ಕಲಬುರಗಿ ಪಾಲಿಕೆ ಮೇಯರ್ ವಿಚಾರ ಒಂದು ರೀತಿಯಾದರೆ, ಹುಬ್ಬಳ್ಳಿ ಮತ್ತು ಬೆಳಗಾವಿ ಮೇಯರ್ ವಿಚಾರವೇ ಇನ್ನೊಂದು ರೀತಿ. ಬೆಳಗಾವಿಯಲ್ಲಂತೂ ಎಂಇಎಸ್ನ ಸೋಲಿಸಿ ಬಿಜೆಪಿ ಅಧಿಕಾರ ಹಿಡಿದಿದ್ದು, ಮರಾಠಿಗರ ಋಣ ತೀರಿಸಬೇಕಾಗಿದೆ. ಇತ್ತ ಹುಬ್ಬಳ್ಳಿಯಲ್ಲಿ ಮೇಯರ್ ಸ್ಥಾನ ಭವಿಷ್ಯದ ದೃಷ್ಟಿಯಿಂದ ಆಯ್ಕೆಯಾಗೋ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ.
ಬೆಳಗಾವಿಯಲ್ಲಿ ಬಿಜೆಪಿ ಗೆದ್ದಿದ್ದು ಇತಿಹಾಸ. ಅದ್ರಲ್ಲೂ ಎಂಇಎಸ್ನ ಸೋಲಿಸಿದ್ದೇ ರೋಚಕ. ಇದೇ ನಿಟ್ಟಿನಲ್ಲಿ ಮರಾಠಿಗರು ಮತ್ತು ಲಿಂಗಾಯತರ ಪ್ರಾಬಲ್ಯವಿರೋ ಬೆಳಗಾವಿಯಲ್ಲಿ ಎರಡೂ ಸಮುದಾಯಕ್ಕೆ ಅಧಿಕಾರ ಕೊಡೋ ಮಾತುಕತೆ ನಡೆದಿದೆ.
ಪ್ರತಿಬಾರಿ ಬೆಳಗಾವಿಯಲ್ಲಿ ಅಧಿಪತ್ಯ ಸಾಧಿಸುತ್ತಿದ್ದ ಎಂಇಎಸ್ಗೆ ಮರಾಠಿ ಮತಗಳೇ ನಿರ್ಣಾಯಕ. ಆದ್ರೆ, ಇದೇ ಮರಾಠಿ ಮತಗಳು ಇವತ್ತು ಕೇಸರಿ ಪಾಳಯಕ್ಕೆ ಜೈ ಎಂದಿದ್ದು, ಅವರ ಋಣ ತೀರಿಸೋಕೆ ಬೆಳಗಾವಿಯಲ್ಲಿ ಮರಾಠಿಗರಿಗೆ ಮೇಯರ್ ಸ್ಥಾನ ಮತ್ತು ಲಿಂಗಾಯತರಿಗೆ ಉಪ ಮೇಯರ್ ಸ್ಥಾನ ಕೊಡೋದಕ್ಕೆ ಪ್ಲಾನ್ ಮಾಡಿದೆ.
ಬೆಳಗಾವಿಯಲ್ಲಿ ಒಟ್ಟು 12 ಜನ ಮರಾಠ ಸಮುದಾಯದ ಸದಸ್ಯರು ಕಾರ್ಪೋರೇಟರ್ಗಳಾಗಿ ಆಯ್ಕೆಯಾಗಿದ್ದಾರೆ. ಹೀಗಾಗಿ, ಮರಾಠಿಗರು ಎಂಇಎಸ್ನ ಬೆಂಬಲಿಸದೇ ಇದ್ದಿದ್ದಕ್ಕೆ ಬಿಜೆಪಿ ಮರಾಠ ಸಮುದಾಯದವ್ರಿಗೆ ಮೇಯರ್ ನೀಡುವ ಸಾಧ್ಯತೆಯಿದೆ. ಅದ್ರಲ್ಲೂ ದಕ್ಷಿಣ ವಿಧಾನಸಭಾ ಕ್ಷೇತ್ರದವ್ರನ್ನೇ ಮೇಯರ್ ಮಾಡೋ ಸಾಧ್ಯತೆ ದಟ್ಟವಾಗಿದೆ.
ಇನ್ನೂ ಮರಾಠಿಗರಷ್ಟೇ ಪ್ರಾಬಲ್ಯವಿರುವ ಲಿಂಗಾಯತರಿಗೆ ಉಪ ಮೇಯರ್ ಸ್ಥಾನಕ್ಕೆ ನಿರ್ಧರಿಸಿದ್ದು, ಶಾಸಕ ಅಭಯ್ ಪಾಟೀಲ್ರ ಅನತಿಯಂತೆ ಕಾರ್ಯತಂತ್ರ ನಡೆಯುತ್ತಿದೆ. ಎರಡೂ ಬಲಿಷ್ಠ ಸಮುದಾಯಗಳಿಗೆ ಸ್ಥಾನ ಕೊಟ್ರೆ ಭವಿಷ್ಯ ಭದ್ರವಾಗಿರುತ್ತೆ ಅನ್ನೋದು ಕಾರ್ಯತಂತ್ರ. ಸೋಮವಾರ ಸಿಎಂ ಮುಂದೆ ಗೆದ್ದ ಅಭ್ಯರ್ಥಿಗಳನ್ನ ಪರೆಡ ನಡೆಸಲು ನಾಯಕರು ಸಜ್ಜಾಗಿದ್ದಾರೆ.
