ಮಧ್ಯ ಯುಗದ ಊಳಿಗಮಾನ್ಯ ವ್ಯವಸ್ಥೆಯಲ್ಲಿ ಮತ್ತು ನಂತರದ ನಿರಂಕುಶ ರಾಜಪ್ರಭುತ್ವದ ಕಾಲಘಟ್ಟದಲ್ಲಿ ಪ್ರಜೆಗಳ ಪ್ರತಿರೋಧವನ್ನು ಹತ್ತಿಕ್ಕಲು ಕ್ರೂರ ಪದ್ಧತಿಗಳನ್ನು ಅನುಸರಿಸಲಾಗುತ್ತಿತ್ತು. ವರ್ಷಗಟ್ಟಲೆ ಕತ್ತಲೆ ಕೋಟೆಗಳಲ್ಲಿ ಕೂಡಿಹಾಕುವುದು, ಗೃಹಬಂಧನಕ್ಕೊಳಪಡಿಸುವುದು, ಅನ್ನಾಹಾರಗಳನ್ನು ನೀಡದೆ ಉಪವಾಸ ಕೆಡವಿ ದೇಹವನ್ನು ಶಿಥಿಲಗೊಳಿಸುವುದು ಸಾಮಾನ್ಯವಾಗಿ ಅನುಸರಿಸಲಾಗುತ್ತಿದ್ದ ಶಿಕ್ಷೆಯ ವಿಧಾನಗಳು. ಜನರು ಮಾತನಾಡದಂತೆ ಮಾಡಲು, ರಾಜಾಜ್ಞೆಗಳನ್ನು ಮೀರದಂತೆ ನಿಯಂತ್ರಿಸಲು ಪ್ರಜೆಗಳ ಮೇಲೆ ಸದಾ ಕಣ್ಗಾವಲು ಇರಿಸಲಾಗುತ್ತಿತ್ತು. ಈ ಕಟ್ಟಪ್ಪಣೆಗಳನ್ನೂ ಮೀರಿ ತಮ್ಮ ಪ್ರತಿರೋಧ ವ್ಯಕ್ತಪಡಿಸುವವರ ನಾಲಿಗೆ ಕತ್ತರಿಸುವುದು ಸರ್ವೇ ಸಾಮಾನ್ಯ ಶಿಕ್ಷೆಯಾಗಿತ್ತು. ಮಾತನಾಡಲಾಗದ ಮನುಷ್ಯ ಕ್ರಮೇಣ ನಿಷ್ಕ್ರಿಯನಾಗುತ್ತಾನೆ ಎಂಬ ಒಂದು ವಿಶ್ವಾಸ ಅಂದಿನ ಕ್ರೂರ ಆಡಳಿತಗಾರರಲ್ಲಿತ್ತು.
ನಾಗರಿಕತೆ ಬೆಳೆದಂತೆಲ್ಲಾ ಮಾನವ ಜಗತ್ತು ಈ ಹಂತಗಳನ್ನು ದಾಟುತ್ತಲೇ ಬಂದಿದೆ. ಪ್ರಪಂಚದ ಪ್ರತಿಯೊಬ್ಬ ವ್ಯಕ್ತಿಗೂ ತನ್ನದೇ ಆದ ಘನತೆ ಮತ್ತು ವ್ಯಕ್ತಿತ್ವ ಇದೆ ಮತ್ತು ಅದನ್ನು ಗೌರವಿಸುವುದು ಎಲ್ಲ ರೀತಿಯ ಆಡಳಿತ ವ್ಯವಸ್ಥೆಗಳ ಕರ್ತವ್ಯ ಎನ್ನುವ ಉದಾತ್ತ ಚಿಂತನೆಗಳು ಮೂಡಲು ಶತಮಾನಗಳೇ ಬೇಕಾದವು. ಗುಲಾಮಗಿರಿಯಿಂದ ಊಳಿಗಮಾನ್ಯ ವ್ಯವಸ್ಥೆ, ನಂತರ ಪ್ರಜಾಪ್ರಭುತ್ವದ ಕೂಗು, ಸಮಾಜವಾದ ಮತ್ತು ಸಮತಾವಾದದ ಹಾದಿಯಲ್ಲಿ ನಡೆದುಬಂದಿರುವ ಮಾನವ ಜಗತ್ತು ಇಂದು ಪ್ರಜಾಪ್ರಭುತ್ವವನ್ನೇ ಉಸಿರಾಡುತ್ತಿದೆ. ಉಸಿರೆತ್ತಲಾಗದ ಕ್ರೂರ ದಬ್ಬಾಳಿಕೆಯ ನಡುವೆಯೂ ತಮ್ಮ ಆಕ್ರೋಶದ ದನಿಯನ್ನು ಸಾರ್ವಜನಿಕವಾಗಿ ದಾಖಲಿಸುವ ಮಟ್ಟಿಗೆ ಮನುಕುಲ ಮುನ್ನಡೆದು ಬಂದಿದೆ.
