ವಾಯುಪಡೆ ದಿನಾಚರಣೆ ಪ್ರಯುಕ್ತ ವಾಯುಪಡೆ ಏರ್ ಚೀಫ್ ಮಾರ್ಷಲ್ ಹಲವು ಮಹತ್ವದ ಯೋಜನೆಗಳನ್ನು ಪ್ರಕಟಿಸಿದ್ದಾರೆ.
ಚಂಡೀಗಢದಲ್ಲಿ ಶನಿವಾರ ನಡೆದ ವಾಯುಪಡೆ ದಿನಾಚರಣೆ ವೇಳೆ ಯೋಧರನ್ನು ಉದ್ದೇಶಿಸಿ ಮಾತನಾಡಿದ ಏರ್ ಚೀಫ್ ಮಾರ್ಷಲ್ ವಿವೇಕ್ ರಾಮ್ ಚೌಧರಿ ಹಲವು ಮಹತ್ವದ ಯೋಜನೆಗಳನ್ನು ಪ್ರಕಟಿಸಿದರು.
ವಾಯುಪಡೆಗೆ ಆಧುನಿಕ ಶಸ್ತ್ರಾಸ್ತ್ರ ಸೇರಿದಂತೆ ಹಲವು ರೀತಿಯ ಯುದ್ಧೋಪಕರಣಗಳನ್ನು ಏಕಕಾಲದಲ್ಲಿ ಬಳಸುವ ವಿಧಾನ ಜಾರಿಗೊಳಿಸಲಾಗುವುದು. ಈ ಮೂಲಕ ೩೪೦೦ ಕೋಟಿ ರೂ. ಉಳಿತಾಯ ಮಾಡಬಹುದಾಗಿದೆ ಎಂದು ಅವರು ಹೇಳಿದರು.
ಇದೇ ವೇಳೆ ಮುಂದಿನ ವರ್ಷದಿಂದ ವಾಯುಪಡೆಗೆ ಮಹಿಳಾ ಅಗ್ನಿವೀರ್ ಅವರನ್ನು ನೇಮಿಸಿಕೊಳ್ಳಲಾಗುವುದು. ಈ ಮೂಲಕ ಮಹಿಳೆಯರಿಗೆ ಪ್ರಾತಿನಿಧ್ಯ ನೀಡುವ ಜೊತೆಗೆ ಬಲ ಹೆಚ್ಚಿಸುವ ಯೋಜನೆ ಹೊಂದಲಾಗಿದೆ ಎಂದು ಅವರು ವಿವರಿಸಿದರು.

ಅಗ್ನಿಪಥ್ ಯೋಜನೆಯಿಂದಾಗಿ ವಾಯುಪಡೆಗೆ ಅಗ್ನಿವೀರರನ್ನು ಸೇರಿಸಿಕೊಳ್ಳುವುದು ಒಂದು ದೊಡ್ಡ ಸವಾಲಾಗಿದೆ. ಪ್ರತಿಯೊಬ್ಬ ಅಗ್ನಿವೀರ್ ಉತ್ತಮ ಕೌಶಲ್ಯ ಮತ್ತು ಜ್ಞಾನವನ್ನು ಹೊಂದಿದ್ದಾನೆಯೇ ಎಂದು ಖಚಿತಪಡಿಸಿಕೊಳ್ಳಲು ನಾವು ನಮ್ಮ ಕಾರ್ಯಾಚರಣೆಯ ತರಬೇತಿ ವಿಧಾನವನ್ನು ಬದಲಾಯಿಸಿದ್ದೇವೆ. ಈ ವರ್ಷದ ಡಿಸೆಂಬರ್‍ನಲ್ಲಿ ಆರಂಭಿಕ ತರಬೇತಿಗಾಗಿ 3,000 ಅಗ್ನಿವೀರರನ್ನು ವಾಯುಪಡೆಗೆ ಸೇರಿಸಿಕೊಳ್ಳುತ್ತೇವೆ. ಮುಂಬರುವ ವರ್ಷಗಳಲ್ಲಿ ಮತ್ತಷ್ಟು ಸಿಬ್ಬಂದಿಯನ್ನು ಹೆಚ್ಚಾಗಿ ಸೇರಿಸಿಕೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.
ಐಎಎಫ್ ಅಧಿಕಾರಿಗಳಿಗೆ ಶಸ್ತ್ರಾಸ್ತ್ರ ವ್ಯವಸ್ಥೆ ಶಾಖೆಯನ್ನು ರಚಿಸಲು ಸರ್ಕಾರ ಅನುಮೋದನೆ ನೀಡಿದೆ. ಇದು ಸ್ವಾತಂತ್ರದ ನಂತರ ಮೊದಲ ಬಾರಿಗೆ ರಚಿಸಲಾಗುತ್ತಿರುವ ಹೊಸ ಕಾರ್ಯಾಚರಣೆಯ ಶಾಖೆಯಾಗಿದೆ. ಎಲ್ಲಾ ರೀತಿಯ ಇತ್ತೀಚಿನ ಶಸ್ತ್ರಾಸ್ತ್ರ ವ್ಯವಸ್ಥೆಗಳನ್ನು ಹೊಂದಿರುತ್ತದೆ. ಇದರಿಂದ ಸರ್ಕಾರಕ್ಕೆ 3,400 ಕೋಟಿ ರೂ. ಉಳಿತಾಯವಾಗುತ್ತದೆ ಎಂದು ವಿಆರ್ ಚೌಧರಿ ವಿವರಿಸಿದರು.
ವಾಯುಪಡೆ ದಿನಾಚರಣೆ ಅಂಗವಾಗಿ ಸುಕ್ನ ಕೆರೆಯ ಮೇಲೆ ಸುಮಾರು 80 ವಿಮಾನಗಳು ಗಂಟೆಗಳ ಕಾಲ ತಮ್ಮ ಸಾಮರ್ಥ್ಯ, ಚಮತ್ಕಾರಗಳನ್ನು ಬಾನಂಗಳದಲ್ಲಿ ಪ್ರದರ್ಶಿಸಿದವು. ಹೊಸ ಯುದ್ಧ ಸಮವಸ್ತ್ರವನ್ನು ಕೂಡ ಇಂದು ಅನಾವರಣಗೊಳಿಸಲಾಯಿತು.






