ಆದಿವಾಸಿಗಳ ಬದುಕು-ಚಳುವಳಿಗಳ ಸದಾಶಯದ ನಡುವೆಯೇ ವ್ಯವಸ್ಥೆಗೊಂದು ಸವಾಲು
ಸ್ಥಾಪಿತ ವ್ಯವಸ್ಥೆಗೆ ಸವಾಲೆಸೆಯುವ ಯಾವುದೇ ಸೃಜನಶೀಲ ಕೃತಿ ಅಧಿಕಾರಸ್ಥರನ್ನು ಮತ್ತು ಈ ಅಧಿಕಾರ ಕೇಂದ್ರಗಳ ಹಿಂಬಾಲಕರನ್ನು ತೀವ್ರವಾಗಿ ಪ್ರಕ್ಷುಬ್ಧಗೊಳಿಸಿಬಿಡುತ್ತವೆ. ಆರ್ ಕೆ ಲಕ್ಷ್ಮಣ್ ಅವರ ವ್ಯಂಗ್ಯ ಚಿತ್ರಗಳು, ಎಂ ಎಫ್ ಹುಸೇನ್ ಅವರ ಕಲಾಕೃತಿಗಳು, ಸತ್ಯಜಿತ್ ರೇ ಮುಂತಾದವರ ಚಲನಚಿತ್ರಗಳು ಮತ್ತು ಕೆಲವೊಮ್ಮೆ ಚಲನಚಿತ್ರ ಗೀತೆಗಳೂ ಸಹ ಆಳುವ ವರ್ಗಗಳನ್ನು ಮತ್ತು ಈ ವರ್ಗದ ಪ್ರಾತಿನಿಧ್ಯ ವಹಿಸುವ ಸಾಮಾಜಿಕ ವಲಯವನ್ನು ವಿಚಲಿತಗೊಳಿಸಿಬಿಡುತ್ತದೆ. ಉದಾಹರಣೆಗೆ ೧೯೫೦ರ ದಶಕದಲ್ಲಿ ರಾಜ್ ಕಪೂರ್ ನಟಿಸಿದ “ ಫಿರ್ ಸುಬಹ್ ಹೋಗಿ” ಚಿತ್ರದ ಒಂದು ಹಾಡು “ ಓ ಸುಬಹ್ ಕಭೀ ತೊ ಆಯೇಗಿ ” (ಸಾಹಿರ್ ಲುಧಿಯಾನ್ವಿ) ನೆಹರೂ ಸರ್ಕಾರವನ್ನು ವಿಚಲಿತಗೊಳಿಸಿ ಸಿನಿಮಾಗೆ ನಿರ್ಬಂಧವನ್ನೂ ಹೇರಲಾಗಿತ್ತು. ಸಾಮಾನ್ಯ ಜನತೆಯ ಬದುಕಿನ ಆಶಯಗಳಿಗೆ ವಿಮುಖವಾಗಿರುವ ಯಾವುದೇ ಆಡಳಿತ ವ್ಯವಸ್ಥೆಯಲ್ಲಿ ಇದು ಸಹಜ. ಭಾರತವೂ ಹೊರತಲ್ಲ.
ಈಗ ಜ್ಞಾನವೇಲು ನಿರ್ದೇಶನದ, ಸೂರ್ಯ ನಟಿಸಿರುವ ನೈಜ ಘಟನೆಯ್ನನಾಧರಿಸಿದ ಚಿತ್ರ “ ಜೈ ಭೀಮ್ ” ಆಳುವ ವರ್ಗಗಳ ನಿದ್ದೆಗೆಡಿಸಿದೆ. ವಣ್ಣಿಯಾರ್ ಸಮುದಾಯದ ಭಾವನೆಗೆ ಧಕ್ಕೆ ಉಂಟಾಗಿದೆ ಎಂದು ಸಮುದಾಯದ ರಾಜಕೀಯ ನೇತಾರ ಅನ್ಬುಮಣಿ ರಾಮದಾಸ್ ಕಾನೂನು ನೋಟಿಸ್ ಜಾರಿಮಾಡಿರುವುದೇ ಇದಕ್ಕೆ ಸಾಕ್ಷಿ. ಸುಪ್ತ ದನಿಗಳು ಒಮ್ಮೆಲೆ ಎಚ್ಚೆತ್ತಾಗ, ಸ್ಥಾಪಿತ ವ್ಯವಸ್ಥೆ ಆ ದನಿಯನ್ನು ಅಡಗಿಸಲು ನಾನಾ ಮಾರ್ಗಗಳನ್ನು ಅನುಸರಿಸುತ್ತದೆ. ತನ್ನ ಬಾಲಂಗೋಚಿಗಳ ಮೂಲಕ, ಹಿಂಬಾಲಕರ ಮೂಲಕ, ಸಮರ್ಥಕರ ಮೂಲಕ ಮತ್ತು ಕೆಲವೊಮ್ಮೆ ತಮ್ಮ ಶತ್ರುಗಳ ಮುಖಾಂತರವೂ ಈ ಜಾಗೃತ ದನಿಯನ್ನು ಅಡಗಿಸುವ ಪ್ರಯತ್ನಗಳಿಗೆ ಮುಂದಾಗುತ್ತವೆ. ಈಗ ಜೈ ಭೀಮ್ ಚಿತ್ರದಂಡದ ಸರದಿ.
ಈ ಚಿತ್ರದ ಯಶಸ್ಸಿನ ಬೆನ್ನಲ್ಲೇ ಚಿತ್ರದಲ್ಲಿ ನಾಯಕ ಪಾತ್ರಧಾರಿಯ ನಿಜ ಜೀವನದ ವ್ಯಕ್ತಿ ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿ ಕೆ ಚಂದ್ರು ಅವರೂ ಸಾರ್ವಜನಿಕ ಸಂಕಥನದ ಒಂದು ಭಾಗವಾಗಿ ಈ ಚಿತ್ರದಲ್ಲಿ ಬಿಂಬಿಸಿರುವ ಘಟನೆಗಳು, ವಿದ್ಯಮಾನಗಳು ಮತ್ತು ಬಿತ್ತರಿಸಲಾಗಿರುವ ವಾಸ್ತವ ಸಮಸ್ಯೆಗಳತ್ತ ಮತ್ತಷ್ಟು ಒಳನೋಟಗಳನ್ನು ನೀಡಲಾರಂಭಿಸಿರುವುದು, ಬಹುಶಃ ಸ್ಥಾಪಿತ ವ್ಯವಸ್ಥೆಗೆ ಅರಗಿಸಿಕೊಳ್ಳುವುದು ಕಷ್ಟವಾಗಬಹುದು. ಏಕೆಂದರೆ ಜೈ ಭೀಮ್ ಕೇವಲ ಒಂದು ನಿರ್ದಿಷ್ಟ ಸಮಸ್ಯೆಯನ್ನು ಎತ್ತಿ ತೋರಿಸಿಲ್ಲ ಅಥವಾ ಒಂದು ನಿರ್ದಿಷ್ಟ ಸಮಾಜದ, ಸಮುದಾಯದ ಬವಣೆಯನ್ನು ಬಿಂಬಿಸಿಲ್ಲ. ಇರುಳರ್ ಎಂಬ ಬುಡಕಟ್ಟು ಸಮುದಾಯದ ಜೀವನದಲ್ಲಿ ನಡೆದ ಒಂದು ಘಟನೆಯನ್ನು ನ್ಯಾಯಾಂಗದ ಚೌಕಟ್ಟಿನಲ್ಲಿ ಬಿಂಬಿಸಲಾಗಿದೆ. ಒಂದು ಸಾಧಾರಣ ವಾಣಿಜ್ಯ ಚಿತ್ರದಲ್ಲಿ ತೋರಿಸುವಂತೆ ಒಬ್ಬ ಹೀರೋ, ಆತನ ಸುತ್ತ ಒಬ್ಬ ನಾಯಕಿ, ನಾಲ್ಕೈದು ಹಾಡು, ಬಡತನದ ಬವಣೆಯನ್ನು ದಾರುಣವಾಗಿ ತೋರಿಸುವ ಕಂಬನಿಯ ಚಿಲುಮೆಗಳು, ವ್ಯವಸ್ಥೆಯನ್ನೇ ತನ್ನ ಮುಷ್ಠಿಯಿಂದ ಬಗ್ಗುಬಡಿಯುವ ನಾಯಕನಿಗಾಗಿ ಒಂದು ವೀರ ಗೀತೆ ಹೀಗೆ ಸಾಧಾರಣ ಮಸಾಲೆಗಳಿಂದ ಹೊರತಾದ ಒಂದು ಸಾಕ್ಷ್ಯ ಚಿತ್ರದಂತೆ ಜೈ ಭೀಮ್ ಇರುಳರ್ ಬುಡಕಟ್ಟು ಸಮುದಾಯದ ಜನರ ಸಮಸ್ಯೆಗಳನ್ನು ಜನತೆಯ ಮುಂದೆ ತೆರೆದಿಟ್ಟಿದೆ.