ಈ ಮುನ್ನಡೆಗೆ ಕಾರಣ ಪ್ರಜಾಪ್ರಭುತ್ವಕ್ಕಾಗಿ, ಮಾನವ ಘನತೆಗಾಗಿ, ಮನುಷ್ಯನ ಮೂಲಭೂತ ಹಕ್ಕುಗಳಿಗಾಗಿ ಶತಮಾನಗಳಿಂದ ನಡೆಯುತ್ತಾ ಬಂದಿರುವ ಹೋರಾಟಗಳು. ಅಪಮಾನಗಳನ್ನು ಅನುಭವಿಸುತ್ತಲೇ ಅಪಾರ ಶೋಷಣೆಗೊಳಗಾದ ಜನಸಮುದಾಯಗಳು ಈ ಹೋರಾಟಗಳ ಮೂಲಕವೇ ತಮ್ಮ ಬದುಕುವ ಹಕ್ಕುಗಳನ್ನು ಉಳಿಸಿಕೊಂಡುಬಂದಿವೆ. ವಿಶ್ವದ ಇತರೆಡೆಗಳಲ್ಲಿ ಊಳಿಗಮಾನ್ಯ ಧೋರಣೆ ಮತ್ತು ನಿರಂಕುಶ ಪ್ರಭುತ್ವ ಶೋಷಿತ ಜನಸಮುದಾಯಗಳ ಬದುಕುವ ಹಕ್ಕುಗಳನ್ನು ಕಸಿದುಕೊಳ್ಳುತ್ತಿದ್ದರೆ ಭಾರತದಲ್ಲಿ ಇದರೊಟ್ಟಿಗೇ ಜಾತಿ ವ್ಯವಸ್ಥೆಯ ಅಪಮಾನಗಳನ್ನೂ ಎದುರಿಸಬೇಕಿತ್ತು. ಪೇಶ್ವೆಗಳ ಕಾಲದಲ್ಲಿ ಅಸ್ಪೃಶ್ಯ ಸಮುದಾಯಗಳು ಎದುರಿಸಿದ ಅಪಮಾನಕರ ಸನ್ನಿವೇಶಗಳು ಈ ರೀತಿಯ ಬೌದ್ಧಿಕ ಮತ್ತು ಭೌತಿಕ ಕ್ರೌರ್ಯದ ಸ್ಪಷ್ಟ ನಿದರ್ಶನಗಳು. ಪ್ರಜಾಪ್ರಭುತ್ವ ತನ್ನ ಬೇರುಗಳನ್ನು ಗಟ್ಟಿಗೊಳಿಸಿಕೊಳ್ಳುವ ಹಂತದವರೆಗೂ ಮನುಕುಲ ಈ ಕ್ರೌರ್ಯವನ್ನು ಅನುಭವಿಸಿದೆ. ಮನುಷ್ಯನ ಮಾತನಾಡುವ ಹಕ್ಕು ಕಸಿದುಕೊಳ್ಳುವ ಮೂಲಕ ಇಡೀ ಸಮಾಜದ ದನಿಯನ್ನು ಹತ್ತಿಕ್ಕುವ ಆಳುವ ವರ್ಗಗಳ ತಂತ್ರಗಾರಿಕೆಗಳಿಗೆ ಇವೆಲ್ಲವೂ ಚಾರಿತ್ರಿಕ ನಿದರ್ಶನಗಳು. ರಾಜಪ್ರಭುತ್ವದ ಕಾಲಘಟ್ಟದಲ್ಲಿ ಪ್ರತಿರೋಧ ವ್ಯಕ್ತಪಡಿಸುವವರ ನಾಲಿಗೆ ಕತ್ತರಿಸುವುದು, ಆ ಸಂದರ್ಭದ ಸುಧಾರಿತ ಶಿಕ್ಷಾ ವಿಧಾನವಾಗಿತ್ತು.
74 ವರ್ಷಗಳ ಸ್ವತಂತ್ರ ಆಳ್ವಿಕೆಯ ನಂತರ ಭಾರತದಲ್ಲಿ ಈ ಚಾರಿತ್ರಿಕ ಕಥನಗಳನ್ನು ಸ್ಮರಿಸುವ ಒಂದು ಸನ್ನಿವೇಶ ಸೃಷ್ಟಿಯಾಗಿದ್ದರೆ ಅದಕ್ಕೆ ಕಾರಣ #ಆತ್ಮನಿರ್ಭರ ಭಾರತದ ಆಧುನಿಕ ಆಳುವ ವರ್ಗಗಳು ಅನುಸರಿಸುತ್ತಿರುವ “ ಮಾತು ಹತ್ತಿಕ್ಕುವ ” ತಂತ್ರಗಾರಿಕೆಗಳು. ಪ್ರಜಾತಂತ್ರ ವ್ಯವಸ್ಥೆಯಲ್ಲೂ, ಸಂವಿಧಾನದ ಚೌಕಟ್ಟಿನಲ್ಲೂ, ಸಾರ್ವಭೌಮ ಪ್ರಜೆಗಳ ಮಾತನಾಡುವ ಹಕ್ಕುಗಳನ್ನು ಕಸಿದುಕೊಳ್ಳುವ ಅವಕಾಶಗಳು ಆಳುವ ವರ್ಗಗಳಿಗೆ ಸಹಜವಾಗಿಯೇ ಇರುತ್ತದೆ. ಏಕೆಂದರೆ ಆಳುವವರು ಮತ್ತು ಆಳಿಸಿಕೊಳ್ಳುವವರ ನಡುವಿನ ಅಂತರವನ್ನು ಶಾಶ್ವತವಾಗಿ ಕಾಪಾಡಿಕೊಳ್ಳಲು ಇದು ಅನಿವಾರ್ಯವೂ ಆಗಿರುತ್ತದೆ. ಸ್ವಾತಂತ್ರ್ಯ ಮತ್ತು ಸ್ವೇಚ್ಚಾಚಾರದ ನಡುವೆ ಇರುವ ಸೂಕ್ಷ್ಮ ಎಳೆಗಳ ಅಂತರ ಎಲ್ಲ ಕಾಲಘಟ್ಟಗಳಲ್ಲೂ ಆಳುವವರ ಪರವಾಗಿಯೇ ಇರುವುದು ಪ್ರಜಾತಂತ್ರ ವ್ಯವಸ್ಥೆಯ ವಿಡಂಬನೆ, ಆದರೂ ಕಟು ವಾಸ್ತವ.
