ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ಬಹುನಿರೀಕ್ಷಿತ ಸಚಿವ ಸಂಪುಟ ಪುನರ್‌ರಚನೆ ಮತ್ತು ವಿಸ್ತರಣೆ ಪೂರ್ಣಗೊಂಡಿದ್ದು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ನೂತನ ಸಂಪುಟದಲ್ಲಿ ಸಾಮಾಜಿಕ ಸಮೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ವಿಶೇಷವಾಗಿ ಅಹಿಂದ (ಅಲ್ಪಸಂಖ್ಯಾತ, ಹಿಂದುಳಿದ ಮತ್ತು ದಲಿತ) ಸಮುದಾಯಗಳಿಗೆ ಹೆಚ್ಚಿನ ಪ್ರಾತಿನಿಧ್ಯ ಕಲ್ಪಿಸುವ ಮೂಲಕ ಕಾಂಗ್ರೆಸ್ ಹೈಕಮಾಂಡ್ ಮುಂದಿನ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ರಾಜಕೀಯ ಲೆಕ್ಕಾಚಾರ ರೂಪಿಸಿದೆ.
ಹೊಸ ಸಂಪುಟದಲ್ಲಿ ಅಹಿಂದ ವರ್ಗಕ್ಕೆ ಒಟ್ಟು 23 ಸಚಿವ ಸ್ಥಾನಗಳು ದೊರೆತಿದ್ದು, ಇದು ಕಾಂಗ್ರೆಸ್‌ನ ಸಾಂಪ್ರದಾಯಿಕ ಮತಬ್ಯಾಂಕ್ ಅನ್ನು ಮತ್ತಷ್ಟು ಬಲಪಡಿಸುವ ಪ್ರಯತ್ನವೆಂದು ವಿಶ್ಲೇಷಿಸಲಾಗುತ್ತಿದೆ.

ಜಾತಿವಾರು ಪ್ರಾತಿನಿಧ್ಯ ಹೇಗಿದೆ?
ನೂತನ ಸಚಿವ ಸಂಪುಟದಲ್ಲಿ ವಿವಿಧ ಸಮುದಾಯಗಳಿಗೆ ನೀಡಲಾದ ಪ್ರಾತಿನಿಧ್ಯ ಹೀಗಿದೆ:
- ಲಿಂಗಾಯತ – 6
- ಒಕ್ಕಲಿಗ – 5
- ಪರಿಶಿಷ್ಟ ಜಾತಿ (ಎಡ ಮತ್ತು ಬಲ) – 7
- ಕುರುಬ – 3
- ವಾಲ್ಮೀಕಿ (ಎಸ್‌ಟಿ) – 3
- ಮುಸ್ಲಿಂ – 3
- ಇತರೆ ಸಮುದಾಯಗಳು – 7
ಇತರೆ ಸಮುದಾಯಗಳಲ್ಲಿ ಕ್ರೈಸ್ತ, ಉಪ್ಪಾರ, ಮರಾಠ, ಈಡಿಗ, ಮೊಗವೀರ, ರಜಪೂತ ಮತ್ತು ರೆಡ್ಡಿ ಸಮುದಾಯಗಳಿಗೆ ತಲಾ ಒಂದೊಂದು ