ಲಾಕ್ ಡೌನ್: ಪೊಲೀಸ್ ಅಟ್ಟಹಾಸದ ವಿರುದ್ಧ ಭುಗಿಲೆದ್ದ ಜನಾಕ್ರೋಶ..!

ಕಳೆದ ಹದಿನಾಲ್ಕು ದಿನಗಳ ಲಾಕ್ ಡೌನ್ ಮೊದಲ ಹಂತದ ಬಳಿಕ, ಇದೀಗ ಸೋಮವಾರದಿಂದ ಸಂಪೂರ್ಣ ಲಾಕ್ ಡೌನ್ ಹೆಸರಲ್ಲಿ ಇಡೀ ರಾಜ್ಯವನ್ನು ಪೊಲೀಸರ ಕೈಗೆ ಒಪ್ಪಿಸಲಾಗಿದೆ. ಹಾಗಾಗಿ ಸಂಪೂರ್ಣ ಲಾಕ್ ಡೌನ್ ನ ಮೊದಲ ದಿನ ರಾಜ್ಯದ ಮೂಲೆಮೂಲೆಯಲ್ಲೂ ನಾಗರಿಕರ ಮೇಲಿನ ಪೊಲೀಸ್ ಅಟ್ಟಹಾಸದ ಘಟನೆಗಳು ವರದಿಯಾಗಿವೆ.

ಕರೋನಾ ಸೋಂಕು ನಿಯಂತ್ರಿಸಲಾಗದ, ರೋಗಿಗಳಿಗೆ ಅಗತ್ಯ ಆಮ್ಲಜನಕ, ಆಸ್ಪತ್ರೆ, ಚಿಕಿತ್ಸೆ ಮತ್ತು ಜನರಿಗೆ ಲಸಿಕೆ ನೀಡಲಾಗದ ಸರ್ಕಾರ, ಸೋಂಕು ಹರಡುತ್ತಿರುವಾಗ ಚುನಾವಣಾ ರ್ಯಾಲಿ ಮಾಡಿ ಸೂಪರ್ ಸ್ಪ್ರೆಡರ್ ಆಗಿ ವರ್ತಿಸಿದ ಸರ್ಕಾರ, ಈಗ ಲಾಕ್ ಡೌನ್ ನೆಪದಲ್ಲಿ ಜನರನ್ನು ಮನೆಗಳಲ್ಲೇ ಬಂಧಿಸಿಡುವ ಭಾಗವಾಗಿ, ಪೊಲೀಸರಿಗೆ ಸಂಪೂರ್ಣ ಸ್ವಾತಂತ್ರ್ಯ ಕೊಟ್ಟು ಕೈಕಟ್ಟಿ ಕುಳಿತಿದೆ.

ಉಡುಪಿಯಲ್ಲಿ ಖಾಸಗೀ ವಾಹನದಲ್ಲಿ ಆಸ್ಪತ್ರೆಗೆ ತೆರಳಲು ಪೊಲೀಸರು ಅಡ್ಡಿಪಡಿಸಿದ ಪರಿಣಾಮ, ಮಹಿಳೆಯೊಬ್ಬರು ಸಕಾಲಿಕ ಚಿಕಿತ್ಸೆ ಸಿಗದೆ ಸಾವು ಕಂಡಿರುವ ದಾರುಣ ಘಟನೆ ನಡೆದಿದ್ದರೆ, ಸಿಎಂ ತವರು ಜಿಲ್ಲೆ ಶಿವಮೊಗ್ಗದಲ್ಲಿ ಬೆಳಗ್ಗೆ ಮನೆಮನೆಗೆ ಹಾಲು ಹಾಕಲು ಕೂಡ ಪೊಲೀಸರು ಅವಕಾಶ ನೀಡದೇ ಕೇಸು ಹಾಕುವ ಬೆದರಿಕೆ ಒಡ್ಡಿದ ಪರಿಣಾಮ, ಬಡ ಹೈನುಗಾರರು ಸಾವಿರಾರು ಲೀಟರ್ ಹಾಲು ಚರಂಡಿಗೆ ಸುರಿದಿರುವ ಘಟನೆ ನಡೆದಿದೆ. ಹಾಗೇ ಹಾವೇರಿಯಲ್ಲಿ ನಿಗದಿತ ಅವಧಿಯಲ್ಲಿ ತರಕಾರಿ ಕೊಳ್ಳಲು ಹೋಗದವರ ಮೇಲೆ ಮಾರುಕಟ್ಟೆಯಲ್ಲೇ ಪೊಲೀಸರು ಭೀಕರ ದಾಳಿ ನಡೆಸಿದ್ದಾರೆ.

