ಭಾರತ ಕೋವಿಡ್ ನ ಎರಡನೇ ಅಲೆಗೆ ತತ್ತರಿಸುತ್ತಿದೆ, ದೇಶದಲ್ಲಿ ದಿನಪ್ರತಿ ಸರಾಸರಿ ಮೂರುವರೆ ಲಕ್ಷಗಳಷ್ಟು ಹೊಸ ಪ್ರಕರಣಗಳು ದಾಖಲಾಗುತ್ತಿವೆ. ಆಸ್ಪತ್ರೆಗಳು ವೆಂಟಿಲೇಟರ್, ಆಕ್ಸಿಜನ್, ಬೆಡ್‌ಗಳಿಲ್ಲದೆ ರೋಗಿಗಳನ್ನು ಮನೆಗೆ ವಾಪಾಸ್ ಕಳುಹಿಸುತ್ತಿವೆ. ಈ ಮಧ್ಯೆ ಅಂತರರಾಷ್ಟ್ರೀಯ ಮಾಧ್ಯಮಗಳು ಭಾರತ ಸರ್ಕಾರದ ವೈಫಲ್ಯವನ್ನು ಅತ್ಯಂತ ವಸ್ತುನಿಷ್ಠವಾಗಿ ವರದಿ ಮಾಡುತ್ತಿವೆ. ಜನತೆಯ ಪರವಾಗಿ ಸರ್ಕಾರವನ್ನು ಪ್ರಶ್ನಿಸಬೇಕಿದ್ದ ಬಹುತೇಕ ಭಾರತೀಯ ಮಾಧ್ಯಮಗಳು ಈ ಬಗ್ಗೆ ಮೌನ ತಳೆದಿರುವಾಗ ಅಂತರರಾಷ್ಟ್ರೀಯ ಮಾಧ್ಯಮಗಳು ಸರ್ಕಾರವನ್ನು ಪ್ರಶ್ನಿಸುತ್ತಿರುವುದು ಸರ್ಕಾರಕ್ಕೆ ಮುಜುಗರ ಉಂಟುಮಾಡಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ತಪ್ಪುದಾರಿಗೆಳೆಯುವಿಕೆ ಮತ್ತು ತಪ್ಪು ನಿರ್ಧಾರಗಳಿಂದಾಗಿ ದೇಶದಲ್ಲಿ ಎರಡನೇ ಅಲೆಯ ಕರೋನವೈರಸ್ ವಿನಾಶಕಾರಿಯಾಗಿದೆ ಎಂದು ‘ದಿ ಆಸ್ಟ್ರೇಲಿಯಾ’ದಲ್ಲಿ ಪ್ರಕಟವಾದ ಲೇಖನವೊಂದಕ್ಕೆ ಭಾರತ ಸೋಮವಾರ ಬಲವಾದ ಆಕ್ಷೇಪ ಎತ್ತಿದೆ.
ದಿ ಆಸ್ಟ್ರೇಲಿಯಾದ ಪ್ರಧಾನ ಸಂಪಾದಕ ಕ್ರಿಸ್ಟೋಫರ್ ಡೋ ಅವರಿಗೆ ಬರೆದ ಪತ್ರದಲ್ಲಿ, ಕ್ಯಾನ್‌ಬೆರಾದಲ್ಲಿನ ಭಾರತೀಯ ಹೈಕಮಿಷನ್ ಈ ಲೇಖನವನ್ನು “ಸಂಪೂರ್ಣವಾಗಿ ಆಧಾರರಹಿತ, ದುರುದ್ದೇಶಪೂರಿತ ಮತ್ತು ಅಪಪ್ರಚಾರದ ಉದ್ದೇಶ ಹೊಂದಿದೆ ಎಂದು ಕರೆದಿದೆ ಮತ್ತು ಲೇಖನವನ್ನು ತಿದ್ದಿ ಪುನಃ ಪ್ರಕಟಿಸುವಂತೆ ಒತ್ತಾಯಿಸಿದೆ.
ಈ ನಿರ್ಣಾಯಕ ಕ್ಷಣದಲ್ಲಿ, ಜಾಗತಿಕ ಮಾರಕ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಭಾರತ ಸರ್ಕಾರ ಕೈಗೊಂಡ, ಸಾರ್ವತ್ರಿಕವಾಗಿ ಮೆಚ್ಚುಗೆ ಪಡೆದ ವಿಧಾನವನ್ನು ದುರ್ಬಲಗೊಳಿಸುವ ಏಕೈಕ ಉದ್ದೇಶದಿಂದ ಮಾತ್ರ ಅ ವರದಿಯನ್ನು ಬರೆಯಲಾಗಿದೆ ಎಂಬಂತೆ ತೋರುತ್ತದೆ”ಎಂದು ಅದು ಹೇಳಿದೆ.
