ಮನೆಮನೆಯಲ್ಲೂ ಸೋಂಕಿತರಿರುವಾಗ ಕಂಟೇನ್ಮೆಂಟ್, ಕ್ವಾರಂಟೈನ್ ಗೆ ಏನರ್ಥ?

ಗ್ರಾಮೀಣ ಭಾಗದಲ್ಲಿ ಕರೋನಾ ನಿಯಂತ್ರಣದ ಸರ್ಕಾರದ ಯತ್ನಗಳು ಎಷ್ಟರಮಟ್ಟಿಗೆ ಫಲಕೊಟ್ಟಿವೆ ಎಂಬುದಕ್ಕೆ ಪ್ರತಿ ಹಳ್ಳಿ-ಹಳ್ಳಿಗಳ ಮನೆಮನೆಯಲ್ಲೂ ಸಾಕ್ಷಿಗಳು ಸಿಗುತ್ತಿವೆ.

ಬಹುತೇಕ ಅತಿ ಹೆಚ್ಚು ಪ್ರಕರಣಗಳು ವರದಿಯಾಗುತ್ತಿರುವ ಜಿಲ್ಲೆಗಳಲ್ಲಂತೂ ಹಳ್ಳಿಯ ಪ್ರತಿ ಮನೆಯಲ್ಲೂ ಕರೋನಾ ಲಕ್ಷಣಗಳಿರುವವರು ಹಾಸಿಗೆ ಹಿಡಿದಿದ್ದಾರೆ. ತೀರಾ ನಗರ-ಪಟ್ಟಣ ಪ್ರದೇಶಗಳಿಂದ 25-30 ಕಿ.ಮೀ ದೂರದಲ್ಲಿರುವ ಹಳ್ಳಿಗಳಲ್ಲಿ ಕೂಡ ಈಗ ಮನೆಮನೆಯಲ್ಲೂ ಕರೋನಾ ಸೋಂಕು ಕಾಣಿಸಿಕೊಂಡಿದೆ. ಆದರೆ, ಹಳ್ಳಿಗರಲ್ಲಿ ಪಟ್ಟಣದ ಆಸ್ಪತ್ರೆಗಳು, ವೈದ್ಯರ ಬಗೆಗಿನ ಭಯ, ಕರೋನಾ ಕಾಲದಲ್ಲಿ ಲಕ್ಷಾಂತರ ಹಣ ಪೀಕುವ ಅಮಾನವೀಯ ಚಿಕಿತ್ಸೆಗಳಿಗೆ ದುಡ್ಡು ತೆರಲಾಗದ ಅಸಹಾಯಕತೆ ಮತ್ತು ಕರೋನಾದ ಬಗೆಗಿನ ಒಂದು ರೀತಿಯ ಹುಂಬ ಅಸಡ್ಡೆಗಳೆಲ್ಲದರ ಪರಿಣಾಮವಾಗಿ ಸೋಂಕು ಲಕ್ಷಣಗಳಿದ್ದರೂ ಪರೀಕ್ಷೆಗೆ ಮುಂದೆ ಬರುತ್ತಿಲ್ಲ. ಆದಾಗ್ಯೂ ಸದ್ಯ ರಾಜ್ಯದ ದೈನಂದಿನ ಕರೋನಾ ಪಾಸಿಟಿವ್ ಪ್ರಕರಣಗಳಲ್ಲಿ ದೊಡ್ಡ ಪಾಲು ಗ್ರಾಮೀಣ ಜನರದ್ದೇ ಎಂಬುದನ್ನು ಈಗಾಗಲೇ ಸರ್ಕಾರವೂ ಹೇಳಿದೆ.

