ಚಾಮರಾಜನಗರ ಆಕ್ಸಿಜನ್ ದುರಂತ : ಈವರೆಗೂ ಮನೆಗೆ ತೆರಳಿ ಸಾಂತ್ವನ ಹೇಳದ ರಾಜ್ಯ ಸರ್ಕಾರ

ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಕಳೆದ ಮೇ 2 ರಂದು ಸಂಭವಿಸಿದ  ಆಕ್ಸಿಜನ್ ದುರಂತದಲ್ಲಿ ಮೊದಲ ವರದಿಗಳ ಪ್ರಕಾರ ಮೃತರ ಸಂಖ್ಯೆ 24 ಎಂದು ಹೇಳಲಾಗಿದ್ದರೂ ರಾಜ್ಯ ಹೈ ಕೋರ್ಟ್ ನೇಮಿಸಿದ್ದ ಸಮಿತಿಯು ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 36 ಎಂದು ಹೇಳಿದೆ. ಅದರಲ್ಲಿ ರಾಜ್ಯ ಸರ್ಕಾರ ಉಳಿದ 12 ಕುಟುಂಬಗಳಿಗೆ ಇನ್ನೂ ಕಿಲುಬು ಕಾಸನ್ನೂ ನೀಡಿಲ್ಲ. ಈ ಕುಟುಂಬಗಳ ಸಂತ್ರಸ್ಥರು ಈಗಲೂ ಜಿಲ್ಲಾಧಿಕಾರಿಗಳ ಕಚೇರಿ, ಜಿಲ್ಲಾಸ್ಪತ್ರೆಗಳಿಗೆ ಎಡತಾಕಿ ಒಂದಷ್ಟು ಪರಿಹಾರ ಪಡೆದುಕೊಳ್ಳಲು ಶತ ಪ್ರಯತ್ನ ಮಾಡುತಿದ್ದಾರೆ. ಆದರೆ ಈ ನತದೃಷ್ಟ ಕುಟುಂಬಗಳ ಕೂಗು ಅರಣ್ಯ ರೋದನ ಆಗಿದೆ. ಏಕೆಂದರೆ ಇವರ ಕುಟುಂಬದ ಮೃತರು ಅಡ್ಮಿಟ್ ಆಗಿದ್ದ ದಾಖಲಾತಿಗಳನ್ನು ತಿದ್ದಲಾಗಿದೆ ಎಂಬ ಸಂಶಯ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಸೀಜ್ ಮಾಡಲಾಗಿದೆ. ಆದ್ದರಿಂದ ಈ ಕುಟುಂಬಗಳು ನ್ಯಾಯಾಂಗ ತನಿಖೆ ಆಗುವವರೆಗೂ ಕಾಯಲೇಬೇಕಾಗಿದೆ.

ಈ ಕುರಿತು  ಮಾತನಾಡಿದ  ಚಾಮರಾಜನಗರ ಜಿಲ್ಲಾ ಕಾಂಗ್ರೆಸ್ ವಕ್ತಾರ ಕೆರೆಹಳ್ಳಿ ನವೀನ್ ಅವರು ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಸಂಭವಿಸಿದ ಆಮ್ಲಜನಕ ದುರಂತದಲ್ಲಿ ಮೃತಪಟ್ಟ ಕುಟುಂಬಗಳನ್ನು ಸರ್ಕಾರ ನಿರ್ಲಕ್ಷಿಸಿದ್ದು, 24 ಮಂದಿಗೆ ತಲಾ ₹2 ಲಕ್ಷ ಪರಿಹಾರವನ್ನು ಆನ್ಲೈನ್ ಮೂಲಕ ಖಾತೆಗೆ ಹಾಕಿ ಕೈತೊಳೆದುಕೊಂಡಿದೆ. ಸಂತ್ರಸ್ತರ ಕುಟುಂಬದವರನ್ನು ಭೇಟಿ ಮಾಡಿ ಅವರಿಗೆ ಸಾಂತ್ವನ ಕೆಲಸವನ್ನು ಜಿಲ್ಲಾಡಳಿತ ಮಾಡಿಲ್ಲ ಎಂದು ಆರೋಪಿಸಿದರು.   