ಆದಿವಾಸಿಗಳ ಬದುಕು–ಬವಣೆ
ಬ್ರಿಟೀಷ್ ವಸಾಹತುಶಾಹಿಯ ವಿರುದ್ಧ ಆದಿವಾಸಿಗಳನ್ನು ಸಂಘಟಿಸಿ, ಸಶಸ್ತ್ರ ಹೋರಾಟಗಳನ್ನು ಹೂಡುವ ಮೂಲಕ ಬ್ರಿಟೀಷರ ದೌರ್ಜನ್ಯವನ್ನು ಎದುರಿಸಿ ಹೋರಾಡಿದ್ದ ಬಿರ್ಸಾ ಮುಂಡಾ ಜನ್ಮದಿನವನ್ನು ಕೇಂದ್ರ ಸರ್ಕಾರ “ ಬುಡಕಟ್ಟು ಗೌರವ ದಿನ ” ಎಂದು ಆಚರಿಸುತ್ತಿದ್ದು ತನ್ಮೂಲಕ ಇತಿಹಾಸ ಮರೆತೇ ಹೋಗಿದ್ದ ಒಬ್ಬ ಕ್ರಾಂತಿಕಾರಿಯನ್ನು ನೆನಪು ಮಾಡಿಕೊಂಡಿದೆ. ಬಿರ್ಸಾ ಮುಂಡಾ ಭಾರತದ ಆಳುವ ವರ್ಗಗಳಿಗೆ, ಬಂಡವಾಳಶಾಹಿಗಳಿಗೆ ಅಪರಿಚಿತನಾಗಿರಬಹುದು ಆದರೆ ಕಳೆದ ಏಳು ದಶಕಗಳಿಂದಲೂ ಬಂಡವಾಳ ವ್ಯವಸ್ಥೆಯ ಕ್ರೌರ್ಯದ ವಿರುದ್ಧ, ಆಳುವ ವರ್ಗಗಳ ಕ್ರೂರ ಕಾನೂನುಗಳ ವಿರುದ್ಧ ಹೋರಾಡುತ್ತಲೇ ಇರುವ, ಸಾವಿರಾರು ಕ್ರಾಂತಿಕಾರಿಗಳನ್ನು ಕಳೆದುಕೊಂಡಿರುವ ದೇಶದ ಹೋರಾಟದ ಪರಂಪರೆಗೆ ಬಿರ್ಸಾ ಮುಂಡಾ ಚಿರಪರಿಚಿತನಷ್ಟೇ ಅಲ್ಲ ಆದರ್ಶವೂ ಹೌದು. ಹೋರಾಟಗಾರರಿಗೆ ಆದರ್ಶವಾಗುವ ಒಬ್ಬ ಕ್ರಾಂತಿಕಾರಿ ಸ್ವಾತಂತ್ರö್ಯ ಹೋರಾಟಗಾರ ಆಳುವ ವರ್ಗಗಳಿಗೆ ರಾಜಕೀಯ ಬಂಡವಾಳವಾಗುವುದು ಈ ದೇಶದ ದುರಂತ.
ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಮತ್ತೊಂದು ಮಹಾ ಸುಳ್ಳನ್ನು ಹೇಳಿದ್ದಾರೆ. “ ಹಿಂದೆ ಆಡಳಿತ ನಡೆಸಿದ ಸರ್ಕಾರಗಳು ಈ ಸಮುದಾಯದ ಕಲ್ಯಾಣದ ಕಡೆಗೆ ಗಮನಹರಿಸಿಲ್ಲ,,, ಬುಡಕಟ್ಟು ಸಮುದಾಯದ ಪ್ರಮುಖರನ್ನು ಕಡೆಗಣಿಸುವುದರ ಮೂಲಕ ಹಿಂದಿನ ಸರ್ಕಾರಗಳು ಅಪರಾಧ ಎಸಗಿವೆ ” ಎನ್ನುವುದರ ಮೂಲಕ ತಮ್ಮವರೇ ಆದ ವಾಜಪೇಯಿಯವರನ್ನು ಸೇರಿದಂತೆ ಕಾಂಗ್ರೆಸ್ ಸರ್ಕಾರಗಳತ್ತ ಬೊಟ್ಟು ಮಾಡಿದ್ದಾರೆ. ಹಾಗೆಯೇ “ ಇಂಥ ಸಮುದಾಯ ಮತ್ತು ಪ್ರದೇಶಗಳ ಅಭಿವೃದ್ಧಿಗೆ ತಮ್ಮ ಸರ್ಕಾರ ಪ್ರಯತ್ನಿಸುತ್ತಿದೆ ” ಎಂದು ಸುಳ್ಳು ಹೇಳುವುದಕ್ಕೂ ಹಿಂಜರಿದಿಲ್ಲ. ಈ ಮಾತುಗಳಲ್ಲಿ ಅರ್ಧಸತ್ಯವಿದೆ. ಹಿಂದಿನ ಸರ್ಕಾರಗಳ ಮೇಲಿನ ಆರೋಪ ಪೂರ್ಣ ಸತ್ಯ ಇಂದಿನ ಸರ್ಕಾರದ ಪ್ರಯತ್ನಗಳು ಅರೆಸತ್ಯವಾದವು.
ಇದೇ ಬಿರ್ಸಾ ಮುಂಡಾ ಪ್ರತಿನಿಧಿಸಿದ ಆದಿವಾಸಿ, ಬುಡಕಟ್ಟು ಸಮುದಾಯಗಳ ಏಳಿಗೆಗಾಗಿಯೇ ಛತ್ತಿಸ್‌ಘಡ, ಜಾರ್ಖಂಡ್, ಆಂಧ್ರಪ್ರದೇಶ, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರಗಳಲ್ಲಿ ಆದಿವಾಸಿಗಳು ತಮ್ಮ ಕ್ರಾಂತಿಕಾರಿ ಹೋರಾಟವನ್ನು ಕಳೆದ ಏಳು ದಶಕಗಳಿಂದಲೂ ನಡೆಸುತ್ತಲೇ ಇದ್ದಾರೆ. ಇತ್ತೀಚೆಗೆ ಪೊಲೀಸರ ದೌರ್ಜನ್ಯ ಮತ್ತು ಸರ್ಕಾರದ ನಿರ್ಲಕ್ಷಕ್ಕೆ ಬಲಿಯಾದ ಸ್ಟಾಲಿಯನ್ ಸ್ವಾಮಿ ಇಂತಹುದೇ ಸಮುದಾಯಗಳ ಏಳಿಗೆಗಾಗಿ ಶ್ರಮಿಸಿದವರು. ಬಿರ್ಸಾ ಮುಂಡಾ ಜನ್ಮದಿನಾಚರಣೆಯನ್ನು ಆಚರಿಸುವ ಮುನ್ನ, ೨೫ನೆಯ ವಯಸ್ಸಿನಲ್ಲೇ ಬ್ರಿಟೀಷರ ಕ್ರೌರ್ಯಕ್ಕೆ ಬಲಿಯಾದ ಈ ಆದಿವಾಸಿಗಳ ನಾಯಕ ಪ್ರತಿನಿಧಿಸಿದ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಬೇಕಲ್ಲವೇ. ಮುಂಡ ಬುಡಕಟ್ಟು ಸಮುದಾಯಗಳಂತೆಯೇ ಸಂತಾಲ್ ಸಮುದಾಯವೂ ಬ್ರಿಟೀಷ್ ವಸಾಹತುಶಾಹಿಯ ವಿರುದ್ಧ ಕ್ರಾಂತಿಕಾರಿ ಹೋರಾಟ ನಡೆಸಿ ೧೬ ಸಾವಿರ ಜನರು ಹುತಾತ್ಮರಾಗಿದ್ದರು.

ಇತ್ತೀಚಿನ ಬೆಳವಣಿಗೆಗಳನ್ನೇ ನೋಡಿದರೆ, ಜಾರ್ಖಂಡ್‌ನ ೩೨ ಬುಡಕಟ್ಟು ಸಮುದಾಯಗಳನ್ನು ಪ್ರತಿನಿಧಿಸುವ ಪಾಥಲ್‌ಗರಿ ಆಂದೋಲನದಲ್ಲಿ ಆದಿವಾಸಿಗಳು ತಮ್ಮ ಅರಣ್ಯ ಹಕ್ಕುಗಳಿಗಾಗಿ, ಭೂಮಿಗಾಗಿ, ಸ್ವತಂತ್ರ ಬದುಕಿಗಾಗಿ ಹೋರಾಡುತ್ತಲೇ ಇದ್ದಾರೆ. ಜಾರ್ಖಂಡ್‌ನ ಜನಸಂಖ್ಯೆಯಲ್ಲಿ ಶೇ ೨೫ರಷ್ಟಿರುವ ಈ ಬುಡಕಟ್ಟು ಸಮುದಾಯಗಳ ವೀರೋಚಿತ ಹೋರಾಟಕ್ಕೆ ಕಾನೂನು ನೆರವು ನೀಡಿದ್ದ ಅಪರಾಧಕ್ಕೇ ಸ್ಟಾಲಿಯನ್ ಸ್ವಾಮಿ ಶಿಕ್ಷೆಗೊಳಗಾಗಿ ಹುತಾತ್ಮರಾದರು. ಇಂತಹುದೇ ನೊಂದ ಸಮುದಾಯಗಳ ಆರೋಗ್ಯ ಕಾಳಜಿ ವಹಿಸಿದ ಬಿನಾಯಕ್ ಸೆನ್ ಸೆರೆವಾಸ ಅನುಭವಿಸಬೇಕಾಯಿತು. ೨೦೧೭ರಲ್ಲಿ ಬಂಧನಕ್ಕೊಳಗಾದ ನಾಲ್ಕು ಸಾವಿರ ಅದಿವಾಸಿಗಳು ಇನ್ನೂ ಸೆರೆಮನೆಯಲ್ಲೇ ಇದ್ದಾರೆ. ಛತ್ತಿಸ್‌ಘಡದ ಹಸ್ದಿಯೋ ಅರಣ್ಯ ವಲಯದಲ್ಲಿ ೧.೭೫ ಲಕ್ಷ ಹೆಕ್ಟೇರ್ ಪ್ರದೇಶವನ್ನು ಕಾರ್ಪೋರೇಟ್ ಗಣಿ ಉದ್ಯಮಿಗಳಿಗೆ ನೀಡಿರುವ ಸರ್ಕಾರದ ನೀತಿಯ ವಿರುದ್ಧ, ೭೫೦೦ ಹೆಕ್ಟೇರ್ ಪ್ರದೇಶದಲ್ಲಿ ವಾಸಿಸುವ ಸಾವಿರಾರು ಆದಿವಾಸಿ ಕುಟುಂಬಗಳು ಇತ್ತೀಚೆಗೆ ತಾನೇ ೩೦೦ ಕಿಲೋಮೀಟರ್ ಪಾದಯಾತ್ರೆ ನಡೆಸುವ ಮೂಲಕ ಪ್ರತಿರೋಧ ವ್ಯಕ್ತಪಡಿಸಿವೆ.
ಈ ಸತ್ಯ-ಮಿಥ್ಯೆಗಳ ನಡುವೆಯೇ ಆದಿವಾಸಿ ಕಲ್ಯಾಣದ ಬಂಡವಾಳವನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುವ ಆಳುವ ವರ್ಗಗಳಿಗೆ ಜೈಭೀಮ್ ಚಿತ್ರದಲ್ಲಿ ಬಿಂಬಿಸಲಾಗಿರುವ ಇರುಳರ್ ಸಮುದಾಯದ ಒಂದು ಘಟನೆ ಮರ್ಮಾಘಾತದ ಹಾಗೆ ಅಪ್ಪಳಿಸಿದೆ. ಕಾರಣ, ಜೈ ಭೀಮ್ ಚಿತ್ರದಲ್ಲಿ ನಿರ್ದೇಶಕ ಜ್ಞಾನವೇಲ್ ನೈಜ ಘಟನೆಗಳನ್ನೇ ಆಧರಿಸಿ, ನ್ಯಾಯಾಂಗದ ಮೂಲಕ, ಹೇಬಿಯಸ್ ಕಾರ್ಪಸ್ ಅರ್ಜಿಯ ಮೂಲಕ ಅನ್ಯಾಯಕ್ಕೊಳಗಾದ ಆದಿವಾಸಿಗಳಿಗೆ ನ್ಯಾಯ ದೊರಕಿಸುವ ಒಂದು ಕಥಾ ಹಂದರವನ್ನು ಜನತೆಯ ಮುಂದಿರಿಸಿದ್ದಾರೆ. ವ್ಯವಸ್ಥೆಯ ಕ್ರೌರ್ಯ, ಪೊಲೀಸರ ದೌರ್ಜನ್ಯ ಮತ್ತು ಆದಿವಾಸಿಗಳ ದಿಟ್ಟ ಹೋರಾಟದ ಒಂದು ಕಥಾನಕವನ್ನು ಪರಿಣಾಮಕಾರಿಯಾಗಿ ಪರದೆಯ ಮೇಲೆ ಮೂಡಿಸುವ ಮೂಲಕ, ಜನಸಾಮಾನ್ಯರ ಜೀವನದಿಂದ, ಸಾರ್ವಜನಿಕ ಬದುಕಿನಿಂದ ದೂರವೇ ಇದ್ದ ಬುಡಕಟ್ಟು ಸಮುದಾಯಗಳ ದುಸ್ಥಿತಿಯನ್ನು ಜನರ ಮುಂದಿಡುವಲ್ಲಿ ಜ್ಞಾನವೇಲ್ ಯಶಸ್ವಿಯಾಗಿದ್ದಾರೆ. ಈಗ ಚಿತ್ರದತ್ತ ನೋಡೋಣ.
ಜೈ ಭೀಮ್ ನೀಡುತ್ತಿರುವ ಸ್ಪಷ್ಟ ಸಂದೇಶ
ಜೈ ಭೀಮ್ ಒಂದು ನೈಜ ಘಟನೆಯನ್ನಾಧರಿಸಿದ ಚಿತ್ರ. ೧೯೯೦ರ ದಶಕದಲ್ಲಿ ತಮಿಳುನಾಡಿನಲ್ಲಿ ನಡೆದ ಈ ಘಟನೆಯಲ್ಲಿ ನ್ಯಾಯಾಂಗದ ಮೇಲಿನ ವಿಶ್ವಾಸವನ್ನು ಇಮ್ಮಡಿಗೊಳಿಸುವ ರೀತಿಯಲ್ಲಿ ತುಳಿತಕ್ಕೊಳಗಾದ, ದಮನಿತ ಜನಸಮುದಾಯಗಳಿಗೆ ನ್ಯಾಯ ದೊರಕಿಸುವ ಪ್ರಯತ್ನ ಮಾಡುವುದು ಈಗ ನಿವೃತ್ತರಾಗಿರುವ ಹೈಕೋರ್ಟ್ ನ್ಯಾಯಮೂರ್ತಿ ಕೆ ಚಂದ್ರು. ಈ ಘಟನೆ ಸಂಭವಿಸಿದಾಗ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸುವ ಮೂಲಕ ಇರುಳರ್ ಸಮುದಾಯಕ್ಕೆ ನ್ಯಾಯ ದೊರಕಿಸಿದ ವಕೀಲರಾಗಿದ್ದವರು. ತಮ್ಮ ಎಡಪಂಥೀಯ ಆಲೋಚನಾ ಲಹರಿ ಹಾಗೂ ಸಮಾಜಮುಖಿ ಧೋರಣೆಯನ್ನು ವೃತ್ತಿ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ನ್ಯಾ ಚಂದ್ರು ವಕೀಲರಾಗಿ ಈ ಘಟನೆಗೆ ಒಂದು ತಿರುವು ನೀಡುತ್ತಾರೆ.
ತಾನು ಮಾಡದ ಕಳ್ಳತನದ ಆರೋಪಕ್ಕೆ ಸಿಲುಕಿ ಪೊಲೀಸರಿಂದ ಬಂಧನಕ್ಕೊಳಗಾಗುವ ರಾಜಕಣ್ಣು ಮತ್ತು ಅವನ ಸಹಚರರು ಪೊಲೀಸ್ ಠಾಣೆಯಲ್ಲಿ ಅನುಭವಿಸುವ ದೈಹಿಕ ಹಿಂಸೆ, ದೌರ್ಜನ್ಯ ಮತ್ತು ಈ ಅಮಾಯಕ ಆದಿವಾಸಿಗಳ ಮೇಲೆ ಪೊಲೀಸರು ನಡೆಸುವ ದೈಹಿಕ ಆಕ್ರಮಣ ನೋಡುಗರ ಎದೆನಡುಗಿಸುವುದು, ಆತನ ಪತ್ನಿ ಸೆಂಗಣಿ ಗರ್ಭಿಣಿಯಾಗಿದ್ದರೂ ಪೊಲೀಸರಿಂದ ಅನುಭವಿಸುವ ಚಿತ್ರಹಿಂಸೆ ಪ್ರೇಕ್ಷಕರ ಎದೆಗೆ ನಾಟುವಂತಿರುವುದು ಸಹಜವೇ. ಏಕೆಂದರೆ ಆಧುನಿಕ ಭಾರತದಲ್ಲಿ ಆತ್ಮನಿರ್ಭರತೆಯತ್ತ ಸಾಗುತ್ತಿರುವ ಒಂದು ಸ್ವಾಭಿಮಾನಿ ದೇಶದಲ್ಲಿ ಇಂತಹ ಕ್ರೌರ್ಯ ಇರಲಾರದು ಎಂಬ ಭ್ರಮೆಯಲ್ಲೇ ಇಡೀ ಭಾರತೀಯ ಸಮಾಜ ಬದುಕುತ್ತಿದೆ. ಈ ಚಿತ್ರದ ಪ್ರತಿಯೊಂದು ದೃಶ್ಯವೂ ನಾಗರಿಕತೆ ಇದ್ದವರನ್ನು ತಲೆತಗ್ಗಿಸುವಂತೆ ಮಾಡುತ್ತದೆ. ಪ್ರಜ್ಞಾವಂತರ ಮನಸ್ಸನ್ನು ಪ್ರಕ್ಷುಬ್ಧಗೊಳಿಸುತ್ತದೆ. ಕಾರಣ, ನಾವು ಸ್ವತಂತ್ರ ಭಾರತದ ಮತ್ತಾವುದೋ ಚಿತ್ರಣವನ್ನು ನಮ್ಮ ಮನಸುಗಳಲ್ಲಿ ಅಚ್ಚೊತ್ತಿಕೊಂಡಿದ್ದೇವೆ.