ಕೋಲಾದಲ್ಲಿ ನಡೆದ ಮತ್ತೊಂದು ಹೇಯ ಘಟನೆಯಲ್ಲಿ ಔಷಧಿಗಾಗಿ ಮೆಡಿಕಲ್ ಶಾಪ್ ಗೆ ದ್ವಿಚಕ್ರ ವಾಹನದಲ್ಲಿ ಬಂದಿದ್ದ ಮಂಗಳಮುಖಿಯೊಬ್ಬರಿಗೆ ಪೊಲೀಸರು(ಮಹಿಳಾ ಸಿಬ್ಬಂದಿ !) ಅಮಾನುಷ ಹಲ್ಲೆ ನಡೆಸಿ, ಅಟ್ಟಹಾಸ ಮೆರೆದಿರುವ ಘಟನೆ ರಾಜ್ಯಾದ್ಯಂತ ಪೊಲೀಸರ ವಿರುದ್ಧ ಮತ್ತು ರಾಜ್ಯ ಸರ್ಕಾರದ ವಿರುದ್ಧ ವ್ಯಾಪಕ ಟೀಕೆಗೆ ಕಾರಣವಾಗಿದೆ.

ಪೊಲೀಸರ ಅಟ್ಟಹಾಸದ ವಿರುದ್ಧ ಈಗಾಗಲೇ ರಾಜ್ಯ ಮಾನವ ಹಕ್ಕು ಆಯೋಗಕ್ಕೂ ದೂರು ನೀಡಲಾಗಿದ್ದು, ಲಾಕ್ ಡೌನ್ ಹೆಸರಿನಲ್ಲಿ ಪೊಲೀಸರು ನಾಗರಿಕರ ಮೇಲೆ ಅಮಾನುಷ ದಾಳಿ ನಡೆಸುತ್ತಿದ್ದಾರೆ. ಇದು ಮಾನವ ಹಕ್ಕುಗಳ ಸ್ಪಷ್ಟ ಉಲ್ಲಂಘನೆ. ಔಷಧಿ, ತರಕಾರಿ, ಹಾಲು-ಹಣ್ಣಿನಂತೆ ತೀರಾ ಅಗತ್ಯ ವಸ್ತಗಳ ಖರೀದಿಗೆ, ಆಸ್ಪತ್ರೆಗಳಿಗೆ ತುರ್ತು ಭೇಟಿಗೆ ಹೋಗುವವರ ಮೇಲೆಯೂ ರಾಜ್ಯದ ಹಲವು ಕಡೆ ಪೊಲೀಸರು ದಾಳಿ ನಡೆಸಿರುವ ಪ್ರಕರಣಗಳು ವರದಿಯಾಗಿವೆ ಎಂದು ಕಾಂಗ್ರೆಸ್ ನಾಯಕ ರಮೇಶ್ ಬಾಬು ಹೇಳಿದ್ದಾರೆ. ಆ ಹಿನ್ನೆಲೆಯಲ್ಲಿ ಕೂಡಲೇ ಮಾನವ ಹಕ್ಕುಗಳ ರಕ್ಷಣೆಗೆ ಆಯೋಗ ಧಾವಿಸಬೇಕು ಮತ್ತು ಪೊಲೀಸರಿಗೆ ನಾಗರಿಕರೊಂದಿಗೆ ಸೌಜನ್ಯದಿಂದ ವರ್ತಿಸುವಂತೆ , ಯಾವುದೇ ರೀತಿಯ ದೈಹಿಕ ದಾಳಿ, ಹಲ್ಲೆ ನಡೆಸದಂತೆ ತಾಕೀತು ಮಾಡಬೇಕು ಎಂದು ಅವರು ತಮ್ಮ ದೂರಿನಲ್ಲಿ ಹೇಳಿದ್ದಾರೆ.

