ರಾಜ್ಯಗಳ ಮತದಾರರ ಮೂಲಕ ಆಯ್ಕೆಯಾಗಿ ಸಂಸದರು ನವದೆಹಲಿಯಲ್ಲಿ ರಚಿಸುವ ಸರ್ಕಾರವನ್ನು ಏನೆಂದು ಕರೆಯುವುದು?
ಸೆಂಟ್ರಲ್ ಗವರ್ನ್‌ಮೆಂಟ್ (ಕೇಂದ್ರ ಸರ್ಕಾರ) ಎನ್ನಬೇಕೋ ಅಥವಾ ಯುನಿಯನ್ ಗವರ್ನ್‌ಮೆಂಟ್ (ಒಕ್ಕೂಟ ಸರ್ಕಾರ) ಎನ್ನಬೇಕೋ?
ಇಂಗ್ಲಿಷ್ ಮುದ್ರಣ ಮಾಧ್ಯಮಗಳು ಹೆಚ್ಚಾಗಿ ಯುನಿಯನ್ ಗವರ್ನ್‌ಮೆಂಟ್ (ಒಕ್ಕೂಟ ಸರ್ಕಾರ) ಪದ ಬಳಸಿದರೆ, ಪ್ರಾದೇಶಿಕ ಮಾಧ್ಯಮಗಳು (ಮುದ್ರಣ ಮತ್ತು ಟಿವಿ) ಕೇಂದ್ರ ಸರ್ಕಾರ ಪದವನ್ನು ಬಳಸುತ್ತವೆ.
ಪ್ರಾದೇಶಿಕ ಹಿತಾಸಕ್ತಿ ಕಾಪಾಡುವ ಒಕ್ಕೂಟ ಸರ್ಕಾರ ಪದವನ್ನು ಪ್ರಾದೇಶಿಕ ಮಾಧ್ಯಮಗಳೇ ಹೆಚ್ಚಾಗಿ ಬಳಸಬೇಕಿತ್ತು. ಆದರೆ ಕೇಂದ್ರ ಸರ್ಕಾರ ಪದವೇ ಹೆಚ್ಚು ಜನಪ್ರಿಯವಾಗಿದ್ದು ಅದೇ ಹೆಚ್ಚು ಬಳಕೆಯಲ್ಲಿದೆ. ಹೀಗಾಗಿ ಪ್ರಾದೇಶಿಕ ಮಾಧ್ಯಮಗಳು ಒಮ್ಮೇಲೆ ಕೇಂದ್ರ ಸರ್ಕಾರದ ಬದಲು ಒಕ್ಕೂಟ ಸರ್ಕಾರ ಎಂದು ಬಳಸತೊಡಗಿದರೆ ಬಹುಪಾಲು ಜನರಿಗೆ ಗೊಂದಲವೂ ಆಗಬಹುದು. ಕೆಲವರ ಪ್ರಕಾರ ಒಕ್ಕೂಟ ಸರ್ಕಾರ ಪದದ ಬಳಕೆ ಈಗಿನ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ನೆರವು ಆಗಬಹುದು. ಕೇಂದ್ರ ಸರ್ಕಾರ ಮೇಲಿಂದ ಮೇಲೆ ಎಸಗುತ್ತಿರುವ ತಪ್ಪುಗಳನ್ನು ತಿಳಿಸುವಾಗ ಒಕ್ಕೂಟ ಸರ್ಕಾರ ಎಂದು ಬಳಸಿದರೆ, ಜನಸಾಮಾನ್ಯರಲ್ಲಿ ಇದು ಮೋದಿ ಸರ್ಕಾರವಲ್ಲ ಬಿಡಿ ಎಂಬ ಭಾವವೂ ಬಂದು ಅದು ಸರ್ಕಾರಕ್ಕೆ ಅನುಕೂಲಕರ ಆಗಬಹುದು.
ಚರ್ಚೆ ಹುಟ್ಟು ಹಾಕಿದ ಡಿಎಂಕೆ ಸರ್ಕಾರ
ಸೆಂಟ್ರಲ್ (ಕೇಂದ್ರ) ಬಳಸುವುದು ಸರಿಯೋ ಅಥವಾ ಯುನಿಯನ್ ಬಳಸುವುದು ಸರಿಯೋ ಎಂಬ ಚರ್ಚೆ ಹಿಂದಿನಿಂದಲೂ ಇದೆ. ಆದರೆ ಅದು ಈಗ ಮತ್ತೆ ಮುನ್ನೆಲೆಗೆ ಬಂದಿದೆ.