ಜೈ ಭೀಮ್ ಈ ಎಲ್ಲ ಭ್ರಮೆಗಳನ್ನು ಒಮ್ಮೆಲೆ ಕಳಚಿಬಿಡುತ್ತದೆ. ಆದಿವಾಸಿಗಳೆಂದರೆ, ಬುಡಕಟ್ಟು ಸಮುದಾಯಗಳೆಂದರೆ ನಾವು ಬದುಕುತ್ತಿರುವ ನಗರೀಕರಣಕ್ಕೊಳಗಾದ ಸುಶಿಕ್ಷಿತ ಹಿತವಲಯದ ಸಮಾಜದಿಂದ ಭಿನ್ನವಾಗಿರುವ ಒಂದು ಸಮಾಜ ಎಂಬ ಭಾವನೆಯಲ್ಲಿರುವ ಆಧುನಿಕ ಸಮಾಜವೂ ಸಹ ಬುಡಕಟ್ಟು ಸಮುದಾಯಗಳ ನಿತ್ಯ ಬದುಕಿನ ಸಮಸ್ಯೆಗಳನ್ನು, ಜೀವನೋಪಾಯದ ಸವಾಲುಗಳನ್ನು ಪರೀಯತೆಯ ದೃಷ್ಟಿಯಿಂದಲೇ ನೋಡುತ್ತದೆ. ಇಡೀ ಸಮಾಜವನ್ನೇ ಪ್ರತ್ಯೇಕಿಸಲಾಗಿ “ ಅವರುಗಳ ” ಸಮಸ್ಯೆಯಂತೆಯೇ ಆದಿವಾಸಿಗಳತ್ತ ನೋಡುತ್ತೇವೆ. ಐಷಾರಾಮಿ ಬದುಕಿನ ಶ್ರೀಮಂತ ವರ್ಗಗಳಿಗೆ ಆದಿವಾಸಿ ಹಾಡಿಗಳು ಮತ್ತು ಅವರ ಬದುಕು ಪ್ರಾಚೀನ ಪ್ರಾಕ್ತನಗಳಂತೆ ಕಂಡರೆ, ಮಧ್ಯಮ ವರ್ಗಗಳಿಗೆ ಈ ಜನರ ಬದುಕು ತಮ್ಮದೇ ಸಮಸ್ಯೆಗಳ ಮತ್ತೊಂದು ಆಯಾಮದಂತೆ ಮಾತ್ರವೇ ಕಾಣುತ್ತದೆ. ಈ ಕಲ್ಪನೆಗಳಿಂದಾಚೆಗೆ ಜೈ ಭೀಮ್ ನಮ್ಮನ್ನು, ಸ್ಥಾಪಿತ ವ್ಯವಸ್ಥೆಯ ಕ್ರೌರ್ಯಕ್ಕೆ ಸಿಲುಕಿ ನಲುಗುತ್ತಿರುವ ಒಂದು ಆದಿವಾಸಿ ಸಮುದಾಯದ ನಡುವೆ ನಿಲ್ಲಿಸಿಬಿಡುತ್ತದೆ. ಚಿತ್ರದಲ್ಲಿ ಬಿಂಬಿಸಿರುವ ಕ್ರೌರ್ಯವನ್ನು ನೋಡುವುದೇ ಕಷ್ಟ ಎಂದೆನಿಸುವುದು ಈ ಕಾರಣಕ್ಕಾಗಿಯೇ.
ಜೈ ಭೀಮ್ ಹೆಸರನ್ನು ಹೊತ್ತು ಅಂಬೇಡ್ಕರರ ಕನಸಿನ ಭಾರತದತ್ತ ನೋಡುವ ಈ ಚಿತ್ರ ಹಲವು ದೃಶ್ಯಗಳಲ್ಲಿನ ಕೆಂಬಾವುಟಗಳು, ಮಾರ್ಕ್ಸ್-ಲೆನಿನ್ ಪ್ರತಿಮೆಗಳ ಮೂಲಕ ಸಮತಾ ಸಮಾಜದ ಆಶಯಗಳತ್ತ ಸಹ ನೋಡುವಂತೆ ಮಾಡುತ್ತದೆ. ಇಲ್ಲಿ ಚಿತ್ರ ನಿರ್ದೇಶಕರು ಯಾವ ಸಿದ್ಧಾಂತವನ್ನು ಎತ್ತಿಹಿಡಿದಿದ್ದಾರೆ ಎಂಬ ಜಿಜ್ಞಾಸೆ ಸಹಜವಾಗಿಯೇ ಮೂಡಿದೆ. ಆದರೆ ಜೈ ಭೀಮ್ ದೌರ್ಜನ್ಯ, ತಾರತಮ್ಯ, ಶೋಷಣೆಗಳಿಲ್ಲದ ಒಂದು ಸಮ ಸಮಾಜದ ಕನಸಿಗೆ ಗರಿ ಮೂಡಿಸುತ್ತದೆ. ದೌರ್ಜನ್ಯಕ್ಕೊಳಗಾದ ಅವಕಾಶವಂಚಿತ ಸಮುದಾಯವೊಂದು ಕ್ರಾಂತಿಕಾರಿ ಘೋಷಣೆಗಳೊಂದಿಗೇ ಪ್ರಜಾತಂತ್ರ ವ್ಯವಸ್ಥೆಯ ಅಂಗಸಂಸ್ಥೆಗಳ ಮುಖಾಂತರವೇ ನ್ಯಾಯ ಗಳಿಸುವ ಸಾಧ್ಯತೆಗಳನ್ನು ಹೇಬಿಯಸ್ ಕಾರ್ಪಸ್ ಅರ್ಜಿಯ ಮೂಲಕ ಮೊಕದ್ದಮೆಯನ್ನು ನಿರ್ವಹಿಸುವ ವಕೀಲ ಚಂದ್ರು ನಿರೂಪಿಸುತ್ತಾರೆ.
ಕಳೆದ ಏಳು ವರ್ಷಗಳಲ್ಲಿ ನ್ಯಾಯಾಂಗ ವ್ಯವಸ್ಥೆಯ ಬಗ್ಗೆ ವಿಶ್ವಾಸ ಕುಂದುತ್ತಿರುವ ಸಂದರ್ಭದಲ್ಲಿ ಈ ಚಿತ್ರದ ದೃಶ್ಯಗಳು ಭರವಸೆಯ ಕಿಡಿಗಳನ್ನು ಹೊತ್ತಿಸುತ್ತವೆ. ಹಾಗೆಯೇ ನಮ್ಮ ನಡುವೆ ಜಾತಿ-ಗೀತಿ ಎಂಬುದಿಲ್ಲ ಎಂಬ ಭ್ರಮೆಯಲ್ಲಿ ಬದುಕುತ್ತಿರುವ ಆಧುನಿಕ ಮೇಲ್ವರ್ಗದ-ಸವರ್ಣೀಯರ ಸಮಾಜಕ್ಕೆ ವಾಸ್ತವದ ಪರಿಚಯವನ್ನೂ ಮಾಡಿಸುತ್ತದೆ. ಆರಂಭದ ದೃಶ್ಯದಲ್ಲೇ ಬಂಧಿತರನ್ನು ಜಾತಿಗನುಗುಣವಾಗಿ ವಿಂಗಡಿಸುವ ಮೂಲಕ ಮತ್ತು ಸಕಾರಣ ಇಲ್ಲದೆ ಹೋದರೆ ಒಬ್ಬೊಬ್ಬರ ಮೇಲೂ ಯಾವುದೋ ಒಂದು ಆರೋಪ ಹೊರಿಸಿ ಬಂಧಿಸಲು ಹಿರಿಯ ಅಧಿಕಾರಿಯೊಬ್ಬರು ಆದೇಶಿಸುವುದು ಪ್ರಸ್ತುತ ಸನ್ನಿವೇಶಕ್ಕೆ ಕನ್ನಡಿ ಹಿಡಿದಂತಿದೆ. ಇಂದಿಗೂ ಸಹ ಕೋಮು ಗಲಭೆಗಳ ಸಂದರ್ಭಗಳಲ್ಲಿ, ಭಯೋತ್ಪಾದಕ ದಾಳಿಗಳ ಸಂದರ್ಭಗಳಲ್ಲಿ ಅಮಾಯಕರನ್ನು ಹೀಗೆಯೇ ಬಂಧಿಸಲಾಗುತ್ತಿರುವುದು ಗುಟ್ಟಿನ ಮಾತೇನಲ್ಲ. ಈ ದೇಶದ ದಲಿತರು, ಆದಿವಾಸಿಗಳು ಮತ್ತು ಅಲ್ಪಸಂಖ್ಯಾತರು ಅನೇಕ ಸಂದರ್ಭಗಳಲ್ಲಿ ಇಂತಹುದೇ ಸನ್ನಿವೇಶಕ್ಕೆ ಮುಖಾಮುಖಿಯಾಗುತ್ತಿರುವುದನ್ನು ಸೂಚ್ಯವಾಗಿ ಹೇಳದೆ, ನೇರವಾಗಿಯೇ ಹೇಳಲಾಗಿದೆ.

