ತಮಿಳುನಾಡು ವಿಧಾನಸಭೆಯ ಕಲಾಪದಲ್ಲಿ ಪ್ರತಿಪಕ್ಷ ನಾಯಕ ಉದಯನಿಧಿ ಸ್ಟಾಲಿನ್ ಹಾಗೂ ಟಿವಿಕೆ ನಾಯಕ ಸಿಟಿಆರ್ ನಿರ್ಮಲ್ ಕುಮಾರ್ ನಡುವೆ ತೀವ್ರ ವಾಕ್ಸಮರ ನಡೆಯಿತು. ಉದಯನಿಧಿ ಸ್ಟಾಲಿನ್ ಅವರು ನಿರ್ಮಲ್ ಕುಮಾರ್ ಅವರನ್ನು ‘ಸಂಘಿ ಸಚಿವ’ ಎಂದು ಕರೆದಿದ್ದಕ್ಕೆ ಪ್ರತಿಯಾಗಿ, ನಿರ್ಮಲ್ ಕುಮಾರ್ ‘ಬಾತ್ರೂಮ್ ಲೀಡರ್’ ಎಂದು ವ್ಯಂಗ್ಯವಾಡಿದರು. ಬಳಿಕ ಉದಯನಿಧಿ ಸ್ಟಾಲಿನ್ ತಮ್ಮ ಹೇಳಿಕೆಗೆ ಕ್ಷಮೆಯಾಚಿಸಿದರು.

ನಟಿ ತ್ರಿಷಾ ಕುರಿತು ಈ ಹಿಂದೆ ನೀಡಲಾಗಿದ್ದ ವಿವಾದಾತ್ಮಕ ಹೇಳಿಕೆಯ ಹಿನ್ನೆಲೆಯಲ್ಲಿ ಪೊಲೀಸರು ಉದಯನಿಧಿ ಸ್ಟಾಲಿನ್ ಅವರನ್ನು ವಶಕ್ಕೆ ಪಡೆಯಲು ಅವರ ನಿವಾಸಕ್ಕೆ ತೆರಳಿದ್ದ ಘಟನೆಯನ್ನು ನಿರ್ಮಲ್ ಕುಮಾರ್ ಪ್ರಸ್ತಾಪಿಸಿ ‘ಬಾತ್ರೂಮ್ ಲೀಡರ್’ ಎಂಬ ಟೀಕೆ ಮಾಡಿದರು. ಪೊಲೀಸರು ಬಂದ ಸಂದರ್ಭದಲ್ಲಿ ಉದಯನಿಧಿ ಅವರ ಪತ್ನಿ ಕೃತಿಗಾ, ಅವರು ಶೌಚಾಲಯದಲ್ಲಿದ್ದಾರೆ, ಸ್ವಲ್ಪ ಸಮಯ ನೀಡಿ ಎಂದು ಹೇಳಿದ್ದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ತಮಿಳುನಾಡು ಶಾಸಕರಿಗೆ ಹೊಸ ವಾಹನ ಸೇರಿದಂತೆ ಹಲವು ಸೌಲಭ್ಯಗಳನ್ನು ಘೋಷಿಸಿದ್ದಕ್ಕೆ ಧನ್ಯವಾದ ಸಲ್ಲಿಸುವ ವೇಳೆ ಟಿವಿಕೆ ಶಾಸಕಿ ಕೆ. ಸಿಂಧು ಅವರು ಎಂಜಿಆರ್ ಅವರ ಜನಪ್ರಿಯ ಹಾಡನ್ನು ಹಾಡಿದ್ದರು. ಇದನ್ನು ಉಲ್ಲೇಖಿಸಿದ ಉದಯನಿಧಿ ಸ್ಟಾಲಿನ್, ವಿಧಾನಸಭೆಯ ಕಲಾಪವನ್ನು ‘ಸೂಪರ್ ಸಿಂಗರ್’ ಕಾರ್ಯಕ್ರಮದಂತೆ ಮಾಡಲಾಗುತ್ತಿದೆ ಎಂದು ವ್ಯಂಗ್ಯವಾಡಿದರು.
