ಕಪ್ಪು ಶಿಲೀಂಧ್ರ ರೋಗವನ್ನು ಸರ್ಕಾರ ಕೂಡಲೇ ಸಾಂಕ್ರಾಮಿಕ ರೋಗ ಎಂದು ಘೋಷಿಸಬೇಕು. ಈ ಕಾಯಿಲೆಯ ಚಿಕಿತ್ಸೆಗೆ ಬೇಕಿರುವ ಔಷಧಗಳನ್ನು ಸಮರ್ಪಕವಾಗಿ ಸಂಗ್ರಹಿಸಬೇಕು. ಇದರ ವಿರುದ್ಧ ಹೋರಾಡಲು ಅಗತ್ಯವಿರುವ ನೇತ್ರ ತಜ್ಞರು, ಇಎನ್‌ಟಿ ಪರಿಣತರು, ಜನರಲ್ ಸರ್ಜನ್‌ಗಳು, ನರರೋಗ ತಜ್ಞರು, ದಂತವೈದ್ಯರನ್ನು ಸರ್ಕಾರ ಸನ್ನದ್ಧ ಸ್ಥಿತಿಯಲ್ಲಿ ಇಡಬೇಕು ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
ಕೋವಿಡ್‌ನಿಂದ ಗುಣವಾದವರೇ ಹೆಚ್ಚಾಗಿ ಕಪ್ಪು ಶಿಲೀಂಧ್ರ ಕಾಯಿಲೆಗೆ ತುತ್ತಾಗುತ್ತಾರೆ ಎಂದು ತಜ್ಞರು ಹೇಳಿದ್ದಾರೆ. ಹಾಗಾದರೆ, ಕಪ್ಪು ಶಿಲೀಂಧ್ರದ ಸಂಭಾವ್ಯ ಅಪಾಯ ಕರ್ನಾಟಕಕ್ಕೆ ಹೆಚ್ಚು. ಕೋವಿಡ್ ಪ್ರಕರಣಗಳು ಕರ್ನಾಟಕದಲ್ಲಿ ಅತ್ಯಧಿಕ ಪ್ರಮಾಣದಲ್ಲಿವೆ. ಅಂದರೆ, ಕಪ್ಪು ಶಿಲೀಂಧ್ರ ರೋಗವೂ ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಿಕೊಳ್ಳುವ ಅಪಾಯವಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಕಪ್ಪು ಶಿಲೀಂಧ್ರ ಸೋಂಕನ್ನು (ಮ್ಯೂಕರ್ ಮೈಕೊಸಿಸ್) ತೆಲಂಗಾಣ, ತಮಿಳುನಾಡು, ರಾಜಸ್ಥಾನ, ಒಡಿಶಾ, ಗುಜರಾತ್, ಚಂಡೀಗಢದಲ್ಲಿ ಸಾಂಕ್ರಾಮಿಕ ರೋಗ ಎಂದು ಘೋಷಿಸಲಾಗಿದೆ. ಕೇಂದ್ರ ಸರ್ಕಾರವೂ ಇದನ್ನು ಸಾಂಕ್ರಾಮಿಕ ಎಂದು ಘೋಷಿಸುವಂತೆ ರಾಜ್ಯಗಳಿಗೆ ಸದ್ಯ ಹೇಳಿದೆ. ರಾಜ್ಯವೂ ಈ ಮಾರಕ ಕಾಯಿಲೆಯನ್ನು ಈ ಕೂಡಲೇ ‘ಸಾಂಕ್ರಾಮಿಕ’ ಎಂದು ಘೋಷಿಸಬೇಕು ಎಂದು ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.