ಭಾರತದಲ್ಲಿ ವ್ಯಕ್ತಿಯ ಅಸ್ತಿತ್ವ ಮತ್ತು ಅಸ್ಮಿತೆಯ ಆಧಾರವೇ ಜಾತಿ ಎನ್ನುವ ಅಂಬೇಡ್ಕರ್ ಅವರ ಮಾತುಗಳು ಇಲ್ಲಿ ಧ್ವನಿಸುತ್ತವೆ. ಅಪರಾಧ ಲೋಕಕ್ಕೂ ಇದು ಹೊರತಾದುದಲ್ಲ ಎನ್ನುವುದನ್ನು ಸ್ಪಷ್ಟವಾಗಿ ಹೇಳಲಾಗಿದೆ. ಅಸಹಾಯಕರ ಮೇಲೆ ಇಂದಿಗೂ ನಡೆಯುತ್ತಿರುವ ಪೊಲೀಸ್ ದೌರ್ಜನ್ಯಗಳನ್ನು ಜೈ ಭೀಮ್ ಪರಿಣಾಮಕಾರಿಯಾಗಿ ಬಿಂಬಿಸುತ್ತದೆ. ಇದನ್ನು ಅತಿರಂಜಿತವಾಗಿ ತೋರಿಸಲಾಗಿದೆ ಎಂಬ ಆಪಾದನೆಯನ್ನೂ ಮಾಡಲಾಗದಂತೆ ದೃಶ್ಯಗಳು ಚಿತ್ರೀಕರಿಸಲ್ಪಟ್ಟಿವೆ. ಪೊಲೀಸ್ ಇಲಾಖೆಯೂ ಸಹ ಪ್ರಾಮಾಣಿಕವಾಗಿ ಇದನ್ನು ನಿರಾಕರಿಸಲಾಗದೆ ಇರುವುದು ವಾಸ್ತವಕ್ಕೆ ಕನ್ನಡಿ ಹಿಡಿದಂತಾಗುತ್ತದೆ. ಭಾರತದ ಕಾರಾಗೃಹಗಳಲ್ಲಿ ಶೇ ೭೦ರಷ್ಟು ವಿಚಾರಣಾಧೀನ ಬಂಧಿಗಳಿರುವುದೇ ಇದಕ್ಕೆ ಸಾಕ್ಷಿ.
ನ್ಯಾಯಾಂಗ ಪ್ರಜಾತಂತ್ರ ವ್ಯವಸ್ಥೆಯ ಒಂದು ಆಧಾರ ಸ್ತಂಭ. ಸಾರ್ವಭೌಮ ಪ್ರಜೆಗಳಿಗೆ ಶಾಸಕಾಂಗ ಮತ್ತು ಕಾರ್ಯಾಂಗಗಳಿAದ ಯಾವುದೇ ರೀತಿಯ ಅನ್ಯಾಯ ಸಂಭವಿಸಿದರೂ ನ್ಯಾಯಾಂಗದ ಮೂಲಕ ಪರಿಹಾರ ಕಂಡುಕೊಳ್ಳಬಹುದಾದ ಆಯ್ಕೆಗಳಿರುತ್ತವೆ. ಭಾರತದ ನ್ಯಾಯ ವ್ಯವಸ್ಥೆ ಜನಸಾಮಾನ್ಯರ ಈ ವಿಶ್ವಾಸ ಮತ್ತು ನಂಬಿಕೆಯನ್ನು ಉಳಿಸಿಕೊಂಡೇ ಬಂದಿದೆ, ಇಂದಿಗೂ ಜೀವಂತವಾಗಿರಿಸಿದೆ. ಆದಾಗ್ಯೂ ಕಳೆದ ಏಳು ವರ್ಷಗಳ ಬೆಳವಣಿಗೆಗಳಿಂದ ಈ ವಿಶ್ವಾಸ ಕುಂದುತ್ತಿರುವುದೂ ಸ್ಪಷ್ಟವಾಗುತ್ತಿದೆ. ಸ್ಟಾö್ಯನ್ ಸ್ವಾಮಿಯವರ ಸಾವು ಒಂದು ಜ್ವಲಂತ ನಿದರ್ಶನ. ಪ್ರಜಾತಂತ್ರದಲ್ಲಿ ಜನತೆಯ ಹಕ್ಕುಗಳನ್ನು ರಕ್ಷಿಸುವ ನಿಟ್ಟಿನಲ್ಲಿ ನ್ಯಾಯಾಂಗ ನಿರ್ವಹಿಸಬೇಕಾದ ಮಹತ್ವದ ಪಾತ್ರವನ್ನು ಜೈಭೀಮ್ ಹೇಬಿಯಸ್ ಕಾರ್ಪಸ್ ಅರ್ಜಿಯ ವಿಚಾರಣೆಯ ಮೂಲಕ ತಿಳಿಸಿಕೊಡುತ್ತದೆ.
ಬೀದಿ ಹೋರಾಟಗಳಲ್ಲಿ, ಧರಣಿ ಸತ್ಯಾಗ್ರಹಗಳಲ್ಲಿ, ಕೆಂಬಾವುಟ ಹೊತ್ತ ಮುಷ್ಕರಗಳಲ್ಲಿ ಮಾರ್ಕ್ಸ್ ಪ್ರತಿಪಾದಿಸುವ ವರ್ಗ ಸಂಘರ್ಷ ಮತ್ತು ಕ್ರಾಂತಿಕಾರಿ ಹೋರಾಟಗಳ ಒಂದು ಆಯಾಮವನ್ನು ಪರಿಚಯಿಸುವ ಜೈ ಭೀಮ್ ನ್ಯಾಯಾಲಯದ ಆವರಣದೊಳಗೆ ಸಂಸದೀಯ ಪ್ರಜಾತಂತ್ರದ ಪ್ರಜಾಸತ್ತಾತ್ಮಕ ಆಯಾಮವನ್ನು ಪರಿಚಯಿಸಿ ಅಂಬೇಡ್ಕರ್‌ವಾದವನ್ನು ಎತ್ತಿಹಿಡಿಯುತ್ತದೆ. ನ್ಯಾಯಾಂಗ ಎನ್ನುವುದು ಜನಸಾಮಾನ್ಯರಿಂದ ಪ್ರತ್ಯೇಕವಾಗಿರಬೇಕಾದ ಒಂದು ಸಂಸ್ಥೆಯಲ್ಲ, ಅದು ಜನರ ನಡುವೆ ಇರಬೇಕಾದ ಒಂದು ಜಂಗಮ ಸ್ವರೂಪಿ ಸ್ಥಾವರ ಎಂದು ನಿರೂಪಿಸುವ ನಿಟ್ಟಿನಲ್ಲಿ ಚಿತ್ರದ ಕೆಲವು ದೃಶ್ಯಗಳನ್ನು ಕಾಣಬಹುದು. ನ್ಯಾಯಾಲಯದ ಕಲಾಪ ನಡೆಯುತ್ತಿರುವ ಸಂದರ್ಭದಲ್ಲೇ ಪುಟ್ಟ ಮಕ್ಕಳು ಅದೇ ಕೋಣೆಯಲ್ಲಿ ಬೆಂಚುಗಳ ನಡುವೆ ಮುಕ್ತವಾಗಿ ಓಡಾಡುತ್ತಿರುವ ದೃಶ್ಯ ಈ ಆಶಯವನ್ನೇ ಬಿಂಬಿಸುತ್ತದೆ. ನಿಜ ಜೀವನದಲ್ಲಿ ಇದು ಸಾಧ್ಯವೇ ಎಂಬ ಸಹಜ ಪ್ರಶ್ನೆಗೆ ಉತ್ತರ ನಾವೇ ಕಂಡುಕೊಳ್ಳಬೇಕಿದೆ.