ಮತ್ತೊಂದು ಕಡೆ ರಾಜ್ಯ ಮುಖ್ಯಕಾರ್ಯದರ್ಶಿಗಳು, ಪೊಲೀಸ್ ಮಹಾನಿರ್ದೇಶಕರು, ಬೆಂಗಳೂರು ಪೊಲೀಸ್ ಆಯುಕ್ತರಿಗೆ ಹಿರಿಯ ವಕೀಲ ಎಸ್ ಉಮಾಪತಿ ಅವರು ದೂರು ಸಲ್ಲಿಸಿದ್ದು, ರಾಜ್ಯದಲ್ಲಿ ಅಧಿಕೃತವಾಗಿ ಸಂಪೂರ್ಣ ಲಾಕ್ ಡೌನ್ ಜಾರಿಯಾಗಿಲ್ಲ. ಅಗತ್ಯ ವಸ್ತು ಖರೀದಿಗೆ ನಿಗದಿತ ಸಮಯದಲ್ಲಿ ಅವಕಾಶ ನೀಡಲಾಗಿದೆ. ಆದರೆ, ರಾಜ್ಯಾದ್ಯಂತ ಪೊಲೀಸರು ನಿಗದಿತ ಅವಧಿಯಲ್ಲಿ ಕೂಡ ಜನ ಸಂಚಾರಕ್ಕೆ ಅಡ್ಡಿಪಡಿಸಿ, ಜನರ ಮೇಲೆ ಅತ್ಯಂತ ಅಮಾನವೀಯ ರೀತಿಯಲ್ಲಿ ಹಲ್ಲೆ ನಡೆಸುತ್ತಿದ್ದಾರೆ. ಇದು ಅತ್ಯಂತ ಖಂಡನೀಯ. ಈ ಕೂಡಲೇ ಇಂತಹ ವರ್ತನೆಗಳಿಗೆ ಕಡಿವಾಣ ಬೀಳಬೇಕು. ಎಲ್ಲಾ ಪೊಲೀಸರಿಗೆ ಜನರೊಂದಿಗೆ ಸೌಜನ್ಯದಿಂದ, ಸಭ್ಯತೆಯಿಂದ ನಡೆದುಕೊಳ್ಳುವಂತೆ ಸೂಚನೆ ನೀಡಬೇಕು. ಇಲ್ಲವಾದಲ್ಲಿ ಈ ವಿಷಯವನ್ನು ನ್ಯಾಯಾಂಗದ ಮುಂದೆ ಕೊಂಡೊಯ್ಯಲಾಗುವುದು ಎಂದು ಅವರು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.

