ಆಕ್ಸಿಜನ್‌ ಸರಬರಾಜು ಕುರಿತ ಐದು ಆಡಿಯೋ ಕ್ಲಿಪ್ಪಿಂಗ್ ಕುರಿತು ಸಾಮಾಜಿಕ ತಾಣಗಳಲ್ಲಿ ನಡೆದಿದೆ ಭಾರೀ ಚರ್ಚೆ

ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಕಳೆದ ಮೇ 2ರಂದು ಸಂಭವಿಸಿದ ಆಕ್ಸಿಜನ್‌ ಕೊರತೆಯ ದುರಂತದಲ್ಲಿ 24 ಜನ ರೋಗಿಗಳು ಮೃತಪಟ್ಟಿದ್ದು ಮತ್ತು ರಾಜ್ಯ ಹೈಕೋರ್ಟ್‌ ಇದನ್ನು ಗಂಭೀರವಾಗಿ ಪರಿಗಣಿಸಿ ನ್ಯಾಯಾಂಗ ತನಿಖೆಗೆ ಒಪ್ಪಿಸಿತ್ತು. ಸರ್ಕಾರ 24 ಸಂತ್ರಸ್ಥ ಕುಟುಂಬಗಳಿಗೆ ತಲಾ ಎರಡು ಲಕ್ಷ ರೂಪಾಯಿಗಳ ಪರಿಹಾರವನ್ನೂ ವಿತರಿಸಿದ ನಂತರ ಈ ಇಡೀ ಪ್ರಕರಣವೇ ತಣ್ಣಗಾಗಿತ್ತು. ಆದರೆ ಮೈಸೂರಿನ ಮಾಜಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ವರ್ಗಾವಣೆಯ ಬೆನ್ನಲ್ಲೇ ಬಿಡುಗಡೆಗೊಂಡ ಐದು ಆಡಿಯೋ ಕ್ಲಿಪ್ಪಿಂಗ್‌ ಗಳು ಸಾಮಾಜಿಕ ಜಾಲ ತಾಣದಲ್ಲಿ ಈಗ ಭಾರೀ ಚರ್ಚೆಯನ್ನು ಹುಟ್ಟು ಹಾಕಿವೆ. ಇಲ್ಲಿ ಜಿಲ್ಲಾಧಿಕಾರಿ ಸಿಂಧೂರಿ ಅವರ ಕ್ರಮ ಸರಿಯಿದೆ ಎಂದು ಸಾವಿರಾರು ಜನರೂ ಅವರದ್ದು ತಪ್ಪು ಎಂದೂ ಸಾವಿರಾರು ನೆಟ್ಟಿಗರು ಚರ್ಚೆಯಲ್ಲಿ ತೊಡಗಿದ್ದಾರೆ.

ಇದರ ಜತೆಗೆ ವೈರಲ್ ಆಗಿರುವ ಈ ಐದು ಆಡಿಯೊ ತುಣುಕುಗಳು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಅದರಲ್ಲೂ ವಿಶೇಷವಾಗಿ ಮೈಸೂರಿನ ಅಂದಿನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಉಪ ಔಷಧ ನಿಯಂತ್ರಕ ಅರುಣ್ ಕುಮಾರ್ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಬಗ್ಗೆ ಹೆಚ್ಚು ಚರ್ಚೆ ನಡೆಯುತ್ತಿದೆ. ಹಲವರು ಸಿಂಧೂರಿ ಅವರ ಕ್ರಮವನ್ನು ಸಮರ್ಥಿಸಿಕೊಂಡಿದ್ದು, ಆಮ್ಲಜನಕ ಪೂರೈಕೆಯಲ್ಲಿ ಸಮಸ್ಯೆಯಾಗುತ್ತಿದೆ ಎಂಬುದು ಗೊತ್ತಿದ್ದರೂ ಚಾಮರಾಜನಗರ ಜಿಲ್ಲಾಡಳಿತ ಸುಮ್ಮನೆ ಇದ್ದುದು ಏಕೆ ಎಂದು ಪ್ರಶ್ನಿಸಿದ್ದಾರೆ. ಈ ಘಟನೆಗೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳದೇ ಇರುವ ಸರ್ಕಾರದ ನಿಲುವು ಹಾಗೂ ಸರ್ಕಾರದ ಮೇಲೆ ಒತ್ತಡ ಹೇರಲು ಜನಪ್ರತಿನಿಧಿಗಳು ಯಾರೂ ಪ್ರಯತ್ನಿಸಿಲ್ಲ ಎಂದು ಅಸಮಾಧಾನವನ್ನೂ ಹೊರ ಹಾಕಿದ್ದಾರೆ. ರೋಹಿಣಿ ಸಿಂಧೂರಿ ಅವರ ವರ್ಗಾವಣೆಯನ್ನು ಪ್ರಸ್ತಾಪಿಸಿರುವ ಜನರು, 24 ಜನರು ಮೃತಪಟ್ಟಿದ್ದರೂ ಚಾಮರಾಜನಗರ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಯಾಕಿನ್ನೂ ವರ್ಗವಾಗಿಲ್ಲ ಎಂದು ಪ್ರಶ್ನಿಸಿದ್ದಾರೆ.