ಜೈ ಭೀಮ್ ಚಿತ್ರದಲ್ಲಿ ಅಂಬೇಡ್ಕರ್ ಆರಂಭದಿಂದ ಅಂತ್ಯದವರೆಗೂ ಪ್ರತಿಯೊಂದು ದೃಶ್ಯದಲ್ಲೂ ಕಾಣುವುದು ವಿಶೇಷ. ಪ್ರತಿಮೆ, ಭಾವಚಿತ್ರಗಳಂತಹ ಭಾವನಾತ್ಮಕ ಚಿಹ್ನೆಗಳನ್ನು ಬದಿಗಿಟ್ಟು ಜೈ ಭೀಮ್ ನಿರ್ದೇಶಕರು ಪಾತ್ರಧಾರಿಗಳ ವರ್ತನೆಯಲ್ಲಿ, ಧೋರಣೆಯಲ್ಲಿ ಅಂಬೇಡ್ಕರರು ಪ್ರತಿಪಾದಿಸಿದ ಸ್ವಾಭಿಮಾನ, ಆತ್ಮಸ್ಥೈರ್ಯ ಮತ್ತು ಪ್ರಾತಿನಿಧಿತ್ವದ ಆಶಯಗಳನ್ನು ಬಿಂಬಿಸಲು ಯತ್ನಿಸುತ್ತಾರೆ. ಪೊಲೀಸರ ಅಮಾನುಷ ಚಿತ್ರಹಿಂಸೆಯ ಹೊರತಾಗಿಯೂ ತಾನು ಮಾಡದ ತಪ್ಪನ್ನು ಒಪ್ಪಿಕೊಳ್ಳಲು ನಿರಾಕರಿಸುವ ರಾಜಕಣ್ಣು ಮತ್ತು ಸಂಗಡಿಗರು ಸ್ವಾಭಿಮಾನ ಮತ್ತು ಆತ್ಮಬಲದ ಸಂಕೇತವಾದರೆ, ಪೊಲೀಸ್ ಕಮೀಷನರ್ ಒತ್ತಾಯಿಸಿದರೂ ರಾಜಿಗೆ ಒಪ್ಪದೆ ಹಣಕ್ಕಾಗಿ ನ್ಯಾಯ ಮಾರಿಕೊಳ್ಳಲು ನಿರಾಕರಿಸುವ ಸೆಂಗಣಿ ಮಹಿಳೆಯರ ಸ್ವಾಭಿಮಾನ ಮತ್ತು ಸ್ವಾಯತ್ತತೆಗೆ ಸಾಕ್ಷಿಯಾಗಿ ನಿಲ್ಲುತ್ತಾಳೆ. ಆಕೆಯನ್ನು ಮನೆಗೆ ತಲುಪಿಸುವಂತೆ ಪೊಲೀಸ್ ಉನ್ನತಾಧಿಕಾರಿ ಆದೇಶಿಸಿದರೂ ಜೀಪ್ ಹತ್ತದೆ ಬಸ್ಸಿನಲ್ಲೇ ಹೋಗುವ ಸೆಂಗಣಿ, ತನ್ನ ಹಕ್ಕುಗಳನ್ನು ಪ್ರತಿಪಾದಿಸುವ ಸಂದರ್ಭದಲ್ಲಿ ಯಾವುದೇ ರಾಜಿಗೊಳಗಾಗದ ದಿಟ್ಟ ಸ್ವಾಭಿಮಾನಿ ಮಹಿಳೆಯಾಗಿ ಕಾಣುತ್ತಾಳೆ. ಇಲ್ಲಿ ನಮಗೆ ಅಂಬೇಡ್ಕರರ ತಾತ್ವಿಕ ಸಾಮಾಜಿಕ ನ್ಯಾಯ ಮತ್ತು ಸಮಾನತೆಯ ಆಶಯಗಳು ಕಾಣುತ್ತವೆ.
ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸುವಾಗ ಸಹಿ ಮಾಡಲು ಬರದೆ ಹೆಬ್ಬೆಟ್ಟು ಹಾಕುವ ಸೆಂಗಣಿ ಈ ದೇಶದ ಅನಕ್ಷರಸ್ಥ ಜನಸಮುದಾಯಗಳ ಸಂಕೇತವಾಗಿ ಕಂಡರೆ, ಕೊನೆಯ ದೃಶ್ಯದಲ್ಲಿ ವಕೀಲ ಚಂದ್ರು ಎದುರಿನಲ್ಲೇ ಕುರ್ಚಿಯ ಮೇಲೆ ಕುಳಿತು, ಕಾಲು ಮೇಲೆ ಕಾಲು ಹಾಕಿ ಕುಳಿತು ಪೇಪರ್ ಓದುವ ಸೆಂಗಣಿಯ ಮಗಳು ಭವಿಷ್ಯದ ಪೀಳಿಗೆಯ ಆಶಾಕಿರಣದಂತೆ ಕಾಣುತ್ತಾಳೆ. ಈ ಸಂಕೇತಗಳ ಮೂಲಕವೇ ಜೈ ಭೀಮ್ ಅಂಬೇಡ್ಕರರನ್ನು ಬಿಂಬಿಸುತ್ತಾ ಹೋಗುತ್ತದೆ. ಸಾಮಾಜಿಕ ನ್ಯಾಯವನ್ನು ಸಾಂವಿಧಾನಿಕ ಮಾರ್ಗಗಳ ಮೂಲಕವೇ, ಶಾಂತಿಯುತವಾಗಿಯೇ ಸಾಧಿಸಬೇಕು ಎನ್ನುವ ಅಂಬೇಡ್ಕರರ ಧೋರಣೆಯೊಂದಿಗೇ, ಜನಾಂದೋಲನಗಳ ಮೂಲಕ ತಮ್ಮ ಹಕ್ಕೊತ್ತಾಯಗಳನ್ನು ಮಂಡಿಸಿ ಆಳುವವರ ಮೇಲೆ ಒತ್ತಡ ಹೇರುವ ಮಾರ್ಕ್ಸ್ವಾದಿ ಚಿಂತನೆಯ ಸಮ್ಮಿಲನವನ್ನು ಇಡೀ ಚಿತ್ರದುದ್ದಕ್ಕೂ ಕಾಣಬಹುದು. ಶಿಕ್ಷಣ-ಸಂಘಟನೆ-ಹೋರಾಟ ಈ ಘೋಷಣೆಯ ಛಾಯೆಯನ್ನು ಆರಂಭದಿAದ ಅಂತ್ಯದವರೆಗೂ ಕಾಣಬಹುದು. ಇದು ಜೈಭೀಮ್ ಚಿತ್ರದ ಯಶಸ್ಸಿಗೆ ಒಂದು ಮೂಲ ಕಾರಣ ಎಂದರೂ ಅತಿಶಯವೇನಲ್ಲ.
ಈ ಸಿನಿಮೀಯ ದೃಶ್ಯಾವಳಿಗಳು ಮತ್ತು ಮತ್ತು ನೈಜ ಕಥಾಹಂದರವನ್ನು ಬದಿಗಿಟ್ಟು ನೋಡಿದಾಗ ಜೈ ಭೀಮ್ ಏನು ಹೇಳುತ್ತದೆ ? ಇದು ನಮ್ಮನ್ನು ಪ್ರಕ್ಷÄಬ್ಧಗೊಳಿಸಬೇಕಾದ ಪ್ರಶ್ನೆ. ಜೈ ಭೀಮ್ ಮುಖ್ಯವಾಗಿ ಆದಿವಾಸಿ ಸಮುದಾಯಗಳ ಮೇಲೆ ನಮ್ಮ ಆಡಳಿತ ವ್ಯವಸ್ಥೆ ದೌರ್ಜನ್ಯಗಳನ್ನು ಒಂದು ಘಟನೆಯ ಮೂಲಕ ಬಿಂಬಿಸುತ್ತದೆ. ಇದು ನೈಜ ಘಟನೆಯಾಗಿರುವುದರಿಂದ ಚಿತ್ರದಲ್ಲಿನ ಸನ್ನಿವೇಶಗಳೂ ಆ ಘಟನೆಯ ಸುತ್ತಲೂ ಹರಡಿಕೊಂಡಿವೆ. ಆದರೆ ಬುಡಕಟ್ಟು ಸಮುದಾಯಗಳು ಎದುರಿಸುತ್ತಿರುವ ತಾರತಮ್ಯ ನೀತಿಗಳನ್ನು ಮತ್ತು ಪೊಲೀಸ್-ಕಾನೂನು ವ್ಯವಸ್ಥೆಯ ದೌರ್ಜನ್ಯವನ್ನು ಒಂದು ಹಾಡಿಯಲ್ಲಿ ಅಥವಾ ಒಂದು ಸಮುದಾಯದಲ್ಲಿ ಗುರುತಿಸುವುದು ಆತ್ಮವಂಚನೆಯಾಗುತ್ತದೆ. ದೇಶಾದ್ಯಂತ ಹರಡಿಕೊಂಡಿರುವ ಲಕ್ಷಾಂತರ ಕುಟುಂಬಗಳು ಇಂದು ಅಭಿವೃದ್ಧಿ ವಂಚಿತರಾಗಿರುವುದೇ ಅಲ್ಲದೆ, ಆಧುನಿಕ ಜಗತ್ತಿನ ಅಭಿವೃದ್ಧಿ ಪಥದಲ್ಲಿ ತಮ್ಮ ಮೂಲ ನೆಲೆಗಳನ್ನೂ ಕಳೆದುಕೊಳ್ಳುತ್ತಿದ್ದಾರೆ. ರಕ್ಷಿತ ಅರಣ್ಯ ಪ್ರದೇಶ, ವನ್ಯಜೀವಿ ಧಾಮ, ರಾಷ್ಟ್ರೀಯ ಉದ್ಯಾನಗಳು ಆದಿವಾಸಿ ಕುಟುಂಬಗಳನ್ನು ಅರಣ್ಯ ಪ್ರದೇಶದಿಂದ ಹೊರದಬ್ಬಿ ಅವರಿಗೆ ಪ್ರತ್ಯೇಕ ವಸತಿ ಸೌಲಭ್ಯಗಳನ್ನು ಕಲ್ಪಿಸಲಾಗುತ್ತದೆ.
