ಕನ್ನಡ ಮಣ್ಣಿನ ಮಗ ಎಂದೇ ಪ್ರಸಿದ್ಧವಾಗಿರುವ, ಹಿರಿಯ ರಾಜಕಾರಣಿ ಹೆಚ್ ಡಿ ದೇವೇಗೌಡರು ಭಾರತ ಸರ್ಕಾರದ ಪ್ರಧಾನಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ 25 ವರ್ಷಗಳು ಪೂರೈಸಿವೆ. ಕನ್ನಡ ನಾಡಿನ ಓರ್ವ ರಾಜಕಾರಣಿ, ಅದರಲ್ಲೂ ಹಿಂದಿ ಭಾಷೆಯೂ ಬರದ, ಅಪ್ಪಟ ಕರ್ನಾಟಕದ ಗ್ರಾಮ್ಯ ರಾಜಕಾರಣಿಯೊಬ್ಬರು ಪ್ರಧಾನಿಯಂತಹ ಹುದ್ದೆಗೆ ಆಯ್ಕೆಯಾಗಿರುವುದು ಕನ್ನಡ ನಾಡಿನವರೆಲ್ಲಾ ಹೆಮ್ಮೆ ಪಡಬೇಕಾದ ವಿಷಯವೂ ಹೌದು, ಅದೇ ವೇಳೆ ದುಖಿಸಬೇಕಾಗಿರುವ ವಿಷಯವೂ ಹೌದು.
ಭೌಗೋಳಿಕವಾಗಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ, ಗುಜರಾತಿನಿಂದ ಈಶಾನ್ಯ ರಾಜ್ಯದವರೆಗೆ ಎಲ್ಲಾ ರಾಜ್ಯಗಳನ್ನು ಭಾರತವೆಂದು ಗುರುತಿಸಿ, ಒಂದೇ ದೇಶದಡಿಯಲ್ಲಿ ತಂದಿರುವುದನ್ನು ಒಪ್ಪಿಕೊಳ್ಳದ ಹಲವು ವಾದಗಳಿವೆ. ಅದರಲ್ಲೂ ಮುಖ್ಯವಾಗಿ ದ್ರಾವಿಡ ದೇಶದಂತಹ ಪ್ರತ್ಯೇಕ ದೇಶವನ್ನು ಕೇಳಿದ ತಮಿಳು ಅಸ್ಮಿತಾವಾದಿಗಳಲ್ಲಿ ಕೆಲವರಿಗೆ ಈಗಲೂ ತಮಿಳು ಪ್ರತ್ಯೇಕ ರಾಜ್ಯಗಳು ಬೇಕೆಂಬ ಅಭಿಲಾಷೆಯಿದೆ. ದೇಶ ಒಂದುಗೂಡಿ 7 ದಶಕಗಳೇ ಕಳೆದರೂ ಇಂತಹ ದನಿಯೊಂದು ಕ್ಷೀಣವಾಗಿ ಕೇಳುತ್ತಿರುವುದು ವಿಪರ್ಯಾಸ. ಈ ದನಿಯ ಕೂಗಿಗೆ, ಉತ್ತರ ಭಾರತದ, ಹಿಂದಿ ರಾಜಕಾರಣವೂ ಒಂದು ಕಾರಣ ಎನ್ನುವುದನ್ನು ಮುಖ್ಯವಾಗಿ ಗಮನದಲ್ಲಿಟ್ಟುಕೊಳ್ಳಬೇಕು. ಅಷ್ಟರ ಮಟ್ಟಿಗೆ ಒಕ್ಕೂಟ ಸರ್ಕಾರದಲ್ಲಿ ಉತ್ತರ ಭಾರತೀಯರ ಪ್ರಾಬಲ್ಯ ಇದೆ. ಇಲ್ಲವಾದರೆ, ಇಷ್ಟು ದೀರ್ಘ ಅವಧಿಯಲ್ಲಿ ಕೇವಲ ಎರಡೇ ಮಂದಿ ದಕ್ಷಿಣದವರು ಪ್ರಧಾನಮಂತ್ರಿ ಹುದ್ದೆಗೆ ಏರಿರುವ ಹಿಂದಿರುವ ರಾಜಕಾರಣವೇನು? ದಕ್ಷಿಣ ಭಾರತೀಯರೆಡೆಗೆ ಉತ್ತರದವರ ನಿರ್ಲಕ್ಷ್ಯವೇ ಅಥವಾ ರಾಷ್ಟ್ರೀಯ ಪಕ್ಷಗಳ ನಾಯಕರುಗಳ ಉತ್ತರ ಭಾರತದ ಕಡೆಗಿರುವ ಗುಲಾಮಿ ಮನಸ್ಥಿತಿಯೇ?