‘ಚಾಮರಾಜನಗರ ಡಿಸಿ ವರ್ಗಾವಣೆ ರದ್ದುಪಡಿಸುವಲ್ಲಿ, ಮೈಸೂರು ಡಿಸಿ ವರ್ಗಾವಣೆ ಮಾಡಿಸುವಲ್ಲಿ ಆ ಜಿಲ್ಲೆಯ ರಾಜಕಾರಣಿಗಳ ಪಾತ್ರ ಬಹುಮುಖ್ಯವಾಗಿದೆ’ ಎಂದು ವಸಂತ್ ಹೆಗ್ಗೊಠಾರ ಎಂಬುವವರು ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದಾರೆ. ‘ಚಾಮರಾಜನಗರದ ಡಿಸಿ ವರ್ಗಾವಣೆ ಆದರೆ ಕೋವಿಡ್ ನಿಯಂತ್ರಣಕ್ಕೆ ತೊಂದರೆಯಾಗುತ್ತದೆ. ಅದೇ ಮೈಸೂರಿನ ಡಿಸಿ ವರ್ಗಾವಣೆಯಾಗಿದೆ. ಆದರೆ ತೊಂದರೆಯಾಗುವುದಿಲ್ಲವೇ ಎಂದೂ ಫೇಸ್ಬುಕ್ನಲ್ಲಿ ಪ್ರಶ್ನಿಸಿದ್ದಾರೆ. ರಾಜಕೀಯ ಮುಖಂಡರು ಹಾಗೂ ಜನರ ನಡುವೆಯೂ ಇದೇ ವಿಚಾರವಾಗಿ ಚರ್ಚೆ ನಡೆಯುತ್ತಿದ್ದು, ದುರಂತ ನಡೆದು 40 ದಿನಗಳ ನಂತರ, ಅದರಲ್ಲೂ ರೋಹಿಣಿ ಸಿಂಧೂರಿ ಅವರ ವರ್ಗಾವಣೆ ಆದ ನಂತರ ಆಡಿಯೋ ವೈರಲ್ ಆಗಿರುವುದರ ಬಗ್ಗೆ ಹಲವರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಆಡಿಯೊ ತುಣುಕುಗಳಲ್ಲಿ ಕೇಳಿ ಬರುವ ಮಾತುಕತೆಯಲ್ಲಿ ಜಿಲ್ಲೆಯ ಅಧಿಕಾರಿಗಳು ಯಾರೊಬ್ಬರೂ ಭಾಗಿಯಾಗಿಲ್ಲ. ಮೈಸೂರಿನ ಹೆಚ್ಚುವರಿ ಜಿಲ್ಲಾಧಿಕಾರಿ, ಉಪ ಔಷಧ ನಿಯಂತ್ರಕ ಹಾಗೂ ಆಮ್ಲಜನಕ ಪೂರೈಸುವ ಎರಡು ಸಂಸ್ಥೆಗಳ ಸಿಬ್ಬಂದಿ ಮಾತ್ರ ಇದ್ದಾರೆ. ಆಡಿಯೋ ತುಣುಕುಗಳ ಬಗ್ಗೆ ತನಿಖೆಯಾಗಬೇಕು ಎಂದು ಜಿಲ್ಲಾ ಕಾಂಗ್ರೆಸ್ ಈಗಾಗಲೇ ಒತ್ತಾಯಿಸಿದೆ. ಜಿಲ್ಲಾ ಅಭಿವೃದ್ಧಿ ಹೋರಾಟ ಸಮಿತಿಯ ವೆಂಕಟರಣಸ್ವಾಮಿ (ಪಾಪು) ಹಾಗೂ ವೀರಭದ್ರಸ್ವಾಮಿ ಅವರು, ಆಡಿಯೋದಲ್ಲಿನ ಅಂಶಗಳ ಸತ್ಯಾಸತ್ಯತೆ ಬಗ್ಗೆ ತನಿಖೆ ನಡೆಯಬೇಕು ಎಂದು ಆಗ್ರಹಿಸಿದ್ದಾರೆ.