ಅಮಾನುಷ ನೀತಿಗಳೂ ಅಸ್ಪಷ್ಟ ಹಾದಿಗಳೂ
ಈ ರೀತಿ ತಮ್ಮ ನೆಲೆ ಕಳೆದುಕೊಂಡ ಕುಟುಂಬಗಳಿಗೆ ಸೂಕ್ತ ವಸತಿ ಸೌಲಭ್ಯವನ್ನೂ ನೀಡದೆ, ಮೂಲ ಸೌಕರ್ಯಗಳನ್ನೂ ನೀಡದೆ ಬಸವಳಿಯುವಂತೆ ಮಾಡುವ ಆಡಳಿತ ವ್ಯವಸ್ಥೆಯ ಕ್ರೌರ್ಯವನ್ನು ಜೈ ಭೀಮ್ ಸೂಚ್ಯವಾಗಿ ಬಯಲಿಗೆಳೆದಿದೆ. ಮೈಸೂರು ಜಿಲ್ಲೆಯ ಹುಣಸೂರು, ಎಚ್‌ಡಿಕೋಟೆ ಮತ್ತು ಸರಗೂರು ತಾಲ್ಲೂಕುಗಳ ವ್ಯಾಪ್ತಿಗೆ ಬರುವ ೨೨೫ ಹಾಡಿಗಳಲ್ಲಿ ೮೦೦೦ ಆದಿವಾಸಿ ಕುಟುಂಬಗಳು ವಾಸಿಸುತ್ತಿದ್ದು ಇವುಗಳ ಪೈಕಿ ೩೦೦೦ ಕುಟುಂಬಗಳಿಗೆ ವಿದ್ಯುತ್ ಸಂಪರ್ಕವೇ ಇಲ್ಲ. ಇನ್ನು ೫೦೦೦ ಕುಟುಂಬಗಳಿಗೆ ವಿದ್ಯುತ್ ಬಿಲ್ ಪಾವತಿಸದ ಕಾರಣ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ. ಜೈ ಭೀಮ್ ಚಿತ್ರದಲ್ಲಿ ಬಿಂಬಿಸಿರುವ ೧೯೯೦ರ ದಶಕದ ಆದಿವಾಸಿ ಗುಡಿಸಲುಗಳ ಪರಿಸ್ಥಿತಿಯೇ ಇಂದಿಗೂ ಇರುವುದನ್ನು ಮನಗಾಣಬೇಕಲ್ಲವೇ ? ಇದು ದೇಶವ್ಯಾಪಿ ಸಮಸ್ಯೆ. ಒಕ್ಕಲೆಬ್ಬಿಸಲಾದ ಆದಿವಾಸಿಗಳ ಪುನರ್ವಸತಿ ಮತ್ತು ಪುನಶ್ಚೇತನದ ಯೋಜನೆಗಳು ಕೇವಲ ಹಾಳೆಗಳ ಮೇಲಷ್ಟೇ ಉಳಿದಿರುವುದು ವಾಸ್ತವ.
ಹಸಿರು ಅರಣ್ಯ ರಕ್ಷಣೆಗಾಗಿಯೇ ಆದಿವಾಸಿಗಳನ್ನು ಒಕ್ಕಲೆಬ್ಬಿಸಲಾದ ಆದಿವಾಸಿಗಳೊಂದಿಗೆ ಜಲವಿದ್ಯುತ್ ಯೋಜನೆಗಳು, ಅಣೆಕಟ್ಟುಗಳು, ವಿದ್ಯುತ್ ಸರಬರಾಜು ಮಾರ್ಗಗಳು ಮತ್ತು ಗಣಿಗಾರಿಕೆಯ ವತಿಯಿಂದ ತಮ್ಮ ನೆಲೆ ಕಳೆದುಕೊಳ್ಳುವ ಬುಡಕಟ್ಟು ಸಮುದಾಯಗಳ ಸಂಖ್ಯೆಯೂ ಭಾರತದಲ್ಲಿ ಹೆಚ್ಚಾಗುತ್ತಿದೆ. ಛತ್ತಿಸ್‌ಘಡ, ಜಾರ್ಖಂಡ್, ಒಡಿಷಾ, ರಾಜ್ಯಗಳಲ್ಲಿ ಇತ್ತ ಆಧುನಿಕ ನಗರ ಜೀವನಕ್ಕೂ ಅವಕಾಶ ಪಡೆಯದೆ ಅತ್ತ ತಮ್ಮ ಪಾರಂಪರಿಕ ಜೀವನಶೈಲಿಯನ್ನೂ ಕಳೆದುಕೊಂಡ ಲಕ್ಷಾಂತರ ಕುಟುಂಬಗಳು ಇಂದು ತ್ರಿಶಂಕು ಸ್ಥಿತಿ ಎದುರಿಸುತ್ತಿವೆ. ಈ ಪರಿಸ್ಥಿತಿಗೆ ಕಾರಣವಾಗಿರುವುದು ಭಾರತದ ಸರ್ಕಾರಗಳು ಅನುಸರಿಸುತ್ತಿರುವ ಬಂಡವಾಳಶಾಹಿ ಅಭಿವೃದ್ಧಿ ಮಾರ್ಗ ಮತ್ತು ಬಂಡವಾಳ ಹೂಡಿಕೆಯ ವಿಧಾನಗಳು. ಈ ಮೂರು ರಾಜ್ಯಗಳಲ್ಲೇ ಶೇ ೮೦ರಷ್ಟು ಉತ್ತಮ ಗುಣಮಟ್ಟದ ಕಬ್ಬಿಣದ ಅದಿರು, ಶೇ ೭೦ರಷ್ಟು ಕಲ್ಲಿದ್ದಲು, ಶೇ ೬೦ರಷ್ಟು ಬಾಕ್ಸೆöÊಟ್ ಮತ್ತು ಶೇ ೧೦೦ರಷ್ಟು ಕ್ರೋಮೈಟ್ ಖನಿಜಗಳಿವೆ. ಹಾಗಾಗಿಯೇ ಈ ರಾಜ್ಯಗಳಲ್ಲಿನ ಆದಿವಾಸಿಗಳ ಹೋರಾಟವೂ ನಿರಂತರವಾಗಿರುತ್ತದೆ. ಕಳೆದ ಐವತ್ತು ವರ್ಷಗಳಲ್ಲಿ ದೇಶಾದ್ಯಂತ ೫ ಕೋಟಿ ಜನರು ಅರಣ್ಯ ಪ್ರದೇಶಗಳಿಂದ ಒಕ್ಕಲೆಬ್ಬಿಸಲ್ಪಟ್ಟಿದ್ದಾರೆ. ಇವರ ಪೈಕಿ ಶೇ ೪೦ರಷ್ಟು ಬುಡಕಟ್ಟು ಸಮುದಾಯಗಳಿದ್ದು ಇಂದಿಗೂ ಅವಕಾಶವಂಚಿತರಾಗಿಯೇ ಮುಂದುವರೆಯುತ್ತಿವೆ.