ಭಾರತ ಇಂದು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ಎಂಬ ಹೆಗ್ಗಳಿಕೆಯನ್ನು ಹೊಂದಿದೆ. ಭಾರತದ ಜನತೆಗೆ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ವಾಕ್ ಸ್ವಾತಂತ್ರ್ಯ ಸಾಂವಿಧಾನಿಕವಾಗಿ ಲಭ್ಯವಾಗಿದೆ. ಈ ಸ್ವಾತಂತ್ರ್ಯವನ್ನು ಸ್ವೇಚ್ಚಾಚಾರ ಎಂದು ಭಾವಿಸಿ ದೇಶದ ಅಖಂಡತೆಗೆ ಧಕ್ಕೆ ಉಂಟುಮಾಡುವಂತಹ ಮಾತುಗಳು, ಸಂಜ್ಞೆಗಳು ಮತ್ತು ಇತರ ಅಭಿವ್ಯಕ್ತಿಗಳನ್ನು ಸಂವಿಧಾನವೇ ನಿಯಂತ್ರಿಸುತ್ತದೆ. ಒಂದು ಸ್ವಸ್ಥ ಸಮಾಜದಲ್ಲಿ ಇದು ಸಹಜವೇ. ಆದರೆ ಭಾರತದ ಪ್ರಭುತ್ವ ಸಂವಿಧಾನದ ಚೌಕಟ್ಟಿನಲ್ಲೇ ಸಂವಿಧಾನೇತರ ಕ್ರಮಗಳನ್ನು ಅನುಸರಿಸುವ ಮೂಲಕ ಈ ಮೂಲಭೂತ ಸ್ವಾತಂತ್ರ್ಯ ಮತ್ತು ಹಕ್ಕುಗಳನ್ನು ಕಸಿದುಕೊಳ್ಳುತ್ತಿರುವುದನ್ನು ಕಳೆದ ಏಳು ವರ್ಷಗಳಲ್ಲಿ ಗಮನಿಸುತ್ತಲೇ ಬಂದಿದ್ದೇವೆ. ಇದರ ಒಂದು ವಿಧಾನ ಅಂತರ್ಜಾಲ-ಮೊಬೈಲ್ ಸಂಪರ್ಕದ ಕಡಿತ.
ಡಿಜಿಟಲ್ ಯುಗದ ಸರದಾರನಂತೆ ಪೋಷಾಕು ಧರಿಸಿರುವ ಭಾರತ ಇಂದು ಡಿಜಿಟಲೀಕರಣದ ಉತ್ತುಂಗದಲ್ಲಿದೆ. ಪ್ರಾಥಮಿಕ ಶಾಲೆಯಿಂದ ಅತ್ಯುನ್ನತ ಅಧ್ಯಯನದವರೆಗೂ ಶಿಕ್ಷಣವೂ ಸಹ ಡಿಜಿಟಲ್ ಯುಗಕ್ಕೆ ಹೊಂದಿಕೊಂಡು ಹೋಗುವುದು ಕೋವಿದ್ ಸಂದರ್ಭದಲ್ಲಿ ಅನಿವಾರ್ಯ ಎನಿಸಿಬಿಟ್ಟಿದೆ. ಬಂಡವಾಳ ಮಾರುಕಟ್ಟೆಯ ಜಾಗತೀಕರಣ ಜಗತ್ತನ್ನು ಒಂದು ಪುಟ್ಟ ಹಳ್ಳಿಯಾಗಿ ಮಾರ್ಪಾಡು ಮಾಡಿದೆ ಎನ್ನುವ ಹೆಗ್ಗಳಿಕೆಗೆ ಪೂರಕವಾಗಿಯೇ ಇಂದು ಡಿಜಿಟಲ್ ತಂತ್ರಜ್ಞಾನ ಮನುಷ್ಯ ಮನುಷ್ಯರ ನಡುವಿನ ಸಂಪರ್ಕವನ್ನು ಸುಗಮಗೊಳಿಸಿದೆ. ಈ ಯುಗದಲ್ಲಿ ದೇಶದ ಜನತೆಯ ನಡುವೆ ಸಂವಹನದ ಮಾರ್ಗಗಳನ್ನು ಕಡಿತಗೊಳಿಸುವುದು, ಸಂವಹನದ ಸಾಧನಗಳನ್ನು ಸ್ಥಗಿತಗೊಳಿಸುವುದು, ನಿರಂಕುಶಪ್ರಭುತ್ವದ ನಾಲಿಗೆ ಕತ್ತರಿಸುವ ಶಿಕ್ಷೆಯಂತೆಯೇ ತೋರುವುದಿಲ್ಲವೇ ?
