• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, August 22, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ವಿಕಾಸದ ಹಾದಿಯ ಬಹುಮುಖಿ ಮಾಲಿನ್ಯಗಳು -4

ವಿಕಾಸದ ಹಾದಿ – ಸಂಘಟನಾತ್ಮಕ ಸವಾಲುಗಳು..ಭಾರತದ ವಿಕಾಸ ಪ್ರತಿಯೊಬ್ಬರ ಕನಸು ಆದರೆ ಸಾಗುವ ಹಾದಿಯ ಅಡ್ಡಗೋಡೆಗಳು ಹಲವು

ನಾ ದಿವಾಕರ by ನಾ ದಿವಾಕರ
August 22, 2026
in Top Story, ಅಂಕಣ, ದೇಶ, ರಾಜಕೀಯ, ವಿಶೇಷ
0
ವಿಕಾಸದ ಹಾದಿಯ ಬಹುಮುಖಿ ಮಾಲಿನ್ಯಗಳು -4
Share on WhatsAppShare on FacebookShare on Telegram

ವಸಾಹತು ದಾಸ್ಯದಿಂದ ವಿಮೋಚನೆ ಪಡೆದ ನೂರನೆಯ ವರ್ಷ ಯಾವುದೇ ದೇಶದ ಜನತೆಗಾದರೂ ಹೆಮ್ಮೆಯ ಗಳಿಗೆಯಾಗುತ್ತದೆ. ಈ ಶತಮಾನದ ಸಂದರ್ಭದಲ್ಲಿ ಭಾರತ ಏನಾಗಿರಬೇಕು ? ವಿಕಾಸ ಹೊಂದುವ ಮೂಲಕ ʼ ವಿಕಸಿತ ʼ ಆಗುವುದು ಬಿಜೆಪಿ ಮತ್ತು ಕೇಂದ್ರ ಸರ್ಕಾರದ ಆಕಾಂಕ್ಷೆ. ಇದು ಸ್ವೀಕಾರಾರ್ಹ ಗುರಿ ಎಂದೇ ಹೇಳಬಹುದು. ಆದರೆ ಈ ವಿಕಾಸದ ಅಂತಿಮ ತುದಿಯನ್ನು (Goal Post) ತಲುಪಬೇಕಾದರೆ, ಭಾರತದ ಜನತೆ ಸಾಗಬೇಕಾದ ಹಾದಿ ಹೇಗಿದೆ ? (ಹಿಂದಿನ ಮೂರು ಲೇಖನಗಳಲ್ಲಿ ಇದರ ಸ್ಥೂಲ ಚಿತ್ರಣವಿದೆ). ಈ ದುರ್ಗಮ ಹಾದಿಯಲ್ಲಿ ಕ್ರಮಿಸಲು ಹೆಗಲು ನೀಡಬೇಕಾಗಿರುವುದು ಯಾರು ? ಸಾಮಾನ್ಯ ಜನತೆಯೋ, ದುಡಿಯುವ ವರ್ಗಗಳೋ, ಕಾರ್ಪೋರೇಟ್ ಬಂಡವಾಳಿಗರೋ ಅಥವಾ ರಾಜಕೀಯ ಮಹತ್ವಾಕಾಂಕ್ಷಿ ಪಕ್ಷಗಳೋ ? ಈ ಜಿಜ್ಞಾಸೆಯ ನಡುವೆಯೇ ಅಂತಿಮ ವಿಕಾಸದ ಫಲಾನುಭವಿಗಳು ಯಾರಾಗಿರಬೇಕು ಎಂಬ ಪ್ರಶ್ನೆಯನ್ನೂ ಗಮನಿಸಬೇಕಿದೆ.

ADVERTISEMENT
B. Sriramulu : ನಾಗೇಂದ್ರ ರಾಜೀನಾಮೆ ಪಡೆದು ಬೇರೆಯವ್ರನ್ನ ಮಂತ್ರಿಮಾಡಲಿ..

ಮುಂದಿನ ಇಪ್ಪತ್ತು ವರ್ಷಗಳಲ್ಲಿ ಈ ದುರ್ಗಮ ಹಾದಿಯನ್ನು ಸುಗಮಗೊಳಿಸುವ ಜವಾಬ್ದಾರಿ ಸಮಾಜದ ಎಲ್ಲ ಸ್ತರಗಳಲ್ಲೂ ಹರಡಿರುವ ದುಡಿಯುವ ವರ್ಗಗಳ ಮೇಲಿದೆ. ಹಾಗೆಯೇ ಈ ವರ್ಗದ ಶ್ರೀಸಾಮಾನ್ಯರನ್ನು ಪ್ರತಿನಿಧಿಸುವ ಪಕ್ಷ-ಸಂಘ-ಸಂಸ್ಥೆಗಳ ಮೇಲಿದೆ. ಸಮುದಾಯ ಗುಂಪುಗಳ (Community Groups) ಮೇಲಿದೆ. ಇದು ಔಪಚಾರಿಕ ಅರ್ಥದ (Formal Meaning) ́ಸಂಘಟಿತ ಪ್ರಯತ್ನ́ (Organised Effort) ಮಾತ್ರವಾಗಲು ಸಾಧ್ಯವಿಲ್ಲ. ಅಥವಾ ವರ್ತಮಾನದಲ್ಲಿ ಭಾರತೀಯ ಸಮಾಜ ಕಾಣುತ್ತಿರುವ ವಿಘಟಿತ ಸಾಮಾಜಿಕ-ಸಾಂಸ್ಕೃತಿಕ ಸಾಂಘಿಕ ಪ್ರಯತ್ನಗಳಾಗಲೂ ಸಾಧ್ಯವಿಲ್ಲ. ಭ್ರಮೆಯೋ ಕನಸೋ 2047ರ ಸಂಭ್ರಮದ ಗಳಿಗೆಯನ್ನು ನಮ್ಮ ಸಾಮಾಜಿಕ ಪಿರಮಿಡ್ಡಿನ ಅಂತಿಮ ತಳಪಾಯದಲ್ಲಿರುವ ಕಟ್ಟಕಡೆಯ ವ್ಯಕ್ತಿಯೂ ಸಂಭ್ರಮಿಸುವಂತಾಗಬೇಕು. 1947ರಲ್ಲಿ ಸ್ವಾತಂತ್ರ್ಯವನ್ನು ಇದೇ ರೀತಿ ಸಂಭ್ರಮಿಸಲಾಗಿತ್ತು.

ನವಶತಮಾನ ಸವೆಸಿದ ಹಾದಿಯ ಗುರಿ
ನವ ಶತಮಾನದ ಮೊದಲ 25 ವರ್ಷಗಳ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ, ʼ ವಿಕಾಸಶೀಲ ʼ ನವ ಭಾರತದ ಅಂತಿಮ ವಿಕಾಸವನ್ನು ಅಳೆಯುವ ಮಾನದಂಡಗಳು ಭಿನ್ನವಾಗಿ ಕಾಣುತ್ತವೆ. ದೇಶದ ಸಕಲ ಸಂಪತ್ತನ್ನೂ ಬಂಡವಾಳಶಾಹಿ-ಮಾರುಕಟ್ಟೆಯ ನಿಯಂತ್ರಣಕ್ಕೊಪ್ಪಿಸಿ, ಜನತೆಯ ನಿತ್ಯ ಜೀವನೋಪಾಯದ ಮಾರ್ಗಗಳನ್ನು ಈ ಮಾರುಕಟ್ಟೆ ಶಕ್ತಿಗಳೇ ನಿರ್ಧರಿಸುವುದು ಆಳುವವರ ಗುರಿ. ಎಲ್ಲ ಸ್ತರಗಳ ಸಮಾಜದಲ್ಲಿ ಸುಗಮ ಜೀವನ ನಿರ್ವಹಣೆಗೆ ಬೇಕಾದ ಶಿಕ್ಷಣ, ಆರೋಗ್ಯ, ಮೂಲ ಸೌಕರ್ಯಗಳು ಹಾಗೂ ನಾಗರಿಕ ಸವಲತ್ತುಗಳನ್ನು ಒದಗಿಸುವ ಜವಾಬ್ದಾರಿ ಬಂಡವಾಳಿಗರಿಗೆ ವಹಿಸಲಾಗುತ್ತದೆ. ನಿಸರ್ಗ ಸಂಪನ್ಮೂಲಗಳು, ನೆಲ-ಜಲ-ಅರಣ್ಯ ಸಂಪತ್ತು ಹಾಗೂ ಭೂಗರ್ಭದಲ್ಲಿರುವ ಎಲ್ಲ ಖನಿಜ ಸಂಪತ್ತಿನ ಒಡೆತನವನ್ನು ಕಾರ್ಪೋರೇಟ್ ಮಾರುಕಟ್ಟೆಗೆ ಒಪ್ಪಿಸಲಾಗುತ್ತದೆ. ಇಲ್ಲಿ ಉತ್ಪಾದನೆಯಾಗಬಹುದಾದ ಲಾಭಾಂಶದ ಒಂದು ಭಾಗವನ್ನು ದುಡಿಯುವ ಜನತೆಗೆ ಹರಿದು ಹಂಚಲಾಗುತ್ತದೆ.