ಈ ಕುರಿತು ಮಾತನಾಡಿದ ಎಸ್‌ಡಿಪಿಐ ರಾಜ್ಯ ಕಾರ್ಯದರ್ಶಿ ಅಬ್ರಾರ್‌ ಅಹಮದ್‌ ಅವರು ಜಿಲ್ಲಾಧಿಕಾರಿ ಸಿಂಧೂರಿ ಅವರ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ. ಅದರಲ್ಲಿ ಅವರು, ಮೈಸೂರು ಜಿಲ್ಲೆಗೇ ಆಮ್ಲಜನಕ ಕೊರತೆ ಇರುವುದನ್ನು ಪ್ರಸ್ತಾಪಿಸಿದ್ದಾರೆ. ಜಿಲ್ಲೆಯ ಮುಖ್ಯಸ್ಥರಾಗಿ ಚಾಮರಾಜನಗರ ಸೇರಿದಂತೆ ಬೇರೆ ಕಡೆಗೆ ಎಷ್ಟು ಆಮ್ಲಜನಕ ಹೋಗುತ್ತಿದೆ ಎಂಬುದನ್ನು ತಿಳಿದುಕೊಳ್ಳುವ ಹಕ್ಕು ಅವರಿಗೆ ಇರುತ್ತದೆ. ಗಮನಕ್ಕೆ ತಂದು ಕಳುಹಿಸಬೇಕು ಎಂದು ಹೇಳಿದ್ದರಲ್ಲಿ ತಪ್ಪೇನಿದೆ’ ಎಂದು ತಿಳಿಸಿದರು. ‘ಮೇ 2ರಂದು ದುರಂತ ಸಂಭವಿಸುವ ಮೊದಲೇ ಈ ಸಂಭಾಷಣೆಗಳು ನಡೆದಿವೆ. ಅಂದರೆ, ಅಂದು ನಡೆದಿರುವುದು ಏಕಾಏಕಿ ದುರಂತ ಅಲ್ಲ. ಅದಕ್ಕಿಂತ ಮೊದಲೇ ಆಮ್ಲಜನಕ ಪೂರೈಕೆಗೆ ತೊಂದರೆಯಾಗಿತ್ತು. ಇದು ಗೊತ್ತಿದ್ದರೂ, ಜಿಲ್ಲಾಡಳಿತ ಏನೂ ಕ್ರಮ ಕೈಗೊಂಡಿಲ್ಲ. ಜಿಲ್ಲಾಧಿಕಾರಿ, ವೈದ್ಯರು, ಜಿಲ್ಲಾ ಉಸ್ತುವಾರಿ ಸಚಿವರು ನಿರ್ಲಕ್ಷ್ಯ ವಹಿಸಿದ್ದರು ಎಂಬುದು ಸ್ಪಷ್ಟ’ ಎಂದು ಅವರು ದೂರಿದರು.‘ದುರ್ಘಟನೆ ನಡೆದು 40 ದಿನಗಳ ನಂತರ ಆಡಿಯೊ ತುಣುಕುಗಳು ಬಿಡುಗಡೆಯಾಗಿವೆ. ಅದೂ ರೋಹಿಣಿ ಸಿಂಧೂರಿ ಅವರು ವರ್ಗಾವಣೆಯಾದ ನಂತರ. ಇದುವರೆಗೂ ಈ ತುಣುಕುಗಳು ಯಾಕೆ ಹೊರಗಡೆ ಬಂದಿಲ್ಲ? ಈಗ ಬಿಡುಗಡೆ ಮಾಡಿರುವುದರ ಹಿಂದೆ ಇಡೀ ಪ್ರಕರಣವನ್ನು ಮುಚ್ಚಿಹಾಕುವ ಯತ್ನವಿದೆ’ ಎಂದು ಅಬ್ರಾರ್ ಅಹಮದ್ ಹೇಳಿದರು.