ಫಿಲಿಪ್ ಶೆರ್ವೆಲ್ ಬರೆದ, ಪ್ರಶ್ನಾರ್ಹವಾದ ಲೇಖನವನ್ನು ಮೂಲತಃ ಶನಿವಾರ ಟೈಮ್ಸ್ ನಲ್ಲಿ “ಮೋದಿ ಭಾರತವನ್ನು ಲಾಕ್ಡೌನ್ ಮತ್ತು ಕೋವಿಡ್ ಅಪೋಕ್ಯಾಲಿಪ್ಸ್ಗೆ ಕರೆದೊಯ್ಯುತ್ತಾರೆ” ಎಂಬ ಶೀರ್ಷಿಕೆಯೊಂದಿಗೆ ಪ್ರಕಟಿಸಲಾಗಿತ್ತು. ಇದನ್ನು ಒಂದು ದಿನದ ನಂತರ ಆಸ್ಟ್ರೇಲಿಯಾದ ದಿನಪತ್ರಿಕೆಯಲ್ಲಿ ಭಾರತವನ್ನು ವೈರಲ್ ಅಪೋಕ್ಯಾಲಿಪ್ಸ್ಗೆ ಕರೆದೊಯ್ದ ಮೋದಿ” ಎಂದು ಪುನರ್‌ಪ್ರಕಟಿಸಲಾಗಿದೆ.
ಲೇಖನವು ‘ದುರಂಹಕಾರ’ ‘ಅತಿ ರಾಷ್ಟ್ರೀಯತಾವಾದಿ ರಾಜಕೀಯ’, ‘ನಿಧಾನವಾದ ಲಸಿಕೆ ನೀಡುವಿಕೆ’, ‘ಆರೋಗ್ಯ ವ್ಯವಸ್ಥೆಯಲ್ಲಿನ ಅಸಮರ್ಪಕತೆ’ ಮತ್ತು ‘ಆರ್ಥಿಕತೆಯ ಮೇಲೆ ಪ್ರಚಾರವನ್ನು ಹೆಚ್ಚಿಸಿದ್ದು’ ಬಿಕ್ಕಟ್ಟಿನ ಹಿಂದಿನ ಕೆಲವು ಅಂಶಗಳಾಗಿ ಸೂಚಿಸಿದೆ. “ದುರಹಂಕಾರ, ಹೈಪರ್-ನ್ಯಾಷನಲಿಸಂ ಮತ್ತು ಅಧಿಕಾರಶಾಹಿ ಅಸಮರ್ಥತೆಯು ಒಟ್ಟಾಗಿ ಮಹಾ ಬಿಕ್ಕಟ್ಟನ್ನು ಸೃಷ್ಟಿಸಿದೆ ”ಎಂದು ಶೆರ್ವೆಲ್ ಬರೆದಿದ್ದಾರೆ.
ಆರೋಗ್ಯ ತಜ್ಞರು ಪದೇ ಪದೇ ಎಚ್ಚರಿಕೆ ನೀಡಿದರೂ ಸರ್ಕಾರ ಅದನ್ನು ನಿರ್ಲಕ್ಷಿಸಿತು ಮತ್ತು ದೇಶದಲ್ಲಿ ಹೆಚ್ಚುತ್ತಿರುವ ಆಮ್ಲಜನಕ ಮತ್ತು ಲಸಿಕೆಗಳ ಕೊರತೆಯ ಹೊರತಾಗಿಯೂ, ಕುಂಭಮೇಳದಂತಹ ಧಾರ್ಮಿಕ ಕೂಟಗಳನ್ನು ಅಡೆತಡೆಯಿಲ್ಲದೆ ಮುಂದುವರಿಸಲು ಸರ್ಕಾರ ಅವಕಾಶ ಮಾಡಿಕೊಟ್ಟಿತು. ಪ್ರಧಾನಮಂತ್ರಿ ಸ್ವತಃ ಬೃಹತ್ ಚುನಾವಣಾ ರ್ಯಾಲಿಗಳನ್ನು ನಡೆಸಿದರು. ಮತ್ತು ಆ ರ‌್ಯಾಲಿಗಳಲ್ಲಿ ಲಕ್ಷಾಂತರ ಮಂದಿ ಮಾಸ್ಕ್ ಧರಿಸದೆ ಭಾಗವಹಿಸಿದರು ಎಂದು ಪತ್ರಿಕೆಯು ವರದಿ ಮಾಡಿದೆ.
