ಚಾಮರಾಜನಗರ ಜಿಲ್ಲಾ ಕೋವಿಡ್ಆಸ್ಪತ್ರೆಯಲ್ಲಿ ಮೇ 2ರ ರಾತ್ರಿ ಸಂಭವಿಸಿದ ಆಮ್ಲಜನಕ ದುರಂತ
ಪ್ರಕರಣದ ತನಿಖೆಗಾಗಿ ಸರ್ಕಾರ ನೇಮಿಸಿರುವ ಹೈಕೋರ್ಟ್ನ ನಿವೃತ್ತ ನ್ಯಾಯಮೂರ್ತಿ
ಬಿ.ಎ.ಪಾಟೀಲ ನೇತೃತ್ವದ ಏಕ ಸಮಿತಿ ಆಯೋಗದ ಕಚೇರಿಯನ್ನು ಮೈಸೂರಿನಲ್ಲಿ
ತೆರೆದಿರುವುದಕ್ಕೆ ಸಂತ್ರಸ್ತರ ಕುಟುಂಬದ ಸದಸ್ಯರು ಹಾಗೂ ಸಾರ್ವಜನಿಕರು ಆಕ್ರೋಶ
ವ್ಯಕ್ತಪಡಿಸಿದ್ದಾರೆ.ದುರ್ಘಟನೆ ನಡೆದಿರುವುದು ಚಾಮರಾಜನಗರದಲ್ಲಿ, ಮೈಸೂರಿನಲ್ಲಿ
ಕಚೇರಿ ತೆರೆದಿರುವುದು ಎಷ್ಟು ಸರಿ ಎಂದು ಅವರು ಪ್ರಶ್ನಿಸಿದ್ದಾರೆ. ಚಾಮರಾಜನಗರದಲ್ಲೇ
ಕಚೇರಿ ತೆರೆಯಬೇಕು ಎಂದು ಒತ್ತಾಯಿಸಿದ್ದಾರೆ. ಮೈಸೂರಿನ ಹುಣಸೂರು ರಸ್ತೆಯಲ್ಲಿರುವ
ಜಲದರ್ಶಿನಿ ಅತಿಥಿಗೃಹದ ಆವರಣದಲ್ಲಿ ಆಯೋಗದ ಕಚೇರಿ ಕೆಲವು ದಿನಗಳ ಕಾರ್ಯಾರಂಭ
ಮಾಡಿದೆ.

ಎರಡು ದಿನಗಳ ಹಿಂದೆ ಮಾಧ್ಯಮ ಪ್ರಕಟಣೆ ಹೊರಡಿಸಿರುವ ಆಯೋಗದ ಕಾರ್ಯದರ್ಶಿ ಅವರು,
‘ಪ್ರಕರಣದಲ್ಲಿ ಮರಣಹೊಂದಿರುವ ರೋಗಿಗಳ ವಾರಸುದಾರರು, ಹಿತಾಸಕ್ತಿವುಳ್ಳವರು ಹಾಗೂ
ಸಂಸ್ಥೆಗಳು ತಮ್ಮಲ್ಲಿರುವ ದಾಖಲೆಗಳನ್ನು ಪ್ರಮಾಣಪತ್ರದ ಜೊತೆಗೆ ಸಾರ್ವಜನಿಕ ಪ್ರಕಟಣೆ
ಪ್ರಕಟವಾದ 15 ದಿನಗಳ ಒಳಗಾಗಿ, ವಿಚಾರಣಾ ಆಯೋಗಕ್ಕೆ ಕಚೇರಿ ಸಮಯದಲ್ಲಿ ಅಥವಾ
ನೋಂದಾಯಿತ ಅಂಚೆ (ರಿಜಿಸ್ಟರ್ಪೋಸ್ಟ್) ಮೂಲಕ ದೃಢೀಕೃತ ಪ್ರಮಾಣಪತ್ರದೊಂದಿಗೆ
ಸಲ್ಲಿಸಬೇಕು. ಮುಂದೆ ನಿಗದಿಪಡಿಸಿದ ದಿನಾಂಕದಂದು ವಿಚಾರಣೆಗೆ ವ್ಯಕ್ತಿಗತವಾಗಿ
ಹಾಜರಾಗಬೇಕು’ ಎಂದು ಹೇಳಿದ್ದಾರೆ. ‘ದುರಂತದಲ್ಲಿ ಮೃತಪಟ್ಟ 24 ಮಂದಿಯಲ್ಲಿ
ಬಹುತೇಕರು ಗ್ರಾಮೀಣ ಭಾಗದ ಜನರು. ಬಡ ಕುಟುಂಬದವರೇ ಹೆಚ್ಚಾಗಿದ್ದಾರೆ.