B. Sriramulu : ವಾಲ್ಮೀಕಿ ಹಗರಣದ ಹಣ ಎಲ್ಲೆಲ್ಲಿ ಹೋಗಿದೆ..? ಶ್ರೀರಾಮುಲು ಸ್ಫೋಟಕ ಮಾಹಿತಿ..!

ಈ ಪ್ರಕ್ರಿಯೆಯಲ್ಲಿ ಉಂಟಾಗುವ ಸಾಮಾಜಿಕ ಅಂತರ ಹಾಗೂ ಆರ್ಥಿಕ ಅಸಮಾನತೆಗಳನ್ನು ಅಭಿವೃದ್ಧಿಯ ಸಂಕೇತಗಳಾಗಿ ಪರಿಗಣಿಸಲಾಗುತ್ತದೆ. ನವ ಉದಾರವಾದ ಉತ್ತುಂಗದಲ್ಲಿರಬಹುದಾದ ಆ ಸಂದರ್ಭದಲ್ಲಿ ʼ ಅಭಿವೃದ್ಧಿ ಮತ್ತು ಪ್ರಗತಿ ʼ ಯ (Development & Progress) ಕಲ್ಪನೆಗಳೇ ಪಾರಂಪರಿಕ ಅರ್ಥವನ್ನು ಕಳೆದುಕೊಂಡು, ಭಾರತದ ಸಂವಿಧಾನ ಮತ್ತು ಪ್ರಜಾಪ್ರಭುತ್ವ ಗೌರವಿಸುವ ಸಮಸಮಾಜ-ಸಮಾನತೆಯ ಆಶಯಗಳು ಬಹುಮಟ್ಟಿಗೆ ಅಸ್ತಂಗತವಾಗಿರುತ್ತವೆ. ಗ್ರಾಂಥಿಕವಾಗಿ ಸಂವಿಧಾನ ಸುಸ್ಥಿತಿಯಲ್ಲೇ ಇದ್ದರೂ ಸಹ, ಈ ಪವಿತ್ರ ಗ್ರಂಥದ ಮೂಲ ಕನಸುಗಳು ಹೊಸ ಅರ್ಥಗಳನ್ನು ಪಡೆದುಕೊಂಡಿರುತ್ತವೆ. ಹಾಗಾಗಿ ಸಂವಿಧಾನವನ್ನು ರಕ್ಷಿಸಿದರೆ ದೇಶವನ್ನು ರಕ್ಷಿಸಿದಂತೆ ಎಂಬ ಉದಾತ್ತ ಘೋಷಣೆಯನ್ನೂ ದಾಟಿ ಹೊಸ ಆಲೋಚನಾ ವಿಧಾನಗಳನ್ನು ರೂಪಿಸಬೇಕಿದೆ.

ನಾಳೆಯ ಹೆಜ್ಜೆಗಳ ನಿಷ್ಕರ್ಷೆ
ಈ ನಿಟ್ಟಿನಲ್ಲಿ ನಮ್ಮ ಸಾಮಾಜಿಕ ಹೊಣೆಗಾರಿಕೆಯನ್ನು ಅರಿತು ಮುಂದಿನ ಹೆಜ್ಜೆಗಳನ್ನು ನಿರ್ಧರಿಸಬೇಕಿದೆ. ಈ ಪ್ರತಿಯೊಂದು ಹೆಜ್ಜೆಯಲ್ಲೂ, ಪ್ರತಿ ಗಳಿಗೆಯಲ್ಲೂ ಪ್ರಜಾಪ್ರಭುತ್ವೀಯ ಮೌಲ್ಯಗಳು (Democratic Values) ಜೀವಂತವಾಗಿರುವಂತೆ ಜಾಗ್ರತೆ ವಹಿಸುವುದು ನಮ್ಮ ಜವಾಬ್ದಾರಿ. ವರ್ತಮಾನದ ಸನ್ನಿವೇಶದಲ್ಲಿ ನಾವು ಅಂದರೆ ʼ ಭಾರತದ ಜನಗಳಾದ ನಾವು ʼ, ಈವರೆಗೂ ನಡೆದು ಬಂದ ಹಾದಿಯನ್ನು ಮತ್ತು ಅನುಸರಿಸಿದ ಮಾದರಿಗಳನ್ನು ಮರುವಿಮರ್ಶೆಗೊಳಪಡಿಸುವುದು ಅತ್ಯವಶ್ಯ. ಇದು ವ್ಯಕ್ತಿನಿಷ್ಠ (Subjective) ಪ್ರಶ್ನೆಯಲ್ಲ, ವಸ್ತುನಿಷ್ಠ (Objective) ಸವಾಲು. 2047ರ ವಿಕಸಿತ ಭಾರತದಲ್ಲಿ ನಾವು ಜೀವಂತವಾಗಿರಿಸಬೇಕಾದ ಅಂಶಗಳೆಂದರೆ ಪ್ರಜಾಪ್ರಭುತ್ಚ, ಸಮಾನತೆ, ಸಮನ್ವಯತೆ, ಬಹುತ್ವ ಮತ್ತು ಈ ನಾಲ್ಕೂ ಔದಾತ್ಯಗಳಿಗೆ ಅತ್ಯಗತ್ಯವಾದ ಪ್ರಾತಿನಿಧಿತ್ವ ಮತ್ತು ಸಹಭಾಗಿತ್ವ.

Priyank Kharge : ಈಗ ಮೋದಿ ಪಾಪ್ಯುಲಾರಿಟಿ ಕಡಿಮೆಯಾಗ್ತಿದೆ, ಅದರ ಬಗ್ಗೆ ಬಿಜೆಪಿಯವ್ರಿಗೆ ಆತಂಕ ಹೆಚ್ಚಿದೆ..

ಕಳೆದ 25 ವರ್ಷಗಳ ರಾಜಕೀಯ ಬೆಳವಣಿಗೆಗಳನ್ನು ನೋಡಿದರೆ ಯಾವ ರಾಜಕೀಯ ಪಕ್ಷಗಳಿಂದಲೂ ಈ ಉದಾತ್ತ ಗುರಿಯನ್ನು ನಿರೀಕ್ಷಿಸಲಾಗುವುದಿಲ್ಲ. ಸಂಸದೀಯ ಎಡಪಕ್ಷಗಳಾದ ಸಿಪಿಐ, ಸಿಪಿಎಂ, ಸಿಪಿಐ-ಎಂಎಲ್ ಲಿಬರೇಷನ್, ತಮ್ಮ ಪ್ರತ್ಯೇಕತಾಭಾವನೆ, ಮಡಿವಂತಿಕೆ ಮತ್ತು ಸೈದ್ಧಾಂತಿಕ ಶ್ರೇಷ್ಠತೆಯ ಹುಸಿ ಭಾವನೆಗಳನ್ನು ಬಿಟ್ಟು ಐಕತ್ಯೆಯ ಬಗ್ಗೆ ಯೋಚಿಸುವಂತಾದರೆ ಒಂದು ಬೆಳಕಿಂಡಿಯನ್ನು ನಿರೀಕ್ಷಿಸಬಹುದು. ಪ್ರಸಕ್ತ ಸನ್ನಿವೇಶದಲ್ಲಿ ಈ ಲಕ್ಷಣಗಳೇ ಕಾಣುತ್ತಿಲ್ಲ. ಹಾಗಾಗಿ 2047ರ ʼವಿಕಸಿತ ಭಾರತʼ ವನ್ನು ಸಂವಿಧಾನಬದ್ಧ ಪ್ರಜಾಪ್ರಭುತ್ವವಾಗಿ ರೂಪಿಸಬೇಕಾದರೆ, ನಾಗರಿಕ ಸಂಘಟನೆಗಳು(Civil Organisations), ಮಾನವ ಹಕ್ಕು ಗುಂಪುಗಳು (Human Right Groups) , ದಲಿತ ಸಂಘಟನೆಗಳು, ಕಾರ್ಮಿಕ ಸಂಘಗಳು (ಎಡಪಂಥೀಯರನ್ನೂ ಸೇರಿದಂತೆ), ಸ್ವಾಯತ್ತ ಮಹಿಳಾ ಚಳುವಳಿಗಳು (Autonomous Womensʼs movements) ಹಾಗೂ ಇನ್ನಿತರ ಪ್ರಜಾಸತ್ತಾತ್ಮಕ ಸಂಘಟನೆಗಳು ಕ್ರಿಯಾಶೀಲವಾಗಿ ಯೋಚಿಸಬೇಕಿದೆ.