ತಮಿಳುನಾಡಿನಲ್ಲಿ ಮೇನಲ್ಲಿ ಅಧಿಕಾರಕ್ಕೆ ಬಂದ ಡಿಎಂಕೆ ಸರ್ಕಾರವು, ಕೇಂದ್ರ ಸರ್ಕಾರ ಎಂಬ ಪದ ಬಳಕೆಯೇ ಪ್ರಾದೇಶಿಕ ಅಸ್ಮಿತೆಯನ್ನು ಅವಮಾನಿಸಿದಂತೆ. ರಾಜ್ಯಗಳೂ ಸೇರಿ ಆ ಸರ್ಕಾರ ರಚಿತವಾದ ಕಾರಣ ಅದನ್ನು ಯುನಿಯನ್ ಗವರ್ನ್‌ಮೆಂಟ್ ಅಂದರೆ ಒಕ್ಕೂಟ ಸರ್ಕಾರ ಎಂದು ಕರೆಯುವುದೇ ಸೂಕ್ತ ಎಂದು ವಿಧಾನಸಭಾ ಅಧಿವೇಶನದಲ್ಲಿ ನಿರ್ಣಯ ಅಂಗೀಕರಿಸಿದೆ.
ಆಗಿನಿಂದ ತಮಿಳುನಾಡು ಸರ್ಕಾರ ಒಕ್ಕೂಟ ಸರ್ಕಾರ (ತಮಿಳಿನಲ್ಲಿ ʼಒಂಡ್ರಿಯಾ ಅರಸುʼ) ಎಂಬ ಪದವನ್ನೇ ಬಳಸುತ್ತಿದೆ. ಮೋದಿ ನೇತೃತ್ವದ ಸರ್ಕಾರದ ಜೊತೆ ಪತ್ರ ವ್ಯವಹಾರ ಮಾಡುವಾಗ ಯುನಿಯನ್ ಗವರ್ನ್‌ಮೆಂಟ್ ಎಂದೇ ಸಂಭೋಧಿಸುತ್ತಿದೆ.

ತಜ್ಞರು ಹೇಳುವುದೇನು?
ರಾಜಕೀಯ ಚಿಂತಕ ಮತ್ತು ಸಂವಿಧಾನ ತಜ್ಞ ಪ್ರೊ.. ಮುಜಾಫರ್ ಅಸ್ಸಾದಿ ʼಪ್ರತಿಧ್ವನಿʼಗೆ ಪ್ರತಿಕ್ರಿಯಿಸುತ್ತ, ʼ ಯುನಿಯನ್ ಗವರ್ನ್‌ಮೆಂಟ್ʼ ಅಥವಾ ʼಒಕ್ಕೂಟ ಸರ್ಕಾರʼ ಪದವೇ ಸರಿಯಾದುದು. ಸಂವಿಧಾನದಲ್ಲಿ ಎಲ್ಲೂ ಕೇಂದ್ರ ಸರ್ಕಾರ ಅಂದರೆ ಸೆಂಟ್ರಲ್ ಗವರ್ನ್‌ಮೆಂಟ್ ಎಂಬ ಪದದ ಪ್ರಸ್ತಾಪವೇ ಇಲ್ಲ. ಸೆಂಟ್ರಲ್ ಗವರ್ನ್‌ಮೆಂಟ್ ಎಂಬುದು ಬ್ರಿಟಿಷ್ ವಸಾಹತುಶಾಹಿಯು ಬಳಸಿದ ಪದ. ನಮ್ಮ ಸಂವಿಧಾನದ ಪೀಠಿಕೆಯಲ್ಲೇ, ʼಭಾರತ ಅಂದರೆ ʼಯುನಿಯನ್ ಆಫ್ ಸ್ಟೇಟ್ಸ್ʼ ( ಭಾರತವು ರಾಜ್ಯಗಳ ಒಕ್ಕೂಟ) ಎಂದೇ ವಿವರಿಸಲಾಗಿದೆʼ ಎಂದರು.
ʼಕೇಂದ್ರ ಸರ್ಕಾರ ಎಂಬ ಪದ ಬಳಕೆಯು ರಾಜ್ಯಗಳು ಎರಡನೇ ದರ್ಜೆ ಎಂಬ ಭಾವನೆಗೆ ಕಾರಣವಾಗುತ್ತದೆ. ಇಲ್ಲಿ ಕೇಂದ್ರ ಮತ್ತು ರಾಜ್ಯಗಳಿಗೆ ಸಮಾನವಾದ ಪ್ರಾತಿನಿಧ್ಯ ಇರುವುದರಿಂದ ಯುನಿಯನ್ ಗವರ್ನ್‌ಮೆಂಟ್ ಅಥವಾ ಒಕ್ಕೂಟ ಸರ್ಕಾರ ಎಂದು ಕರೆಯುವುದೇ ಸರಿಯಾದ ಕ್ರಮʼ ಎಂದು ಪ್ರೊ.ಅಸ್ಸಾದಿ ವಿವರಿಸಿದರು.