ಮುಖ್ಯವಾಗಿ ಗ್ರಾಮೀಣ ಜನರು ಸೋಂಕಿನ ವಿಷಯದಲ್ಲಿ ಹೊಂದಿರುವ ಒಂದು ರೀತಿಯ ಮಡಿವಂತಿಕೆಯ ಕಾರಣದಿಂದಾಗಿಯೇ ಬಹುತೇಕರು, ಸೋಂಕು ಲಕ್ಷಣಗಳಿದ್ದರೂ, ಕರೋನಾವೇ ಇರಬಹುದು ಎಂದು ತಮಗೇ ಅನಿಸಿದರೂ, ಅದನ್ನು ಹೇಳಿಕೊಳ್ಳುತ್ತಿಲ್ಲ. ಕರೋನಾ ಪರೀಕ್ಷೆಗೆ ಹೋಗುವುದಿರಲಿ, ಬಹುತೇಕರು ತಮ್ಮ ಅಕ್ಕಪಕ್ಕದ ಮನೆಯವರಿಗೂ ಗುಟ್ಟು ಬಿಟ್ಟುಕೊಡದೆ ಮನೆಯೊಳಗೇ ಇದ್ದು ಜ್ವರ-ನೆಗಡಿಯ ಮಾತ್ರೆ ತೆಗೆದುಕೊಂಡು, ಇಲ್ಲವೇ ಪರಿಚಯಸ್ಥ ಖಾಸಗೀ ವೈದ್ಯರ ಬಳಿ ತೋರಿಸಿ ಸೋಂಕನ್ನು ಮುಚ್ಚಿಡುವ ಯತ್ನ ಮಾಡುತ್ತಿದ್ದಾರೆ. ಹಾಗೂ ಪರಿಸ್ಥಿತಿ ಕೈಮೀರಿ, ಉಸಿರಾಟದ ಸಮಸ್ಯೆಯಾದಾಗ ಮಾತ್ರ ಅವರುಗಳು ಸರ್ಕಾರಿ ಆಸ್ಪತ್ರೆಗಳಿಗೆ ಹೋಗುವ ಮನಸ್ಸು ಮಾಡುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸಾವಿನ ಪ್ರಮಾಣ ಏರಿಕೆಯಾಗುತ್ತಿರುವುದಕ್ಕೆ ಇಂತಹ ಸೋಂಕನ್ನು ಗುಟ್ಟು ಮಾಡುವುದೂ ಒಂದು ಕಾರಣ ಎಂಬುದನ್ನು ಆರೋಗ್ಯ ತಜ್ಞರು ಈಗಾಗಲೇ ಗುರುತಿಸಿದ್ದಾರೆ.