ಮನ್ವಂತರದ ಹಾದಿಯ ಆದ್ಯತೆಗಳು
ಈ ಜವಾಬ್ದಾರಿಯನ್ನು ಅರಿತು ಮುನ್ನಡೆಯಬೇಕಾದರೆ, ಎಲ್ಲ ಸಂಘ-ಸಂಘಟನೆ-ಗುಂಪು-ಪಕ್ಷಗಳೂ ಕೆಲವು ಮೂಲಭೂತ ಬದಲಾವಣೆಗಳಿಗೆ ತೆರೆದುಕೊಳ್ಳಬೇಕಿದೆ. ಪ್ರಜಾಪ್ರಭುತ್ವೀಯ ಆಶಯಗಳನ್ನು ಇನ್ನೂ ಇಪ್ಪತ್ತು ವರ್ಷಗಳ ಕಾಲ ಉಳಿಸಿಕೊಂಡು ಸಂಭಾವ್ಯ ʼ ವಿಕಸಿತ ಭಾರತ ʼದಲ್ಲಿ ಸಾಕಾರಗೊಳಿಸಬೇಕಾದರೆ ತಮ್ಮ ಕಾರ್ಯವೈಖರಿ, ಸಾಂಘಿಕ ಸಂರಚನೆ, ಸಂಘಟನಾತ್ಮಕ ರೂಪ, ಸೈದ್ಧಾಂತಿಕ ನೆಲೆಗಳ ಮರುವಿಮರ್ಶೆ, ಪ್ರಜಾಪ್ರಭುತ್ವೀಯ ಮೌಲ್ಯಗಳ ಪುನರ್ಮನನ ಹಾಗೂ ಯುವ ಜನಾಂಗಕ್ಕೆ ಸ್ಪಂದಿಸುವ ದೃಷ್ಟಿಕೋನ ಈ ಎಲ್ಲ ಅಂಶಗಳನ್ನೂ ಮರುಸಂಪರ್ಕಿಸಬೇಕಾಗುತ್ತದೆ (Revisit). ಇಲ್ಲಿ ಅಡ್ಡಿಯಾಗಬಹುದಾದ ಸೈದ್ಧಾಂತಿಕ ಅಡೆತಡೆಗಳು ಸ್ವಯಂ ನಿರ್ಮಿತವಾಗಿದ್ದು ಸುಲಭವಾಗಿ ದಾಟಬಹುದು. ಆದರೆ ತೊಡಕಾಗುವುದು ನಾಯಕತ್ವಗಳ ಮಡಿವಂತಿಕೆ, ವ್ಯಕ್ತಿಗತ ಪ್ರತಿಷ್ಠೆ, ಮೇಲರಿಮೆ ಮತ್ತು ಸಂಕುಚಿತ ಮುನ್ನೋಟಗಳು. ಮತ್ತು ಪಕ್ಷ-ಸಂಘಗಳಲ್ಲಿ ಅಳವಡಿಸಿಕೊಂಡಿರುವ ಮೇಲಿನಿಂದ ನಿರ್ದೇಶಿಸುವ ವಿಧಾನಗಳು (Top Down Methods) .ಈ ಕೊರತೆಗಳನ್ನು ನಿವಾರಿಸಿಕೊಂಡು ಯೋಚಿಸುವುದಾದರೆ ಈ ಕೆಲವು ನಿರ್ಣಾಯಕ (Decisive) ತೀರ್ಮಾನಗಳನ್ನು ಕೈಗೊಳ್ಳಲೇಬೇಕಿದೆ.

Siddaramaiah : ಎಷ್ಟೋ ದಿನದ ನಂತರ ಮತ್ತೆ ರೊಚ್ಚಿಗೆದ್ದ ಸಿದ್ದರಾಮಯ್ಯ #pratidhvani

ನಾಯಕತ್ವ ಮತ್ತು ಅವಕಾಶ
ಸಂಘ-ಸಂಘಟನೆ-ಪಕ್ಷಗಳ ಸೈದ್ಧಾಂತಿಕ ತಳಹದಿ ಏನೇ ಇರಲಿ, ಅನುಕರಿಸುವ ತತ್ವಶಾಸ್ತ್ರೀಯ-ರಾಜಕೀಯ ಚಿಂತನಾಧಾರೆಗಳ ಜನಕರು ಯಾರೇ ಆಗಿರಲಿ, ನಮ್ಮ ಚಟುವಟಿಕೆಗಳು ನಿರ್ಧಾರವಾಗುವುದು ವರ್ತಮಾನದ ಸಮಾಜದಿಂದ ಹಾಗೂ ಸಾಮಾಜಿಕ ಸಮಸ್ಯೆಗಳ ಚೌಕಟ್ಟಿನಲ್ಲಿ. ಈ ಸಮಸ್ಯೆಗಳ ನಿವಾರಣೆಗಾಗಿ ಹಮ್ಮಿಕೊಳ್ಳಲಾಗುವ ಪ್ರತಿಭಟನೆ, ಹೋರಾಟ, ಆಂದೋಲನಗಳ ಭಾಗಿದಾರರು (Stakeholders) ಯಾರು? ಅಂತಿಮ ಯಶಸ್ಸಿನ ಫಲಾನುಭವಿಗಳು (Beneficiaries) , ವೈಫಲ್ಯದ ಬಾಧಿತರು (Affected) ಯಾರು ? ಯಾವ ರೀತಿಯ ಸಮಸ್ಯೆಯಾದರೂ ಹೋರಾಟದ ಹಾದಿಯಲ್ಲಿ ನಿರ್ಣಾಯಕವಾಗುವುದು ಈ ಎರಡು ಅಂಶಗಳು. ಹಾಗಾಗಿ ಇಲ್ಲಿ ನಾಯಕತ್ವದ ಪ್ರಶ್ನೆ ಮುಖ್ಯವಾಗುತ್ತದೆ. ಯುವ ಜನಾಂಗ ನಾಯಕತ್ವದ ಅವಕಾಶಗಳಿಗಾಗಿ ಬಾಯ್ದೆರೆದು ನಿಂತಿರುವುದಿಲ್ಲ, ಹಿರಿಯ ತಲೆಗಳನ್ನು ವಿಶ್ವಾಸಪೂರ್ವಕವಾಗಿ ಹಿಂಬಾಲಿಸುತ್ತವೆ.

ಹಾಗೆಂದ ಮಾತ್ರಕ್ಕೆ ಯುವಜನರಲ್ಲಿ ನಾಯಕತ್ವದ ಅಪೇಕ್ಷೆಯಾಗಲೀ, ಗುಣಗಳಾಗಲೀ ಇರುವುದಿಲ್ಲ ಎಂದರ್ಥವಲ್ಲ. ಅಥವಾ ಮುಂದಾಳತ್ವ ವಹಿಸಲು ಹಿರಿಯ ಪೀಳಿಗೆ ಮಾತ್ರವೇ ಸಮರ್ಥ ಎಂದೂ ಹೇಳಲಾಗುವುದಿಲ್ಲ. ನಿರಂತರ ಸಮಸ್ಯೆಗಳನ್ನು ಎದುರಿಸುತ್ತಿರುವ ಸಮಾಜದಲ್ಲಿ ಬಹುಸಂಖ್ಯಾತರಾಗಿರುವ ಯುವ ಜನಾಂಗ ತನ್ನ ದನಿಯನ್ನು ದಾಖಲಿಸಲು ಉತ್ಸುಕವಾಗಿರುತ್ತದೆ. ಈ ಅವಕಾಶವನ್ನು ಕಲ್ಪಿಸುವುದು ಯಾವುದೇ ಪಕ್ಷ-ಸಂಘಟನೆಯ ಪ್ರಥಮ ಆದ್ಯತೆಯಾಗಬೇಕು. ಇಲ್ಲವಾದಲ್ಲಿ ಯುವ ತಲೆಮಾರು ಹೋರಾಟಗಳಿಗೇ ವಿಮುಖವಾಗುವ ಅಥವಾ ಭಿನ್ನ ಮಾರ್ಗಗಳನ್ನು ಅರಸುವ ಸಾಧ್ಯತೆಗಳು ಹೆಚ್ಚು. ತಮ್ಮ ಅಭಿಪ್ರಾಯ/ಅನಿಸಿಕೆ/ಭಿನ್ನಾಭಿಪ್ರಾಯಗಳನ್ನು ದಾಖಲಿಸುವ ಅವಕಾಶವನ್ನು ಕಲ್ಪಿಸುವ ಮೂಲಕ ಸಂಘಟನೆಗಳು/ಪಕ್ಷಗಳು ಆಂತರಿಕ ಪ್ರಜಾಪ್ರಭುತ್ವದ ಮೊದಲ ಪಾಠವನ್ನು ಅಳವಡಿಸಿಕೊಳ್ಳಬೇಕು.