‘ದುರಂತದಲ್ಲಿ 36 ಜನರು ಮೃತಪಟ್ಟಿದ್ದಾರೆ. ಎಂದು ಹೈಕೋರ್ಟ್ ನೇಮಿಸಿರುವ ತನಿಖಾ ಸಮಿತಿ ವರದಿ ನೀಡಿದೆ. ಇಂತಹ ದುರ್ಘಟನೆಗೆ ಕಾರಣರಾದವರ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ಮಾಡಿದೆ’ ಎಂದು ಅವರು ಆರೋಪಿಸಿದರು. ‘ಮೃತಪಟ್ಟವರ ಕುಟುಂಬಗಳಿಗೆ ತಲಾ ₹20 ಲಕ್ಷ ಪರಿಹಾರ ನೀಡಬೇಕು. ಪ್ರತಿ ಕುಟುಂಬದ ಸದಸ್ಯರೊಬ್ಬರಿಗೆ ಸರ್ಕಾರಿ ಉದ್ಯೋಗ ನೀಡಬೇಕು’ ಎಂದು ಆಗ್ರಹಿಸಿದರು. ‘ಮೃತಪಟ್ಟವರ ಕುಟುಂಬಗಳಿಗೆ ಪರಿಹಾರ ಕೊಡಿಸುವ ನಿಟ್ಟಿನಲ್ಲಿ ಜಿಲ್ಲಾ ಬಿಜೆಪಿ ಮುಖಂಡರು ಏನೂ ಪ್ರಯತ್ನ ಮಾಡಿಲ್ಲ. ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಮನವಿ ನೀಡುವ ಕೆಲಸವನ್ನೂ ಮಾಡಿಲ್ಲ’ ಎಂದು ಅವರು ದೂರಿದರು.

ಜಿಲ್ಲೆಗೆ ಆಮ್ಲಜನಕ ಪೂರೈಕೆ ವಿಚಾರಕ್ಕೆ ಸಂಬಂಧಿಸಿದ ವೈರಲ್ ಆಗಿರುವ ಆಡಿಯೊ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ದುರಂತ ನಡೆದು ಒಂದು ತಿಂಗಳ ಬಳಿಕ ಆಡಿಯೊ ಬಿಡುಗಡೆ ಮಾಡಲಾಗಿದೆ. ಮೈಸೂರಿನ ಜಿಲ್ಲಾಧಿಕಾರಿ ಮೌಖಿಕವಾಗಿ ಏನು ನಿರ್ದೇಶನ ನೀಡಿದ್ದರು ಎಂಬುದು ಗೊತ್ತಿದೆ ಎಂದು ಅಲ್ಲಿನ ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ. ಹಾಗಿದ್ದರೆ, ಈ ಘಟನೆಗೆ ಪ್ರತಾಪ್ ಅವರೂ ಕಾರಣರಾಗಿದ್ದಾರೆ’ ಎಂದು ಹೇಳಿದರು.  ಜಿಲ್ಲಾ ಉಸ್ತುವಾರಿ ಸಚಿವ ಎಸ್.ಸುರೇಶ್ ಕುಮಾರ್  ವಾರದಲ್ಲಿ ಎರಡು ದಿನ ಜಿಲ್ಲೆ ಭೇಟಿ ನೀಡಿದರೂ, ಕೋವಿಡ್ ನಿಯಂತ್ರಣಕ್ಕೆ ಯಾವುದೇ ಕ್ರಮ ವಹಿಸುತ್ತಿಲ್ಲ. ಎಚ್.ಮೂಕಹಳ್ಳಿಯಲ್ಲಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡಿಕೊಂಡ ಮನೆಗೆ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಡಳಿತ ಹೋಗಿ ಸಾಂತ್ವನ ಹೇಳಿ ಪರಿಹಾರ ನೀಡಿಲ್ಲ’ ಎಂದರು. ʼಜಿಲ್ಲೆಯಲ್ಲಿ ಸರಿಯಾಗಿ ಕೋವಿಡ್ ಲಸಿಕೆ ವಿತರಣೆ ಆಗುತ್ತಿಲ್ಲ. ಈ ವಿಚಾರದಲ್ಲೂ ನಿರ್ಲಕ್ಷ್ಯ ವಹಿಸಲಾಗುತ್ತಿದೆ. ಜಿಲ್ಲಾಸ್ಪತ್ರೆಯಲ್ಲಿರುವ ವೆಂಟಿಲೇಟರ್ ಸಹ ಸರಿಯಾಗಿ ಕೆಲಸ ಮಾಡುತ್ತಿಲ್ಲ’ ಎಂದು ಅವರು ದೂರಿದರು.‘ಗ್ರಾಮ ಪಂಚಾಯಿತಿ ಮಟ್ಟದಲ್ಲಿ ರಚಿಸಲಾಗಿರುವ ಕೋವಿಡ್ ಟಾಸ್ಕ್ ಫೋರ್ಸ್ ಸಮಿತಿಗೆ ಸರ್ಕಾರ ಕನಿಷ್ಠ ₹1 ಅನುದಾನ ನೀಡಬೇಕು. ಜೊತೆಗೆ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ನೌಕರರನ್ನು ಕೋವಿಡ್ ಸೇನಾನಿಗಳು ಎಂದು ಘೋಷಣೆ ಮಾಡಬೇಕು’ ಎಂದು ನವೀನ್ ಆಗ್ರಹಿಸಿದರು.