ಇದೇ ವೇಳೆ ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರನ್ನು ಗುರಿಯಾಗಿಸಿಕೊಂಡು ಉದಯನಿಧಿ ಸ್ಟಾಲಿನ್ ವಾಗ್ದಾಳಿ ನಡೆಸಿದರು. ಹಿಂದಿನ ಡಿಎಂಕೆ ಸರ್ಕಾರದ ಭ್ರಷ್ಟಾಚಾರದ ಕಡತಗಳು ತಮ್ಮ ಮೇಜಿನ ಮೇಲಿವೆ ಎಂದು ಮುಖ್ಯಮಂತ್ರಿ ಹೇಳುತ್ತಿದ್ದರೆ, ಸಿನಿಮಾದ ಪಂಚ್ ಡೈಲಾಗ್‌ಗಳನ್ನು ಹೇಳುವುದನ್ನು ಬಿಟ್ಟು ಆ ದಾಖಲೆಗಳನ್ನು ಬಹಿರಂಗಪಡಿಸಲಿ ಎಂದು ಸವಾಲು ಹಾಕಿದರು.‘ನಿಮ್ಮ ಬಳಿ ನಿಜವಾದ ಸಾಕ್ಷ್ಯಗಳಿದ್ದರೆ ತಕ್ಷಣ ಕ್ರಮ ಕೈಗೊಳ್ಳಿ. ಡಿಎಂಕೆ ಅದಕ್ಕೆ ಅಡ್ಡಿಪಡಿಸುವುದಿಲ್ಲ’ ಎಂದು ಉದಯನಿಧಿ ಹೇಳಿದ್ದಾರೆ.

ರಸ್ತೆ ಕಾಮಗಾರಿಗಳಲ್ಲಿನ ಅಕ್ರಮಗಳ ಕುರಿತು ನಡೆದ ಚರ್ಚೆಯ ಸಂದರ್ಭದಲ್ಲಿ ಮುಖ್ಯಮಂತ್ರಿ ವಿಜಯ್ ಅವರು ಡಿಎಂಕೆ ಸರ್ಕಾರದ ಭ್ರಷ್ಟಾಚಾರದ ಕಡತಗಳನ್ನು ಮೂರು ಇಲಾಖೆಗಳು ಪರಿಶೀಲಿಸಿದ್ದು, ಅವು ತಮ್ಮ ಮೇಜಿನ ಮೇಲಿವೆ ಎಂದು ಹೇಳಿದ್ದರು. ಈ ಹೇಳಿಕೆಗೆ ಪ್ರತಿಕ್ರಿಯೆಯಾಗಿ ಉದಯನಿಧಿ ಸ್ಟಾಲಿನ್ ಈ ಸವಾಲು ಹಾಕಿದ್ದಾರೆ.
ಇದಲ್ಲದೆ, ವಿಧಾನಸಭೆಯ ಕಲಾಪಗಳನ್ನು ನೇರ ಪ್ರಸಾರ ಮಾಡಲು ಸರ್ಕಾರ ಏಕೆ ಅವಕಾಶ ನೀಡುತ್ತಿಲ್ಲ ಎಂದು ಸಚಿವ ಆಧವ್ ಅರ್ಜುನ ಅವರನ್ನು ಉದಯನಿಧಿ ಪ್ರಶ್ನಿಸಿದರು. ಸಭಾಧ್ಯಕ್ಷರು ಅಧಿಕೃತ ದಾಖಲೆಯಿಂದ ತೆಗೆದುಹಾಕಿದ ಕೆಲವು ಪದಗಳು ಹಾಗೂ ಆಯ್ದ ವಿಡಿಯೊ ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದರ ಬಗ್ಗೆಯೂ ಅವರು ಪ್ರಶ್ನೆ ಎತ್ತಿದರು.