ಇನ್ನು ಹಳ್ಳಿಗಳ ಬಹುತೇಕ ಮನೆಮನೆಯಲ್ಲೂ ಈಗಾಗಲೇ ಕರೋನಾ ರೋಗ ಲಕ್ಷಣಗಳು ಪ್ರತಿಯೊಬ್ಬರಲ್ಲೂ(ಮಕ್ಕಳನ್ನೂ ಸೇರಿ!) ಬಂದುಹೋಗಿವೆ. ಗಮನಾರ್ಹ ಸಂಗತಿಯೆಂದರೆ; ಹಳ್ಳಿಗಳಲ್ಲಿ ಕುಟುಂಬದ ವ್ಯವಹಾರ, ಯಜಮಾನಿಕೆ ನೋಡಿಕೊಳ್ಳುವವರಿಗೆ ಮೊದಲು ಈ ಸೋಂಕು ಲಕ್ಷಣಗಳು ಕಾಣಿಸಿಕೊಂಡು, ಬಳಿಕ ಮನೆಯ ಹಿರಿಯರು, ನಂತರ ಉಳಿದ ಮಧ್ಯವಯಸ್ಕರು ಮತ್ತು ಕೊನೆಯದಾಗಿ ಮಕ್ಕಳಲ್ಲಿ ಈ ಸೋಂಕು ಕಾಣಿಸಿಕೊಂಡಿದೆ. ಹಾಗೇ ಜ್ವರ, ಮೈಕೈನೋವು, ಗಂಟಲು ನೋವು, ಮೂಗು ಸೋರುವಿಕೆ, ಕಣ್ಣುನೋವು, ತಲೆನೋವು ಕಾಣಿಸಿಕೊಂಡು, ಕ್ರಮೇಣ ತೀವ್ರ ಕೆಮ್ಮು ಮತ್ತು ಎದೆನೋವು ಕಾಣಿಸಿಕೊಂಡವರ ಬಹುತೇಕರು ಮಾತ್ರೆ, ಕೆಮ್ಮಿನ ಸಿರಪ್, ಮನೆಯ ಕಷಾಯಗಳಲ್ಲೇ ಗುಣಮುಖರಾಗಿದ್ದರೆ, ನೂರಕ್ಕೆ ಒಂದೆರಡು ಮಂದಿಯಲ್ಲಿ ಮಾತ್ರ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದೆ. ಅಂತಹವರನ್ನು ಹೊರತುಪಡಿಸಿ ಉಳಿದವರಿಗೆ ಈ ಕಾಯಿಲೆ ಬಂದುಹೋಗಿರುವುದು ಆರೋಗ್ಯ ಇಲಾಖೆ, ಸ್ಥಳೀಯ ಆಡಳಿತಗಳಿರಲಿ, ಅಕ್ಕಪಕ್ಕದ ಮನೆಯವರಿಗೆ ಕೂಡ ಗೊತ್ತಾಗದಂತೆ ಪ್ರತಿ ಮನೆಯವರೂ ಪರಿಸ್ಥಿತಿ ನಿಭಾಯಿಸಿದ್ದಾರೆ!

ಆದರೆ, ಉಸಿರಾಟದ ಸಮಸ್ಯೆ ಕಾಣಿಸಿಕೊಂಡವರು ತೀರಾ ಗಂಭೀರ ಸ್ಥಿತಿಯಲ್ಲಿ ಮಾತ್ರ ಆಸ್ಪತ್ರೆಗಳತ್ತ ಮುಖ ಮಾಡಿದ್ದಾರೆ. ಅಂಥವರಲ್ಲಿ ತಕ್ಷಣಕ್ಕೆ ಆಸ್ಪತ್ರೆಯ ಹಾಸಿಗೆ, ಆಮ್ಲಜನಕ, ಸೂಕ್ತ ಚಿಕಿತ್ಸೆ ಸಿಕ್ಕವರು ಸಾವಿನ ಮನೆಯ ಕದತಟ್ಟಿಯೂ ಬದುಕುಳಿದರೆ ಉಳಿದ ಬಹುತೇಕ ನತದೃಷ್ಟರು ಜೀವ ಕಳೆದುಕೊಂಡಿದ್ದಾರೆ. ಜೊತೆಗೆ ಮನೆಮಂದಿಗೆ ಲಕ್ಷಾಂತರ ರೂಪಾಯಿ ಆಸ್ಪತ್ರೆ ಬಿಲ್ ಹೊರೆಯನ್ನೂ ಹೊರಿಸಿದ್ದಾರೆ! ಹೀಗೆ ಹಳ್ಳಿಯ ಜನ ಕಾಯಿಲೆಯನ್ನು ಮುಚ್ಚಿಡಲು ಮತ್ತು ಆಸ್ಪತ್ರೆಗಳಿಗೆ ಬೆನ್ನು ತಿರುಗಿಸಲು ಕಾರಣ, ದುಬಾರಿ ಚಿಕಿತ್ಸೆ ಮತ್ತು ಮಾಧ್ಯಮಗಳ ಮೂಲಕ ಭಿತ್ತರಗೊಳ್ಳುತ್ತಿರುವ ಕೋವಿಡ್ ಚಿಕಿತ್ಸಾ ಮತ್ತು ಕೇರ್ ಕೇಂದ್ರಗಳಲ್ಲಿನ ತೀರಾ ಭಯಾನಕ ಸ್ಥಿತಿ ಎಂಬುದು ಗುಟ್ಟೇನಲ್ಲ.