ಇತ್ತ ಹುಬ್ಬಳ್ಳಿಯಲ್ಲಿ ಬಿಜೆಪಿ ಮ್ಯಾಜಿಕ್ ನಂಬರ್ ತಲುಪದೇ ಇದ್ದರೂ ಜನಪ್ರತಿನಿಧಿಗಳ ವಿಶೇಷ 6 ಮತಗಳ ಮೂಲಕ ಬಿಜೆಪಿ ಪಾಲಿಕೆ ಗದ್ದುಗೆ ಏರೋದು ಖಚಿತವಾಗಿದೆ. ಆದ್ರೆ ಮೇಯರ್ ಯಾರು ಅನ್ನೋದು ಕೇಂದ್ರ ಸಚಿವರೇ ಆಯ್ಕೆ ಮಾಡಲಿದ್ದಾರೆ. ಅದಕ್ಕೆ ಕಾರಣವೂ ಇದೆ.
ಅವಳಿನಗರ ಹುಬ್ಬಳ್ಳಿ-ಧಾರವಾಡ ಪಾಲಿಕೆ ವಿಭಜನೆ ಆಗಬೇಕು ಅನ್ನೋ ಕೂಗು ಜೋರಾಗಿ ಕೇಳಿ ಬರ್ತಿದೆ. ಇದಕ್ಕೆ ಶಾಸಕ ಅರವಿಂದ್ ಬೆಲ್ಲದ್ ಅವ್ರ ಬೆಂಬಲವೂ ಇದೆ. ಆದರೆ, ಉಳಿದ ಬಿಜೆಪಿ ನಾಯಕರಿಗೆ ಪಾಲಿಕೆ ವಿಭಜನೆ ಆಗೋದು ಇಷ್ಟವಿಲ್ಲ. ಇದೇ ಕಾರಣಕ್ಕೆ ಪಾಲಿಕೆ ವಿಭಜನೆ ಆಗದಂತೆ ನೋಡಿಕೊಳ್ಳೋದು ಬಿಜೆಪಿ ಪ್ಲಾನ್ ಮಾಡಿ ಮೇಯರ್ ಆಯ್ಕೆ ಮಾಡ್ತಿದೆ.
ಕೇಂದ್ರ ಸಚಿವರ ಆಪ್ತವಲಯದಲ್ಲಿ ಗುರುತಿಸಿಕೊಂಡವರಿಗೆ ಮಣೆ ಹಾಕೋದಕ್ಕೆ ತೀರ್ಮಾನಿಸಿದ್ದು, ಈರೇಶ್ ಅಂಚಟಗೇರಿಗೆ ಮೇಯರ್ ಸ್ಥಾನಕ್ಕೆ ತೆರೆಮರೆ ಕಸರತ್ತು ನಡೆಸಲಾಗ್ತಿದೆ. ಅಂಚಟಗೇರಿ ಬಿಟ್ಟು ಬೇರೆ ಯಾರಿಗೇ ಕೊಟ್ರೂ ವಿಭಜನೆಗೆ ಧ್ವನಿ ಸಿಕ್ಕಂತಾಗುತ್ತೆ. ಒಂದ್ವೇಳೆ ಈರೇಶ್ ಅಂಚಟಗೇರಿ ಮೇಯರ್ ಕೊಟ್ರೆ ಆ ವಿಭಜನೆ ಕೂಗು ತಣ್ಣಗಾಗಲಿದೆ ಅಂತಾ ಹೇಳಲಾಗ್ತಿದೆ.
ಇತಿಹಾಸದಲ್ಲೇ ಪ್ರಥಮ ಬಾರಿಗೆ ಬೆಳಗಾವಿ ಪಾಲಿಕೆ ಗದ್ದುಗೆ ಏರಿರುವ ಬಿಜೆಪಿ ಲಾಭ ಹಾನಿಯ ಲೆಕ್ಕಾಚಾರ ಮುಂದಾಲೋಚನೆ ಇಟ್ಟುಕೊಂಡರೆ, ಇತ್ತ ಪಾಲಿಕೆ ವಿಭಜನೆ ಕೂಗು ತಣ್ಣಗಾಗಿಸಲು ಧಾರವಾಡದಲ್ಲಿ ಮೇಯರ್, ಉಪಮೇಯರ್ ಆಯ್ಕೆ ಕಸರತ್ತು ನಡೆದಿದೆ.