ಹೋಳಿ ಆಚರಣೆ ವೇಳೆ ಕಿರುಕುಳವನ್ನು ಎದುರಿಸಿದ್ದ ಜಪಾನ್‌ನ ಮಹಿಳೆ ಭಯಾನಕ ಘಟನೆಯ ಬಗ್ಗೆ ಸರಣಿ ಟ್ವೀಟ್‌ಗಳ ಮೂಲಕ ಪ್ರತಿಕ್ರಿಯಿಸಿದ್ದಾರೆ. ಅವರು ಘಟನೆಯನ್ನು “ದುರದೃಷ್ಟಕರ” ಎಂದು ಕರೆದಿದ್ದಾರೆ. ಆಕೆ ತನ್ನ ಸ್ನೇಹಿತರೊಂದಿಗೆ ಹೋಳಿ ಉತ್ಸವದಲ್ಲಿ ಭಾಗವಹಿಸಿರುವುದಾಗಿ ತಿಳಿಸಿದ್ದಾರೆ.
ಹೋಳಿ ಸಂದರ್ಭದಲ್ಲಿ ಕಿರುಕುಳ ಎದುರಿಸಿದ್ದ ಬಳಿಕ ಅವರು ಭಾರತ ತೊರೆದಿದ್ದರು. ನಂತರ ಸರಣಿ ಟ್ವೀಟ್ ಮೂಲಕ ತನಗೆದುರಾದ ಕಿರುಕುಳದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
ನಾನು ಭಾಗವಹಿಸಿದ ಭಾರತೀಯ ಹಬ್ಬವಾದ ಹೋಳಿ ಹಬ್ಬದ ವೇಳೆ ಹಗಲು ಹೊತ್ತಿನಲ್ಲಿಯೂ ಮಹಿಳೆಯೊಬ್ಬಳು ಒಂಟಿಯಾಗಿ ಹೋಗುವುದು ತುಂಬಾ ಅಪಾಯಕಾರಿ ಎಂದು ಕೇಳಿದ್ದೆ, ಹಾಗಾಗಿ ಒಟ್ಟು 35 ಮಂದಿ ಸ್ನೇಹಿತರೊಂದಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ ಎಂದು ಅವರು ಹೇಳಿದರು.
ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಘಟನೆಯ ವಿಡಿಯೋದಲ್ಲಿ ಪುರುಷರ ಗುಂಪೊಂದು ಮಹಿಳೆಯ ಮೇಲೆ ಬಣ್ಣ ಬಳಿದುಕೊಂಡು ಅಸಹ್ಯಕರವಾಗಿ ಮೈಗೆ ಹಾಕುವುದು ಕಂಡು ಬಂದಿದೆ.
ಜಪಾನ್‌ನ ಯುವತಿಯೊಬ್ಬಳನ್ನು ಬುಧವಾರ ಹೋಳಿ ಆಚರಣೆ ವೇಳೆ ಗುಂಪೊಂದು ಅಟ್ಟಾಡಿಸಿ, ಕಿರುಕುಳ ನೀಡಿ ದೌರ್ಜನ್ಯ ಎಸಗಿರುವ ಘಟನೆ ನಡೆದಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ತೀವ್ರ ಆಕ್ರೋಶ ವ್ಯಕ್ತವಾಗಿತ್ತು.

ವೈರಲ್ ಆಗಿರುವ ವೀಡಿಯೊದಲ್ಲಿ, ದುಷ್ಕರ್ಮಿಗಳು ಯುವತಿಯನ್ನು ಎಳೆದಾಡಿ “ಹೋಳಿ ಹೈ” ಎಂಬ ಬೊಬ್ಬಿರಿಯುತ್ತಾ ಬಣ್ಣಗಳನ್ನು ಬಳಿಯುತ್ತಿರುವುದು ಕಂಡು ಬಂದಿತ್ತು.