ಆದರೆ, ಸರ್ಕಾರ ಈಗ ಕೋವಿಡ್ ಚಿಕಿತ್ಸೆ ಮತ್ತು ಆರೋಗ್ಯ ವ್ಯವಸ್ಥೆಯಲ್ಲಿನ ಲೋಪಗಳನ್ನು ತಿದ್ದಿಕೊಳ್ಳುವ ಮೂಲಕ ಹಳ್ಳಿಯ ಜನರಲ್ಲಿ ಕೋವಿಡ್ ಚಿಕಿತ್ಸೆಯ ಕುರಿತು ಇರುವ ಭಯ ಮತ್ತು ಭೀತಿ ಹೋಗಲಾಡಿಸಿ, ಅವರು ಸ್ವಯಂಪ್ರೇರಿತರಾಗಿ ಕೋವಿಡ್ ಪರೀಕ್ಷೆಗೆ ಮುಂದೆ ಬರುವಂತೆ ಮಾಡುವ ಬದಲು, ಮನೆಮನೆಗೆ ತೆರಳಿ ಕೋವಿಡ್ ಪರೀಕ್ಷೆ ನಡೆಸುವ ಮಾತನಾಡಿದೆ. ಸಚಿವ ಆರ್ ಅಶೋಕ್ ಅವರ ಹೇಳಿಕೆಯ ಪ್ರಕಾರ, ರಾಜ್ಯದ ಗ್ರಾಮೀಣ ಭಾಗಗಳಲ್ಲಿ ಆರ್ ಟಿ ಪಿಸಿಆರ್ ಪರೀಕ್ಷೆಯ ಬದಲಾಗಿ ರ್ಯಾಪಿಡ್ ಆ್ಯಂಟಿಜನ್ ಪರೀಕ್ಷೆ ಮೂಲಕ ಸ್ಥಳದಲ್ಲೇ ಪರೀಕ್ಷೆಯ ಫಲಿತಾಂಶ ಪಡೆದು, ಸೋಂಕಿತರ ಪತ್ತೆ ಮತ್ತು ಅವರ ಸಂಪರ್ಕಿತರ ಪತ್ತೆ ಮಾಡಲಾಗುವುದು ಮತ್ತು ಕ್ವಾರಂಟೈನ್ ಮಾಡಿ, ಚಿಕಿತ್ಸೆ ನೀಡಲಾಗುವುದು. ಪ್ರಧಾನಿ ಮೋದಿಯವರು ಕೂಡ, ಗ್ರಾಮೀಣ ಭಾಗದಲ್ಲಿ ಕರೋನಾ ಹರಡುವಿಕೆಗೆ ಬ್ರೇಕ್ ಹಾಕಲು ಮನೆ ಮನೆ ಪರೀಕ್ಷೆ ನಡೆಸುವುದು ಮುಖ್ಯ ಎಂದಿದ್ದಾರೆ.