#ಆತ್ಮನಿರ್ಭರ ಭಾರತದ ಪ್ರಭುತ್ವ ಇದನ್ನು ವ್ಯವಸ್ಥಿತವಾಗಿ ಮಾಡುತ್ತಲೇ ಬಂದಿದೆ. ಸಂವಿಧಾನ ವಿಧಿ 370ರ ರದ್ದತಿಯ ನಂತರದಲ್ಲಿ ಅಂತರ್ಜಾಲ ಮತ್ತಿತರ ಸಂವಹನ ಮಾಧ್ಯಮಗಳನ್ನು ಸ್ಥಗಿತಗೊಳಿಸುವ ಅಥವಾ ಕಡಿತಗೊಳಿಸುವ ಒಂದು ವಿಕೃತ ಆಡಳಿತ ವ್ಯವಸ್ಥೆ ಈ ದೇಶದಲ್ಲಿ ಬಹುತೇಕ ಸಾರ್ವಜನಿಕವಾಗಿಯೂ ಮಾನ್ಯತೆ ಪಡೆದುಬಿಟ್ಟಿದೆ. ಯಾವುದೇ ತಪ್ಪು ಮಾಡದೆಯೂ ಒಂದು ವರ್ಷದ ಕಾಲದ ಅಂತರ್ಜಾಲ ಸಂಪರ್ಕವಿಲ್ಲದೆ ಡಿಜಿಟಲೀಕರಣ ಪೂರ್ವ ಯುಗದಲ್ಲಿ ಬಾಳಿದ ಕಾಶ್ಮೀರದ ಜನತೆಯ ಬಗ್ಗೆ ಕಿಂಚಿತ್ತೂ ಯೋಚಿಸದ ಒಂದು ಬೃಹತ್ ವರ್ಗದ ಜನರನ್ನು ಹಿಂದುತ್ವ ರಾಜಕಾರಣ ಸೃಷ್ಟಿಸಿದೆ. ಕಾಶ್ಮೀರದ ಅಮಾಯಕ ಜನತೆ ಎದುರಿಸಿದ ಶಿಕ್ಷೆಯನ್ನು ಇಂದು ದೇಶದ ಯಾವುದೇ ರಾಜ್ಯದ ಜನರು ಯಾವುದೇ ಸಮಯದಲ್ಲಿ ಎದುರಿಸಬೇಕಾಗಬಹುದು ಎನ್ನುವುದನ್ನು ಹರಿಯಾಣ ಸರ್ಕಾರ ಇತ್ತೀಚಿನ ರೈತ ಮುಷ್ಕರದ ಸಂದರ್ಭದಲ್ಲಿ ನಿರೂಪಿಸಿದೆ.
ಡಿಜಿಟಲ್ ಯುಗದಲ್ಲಿ ಮೊಬೈಲ್ ಸಂಪರ್ಕ ಮತ್ತು ಅಂತರ್ಜಾಲವನ್ನು ಸ್ಥಗಿತಗೊಳಿಸುವುದು ಆಳುವ ವರ್ಗಗಳ ಬೌದ್ಧಿಕ ಕ್ರೌರ್ಯದ ಒಂದು ಹೊಸ ಆಯಾಮವಾಗಿ ಭಾರತದಲ್ಲಿ ರೂಪುಗೊಳ್ಳುತ್ತಿದೆ. ಈ ನಿಟ್ಟಿನಲ್ಲಿ 2020ರ ಒಂದು ಪ್ರಕರಣದಲ್ಲಿ ಸುಪ್ರೀಂಕೋರ್ಟ್ (ಅನುರಾಧ ಭಾಸಿನ್ ಮತ್ತು ಒಕ್ಕೂಟ ಸರ್ಕಾರದ ಮೊಕದ್ದಮೆ) “ ಮಾಹಿತಿಯ ಸುಲಭಗಮ್ಯತೆ ಭಾರತದ ಸಂವಿಧಾನದ ಪ್ರಕಾರ ಮೂಲ ಭೂತ ಹಕ್ಕು, ಅಂತರ್ಜಾಲ ಅಥವಾ ಇತರ ಯಾವುದೇ ಸಂಪರ್ಕ ಮಾಧ್ಯಮದ ಮೇಲೆ ನಿರ್ಬಂಧ ಹೇರುವ ಸರ್ಕಾರದ ಹಕ್ಕು ತಾತ್ಕಾಲಿಕವಾಗಿದ್ದು, ಇದು ಕಾನೂನುಬದ್ಧವಾಗಿರಬೇಕು ” ಎಂದು ಹೇಳಿದೆ. ಅಂದರೆ ಅಪರೂಪದ ಸನ್ನಿವೇಶಗಳಲ್ಲಿ, ಸಾರ್ವಜನಿಕ ತುರ್ತುಪರಿಸ್ಥಿತಿಯಲ್ಲಿ ಅಥವಾ ಅಪಾಯಕಾರಿ ಸಂದರ್ಭಗಳಲ್ಲಿ ಮಾತ್ರವೇ ಸರ್ಕಾರ ಈ ಮಾರ್ಗವನ್ನು ಬಳಸಬಹುದು ಎಂದು ಕೋರ್ಟ್ ಆದೇಶಿಸಿದೆ.