ಈ ನಡುವೆ ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ಹೊಸದಾಗಿ ಸ್ಥಾಪಿಸಲಾಗಿರುವ ಆಮ್ಲಜನಕ ಘಟಕದ ಟ್ಯಾಂಕ್ನಲ್ಲಿ ತಾಂತ್ರಿಕ ದೋಷ ಕಂಡು ಬಂದಿದ್ದು, ಹೊಸ ಟ್ಯಾಂಕ್ ಬಂದಿದೆ. ಆದರೆ, ಟ್ಯಾಂಕ್ ಬಂದು ಒಂದು ವಾರವಾದರೂ ಇನ್ನೂ ಅಳವಡಿಕೆಯಾಗಿಲ್ಲ. ಟ್ಯಾಂಕ್ ಹೊತ್ತಿರುವ ಲಾರಿ ಆಸ್ಪತ್ರೆಯ ಬಳಿ ನಿಂತುಕೊಂಡಿದೆ. ಘಟಕದಲ್ಲಿರುವ ಟ್ಯಾಂಕ್ನಲ್ಲಿ ಹೊರ ಭಾಗದ ಒತ್ತಡ ನಿಯಂತ್ರಣ ವ್ಯವಸ್ಥೆಯಲ್ಲಿ ದೋಷ ಕಂಡು ಬಂದಿದೆ ಎಂದು ಜಿಲ್ಲಾ ಸರ್ಜನ್ ಡಾ.ಶ್ರೀನಿವಾಸ್ ಹೇಳಿದ್ದಾರೆ. ‘ಇದು ಸಣ್ಣ ಪ್ರಮಾಣದ ದೋಷ. ರೋಗಿಗಳಿಗೆ ಆಮ್ಲಜನಕ ಪೂರೈಕೆಗೆ ಏನೂ ತೊಂದರೆಯಾಗಿಲ್ಲ. ಘಟಕ ಅಳವಡಿಸಿರುವ ಕಂಪನಿಯ ತಾಂತ್ರಿಕ ಸಿಬ್ಬಂದಿ ಅದನ್ನು ದುರಸ್ತಿ ಮಾಡಿದ್ದಾರೆ’ ಎಂದು ಡಾ.ಶ್ರೀನಿವಾಸ್ ತಿಳಿಸಿದರು.

ಇದಕ್ಕೂ ಮೊದಲು ಮಾಧ್ಯಮಗಳಿಗೆ ಈ ಬಗ್ಗೆ ಮಾಹಿತಿ ನೀಡಿದ ಅವರು,‘ಟ್ಯಾಂಕ್ನಲ್ಲಿ ಸೋರಿಕೆ ಇಲ್ಲ. ಆದರೆ, ಹೊರಗಿನ ಒತ್ತಡ ನಿಯಂತ್ರಣ ವ್ಯವಸ್ಥೆಯಲ್ಲಿ ದೋಷವಿದೆ. ಅದನ್ನು ತಾತ್ಕಾಲಿಕವಾಗಿ ಸರಿಪಡಿಸಲಾಗಿದೆ. ದೀರ್ಘಕಾಲದಲ್ಲಿ ಅದು ಸಮಸ್ಯೆಯಾಗಿ ಕಾಡಬಹುದು ಎಂಬ ಉದ್ದೇಶದಿಂದ ಹೊಸ ಟ್ಯಾಂಕ್ ಅಳವಡಿಸಲಾಗುತ್ತಿದೆ. ಈಗಾಗಲೇ ಟ್ಯಾಂಕ್ ತಲುಪಿದೆ. ಅದರ ಅಳವಡಿಕೆಗೆ ಚೆನ್ನೈಯಿಂದ ಅನುಮತಿ ಬೇಕಾಗಿದೆ. ಆ ಪ್ರಕ್ರಿಯೆ ನಡೆಯುತ್ತಿದ್ದು, ಇನ್ನು ಒಂದೆರಡು ದಿನಗಳಲ್ಲಿ ಅಳವಡಿಸಲಾಗುವುದು’ ಎಂದರು. ಆಮ್ಲಜನಕ ಸಮಸ್ಯೆ ಇಲ್ಲ: ಆಸ್ಪತ್ರೆಗೆ ಈಗ ನಿಗದಿಯಂತೆ ಆಮ್ಲಜನಕ ಪೂರೈಕೆಯಾಗುತ್ತಿದೆ. ಘಟಕಕ್ಕೆ ಬಳ್ಳಾರಿಯಿಂದ ನಿಯಮಿತವಾಗಿ ಆಮ್ಲಜನಕ ಬರುತ್ತಿದೆ. ಸಿಲಿಂಡರ್ಗಳನ್ನೂ ತರಿಸಲಾಗುತ್ತಿದೆ. ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ಕಡಿಮೆಯಾಗುತ್ತಿರುವುದರಿಂದ ಇನ್ನು ಸಮಸ್ಯೆ ಉಂಟಾಗದು ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Related posts