ಅದೇನೆ ಇದ್ದರೂ, ದೇವೇಗೌಡರು ಇಂತಹ ಉತ್ತರದವರ ಪ್ರಾಬಲ್ಯ ಇರುವಲ್ಲಿ ಮುಖ್ಯ ಹುದ್ದೆ ಪಡೆದ ಮೊದಲ ಕನ್ನಡಿಗರು, ಎರಡನೇ ದಕ್ಷಿಣ ಭಾರತೀಯರು. ದೇವೇಗೌಡರು ಪ್ರಧಾನಿಯಾಗಿದ್ದಾಗ ಕರ್ನಾಟಕ ರಾಜ್ಯ ತುಸು ಹೆಚ್ಚು ಲಾಭ ಪಡೆದುಕೊಂಡಿದೆ ಎನ್ನುವುದನ್ನು ಕರ್ನಾಟಕ ರಾಜಕಾರಣ ಇತಿಹಾಸ ತಿಳಿದಿರುವ ಹಳೆಯ ತಲೆಮಾರು ನಿರಾಕರಿಸುವುದಿಲ್ಲ. ಇದು ಕರ್ನಾಟಕ ಪಡೆದುಕೊಂಡಿರುವ ಲಾಭ. ಇನ್ನು ನಷ್ಟದ ವಿಚಾರಕ್ಕೆ ಬಂದರೆ, ಆಗ ಮುಖ್ಯಮಂತ್ರಿಯಾಗಿ ಕರ್ನಾಟಕದಲ್ಲಿ ಉತ್ತಮ ಆಳ್ವಿಕೆ ನೀಡಿದ್ದ ದೇವೇಗೌಡರು, ಪ್ರಧಾನಿಯಾಗುವುದರೊಂದಿಗೆ ರಾಜ್ಯದ ಸಕ್ರಿಯ ರಾಜಕಾರಣದಿಂದ ಹಿಂದೆ ಸರಿದರು. ರಾಜ್ಯದ ಕುರಿತು ಅಪಾರ ಪ್ರೀತಿಯಿರುವ ದೇವೇಗೌಡರು ಪರೋಕ್ಷವಾಗಿ ರಾಜ್ಯ ರಾಜಕಾರಣದಲ್ಲಿ ತಮ್ಮ ಪ್ರಭಾವ ಉಳಿಸಿಕೊಂಡಿದ್ದರಾದರೂ, ಇತ್ತೀಚಿನ ರಾಜಕಾರಣ ಸ್ಥಿತ್ಯಂತರಗಳ ಬಳಿಕ ರಾಜ್ಯದಲ್ಲಿ ಮಹತ್ತರ ರಾಜಕೀಯ ಬೆಳವಣಿಗೆಯಲ್ಲಿ ಹೇಳತಕ್ಕಂತಹ ಪ್ರಭಾವ ಬೀರಲು ಸಾಧ್ಯವಾಗಲಿಲ್ಲ.
ಪ್ರಧಾನಿಯಾಗಿ ಹತ್ತು ತಿಂಗಳ ಕಾಲ ಹುದ್ದೆಯಲ್ಲಿದ್ದ ದೇವೇಗೌಡರು ಅಸ್ಥಿರ ಸರ್ಕಾರವನ್ನಿಟ್ಟುಕೊಂಡೇ ತಮ್ಮ ಕರ್ತವ್ಯವನ್ನು ಚೆನ್ನಾಗಿ ನಿಭಾಯಿಸಿಕೊಂಡರು. ರೈತರ ಬಗೆಗೆ ವಿಶೇಷ ಕಾಳಜಿಯಿದ್ದ ಅವರನ್ನು ಪಂಜಾಬಿನ ರೈತರು ಈಗಲೂ ನೆನೆಪಿಸುತ್ತಿದ್ದಾರೆಂದರೆ ಅದು ದೇವೇಗೌಡರ ಆ ವಿಶೇಷ ಕಾಳಜಿಗೆ ಜ್ವಲಂತ ಸಾಕ್ಷಿ. ಇಂತಹ ದೇವೇಗೌಡರು ಉತ್ತರ ಭಾರತದ, ಹಿಂದೀ ನಾಯಕರುಗಳ ಅಪಹಾಸ್ಯಕ್ಕೆ ಗುರಿಯಾಗಬೇಕಾಯಿತು ಎಂದೂ ಆ ಕಾಲದ ಹಿರಿಯ ರಾಜಕಾರಣಿಗಳು ನೆನಪಿಸುತ್ತಾರೆ. ಹಿಂದಿ ಬರದ, ವೇದಿಕೆಯಲ್ಲಿ ತೂಕಡಿಸುತ್ತಿದ್ದ, ಅಪ್ಪಟ ಗ್ರಾಮ್ಯ ಸ್ವಭಾವದ ದೇವೇಗೌಡರ ಮುತ್ಸದ್ದಿತನಕ್ಕೆ ಸಂದಬೇಕಾದ ಗೌರವ ಸಂದಿಲ್ಲ ಎನ್ನುವುದನ್ನು ದೇವೆಗೌಡರ ಪಾಳೆಯ ಬಿಟ್ಟುಬಂದ ರಾಜಕಾರಣಿಗಳೂ ಕೂಡಾ ಒಪ್ಪುತ್ತಾರೆ.