ಈ ನಡುವೆ, ಲಾಕ್ ಡೌನ್ ಹೆಸರಿನಲ್ಲಿ ಪೊಲೀಸರ ಕೈಗೆ ರಾಜ್ಯವನ್ನು ಕೊಟ್ಟು ಬಹುತೇಕ ತೆರೆಮರೆಗೆ ಸರಿದಿರುವ ರಾಜ್ಯ ಸರ್ಕಾರ, ಮೇ 24ರವರೆಗಿನ ಹದಿನಾಲ್ಕು ದಿನಗಳ ಅವಧಿಯಲ್ಲಿ ಈ ಲಾಕ್ ಡೌನ್ ಅವಧಿಯನ್ನು ಬಳಸಿಕೊಂಡು ತಾನೇನೇನು ಮಾಡುತ್ತೇನೆ? ಕೋವಿಡ್ ಹರಡುವಿಕೆಯನ್ನು ತಡೆಯಲು, ಅದರ ಪ್ರಸರಣದ ಸರಪಳಿ ತುಂಡಾಗಿಸಲು ಲಾಕ್ ಡೌನ್ ಹೇರಿದ್ದಾಗಿ ಹೇಳಿದ ಸರ್ಕಾರ, ಅಂತಹ ಲಾಕ್ ಡೌನ್ ಯಶಸ್ಸಿಗಾಗಿ ತಮ್ಮ ದುಡಿಮೆ, ಜೀವನ ಕಳೆದುಕೊಂಡು ಜನರು ಮಾಡಿದ ತ್ಯಾಗಕ್ಕೆ ಪ್ರತಿಯಾಗಿ ಅವರ ಜೀವ ಮತ್ತು ಜೀವನ ಉಳಿಸಲು ತಾನೇನು ಮಾಡುತ್ತೇನೆ ಎಂಬುದನ್ನು ಹೇಳಿಲ್ಲ. ಲಾಕ್ ಡೌನ್ ನಿಂದಾಗಿ ಸಂಕಷ್ಟಕ್ಕೆ ಸಿಲುಕುವ ವಿವಿಧ ಸ್ತರದ ಜನರಿಗೆ ನೆರೆಯ ರಾಜ್ಯಗಳಲ್ಲಿ ವಿವಿಧ ಸೌಲಭ್ಯ, ರಿಯಾಯ್ತಿ, ಸೌಕರ್ಯಗಳನ್ನು ನೀಡುತ್ತಿರುವಾಗ, ಆ ರಾಜ್ಯಗಳಿಗಿಂತ ಕಠಿಣ ಲಾಕ್ ಡೌನ್ ಜಾರಿ ಮಾಡಿರುವ ತಾನು ಜನರಿಗೆ ಹೇಗೆ ನೆರವಾಗುತ್ತೇನೆ ಎಂಬ ಬಗ್ಗೆ ಸರ್ಕಾರ ತುಟಿಬಿಚ್ಚಿಲ್ಲ.

ಇನ್ನು ಆಮ್ಲಜನಕ, ಹಾಸಿಗೆ, ವೈದ್ಯಕೀಯ ಸೌಲಭ್ಯ ಹೆಚ್ಚಳಕ್ಕೆ, ಆ ಮೂಲಕ ಜನರ ಜೀವ ರಕ್ಷಣೆಗೆ ತಾನೇನು ಯೋಜನೆಗಳನ್ನು ಹಾಕಿಕೊಂಡಿದ್ದೇನೆ? ಯಾವ ಯಾವ ವಿಷಯದಲ್ಲಿ ಯಾವೆಲ್ಲಾ ಗುರಿ ಇದೆ? ಆ ಗುರಿಯನ್ನು ಎಷ್ಟು ದಿನಗಳಲ್ಲಿ ಮತ್ತು ಹೇಗೆ ಮುಟ್ಟಲಾಗುತ್ತದೆ ಎಂಬ ಯಾವ ಮಾಹಿತಿಯನ್ನು ಸಾರ್ವಜನಿಕರೊಂದಿಗೆ ಹಂಚಿಕೊಂಡಿಲ್ಲ.

ರಾಜ್ಯದಲ್ಲಿ ಎಷ್ಟು ಕೋವಿಡ್ ಆಸ್ಪತ್ರೆಗಳಿವೆ? ಅವುಗಳಲ್ಲಿ ಎಷ್ಟು ವೆಂಟಿಲೇಟರ್-ಆಮ್ಲಜನಕ ಸಹಿತ ಐಸಿಯು ಹಾಸಿಗೆಗಳು ಇವೆ. ಅವುಗಳಲ್ಲಿ ಎಷ್ಟು ಭರ್ತಿಯಾಗಿವೆ? ಎಷ್ಟು ಲಭ್ಯವಿವೆ? ಎಷ್ಟು ಮಂದಿ ವೈದ್ಯರು ಕೋವಿಡ್ ಕರ್ತವ್ಯಕ್ಕೆ ಬೇಕಾಗಿದೆ? ಈಗ ಎಷ್ಟು ಮಂದಿ ಲಭ್ಯವಿದ್ದಾರೆ? ಲಸಿಕೆಯ ವಿಷಯದಲ್ಲಿ ರಾಜ್ಯದಲ್ಲಿ ಯಾವ ಹಂತದಲ್ಲಿ ಎಷ್ಟು ಮಂದಿಗೆ ಲಸಿಕೆ ನೀಡಲು ಸಿದ್ಧತೆಯಾಗಿದೆ? ಯಾವ ವಯೋಮಾನದ ಎಷ್ಟು ಮಂದಿಗೆ ಲಸಿಕೆ ನೀಡಲಾಗಿದೆ ಮತ್ತು ಉಳಿದವರಿಗೆ ಕೊರತೆ ಇರುವ ಲಸಿಕೆಗಳನ್ನು ಹೇಗೆ ಮತ್ತು ಯಾವಾಗ ವ್ಯವಸ್ಥೆ ಮಾಡಲಾಗುವುದು? ಮುಂತಾದ ಯಾವ ಮೂಲಭೂತ ಮಾಹಿತಿಯನ್ನು, ಸರ್ಕಾರ ನೀಡುತ್ತಿಲ್ಲ. ವಾಸ್ತವವಾಗಿ ಈ ಎಲ್ಲಾ ಮಾಹಿತಿಯನ್ನು ದಿನನಿತ್ಯ ಎಲ್ಲಾ ನಾಗರಿಕರಿಗೆ ಲಭ್ಯವಾಗುವಂತೆ ಆಯಾ ಪ್ರದೇಶದ ಆಸ್ಪತ್ರೆಗಳ ವಿವರವೂ ತತಕ್ಷಣಕ್ಕೆ ಸಿಗುವಂತೆ ಕನಿಷ್ಟ ದಿನಕ್ಕೆ ಒಮ್ಮೆಯಾದರೂ ಅಪ್ ಡೇಟ್ ವ್ಯವಸ್ಥೆಯೊಂದಿಗೆ ಜನರಿಗೆ ಒದಗಿಸಬೇಕಾದುದು ಈ ಸಂಕಷ್ಟದ ಹೊತ್ತಲ್ಲಿ ಯಾವುದೇ ನಾಗರಿಕ ಸರ್ಕಾರದ ಹೊಣೆ.

ಆದರೆ, ರಾಜ್ಯ ಸರ್ಕಾರ ಇಂತಹ ಯಾವ ವಿಷಯದ ಬಗ್ಗೆಯೂ ತಲೆಕೆಡಿಸಿಕೊಳ್ಳದೆ, ಕೇವಲ ಲಾಕ್ ಡೌನ್ ಹೇರಿ, ಜನರನ್ನು ಅವರವರ ಮನೆಗಳಲ್ಲೇ ಕಟ್ಟಿಹಾಕಲು ಮತ್ತು ಆ ಮೂಲಕ ಆಡಳಿತ ಲೋಪಗಳ ವಿರುದ್ಧ ಬಾಯಿಬಿಡದಂತೆ ನೋಡಿಕೊಳ್ಳುತ್ತಿದೆ. ಪೊಲೀಸರ ಕೈಗೆ ಲಾಠಿಕೊಟ್ಟು ಅವರಿಗೆ ಮನಬಂದಂತೆ ವರ್ತಿಸಲು ಬಿಟ್ಟು ಜನರನ್ನು ಬೆದರಿಸಲು ಸರ್ಕಾರ ಲಾಕ್ ಡೌನ್ ಬಳಸುತ್ತಿದೆಯೇ ವಿನಃ, ವಾಸ್ತವವಾಗಿ ಕರೋನಾ ನಿಯಂತ್ರಣದ ವಿಷಯದಲ್ಲಿ ಮತ್ತು ಆರೋಗ್ಯ ವ್ಯವಸ್ಥೆ ಸುಧಾರಣೆಯ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲು ಈ ಅವಕಾಶವನ್ನು ಬಳಸಿಕೊಳ್ಳುವ ಯಾವ ಆಸಕ್ತಿಯನ್ನೂ ತೋರುತ್ತಿಲ್ಲ.

