ಚಾಮರಾಜನಗರದ ಜಿಲ್ಲಾಸ್ಪತ್ರೆಯಲ್ಲಿ ಕಳೆದ ಮೇ 2 ರ ರಾತ್ರಿ ನಡೆದಿದ್ದ ಆಕ್ಸಿಜನ್ ಕೊರತೆ ದುರಂತ ಪ್ರಕರಣದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ರಾಜ್ಯ ಸರ್ಕಾರ ತಲಾ 2 ಲಕ್ಷ ರೂಪಾಯಿ ಪರಿಹಾರ ಬಿಡುಗಡೆ ಮಾಡಿದೆ. ಆದರೆ ಅಂದಿನ ದುರಂತದಲ್ಲಿ ಮೃತಪಟ್ಟ ಇನ್ನೂ ಹಲವರ ಹೆಸರನ್ನ ಕೈಬಿಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಈ ಬಡಜನತೆಯು ಕುಟುಂಬಕ್ಕೆ ಆಧಾರಸ್ತಂಭವಾಗಿದ್ದವರ ಪ್ರಾಣವೂ ಹೋಯ್ತು, ಇತ್ತ ಪರಿಹಾರವು ಇಲ್ಲದಂತಾಗಿದ್ದು ಅಂತಹ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ಮುಂದೆ ಜೀವನಕ್ಕೆ ಏನು ಮಾಡುವುದು ಎಂದು ದಿಕ್ಕು ತೋಚದೆ ಕಣ್ಣೀರಿನಲ್ಲಿ ಕೈ ತೊಳೆಯುತ್ತಿವೆ. ಹಿಂದುಳಿದ ಜಿಲ್ಲೆ ಅಗಿರುವ ಚಾಮರಾಜನಗರದ ದುರಂತದಲ್ಲಿ ಮೃತಪಟ್ಟವರೆಲ್ಲ ಅತೀ ಸಣ್ಣ ರೈತರು ಮತ್ತು ಕೃಷಿ ಕಾರ್ಮಿಕರು.
ಆಕ್ಸಿಜನ್ ಕೊರತೆಯಿಂದ ಮೃತಪಟ್ಟ ಚಾಮರಾಜಗರ ತಾಲೂಕು ಬಿಸಿಲವಾಡಿಯ ಸಿದ್ದನಾಯಕ ಎಂಬುವರ ಹೆಸರು ಸಹ ಪರಿಹಾರದ ಪಟ್ಟಿಯಿಂದ ಕೈ ಬಿಡಲಾಗಿದೆ. ಆಟೋ ಚಾಲಕರಾಗಿದ್ದ ಸಿದ್ದನಾಯಕ ಏಪ್ರಿಲ್ 26ರಂದು ಕರೋನಾ ಪಾಸಿಟಿವ್ ಆಗಿ ಜಿಲ್ಲಾಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಮೇ 2 ರಂದು ರಾತ್ರಿ 11.15 ರ ವೇಳೆಯಲ್ಲಿ ಆಕ್ಸಿಜನ್ ಕೊರತೆಯಿಂದ ಮೃತ ಪಟ್ಟಿದ್ದರು. ಸಿದ್ದನಾಯಕ ಮೃತಪಟ್ಟಿರುವ ಬಗ್ಗೆ ವೈದ್ಯಾಧಿಕಾರಿಗಳು ಸಹ ಧೃಢೀಕರಣ ಪತ್ರ ನೀಡಿದ್ದಾರೆ. ಆದರೆ ಸರ್ಕಾರ ಆಕ್ಸಿಜನ್ ಕೊರತೆಯಿಂದ ಮೃತಪಟ್ಟ ಕುಟುಂಬಗಳಿಗೆ ನೀಡುತ್ತಿರುವ ಪರಿಹಾರದ ಪಟ್ಟಿಯಲ್ಲಿ ಸಿದ್ಧನಾಯಕ ಅವರು ಹೆಸರು ಇಲ್ಲ. ಅಂದು ರಾತ್ರಿ ನಾನು ಹಾಗೂ ನಮ್ಮ ಅಣ್ಣ ನಮ್ಮ ಯಜಮಾನರ ಬಳಿಯೇ ಇದ್ದೆವು. 10.30 ರ ವೇಳೆಗೆ ಆಕ್ಸಿಜನ್ ಖಾಲಿಯಾಯ್ತು. ನಮ್ಮ ಯಜಮಾನರನ್ನು ಬೆನ್ನು ಮೇಲೆ ಮಾಡಿ ಬೆನ್ನು ತಟ್ಟುತ್ತಾ, ಅವರ ಕೈಕಾಲು ಉಜ್ಜುತ್ತಾ ಹೆದರಬೇಡಿ ಇನ್ನೇನು ಆಕ್ಸಿಜನ್ ಬರುತ್ತೆ ಎಂದು ಧೈರ್ಯ ತುಂಬುತ್ತಿದ್ದೆವು, ಆದರೆ ರಾತ್ರಿ 11.15 ಆದರೂ ಆಕ್ಸಿಜನ್ ಬರಲಿಲ್ಲ, ನಮ್ಮ ಕಣ್ಣೆದುರೇ ನನ್ನ ಪತಿ ಸತ್ತು ಹೋದರು ಎಂದು ಸಿದ್ದನಾಯಕರ ಪತ್ನಿ ಜ್ಯೋತಿ ಅಂದಿನ ಘಟನೆಯನ್ನು ವಿವರಿಸಿದ್ದು, “ನಮಗೆ ಆಸ್ಪತ್ರೆ ಯಲ್ಲು ಅನ್ಯಾಯ ಆಯ್ತು ಈಗ ಪರಿಹಾರದಲ್ಲು ಅನ್ಯಾಯ ಆಗಿದೆ, ವಯಸ್ಸಾದ ನನ್ನ ಅತ್ತೆ ಮಾವ ಹಾಗು ನನ್ನ ಚಿಕ್ಕಮಕ್ಕಳನ್ನು ಕಟ್ಟಿಕೊಂಡು ಜೀವನ ಹೇಗೆ ಸಾಗಿಸಲಿ, ಎಲ್ಲಿ ಹೋಗಲಿ ಎಂದು ಕಣ್ಣೀರಿಡುತ್ತಿದ್ದಾರೆ.
ಮೃತರ ಕುಟುಂಬಗಳಿಗೆ ಪರಿಹಾರ ಬಿಡುಗಡೆಯಾಗಿರುವ ಮಾಹಿತಿ ತಿಳಿದು ಜಿಲ್ಲಾಧಿಕಾರಿಗಳ ಕಚೇರಿಗೆ ಹೋಗಿ ವಿಚಾರಿಸಿದೆವು. ಸಿದ್ದನಾಯಕರ ಹೆಸರು ಪಟ್ಟಿಯಲ್ಲಿ ಇಲ್ಲ, ನೀವು ಜಿಲ್ಲಾಸ್ಪತ್ರೆಗೆ ಹೋಗಿ ವಿಚಾರಿಸಿ ಎಂದು ಅಲ್ಲಿ ತಿಳಿಸಿದ್ದರಿಂದ ಜಿಲ್ಲಾಸ್ಪತ್ರೆಗೆ ಹೋಗಿ ವಿಚಾರಿಸಿದಾಗ ನಮಗೆ ಗೊತ್ತಿಲ್ಲ ಫೈಲ್ ಗಳೆಲ್ಲಾ ಸೀಜ್ ಆಗಿವೆ ಎಂದು ಆಸ್ಪತ್ರೆ ಅಧಿಕಾರಿಗಳು ಹೇಳುತ್ತಿದ್ದಾರೆ. ಇಲ್ಲಿ ಸಾವುಗಳನ್ನು ಮುಚ್ಚಿಡುವ ಪ್ರಯತ್ನ ಮಾಡುತ್ತಿದ್ದಾರೆ ಎಂಬ ಅನುಮಾನ ಇದೆ. ಅಧಿಕಾರಿಗಳ ಬೇಜವಬ್ದಾರಿತನದಿಂದ ನಮ್ಮ ಅಕ್ಕನ ಸಂಸಾರ ಬೀದಿಪಾಲಾಗಿದೆ ಎಂದು ಸಿದ್ದನಾಯಕರ ಪತ್ನಿಯ ಸಹೋದರಿ ಪವಿತ್ರ ಆರೋಪಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಚಾಮರಾಜನಗರ ಶಾಸಕ ಪುಟ್ಟರಂಗಶೆಟ್ಟಿ ಅವರು ಜಿಲ್ಲಾಸ್ಪತ್ರೆಯಿಂದ ಪಟ್ಟಿ ಕೊಡುವಾಗಲೇ ತಪ್ಪಾಗಿದೆ. ಆಕ್ಸಿಜನ್ ಕೊರತೆಯಿಂದ 24 ಮಂದಿಯಷ್ಟೇ ಅಲ್ಲ 34 ಮಂದಿ ಸತ್ತಿದ್ದಾರೆ ಎಂದು ನಾನು ಆವತ್ತಿನಿಂದಲು ಪ್ರತಿಪಾದಿಸುತ್ತಾ ಬಂದಿದ್ದೇನೆ. ಸಿದ್ದನಾಯಕ ಸೇರಿದಂತೆ ಇನ್ನೂ ಹತ್ತು ಮಂದಿಯ ಹೆಸರು ಕೈ ಬಿಡಲಾಗಿದೆ. ಇದನ್ನು ಸರಿಪಡಿಸಿ ಉಳಿದ ಕುಟುಂಬಗಳಿಗು ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ರಾಜ್ಯ ಸರ್ಕಾರ ಕೇವಲ 24 ಕುಟುಂಬಗಳಿಗೆ ಮಾತ್ರ ಪರಿಹಾರ ಬಿಡುಗಡೆ ಮಾಡಿರುವುದಕ್ಕೆ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಜ್ಞರ ಸಮಿತಿ 36 ಜನ ಮೃತಪಟ್ಟಿರುವುದಾಗಿ ವರದಿ ನೀಡಿತ್ತು. ಆದರೆ 24 ಕುಟುಂಬಗಳಿಗೆ ಮಾತ್ರ ತಲಾ 2 ಲಕ್ಷ ರೂ. ಪರಿಹಾರ ನೀಡಿದ್ದಾರೆ. ಉಳಿದ 12 ಕುಟುಂಬಗಳಿಗೆ ಪರಿಹಾರ ನೀಡುವಲ್ಲಿ ತಾರತಮ್ಯ ಮಾಡಲಾಗಿದೆ. ರಾಜ್ಯ ಸರ್ಕಾರದ ಈ ಕ್ರಮ ಸರಿಯಲ್ಲ ಸಾವಿನಲ್ಲೂ ತಾರತಮ್ಯ ಮಾಡುವುದನ್ನ ಸರ್ಕಾರ ನಿಲ್ಲಿಸಬೇಕು ಎಂದು ಅವರು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಹೈಕೋರ್ಟ್ ನೇಮಿಸಿದ್ದ ನ್ಯಾ.ವೇಣುಗೋಪಾಲ ಗೌಡ ನೇತೃತ್ವದ ಕಾನೂನು ಸೇವೆಗಳ ಪ್ರಾಧಿಕಾರ ಸಮಿತಿ ಸಹ ಆಕ್ಸಿಜನ್ ಕೊರತೆಯಿಂದ 36 ಮಂದಿ ಮೃತಪಟ್ಟಿರುವುದನ್ನು ಧೃಡಪಡಿಸಿದೆ. ಆದರೆ ಸರ್ಕಾರ 24 ಮಂದಿಯ ಕುಟುಂಬಗಳಿಗೆ ಮಾತ್ರ ಪರಿಹಾರ ನೀಡಿದೆ. ಉಳಿದವರ ಸಾವು ಸಾವಲ್ಲವೇ? ಅವರ ಕುಟುಂಬಗಳ ಕಥೆ ಏನು? ಅವರಿಗೆ ಪರಿಹಾರ ನೀಡುವವರು ಯಾರು? ಎಂಬುದಕ್ಕೆ ಸರ್ಕಾರವೇ ಉತ್ತರಿಸಬೇಕಿದೆ. ಕಾನೂನು ಸೇವೆಗಳ ಪ್ರಾಧಿಕಾರ ಸಮಿತಿ ದಾಖಲಾತಿಗಳನ್ನು ತಿದ್ದಿರುವ ಬಗ್ಗೆ ಸಂಶಯ ವ್ಯಕ್ತಪಡಿಸಿತ್ತು. ಇದೀಗ ಬಡವರು ಪರಿಹಾರ ಪಡೆಯಲೂ ಕೂಡ ಕೋರ್ಟಿನ ನಡಾವಳಿಗಳನ್ನೇ ಕಾಯಬೇಕೆ ಎಂಬ ಪ್ರಶ್ನೆ ಎದುರಾಗಿದೆ.