ಕರಾವಳಿ ಕರ್ನಾಟಕದ ರೈಲು ಪ್ರಯಾಣಿಕರು ಹಾಗೂ ಸಾರ್ವಜನಿಕರ ದಶಕಗಳ ಬೇಡಿಕೆಗೆ ಕೊನೆಗೂ ಕೇಂದ್ರ ಸರ್ಕಾರ ಸ್ಪಂದಿಸಿದೆ. ಇದುವರೆಗೆ ಕೇರಳದ ಪಾಲಕ್ಕಾಡ್ ರೈಲ್ವೇ ವಿಭಾಗದ ವ್ಯಾಪ್ತಿಯಲ್ಲಿದ್ದ ಮಂಗಳೂರು ರೈಲ್ವೇ ಪ್ರದೇಶವನ್ನು ನೈಋತ್ಯ ರೈಲ್ವೆಯ (SWR) ಮೈಸೂರು ವಿಭಾಗಕ್ಕೆ ವರ್ಗಾಯಿಸಲು ರೈಲ್ವೇ ಮಂಡಳಿ ಆದೇಶ ಹೊರಡಿಸಿದೆ.ಈ ಮಹತ್ವದ ಬದಲಾವಣೆಯಿಂದ ದಕ್ಷಿಣ ಕನ್ನಡ ಸೇರಿದಂತೆ ಕರಾವಳಿ ಭಾಗದ ರೈಲ್ವೇ ಆಡಳಿತದಲ್ಲಿದ್ದ ಹಲವು ಗೊಂದಲಗಳಿಗೆ ತೆರೆ ಬೀಳಲಿದ್ದು, ರೈಲ್ವೇ ಮೂಲಸೌಕರ್ಯ ಅಭಿವೃದ್ಧಿಗೆ ಮತ್ತಷ್ಟು ವೇಗ ಸಿಗುವ ನಿರೀಕ್ಷೆಯಿದೆ.

ರೈಲ್ವೇ ಮಂಡಳಿಯ ಆದೇಶದಂತೆ ನೂತನ ಆಡಳಿತ ವ್ಯವಸ್ಥೆ 2026ರ ಅಕ್ಟೋಬರ್ 1ರಿಂದ ಜಾರಿಗೆ ಬರಲಿದೆ. ಮಂಗಳೂರು ಸೆಂಟ್ರಲ್, ಮಂಗಳೂರು ಜಂಕ್ಷನ್ ಸೇರಿದಂತೆ ಉಳ್ಳಾಲ ರೈಲ್ವೇ ನಿಲ್ದಾಣದವರೆಗಿನ ಪ್ರದೇಶ ಮೈಸೂರು ವಿಭಾಗದ ವ್ಯಾಪ್ತಿಗೆ ಬರಲಿದೆ.ಈ ಹಿಂದೆ ಪಾಲಕ್ಕಾಡ್ ಮತ್ತು ಮೈಸೂರು ವಿಭಾಗಗಳ ನಡುವಿನ ಗಡಿ ಹಾಗೂ ಇಂಟರ್‌ಚೇಂಜ್ ಪಾಯಿಂಟ್ ಆಗಿ ಪಡೀಲ್ ರೈಲ್ವೇ ನಿಲ್ದಾಣ ಕಾರ್ಯನಿರ್ವಹಿಸುತ್ತಿತ್ತು. ಇನ್ನು ಮುಂದೆ ಉಳ್ಳಾಲ ರೈಲ್ವೇ ನಿಲ್ದಾಣವು ನೂತನ ಇಂಟರ್‌ಚೇಂಜ್ ಪಾಯಿಂಟ್ ಆಗಿ ಕಾರ್ಯನಿರ್ವಹಿಸಲಿದೆ. ವಿಭಾಗೀಯ ಪ್ರಧಾನ ಕಚೇರಿ ಮೈಸೂರಿನಲ್ಲಿ ಹಾಗೂ ವಲಯ ಪ್ರಧಾನ ಕಚೇರಿ ಹುಬ್ಬಳ್ಳಿಯಲ್ಲಿ ಇರಲಿದೆ.