ದೇವೇಗೌಡರು ದೃತರಾಷ್ಟ್ರನಂತೆ ತನ್ನ ಪುತ್ರ ವ್ಯಾಮೋಹದಿಂದ ಕಳೆದುಕೊಂಡದ್ದೇ ಹೆಚ್ಚು. ಚಳುವಳಿಗಳ ಮೂಲಕ ರಾಜಕಾರಣಕ್ಕೆ ಬಂದ ದೇವೇಗೌಡರು, ಕುಟುಂಬ ರಾಜಕಾರಣದ ಮೂಲಕ ಬಂದ ತನ್ನ ಮಕ್ಕಳನ್ನು ರಾಜಕಾರಣಕ್ಕೆ ಇಳಿಸಿ ತಪ್ಪು ಮಾಡಿದ್ದಾರೆಂದೂ ಬೇಸರಿಸುವವರು ಇದ್ದಾರೆ. ಅದನ್ನು ಕುಮಾರಸ್ವಾಮಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿ ಅವರಿಗೆ ಮೊಟ್ಟ ಮೊದಲ ಬಾರಿ ಸರ್ಕಾರ ನಿರ್ಮಿಸಲು ಸಹಕಾರಿಯಾಗಿ ಆ ಮೂಲಕ ರಾಜ್ಯ ರಾಜಕಾರಣದಲ್ಲಿ ಬಿಜೆಪಿಯನ್ನು ಬಲಿಷ್ಟಗೊಳಿಸಿ ಸಾಬೀತು ಪಡಿಸಿದ್ದಾರೆ. ಅದಾದ ಬಳಿಕ ಇತ್ತೀಚೆಗೆ, ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡರೆ ಕುಮಾರಸ್ವಾಮಿಗೂ ನನ್ನ ಕುಟುಂಬಕ್ಕೂ ಸಂಬಂಧವೇ ಇಲ್ಲವೆಂದು ದಿಟ್ಟ ಹೇಳಿಕೆ ದೇವೇಗೌಡರು ನೀಡಿದ್ದರೂ, ಕೋಮುವಾದಿ ಭಾಜಪಾ ಅದಾಗಲೇ ರಾಜ್ಯವನ್ನು ಆವರಿಸಿಕೊಂಡಾಗಿತ್ತು.
ದೇವೇಗೌಡರು ಈ ನಿಲುವನ್ನು ಮೊದಲೇ ಗಂಭೀರವಾಗಿ ತಳೆದಿದ್ದರೆ ರಾಜ್ಯ ರಾಜಕಾರಣದಲ್ಲಿ ಬಿಜೆಪಿ ತನ್ನ ಛಾಪು ಒತ್ತಲು ಕೊಂಚ ತಡಮಾಡುತ್ತಿತ್ತು. ರಾಜ್ಯ ಬೇರೇನೋ ರಾಜಕೀಯ ಸನ್ನಿವೇಶಗಳಿಗೆ ಸಾಕ್ಷಿಯಾಗುತ್ತಿತ್ತು. ಆದರೆ, ದೇವೇಗೌಡರು ತಡ ಮಾಡಿಬಿಟ್ಟರು. ದೇವೇಗೌಡರಿಗೆ ತನ್ನ ಪಕ್ಷವು ಭಾಜಪದೊಂದಿಗೆ ಮಾಡಿಕೊಂಡ ಮೊದಲ ಮೈತ್ರಿ ಸರ್ಕಾರ ತಪ್ಪು ನಡೆಯಾಗಿತ್ತೆಂಬ ಅರಿವು ತಡವಾಗಿಯಾದರೂ ಮೂಡಿರಬಹುದು. ಇಂತಹದ್ದೇ ಅರಿವು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿಕೊಂಡ ಬಳಿಕವೂ ಮೂಡಿತ್ತು. ತಾನು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿಕೊಂಡದ್ದು ತಪ್ಪು ನಿರ್ಧಾರವಾಗಿತ್ತು ಎಂದೂ ಆ ಹಿರಿಯ ಜೀವಕ್ಕೆ ಅರ್ಥವಾಗುವಾಗ ತಡವಾಗಿತ್ತೆಂದು ಆಪ್ತ ಮೂಲಗಳು ಹೇಳುತ್ತವೆ. ಇದು ಎಷ್ಟು ಸತ್ಯ ಎನ್ನುವುದು ನಿಖರವಲ್ಲ. ಆದರೆ, ದೇವೇಗೌಡರು ಪ್ರಧಾನಿಯಾಗಿ ಹೋಗಲೇ ಬಾರದಿತ್ತು. ಉತ್ತರದವರ ಷಡ್ಯಂತ್ರಗಳಿಗೆ ಅನಾಯಾಸವಾಗಿ ಬಲಿಯಾಗದೆ ರಾಜ್ಯಕ್ಕೆ ಉತ್ತಮ ಆಡಳಿತ ನೀಡಿದ ಮುಖ್ಯಮಂತ್ರಿಯಾಗಿಯೇ ಇನ್ನಷ್ಟು ಕಾಲ ದೇವೇಗೌಡರು ಉಳಿಯಬೇಕಿತ್ತು. ರಾಜ್ಯ ರಾಜಕಾರಣದಿಂದ ದೇವೇಗೌಡರು ದೂರ ಸರಿಯಬಾರದಿತ್ತು..