ಈ ಎಲ್ಲಾ ಆರೋಪಗಳನ್ನು ಸಂಪೂರ್ಣ ಅಲ್ಲಗೆಳೆದಿರುವ ಭಾರತೀಯ ಅಧಿಕಾರಿಗಳು ‘ದಿ ಆಸ್ಟ್ರೇಲಿಯಾ’ಕ್ಕೆ ಬರೆದ ಪತ್ರದಲ್ಲಿ ಆರೋಪಗಳು ಸತ್ಯಕ್ಕೆ ದೂರವಾಗಿದೆ ಎಂದು ಕರೆದಿದ್ದಾರೆ. ಮೋದಿಯವರ ‘ನಿರ್ಬಂಧಿತ ಚುನಾವಣಾ ಪ್ರಚಾರ’ ಮತ್ತು ‘ಒಂದು ಧಾರ್ಮಿಕ ಸಭೆ’ಯನ್ನು ದೂಷಿಸುವ ಭರದಲ್ಲಿ ಲೇಖನ ಬರೆಯಲಾಗಿದೆ” ಎಂದು ಹೈಕಮಿಷನ್ ಹೇಳಿದೆ. “ಸಾಂಕ್ರಾಮಿಕದ ಬಿಕ್ಕಟ್ಟನ್ನು ನಿಭಾಯಿಸಲು ಸರ್ಕಾರವು ‘ಯುದ್ಧೋಪಾದಿ’ಯಲ್ಲಿ ಸಾಧ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ” ಎಂದೂ ಅದು ಹೇಳಿದೆ.
ಆದರೆ ಭಾರತೀಯ ಟ್ವಿಟ್ಟಿಗರು ಸರ್ಕಾರವನ್ನು ಆಕ್ಷೇಪಿಸುತ್ತಾ ‘ದಿ ಆಸ್ಟ್ರೇಲಿಯಾ’ದ ವರದಿ ವಾಸ್ತವವಾಗಿರುವಾಗ ಸರ್ಕಾರ ಅದನ್ನು ಯಾವ ಆಧಾರದ ಮೇಲೆ ಅಲ್ಲಗೆಳೆಯುತ್ತಿದೆ ಎಂದು ಪ್ರಶ್ನಿಸುತ್ತಿದ್ದಾರೆ. “ಇಂದು ಕೂಡ ಬಿಜೆಪಿ ನಾಯಕರು ಪಶ್ಚಿಮ ಬಂಗಾಳದಲ್ಲಿ ಪ್ರಚಾರ ಮಾಡುತ್ತಿದ್ದಾರೆ. ಚುನಾವಣಾ ರ‌್ಯಾಲಿ ಪ್ರಾರಂಭವಾದ ನಂತರ ಪಶ್ಚಿಮ ಬಂಗಾಳ ದಲ್ಲಿ ಸೋಂಕು 10 ಪಟ್ಟು ಹೆಚ್ಚಾಗಿದೆ” ಎಂದು ಒಬ್ಬ ಟ್ವಿಟರ್ ಬಳಕೆದಾರರು ಟ್ವೀಟ್ ಮಾಡಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಮೋದಿಯವರ ಭಾಗವಹಿಸಿದ ಹಲವಾರು ವೀಡಿಯೊಗಳು ಮತ್ತು ಚಿತ್ರಗಳನ್ನು ಹಂಚಿಕೊಂಡಿರುವ ಟ್ವಿಟರ್ ಬಳಕೆದಾರರು ಅವರ ಸಾವಿರಾರು ಬೆಂಬಲಿಗರು ಮಾಸ್ಕ್ ಧರಿಸದ ಅಥವಾ ದೈಹಿಕ ಅಂತರ ಕಾಪಾಡದ ಬಗ್ಗೆ ಪುರಾವೆಗಳನ್ನು ತೋರಿಸಿ “’ನಿರ್ಬಂಧಿತ ಚುನಾವಣಾ ಪ್ರಚಾರ’ ಇದೇನಾ?” ಎಂದು ಪ್ರಶ್ನಿಸಿದ್ದಾರೆ.

‘ದಿ ಆಸ್ಟ್ರೇಲಿಯಾ’ ಮಾತ್ರವಲ್ಲದೆ ಇತರ ಅಂತರರಾಷ್ಟ್ರೀಯ ಮಾಧ್ಯಮಗಳೂ ಕರೋನಾ ನಿರ್ವಹಣೆಯಲ್ಲಿನ ಭಾರತದ ವಿಫಲತೆಯ ಬಗ್ಗೆ ಸರಣಿ ಲೇಖನಗಳನ್ನು ಪ್ರಕಟಿಸಿವೆ.