Assembly session: ನಾಗೇಂದ್ರ ವಜಾಗೆ ಆಗ್ರಹಿಸಿ ಕಲಾಪದಲ್ಲಿ 5ನೇ ದಿನವೂ ವಿಪಕ್ಷ ಪ್ರತಿಭಟನೆ  #pratidhvani

ಎರಡನೆಯದಾಗಿ ಅನುಭವಿ ಹಿರಿಯ ನಾಯಕರು ಕಿರಿಯವರೊಡನೆ ತಾವು ಸಂಪಾದಿಸಿರುವ ಜ್ಞಾನ ಹಂಚುವುದಕ್ಕಿಂತಲೂ ಹೆಚ್ಚಾಗಿ, ಅವರ ಅನುಭವ/ಅನಿಸಿಕೆಗಳಿಗೆ ಅವಕಾಶ ಕಲ್ಪಿಸಿ ಅರಿವು ಹಂಚಿಕೊಳ್ಳಲು ಮುಂದಾಗಬೇಕು. ಕಳೆದ ಐದಾರು ದಶಕಗಳಿಂದಲೂ ಎಲ್ಲ ಸಂಘಟನೆಗಳಲ್ಲೂ ಗುರುತಿಸಬಹುದಾದ ಸಮಾನ ಎಳೆ ಎಂದರೆ, ವಿಚಾರ ಸಂಕಿರಣಗಳ ಮೂಲಕ ಹಿರಿಯರ ಜ್ಞಾನ ಸಂಪತ್ತನ್ನು ಕಿರಿಯರಿಗೆ ವರ್ಗಾಯಿಸುವ ವಿಧಾನ. ಇದು ಅಗತ್ಯವೇ ಹೌದಾದರೂ, ಯುವ ಪೀಳಿಗೆಗೆ ತನ್ನದೇ ಆದ ನೈಜ ಅನುಭವಗಳನ್ನು ಸಾರ್ವಜನಿಕವಾಗಿ ಹಂಚಿಕೊಳ್ಳುವ ತನ್ಮೂಲಕ ಅರಿವು ಹೆಚ್ಚಿಸಿಕೊಳ್ಳುವ ಅವಕಾಶವೇ ಇಲ್ಲಿ ದೊರೆಯುವುದಿಲ್ಲ. ಈ ಸೆಮಿನಾರ್ ಸಂಸ್ಕೃತಿಯ ಯುಗ ಮುಗಿದಿದೆ. ಯುವ ಸಮೂಹಕ್ಕೆ ಅಭಿವ್ಯಕ್ತಿಯ ಅವಕಾಶಗಳನ್ನು ಹೆಚ್ಚು ಕಲ್ಪಿಸಬೇಕಿದೆ.

ಈ ಹಾದಿಯಲ್ಲೇ ಮುಂದುವರೆಯುವುದಾದರೆ, ಪಕ್ಷ-ಸಂಘಟನೆಗಳಲ್ಲಿ ಯುವ ಸಮೂಹಕ್ಕೆ ನಾಯಕತ್ವದ ಅವಕಾಶಗಳನ್ನು ಕಲ್ಪಿಸಬೇಕಿದೆ. ಅವರ ಹೆಜ್ಜೆಗಳಲ್ಲಿ ತಪ್ಪಾಗದಂತೆ ಎಚ್ಚರ ವಹಿಸಿ ಹಿರಿಯ ತಲೆಮಾರು ಬೆಂಗಾವಲಾಗಿ, ಮಾರ್ಗದರ್ಶಕರಾಗಿ, ಜೊತೆಗಾರರಾಗಿ ನಿಲ್ಲಬೇಕಿದೆ. ಯುವ ಜನಾಂಗದಿಂದ ಆಯ್ಕೆ ಮಾಡುವ ಸಂದರ್ಭದಲ್ಲಿ ಯಾವುದೇ ಸೈದ್ಧಾಂತಿಕ/ತಾತ್ವಿಕ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಅನುಸರಿಸದೆ, ಅವರಲ್ಲಿ ಸಿದ್ದಾಂತದ ಅರಿವು ಮೂಡಿಸುವ ನಿಟ್ಟಿನಲ್ಲಿ ಕಾರ್ಯಾಗಾರಗಳನ್ನು ನಡೆಸಬೇಕಾಗುತ್ತದೆ. ಇಲ್ಲಿ ಅತ್ಯವಶ್ಯವಾದ ಪ್ರಾತಿನಿಧಿತ್ವವನ್ನು (ಮಹಿಳೆ, ಅಲ್ಪಸಂಖ್ಯಾತ, ದಲಿತ ಇತ್ಯಾದಿ) ಕಲ್ಪಿಸುವುದು ಪಕ್ಷ/ಸಂಘಟನೆಗಳ ಸಾಂವಿಧಾನಿಕ/ನೈತಿಕ ಆದ್ಯತೆಯಾಗಬೇಕಾಗುತ್ತದೆ. ಸ್ಥಾಪಿತ ಸಂಘಟನೆಗಳಲ್ಲಿ ಈ ಅವಕಾಶಗಳು ಇಲ್ಲದಿರುವುದರಿಂದಲೇ ಜೆನ್ಝೀ ಮಕ್ಕಳು ತಮ್ಮದೇ ಆದ ಹೋರಾಟದ ವಿಧಾನಗಳನ್ನು ಕಂಡುಕೊಳ್ಳುತ್ತಿದ್ದಾರೆ.

BK Hariprasad on bjp: ಬೆತ್ತಲೆ ನಗರದಲ್ಲಿ ಬಟ್ಟೆ ಹಾಕಿಕೊಂಡೋನೆ ಅಪರಾಧಿ ಎಂಬಂತೆ ದೇವರಾಜ ಅರಸು ಸ್ಥಿತಿ ಯಾಗಿತ್ತು.!

ಪ್ರಾತಿನಿಧಿತ್ವದ ಅವಕಾಶಗಳು
ಸ್ವತಂತ್ರ ಭಾರತ 80ನೆಯ ವರ್ಷಕ್ಕೆ ಪ್ರವೇಶಿಸಿದ್ದರೂ, ಜಗತ್ತಿನ ಎಲ್ಲ ಉನ್ನತ ಸಿದ್ದಾಂತಗಳನ್ನು ತನ್ನೊಳಗೆ ಅಡಗಿಸಿಕೊಂಡಿದ್ದರೂ ಈವರೆಗೂ ಕಲಿಯದೆ ಇರುವ ಒಂದು ಪಾಠ ಎಂದರೆ ಸಂಘ/ಸಂಘಟನೆ/ಪಕ್ಷಗಳಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯವನ್ನು ಕಲ್ಪಿಸುವುದು. ಶಾಸನ ಸಭೆಗಳಲ್ಲಿ 33% ಮೀಸಲಾತಿಗಾಗಿ ದೇಶವ್ಯಾಪಿಯಾಗಿ ಎಲ್ಲ ಬಣ್ಣಗಳ ಸಂಘಟನೆ-ಪಕ್ಷಗಳೂ ಹೋರಾಡುತ್ತಿದ್ದರೂ, ಢಾಳಾಗಿ ಕಾಣುವ ವಾಸ್ತವ ಎಂದರೆ ಯಾವ ಗುಂಪಿನಲ್ಲೂ ಸಹ ಮಹಿಳಾ ಪ್ರಾತಿನಿಧ್ಯಕ್ಕೆ ಹೆಚ್ಚಿನ ಆದ್ಯತೆ ನೀಡದಿರುವುದು. ಕಮ್ಯುನಿಸ್ಟ್ ಪಕ್ಷಗಳು, ದಲಿತ ಚಳುವಳಿಗಳು, ಸಾಂಸ್ಕೃತಿಕ ಸಂಸ್ಥೆಗಳು, ನಾಗರಿಕ ಸಮಾಜದ ಸಂಘಟನೆಗಳಲ್ಲೂ ಸಹ ಮಹಿಳಾ ಪ್ರಾತಿನಿಧ್ಯ, ಪುರುಷ ನಾಯಕತ್ವದಿಂದ ಕೊಡಲ್ಪಡುವ ವಿದ್ಯಮಾನವೇ ಆಗಿದೆ. ಸಂಘಟಿತ ಕಾರ್ಮಿಕ ಚಳುವಳಿಗಳಲ್ಲಿ, ವೈಟ್ಕಾಲರ್ ಸಂಘಗಳಲ್ಲಿ ಸಹ ಇದೇ ಪರಿಸ್ಥಿತಿ ಇದೆ.

