ಸ್ಯಾಂಟ್ ಕಿಟ್ಸ್ನ ವಾರ್ನರ್ ಪಾರ್ಕ್ ಮೈದಾನದಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ದ್ವಿತೀಯ T20 ಪಂದ್ಯದಲ್ಲಿ ಭಾರತ ಸೋಲು ಕಂಡಿದೆ .
ಹೌದು, ಏಕದಿನ ಸರಣಿಯಲ್ಲಿ ಮೂರು ಸೋಲು ಕಂಡು , ಮೊದಲ ಟಿ 20 ಪಂದ್ಯದಲ್ಲೂ ಸೋಲುಂಡ ವಿಂಡೀಸ್ ಕೊನೆಗೂ ಜಯದ ಖಾತೆ ತೆರೆದಿದೆ.
ಒಬೆಡ್ ಮೆಖಾಯ್ ಮಾರಕ ಬೌಲಿಂಗ್ , ಬ್ರಾಂಡನ್ ಕಿಂಗ್ ಹಾಗೂ ಡೆವೋನ್ ಥೋಮಸ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ವಿಂಡೀಸ್ 5 ವಿಕೆಟ್ಗಳ ರೋಚಕ ಜಯ ಸಾಧಿಸಿತು .
ಟಾಸ್ ಸೋತು ಬ್ಯಾಟಿಂಗ್ಗೆ ಇಳಿದ ಭಾರತ ಇನ್ನಿಂಗ್ಸ್ನ ಮೊದಲ ಓವರ್ನ ಮೊದಲ ಎಸೆತದಲ್ಲೇ ರೋಹಿತ್ ಶರ್ಮಾ ವಿಕೆಟ್ ಕಳೆದುಕೊಂಡಿತು. ಸೂರ್ಯಕುಮಾರ್ ಯಾದವ್ (11) ಹಾಗೂ ಶ್ರೇಯಸ್ ಅಯ್ಯರ್ (10) ಈ ಬಾರಿ ಕೂಡ ತಂಡಕ್ಕೆ ನೆರವಾಗಲಿಲ್ಲ. ಆದರೆ, ಮಧ್ಯಮ ಕ್ರಮಾಂಕದಲ್ಲಿ ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ ಹಾಗೂ ರವೀಂದ್ರ ಜಡೇಜಾ ಕೊಂಚ ರನ್ ಕಲೆಹಾಕಿದರು. ಕಳೆದ ಬಾರಿ ಮಿಂಚಿದ್ದ ದೀನೇಶ್ ಕಾರ್ತಿಕ್ ಈ ಪಂದ್ಯದಲ್ಲಿ ಮುಗ್ಗರಿಸಿದರು.ಅಂತಿಮವಾಗಿ ಭಾರತ 19.4 ಓವರ್ನಲ್ಲಿ 138 ರನ್ಗೆ ಆಲೌಟ್ ಆಯಿತು.
ಸುಲಭ ಟಾರ್ಗೆಟ್ ಬೆನ್ನಟ್ಟಿದ ವೆಸ್ಟ್ ಇಂಡೀಸ್ ಕೂಡ ಆರಂಭದಲ್ಲಿ ವಿಕೆಟ್ ಕಳೆದುಕೊಂಡಿತು. ಕೊನೇ ಹಂತದಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸಿದ ಡೆವೋನ್ ಥೋಮಸ್,ಕೇವಲ 19 ಎಸೆತಗಳಲ್ಲಿ 1 ಫೋರ್, 2 ಸಿಕ್ಸರ್ನೊಂದಿಗೆ ಅಜೇಯ 31 ರನ್ ಚಚ್ಚಿದರು. ಕೊನೆಯ ಓವರ್ನಲ್ಲಿ ವಿಂಡೀಸ್ ಗೆಲುವಿಗೆ 10 ರನ್ಗಳ ಅವಶ್ಯಕತೆಯಿತ್ತು. ಆದರೆ, ಆವೇಶ್ ಖಾನ್ ನೋ ಬಾಲ್, ಫ್ರೀ ಹಿಟ್ ನೀಡಿದ ಪರಿಣಾಮ ವಿಂಡೀಸ್ಗೆ ಜಯ ಒಲಿದುಬಂತು. 19.2 ಓವರ್ನಲ್ಲಿ 5 ವಿಕೆಟ್ ನಷ್ಟಕ್ಕೆ 141 ರನ್ ಬಾರಿಸಿ 5 ವಿಕೆಟ್ಗಳಿಂದ ಗೆದ್ದಿತು.