ಬೆಳಗ್ಗೆ 6ರಿಂದ 10ರವರೆಗೆ ತರಕಾರಿ, ಹಾಲು, ಹಣ್ಣು, ಮೆಡಿಸಿನ್ ಕೊಳ್ಳಲು ಅವಕಾಶ ನೀಡಿರುವ ಸರ್ಕಾರ, ಆದರೆ ಆ ವಸ್ತುಗಳನ್ನು ನಡೆದುಕೊಂಡೇ ಬಂದು ಕೊಳ್ಳಬೇಕು, ಯಾವುದೇ ರೀತಿಯ ವಾಹನ ಬಳಸುವಂತಿಲ್ಲ ಎಂಬ ನಿಯಮ ಹೇರಿ ಒಂದು ಕೈಯಲ್ಲಿ ಕೊಟ್ಟಂತೆ ಮಾಡಿ ಮತ್ತೊಂದು ಕೈಯಲ್ಲಿ ಕಿತ್ತುಕೊಂಡಿದೆ. ಇನ್ನು ನಿಗದಿತ ಔಷಧಿಗಳಿಗಾಗಿ ನಿರ್ದಿಷ್ಟ ಔಷಧಿ ಅಂಗಡಿಗಳನ್ನು(ಹೋಮಿಯೋಪತಿ, ಆರ್ಯುವೇದ, ಜನರಿಕ್) ಹುಡುಕಿಕೊಂಡು ಹತ್ತಾರು ಕಿಮೀ ದೂರ ನಡೆದುಹೋಗುವುದು ಹೇಗೆ? ಮತ್ತು ಹಣಕ್ಕಾಗಿ ಬ್ಯಾಂಕು, ಎಟಿಎಂಗಳಿಗೆ ಹೋಗಲು ಕೂಡ ಕೆಲವೊಮ್ಮೆ ನಗರ ಪ್ರದೇಶದಲ್ಲೇ ಐದಾರು ಕಿ.ಮೀ ದೂರ ಹೋಗಬೇಕಾಗುತ್ತದೆ ಆಗ ಏನು ಮಾಡುವುದು? ಇನ್ನು ಗ್ರಾಮೀಣ ಭಾಗದಲ್ಲಂತೂ ಒಂದು ಬೆಂಕಿಪೆಟ್ಟಿಗೆ ಕೊಳ್ಳಲೂ ಜನ ಹತ್ತಾರು ಕಿ.ಮೀ ದೂರ ನಡೆದುಬರುವುದು ಸಾಧ್ಯವೆ ? ಎಂಬ ಪ್ರಶ್ನೆಗಳು ಸೋಮವಾರ ಸರ್ಕಾರದ ಮುಖಕ್ಕೆ ರಾಚಿವೆ.

ಒಂದು ಅವಿವೇಕಿ ಲಾಕ್ ಡೌನ್ ಹೇರಿ, ಜನರನ್ನು ಪಶುಗಳಂತೆ ಚಿತ್ರಹಿಂಸೆಗೆ ಗುರಿಮಾಡುವ ಬದಲು, ಸಿಎಂ ಯಡಿಯೂರಪ್ಪ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಕುರ್ಚಿ ಬಿಟ್ಟು ಹೋಗಲಿ, ಒಂದು ಕಡೆ ಕರೋನಾ ನಡುವೆ ಚುನಾವಣೆ, ಸಮಾವೇಶಗಳನ್ನು ಮಾಡಿ ಕೋವಿಡ್ ಹರಡಿ ಲಕ್ಷಾಂತರ ಜನರ ಜೀವಕ್ಕೆ ಸಂಚಕಾರ ತಂದದ್ದಲ್ಲದೆ, ಯಾವ ತಯಾರಿಯನ್ನೂ ಮಾಡಿಕೊಳ್ಳದೆ ಆಮ್ಲಜನಕ, ಹಾಸಿಗೆ ಸಿಗದೆ ಜನ ಹಾದಿಬೀದಿ ಹೆಣವಾಗುವಂತೆ ಮಾಡಿದ್ದೀರಿ. ಇದೀಗ ಮತ್ತೆ ಅಮಾನುಷ ಲಾಕ್ ಡೌನ್ ಹೇರಿ ಜನರನ್ನು ಮನೆಮನೆಯಲ್ಲೇ ಸಾಯಿಸುವ ಕಾನೂನು ತಂದಿದ್ದೀರಿ. ನಿಮಗೆ ಅಧಿಕಾರದಲ್ಲಿ ಮುಂದುವರಿಯುವ ಯಾವ ನೈತಿಕತೆಯೂ ಉಳಿದಿಲ್ಲ. ಮೊದಲು ಕುರ್ಚಿ ಬಿಟ್ಟು ತೊಲಗಿ ಎಂಬುದು ಸಾಮಾಜಿಕ ಜಾಲತಾಣಗಳಲ್ಲಿ ಮಾರ್ದನಿಸತೊಡಗಿದೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ, ಜನರ ಆಕ್ರೋಶ ಕಟ್ಟೆಯೊಡುವ ದಿನಗಳು ದೂರವಿಲ್ಲ!

Related posts

Latest posts

ಭಾರತದ ಶ್ರೇಷ್ಠ ಓಟಗಾರ ಮಿಲ್ಖಾ ಸಿಂಗ್ ಇನ್ನಿಲ್ಲ

ಭಾರತದ ಶ್ರೇಷ್ಠ ಓಟಗಾರ ಮಿಲ್ಖಾ ಸಿಂಗ್ ಕೊರೊನಾ ಸೋಂಕಿನಿಂದ ಉಂಟಾದ ಹಲವಾರು ಸಮಸ್ಯೆಗಳಿಂದ ಕೊನೆಯುಸಿರೆಳೆದಿದ್ದಾರೆ. ಚಂಡೀಗಡದ ಪಿಜಿಐ ಆಸ್ಪತ್ರೆಯಲ್ಲಿ ತಮ್ಮ 91 ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ಕಳೆದ ತಿಂಗಳು ಮಿಲ್ಖಾ ಸಿಂಗ್ ಅವರಿಗೆ...

ಒಂದೇ ದಿನದಲ್ಲಿ ಎರಡು ವಿವಿಧ ಕೋವಿಡ್-19 ಲಸಿಕೆಗಳನ್ನು ಪಡೆದ ಬಿಹಾರದ ಮಹಿಳೆ

ಬಿಹಾರದ 63 ವರ್ಷದ ಮಹಿಳೆಗೆ ಒಂದೇ ದಿನದಲ್ಲಿ ಎರಡು ವಿಭಿನ್ನ ಕಂಪನಿಯ ಕರೋನ ಲಸಿಕೆ ನೀಡಲಾಗಿದೆ. ಅವರು ಈಗ ವೈದ್ಯರ ನಿಗದಲ್ಲಿದ್ದು ಆರೋಗ್ಯವಾಗಿದ್ದಾರೆ ಎನ್ನಲಾಗಿದೆ. ಬಿಹಾರದ ಮಹಿಳೆ ಸುನಿಲಾ ದೇವಿ ಎಂಬುವವರಿಗೆ ಜೂನ್ 16...

ಮಸೀದಿಗೆ ಜಾಗ ದಾನ ನೀಡಿದ ಸಿಖ್ ವ್ಯಕ್ತಿ: ಮಸೀದಿಯಲ್ಲಿ ಕಾರ್ಯಕ್ರಮ ಆಯೋಜಿಸಿದ ಗುರುದ್ವಾರ

ಕೋಮು‌‌ ಸಂಘರ್ಷಗಳು, ಪ್ರಚೋದನೆಗಳು ಮತ್ತು ವಿಭಿನ್ನ ಕೋಮಿನ ಜನರ ಮೇಲೆ ವಿನಾಕಾರಣ ಹಲ್ಲೆ, ಕೊಲೆ ನಡೆಯುವ ವಿದ್ಯಮಾನಗಳ ನಡುವೆ ಪಂಜಾಬಿನ‌ ಎರಡು ಜಿಲ್ಲೆಗಳು ಕೋಮುಸಾಮರಸ್ಯವನ್ನು ಉತ್ತೇಜಿಸುವಂತಹ ಘಟನೆಗೆ ಸಾಕ್ಷಿಯಾಗಿವೆ. ಸ್ವಾಭಿಮಾನಕ್ಕೆ, ಕೆಚ್ಚೆದೆಗೆ ಹಠಕ್ಕೆ...