ಇದೇ ವೈರುಧ್ಯವನ್ನು ಸಾಮಾಜಿಕ ಸುಧಾರಣೆಯ ಹಾದಿಯಲ್ಲಿ ಪ್ರಧಾನ ಪಾತ್ರ ವಹಿಸುವ ಸಾಹಿತ್ಯ, ಕಲೆ, ರಂಗಭೂಮಿ ಇತ್ಯಾದಿ ಸಂಸ್ಥೆಗಳಲ್ಲೂ ಗುರುತಿಸಬಹುದು. ಸಾಹಿತ್ಯ ಪರಿಷತ್ತು, ಸಾಹಿತ್ಯ ಮತ್ತಿತರ ಹತ್ತಾರು ಅಕಾಡೆಮಿಗಳು, ವಿಶ್ವವಿದ್ಯಾಲಯಗಳ ಸಂಶೋಧನಾ-ಅಧ್ಯಯನ ಕೇಂದ್ರಗಳು ಎಲ್ಲ ವಲಯಗಳಲ್ಲೂ ಮಹಿಳಾ ಪ್ರಾತಿನಿಧ್ಯವನ್ನು ಕಡೆಗಣಿಸುತ್ತಲೇ ಬರಲಾಗಿದೆ. ಮೇಲ್ಮಟ್ಟದ ಹುದ್ದೆಗಳಲ್ಲಿ ಮಹಿಳಾ ಉಪಸ್ಥಿತಿ ಕಂಡುಬಂದರೂ, ನಿರ್ಣಾಯಕ ಸ್ಥಾನಗಳಲ್ಲಿ, ಅಧ್ಯಕ್ಷಗಿರಿಯಲ್ಲಿ ಮಹಿಳೆಯರನ್ನು ಅಪರೂಪವಾಗಿ ಕಾಣುತ್ತೇವೆ. 110 ವರ್ಷಗಳ ಇತಿಹಾಸ ಇರುವ ಕನ್ನಡ ಸಾಹಿತ್ಯ ಪರಿಷತ್ತಿಗೆ ಚುನಾವಣೆಗಳು ನಡೆಯಲಿವೆ. ಮುಂಬರುವ ಅಧ್ಯಕ್ಷ ಗಾದಿಗೆ ಕರ್ನಾಟಕದ ಪ್ರಗತಿಪರ ಸಾಹಿತಿ-ಸಂಘಟನೆಗಳ ಪರವಾಗಿ ಪ್ರಸ್ತಾಪಿಸಿರುವುದು ಪುರುಷರನ್ನೇ. ಏಕೆ ಪ್ರಗತಿಪರರ ಕಣ್ಣಿಗೂ ಮಹಿಳೆ ಗೋಚರಿಸಲಿಲ್ಲವೇ ? ಈ ಪುರುಷಾಧಿಪತ್ಯದ ಮನಸ್ಥಿತಿಯಿಂದ ಇನ್ನಾದರೂ ಹೊರಬರಬೇಕಿದೆ.

Eshwara Khandre on Siddaramaiah :ಸಿದ್ದರಾಮಯ್ಯನ ಹಾಡಿ ಹೊಗಳಿದ ಸಚಿವ ಈಶ್ವರ್‌ ಖಂಡ್ರೆ..! #siddaramaiah

ಪ್ರತಿಯೊಂದು ಸಂಘ-ಸಂಘಟನೆ-ಪಕ್ಷ-ಸಂಸ್ಥೆಯೂ ಸಹ ನಾಯಕತ್ವದ ಸ್ಥಾನಗಳಲ್ಲಿ, ನಿರ್ಣಾಯಕ ಸ್ತರಗಳಲ್ಲಿ, ಕಾರ್ಯನಿರ್ವಹಣೆಯ ಚೌಕಟ್ಟುಗಳಲ್ಲಿ ಹಾಗೂ ಗುಂಪಿನ ನಿರ್ವಹಣೆಯ ವಿಚಾರಗಳಲ್ಲಿ ಮಹಿಳೆಯರಿಗೆ ಸಮಾನ ಸ್ಥಾನಮಾನ-ಅವಕಾಶ ಕಲ್ಪಿಸುವುದು ಪ್ರಜಾಪ್ರಭುತ್ವದ ಮೂಲ ಲಕ್ಷಣ. ಇದು ರಾಜಕೀಯ/ಆಂತರಿಕ ಚುನಾವಣೆಗಳಿಗೂ ಅನ್ವಯಿಸುವ ನಿಯಮ. ಮಹಿಳೆಯರ ವಿಷಯ ಪ್ರಸ್ತಾಪವಾದ ಕೂಡಲೇ “ ಸೂಕ್ತ ಅಭ್ಯರ್ಥಿಗಳೇ ಸಿಗುವುದಿಲ್ಲ ” ಎಂಬ ಸಬೂಬು ಸಾಮಾನ್ಯವಾಗಿ ಕೇಳಿಬರುತ್ತದೆ. ಈ ಕುಂಟುನೆಪಗಳಿಂದ ನಾವು ಹೊರಬರಬೇಕಿದೆ. ಶತಮಾನದ ಇತಿಹಾಸ ಇರುವ ಒಂದು ಪಕ್ಷ-ಚಳುವಳಿಯಲ್ಲಿ ಸೂಕ್ತ ಅಭ್ಯರ್ಥಿ ಕಾಣುವುದಿಲ್ಲ ಎಂದರೆ ಅದು ನಾಯಕತ್ವದ ದೌರ್ಬಲ್ಯ-ವೈಫಲ್ಯವೇ ಹೊರತು, ವಂಚಿತರ ತಪ್ಪಲ್ಲ. ಪ್ರತಿಯೊಂದು ಹಂತದಲ್ಲೂ, ಪ್ರತಿ ಕಾಲಘಟ್ಟದಲ್ಲೂ ಗುಂಪಿನ ಕಾರ್ಯನಿರ್ವಹಣೆ ಮಾಡುವ ಸಾಮರ್ಥ್ಯವನ್ನು ಎಲ್ಲ ಸದಸ್ಯರಲ್ಲೂ ಸೃಷ್ಟಿಸುವುದು ನಮ್ಮ ಆದ್ಯತೆಯಾಗಬೇಕಲ್ಲವೇ ?

ಆಂತರಿಕ ಪ್ರಜಾಪ್ರಭುತ್ವ
ಇದು ನಮ್ಮ ಆಯ್ಕೆಯಾಗುವುದಾದರೆ, ಸಾಮಾನ್ಯವಾಗಿ ಎಲ್ಲ ಗುಂಪುಗಳಲ್ಲೂ (ಕಮ್ಯುನಿಸ್ಟ್ ಪಕ್ಷ, ಕಾರ್ಮಿಕ ಚಳುವಳಿ, ದಲಿತ ಚಳುವಳಿ, ಭಾಷಾ ಚಳುವಳಿ ಇತ್ಯಾದಿ) ಬೇರೂರಿರುವ ʼ ಶಾಶ್ವತ ನಾಯಕತ್ವ ʼ ಅಥವಾ ʼ ಏಕ ನಾಯಕತ್ವ ʼ ಪರಂಪರೆಯಿಂದ ನಾವು ಹೊರಬರಬೇಕಿದೆ. ವ್ಯಕ್ತಿಗತವಾಗಿ ಆಗಲೀ, ಒಳಕೂಟದ ರೂಪದಲ್ಲಾಗಲೀ ಈ ಶಾಶ್ವತ ನಾಯಕತ್ವದ ಹಂಬಲವನ್ನು ಬೇರುಮಟ್ಟ ಕಿತ್ತುಹಾಕಬೇಕಿದೆ. ವಿಶೇಷವಾಗಿ ಕಾರ್ಮಿಕ ಸಂಘಗಳಲ್ಲಿ ಈ ಅಪ್ರಜಾಸತ್ತಾತ್ಮಕ ಪರಂಪರೆಯೇ ವಿಘಟನೆಗೆ, ಸದಸ್ಯರ ನಿಷ್ಕ್ರಿಯತೆಗೆ, ಅನ್ಯಮನಸ್ಕ ಮನೋಭಾವಕ್ಕೆ, ಪ್ರತ್ಯೇಕತಾ ಭಾವನೆಗೆ ಕಾರಣವಾಗುತ್ತದೆ. ಕಳೆದ ಎಂಬತ್ತು ವರ್ಷಗಳಿಂದಲೂ ಈ ಮನಸ್ಥಿತಿ ಗಟ್ಟಿಯಾಗುತ್ತಲೇ ಬಂದಿರುವುದಕ್ಕೆ ಕಾರಣ ಯಾವ ಗುಂಪುಗಳಲ್ಲೂ ಆಂತರಿಕ ಪ್ರಜಾಪ್ರಭುತ್ವ (Internal Democracy) ಇಲ್ಲದಿರುವುದು.

