ಕನ್ನಡ, ಕರ್ನಾಟಕಕ್ಕೆ ಸಿಗಬೇಕಾದ ನ್ಯಾಯ ದೊಡ್ಡದಿದೆ -ಹೆಚ್‌ಡಿಕೆ

ಕನ್ನಡಿಗರ ಭಾಷಾಭಿಮಾನವನ್ನು  ಗೂಗಲ್‌ ಮತ್ತು ಅಮೇಜಾನ್‌ ಕೆಣಕಿದ್ದವೋ, ಇಲ್ಲವೇ ಪಟ್ಟಭದ್ರರು ಕೆಣಕಿದ್ದರೋ.. ಆದರೆ, ಕನ್ನಡಿಗರು ಖಚಿತವಾಗಿ ಸಿಡಿಯುತ್ತಾರೆ ಎಂಬ ಉತ್ತರ ಕೆಣಕಿದವರಿಗೆ ಸಿಕ್ಕಿದೆ. ಆದರೆ, ಈ ಸಣ್ಣ ವಿಚಾರಗಳೇ ವೈಭವೀಕರಣಗೊಂಡು, ಚರ್ಚೆಯಾಗಬೇಕಾದ ಗಂಭೀರ ವಿಚಾರಗಳು ಮರೆಯಾಗದಿರಲಿ. ಕನ್ನಡ, ಕರ್ನಾಟಕಕ್ಕೆ ಸಿಗಬೇಕಾದ ನ್ಯಾಯ ದೊಡ್ಡದಿದೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಎಚ್ಚರಿಸಿದ್ದಾರೆ.

ಲೋಕಸಭೆಯಲ್ಲಿ ಕನ್ನಡದಲ್ಲಿ ಮಾತನಾಡಿದರೆ ಮಾನ್ಯತೆ ಸಿಗುವುದಿಲ್ಲ, ಗಂಭೀರವಾಗಿಯೂ ಆಲಿಸುವುದಿಲ್ಲ. ಕೇಂದ್ರದ ಪ್ರಕಟಣೆಗಳು ಸ್ಥಳೀಯ ಭಾಷೆಯಲ್ಲಿ ಸಿಗುವುದಿಲ್ಲ. ಕೇಂದ್ರದ ಸೇವೆಗಳು ಕನ್ನಡದಲ್ಲಿಲ್ಲ. ಅಧಿಕಾರಿಗಳು, ಸಿಬ್ಬಂದಿ ಕನ್ನಡದಲ್ಲಿ ಮಾತನಾಡುವುದಿಲ್ಲ. ವೆಬ್‌ಸೈಟ್‌ಗಳಲ್ಲಿ ಕನ್ನಡವಿಲ್ಲ. ಗ್ರಾಹಕ ಸೇವೆ ಕನ್ನಡದಲ್ಲಿ ಸಿಗುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ನಮ್ಮ ಜಿಎಸ್‌ಟಿ ಪಾಲು ನಮಗೆ ಸಿಗುವುದಿಲ್ಲ, ನೆರೆ–ಬರ ಪರಿಹಾರವಿಲ್ಲ, ಕನ್ನಡಿಗರು ಉಸಿರುಗಟ್ಟಿ ಸಾಯುತ್ತಿದ್ದರೂ ಆಮ್ಲಜನಕ ನೀಡುವುದಿಲ್ಲ, ಕಾಯಿಲೆಗೆ ಔಷಧ ನೀಡುವುದಿಲ್ಲ. ಕರ್ನಾಟಕದಿಂದ ಬರಬೇಕಾದ್ದನ್ನು ವಸೂಲಿ ಮಾಡದೇ ಬಿಡುವುದಿಲ್ಲ. ಇದೆಲ್ಲವೂ ಕನ್ನಡ, ಕನ್ನಡಿಗರ ಮೇಲಿನ ದರ್ಪವಲ್ಲದೇ ಮತ್ತೇನಲ್ಲ. ನಮ್ಮ ಹೋರಾಟ ಇದರ ವಿರುದ್ಧವೂ ಇರಬೇಕು ಎಂದು ಕುಮಾರಸ್ವಾಮಿ ಸರ್ಕಾರಕ್ಕೆ ಕನ್ನಡಿಗರಿಗೆ ಸಲಹೆ ನೀಡಿದ್ದಾರೆ.

ಕನ್ನಡದ ಧ್ವಜವನ್ನು ಅಪಮಾನಿಸಿದ ಕೆನಡಾದ  ಅಮೇಜಾನ್‌ ಗೆ ಕನ್ನಡಿಗರು ಬಿಸಿಮುಟ್ಟಿಸಿದ್ದಾರೆ. ಅಮೆಜಾನ್‌ ತನ್ನ ತಪ್ಪು ಸರಿಪಡಿಸಿಕೊಂಡಿದೆ. ಕನ್ನಡವನ್ನು ಅವಮಾನಿಸಿದ ಗೂಗಲ್‌ಗೆ ಪಾಠ ಕಲಿಸಿದ್ದು, ಈಗ ಅಮೆಜಾನ್‌ಗೆ ಬುದ್ಧಿ ಕಲಿಸಿದ್ದರಲ್ಲಿ ಎದ್ದು ಕಾಣುವಂಥದ್ದು ಕನ್ನಡಿಗರ ‘ಅಭಿಮಾನ’. ಅದಕ್ಕಾಗಿ ಕನ್ನಡದ ಮನಸ್ಸುಗಳನ್ನು ಅಭಿನಂದಿಸುತ್ತೇನೆ ಎಂದಿದ್ದಾರೆ.