ಆದರೆ ಇಂದಿನ ಒಕ್ಕೂಟ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಆದೇಶಗಳು ಸಂವಿಧಾನದಷ್ಟೇ ನಗಣ್ಯವಾಗಿ ಕಾಣುತ್ತದೆ. ಕೆಲವೇ ದಿನಗಳ ಹಿಂದೆ ಕಾಶ್ಮೀರದ ಪ್ರತ್ಯೇಕತಾವಾದಿ ನಾಯಕ ಸೈಯದ್ ಅಲಿಶಾ ಗಿಲಾನಿ ನಿಧನದ ಹಿನ್ನೆಲೆಯಲ್ಲಿ ಮತ್ತೊಮ್ಮೆ ಕಾಶ್ಮೀರದಲ್ಲಿ ಅಂತರ್ಜಾಲ ಸಂಪರ್ಕಗಳನ್ನು ಸ್ಥಗಿತಗೊಳಿಸಲಾಗಿದ್ದು, ಮೊಬೈಲ್ ಸಂಪರ್ಕವನ್ನು ನಿರ್ಬಂಧಿಸಲಾಗಿದೆ. ಇದೇ ಸಂದರ್ಭದಲ್ಲಿ ಹರಿಯಾಣದಲ್ಲಿ ರೈತರು ಹಮ್ಮಿಕೊಂಡಿದ್ದ ಮುಷ್ಕರದ ಸಂದರ್ಭದಲ್ಲೂ ಸಹ ಅಂತರ್ಜಾಲ-ಮೊಬೈಲ್ ಸಂಪರ್ಕಗಳನ್ನು ಸ್ಥಗಿತಗೊಳಿಸಲಾಗಿದೆ. ಇದು ಸುಪ್ರೀಂಕೋರ್ಟ್ ಆದೇಶದ ಸ್ಪಷ್ಟ ಉಲ್ಲಂಘನೆ ಎನ್ನುವುದು ನಿಸ್ಸಂದೇಹ. ಸರ್ಕಾರದ ಆಡಳಿತ ನೀತಿಗಳನ್ನು ವಿರೋಧಿಸಿ ಸಾರ್ವಭೌಮ ಜನತೆ ನಡೆಸುವ ಪ್ರತಿರೋಧಗಳನ್ನು ಹತ್ತಿಕ್ಕುವ ಮತ್ತೊಂದು ವಿಧಾನವನ್ನು ಭಾರತ ಸರ್ಕಾರ ಡಿಜಿಟಲ್ ಮಾಧ್ಯಮದ ಮೂಲಕ ಕಂಡುಕೊಂಡಿದೆ.
ಡಿಜಿಟಲ್ ಯುಗದಲ್ಲಿ ಅಂತರ್ಜಾಲ ಮತ್ತು ಮೊಬೈಲ್ ಸಮಾಜದ ಪ್ರಧಾನ ಸಂವಹನ ಮಾಧ್ಯಮಗಳಾಗಿವೆ. ಪರಸ್ಪರ ವ್ಯಕ್ತಿಗತ ಮಾತುಕತೆಗಳಿಂದ ಹಿಡಿದು ಅಂತಾರಾಷ್ಟ್ರೀಯ ವಿಚಾರಗೋಷ್ಟಿಗಳವರೆಗೆ ಈ ಡಿಜಿಟಲ್ ವೇದಿಕೆಗಳು ಮಾನವನನ್ನು ಬೌದ್ಧಿಕವಾಗಿ ಬಂಧಿಸಿವೆ. ಇದು ತಂತ್ರಜ್ಞಾನದ ಅವಿಷ್ಕಾರಕ್ಕೆ ಸಲ್ಲಬೇಕಾದ ಹೆಮ್ಮೆಯ ವಿಚಾರ. ಈ ಸಂವಹನ ಸಾಧನಗಳ ಮೂಲಕವೇ ಸಮಾಜ ತನ್ನ ಆಂತರಿಕ ತುಮುಲಗಳನ್ನು, ತುಡಿತಗಳನ್ನು ಹಂಚಿಕೊಳ್ಳುವ ಮೂಲಕ ಜನಸಾಮಾನ್ಯರ ನಡುವಿನ ಸಂಪರ್ಕ ಕೊಂಡಿಯನ್ನು ರೂಪಿಸುತ್ತವೆ. ತಮ್ಮ ಹಕ್ಕೊತ್ತಾಯಗಳಿಗಾಗಿ, ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಮತ್ತು ಆಳುವ ವರ್ಗಗಳ ಜನವಿರೋಧಿ ನೀತಿಗಳ ವಿರುದ್ಧ ಜನಸಮುದಾಯಗಳು ಹೋರಾಡುವ ಸಂದರ್ಭದಲ್ಲಿ ಪರಸ್ಪರ ವಿನಿಮಯ ಮಾಡಿಕೊಳ್ಳಬೇಕಾದ ಹಲವಾರು ಸಂಗತಿಗಳು ಇದ್ದೇ ಇರುತ್ತವೆ. ಈ ಅಭಿಪ್ರಾಯ ಹಂಚಿಕೆ ಮತ್ತು ವಿನಿಮಯದ ಪ್ರಯತ್ನಗಳನ್ನು ಹತ್ತಿಕ್ಕುವ ಯಾವುದೇ ಪ್ರಯತ್ನಗಳು, ಭೌತಿಕವಾಗಿ ನಾಲಿಗೆ ಕತ್ತರಿಸಿದಂತೆಯೇ ಆಗುವುದಲ್ಲವೇ ?