B. K. Hariprasad : ಬರ ಪರಿಹಾರದ ಬಗ್ಗೆ ಸದನದಲ್ಲಿ ಚರ್ಚೆ ಮಾಡೋಕೆ ಬಿಡುತ್ತಿಲ್ಲ ಬಿಜೆಪಿ ನಾಯಕರು.! #bkhariprasad

ಕಮ್ಯುನಿಸ್ಟ್ ಪಕ್ಷಗಳಲ್ಲೂ ಸಹ ಶತಮಾನದ ಹಿಂದೆ ರಷ್ಯಾ ಕ್ರಾಂತಿಯ ಹರಿಕಾರ ಲೆನಿನ್ ಪ್ರತಿಪಾದಿಸಿದ ʼ ಕೇಂದ್ರೀಕೃತ ಪ್ರಜಾಪ್ರಭುತ್ವ ʼವನ್ನೇ (Democratic Centralism) ಇಂದಿಗೂ ಅನುಸರಿಸಲಾಗುತ್ತಿದೆ. ಇದು ಶತಮಾನದ ಮುನ್ನ, ರಷ್ಯಾದಲ್ಲಿದ್ದ ಸನ್ನಿವೇಶಗಳಿಗೆ ಅನುಸಾರವಾಗಿ ಲೆನಿನ್ ಕಮ್ಯುನಿಸ್ಟ್ ಪಕ್ಷಗಳಿಗೆ ರೂಪಿಸಿದ್ದ ಒಂದು ನಿಯಮ. ಇದನ್ನು ಮಾರ್ಕ್ಸ್ವಾದಿ ಸಿದ್ಧಾಂತದ ಮೂಲ ತತ್ವ (Basic Principle) ಎಂದೇನೂ ಪರಿಗಣಿಸಬೇಕಿಲ್ಲ ಅಲ್ಲವೇ? ಹಾಗಿದ್ದರೂ ಅದನ್ನು ಬದಲಾಯಿಸಲು ಯೋಚಿಸಬೇಕಿಲ್ಲ. ಮಾರ್ಕ್ಸ್ವಾದ-ಲೆನಿನ್ವಾದಕ್ಕೆ ಸಾಂಪ್ರದಾಯಿಕ ಪ್ರವಾದಿ ಮೌಲ್ಯಗಳನ್ನು ಆರೋಪಿಸುವುದು ಸಮರ್ಥನೀಯವಲ್ಲ. ಈ ತತ್ವಗಳನ್ನೇ ಗ್ರಾಂಥಿಕವಾಗಿ ಅಳವಡಿಸಿಕೊಳ್ಳುವ ಮೂಲಕ ಪಕ್ಷಗಳು/ಸಂಘಟನೆಗಳು ಆಂತರಿಕ ನಿರ್ಣಯಗಳಲ್ಲಿ ಮೇಲಿನಿಂದ ನಿರ್ದೇಶಿಸಲ್ಪಡುವ ಅಥವಾ ಆದೇಶಿಸುವ Top Down ವಿಧಾನವನ್ನು ಅಳವಡಿಸಿಕೊಂಡಿವೆ. ಯುವ ನಾಯಕತ್ವ, ಮಹಿಳಾ ಪ್ರಾತಿನಿಧ್ಯಕ್ಕೆ ಅಡ್ಡಿಯಾಗುತ್ತಿರುವುದೇ ಈ ಕುರುಡು ಅನುಕರಣೆ.

ಭಾರತದಲ್ಲಿ ಸಂವಿಧಾನದ ಹೆಸರಿನಲ್ಲಿ, ಪ್ರಜಾಪ್ರಭುತ್ವಕ್ಕಾಗಿ ಹೋರಾಡುತ್ತಿರುವ ಯಾವುದೇ ಪಕ್ಷ/ಸಂಘಟನೆಗಳಲ್ಲೂ ಆಂತರಿಕ ಪ್ರಜಾಪ್ರಭುತ್ವವೂ ಇಲ್ಲ, ಮಹಿಳಾ ಪ್ರಾತಿನಿಧಿತ್ವವೂ ಇಲ್ಲ. ಈ ವಿರೋಧಾಭಾಸವನ್ನು ನೀಗಿಸಿಕೊಳ್ಳದೆ ನಾವು ಜೆನ್ ಝಿ ಮತ್ತು ಮಿಲೆನಿಯಲ್ ಮಕ್ಕಳನ್ನು ಸಂಪರ್ಕಿಸುವುದು ಹೇಗೆ. ಪ್ರಜಾಪ್ರಭುತ್ವದ ಮೌಲ್ಯಗಳನ್ನು ಅವರಿಗೆ ಬೋಧಿಸುವುದು ಹೇಗೆ ? ಕರ್ನಾಟಕದ ಉಪಮುಖ್ಯಮಂತ್ರಿಗಳು ಜೆನ್ ಝಿ ಸಮಾಜಕ್ಕೆ ಮಾದರಿಯಾಗಬೇಕು ಎಂದು ಹೇಳುತ್ತಾರೆ, ಮತ್ತೋರ್ವ ಹಿರಿಯ ಹೋರಾಟಗಾರರು ಜೆನ್ ಝಿ ಬಿಡದಿ ಟೌನ್ಷಿಪ್ ಹೋರಾಟದ ಮುಂದಾಳತ್ವ ವಹಿಸಲಿ ಎಂದು ಅಪೇಕ್ಷಿಸುತ್ತಾರೆ. ಇಷ್ಟು ವರ್ಷ ಸಿದ್ಧಾಂತಗಳ ಭಾರ ಹೊರಿಸಿದ್ದೇವೆ ಈಗ ಹೋರಾಟಗಳ ಭಾರವನ್ನೂ ಹೊರಿಸಬೇಕೇ ? ಹಿರಿಯ ರಾಜಕೀಯ-ಸಾಂಘಿಕ ತಲೆಮಾರು ಬೌದ್ಧಿಕವಾಗಿ ಎಷ್ಟು ಹಿಂದುಳಿದಿದೆ ಎನ್ನುವುದಕ್ಕೆ ಇದು ಸಾಕ್ಷಿ. . ʼ ಪ್ರಗತಿಪರ ʼ ಎಂಬ ಬೌದ್ಧಿಕ ಚೌಕಟ್ಟಿನಲ್ಲಿ ತಳಸ್ತರದ ಸಮಾಜಗಳನ್ನೂ ಸಂಪರ್ಕಿಸುವ ಎಲ್ಲ ಪಕ್ಷ-ಸಂಘಟನೆಗಳೂ ತಮ್ಮೊಳಗಿನ ಈ ಕೊರತೆ/ನ್ಯೂನತೆಯನ್ನು ಸರಿಪಡಿಸಿಕೊಳ್ಳುವುದು ಕಾಲದ ಅನಿವಾರ್ಯತೆ ಮತ್ತು ತುರ್ತು.