ಕಾಂಗ್ರೆಸ್ ನ ಈ ಆರೋಪದ ನಂತರ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಅವರು ಸೋಮವಾರದಂದು,  ಪತ್ನಿ ಹಾಗೂ ಇಬ್ಬರು ಮಕ್ಕಳ ಜೊತೆ ಆತ್ಮಹತ್ಯೆ ಮಾಡಿಕೊಂಡ ತಾಲ್ಲೂಕಿನ ಎಚ್.ಮೂಕಹಳ್ಳಿ ಗ್ರಾಮದ ಮಹಾದೇವಪ್ಪ ಅವರ ಮನೆಗೆ  ಭೇಟಿ ನೀಡಿ, ಮಹಾದೇವಪ್ಪ ಅವರ ಹಿರಿಯ ಮಗಳು ಜ್ಯೋತಿ ಹಾಗೂ ಅಳಿಯ ಸುರೇಶ್ಗೆ ಸಾಂತ್ವನ ಹೇಳಿದರು.

ಜ್ಯೋತಿ ಅವರೊಂದಿಗೆ ಮಾತನಾಡಿದ ಸಚಿವರು, ಕುಟುಂಬದ ಬಗ್ಗೆ ಮಾಹಿತಿ ಪಡೆದರು. ಇದೇ ಸಂದರ್ಭದಲ್ಲಿ ಜ್ಯೋತಿ ಅವರು ತಾವು ಎದುರಿಸುತ್ತಿರುವ ಕಷ್ಟ ಹಾಗೂ ವಿವಿಧ ನೆರವನ್ನು ಕೇಳಿ ಮನವಿ ಸಲ್ಲಿಸಿದರು. ಮಹಾದೇವಪ್ಪ ಅವರ ಆತ್ಮೀಯರು ಹಾಗೂ ಗೆಳೆಯರೊಂದಿಗೂ ಮಾತನಾಡಿದರು. ಪೊಲೀಸ್ ಅಧಿಕಾರಿಗಳನ್ನು ತನಿಖೆಯ ಬಗ್ಗೆ ವಿಚಾರಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ‘ಇದೊಂದು ದುರಂತ. ಸ್ವಾಭಿಯಾನಿಯಾಗಿದ್ದ ಮಹಾದೇವಪ್ಪ ಹಾಗೂ ಕುಟುಂಬದ ಸಾವು ದುಃಖ ತಂದಿದೆ. ಅವರ ಸ್ನೇಹಿತರು ಹಾಗೂ ಆತ್ಮೀಯರೊಂದಿಗೆ ಮಾತನಾಡಿದ್ದೇನೆ. ಆತ್ಮಹತ್ಯೆಗೆ ಕಾರಣವೇ ಗೊತ್ತಾಗುತ್ತಿಲ್ಲ ಎಂದು ಹೇಳಿದ್ದಾರೆ. ಪೊಲೀಸರೂ ವಿಚಾರಣೆ ನಡೆಸುತ್ತಿದ್ದಾರೆ’ ಎಂದರು. ‘ಅವರ ಹಿರಿಯ ಮಗಳು ಕೆಲವು ಸಹಾಯವನ್ನು ಕೇಳಿದ್ದಾರೆ. ಜಮೀನಿಗೆ ಕೊಳವೆಬಾವಿ ಸೌಲಭ್ಯ, ಮನೆ ದುರಸ್ತಿ ಹಾಗೂ ನೌಕರಿ ನೀಡುವಂತೆ ಮನವಿ ಮಾಡಿದ್ದಾರೆ. ಈ ಮೂರೂ ವಿಷಯದಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳಲು ನಿಶ್ಚಯಿಸಲಾಗಿದೆ’ ಎಂದು ಸಚಿವರು ಹೇಳಿದರು. ಈ ಮಧ್ಯೆ, ಮಹಾದೇವಪ್ಪ ಹಾಗೂ ಕುಟುಂಬ ಆತ್ಮಹತ್ಯೆ ಮಾಡಿಕೊಂಡ ನಂತರ ವಿವಿಧ ಪಕ್ಷಗಳ, ಸಮುದಾಯಗಳ ಮುಖಂಡರು ಎಚ್.ಮೂಕಹಳ್ಳಿಗೆ ಭೇಟಿ ನೀಡಿ ಹಿರಿಯ ಮಗಳಿಗೆ ತಮ್ಮ ಕೈಲಾದಷ್ಟು ಸಹಾಯ ಮಾಡುತ್ತಿದ್ದಾರೆ.