ಚಾಮರಾಜನಗರಕ್ಕೆ ಅಪರೂಪದಲ್ಲಿ ಬರುವ ಅವರು, ಮೈಸೂರಿಗೆ ಹೋಗಿ ಆಯೋಗಕ್ಕೆ ದಾಖಲೆಗಳನ್ನು
ಸಲ್ಲಿಸುವುದು, ನಂತರ ವಿಚಾರಣೆಗೆ ಹಾಜರಾಗುವುದಕ್ಕೆ ಪ್ರಯಾಸ ಪಡಬೇಕಾಗುತ್ತದೆ.
ಲಾಕ್ಡೌನ್ಅವಧಿಯಲ್ಲಿ ಸಾರಿಗೆ ವ್ಯವಸ್ಥೆಯೂ ಸರಿಯಾಗಿಲ್ಲ. ಇಂತಹ ಸಂದರ್ಭದಲ್ಲಿ
ಪ್ರಯಾಣ ಮಾಡುವುದೂ ಕಷ್ಟ. ಅಂಚೆ ಮೂಲಕ ದಾಖಲೆಗಳನ್ನು ಈಗ ಕಳುಹಿಸಬಹುದಾದರೂ ವಿಚಾರಣೆಸಂದರ್ಭದಲ್ಲಿ ಖುದ್ದಾಗಿ ಹಾಜರಾಗಬೇಕಾಗುತ್ತದೆ. ಚಾಮರಾಜನಗರದಲ್ಲೇ ಕಚೇರಿ
ತೆರೆದಿದ್ದರೆ ಅನುಕೂಲವಾಗುತ್ತಿತ್ತು’ ಎಂದು ರೈತ ಮುಖಂಡ ಶ್ರೀನಿವಾಸ ನಾಯಕ ಅವರು
ತಿಳಿಸಿದರು.
‘ಜಿಲ್ಲೆಯ ಹನೂರು ಭಾಗದಿಂದ ಚಾಮರಾಜನಗರಕ್ಕೆ ಬರುವುದಕ್ಕೇ 100 ಕಿ.ಮೀ ಇದೆ.
ಮೈಸೂರಿಗೆ ಮತ್ತೂ 60 ಕಿ.ಮೀ ಸಾಗಬೇಕು. ಮೈಸೂರಿಗೆ ಹೋಗಬೇಕಲ್ಲ ಎಂದುಕೊಂಡು ಪ್ರಕರಣದ
ಬಗ್ಗೆ ಮಾಹಿತಿ ಇರುವವರು, ಸಂಘ ಸಂಸ್ಥೆಗಳ ಪ್ರತಿನಿಧಿಗಳು, ದಾಖಲೆಗಳನ್ನು ಸಲ್ಲಿಸಲು
ಹಾಗೂ ವಿಚಾರಣೆಗೆ ಹೋಗದೆ ಇರುವ ಸಾಧ್ಯತೆಯೂ ಇದೆ. ಪ್ರಕರಣದ ತನಿಖೆ ನಿಷ್ಪಕ್ಷಪಾತವಾಗಿ
ನಡೆಯಬೇಕು ಎಂದಿದ್ದರೆ ಚಾಮರಾಜನಗರದಲ್ಲೇ ಆಯೋಗದ ಕಚೇರಿ ಇರಬೇಕು’ ಎಂದು ಅವರು
ಒತ್ತಾಯಿಸಿದರು. ‘ಮೈಸೂರಿನಲ್ಲಿ ಕಚೇರಿ ತೆರೆಯುವ ಸರ್ಕಾರದ ನಿರ್ಧಾರ ತಪ್ಪು.