ಮಂಗಳೂರು ರೈಲ್ವೇ ಪ್ರದೇಶವನ್ನು ಕರ್ನಾಟಕದ ವಲಯಕ್ಕೆ ಸೇರ್ಪಡೆಗೊಳಿಸಲು ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ನಿರಂತರವಾಗಿ ಪ್ರಯತ್ನಿಸಿದ್ದರು. ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರ ಗಮನಕ್ಕೆ ವಿಷಯ ತಂದಿದ್ದ ಅವರು, 2024ರ ಜುಲೈನಲ್ಲಿ ರೈಲ್ವೇ ರಾಜ್ಯ ಸಚಿವ ವಿ. ಸೋಮಣ್ಣ ಮಂಗಳೂರಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಈ ಕುರಿತು ಪ್ರತ್ಯೇಕ ಸಭೆ ನಡೆಸಿ ಒತ್ತಡ ಹೇರಿದ್ದರು.ಇದೀಗ ರೈಲ್ವೇ ಮಂಡಳಿ ಆದೇಶ ಹೊರಡಿಸಿರುವ ಹಿನ್ನೆಲೆಯಲ್ಲಿ ತಮ್ಮ ಪ್ರಯತ್ನಕ್ಕೆ ಯಶಸ್ಸು ಸಿಕ್ಕಿದೆ ಎಂದು ಸಂಸದ ಚೌಟ ತಿಳಿಸಿದ್ದಾರೆ. ಸಾರ್ವಜನಿಕರ ಹಿತದೃಷ್ಟಿಯಿಂದ ರೂಪಿಸಲಾದ ಪ್ರಸ್ತಾವನೆಗೆ ತಕ್ಷಣ ಅನುಮೋದನೆ ನೀಡಿದ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಹಾಗೂ ರಾಜ್ಯ ಸಚಿವ ವಿ. ಸೋಮಣ್ಣ ಅವರಿಗೆ ಅವರು ಧನ್ಯವಾದ ಸಲ್ಲಿಸಿದ್ದಾರೆ.

ಮಂಗಳೂರು ರೈಲ್ವೇ ಪ್ರದೇಶವು ಈವರೆಗೆ ಪಾಲಕ್ಕಾಡ್ ವಿಭಾಗದ ವ್ಯಾಪ್ತಿಯಲ್ಲಿದ್ದ ಕಾರಣ ಹೊಸ ರೈಲುಗಳ ಆರಂಭ, ವೇಳಾಪಟ್ಟಿ ಬದಲಾವಣೆ ಹಾಗೂ ನಿಲ್ದಾಣಗಳ ಮೂಲಸೌಕರ್ಯ ಅಭಿವೃದ್ಧಿಯಂತಹ ವಿಷಯಗಳಲ್ಲಿ ಆಡಳಿತಾತ್ಮಕ ತೊಡಕುಗಳು ಎದುರಾಗುತ್ತಿದ್ದವು.ಇದೀಗ ಮೈಸೂರು ವಿಭಾಗಕ್ಕೆ ಸೇರ್ಪಡೆಯಾಗುವುದರಿಂದ ಸಾರ್ವಜನಿಕರ ಕುಂದುಕೊರತೆಗಳಿಗೆ ವೇಗವಾಗಿ ಸ್ಪಂದಿಸುವ ಅವಕಾಶ ಹೆಚ್ಚಲಿದೆ. ಕರಾವಳಿಯಿಂದ ಬೆಂಗಳೂರು, ಮೈಸೂರು ಹಾಗೂ ಉತ್ತರ ಕರ್ನಾಟಕ ಭಾಗಗಳಿಗೆ ಹೊಸ ರೈಲು ಸಂಪರ್ಕ ಕಲ್ಪಿಸುವುದು ಮತ್ತಷ್ಟು ಸುಲಭವಾಗುವ ನಿರೀಕ್ಷೆಯಿದೆ. ಜೊತೆಗೆ ಕರಾವಳಿ ರೈಲ್ವೇ ಮೂಲಸೌಕರ್ಯ ಯೋಜನೆಗಳ ಕಾಮಗಾರಿಗಳಿಗೂ ವೇಗ ಸಿಗುವ ಸಾಧ್ಯತೆಯಿದೆ.
ಕೇಂದ್ರ ಸರ್ಕಾರದ ಈ ನಿರ್ಧಾರಕ್ಕೆ ಮಂಗಳೂರು ಸೇರಿದಂತೆ ಇಡೀ ಕರಾವಳಿ ಭಾಗದ ರೈಲು ಪ್ರಯಾಣಿಕರು ಹಾಗೂ ಸಾರ್ವಜನಿಕರಿಂದ ಹರ್ಷ ವ್ಯಕ್ತವಾಗಿದೆ.