BJP leaders stage protest : ಸಚಿವ ನಾಗೇಂದ್ರ ವಿರುದ್ಧ ಬಿಜೆಪಿ ಶಾಸಕರು ಪ್ರತಿಭಟನೆ..!  | BJP | #pratidhvani

ಪ್ರಜಾಸತ್ತೆಯ ಬೀಜ ಬಿತ್ತನೆ
2047ರ ವಿಕಸಿತ ಭಾರತವನ್ನು ಪ್ರಜಾಪ್ರಭುತ್ವದ ಗಟ್ಟಿನೆಲವಾಗಿ ಕಾಣಬೇಕಾದರೆ ನವ ಶತಮಾನದ ಮಕ್ಕಳಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ವ್ಯವಸ್ಥಿತವಾಗಿ ಬಿತ್ತಲೇಬೇಕಲ್ಲವೇ ? ಬಿತ್ತನೆ ಮಾಡುವವರೇ ಈ ಮೌಲ್ಯಗಳನ್ನು ಗಾಳಿಗೆ ತೂರಿದಾಗ ಅದು ಕೇವಲ ಪ್ರದರ್ಶನ ಅಥವಾ ಬೂಟಾಟಿಕೆಯಾಗುತ್ತದೆ. ಇಂದಿನ ಮಕ್ಕಳು ಪ್ರದರ್ಶನಗಳಿಗೆ (Spectacles) ಹೆಚ್ಚು ಮಾನ್ಯತೆ ಕೊಡುವುದಿಲ್ಲ, ನಮ್ಮ ಪ್ರಯತ್ನಗಳು ಕಾರ್ಯರೂಪಕ್ಕೆ ಬರುವುದನ್ನು, ಅಂತಿಮ ಗುರಿ ತಲುಪುವುದನ್ನು ಅಪೇಕ್ಷಿಸುತ್ತಾರೆ. ಇಲ್ಲಿ ನಮ್ಮ ತತ್ವಶಾಸ್ತ್ರೀಯ ಸಿದ್ಧಾಂತಗಳ ಜೊತೆಗೇ ಸಮಕಾಲೀನ ಆಲೋಚನಾ ಕ್ರಮಗಳೂ ಮುಖ್ಯವಾಗುತ್ತವೆ. ಹಾಗಾಗಿ ಸ್ಥಾಪಿತ ಪಕ್ಷ-ಸಂಘಟನೆಗಳು ತಮ್ಮ ಮಾರ್ಗಗಳ ಪುನರಾವಲೋಕನ ಮಾಡಬೇಕಿದೆ. ಮಾರ್ಕ್ಸ್, ಲೆನಿನ್, ಮಾವೋ, ಅಂಬೇಡ್ಕರ್, ಗಾಂಧಿ ಎಲ್ಲರನ್ನೂ ಮರುಸಂಪರ್ಕಿಸಬೇಕಿದೆ (Re visit) . ಸಿದ್ಧಮಾದರಿಗಳನ್ನು ಮರುವಿಮರ್ಶೆಗೊಳಪಡಿಸಬೇಕಿದೆ.

ಈ ಪ್ರಯತ್ನಗಳನ್ನು ರಾಜಕೀಯ ಪಕ್ಷಗಳಿಂದ ನಿರೀಕ್ಷಿಸುವುದು ವ್ಯರ್ಥ. ಪ್ರಜಾಪ್ರಭುತ್ವದಲ್ಲಿ ನಂಬಿಕೆಯೇ ಇಲ್ಲದ ಆರೆಸ್ಸೆಸ್/ಜಮಾತ್ ಇ ಇಸ್ಲಾಮಿ, ಕ್ರೈಸ್ತ ಧಾರ್ಮಿಕ ಸಂಘಗಳಿಂದ ಇದನ್ನು ನಿರೀಕ್ಷಿಸಲಾಗುವುದಿಲ್ಲ. ಈ ಸಾಂಸ್ಥಿಕ ನಿಯಂತ್ರಣದಲ್ಲಿರುವ ಜನಪರ ಹೋರಾಟಗಳು ಎಷ್ಟೇ ಸಮಾಜಮುಖಿಯಾಗಿ ಕಂಡರೂ, ಅಂತಿಮವಾಗಿ ಮೇಲ್ಮಟ್ಟದ ಸೂತ್ರಧಾರಿಗಳ ಅಣತಿಯಂತೆ ಮತ್ತು ಧಾರ್ಮಿಕ ಸಂಹಿತೆಗಳ ಚೌಕಟ್ಟಿನ ಒಳಗೇ ನಡೆಯುತ್ತವೆ. ಇವುಗಳಿಂದ ಹೊರತಾದ ರಾಜಕೀಯ ಪಕ್ಷಗಳು ಈ ಸಾಂಸ್ಥಿಕ ಬೇರುಗಳನ್ನೇ ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಇಡೀ ವ್ಯವಸ್ಥೆಯನ್ನು ಮರುರೂಪಿಸಲು ಶ್ರಮಿಸುತ್ತವೆ. ಅಂಬೇಡ್ಕರ್ ನಮ್ಮನ್ನಗಲಿ 70 ವರ್ಷಗಳೇ ಕಳೆದಿದ್ದರೂ ಭಾರತದಲ್ಲಿ ದಲಿತ ರಾಜಕೀಯ ಪ್ರಜ್ಷೆಯ ಸುಳಿವೂ ಇಲ್ಲದಿರುವುದು ಇದನ್ನೇ ಸೂಚಿಸುತ್ತದೆ.

R Ashok On minister B Nagendra : ಒಬ್ಬ ನಾಗೇಂದ್ರನಿಗಾಗಿ Congressನಿಂದ ದಲಿತ ಸಮುದಾಯಕ್ಕೆ ಅನ್ಯಾಯವಾಗ್ತಿದೆ.?

ನಾಳೆಯ ಹೊಸ ಹಾದಿಗಳು
ನಾವೀಗ ನವ ಶತಮಾನದ ಈ ವೈಫಲ್ಯಗಳ ಕಡೆಗೆ ಹೊರಳಿ ನೋಡಬೇಕಿದೆ. ನವ ಉದಾರವಾದ-ಬಲಪಂಥೀಯ ಹಿಂದುತ್ವ ರಾಜಕಾರಣ ಭಾರತದಲ್ಲಿ ಹೆಜ್ಜೆ ಊರಿದ ಗಳಿಗೆಯಿಂದಲೇ ಈ ಪ್ರಯತ್ನಗಳನ್ನು ನಡೆಸಿದ್ದಲ್ಲಿ, ಈ 25 ವರ್ಷಗಳಲ್ಲಿ ಮನ್ವಂತರದ ಛಾಯೆಯನ್ನಾದರೂ ಕಾಣಲು ಸಾಧ್ಯವಾಗುತ್ತಿತ್ತು. ದುರದೃಷ್ಟವಶಾತ್ ಹಿಂದುತ್ವ-ಫ್ಯಾಸಿಸಂ ವಿರುದ್ಧ ಹೋರಾಡುವ ಹಾದಿಯಲ್ಲಿ ನಮ್ಮೊಳಗಿನ ದೌರ್ಬಲ್ಯಗಳನ್ನು, ಪ್ರಜಾಸತ್ತಾತ್ಮಕ ಮೌಲ್ಯಗಳ ಕೊರತೆಗಳನ್ನು ಮರುವಿಮರ್ಶಿಸದೆ ಬಂದಿದ್ದೇವೆ. ಅಥವಾ ತಾತ್ವಿಕ ಚೌಕಟ್ಟುಗಳ ಸಂಕೋಲೆಯಲ್ಲಿ ಸ್ವಯಂ ಬಂಧನಕ್ಕೊಳಗಾಗಿದ್ದೇವೆ. ಈ ಸಂಕೋಲೆಗಳಿಂದ ಮುಕ್ತವಾಗುವುದು ನಮ್ಮ ಆದ್ಯತೆಯೂ ಹೌದು, ಕರ್ತವ್ಯವೂ ಹೌದು.