ಆದರೆ, ಈಗಾಗಲೇ ಬಹುತೇಕ ಹಳ್ಳಿಗರಿಗೆ ಸೋಂಕು ಹರಡಿದೆ. ಪ್ರತಿ ಮನೆಮನೆಯಲ್ಲೂ ಸೋಂಕಿತರಿದ್ದಾರೆ. ಆ ಪೈಕಿ ಹೆಚ್ಚಿನವರು ಜ್ವರ, ನೆಗಡಿ, ಮೈಕೈನೋವು ಅನುಭವಿಸಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಹಾಗಿರುವಾಗ, ಈ ಹಂತದಲ್ಲಿ ಮನೆಮನೆ ಪರೀಕ್ಷೆ ನಡೆಸಿ ಸೋಂಕಿತರನ್ನು ಗುರುತಿಸಿ, ಅವರ ಸಂಪರ್ಕಿತರನ್ನು ಪತ್ತೆ ಮಾಡಿ, ಸೋಂಕಿತರು ಮತ್ತು ಅವರ ಸಂಪರ್ಕಿತರನ್ನು ಪ್ರತ್ಯೇಕಿಸಿ, ಕ್ವಾರಂಟೈನ್ ಮಾಡಿ, ಚಿಕಿತ್ಸೆ ನೀಡುವುದು ಎಷ್ಟು ಸಮಂಜಸ? ಎಂಬುದು ಈಗಿರುವ ಪ್ರಶ್ನೆ. ಏಕೆಂದರೆ, ಮನೆಮಂದಿಯೆಲ್ಲಾ ಸೋಂಕಿತರಾಗಿರುವ ಹೊತ್ತಲ್ಲಿ, ಊರಿನ ಮನೆಮನೆಯಲ್ಲೂ ಸೋಂಕಿತರಿರುವ ಹೊತ್ತಲ್ಲಿ ಪರೀಕ್ಷೆ, ಸೋಂಕು ಪತ್ತೆ, ಕ್ವಾರಂಟೈನ್, ಅವರೆಲ್ಲರಿಗೂ ಕೋವಿಡ್ ಕೇರ್ ಸೆಂಟರ್ ನಲ್ಲಿ ಚಿಕಿತ್ಸೆ ಎಂದರೆ, ಅದು ಸರಳವಲ್ಲ.

ಹಾಗೊಂದು ವೇಳೆ ಅಂತಹ ಸಾಹಸಕ್ಕೆ ಕೈಹಾಕಿದರೆ, ಆಗ ಈಗಿರುವ ಕೋವಿಡ್ ಆಸ್ಪತ್ರೆ, ಕೇರ್ ಸೆಂಟರ್ ಗಳ ಹತ್ತಾರು ಪಟ್ಟು ವ್ಯವಸ್ಥೆಗಳಾಗನಬೇಕಾಗುತ್ತದೆ. ಅದಕ್ಕೆ ತಕ್ಕಂತೆ ಆರೋಗ್ಯ ಸೌಕರ್ಯ, ಸಿಬ್ಬಂದಿಯೂ ಬೇಕಾಗುತ್ತದೆ. ಜೊತೆಗೆ ಸದ್ಯ ನೆಗಡಿ ಜ್ವರ ಎಂದುಕೊಂಡು ಎದೆಗುಂದದೆ ಧೈರ್ಯವಾಗಿ ಹುಂಬುತನವೇ ವರ ಎಂಬಂತೆ ಕಾಯಿಲೆ ಎದುರಿಸುತ್ತಿರುವ ಹಳ್ಳಿಗರಿಗೆ ಪರೀಕ್ಷೆ ಮಾಡಿ ನಿಮಗೆ ಕೋವಿಡ್ ಇದೆ ಎಂದರೆ, ಅದರಿಂದಾಗಿ ಮಾನಸಿಕವಾಗಿ ಕುಸಿದು ಸಂಭವಿಸಬಹುದಾದ ಆರೋಗ್ಯದ ಏರುಪೇರು ಮತ್ತು ಅನಾಹುತಗಳಿಗೆ ತಕ್ಕಷ್ಟು ಆರೋಗ್ಯ ವ್ಯವಸ್ಥೆ ಸಜ್ಜಾಗಿದೆಯೇ ಎಂಬುದು ಕೂಡ ಮುಖ್ಯ.