“ಭಾರತವು ಈಗ ಜೀವಂತ ನರಕವಾಗಿದೆ (india is now a living hell)”ಎಂದು ಇಂಗ್ಲಿಷ್ ದಿನಪತ್ರಿಕೆ ‘ದಿ ಗಾರ್ಡಿಯನ್’ ಏಪ್ರಿಲ್ 23 ರಂದು ಪ್ರಕಟಿಸಿದ ಸಂಪಾದಕೀಯದಲ್ಲಿ ಬರೆದಿದೆ. ಇಸ್ರೇಲಿ ದಿನಪತ್ರಿಕೆ ಹಾರೆಟ್ಜ್ “ತಯಾರಿ ಮಾಡಿಕೊಳ್ಳಲು ಸರ್ಕಾರಕ್ಕೆ ಸಮಯವಿದ್ದೂ ಸರ್ಕಾರ ತಯಾರಾಗಿರಲಿಲ್ಲ ಎನ್ನುವುದನ್ನು ಒಪ್ಪಿಕೊಳ್ಳಲು ಕಷ್ಟವಾಗುತ್ತಿದೆ” ಎಂದು ಬರೆದಿದೆ. ರೇಡಿಯೊ ಫ್ರಾನ್ಸ್ ಇಂಟರ್ನ್ಯಾಷನಲ್ ಸಹ ತಮ್ಮ ಸ್ಪ್ಯಾನಿಷ್ ವಿಭಾಗದಲ್ಲಿ ಬರೆದ ಲೇಖನದಲ್ಲಿ “ಭಾರತದಲ್ಲಿನ ಆರೋಗ್ಯ ಕುಸಿತಕ್ಕೆ ಮುಖ್ಯ ಅಪರಾಧಿ ನರೇಂದ್ರ ಮೋದಿ ” ಎಂದು ಹೇಳಿದೆ. ಎಪ್ರಿಲ್ 20ರಂದು ನ್ಯೂಯಾರ್ಕ್ ಟೈಮ್ಸ್ “India’s Second Covid Wave Is Completely Out of Control” ಎಂದು ವರದಿ ಪ್ರಕಟಿಸಿದೆ. ಭಾರತಕ್ಕೆ ಅಪ್ಪಳಿಸಿರುವ ಕರೋನಾದ ಎರಡನೇ ಅಲೆ ತಪ್ಪಿಸಬಹುದಾಗಿದ್ದ ದುರಂತವಾಗಿದ್ದು ಸರ್ಕಾರದ ತಪ್ಪು ನಿರ್ಧಾರಗಳಿಂದಾಗಿ ದೇಶ ಬಳಲುವಂತಾಯಿತು ಎಂದು ‘ದಿ ವಾಷಿಂಗ್ಟನ್ ಪೋಸ್ಟ್’ ವರದಿ ಮಾಡಿದೆ.
ಸರ್ಕಾರದ ಜನವಿರೋಧಿ ನೀತಿಗಳನ್ನು ವಿರೋಧಿಸುವ ದೇಶದೊಳಗಿನ ಕೆಲವೇ ಕೆಲವು ಮಾಧ್ಯಮಗಳಿಗೆ ದೇಶದ್ರೋಹದ, ಫಾರಿನ್ ಫಂಡ್‌ನ ಹಣೆ ಪಟ್ಟಿ ಹಚ್ಚುವ ಆಡಳಿತ ಪಕ್ಷ ಮತ್ತದರ ಐಟಿ ಸೆಲ್ ಅಂತರರಾಷ್ಟ್ರೀಯ ಮಾಧ್ಯಮಗಳ ವರದಿಯನ್ನು ವಸ್ತುನಿಷ್ಠವಾಗಿ ಸ್ವೀಕರಿಸಿ ಪರಿಣಾಮಕಾರಿ ಕ್ರಮಕ್ಕೆ ಮುಂದಾಗುತ್ತದೋ ಅಥವಾ ಎಲ್ಲವನ್ನೂ ಸಾರಾಸಗಟಾಗಿ ನಿರಾಕರಿಸಿ ವ್ಯಕ್ತಿ ಪೂಜೆ ಮುಂದುವರೆಸುವ ಹಳೆಯ ಚಾಳಿಯನ್ನು ಮುಂದುವರಿಸುತ್ತಾ ಎಂದು ಕಾದು ನೋಡಬೇಕು.