ಬಹುತೇಕ ಸಂತ್ರಸ್ತರು ಹಳ್ಳಿಯವರು. ಅವರಿಗೆ ಮೈಸೂರಿಗೆ ಓಡಾಡುವುದು ಕಷ್ಟ. ದುರಂತ
ನಡೆದು ಈಗಾಗಲೇ ತುಂಬಾ ದಿನಗಳಾಗಿವೆ. ಸಂತ್ರಸ್ತರ ಕುಟುಂಬದವರು, ಪ್ರಕರಣದ ಬಗ್ಗೆ
ಮಾಹಿತಿ ಉಳ್ಳವರು, ಇದರ ಬಗ್ಗೆ ಆಸಕ್ತಿ ಕಳೆದುಕೊಳ್ಳುವ ಸಾಧ್ಯತೆ ಇದೆ. ನಿರಾಸಕ್ತಿ
ಬಂದರೆ ಜನರು ಮೈಸೂರಿಗೆ ಹೋಗುವುದಕ್ಕೆ ಹಿಂದೇಟು ಹಾಕಬಹುದು. ಹೀಗಾದರೆ ಇಡೀ ತನಿಖೆಯೇ
ಹಳ್ಳ ಹಿಡಿಯುವ ಸಾಧ್ಯತೆ ಇದೆ’ ಎಂದು ರಂಗಕರ್ಮಿ ಕೆ.ವೆಂಕಟರಾಜು ಅವರು ಕಳವಳ
ವ್ಯಕ್ತಪಡಿಸಿದರು. ಈ ಬಗ್ಗೆ ಪ್ರತಿಕ್ರಿಯಿಸಿದ, ದುರಂತದಲ್ಲಿ ಮೃತಪಟ್ಟ ಕೊಳ್ಳೇಗಾಲ
ತಾಲ್ಲೂಕಿನ ತಿಮ್ಮರಾಜಿಪುರ ಗ್ರಾಮದ ಕೀರ್ತನಾ ಎಂಬ ಯುವತಿಯ ಮಾವ ಸುರೇಶ್ಅವರು,
‘ತನಿಖಾ ಆಯೋಗದ ಕಚೇರಿಯನ್ನು ಉದ್ದೇಶ ಪೂರ್ವಕವಾಗಿ ಮೈಸೂರಿನಲ್ಲಿ ಮಾಡಿದ್ದಾರೆ.
ಮೈಸೂರು ನಮಗೆ ಸರಿಯಾಗಿ ಗೊತ್ತಿಲ್ಲ. ಈಗ ಬಸ್ ವ್ಯವಸ್ಥೆಯೂ ಇಲ್ಲ. ಹೀಗಾದರೆ ನಾವು
ಏನು ಮಾಡಬೇಕು? ಜಿಲ್ಲೆಯಲ್ಲೇ ತನಿಖಾ ಕಚೇರಿ ತೆರೆದರೆ ಹೋರಾಟ ಮಾಡುತ್ತಾರೆ ಎಂದು
ಕಾರಣಕ್ಕೆ ಸಂಚು ರೂಪಿಸಿದ್ದಾರೆ. ಇದು ರಾಜಕೀಯದ ಷಡ್ಯಂತ್ರ. ಈ ದುರಂತಕ್ಕೆ
ಕಾರಣರಾದವರನ್ನು ಪತ್ತೆಹಚ್ಚಿ ನಿರ್ದಾಕ್ಷಿಣ್ಯ ಕಾನೂನು ಕ್ರಮ ಜರುಗಿಸಬೇಕು’ ಎಂದು
ಒತ್ತಾಯಿಸಿದರು.