Latest posts

ಭಾರತದ ಶ್ರೇಷ್ಠ ಓಟಗಾರ ಮಿಲ್ಖಾ ಸಿಂಗ್ ಇನ್ನಿಲ್ಲ

ಭಾರತದ ಶ್ರೇಷ್ಠ ಓಟಗಾರ ಮಿಲ್ಖಾ ಸಿಂಗ್ ಕೊರೊನಾ ಸೋಂಕಿನಿಂದ ಉಂಟಾದ ಹಲವಾರು ಸಮಸ್ಯೆಗಳಿಂದ ಕೊನೆಯುಸಿರೆಳೆದಿದ್ದಾರೆ. ಚಂಡೀಗಡದ ಪಿಜಿಐ ಆಸ್ಪತ್ರೆಯಲ್ಲಿ ತಮ್ಮ 91 ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ಕಳೆದ ತಿಂಗಳು ಮಿಲ್ಖಾ ಸಿಂಗ್ ಅವರಿಗೆ...

ಒಂದೇ ದಿನದಲ್ಲಿ ಎರಡು ವಿವಿಧ ಕೋವಿಡ್-19 ಲಸಿಕೆಗಳನ್ನು ಪಡೆದ ಬಿಹಾರದ ಮಹಿಳೆ

ಬಿಹಾರದ 63 ವರ್ಷದ ಮಹಿಳೆಗೆ ಒಂದೇ ದಿನದಲ್ಲಿ ಎರಡು ವಿಭಿನ್ನ ಕಂಪನಿಯ ಕರೋನ ಲಸಿಕೆ ನೀಡಲಾಗಿದೆ. ಅವರು ಈಗ ವೈದ್ಯರ ನಿಗದಲ್ಲಿದ್ದು ಆರೋಗ್ಯವಾಗಿದ್ದಾರೆ ಎನ್ನಲಾಗಿದೆ. ಬಿಹಾರದ ಮಹಿಳೆ ಸುನಿಲಾ ದೇವಿ ಎಂಬುವವರಿಗೆ ಜೂನ್ 16...

ಮಸೀದಿಗೆ ಜಾಗ ದಾನ ನೀಡಿದ ಸಿಖ್ ವ್ಯಕ್ತಿ: ಮಸೀದಿಯಲ್ಲಿ ಕಾರ್ಯಕ್ರಮ ಆಯೋಜಿಸಿದ ಗುರುದ್ವಾರ

ಕೋಮು‌‌ ಸಂಘರ್ಷಗಳು, ಪ್ರಚೋದನೆಗಳು ಮತ್ತು ವಿಭಿನ್ನ ಕೋಮಿನ ಜನರ ಮೇಲೆ ವಿನಾಕಾರಣ ಹಲ್ಲೆ, ಕೊಲೆ ನಡೆಯುವ ವಿದ್ಯಮಾನಗಳ ನಡುವೆ ಪಂಜಾಬಿನ‌ ಎರಡು ಜಿಲ್ಲೆಗಳು ಕೋಮುಸಾಮರಸ್ಯವನ್ನು ಉತ್ತೇಜಿಸುವಂತಹ ಘಟನೆಗೆ ಸಾಕ್ಷಿಯಾಗಿವೆ. ಸ್ವಾಭಿಮಾನಕ್ಕೆ, ಕೆಚ್ಚೆದೆಗೆ ಹಠಕ್ಕೆ...