ನಾ ದಿವಾಕರ
ಬೆಂಗಳೂರು: ಮಾ.21: 2023ರ ಕರ್ನಾಟಕ ವಿಧಾನಸಭಾ ಚುನಾವಣೆಗಳು ಸಮೀಪಿಸುತ್ತಿರುವಂತೆ ಎಲ್ಲ ಕ್ಷೇತ್ರಗಳಲ್ಲೂ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ, ಎಲ್ಲ ಪಕ್ಷಗಳಲ್ಲೂ ಹೆಚ್ಚಾಗುತ್ತಿದೆ. ಜನಸೇವೆ ಎನ್ನುವುದಕ್ಕಿಂತಲೂ ಒಂದು ಲಾಭದಾಯಕ ಹುದ್ದೆಯಾಗಿ ಶಾಸಕ ಪದವಿ ಹೆಚ್ಚಿನ ಬೇಡಿಕೆಗೆ ಒಳಗಾಗುತ್ತಿರುವುದನ್ನೂ ಈ ಸಂದರ್ಭದಲ್ಲಿ ಗಮನಿಸಲೇಬೇಕಿದೆ. ಜಾತಿ ರಾಜಕಾರಣದ ಲೆಕ್ಕಾಚಾರಗಳೊಂದೆಡೆಯಾದರೆ, ಬಂಡವಾಳ-ಮಾರುಕಟ್ಟೆ ಮತ್ತು ಔದ್ಯಮಿಕ ಹಿತಾಸಕ್ತಿಗಳು ಮತ್ತೊಂದೆಡೆ ಟಿಕೆಟ್ ಆಕಾಂಕ್ಷಿಗಳ ಬಲಾಬಲಗಳನ್ನು ನಿರ್ಧರಿಸುತ್ತದೆ. ಮೈಸೂರು ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳಲ್ಲಿ ಒಂದಾಗಿರುವ ಪ್ರತಿಷ್ಠಿತ ಕೃಷ್ಣರಾಜ ಕ್ಷೇತ್ರ (ಕೆ.ಆರ್.ಕ್ಷೇತ್ರ) ಘಟಾನುಘಟಿ ರಾಜಕಾರಣಿಗಳ ಅಖಾಡ ಅಲ್ಲವಾದರೂ, ಹೆಚ್ಚಿನ ಸಂಖ್ಯೆಯ ಮಧ್ಯಮವರ್ಗಗಳು ಮತ್ತು ಮೇಲ್ಜಾತಿಯವರ ಮತಗಳು ಇರುವುದರಿಂದ ಈ ಕ್ಷೇತ್ರದ ಜಾತಿ ಲೆಕ್ಕಾಚಾರಗಳೂ ಸಹ ಗಮನಸೆಳೆಯುವಂತಿರುತ್ತದೆ.
ಬಿಜೆಪಿಯಿಂದ ಹಾಲಿ ಶಾಸಕ ರಾಮದಾಸ್, ಕಾಂಗ್ರೆಸ್ ಪಕ್ಷದಿಂದ ಮಾಜಿ ಶಾಸಕ ಎಂ.ಕೆ. ಸೋಮಶೇಖರ್ ಟಿಕೆಟ್ ಆಕಾಂಕ್ಷಿಗಳಾಗಿದ್ದರೆ, ಜೆಡಿಎಸ್ ಪಕ್ಷದಿಂದ ಈಗಾಗಲೇ ಕೆ.