ಎಲ್ಲಾ ಸಂತ್ರಸ್ಥ ಕುಟುಂಬಗಳೂ ಕೂಡ ಚಾಮರಾಜನಗರದ ಗ್ರಾಮಾಂತರ ಪ್ರದೇಶದಲ್ಲಿದ್ದು
ಇಂದು ಲಾಕ್ಡೌನ್ನಿಂದಾಗಿ ಊಟಕ್ಕೂ ಪರದಾಡುತ್ತಿವೆ. ಇನ್ನು ಹಳ್ಳಿಗಳಿಂದ ಮೈಸೂರಿಗೆ
ಬಂದು ವಿಚಾರಣೆಗೆ ಹಾಜರಾಗಿ ಹೋಟೆಲಿನಲ್ಲಿ ಊಟ ಮಾಡಿ ಮನೆಗೆ ಹಿಂತಿರುಗಲು ಅಪಾರ ಹಣ
ಬೇಕು. ಕೂಲಿಯೇ ಇಲ್ಲದೆ ಬಸ್ಛಾರ್ಜಿಗೆ ಹಣ ಎಲ್ಲಿಂದ ತರೋದು ಎಂದು ಮೃ ತ ಆಟೋ ಚಾಲಕ
ಪುಟ್ಟ ರಾಜು ಎಂಬುವವರ ತಾಯಿ ಪ್ರಶ್ನಿಸಿದರು. ಮೃತರೆಲ್ಲರೂ ಬಡ ರೈತರು ಮತ್ತು ಕೂಲಿ
ಕಾರ್ಮಿಕ ಕುಟುಂಬಗಳು. ಬಹುತೇಕ ಕುಟುಂಬಗಳು ದುಡಿಯುವ ವ್ಯಕ್ತಿಗಳನ್ನು ಕಳೆದುಕೊಂಡು
ಕಣ್ಣೀರಿನಲ್ಲಿ ಕೈ ತೊಳೆಯುತ್ತಿವೆ. ಇನ್ನು ಪರಿಹಾರ ಪಡೆಯಲು ಹಣ ಖರ್ಚು ಮಾಡಿಕೊಂಡು
ಮೈಸೂರಿಗೆ ಬರಬೇಕಲ್ಲ ಎಂಬ ಚಿಂತೆ ಅವರನ್ನು ಕಾಡುತ್ತಿದೆ.
ಈ ಕುರಿತು ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ಅವರು , ‘ಈ
ದುರಂತಕ್ಕೆ ಸರ್ಕಾರವೇ ನೇರ ಕಾರಣ. ಅದು ತಪ್ಪಿತಸ್ಥ ಪರ ನಿಂತಿದೆ. ಪ್ರಭಾವಿಗಳಿಂದಲೂ
ಅವರಿಗೆ ರಕ್ಷಣೆ ಸಿಗುತ್ತಿದೆ. ಆದರೆ, ಇದು ತಾತ್ಕಾಲಿಕ ರಕ್ಷಣೆ ಅಷ್ಟೆ. 36 ಜನರ
ಸಾವಿಗೆ ಯಾರು ಕಾರಣ ಎಂದು ಹೈಕೋರ್ಟ್ನೇಮಿಸಿರುವ ಸಮಿತಿ ಈಗಾಗಲೇ ತನಿಖೆ ನಡೆಸಿ
ನ್ಯಾಯಾಲಯಕ್ಕೆ ವರದಿ ಸಲ್ಲಿಸಿದೆ. ಅಲ್ಲಿ ವಿಚಾರಣೆ ನಡೆಯುತ್ತಿದೆ. ನ್ಯಾಯಮೂರ್ತಿಗಳು
ಖಂಡಿತವಾಗಿ ತಪ್ಪಿತಸ್ಥರಿಗೆ ಶಿಕ್ಷೆ ನೀಡಲಿದ್ದಾರೆ ಎಂಬ ವಿಶ್ವಾಸ ಇದೆ’ ಎಂದರು.
‘ಘಟನೆ ನಡೆದ ಬಳಿಕ ಮುಖ್ಯಮಂತ್ರಿ ಅವರು ಸ್ವತಃ ಚಾಮರಾಜನಗರಕ್ಕೆ ಬಂದು ನೊಂದವರಿಗೆ
ಪರಿಹಾರ ವಿತರಿಸಿ ಸಾಂತ್ವನ ಹೇಳಬೇಕಿತ್ತು. ತಪ್ಪಿತಸ್ಥರಿಗೆ ಶಿಕ್ಷೆ ಕೊಡಬೇಕಿತ್ತು.
