ಪ್ರಧಾನಿ ನರೇಂದ್ರ ಮೋದಿ ಜಿ-20 ಶೃಂಗಸಭೆಯ ಆಹ್ವಾನ ಪತ್ರದಲ್ಲಿ ರಿಪಬ್ಲಿಕ್ ಆಫ್ ಇಂಡಿಯಾ ಬದಲು ಭಾರತ್ ರಿಪಬ್ಲಿಕ್ ಎಂದು ಬಳಸುವ ಮೂಲಕ ಇಂಡಿಯಾ ಶಬ್ಧವನ್ನು ಕೈಬಿಡಲಾಗುತ್ತದೆ. ಭಾರತ್ ಮಾತ್ರ ಉಳಿಸಿಕೊಳ್ಳಲಾಗುತ್ತದೆ ಎನ್ನುವ ಚರ್ಚೆ ಶುರುವಾಗಿತ್ತು. ಭಾರತ ಹಾಗು ಇಂಡಿಯಾ ಎರಡೂ ಸಮಾನ ಗೌರವ ಹೊಂದಿರುವ ಹೆಸರುಗಳು, ಇದರಲ್ಲಿ ರಾಜಕೀಯ ಬೇಡ. ಕಾಂಗ್ರೆಸ್ ನೇತೃತ್ವದಲ್ಲಿ ವಿರೋಧ ಪಕ್ಷಗಳು ಒಕ್ಕೂಟ ರಚನೆ ಮಾಡಿಕೊಂಡು I.N.D.I.A ಎಂದು ನಾಮಕರಣ ಮಾಡಿರುವ ಕಾರಣದಿಂದಲೇ ಭಾರತ್ ಎನ್ನುವ ಹೆಸರಿಗೆ ಮೇಲ್ಪಂಕ್ತಿ ಹಾಕುತ್ತಾ ಇಂಡಿಯಾ ಎನ್ನುವ ಹೆಸರನ್ನು ಕೈಬಿಡುವ ಕೆಲಸ ಮಾಡಲಾಗ್ತಿದೆ. ಕಾಂಗ್ರೆಸ್ ನೇತೃತ್ವದ ಇಂಡಿಯಾ ಒಕ್ಕೂಟದ ಒಗ್ಗಟ್ಟಿನಿಂದ ಭಾರತೀಯ ಜನತಾ ಪಾರ್ಟಿ ಕಂಗಾಲಾಗಿರುವುದು ಕಾಣಿಸುತ್ತಿದೆ ಎಂದು ಕಾಂಗ್ರೆಸ್ ಟೀಕಿಸಿತ್ತು.
ದೇಶವನ್ನು ವಿಭಜನೆ ಮಾಡಲು ಬಿಜೆಪಿ ತಂತ್ರಗಾರಿಕೆ..!
ಭಾರತ – ಇಂಡಿಯಾ ಎನ್ನುವ ಹೆಸರಲ್ಲಿ ಬೇಧ ಭಾವ ಹುಡುಕುತ್ತಿರುವ ಬಿಜೆಪಿ ದೇಶವನ್ನು ವಿಭಜನೆ ಮಾಡಲು ಮೂಮದಾಗಿದೆ. ಮುಂದೊಂದು ದಿನ ಭಾರತವನ್ನು ವಿಭಜನೆಯ ಸಂಚು ಮಾಡಲಾಗಿದೆ ಎಂದು ಕಾಂಗ್ರೆಸ್ ಆರೋಪ ಮಾಡಿತ್ತು. ಆದರೆ ದೇಶವನ್ನು ವಿಭಜನೆ ಮಾಡುವ ಉದ್ದೇಶ ಭಾರತೀಯ ಜನತಾ ಪಾರ್ಟಿಗೆ ಇದೆಯೋ ಇಲ್ಲವೋ ಆದರೆ ಇಂಡಿಯಾವನ್ನು ವಿಭಜನೆ ಮಾಡುವ ತಂತ್ರಗಾರಿಕೆಯನ್ನು ಬಿಜೆಪಿ ಮಾಡಿದೆ ಎನ್ನುವುದು ಸ್ಪಷ್ಟವಾಗಿದೆ. ಜಿ-20 ಶೃಂಗಸಭೆಯಲ್ಲಿ ಭಾಗಿಯಾಗುತ್ತಲೇ ಬಿಜೆಪಿ ರಾಜಕೀಯ ಮಾಡಿದೆ ಎನ್ನುವುದು ಭಾನುವಾರ ಸಂಜೆ ರಾಷ್ಟ್ರಪತಿ ಭವನದಲ್ಲಿ ನಡೆದ ಔತಣಕೂಟದಲ್ಲಿ ಬಯಲಾಗಿದೆ. ರಾಷ್ಟ್ರ ಚಿಂತನೆ ಜೊತೆಗೆ ಪಕ್ಷದ ಬಗ್ಗೆಯೂ ಲೆಕ್ಕಾಚಾರ ಮಾಡಿದ್ದಾರೆ ಎನಿಸುತ್ತಿದೆ.
ಪ್ರತಿಪಕ್ಷದ ನಾಯಕನಿಗೆ ಆಹ್ವಾನ ಕೊಡದೆ ತಂತ್ರಗಾರಿಕೆ..!