ಜೈ ಭೀಮ್ ಮೂಲತಃ ಈ ಪ್ರಶ್ನೆಗಳನ್ನು ನಮ್ಮ ಮುಂದಿಡುತ್ತಿದೆ. ಪೊಲೀಸ್ ದೌರ್ಜನ್ಯವನ್ನು ಒಂದು ನ್ಯಾಯಾಂಗದ ತೀರ್ಪಿನ ಮೂಲಕ ಕೊನೆಗೊಳಿಸಲು ಸಾಧ್ಯ. ಆದರೆ ಒಕ್ಕಲೆಬ್ಬಿಸಲ್ಪಟ್ಟ ಆದಿವಾಸಿ ಕುಟುಂಬಗಳ ಜೀವನ ಮತ್ತು ಜೀವನೋಪಾಯದ ಪ್ರಶ್ನೆಗಳಿಗೆ ಸರ್ಕಾರಗಳೇ ಪರಿಹಾರ ಸೂಚಿಸಲು ಸಾಧ್ಯ. ಈ ನಿಟ್ಟಿನಲ್ಲಿ ಸರ್ಕಾರಗಳ ಅಸಡ್ಡೆ, ಅಲಕ್ಷö್ಯ ಮತ್ತು ನಿಷ್ಕಿçಯತೆ ಇರುವಷ್ಟೇ ಮಟ್ಟಿಗೆ ಜನಾಂದೋಲನಗಳ ಕೊರತೆಯೂ ಇರುವುದನ್ನು ಅಲ್ಲಗಳೆಯಲಾಗುವುದಿಲ್ಲ. ಬುಡಕಟ್ಟು ಸಮುದಾಯಗಳ ಸಮಸ್ಯೆಗಳನ್ನು ಕೈಗೆತ್ತಿಕೊಂಡು ಹೋರಾಡುವ ಸಶಸ್ತ್ರ ಹೋರಾಟಗಳು ಪ್ರಭುತ್ವದ ದೃಷ್ಟಿಯಲ್ಲಿ ಸಹಜವಾಗಿಯೇ ಸಮಾಜಘಾತುಕ ಎನಿಸಿಕೊಂಡು ನಿರಂತರ ದಮನಕ್ಕೊಳಗಾಗುತ್ತವೆ. ಬುಡಕಟ್ಟು ಸಮುದಾಯಗಳ, ಆದಿವಾಸಿ ಜನತೆಯ ಉತ್ತಮ ಜೀವನಕ್ಕಾಗಿ ಭಿನ್ನ ಸ್ವರೂಪದ ಹೋರಾಟಗಳ ಅಗತ್ಯತೆ ಇಂದು ಹೆಚ್ಚಾಗಿದೆ. ಆದರೆ ವಿಭಿನ್ನ ಧಾರೆಗಳಲ್ಲಿ ಹರಿದುಹಂಚಿಹೋಗಿರುವ ಜನಪರ ಚಳುವಳಿಗಳು, ಎಡಪಂಥೀಯ ಚಳುವಳಿಗಳು, ದಲಿತ ಸಂಘಟನೆಗಳು ಈ ನಿಟ್ಟಿನಲ್ಲಿ ಯೋಚಿಸುತ್ತಿವೆಯೇ ? ಜೈ ಭೀಮ್ ಇದನ್ನು ಯೋಚಿಸುವಂತೆ ಮಾಡುತ್ತದೆ.
ರಾಜಕಣ್ಣು ಮತ್ತು ಸೆಂಗಣಿ ಇಂದಿಗೂ ನಮ್ಮ ನಡುವೆ ಇದ್ದಾರೆ. (ನಿಜ ಜೀವನದ ಪಾರ್ವತಿ ಸಹ ಜೀವಂತವಾಗಿದ್ದಾರೆ) ೨೫ ವರ್ಷಗಳಿಗೂ ಮುನ್ನ ಈ ಅಮಾಯಕರು ಅನುಭವಿಸಿದ ಚಿತ್ರಹಿಂಸೆ ಮತ್ತು ಕ್ರೌರ್ಯ ಇಂದಿಗೂ ನಮ್ಮ ಪೊಲೀಸ್ ಠಾಣೆಗಳಲ್ಲಿ ಜೀವಂತವಾಗಿದೆ. ಚಿತ್ರದಲ್ಲಿ ಬಿಂಬಿಸಲಾಗಿರುವ ಕೆಂಬಾವುಟಗಳು, ಕೆಂಪು ಸಂದೇಶಗಳು, ಕ್ರಾಂತಿಕಾರಿ ಘೋಷಣೆಗಳು ಇನ್ನೂ ನಮ್ಮ ನಡುವೆ ಜೀವಂತವಾಗಿವೆ. ಅಮಾಯಕರನ್ನು ಯಾವುದೋ ಒಂದು ಅಪರಾಧಕ್ಕೆ ಸಿಲುಕಿಸಿ, ಸೆರೆಮನೆಗೆ ತಳ್ಳುವುದೇ ಅಲ್ಲದೆ ಕಾರಾಗೃಹದಲ್ಲಿ ಮನುಷ್ಯನ ಊಹೆಗೂ ನಿಲುಕದಂತಹ ಚಿತ್ರಹಿಂಸೆಯ ವಿಧಾನಗಳು ನಮ್ಮ ನಡುವೆ ಇಂದಿಗೂ ಜೀವಂತವಾಗಿದೆ. ಆರೋಪಿಗಳನ್ನೇ ಅಪರಾಧಿಗಳಂತೆ ಬಿಂಬಿಸುವ ಪ್ರಭುತ್ವ ಪೋಷಿತ ವಿದ್ಯುನ್ಮಾನ-ಮುದ್ರಣ-ಸಾಮಾಜಿಕ ಮಾಧ್ಯಮಗಳು ಇಕ್ಕೆಲಗಳಲ್ಲಿವೆ. ಶೇ ೭೦ರಷ್ಟು (೩,೩೫,೦೦೦) ವಿಚರಣಾಧೀನ ಬಂಧಿಗಳು ಕಾರಾಗೃಹಗಳಲ್ಲಿ ಶಿಕ್ಷಾರ್ಹರಂತೆ ಬದುಕು ಸವೆಸುತ್ತಿದ್ದಾರೆ.
ಇಷ್ಟರ ನಡುವೆ ಭಾರತದ ನ್ಯಾಯಾಂಗವೂ ತನ್ನ ಸೂಕ್ಷö್ಮತೆಯನ್ನು, ಸಂವೇದನೆಯನ್ನು ಪ್ರದರ್ಶಿಸುತ್ತಲೇ ಇದೆ. ಆದರೆ ಚಿತ್ರದಲ್ಲಿ ಸೆಂಗಣಿ ಪರವಾಗಿ ವಾದ ಮಾಡುವಂತಹ ಚಂದ್ರುವಿನಂತಹ ವಕೀಲರ ಸಂಖ್ಯೆ ಎಷ್ಟಿದೆ ? ಈ ಪ್ರಶ್ನೆ ನಮ್ಮನ್ನು ವಿಚಲಿತರನ್ನಾಗಿ ಮಾಡಿಬಿಡುತ್ತದೆ. ಇಂತಹ ವಕೀಲರು ಅಲ್ಪಸಂಖ್ಯೆಯಲ್ಲಿದ್ದರೂ ಪ್ರಭುತ್ವದ ಕ್ರೌರ್ಯ ಮತ್ತು ದಮನಕಾರಿ ಧೋರಣೆ ಅಂಥವರನ್ನೂ ನಿಷ್ಕ್ರಿಯರನ್ನಾಗಿ ಮಾಡಿಬಿಡುತ್ತದೆ. ಇಲ್ಲಿಯೂ ನ್ಯಾಯಾಂಗದ ಪಾತ್ರವೇ ಮಹತ್ವ ಪಡೆಯುತ್ತದೆ. ಸದ್ಯಕ್ಕೆ ಭಾರತದ ನ್ಯಾಯಾಂಗ ಈ ಜೀವಂತಿಕೆಯನ್ನು ಉಳಿಸಿಕೊಂಡಿರುವಂತೆ ಕಾಣುತ್ತದೆ. ಇತ್ತೀಚಿನ ಕೆಲವು ತೀರ್ಪುಗಳು ಈ ನಿಟ್ಟಿನಲ್ಲಿ ಆಶಾದಾಯಕವಾಗಿವೆ. ಬಡ ಜನತೆಯ, ಅನಕ್ಷರಸ್ಥರ, ಅವಕಾಶವಂಚಿತರ ಮತ್ತು ಶೋಷಿತ ಜನಸಮುದಾಯಗಳ ಹಕ್ಕೊತ್ತಾಯಗಳಿಗಾಗಿ ನಿರಂತರ ಹೋರಾಡುತ್ತಿರುವ ಲಕ್ಷಾಂತರ “ ಜನಪರ-ಪ್ರಗತಿಪರ-ಎಡಪಂಥೀಯ” ಚಳುವಳಿಗಳು ಇನ್ನೂ ಹೆಚ್ಚು ಸಕ್ರಿಯವಾಗಬೇಕಿದೆ. ಈ ಆಂದೋಲನಗಳ ಗರ್ಭದಿಂದಲೇ ನ್ಯಾ ಚಂದ್ರು ಅವರಂತಹ ವಕೀಲರು ಉದಯಿಸಲು ಸಾಧ್ಯ. ಜೈ ಭೀಮ್ ಚಿತ್ರದ ಆಶಯಗಳು ಈಡೇರಲು ಸಾಧ್ಯ.
ಜೈ ಭೀಮ್ ಚಿತ್ರದ ಈ ಸಂದೇಶವನ್ನು ಗ್ರಹಿಸದೆ ಹೋದರೆ ಈ ಚಿತ್ರವೂ ಮತ್ತೊಂದು ಆಸ್ಕರ್ ಪುರಸ್ಕೃತ ಪಟ್ಟಿಗೆ ಸೇರಿ ಇತಿಹಾಸದ ಒಂದು ಭಾಗವಾಗಿಬಿಡುತ್ತದೆ. ಸಿನಿಮಾಗಳಿಂದ ಸಮಾಜ ಪರಿವರ್ತನೆ ಸಾಧ್ಯವೋ ಇಲ್ಲವೋ ಎನ್ನುವುದಕ್ಕಿಂತಲೂ ಪರಿವರ್ತನೆಯ ಹಾದಿಯಲ್ಲಿರುವ ಸಾಧ್ಯಾಸಾಧ್ಯತೆಗಳನ್ನು ಬಿಂಬಿಸುವ ಇಂತಹ ಸಿನಿಮಾಗಳ ಸಾರ್ಥಕತೆ ಇರುವುದೇ ಇಲ್ಲಿ.