#ಆತ್ಮನಿರ್ಭರ ಭಾರತದ ಆಳುವ ವರ್ಗಗಳು ಈ ಬೌದ್ಧಿಕ ಕ್ರೌರ್ಯವನ್ನೇ ಹೆಮ್ಮೆಯಿಂದ ಮೆರೆಯುತ್ತಿವೆ. 2020ರಲ್ಲಿ 129 ವಿಭಿನ್ನ ಸಂದರ್ಭಗಳಲ್ಲಿ ಸರ್ಕಾರಗಳು ಕೈಗೊಂಡ ಅಂತರ್ಜಾಲ ಸ್ಥಗಿತಗೊಳಿಸುವ ಕ್ರಮದಿಂದ 2.8 ಶತಕೋಟಿ ಡಾಲರ್ ಆರ್ಥಿಕ ನಷ್ಟವಾಗಿದೆಯಷ್ಟೇ ಅಲ್ಲದೆ, ಒಂದು ಕೋಟಿಗೂ ಹೆಚ್ಚು ಜನತೆ ಇದರಿಂದ ಕಷ್ಟ ಅನುಭವಿಸುವಂತಾಗಿದೆ. ಆಧುನಿಕ ಡಿಜಿಟಲ್ ಯುಗದಲ್ಲಿ ಮಾಹಿತಿ, ಶಿಕ್ಷಣ, ವಿದ್ಯಾಭ್ಯಾಸ, ಮನರಂಜನೆ, ಆರೋಗ್ಯ ಕಾಳಜಿ, ಜೀವನೋಪಾಯ ಹೀಗೆ ಜನರ ನಿತ್ಯ ಬದುಕಿನ ಪ್ರತಿಯೊಂದು ಹಂತದಲ್ಲೂ ಅಂತರ್ಜಾಲ ಮತ್ತು ಮೊಬೈಲ್ ಪ್ರಧಾನ ಪಾತ್ರ ವಹಿಸುತ್ತದೆ. ಈ ಸಾಧನಗಳನ್ನು ನಿರ್ಬಂಧಿಸುವುದರಿಂದ ಜನಸಾಮಾನ್ಯರ ನಿತ್ಯ ಬದುಕು ಅಸ್ತವ್ಯಸ್ತವಾಗುವ ಸಾಧ್ಯತೆಗಳೇ ಹೆಚ್ಚು. ಆನ್‍ಲೈನ್ ಶಿಕ್ಷಣದ ಪರಿಸರದಲ್ಲಿ 60 ಲಕ್ಷಕ್ಕೂ ಹೆಚ್ಚು ಮಕ್ಕಳು, ಡಿಜಿಟಲ್ ಸೌಲಭ್ಯವಿಲ್ಲದೆ ಶಿಕ್ಷಣವಂಚಿತರಾಗಿರುವ ನಿದರ್ಶನ ನಮ್ಮ ಕಣ್ಣೆದುರಿನಲ್ಲೇ ಇದೆಯಲ್ಲವೇ ?