ಜಿ-20 ಶೃಂಗಸಭೆಯಲ್ಲಿ ಅಧಿಕೃತ ವಿರೋಧ ಪಕ್ಷದ ನಾಯಕನಿಗೆ ಆಹ್ವಾನ ಕೊಡಬೇಕಿತ್ತು. ಲೋಕಸಭೆಯಲ್ಲಿ ಅಧಿಕೃತ ವಿರೋಧ ಪಕ್ಷದ ನಾಯಕರಿಲ್ಲ. ಆದರೆ ರಾಜ್ಯಸಭೆಯಲ್ಲಿ ಅಧಿಕೃತ ವಿರೋಧ ಪಕ್ಷದ ನಾಯಕರಿದ್ದಾರೆ. ಎಐಸಿಸಿ ಅಧ್ಯಕ್ಷರೂ ಆಗಿರುವ ಕರ್ನಾಟಕದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಕೇಂದ್ರ ಸರ್ಕಾರ ಆಹ್ವಾನಿಸಬೇಕಿತ್ತು. ಜಿ-20 ಶೃಂಗಸಭೆಯ ಕೆಲವೊಂದು ಕಾರ್ಯಕ್ರಮಗಳಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಪಾಲ್ಗೊಳ್ಳಬೇಕಿತ್ತು. ಕೇಂದ್ರ ಸರ್ಕಾರ ಖರ್ಗೆ ಅವರನ್ನು ಆಹ್ವಾನವನ್ನೇ ಮಾಡಿರಲಿಲ್ಲ. ಇದನ್ನು ಕಾಂಗ್ರೆಸ್ ಕಟುವಾಗಿ ಟೀಕಿಸಿತ್ತು. ಆದರೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರನ್ನು ಆಹ್ವಾನ ಮಾಡಿರಲಿಲ್ಲ. ಹಾಗಾಗಿ ಕಾಂಗ್ರೆಸ್ ಅಧ್ಯಕ್ಷರನ್ನು ಆಹ್ವಾನ ಮಾಡಿಲ್ಲ ಎಂದು ಕೇಂದ್ರ ತೇಪೆ ಹಾಕುವ ಪ್ರಯತ್ನ ಮಾಡಿದೆ.
ಆಹ್ವಾನದಲ್ಲಿ ಚಾಣಕ್ಷ್ಯತನ ಮೆರೆದ ಭಾರತೀಯ ಜನತಾ ಪಾರ್ಟಿ..!
ಇಂಡಿಯಾ ಒಕ್ಕೂಟದಲ್ಲಿ ಮುಂದಾಳು ಆಗಿರುವ ಕಾಂಗ್ರೆಸ್ ನಾಯಕರನ್ನು ಆಹ್ವಾನ ಮಾಡದ ಕೇಂದ್ರ ಬಿಜೆಪಿ, ಆಹ್ವಾನ ವಿಚಾರದಲ್ಲಿ ರಾಜಕೀಯ ಚಾಣಕ್ಷ್ಯತನ ಮೆರೆದಿದೆ. ಇಂಡಿಯಾ ಮೈತ್ರಿಕೂಟ ಭಾಗ ಆಗಿರುವ ಕೆಲವು ರಾಜ್ಯಗಳ ಮುಖ್ಯಮಂತ್ರಿಗಳನ್ನು ಕೇಂದ್ರ ಸರ್ಕಾರ ಆಹ್ವಾನ ಮಾಡಿತ್ತು. ಬಿಹಾರ ಸಿಎಂ ನಿತೀಶ್ ಕುಮಾರ್, ಜಾರ್ಖಂಡ್ ಸಿಎಂ ಹೇಮಂತ್ ಸುರೇನ್, ತಮಿಳುನಾಡು ಸಿಎಂ ಎಂ.ಕೆ ಸ್ಟಾಲಿನ್ ಅವರನ್ನು ರಾಷ್ಟ್ರಪತಿ ಅವರು ಆಯೋಜನೆ ಮಾಡಿದ್ದ ಔತಣಕೂಟಕ್ಕೆ ಆಹ್ವಾನ ಮಾಡಿತ್ತು. ನಿತೀಶ್ ಕುಮಾರ್ ಹಾಗು ಹೇಮಂತ್ ಸುರೇನ್ ಅವರನ್ನು ಸ್ವತಃ ಪ್ರಧಾನಿ ನರೇಂದ್ರ ಮೋದಿ ಅಮೆರಿಕ ಅಧ್ಯಕ್ಷ ಜೋ ಬೈಡನ್ಗೆ ಪರಿಚಯ ಮಾಡಿಸುವ ಮೂಲಕ ತಂತ್ರಗಾರಿಕೆ ಮೆರೆದಿದ್ದಾರೆ. ಮುಂದಿನ ದಿನಗಳಲ್ಲಿ ಇಂಡಿಯಾ ಒಕ್ಕೂಟದಲ್ಲಿ ಬಿರುಕು ಮೂಡಿಸಿ, ಬಿಜೆಪಿ ನೇತೃತ್ವದ ಒಕ್ಕೂಟಕ್ಕೆ ಸೆಳೆಯುವ ಮುನ್ಸೂಚನೆ ಕೊಟ್ಟಿದ್ದಾರೆ. ಇಂಡಿಯಾ ಇಬ್ಭಾಗ ಮಾಡದೆ ರಾಜಕೀಯ ಮಾಡಿದರೆ ಸಂಕಷ್ಟ ಎನ್ನುವುದನ್ನು ಬಿಜೆಪಿ ಈ ಮೂಲಕ ತೋರಿಸುತ್ತಿದೆ ಎನ್ನಬಹುದು.