ಬೆಂಗಳೂರು: ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಕರ್ನಾಟಕ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಮಹತ್ವದ ನಿರ್ಧಾರ ಕೈಗೊಂಡಿದೆ. ರಾಜ್ಯದಲ್ಲಿ ‘ಅನಲಾಗ್ ಪನ್ನೀರ್’ ಅಥವಾ ನಾನ್-ಡೈರಿ ಪನ್ನೀರ್ ಬಳಕೆಗೆ ಒಂದು ವರ್ಷದ ಅವಧಿಗೆ ನಿಷೇಧ ಹೇರಲಾಗಿದೆ.

ಹಾಲಿನಿಂದ ತಯಾರಾಗುವ ನೈಸರ್ಗಿಕ ಪನ್ನೀರ್‌ಗೆ ಬದಲಾಗಿ ಸಸ್ಯಜನ್ಯ ಎಣ್ಣೆ, ಕೊಬ್ಬು, ಪಿಷ್ಟ ಸೇರಿದಂತೆ ಇತರ ಪದಾರ್ಥಗಳನ್ನು ಬಳಸಿ ತಯಾರಿಸುವ ಅನಲಾಗ್ ಪನ್ನೀರ್‌ನ್ನು ಆಹಾರ ಉತ್ಪನ್ನಗಳ ತಯಾರಿಕೆಯಲ್ಲಿ ಬಳಸುವುದನ್ನು ನಿಷೇಧಿಸಲಾಗಿದೆ.

ಈ ರೀತಿಯ ಪನ್ನೀರ್‌ನ್ನು ತಯಾರಿಸುವುದು, ಸಂಗ್ರಹಿಸುವುದು, ಪೂರೈಸುವುದು ಹಾಗೂ ಮಾರಾಟ ಮಾಡುವುದಕ್ಕೂ ನಿರ್ಬಂಧ ವಿಧಿಸಲಾಗಿದೆ. ಹೋಟೆಲ್, ರೆಸ್ಟೋರೆಂಟ್‌ಗಳು ಸೇರಿದಂತೆ ಆಹಾರ ಸಂಸ್ಥೆಗಳು ಈ ನಿಯಮವನ್ನು ಪಾಲಿಸಬೇಕಾಗಿದೆ.

ರಾಜ್ಯದಲ್ಲಿ ವಿವಿಧ ಮಾದರಿಯ ಪನ್ನೀರ್‌ಗಳನ್ನು ಪರೀಕ್ಷಿಸಲಾಗಿದ್ದು, ಅವುಗಳಲ್ಲಿ ಕಲಬೆರಕೆ ಕಂಡುಬಂದಿಲ್ಲ. ಆದರೂ ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ಅನಲಾಗ್ ಅಥವಾ ನಾನ್-ಡೈರಿ ಪನ್ನೀರ್ ಬಳಕೆಯನ್ನು ತಡೆಯಲು ಇಲಾಖೆ ಈ ಕ್ರಮ ಕೈಗೊಂಡಿದೆ.

ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ನಿಗದಿಪಡಿಸಿರುವ ಮಾನದಂಡಗಳಿಗೆ ಅನುಗುಣವಾಗಿ ಪ್ರಮಾಣೀಕರಿಸಲಾದ ಡೈರಿ ಉತ್ಪನ್ನಗಳಿಗೆ ಈ ನಿಷೇಧ ಅನ್ವಯಿಸುವುದಿಲ್ಲ ಎಂದು ಇಲಾಖೆ ಸ್ಪಷ್ಟಪಡಿಸಿದೆ. ಗ್ರಾಹಕರಿಗೆ ಪನ್ನೀರ್ ಹೆಸರಿನಲ್ಲಿ ನಾನ್-ಡೈರಿ ಉತ್ಪನ್ನಗಳನ್ನು ನೀಡದಂತೆ ಆಹಾರ ಸಂಸ್ಥೆಗಳಿಗೆ ಸೂಚನೆ ನೀಡಲಾಗಿದೆ.






