂತರಿಸಿದರೆ, ಅಪರಾಧಿಗಳು ಹಾಗೂ ಮಾನವ ಕಳ್ಳಸಾಗಣೆದಾರರು ಇಂಥ ಅವಕಾಶಗಳನ್ನು ಬಾಚಿಕೊಂಡು ಮಕ್ಕಳ ಭವಿಷ್ಯವನ್ನೇ ಹಾಳು ಮಾಡಿಬಿಡಬಹುದು.

ಕಾನೂನು ಸಮ್ಮತವಾಗಿ ದತ್ತು ತೆಗೆದುಕೊಂಡರೆ ಕಾನೂನಿನ ಭದ್ರತೆ ಸಿಗುತ್ತದೆ. ಅವರ ಕೌಟುಂಬಿಲಕ ಭವಿಷ್ಯವೂ ಭದ್ರವಾಗುತ್ತದೆ. ಹೀಗಾಗಿ ಅನಾಥ ಮಕ್ಕಳ ಬಗ್ಗೆ ನಿಮಗೆ ತಿಳಿದಿದ್ದರೆ ಮಕ್ಕಳ ಸಹಾಯವಾಣಿ 1098 ಗೆ ಕರೆ ಮಾಡಿ ಮಾಹಿತಿ ಹಂಚಿಕೊಳ್ಳಬಹುದು. ಇಲ್ಲವೇ ಹತ್ತಿರದಲ್ಲಿರುವ ಅಧಿಕೃತ ದತ್ತು ಸ್ವೀಕಾರ ಸಂಸ್ಥೆಗೆ ಮಕ್ಕಳನ್ನು ಕರೆದೊಯ್ಯಬಹುದು. ಸ್ಪೆಷಲೈಸ್ಡ್ ಅಡಾಪ್ಷನ್ ಏಜೆನ್ಸಿ ಎಂದು ಗೂಗಲ್ ನಲ್ಲಿ ಹುಡುಕಿದರೂ ನಿಮಗೆ ಹತ್ತಿರದಲ್ಲಿರುವ ಸಂಸ್ಥೆಗಳನ್ನು ಪತ್ತೆಹಚ್ಚಬಹುದು.

ಮಕ್ಕಳನ್ನು ನಮಗೆ ಕೊಡಿ, ನಾವು ಅವರನ್ನು ಸಂಬಂಧಿಸಿದ ಸಂಸ್ಥೆಗಳಿಗೆ ಕರೆದುಕೊಂಡು ಹೋಗುತ್ತೇವೆ ಎಂದು ಹೇಳುವ ವ್ಯಕ್ತಿ ಇಲ್ಲವೇ ಸಂಸ್ಥೆಗೆ ಒಪ್ಪಿಸದೇ ನೇರವಾಗಿ ನೀವೇ ಮಕ್ಕಳ ಸಹಾಯವಾಣಿ ಮೂಲಕ ಸೂಕ್ತ ನೆಲೆ ಕಲ್ಪಿಸುವುದು ಒಳ್ಳೆಯ ನಡೆ. ಏಕೆಂದರೆ ದತ್ತು ತೆಗೆದುಕೊಳ್ಳುವವರು ಅಧಿಕೃತವಾಗಿ ಕಾನೂನುಬದ್ಧವಾಗಿ ಮಕ್ಕಳನ್ನು ದತ್ತು ಪಡೆಯಲು ಇಲ್ಲಿ ವ್ಯವಸ್ಥೆ ಕಲ್ಪಿಸುತ್ತಾರೆ. ನೀವು ಸ್ವತಃ ದತ್ತು ತೆಗೆದುಕೊಳ್ಳುವುದಿದ್ದರೂ ನೇರವಾಗಿ ಮಕ್ಕಳನ್ನು ದತ್ತು ಪಡೆಯದೇ ಕಾನೂನು ಪ್ರಕಾರವೇ ಮುಂದುವರಿಯಿರಿ. ಇದರಿಂದ ಮುಂದೆ ಕಾನೂನು ಕ್ರಮಗಳನ್ನು ಎದುರಿಸುವ ತೊಂದರೆ ತಪ್ಪುತ್ತದೆ.

Related posts

Latest posts

ಕುಂಭ ಮೇಳ ಸಂದರ್ಭದಲ್ಲಿ ಮಾಡಿದ 1 ಲಕ್ಷ ಕೋವಿಡ್-19 ಪರೀಕ್ಷೆಗಳು ನಕಲಿ: ತನಿಖಾ ವರದಿ

ಹರಿದ್ವಾರದ ಕುಂಭ ಮೇಳ ಸಂದರ್ಭದಲ್ಲಿ ಮಾಡಲಾಗಿದ ನಾಲ್ಕು ಲಕ್ಷ ಕೋವಿಡ್ ಟೆಸ್ಟ್ ಫಲಿತಾಂಶಗಳಲ್ಲಿ ಹಲವು ನಕಲಿ ಎಂದು ಉತ್ತರಾಖಂಡ ಆರೋಗ್ಯ ಇಲಾಖೆ ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ. ವಿವರವಾದ ತನಿಖೆಯ 1,600 ಪುಟಗಳಲ್ಲಿ...

ನನ್ನ ಹೇಳಿಕೆಯಿಂದ ನಾನು ಹಿಂದೆ ಸರಿಯಲ್ಲ : ನಟ ಚೇತನ್ ಸ್ಪಷ್ಟನೆ

ಬ್ರಾಹ್ಮಣ್ಯ ವಿರೋಧಿ ಹೇಳಿಕೆ ಎಂಬ ಆರೋಪದ ಅಡಿ ಇಂದು ಬಸವನಗುಡಿ ಪೊಲೀಸರ ಮುಂದೆ ಹಾಜರಾದ ನಟ ಚೇತನ್ ತನ್ನ ಹೇಳಿಕೆಯ ಬಗ್ಗೆ ಪೊಲೀಸರ ಮುಂದೆ ಸ್ಪಷ್ಟನೆ ದಾಖಲಿಸಿದ್ದಾರೆ. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ...

ಚಿಕ್ಕಬಳ್ಳಾಪುರ: ಅರ್ಹ ಫಲಾನುಭವಿಗಳನ್ನು ಗುರುತಿಸುವಲ್ಲಿ ವಿಫಲ: ರೈತರಿಗೆ ಸಿಗುತ್ತಿಲ್ಲ ಪರಿಹಾರ ಧನ

ಕೊರೋನಾ ಲಾಕ್ಡೌನ್ ಸಮಯದಲ್ಲಿ ಸಂಕಷ್ಟಕ್ಕೊಳಗಾದ ರೈತರಿಗೆ ಸರ್ಕಾರ ಪರಿಹಾರದ ಅಭಯ ಕೊಟ್ಟಿತು. ಆದರೆ ಅರ್ಹ ಫಲಾನುಭವಿಗಳನ್ನ ಗುರುತಿಸುವಲ್ಲಿ ವಿಫಲವಾದ ಪರಿಣಾಮ ನಿಜವಾದ ರೈತರಿಗೆ ಪರಿಹಾರ ಸಿಗದಂತಾಗಿದೆ. ಈ ಕುರಿತು ಚಿಕ್ಕಬಳ್ಳಾಪುರದಲ್ಲಿ ರೈತರು ತಮ್ಮ...