ವರ್ತಮಾನ ನಮ್ಮನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಭವಿಷ್ಯ ಕೈಬೀಸಿ ಕರೆಯುತ್ತಿದೆ. 2047ರ ವೇಳೆಗೆ ಇಂದಿನ ಹಿರಿಯ ಪೀಳಿಗೆ ಚರಿತ್ರೆಯ ಭಾಗವಾಗಿರುತ್ತದೆ. ಈಗ ಮುಂಗಾಣ್ಕೆಯನ್ನು ಕಳೆದುಕೊಂಡರೆ ಆ ವೇಳೆಗೆ ಹಿಂದೆ ತಿರುಗಿ ನೋಡುವ ನೈತಿಕತೆಯನ್ನೇ ಕಳೆದುಕೊಂಡಿರುತ್ತೇವೆ. ಚರಿತ್ರೆಯಲ್ಲಿ, ಚಾರಿತ್ರಿಕ ದರ್ಶನಗಳಲ್ಲಿ ಅಥವಾ ವ್ಯಕ್ತಿ ಕೇಂದ್ರಿತ ಬೌದ್ಧಿಕ ಸಂಕಥನಗಳಲ್ಲಿ ತಲೆ ಹುದುಗಿಸಿ ನಡೆಸುವ ಯಾವುದೇ ಸಾರ್ವಜನಿಕ ಸಂಕಥನಗಳು ಮತ್ತು ಸಂವಾದಗಳು (Public Discourse and Discusssions) ವರ್ತಮಾನದ ಯುವ ಜನಾಂಗದ ದೃಷ್ಟಿಯಲ್ಲಿ ರೋಚಕವಾಗಿ ಕಾಣಬಹುದೇ ಹೊರತು, ಭವಿಷ್ಯದ ಹೆಜ್ಜೆಗಳಿಗೆ ಮಾರ್ಗಸೂಚಿಯಾಗುವುದಿಲ್ಲ. ಈ ಎಚ್ಚರಿಕೆ ನಮ್ಮೆಲ್ಲರಲ್ಲೂ ಇರಬೇಕು. ಆಗ ಮಾತ್ರ ನಾವು ಅಳವಡಿಸಿಕೊಳ್ಳುವ ತತ್ವಶಾಸ್ತ್ರೀಯ ಸಿದ್ಧಾಂತಗಳು ಭವಿಷ್ಯದ ಹಾದಿಯನ್ನು ಸುಗಮಗೊಳಿಸುತ್ತವೆ.

Veena Kashappanavar on BJP : ಈಗ ಹೋರಾಡೋ ಇವ್ರು ಹಿಂದೆ ಜೈಲಿಗೆ ಹೋಗಿದ್ದನ್ನು ನೆನಪಿಸಿಕೊಳ್ಳಲಿ.. #pratidhvani

ಚರಿತ್ರೆ ನಮ್ಮನ್ನು ಹೇಗೆ ದಾಖಲಿಸಬೇಕು ? ಈ ಸಂದಿಗ್ಧ ಪ್ರಶ್ನೆ ಮತ್ತು ಸಂಕೀರ್ಣ ಆಲೋಚನೆಗಳೊಂದಿಗೇ 2047ರ ವಿಕಸಿತ ಭಾರತವನ್ನು ತಲುಪುವ ಹಾದಿಯಲ್ಲಿ ಗಮನಿಸಲೇಬೇಕಾದ ಸಾಮಾಜಿಕ ಮೌಲ್ಯಗಳ ಕಡೆಗೆ ಗಮನಹರಿಸಬೇಕಿದೆ. ಈ ಜವಾಬ್ದಾರಿಯನ್ನು ವೈಯುಕ್ತಿಕ ನೆಲೆಯಲ್ಲಿ, ವ್ಯಕ್ತಿಗತವಾಗಿ ಹೊತ್ತು ನಡೆದಾಗ ಮಾತ್ರ ನಮ್ಮ ಸಾಂಘಿಕ-ಸಾಂಸ್ಥಿಕ ಪ್ರಯತ್ನಗಳು ಫಲಗೂಡುತ್ತವೆ. ಇದನ್ನು ಸಾಧಿಸುವುದಾದರೂ ಹೇಗೆ ? ಯೋಚಿಸೋಣ.
-೦-೦-೦-೦-

Previous Post

ಮಂಗಳೂರಿಗೆ ರೈಲ್ವೇ ಗುಡ್‌ನ್ಯೂಸ್: ಪಾಲಕ್ಕಾಡ್ ವಿಭಾಗದಿಂದ ಮೈಸೂರು ವಿಭಾಗಕ್ಕೆ ಸೇರ್ಪಡೆ

Next Post

ನಿರ್ದೇಶಕ ಓಂ ಪ್ರಕಾಶ್ ರಾವ್ ವಿರುದ್ಧ ನಟ ಭಾಸ್ಕರ್ ಶೆಟ್ಟಿ ಗಂಭೀರ ಆರೋಪ!

Related Posts

KPSC ಪಶುವೈದ್ಯಾಧಿಕಾರಿ ಪರೀಕ್ಷಾ ಮೇಲ್ವಿಚಾರಕರ IAS ಅಧಿಕಾರಿ ಜ್ಞಾನೇಂದ್ರ ಕುಮಾರ್ ನಿಗೂಢ ನಾಪತ್ತೆ
Top Story

KPSC ಪಶುವೈದ್ಯಾಧಿಕಾರಿ ಪರೀಕ್ಷಾ ಮೇಲ್ವಿಚಾರಕರ IAS ಅಧಿಕಾರಿ ಜ್ಞಾನೇಂದ್ರ ಕುಮಾರ್ ನಿಗೂಢ ನಾಪತ್ತೆ

by ಪ್ರತಿಧ್ವನಿ
August 22, 2026
0

ಬೆಂಗಳೂರು: ಕೆಪಿಎಸ್‌ಸಿ ಪಶುವೈದ್ಯಾಧಿಕಾರಿ ಪರೀಕ್ಷಾ ಮೇಲ್ವಿಚಾರಕರಾಗಿದ್ದ ಕರ್ನಾಟಕದ ಐಎಎಸ್ ಅಧಿಕಾರಿ ಹಾಗೂ ಎಂಎಸ್‌ಎಂಇ ಇಲಾಖೆಯ ವ್ಯವಸ್ಥಾಪಕ ನಿರ್ದೇಶಕ ಜ್ಞಾನೇಂದ್ರ ಕುಮಾರ್ ನಾಪತ್ತೆಯಾಗಿರುವ ಘಟನೆ ಹಲವು ಅನುಮಾನಗಳಿಗೆ ಕಾರಣವಾಗಿದೆ....

Read moreDetails
ಕರ್ನಾಟಕದಲ್ಲಿ 1 ವರ್ಷ ‌ಕೃತಕ ಪನ್ನೀರ್ ಬ್ಯಾನ್: ಇಲ್ಲಿದೆ ಸಂಪೂರ್ಣ ಮಾಹಿತಿ..!

ಕರ್ನಾಟಕದಲ್ಲಿ 1 ವರ್ಷ ‌ಕೃತಕ ಪನ್ನೀರ್ ಬ್ಯಾನ್: ಇಲ್ಲಿದೆ ಸಂಪೂರ್ಣ ಮಾಹಿತಿ..!

August 22, 2026
ಸರ್ಕಾರಿ ಶಾಲೆಗಳಿಗೂ AI ತಂತ್ರಜ್ಞಾನ: KEO AI PC-2026 ಲೋಕಾರ್ಪಣೆ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್

ಸರ್ಕಾರಿ ಶಾಲೆಗಳಿಗೂ AI ತಂತ್ರಜ್ಞಾನ: KEO AI PC-2026 ಲೋಕಾರ್ಪಣೆ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್

August 22, 2026
₹40 ಲಕ್ಷ ವೇತನ, ಹ್ಯಾಂಡ್‌ಸಮ್‌ ಹುಡುಗ; ಆದರೂ ಮದುವೆ ಪ್ರಸ್ತಾಪ ತಿರಸ್ಕರಿಸಿದ ಯುವತಿ! ಕಾರಣ ವೈರಲ್

₹40 ಲಕ್ಷ ವೇತನ, ಹ್ಯಾಂಡ್‌ಸಮ್‌ ಹುಡುಗ; ಆದರೂ ಮದುವೆ ಪ್ರಸ್ತಾಪ ತಿರಸ್ಕರಿಸಿದ ಯುವತಿ! ಕಾರಣ ವೈರಲ್

August 22, 2026
ತಮಿಳುನಾಡು ವಿಧಾನಸಭೆಯಲ್ಲಿ ವಾಕ್ಸಮರ: ಉದಯನಿಧಿಗೆ ‘ಬಾತ್ರೂಮ್ ಲೀಡರ್’ ತಿರುಗೇಟು ಏನು

ತಮಿಳುನಾಡು ವಿಧಾನಸಭೆಯಲ್ಲಿ ವಾಕ್ಸಮರ: ಉದಯನಿಧಿಗೆ ‘ಬಾತ್ರೂಮ್ ಲೀಡರ್’ ತಿರುಗೇಟು ಏನು

August 21, 2026
Next Post
ನಿರ್ದೇಶಕ ಓಂ ಪ್ರಕಾಶ್ ರಾವ್ ವಿರುದ್ಧ ನಟ ಭಾಸ್ಕರ್ ಶೆಟ್ಟಿ ಗಂಭೀರ ಆರೋಪ!

ನಿರ್ದೇಶಕ ಓಂ ಪ್ರಕಾಶ್ ರಾವ್ ವಿರುದ್ಧ ನಟ ಭಾಸ್ಕರ್ ಶೆಟ್ಟಿ ಗಂಭೀರ ಆರೋಪ!

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada