ಕರೋನ ವೈರಸ್ ಎರಡನೇ ಅಲೆ ಎಲ್ಲೆಡೆ ಹರಡುತ್ತಿರುವ ಕಾರಣ ಯಡಿಯೂರಪ್ಪನವರ ಸರ್ಕಾರ ರಾಜ್ಯಾದ್ಯಂತ ಇಂದಿನಿಂದ 14 ದಿನಗಳ ಕಾಲ ಲಾಕ್‌ಡೌನ್ ಘೋಷಿಸಿತು. ಲಾಕ್ ಡೌನ್ ನಡುವೆ ಜನಸಾಮಾನ್ಯರು ಮಾರ್ಗಸೂಚಿ ಉಲ್ಲಂಘಿಸುತ್ತಿರುವ ಉದಾಹರಣೆಗಳು ಕಂಡುಬರುತ್ತಿವೆ, ಆದರೆ ಅಗತ್ಯ ಸೇವೆಗಳಿಗೆ ಹೊರಬರುತ್ತಿರುವವರ ಮೇಲೂ ಕಾರಣ ಕೇಳದೆ ಪೋಲಿಸರು ಲಾಠಿ ಬೀಸುತ್ತಿದ್ದಾರೆಂದು ಸೋಷಿಯಲ್ ಮೀಡಿಯಾಗಳಲ್ಲಿ ಜನರು ವಿಡಿಯೋಗಳನ್ನ ಅಪ್ಲೋಡ್ ಮಾಡಿ ಆಕ್ರೋಶ ಹೊರಹಾಕಿದ್ದಾರೆ. ಈತರದ ಪೋಲಿಸ್ ವರ್ತನೆಯನ್ನು ಕೆಲ ಮಾಧ್ಯಮಗಳು ಕೂಡ ವರದಿ ಮಾಡಿವೆ.
ಪೋಲಿಸರ ಈತರದ ವರ್ತನೆಯ ಹಿನ್ನೆಲೆ ಬೆಂಗಳೂರು ಪೋಲಿಸ್ ಕಮೀಶನರ್ ಕಮಲ್ ಪಂತ್ ಟ್ವೀಟ್ ಮೂಲಕ ಟ್ವೀಟ್ ಮಾಡಿ, ಜನಗಳ ಮೇಲೆ ಲಾಠಿ ಪ್ರಯೋಗ ಮಾಡಬಾರದು ಎಂಬ ಸೂಚನೆ ನೀಡಿದ್ದಾರೆ. “ಒಂದು ವೇಳೆ ಸಾರ್ವಜನಿಕರು ಲಾಕ್ ಡೌನ್ ಮಾರ್ಗಸೂಚಿ ಉಲ್ಲಂಘಿಸಿದ್ದು ಕಂಡುಬಂದಲ್ಲಿ ಮಾತ್ರ ಕಾನೂನಿನ ಅಡಿಯಲ್ಲಿ ಬೆಂಗಳೂರು ನಗರ ಪೋಲಿಸ್ ಸಿಬ್ಬಂದಿ ಕ್ರಮ ಕೈಗೊಳ್ಳಬೇಕು ಹೊರತು ಬೇರೆ ಯಾವುದೇ ರೀತಿಯ ಬಲಪ್ರಯೋಗ ಮಾಡಬಾರದು ಎಂಬ ಸೂಚನೆ ನೀಡಲಾಗಿದೆ. ಮನೆಯಲ್ಲೇ ಇರಿ, ಸುರಕ್ಷಿತವಾಗಿರಿ. ಕೊರೊನ ಹರಡುವುದನ್ನು ತಡೆಯಲು ದಯವಿಟ್ಟು ಸಹಕರಿಸಿ.” ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.