ವಿ. ಮಲ್ಲೇಶ್ ಅವರನ್ನು ಅಧಿಕೃತ ಅಭ್ಯರ್ಥಿ ಎಂದು ಘೋಷಿಸಲಾಗಿದೆ. ಈ ಕ್ಷೇತ್ರದಲ್ಲಿ ಲಿಂಗಾಯತ ಮತ್ತು ಬ್ರಾಹ್ಮಣ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಜೆಡಿಎಸ್ ತನ್ನ ಒಕ್ಕಲಿಗರ ಪಕ್ಷ ಎಂಬ ಹಣೆಪಟ್ಟಿಯನ್ನು ಹೋಗಲಾಡಿಸಲು ಹರಸಾಹಸ ಮಾಡಬೇಕಾಗುತ್ತದೆ. ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ಅಭ್ಯರ್ಥಿಗಳ ಆಯ್ಕೆಯ ಕಗ್ಗಂಟು ಜಟಿಲವಾಗುತ್ತಿದ್ದು ಹಾಲಿ ಶಾಸಕ ರಾಮದಾಸ್ ಅವರಿಗೆ ಟಿಕೆಟ್ ನೀಡದಂತೆ ಬ್ರಾಹ್ಮಣ ಮತ್ತು ಲಿಂಗಾಯತ ಸಮುದಾಯದ ಮುಖಂಡರು ಪಕ್ಷದ ಹಿರಿಯರಿಗೆ ಮನವಿ ಸಲ್ಲಿಸಿದ್ದಾರೆ. ಹೆಚ್ಚಿನ ಸಂಖ್ಯೆಯ ಸುಶಿಕ್ಷಿತರು ಮತ್ತು ಮೇಲ್ಜಾತಿ-ಮೇಲ್ವರ್ಗದವರೇ ಇರುವ ಕೆ.ಆರ್ ಕ್ಷೇತ್ರದಲ್ಲಿ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗುವ ಮೂಲಕ ರಾಮದಾಸ್ ತಮ್ಮದೇ ಆದ ಮತಬ್ಯಾಂಕನ್ನು ಸೃಷ್ಟಿಸಿಕೊಂಡಿದ್ದಾರೆ. ಹಾಗೆಯೇ ಕ್ಷೇತ್ರದ ಮತದಾರರಲ್ಲಿ ಒಂದು ಛಾಪು ಮೂಡಿಸುವಲ್ಲೂ ಯಶಸ್ವಿಯಾಗಿದ್ದಾರೆ. ಆಸರೆ ಎಂಬ ಸಂಸ್ಥೆಯ ಮೂಲಕ ಮತದಾರರಿಗೆ ಜನ್ಮದಿನ, ವಿವಾಹದಿನ, ಉಗಾದಿ, ಹೊಸವರ್ಷ ಹೀಗೆ ಶುಭಾಶಯದ ಕಾರ್ಡ್‌ಗಳನ್ನು ಮನೆಮನೆಗೆ ತಲುಪಿಸುವ ಮೂಲಕ, ಪ್ರತಿವರ್ಷ ಕ್ಯಾಲೆಂಡರ್ ಒದಗಿಸುವ ಮೂಲಕ ರಾಮದಾಸ್ ವಿಭಿನ್ನ ರೀತಿಯಲ್ಲಿ ಜನಸಂಪರ್ಕವನ್ನು ಕಾಪಾಡಿಕೊಂಡಿದ್ದಾರೆ.