ಒಬ್ಬ ಯುವಕ ಆಕೆಯ ತಲೆಯ ಮೇಲೆ ಮೊಟ್ಟೆಯನ್ನು ಒಡೆದು ಹಾಕುತ್ತಿರುವುದನ್ನು ಸಹ ವಿಡಿಯೋದಲ್ಲಿ ಸೆರೆಯಾಗಿದೆ.
ತಾನು ಎದುರಿಸಿದ ಕಿರುಕುಳದ ಬಗ್ಗೆ ಟ್ವೀಟ್ ಮಾಡಿದ ಮೇಲೆ ಇನ್ನಷ್ಟು ಬೆದರಿಕೆ ಮತ್ತು ಟೀಕೆಗಳನ್ನು ಎದುರಿಸಬೇಕಾಯಿತು ಎಂದು ಯುವತಿ ಹೇಳಿದ್ದಾರೆ.
ಅದಾಗ್ಯೂ, ಮಹಿಳೆಯು ಭಾರತದ ಮೇಲಿನ ತನ್ನ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ.”ನಾನು ಭಾರತದ ಬಗ್ಗೆ ಎಲ್ಲವನ್ನೂ ಪ್ರೀತಿಸುತ್ತೇನೆ, ನಾನು ಹಲವಾರು ಬಾರಿ ಅಲ್ಲಿಗೆ ಹೋಗಿದ್ದೇನೆ ಮತ್ತು ಅದು ಆಕರ್ಷಕ ದೇಶವಾಗಿದೆ. ಭಾರತ ಮತ್ತು ಜಪಾನ್ ಎಂದೆಂದಿಗೂ ‘ಟೊಮೊಡಾಚಿ’ (ಸ್ನೇಹಿತರು) ಆಗಿರುತ್ತದೆ.”
ಮಹಿಳೆ ಗುರುವಾರ ವೀಡಿಯೊವನ್ನು ಟ್ವೀಟ್ ಮಾಡಿದ ನಂತರ ಅಳಿಸಿದ್ದು, ವಿಡಿಯೋಗೆ ಬಂದ ಪ್ರತಿಕ್ರಿಯೆಗಳಿಂದ ಭಯಗೊಂಡಿದ್ದೇನೆ ಎಂದು ತಿಳಿಸಿದ್ದಾರೆ.
“ಮಾರ್ಚ್ 9 ರಂದು, ನಾನು ಹೋಳಿ ವೀಡಿಯೊವನ್ನು ಟ್ವೀಟ್ ಮಾಡಿದ್ದೇನೆ, ಆದರೆ ಅದರ ನಂತರ, ನಾನು ಊಹಿಸಿದ್ದಕ್ಕಿಂತ ಹೆಚ್ಚು ರಿಟ್ವೀಟ್‌ಗಳು ಮತ್ತು ಸಂದೇಶಗಳು ಬಂದವು. ನಾನು ಭಯಭೀತಳಾಗಿ ಟ್ವೀಟ್ ಅನ್ನು ಅಳಿಸಿದ್ದೇನೆ” ಎಂದು ಅವರು ಜಪಾನೀಸ್ ಭಾಷೆಯಲ್ಲಿ ಟ್ವೀಟ್ ಮಾಡಿದ್ದಾರೆ.
ಮಹಿಳೆ ಇನ್ನೂ ದೂರು ದಾಖಲಿಸದಿದ್ದರೂ, ಪೊಲೀಸರು ವೀಡಿಯೊವನ್ನು ಗಮನಿಸಿ ದೂರು ದಾಖಲಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಬಾಲಾಪರಾಧಿ ಸೇರಿದಂತೆ ಮೂವರನ್ನು ಇದುವರೆಗೆ ಬಂಧಿಸಲಾಗಿದೆ. ಅವರೆಲ್ಲರೂ ಪಹರ್‌ಗಂಜ್ ಸಮೀಪದ ಪ್ರದೇಶದ ನಿವಾಸಿಗಳಾಗಿದ್ದು, ಘಟನೆಯಲ್ಲಿ ತಾವು ಭಾಗಿಯಾಗಿರುವುದನ್ನು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.