ʼಬಳಕೆಯಲ್ಲಿ ಇಲ್ಲದ ʼಒಕ್ಕೂಟ ಸರ್ಕಾರʼ ಪದ ಬಳಕೆಯಿಂದ ಜನರಲ್ಲಿ ಗೊಂದಲ ಮೂಡಬಹುದೇ?ʼ ಎಂದು ʼಪ್ರತಿಧ್ವನಿʼ ಪ್ರಶ್ನಿಸಿದಾಗ, ʼಕೇಂದ್ರ ಸರ್ಕಾರ ಪದ ಜನಪ್ರಿಯ ಆಗಿರುವುದರಿಂದ ಅದು ಸಹಜ. ಹಾಗಂತ ನಮ್ಮ ಪ್ರಾದೇಶಿಕ ಅಸ್ಮಿತೆಯನ್ನು ಕೈ ಬಿಡಲಾಗದು. ಸ್ವಲ್ಪ ವರ್ಷಗಳ ಕಾಲ ಒಕ್ಕೂಟ ಸರ್ಕಾರ ಪದ ಬಳಸುವಾಗ ಆವರಣದಲ್ಲಿ ಕೇಂದ್ರ ಸರ್ಕಾರ ಪದ ಬಳಸಬೇಕು. ನಂತರ ಜನಸಾಮಾನ್ಯರು ಒಕ್ಕೂಟ ಎಂಬ ಪದದ ಮಹತ್ವ ಅರಿಯುತ್ತಾರೆ. ಶಾಲಾ ಪಠ್ಯಗಳಲ್ಲೂ ಈ ಪದದ ಬಳಕೆ ಇರಬೇಕುʼ ಎಂದು ಅವರು ಅಭಿಪ್ರಾಯ ಪಟ್ಟರು.
ಅನುಚ್ಛೇದ 1 ಮತ್ತು 19
ಸಂವಿಧಾನದ ಅನುಚ್ಛೇದ 1 ಮತ್ತು ಅನುಚ್ಛೇದ 19 ಯುನಿಯನ್ ಪದ ಬಳಕೆಯನ್ನು ಹಲವಾರು ಬಾರಿ ಪ್ರಸ್ತಾಪಿಸಿವೆ. ಅವು ಯುನಿಯನ್ ಆಫ್ ಸ್ಟೇಟ್ಸ್ ಪದ ಬಳಕೆಗೆ ಮತ್ತು ಅದನ್ನು ಬಳಸುವವರಿಗೆ ರಕ್ಷಣೆ ನೀಡಿವೆ.
ಬ್ರಿಟಿಷರು ಮೊದಲಿಗೆ ಕೇಂದ್ರ ಸರ್ಕಾರ ಪದವನ್ನು, ನಂತರದಲ್ಲಿ ಫೆಡರಲ್ ಸರ್ಕಾರ ಎಂಬ ಪದವನ್ನು ಬಳಸಿತು. 1946ರಲ್ಲಿ ರಚನೆಯಾದ ಸಮಿತಿಯೊಂದು ಸ್ವಾತಂತ್ರ್ಯದ ನಂತರ ಯುನಿಯನ್ ಆಫ್ ಸ್ಟೇಟ್ಸ್ ಪದ ಬಳಸಲು ನಿರ್ಧರಿಸಿತು. ನಮ್ಮ ಸಂವಿಧಾನ ಮಂಡಳಿಯು ಕೂಡ ಇದೇ ಪದವನ್ನು ಅನುಮೋದಿಸಿದೆ. ಹೀಗಾಗಿ ಸಂವಿಧಾನದಲ್ಲಿ ಎಲ್ಲೂ ಸೆಂಟ್ರಲ್ ಗವರ್ನ್‌ಮೆಂಟ್‌ಎಂಬ ಪದವೇ ಇಲ್ಲ.
ಒಟ್ಟಿನಲ್ಲಿ ಒಕ್ಕೂಟ ಸರ್ಕಾರ ಎಂಬ ಪದವನ್ನು ಪ್ರಾದೇಶಿಕ ಪದ ಬಳಕೆಯಲ್ಲಿ ಜನಪ್ರಿಯಗೊಳಿಸುವುಸದು ರಾಜ್ಯ ಸರ್ಕಾರಗಳ ಕೆಲಸವಾಗಬೇಕು ಅಲ್ಲವೇ?