ರಾಮದಾಸ್ ಅವರಿಗೆ ಬಿಜೆಪಿಯ ಒಳಗಿನಿಂದಲೇ ವಿರೋಧ ವ್ಯಕ್ತವಾಗುತ್ತಿದ್ದು ಇತ್ತೀಚೆಗೆ ಬ್ರಾಹ್ಮಣ ಸಮುದಾಯದ ಹಿರಿಯ ನಾಯಕರು ರಾಮದಾಸ್ ಬಿಟ್ಟು ಬೇರೆಯವರಿಗೆ ಟಿಕೆಟ್ ನೀಡುವಂತೆ ಪಕ್ಷದ ಮೇಲೆ ಒತ್ತಡ ಹೇರುತ್ತಿದ್ದಾರೆ. ಜಿಲ್ಲಾ ಬ್ರಾಹ್ಮಣರ ಸಂಘಗಳ ಒಕ್ಕೂಟದ ಅಧ್ಯಕ್ಷ ಡಿ.ಟಿ. ಪ್ರಕಾಶ್ ಮಾಜಿ ಸಿ.ಎಂ ಯಡಿಯೂರಪ್ಪ ಅವರನ್ನು ಭೇಟಿಯಾಗಿದ್ದು, 75 ಸಾವಿರ ಬ್ರಾಹ್ಮಣರ ವೋಟುಗಳಿರುವ ಕೆ.ಆರ್. ಕ್ಷೇತ್ರದಲ್ಲಿ ರಾಮದಾಸ್ ನಾಲ್ಕುಬಾರಿ ಆಯ್ಕೆಯಾಗಿದ್ದಾರೆ ಆದರೆ ತಮ್ಮ ಸಮುದಾಯಕ್ಕೆ ಸಂಬಂಧಿಸಿದಂತೆ ರಾಮದಾಸ್ ತೃಪ್ತಿಕರವಾಗಿ ಕೆಲಸ ಮಾಡುತ್ತಿಲ್ಲ ಹಾಗಾಗಿ, ಈ ಬಾರಿ ಅವರಿಗೆ ಟಿಕೆಟ್ ನೀಡಕೂಡದು ಎಂದು ಒತ್ತಾಯಿಸಿದ್ದಾರೆ. ರಾಮದಾಸ್ ಕ್ಷೇತ್ರದಲ್ಲಿ ಉತ್ತಮ ಕೆಲಸ ಮಾಡುತ್ತಿದ್ದರೂ, ಬ್ರಾಹ್ಮಣ ಸಮುದಾಯದವರಿಗೆ ಆರ್ಥಿಕ ಹಿಂದುಳಿದ ವರ್ಗಗಳ ಪ್ರಮಾಣಪತ್ರ ಕೊಡಿಸುವಲ್ಲಿ ಮತ್ತು ಇತರ ಸೌಲಭ್ಯಗಳನ್ನು ಒದಗಿಸುವಲ್ಲಿ ವಿಫಲರಾಗಿದ್ದಾರೆ, ಸಮುದಾಯದವರಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿಲ್ಲ ಎಂದೂ ಬ್ರಾಹ್ಮಣ ಸಂಘ ಆರೋಪಿಸಿದೆ. ಬಹುಮಟ್ಟಿಗೆ ರಾಜೀವ್ ಅವರಿಗೆ ಟಿಕೆಟ್ ನೀಡುವಂತೆಯೇ ಸಂಘದ ಮುಂದಾಳುಗಳು ಹೈಕಮಾಂಡ್‌ಗೆ ಅರ್ಜಿ ಸಲ್ಲಿಸಿದ್ದಾರೆ.
ಮತ್ತೊಂದೆಡೆ ಕೆ.ಆರ್ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ವೀರಶೈವ ಲಿಂಗಾಯತ ಸಮುದಾಯದ ನಾಯಕರೂ ಸಹ ರಾಮದಾಸ್‌ಗೆ ಈ ಬಾರಿ ಟಿಕೆಟ್ ನೀಡದಂತೆ ಹೈಕಮಾಂಡ್ ಮೇಲೆ ಒತ್ತಡ ಹೇರುತ್ತಿದ್ದಾರೆ. ಇತ್ತೀಚೆಗೆ ಪಕ್ಷದ ಹಿರಿಯ ನಾಯಕರನ್ನು ಭೇಟಿಮಾಡಿದ ವೀರಶೈವ ಲಿಂಗಾಯತ ಮತದಾರರ ಜಾಗೃತ ಒಕ್ಕೂಟ ಮುಖಂಡರು, ರಾಮದಾಸ್ ವಿರುದ್ಧ ಅಸಮಾಧಾನವನ್ನು ವ್ಯಕ್ತಪಡಿಸಿದ್ದು, ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ಸಲ್ಲಿಸಿರುವ ಮನವಿ ಪತ್ರದಲ್ಲಿ, ಪಕ್ಷವು ಈ ಕ್ಷೇತ್ರದಲ್ಲಿ ಈವರೆಗೂ ಯಾವುದೇ ವೀರಶೈವ ಮುಖಂಡರನ್ನು ಬೆಳೆಸಿಲ್ಲ ಹಾಗಾಗಿ ಈ ಬಾರಿ ತಮ್ಮ ಸಮುದಾಯದ ಅಭ್ಯರ್ಥಿಗೇ ಟಿಕೆಟ್ ನೀಡಬೇಕೆಂದು ಒತ್ತಾಯಿಸಿದ್ದಾರೆ. ರಾಮದಾಸ್ ಅವರಿಗೆ ಯಾವುದೇ ಟಿಕೆಟ್ ನೀಡದಂತೆಯೂ ಒತ್ತಾಯಿಸಿದ್ದಾರೆ. ಮತ್ತೊಂದು ಬೆಳವಣಿಗೆಯಲ್ಲಿ ಬ್ರಾಹ್ಮಣ ಸಮುದಾಯದ ಯುವ ವೇದಿಕೆಯ ಮುಖಂಡರು ಪ್ರತ್ಯೇಕ ಸಭೆ ನಡೆಸಿದ್ದು, ರಾಮದಾಸ್ ಅವರಿಗೆ ಟಿಕೆಟ್ ನೀಡಲು ಒತ್ತಾಯಿಸಿರುವುದೇ ಅಲ್ಲದೆ, ಟಿಕೆಟ್ ನೀಡದಂತೆ ಸಮುದಾಯದ ಹಿರಿಯರು ಆಗ್ರಹಿಸಿರುವುದು ಸರಿಯಲ್ಲ ಎಂದು ಹೇಳಿದ್ದಾರೆ.
ಕೆ. ಆರ್. ಕ್ಷೇತ್ರವು ಕಳೆದ ಮೂರು ದಶಕಗಳಿಂದಲೂ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳನ್ನೇ ಆಯ್ಕೆ ಮಾಡುತ್ತಿದೆ. 1985ರಲ್ಲಿ ಜನತಾಪಕ್ಷದ ವೇದಾಂತ ಹೆಮ್ಮಿಗೆ ಅವರ ನಂತರ, ನಡೆದ ಎಲ್ಲ ಚುನಾವಣೆಗಳಲ್ಲೂ ಎರಡೂ ಪಕ್ಷಗಳು ಸೋಲು ಗೆಲುವು ಕಂಡಿವೆ. 1989, 2004, 2013ರ ಚುನಾವಣೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರೆ, 1994, 1999, 2008 ಮತ್ತು 2018ರ ಚುನಾವಣೆಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಕಾಂಗ್ರೆಸ್ ನಾಲ್ಕು ಬಾರಿ, ಬಿಜೆಪಿ ಐದು ಬಾರಿ, ಜನತಾಪಕ್ಷ ಎರಡು ಬಾರಿ ಮತ್ತು ಪಕ್ಷೇತರರು ಒಮ್ಮೆ ಈ ಕ್ಷೇತ್ರವನ್ನು ಪ್ರತಿನಿಧಿಸಿವೆ.

ಈ ಬಾರಿಯ ಚುನಾವಣೆಗಳಲ್ಲಿ ಜಾತಿ ಲೆಕ್ಕಾಚಾರಗಳೇ ಪ್ರಧಾನವಾಗಿ ಕಂಡುಬರುತ್ತಿದ್ದು, ಬಿಜೆಪಿಯ ಸ್ಥಳೀಯ ನಾಯಕರಲ್ಲೂ ಸಹ ಭಿನ್ನ ನಿಲುವುಗಳನ್ನು ಗುರುತಿಸಬಹುದಾಗಿದೆ. ಮೂಡಾ ಅಧ್ಯಕ್ಷರಾಗಿದ್ದ ರಾಜೀವ್ ರಾಮದಾಸ್ ಅವರಿಗೆ ಪ್ರಬಲ ಪ್ರತಿಸ್ಪರ್ಧಿಯಾಗಿ ಹೊರಹೊಮ್ಮುತ್ತಿದ್ದು, ವೀರಶೈವ ಲಿಂಗಾಯತ ಸಮುದಾಯದಿಂದ ಯಾರನ್ನೂ ಪ್ರಧಾನವಾಗಿ ಬಿಂಬಿಸುತ್ತಿಲ್ಲ. ಈ ಪೈಪೋಟಿಯ ಹೊರತಾಗಿಯೂ ಕೆ.ಆರ್. ಕ್ಷೇತ್ರದ ಮತದಾರರನ್ನು ಕಾಡುವ ಪ್ರಶ್ನೆ ನಾಗರಿಕ ಸೌಲಭ್ಯಗಳನ್ನು ಕುರಿತಾದದ್ದು. ಚುನಾವಣೆಗಳು ಸಮೀಪಿಸುತ್ತಿರುವುದರಿಂದ ಇತ್ತೀಚೆಗಷ್ಟೇ ರಸ್ತೆಗಳ ದುರಸ್ತಿ ಕಾರ್ಯ ನಡೆಯುತ್ತಿದೆ. ಕೆಲವು ಉದ್ಯಾನಗಳನ್ನು ಅತ್ಯುತ್ತಮ ರೀತಿಯಲ್ಲಿ ನಿರ್ವಹಣೆ ಮಾಡಲಾಗುತ್ತಿದ್ದು, ಇನ್ನು ಕೆಲವು ಉದ್ಯಾನಗಳು ಸ್ಮಶಾನಗಳಂತೆ ಕಳೆಗುಂದಿವೆ. ಒಳಚರಂಡಿ ನಿರ್ಮಾಣದಲ್ಲಿ ಕ್ಷಿಪ್ರಗತಿಯಲ್ಲಿ ಕಾಮಗಾರಿ ನಡೆಯುತ್ತಿದೆ. ಏನೇ ಆದರೂ ರಾಮದಾಸ್ ತಮ್ಮ ಅವಧಿಯಲ್ಲಿ ಅತ್ಯುತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಿದ್ದಾರೆ ಎಂದು ಪ್ರಮಾಣೀಕರಿಸಲು ಸಾಧ್ಯವಾಗುವುದಿಲ್ಲ. ಎಲ್ಲೆಂದರಲ್ಲಿ ತಲೆಎತ್ತಿರುವ ಬಾರ್ ಅಂಡ್ ರೆಸ್ಟೋರೆಂಟ್‌ಗಳು, ಅತ್ಯಾಧುನಿಕ ಮದ್ಯದಂಗಡಿಗಳು, ಹೆಚ್ಚಿನ ಪ್ರಮಾಣದ ಹಿರಿಯ ನಾಗರಿಕರೇ ಇರುವ ಈ ಪ್ರದೇಶದಲ್ಲಿ ಸಾಕಷ್ಟು ಪ್ರಕ್ಷುಬ್ಧತೆಯನ್ನೂ ಉಂಟುಮಾಡುತ್ತಿದೆ.
ವಿವೇಕಾನಂದ ನಗರ ಬಸ್ ಡಿಪೋ ವೃತ್ತ, ಆದಿಚುಂಚನಗಿರಿ ರಸ್ತೆಯ RMP ಮುಂದಿರುವ ರಸ್ತೆ ಮತ್ತು ನೃಪತುಂಗ ರಸ್ತೆಯಲ್ಲಿ ಬಾರ್ ಅಂಡ್ ರೆಸ್ಟೋರೆಂಟ್‌ಗಳ ಹಾವಳಿ ಹೆಚ್ಚಾಗಿದ್ದು, ಮುಸ್ಸಂಜೆಯಲ್ಲೂ ಮಹಿಳೆಯರು ಆರಾಮವಾಗಿ ಓಡಾಡಲು ಸಾಧ್ಯವಾಗದಂತಹ ಪರಿಸ್ಥಿತಿ ಸೃಷ್ಟಿಯಾಗಿದೆ. ತ್ಯಾಜ್ಯ ನಿರ್ವಹಣೆ ಮತ್ತು ವಿಲೇವಾರಿಯಲ್ಲಿ ನಿತ್ಯ ಕಸ ಸಂಗ್ರಹಿಸುವ ಕಾರ್ಯ ವ್ಯವಸ್ಥಿತವಾಗಿ ನಡೆಯುತ್ತಿದ್ದರೂ, ಶ್ರೀರಾಂಪುರ, ದೇವಯ್ಯನಹುಂಡಿ, ಲಿಂಗಾಂಬುದಿ ರಸ್ತೆ ಮುಂತಾದೆಡೆ ರಸ್ತೆ ಬದಿಯಲ್ಲಿ ರಾಶಿರಾಶಿ ತ್ಯಾಜ್ಯ ಸಂಗ್ರಹವಾಗುತ್ತಿರುವುದು ಢಾಳಾಗಿ ಕಾಣುತ್ತದೆ. ರಸ್ತೆ ಬದಿಗೆ ಕಸ ಎಸೆಯುವ ನಾಗರಿಕರೂ ಇದಕ್ಕೆ ಜವಾಬ್ದಾರರಾದರೂ ಸ್ಥಳೀಯ ಶಾಸಕರಾಗಿ ಈ ಸಮಸ್ಯೆಯನ್ನು ನೀಗಿಸುವಲ್ಲಿ ರಾಮದಾಸ್ ವಿಫಲರಾಗಿದ್ದಾರೆ.
ಬದಲಾಗುತ್ತಿರುವ ರಾಜಕೀಯ ವಾತಾವರಣದಲ್ಲಿ ಕರ್ನಾಟಕದ ರಾಜಕಾರಣ ನೈತಿಕ ಅಧಃಪತನದ ಪರಾಕಾಷ್ಟೆ ತಲುಪಿದ್ದು, ಭ್ರಷ್ಟಾಚಾರ ಸರ್ವವ್ಯಾಪಿಯಾಗಿದೆ. ದ್ವೇಷ ಭಾಷಣಗಳು ನಿತ್ಯದ ಸುದ್ದಿಯಾಗಿವೆ. ಕರ್ನಾಟಕದ ಜನತೆ ಒಂದು ಜನಪರ, ಸಮಾಜಮುಖಿ, ಸರ್ವಜನಾಂಗದ ಹಿತ ಬಯಸುವ, ಜಾತ್ಯತೀತ, ಪ್ರಜಾಸತ್ತಾತ್ಮಕ ಸರ್ಕಾರವನ್ನು ಈ ಬಾರಿ ಬಯಸುತ್ತಿರುವ ಸಂದರ್ಭದಲ್ಲಿ, ಕೆ. ಆರ್. ಕ್ಷೇತ್ರವೂ ಸಹ ತನ್ನದೇ ಆದ ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತದೆ. ಮತದಾರರು ಯಾರಿಗೆ ಒಲಿಯುತ್ತಾರೆ ಎನ್ನುವುದನ್ನು ಕಾದುನೋಡಬೇಕಿದೆ. ಬಿಜೆಪಿಯ ದೃಷ್ಟಿಯಲ್ಲೇ ಗೆಲ್ಲುವ ಕುದುರೆ ಎನಿಸಿರುವ ಹಾಲಿ ಶಾಸಕ ರಾಮದಾಸ್ ಅವರಿಗೆ ಟಿಕೆಟ್ ನೀಡುವುದನ್ನೇ ವಿರೋಧಿಸುತ್ತಿರುವವರ ಸಂಖ್ಯೆ ಪಕ್ಷದೊಳಗೇ ಹೆಚ್ಚಾಗಿರುವುದು, ಚುನಾವಣೆಯ ಅಂಗಳದಲ್ಲಿ ಮತ್ತಷ್ಟು ಕುತೂಹಲಗಳನ್ನು ಸೃಷ್ಟಿಸಿದೆ. ಅಂತಿಮವಾಗಿ ಮತದಾರರೇ ಪ್ರಭುಗಳು. ಏನಾಗುವುದೋ ಕಾದು ನೋಡೋಣ.
-೦-೦-೦-