ಅಂತರ್ಜಾಲ ಸಂಪರ್ಕ ಕಡಿತಗೊಳಿಸುವ ಸಂದರ್ಭದಲ್ಲಿ ಸರ್ಕಾರಗಳು ನೀಡುವ ಸಮಜಾಯಿಷಿ ಎಂದರೆ, ಇದು ಕೇವಲ ಮೊಬೈಲ್ ಬಳಕೆದಾರರನ್ನು ಮಾತ್ರವೇ ಬಾಧಿಸುತ್ತದೆ, ಬ್ರಾಡ್‍ಬ್ಯಾಂಡ್ ಬಳಕೆದಾರರಿಗೆ ಅನ್ವಯಿಸುವುದಿಲ್ಲ ಎನ್ನುವುದು. ಆದರೆ ವಸ್ತುಸ್ಥಿತಿಯನ್ನು ಗಮನಿಸಿದರೆ ಸರ್ಕಾರದ ಮತ್ತೊಂದು ಸುಳ್ಳು ಸ್ಪಷ್ಟವಾಗುತ್ತದೆ. ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರದ 2019ರ ವರದಿಯ ಅನುಸಾರ ಭಾರತದಲ್ಲಿ ಅಂತರ್ಜಾಲ ಬಳಕೆದಾರರ ಪೈಕಿ ಶೇ 97.02ರಷ್ಟು ಜನರು ಮೊಬೈಲ್ ಮೂಲಕವೇ (ಡಾಂಗಲ್ ಮತ್ತು ಫೋನ್) ಅಂತರ್ಜಾಲ ಸಂಪರ್ಕ ಹೊಂದಿರುತ್ತಾರೆ. ಶೇ 3ರಷ್ಟು ಜನರು ಮಾತ್ರ ಬ್ರಾಡ್‍ಬ್ಯಾಂಡ್ ಬಳಕೆದಾರರಿದ್ದಾರೆ. ಈ ಎರಡು ವರ್ಷಗಳಲ್ಲಿ ಇದರ ಪ್ರಮಾಣ ಹೆಚ್ಚಾಗಿರುವ ಸಾಧ್ಯತೆಗಳಿಲ್ಲ ಏಕೆಂದರೆ ಬ್ರಾಡ್‍ಬ್ಯಾಂಡ್ ಸೇವೆ ಜನಸಾಮಾನ್ಯರ ಕೈಗೆಟುಕದ ದರಗಳನ್ನು ಹೊಂದಿದೆ. ಈ ಅಂಶಗಳನ್ನು ಗಮನದಲ್ಲಿಟ್ಟುಕೊಂಡೇ ಸುಪ್ರೀಂಕೋರ್ಟ್ ಅಂತರ್ಜಾಲ ನಿರ್ಬಂಧಕ್ಕೆ ಕೆಲವು ಷರತ್ತುಗಳನ್ನು ವಿಧಿಸಿದೆ.
ಆದರೆ #ಆತ್ಮನಿರ್ಭರ ಭಾರತದಲ್ಲಿ ವಾಕ್ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ನೂತನ ವಿಧಾನಗಳ ಅವಿಷ್ಕಾರ ನಿರಂತರವಾಗಿ ನಡೆಯುತ್ತಲೇ ಇದೆ. ಉತ್ತರಪ್ರದೇಶದಲ್ಲಿ ಮುಖ್ಯಮಂತ್ರಿಯ ವಿರುದ್ಧ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಹೇಳಿದ ಮಾಜಿ ಐಪಿಎಸ್ ಅಧಿಕಾರಿ ಹಠಾತ್ತನೆ ಅಪರಾಧಿಯಾಗಿ ಬಂಧನಕ್ಕೊಳಗಾಗುತ್ತಾರೆ. ಆಮ್ ಆದ್ಮಿ ಪಕ್ಷಕ್ಕೆ ಬೆಂಬಲ ಸೂಚಿಸುವ ಬಾಲಿವುಡ್ ನಟ ಸೋನು ಸೂದ್ ಆದಾಯ ತೆರಿಗೆ ಇಲಾಖೆಯ ಕೆಂಗಣ್ಣಿಗೆ ಗುರಿಯಾಗುತ್ತಾರೆ. ಸರ್ಕಾರದ ನೀತಿಗಳನ್ನು ಟೀಕಿಸುವ ವಿದ್ಯುನ್ಮಾನ, ಮುದ್ರಣ ಮಾಧ್ಯಮಗಳ ಮೇಲೆ ಧಾಳಿ ನಡೆಸುವುದು ಸಾಮಾನ್ಯ ಸಂಗತಿಯೇ ಆಗಿದೆ. ಆದಾಯ ತೆರಿಗೆ ಇಲಾಖೆ, ಜಾರಿ ನಿರ್ದೇಶನಾಲಯ, ಸಿಬಿಐ, ರಾಷ್ಟ್ರೀಯ ತನಿಖಾ ದಳ-ಎನ್‍ಐಎ ಈ ಎಲ್ಲ ಸಾಂವಿಧಾನಿಕ ಸಂಸ್ಥೆಗಳು ಇಂದು ವಾಕ್ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಸಾಂಸ್ಥಿಕ ಸಾಧನಗಳಾಗಿದ್ದರೆ, ರಾಜದ್ರೋಹ ಕಾಯ್ದೆ ಮತ್ತು ಯುಎಪಿಎ ಸಾಂವಿಧಾನಿಕ ಸಾಧನಗಳಾಗಿ ಕಾರ್ಯನಿರ್ವಹಿಸುತ್ತಿವೆ. ಈ ಸಂಸ್ಥೆಗಳ/ಕಾಯ್ದೆಗಳ ವ್ಯಾಪ್ತಿಗೊಳಪಡದ ಬೃಹತ್ ಜನಸಮೂಹಗಳ ಮಾತುಗಳನ್ನು ಹತ್ತಿಕ್ಕಲು ಅಂತರ್ಜಾಲ-ಮೊಬೈಲ್ ಸಂಪರ್ಕ ಸ್ಥಗಿತಗೊಳಿಸುವ, ಮೃದು ಎನ್ನಬಹುದಾದ, ಕ್ರೂರ ವಿಧಾನಗಳನ್ನು ಅನುಸರಿಸಲಾಗುತ್ತಿದೆ.