36 ಜನರು ಮೃತಪಟ್ಟಿದ್ದರೂ ಇವರಿಗೆ ಮಾನವೀಯತೆಯೇ ಇಲ್ಲ. ಸರ್ಕಾರದಲ್ಲಿ ಯಾರಿಗೂ
ಮನುಷ್ವತ್ವವೇ ಇಲ್ಲ’ ಎಂದು ವಾಗ್ದಾಳಿ ನಡೆಸಿದರು.‘ಜಿಲ್ಲೆಯ ಆಸ್ಪತ್ರೆಗೆ ಆಮ್ಲಜನಕ ಪೂರೈಕೆ ಸಂಬಂಧ ಜಿಲ್ಲಾಡಳಿತ ಹಾಗೂ ಮೈಸೂರಿನ ಸದರ್ನ್ಮತ್ತು ಪದಕಿ ಏಜೆನ್ಸಿಗಳ ನಡುವೆ ಒಪ್ಪಂದ ಆಗಿದೆ. ಅಲ್ಲಿಂದ ಆಮ್ಲಜನಕ ತರಿಸಿಕೊಳ್ಳಬೇಕಾಗಿದ್ದು ಚಾಮರಾಜನಗರ ಜಿಲ್ಲಾಧಿಕಾರಿ ಹಾಗೂ ನೋಡೆಲ್ಅಧಿಕಾರಿಗಳ
ಜವಾಬ್ದಾರಿ. ನನ್ನ, ಪ್ರಕಾರ ಇದರಲ್ಲಿ ಬೇರೆಯವರ ಪಾತ್ರ ಇಲ್ಲ’ ಎಂದು ಅವರು
ಹೇಳಿದರು.

ಆಮ್ಲಜನಕ ದುರಂತ ಪ್ರಕರಣದ ತನಿಖೆಗೆ ಸರ್ಕಾರ ನೇಮಿಸಿರುವ ನಿವೃತ್ತ ನ್ಯಾಯಮೂರ್ತಿ
ಬಿ.ಎ.ಪಾಟೀಲ ನೇತೃತ್ವದ ತನಿಖಾ ಆಯೋಗದ ಕಚೇರಿಯನ್ನು ಮೈಸೂರಿನಲ್ಲಿ ತೆರೆದಿರುವುದಕ್ಕೆ
ಧ್ರುವನಾರಾಯಣ ಅವರು ವಿರೋಧ ವ್ಯಕ್ತಪಡಿಸಿದರು. ‘ಹೈಕೋರ್ಟ್ತನಿಖೆ ನಡೆಸುತ್ತಿರುವಾಗ
ಮತ್ತೊಂದು ತನಿಖೆ ಅಗತ್ಯವಿಲ್ಲ. ಸರ್ಕಾರ ಈ ಆಯೋಗವನ್ನು ವಾಪಸ್ಪಡೆಯಬೇಕು ಎಂಬುದು
ನಮ್ಮ ಆಗ್ರಹ. ಘಟನೆ ನಡೆದಿರುವುದು ಚಾಮರಾಜನಗರದಲ್ಲಿ, ಆಯೋಗ ಕಚೇರಿ ಮೈಸೂರಿನಲ್ಲಿ
ತೆರೆಯಲಾಗಿದೆ. ಇದು ಇಡೀ ಪ್ರರಕಣವನ್ನು ಮುಚ್ಚಿಹಾಕುವ ತಂತ್ರ. ಸಂತ್ರಸ್ತರಿಗೆ
ಮೈಸೂರಿಗೆ ಹೋಗಿ ದೂರು ಸಲ್ಲಿಸಲು ಸಾಧ್ಯವಿಲ್ಲ’ ಎಂದರು. ‘ರಾಜ್ಯದಲ್ಲಿ ಇದುವರೆಗೆ
ನಡೆದಿರುವ ನ್ಯಾಯಾಂಗ ತನಿಖೆಗಳು ಹಳ್ಳ ಹಿಡಿದಿವೆ. ನೀಡಿರುವ ವರದಿಗಳು ದೂಳು
ತಿನ್ನುತ್ತಿವೆ. ಈ ಪ್ರಕರಣವೂ ಅದೇ ಹಾದಿ ಹಿಡಿಯಲಿದೆ. ದುರಂತಕ್ಕೆ ಸರ್ಕಾರವೇ
ಕಾರಣವಾಗಿರುವುದರಿಂದ ಪ್ರಕರಣ ಮುಚ್ಚಿಹಾಕುವ ಸಂಶಯ ಇದೆ’ ಎಂದು ಧ್ರುವನಾರಾಯಣ
ಹೇಳಿದರು.