ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆಗೆ ಸಂಬಂಧಿಸಿದಂತೆ ನಡೆಯುವ ಆಂತರಿಕ ಚುನಾವಣೆಯನ್ನು ಮುಂದೂಡಿಕೆಯಾಗುವ ಸಾಧ್ಯತೆ ಇದೆ.
ಆಗಸ್ಟ್ 28ರಂದು ನಡೆಯುವ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ (CWC) ಯಲ್ಲಿ ಚುನಾವಣೆಯ ಅಧಿಕೃತ ದಿನಾಂಕವನ್ನ ಘೋಷಿಸಲಾಗುವುದು ಎಂದು ತಿಳಿದು ಬಂದಿದೆ.
ರಾಷ್ಟ್ರೀಯ ಸುದ್ದಿ ಸಂಸ್ಥೆಗಳು ವರದಿ ಮಾಡಿರುವ ಪ್ರಕಾರ ಸೆಪ್ಟೆಂಬರ್ 21ರ ಒಳಗಾಗಿ ಚುನಾವಣೆಯನ್ನು ಮಾಡಿ ಮುಗಿಸುವ ನಿರೀಕ್ಷೆಯಿದ್ದು ನೂತನ ಅಧ್ಯಕ್ಷ ಆಯ್ಕೆಯ ಪೂರ್ಣ ಪ್ರಕ್ರಿಯೆಗಳು ಅಕ್ಟೋಬರ್ ಅಥವಾ ನವೆಂಬರ್ ಒಳಗಾಗಿ ಮುಗಿಯಲಿದೆ.
ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅನಾರೋಗ್ಯದಿಂದ ಬಳಲುತ್ತಿರುವ ಕಾರಣ ಹೆಚ್ಚಿನ ಚಿಕಿತ್ಸೆಗಾಗಿ ವಿದೇಶಕ್ಕೆ ತೆರಳಿದ್ದಾರೆ. ತಾಯಿಯ ಜೊತೆ ರಾಹುಲ್ ಹಾಗೂ ಪ್ರಿಯಾಂಕ ಗಾಂಧಿ ತೆರಳಿರುವ ಕಾರಣ ಚುನಾವಣೆಯನ್ನು ಮುಂದೂಡಲಾಗುತ್ತದೆ ಎಂದು ಹೇಳಲಾಗುತ್ತಿದೆ.
ಇತ್ತ ಪಕ್ಷದ ನಾಯಕರು ಭಾರತ್ ಜೋಡೋ ಪಾದಯಾತ್ರೆಯ ಸಿದ್ದತೆಯಲ್ಲಿ ತೊಡಗಿಸಿಕೊಂಡಿದ್ದು ಸೋನಿಯಾ ಲಂಡನ್ನಿಂದ ಚಿಕಿತ್ಸೆ ಮುಗಿಸಿಕೊಂಡು ವಾಪಸ್ ಬಂದ ನಂತರ ಅಧಿಕೃತ ದಿನಾಂಕವನ್ನ ತಿಳಿಸಲಾಗುವುದು ಎಂದು ರಾಜ್ಯಸಭೆ ಸದಸ್ಯ ಜೈರಾಮ್ ರಮೇಶ್ ತಿಳಿಸಿದ್ದಾರೆ.