ಅಂತರ್ಜಾಲ ಅಥವಾ ಮೊಬೈಲ್ ಸಂಪರ್ಕ ಸ್ಥಗಿತಗೊಳಿಸುವುದರಿಂದ ಮಾತನಾಡುವ ಸ್ವಾತಂತ್ರ್ಯಕ್ಕೇನೂ ತೊಂದರೆಯಾಗುವುದಿಲ್ಲ ಎಂಬ ಅಭಿಪ್ರಾಯ ಸಹಜವಾಗಿಯೇ ಕೇಳಿಬರುತ್ತದೆ. ಆದರೆ ಒಂದು ಸಮಾಜದಲ್ಲಿ ಸಮಸ್ತ ಜನತೆಯನ್ನು ಬಾಧಿಸುವ ಕೆಲವು ಆಡಳಿತ ನೀತಿಗಳ ಬಗ್ಗೆ, ಕರಾಳ ಶಾಸನಗಳ ಬಗ್ಗೆ, ಜನವಿರೋಧಿ ಕಾನೂನುಗಳ ಬಗ್ಗೆ ಭೌತಿಕ ಸಂಪರ್ಕ ಹೊಂದಿರದ ಜನರು ಪರಸ್ಪರ ಅಭಿಪ್ರಾಯ ವಿನಿಯಮ ಮಾಡಿಕೊಳ್ಳುವ ಅವಕಾಶಗಳನ್ನು ಕಸಿದುಕೊಳ್ಳುವುದು ಎಂದರೆ ಅದು ಮಾತನಾಡುವ ಹಕ್ಕನ್ನು ಕಸಿದುಕೊಂಡಂತೆಯೇ ಅಲ್ಲವೇ ? ಕಾಶ್ಮೀರದ ಜನತೆ ತಮ್ಮ ದೂರದಲ್ಲಿರುವ ತಮ್ಮ ಬಂಧುಗಳೊಡನೆ ಕಷ್ಟ ಸುಖ ಹಂಚಿಕೊಳ್ಳುವ ಅವಕಾಶವನ್ನೂ ಕಳೆದುಕೊಂಡು ಬದುಕುತ್ತಿರುವುದನ್ನು ಇನ್ನು ಹೇಗೆ ಬಣ್ಣಿಸಲು ಸಾಧ್ಯ ?
ಕುಸಿಯುತ್ತಿರುವ ಅರ್ಥವ್ಯವಸ್ಥೆಯಲ್ಲಿ ತಮ್ಮ ಜೀವನೋಪಾಯ ಮಾರ್ಗಗಳನ್ನೂ ಕಳೆದುಕೊಂಡು ಬೀದಿಪಾಲಾಗುತ್ತಿರುವ ಸಾಮಾನ್ಯ ಜನತೆಯ ನೋವಿನ ದನಿಗೆ ದನಿಯಾಗುವ ಸಂಘಟನಾತ್ಮಕ ಪ್ರಯತ್ನಗಳು ಆಳುವ ವರ್ಗಗಳ ಈ ಬೌದ್ಧಿಕ ಕ್ರೌರ್ಯದ ಸವಾಲನ್ನು ಎದುರಿಸುತ್ತಿವೆ. ಊಳಿಗಮಾನ್ಯ ವ್ಯವಸ್ಥೆಯಲ್ಲಿ, ನಿರಂಕುಶ ರಾಜಪ್ರಭುತ್ವದಲ್ಲಿ ಜನಸಾಮಾನ್ಯರ ವಿರೋಧಿ ದನಿಯನ್ನು ಹತ್ತಿಕ್ಕಲು ನಾಲಿಗೆ ಕತ್ತರಿಸುವುದು, ಅಂದರೆ ಮಾತನಾಡಲಾಗದಂತೆ ಮಾಡುವುದು ಸಾಮಾನ್ಯ ಶಿಕ್ಷೆಯಾಗಿತ್ತು. ಇಂದೂ ಸಹ ಆಳುವ ವರ್ಗಗಳು ಇದೇ ಮಾದರಿಯನ್ನೇ ಅನುಸರಿಸುತ್ತಿರುವುದು ದುರಂತ ಅಲ್ಲವೇ ? ನಾಲಿಗೆ ಕತ್ತರಿಸುವ ಆಧುನಿಕ ವಿಧಾನವನ್ನು ಡಿಜಿಟಲ್ ತಂತ್ರಜ್ಞಾನ ಯುಗದ ಅಂತರ್ಜಾಲ-ಮೊಬೈಲ್ ಸಂಪರ್ಕ ಸ್ಥಗಿತಗೊಳಿಸುವ ಪ್ರಕ್ರಿಯೆಯಲ್ಲಿ ಕಾಣುತ್ತಿದ್ದೇವೆ. ಉದ್ದೇಶಿತ ಗುರಿ ಒಂದೇ ತಂತ್ರಗಾರಿಕೆಯೂ ಒಂದೇ ಮಾರ್ಗಗಳು ಮಾತ್ರ ಭಿನ್ನ. ಕಾಲಾಯ ತಸ್ಮೈ ನಮಃ ಎನ್ನಲು ಸಾಧ್ಯವೇ ?