ಕನ್ನಡ ಕೆಟ್ಟ ಭಾಷೆ‘ ಎಂಬ ವಿಚಾರ ಗೂಗಲ್‌ನಲ್ಲಿ ಕಾಣಿಸಿಕೊಂಡ ಬೆನ್ನಲ್ಲೇ ಈ ಘಟನೆಯೂ ಬಯಲಾಗಿರುವುದನ್ನು ಗಮನಿಸುತ್ತಿದ್ದರೆ, ಕನ್ನಡ, ಕರ್ನಾಟಕಕ್ಕೆ ಅಪಚಾರ ಮಾಡಲು ಪಟ್ಟಭದ್ರ ಹಿತಾಸಕ್ತಿ ಕೆಲಸ ಮಾಡುತ್ತಿರುವ ಅನುಮಾನ ಮೂಡುತ್ತಿದೆ. ಜನಸಮುದಾಯವೊಂದರ ಭಾವನೆಗಳ ಜೊತೆಗೆ ಆಟವಾಡುತ್ತಿರುವವರನ್ನು ಪತ್ತೆ ಹಚ್ಚುವ ಸಂದರ್ಭ ಈಗ ಸೃಷ್ಟಿಯಾಗಿದೆ.

ಇಂಥ ಅಪಮಾನಗಳ ಮೂಲಕ ಕನ್ನಡಿಗರ ಸಹನೆ ಕೆಣಕುವ ಕೆಲಸ ಇಂಥ ಸಂಸ್ಥೆಗಳಿಂದ ಆಗುತ್ತಲೇ ಇವೆ. ಕನ್ನಡಿಗರ ಕೋಪದಿಂದ ಸಿಡಿಯುವ ಕಿಡಿಯಿಂದ ಅನಾಹುತಗಳು ಸಂಭವಿಸಿದರೆ, ಅದನ್ನು ತಾಳಿಕೊಳ್ಳುವ ಶಕ್ತಿ ಈ ಸಂಸ್ಥೆಗಳಿಗೆ ಉಳಿಯಲಾರದು. ಪರಿಸ್ಥಿತಿ ಅಲ್ಲಿಗೆ ಹೋಗುವ ಮೊದಲು  ಅಮೇಜಾನ್ ಜಾಗತಿಕವಾಗಿ ಕ್ಷಮೆ ಕೋರಬೇಕು. ತಪ್ಪಿತಸ್ಥರನ್ನು ಹಿಡಿದುಕೊಡಬೇಕೆಂದು ಹೆಚ್‌ಡಿಕೆ ಆಗ್ರಹಿಸಿದ್ದಾರೆ.

Related posts

Latest posts

ಕುಂಭ ಮೇಳ ಸಂದರ್ಭದಲ್ಲಿ ಮಾಡಿದ 1 ಲಕ್ಷ ಕೋವಿಡ್-19 ಪರೀಕ್ಷೆಗಳು ನಕಲಿ: ತನಿಖಾ ವರದಿ

ಹರಿದ್ವಾರದ ಕುಂಭ ಮೇಳ ಸಂದರ್ಭದಲ್ಲಿ ಮಾಡಲಾಗಿದ ನಾಲ್ಕು ಲಕ್ಷ ಕೋವಿಡ್ ಟೆಸ್ಟ್ ಫಲಿತಾಂಶಗಳಲ್ಲಿ ಹಲವು ನಕಲಿ ಎಂದು ಉತ್ತರಾಖಂಡ ಆರೋಗ್ಯ ಇಲಾಖೆ ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ. ವಿವರವಾದ ತನಿಖೆಯ 1,600 ಪುಟಗಳಲ್ಲಿ...

ನನ್ನ ಹೇಳಿಕೆಯಿಂದ ನಾನು ಹಿಂದೆ ಸರಿಯಲ್ಲ : ನಟ ಚೇತನ್ ಸ್ಪಷ್ಟನೆ

ಬ್ರಾಹ್ಮಣ್ಯ ವಿರೋಧಿ ಹೇಳಿಕೆ ಎಂಬ ಆರೋಪದ ಅಡಿ ಇಂದು ಬಸವನಗುಡಿ ಪೊಲೀಸರ ಮುಂದೆ ಹಾಜರಾದ ನಟ ಚೇತನ್ ತನ್ನ ಹೇಳಿಕೆಯ ಬಗ್ಗೆ ಪೊಲೀಸರ ಮುಂದೆ ಸ್ಪಷ್ಟನೆ ದಾಖಲಿಸಿದ್ದಾರೆ. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ...

ಚಿಕ್ಕಬಳ್ಳಾಪುರ: ಅರ್ಹ ಫಲಾನುಭವಿಗಳನ್ನು ಗುರುತಿಸುವಲ್ಲಿ ವಿಫಲ: ರೈತರಿಗೆ ಸಿಗುತ್ತಿಲ್ಲ ಪರಿಹಾರ ಧನ

ಕೊರೋನಾ ಲಾಕ್ಡೌನ್ ಸಮಯದಲ್ಲಿ ಸಂಕಷ್ಟಕ್ಕೊಳಗಾದ ರೈತರಿಗೆ ಸರ್ಕಾರ ಪರಿಹಾರದ ಅಭಯ ಕೊಟ್ಟಿತು. ಆದರೆ ಅರ್ಹ ಫಲಾನುಭವಿಗಳನ್ನ ಗುರುತಿಸುವಲ್ಲಿ ವಿಫಲವಾದ ಪರಿಣಾಮ ನಿಜವಾದ ರೈತರಿಗೆ ಪರಿಹಾರ ಸಿಗದಂತಾಗಿದೆ. ಈ ಕುರಿತು ಚಿಕ್ಕಬಳ್ಳಾಪುರದಲ್ಲಿ ರೈತರು ತಮ್ಮ...