ಆದರೆ ರಾಜ್ಯ ಸರ್ಕಾರ ದುರಂತದಲ್ಲಿ ಮೃತಪಟ್ಟ ಕುಟುಂಬಗಳು ಎಷ್ಟು ಎಂದು ಮೊದಲು ಪ್ರಮಾಣಿಕವಾಗಿ ಬಹಿರಂಗಪಡಿಸಲಿ ಅವರಿಗೆ ಸೂಕ್ತ ಪರಿಹಾರ ನೀಡಲಿ ಎಂಬುದೇ ಜಿಲ್ಲೆಯ ಜನತೆಯ ಒತ್ತಾಯ. ಏಕೆಂದರೆ ಇಲ್ಲಿ ಮ್ಥಪಟ್ಟಿರುವವರೆಲ್ಲರೂ ಕೂಡ ಬಡವರ್ಗದ ಶ್ರಮಜೀವಿಗಳು. ಅವರ ಪ್ರಾಣಕ್ಕೆ ಸರ್ಕಾರ ಬೆಲೆಕೊಡಲೇಬೇಕಿದೆ.

Related posts

Latest posts

ಕುಂಭ ಮೇಳ ಸಂದರ್ಭದಲ್ಲಿ ಮಾಡಿದ 1 ಲಕ್ಷ ಕೋವಿಡ್-19 ಪರೀಕ್ಷೆಗಳು ನಕಲಿ: ತನಿಖಾ ವರದಿ

ಹರಿದ್ವಾರದ ಕುಂಭ ಮೇಳ ಸಂದರ್ಭದಲ್ಲಿ ಮಾಡಲಾಗಿದ ನಾಲ್ಕು ಲಕ್ಷ ಕೋವಿಡ್ ಟೆಸ್ಟ್ ಫಲಿತಾಂಶಗಳಲ್ಲಿ ಹಲವು ನಕಲಿ ಎಂದು ಉತ್ತರಾಖಂಡ ಆರೋಗ್ಯ ಇಲಾಖೆ ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ. ವಿವರವಾದ ತನಿಖೆಯ 1,600 ಪುಟಗಳಲ್ಲಿ...

ನನ್ನ ಹೇಳಿಕೆಯಿಂದ ನಾನು ಹಿಂದೆ ಸರಿಯಲ್ಲ : ನಟ ಚೇತನ್ ಸ್ಪಷ್ಟನೆ

ಬ್ರಾಹ್ಮಣ್ಯ ವಿರೋಧಿ ಹೇಳಿಕೆ ಎಂಬ ಆರೋಪದ ಅಡಿ ಇಂದು ಬಸವನಗುಡಿ ಪೊಲೀಸರ ಮುಂದೆ ಹಾಜರಾದ ನಟ ಚೇತನ್ ತನ್ನ ಹೇಳಿಕೆಯ ಬಗ್ಗೆ ಪೊಲೀಸರ ಮುಂದೆ ಸ್ಪಷ್ಟನೆ ದಾಖಲಿಸಿದ್ದಾರೆ. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ...

ಚಿಕ್ಕಬಳ್ಳಾಪುರ: ಅರ್ಹ ಫಲಾನುಭವಿಗಳನ್ನು ಗುರುತಿಸುವಲ್ಲಿ ವಿಫಲ: ರೈತರಿಗೆ ಸಿಗುತ್ತಿಲ್ಲ ಪರಿಹಾರ ಧನ

ಕೊರೋನಾ ಲಾಕ್ಡೌನ್ ಸಮಯದಲ್ಲಿ ಸಂಕಷ್ಟಕ್ಕೊಳಗಾದ ರೈತರಿಗೆ ಸರ್ಕಾರ ಪರಿಹಾರದ ಅಭಯ ಕೊಟ್ಟಿತು. ಆದರೆ ಅರ್ಹ ಫಲಾನುಭವಿಗಳನ್ನ ಗುರುತಿಸುವಲ್ಲಿ ವಿಫಲವಾದ ಪರಿಣಾಮ ನಿಜವಾದ ರೈತರಿಗೆ ಪರಿಹಾರ ಸಿಗದಂತಾಗಿದೆ. ಈ ಕುರಿತು ಚಿಕ್ಕಬಳ್ಳಾಪುರದಲ್ಲಿ ರೈತರು ತಮ್ಮ...