ಹಾಗಾಗಿ ವಾಸ್ತವವಾಗಿ ಸರ್ಕಾರ ಈಗ, ಹಳ್ಳಿಗಳ ಪ್ರತಿ ಮನೆಮನೆಯಲ್ಲೂ ಸೋಂಕಿತರು ಇರುವ ಹೊತ್ತಲ್ಲಿ ಮಾಡಬೇಕಿರುವುದು ಚಿಕಿತ್ಸೆಯ ದುಬಾರಿ ವೆಚ್ಚ ಮತ್ತು ಕೋವಿಡ್ ಆಸ್ಪತ್ರೆಗಳ ಬಗೆಗಿನ ಜನರ ಭಯ ಹೋಗಲಾಡಿಸುವುದು. ಅದಕ್ಕೆ ಕೋವಿಡ್ ಚಿಕಿತ್ಸೆ ಅಗತ್ಯವಿರುವವರನ್ನು ಪತ್ತೆ ಮಾಡಬೇಕಾದ ಕೆಲಸ ಮನೆಮನೆಯ ಭೇಟಿ ಮೂಲಕ ಆಗಬೇಕಿದೆ. ಪರೀಕ್ಷೆಯಲ್ಲ. ಹಾಗೇ ಸಮೀಕ್ಷೆಯ ವೇಳೆ ಪತ್ತೆಯಾದ ಗಂಭೀರ ಆರೋಗ್ಯ ಸಮಸ್ಯೆ ಇರುವ ಸೋಂಕಿತರಿಗೆ ಕೂಡಲೇ ಅಗತ್ಯ ಚಿಕಿತ್ಸೆ ಉಚಿತವಾಗಿ ಮತ್ತು ಅವರಿಗೆ ಭಯ ಹುಟ್ಟಿಸದ ವ್ಯವಸ್ಥೆಯಲ್ಲಿ ಸಿಗುವಂತೆ ನೋಡಿಕೊಳ್ಳಬೇಕಿದೆ. ಆ ಪೈಕಿ ಬಹುತೇಕರಿಗೆ ಮನೆಯಲ್ಲಿಯೇ ಚಿಕಿತ್ಸೆಗೆ ವ್ಯವಸ್ಥೆ ಮಾಡಿ, ಅವರ ಆಮ್ಲಜನಕ ಮಟ್ಟದ ಮೇಲೆ ನಿಗಾ ಇಡಲು ಪರೀಕ್ಷಾ ಯಂತ್ರದ ವ್ಯವಸ್ಥೆ ಮಾಡಬೇಕು ಮತ್ತು ಕನಿಷ್ಟ ಎರಡು ದಿನಕ್ಕೊಮ್ಮೆಯಾದರೂ ಅವರ ಆರೋಗ್ಯ ಪರೀಕ್ಷೆ ನಡೆಸಲು ಪಂಚಾಯ್ತಿ ವ್ಯಾಪ್ತಿಯಲ್ಲಿ ಒಂದು ವಾಹನ ಮತ್ತು ಆರೋಗ್ಯ ಸಿಬ್ಬಂದಿ(ಆಶಾ ಕಾರ್ಯಕರ್ತೆಯರು ಸೇರಿ) ವ್ಯವಸ್ಥೆ ಮಾಡಬೇಕಿದೆ. ಹಾಗೂ ಉಸಿರಾಟದ ಸಮಸ್ಯೆ ತೀವ್ರವಾದಲ್ಲಿ, ಅಂತಹವರನ್ನು ಕೂಡಲೇ ಸಮೀಪದ ಕೋವಿಡ್ ಆಸ್ಪತ್ರೆಗೆ ಕರೆದೊಯ್ಯಲು ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಬೇಕು ಮತ್ತು ಅವರಿಗೆ ಅಲ್ಲಿ ಉಚಿತ ಚಿಕಿತ್ಸೆ ಸಿಗುವುದನ್ನು ಖಚಿತಪಡಿಸಬೇಕು.

ಅದು ಬಿಟ್ಟು ಮನೆ ಮನೆ ಪರೀಕ್ಷೆ ನಡೆಸುವುದು, ಸಂಪರ್ಕಿತರ ಪತ್ತೆ, ಕ್ವಾರಂಟೈನ್, ಕಂಟೇನ್ಮೆಂಟ್ ಏರಿಯಾದಂತಹ ಹಳೆಯ ದಾಳಗಳನ್ನೇ ಸಮಯ ಸಂದರ್ಭದ ವಿವೇಚನೆಯಿಲ್ಲದೆ ಪ್ರಯೋಗಿಸುವುದು ತಳಮಟ್ಟದ ವಾಸ್ತವಾಂಶಗಳಿಂದ ಈ ಸರ್ಕಾರ ಮತ್ತು ಸರ್ಕಾರ ನಡೆಸುವ ಮಂದಿ ಎಷ್ಟು ದೂರವಿದ್ದಾರೆ ಎಂಬುದಕ್ಕೆ ನಿದರ್ಶನ!

Related posts

Latest posts

ಕುಂಭ ಮೇಳ ಸಂದರ್ಭದಲ್ಲಿ ಮಾಡಿದ 1 ಲಕ್ಷ ಕೋವಿಡ್-19 ಪರೀಕ್ಷೆಗಳು ನಕಲಿ: ತನಿಖಾ ವರದಿ

ಹರಿದ್ವಾರದ ಕುಂಭ ಮೇಳ ಸಂದರ್ಭದಲ್ಲಿ ಮಾಡಲಾಗಿದ ನಾಲ್ಕು ಲಕ್ಷ ಕೋವಿಡ್ ಟೆಸ್ಟ್ ಫಲಿತಾಂಶಗಳಲ್ಲಿ ಹಲವು ನಕಲಿ ಎಂದು ಉತ್ತರಾಖಂಡ ಆರೋಗ್ಯ ಇಲಾಖೆ ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ. ವಿವರವಾದ ತನಿಖೆಯ 1,600 ಪುಟಗಳಲ್ಲಿ...

ನನ್ನ ಹೇಳಿಕೆಯಿಂದ ನಾನು ಹಿಂದೆ ಸರಿಯಲ್ಲ : ನಟ ಚೇತನ್ ಸ್ಪಷ್ಟನೆ

ಬ್ರಾಹ್ಮಣ್ಯ ವಿರೋಧಿ ಹೇಳಿಕೆ ಎಂಬ ಆರೋಪದ ಅಡಿ ಇಂದು ಬಸವನಗುಡಿ ಪೊಲೀಸರ ಮುಂದೆ ಹಾಜರಾದ ನಟ ಚೇತನ್ ತನ್ನ ಹೇಳಿಕೆಯ ಬಗ್ಗೆ ಪೊಲೀಸರ ಮುಂದೆ ಸ್ಪಷ್ಟನೆ ದಾಖಲಿಸಿದ್ದಾರೆ. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ...

ಚಿಕ್ಕಬಳ್ಳಾಪುರ: ಅರ್ಹ ಫಲಾನುಭವಿಗಳನ್ನು ಗುರುತಿಸುವಲ್ಲಿ ವಿಫಲ: ರೈತರಿಗೆ ಸಿಗುತ್ತಿಲ್ಲ ಪರಿಹಾರ ಧನ

ಕೊರೋನಾ ಲಾಕ್ಡೌನ್ ಸಮಯದಲ್ಲಿ ಸಂಕಷ್ಟಕ್ಕೊಳಗಾದ ರೈತರಿಗೆ ಸರ್ಕಾರ ಪರಿಹಾರದ ಅಭಯ ಕೊಟ್ಟಿತು. ಆದರೆ ಅರ್ಹ ಫಲಾನುಭವಿಗಳನ್ನ ಗುರುತಿಸುವಲ್ಲಿ ವಿಫಲವಾದ ಪರಿಣಾಮ ನಿಜವಾದ ರೈತರಿಗೆ ಪರಿಹಾರ ಸಿಗದಂತಾಗಿದೆ. ಈ ಕುರಿತು ಚಿಕ್ಕಬಳ್ಳಾಪುರದಲ್ಲಿ ರೈತರು ತಮ್ಮ...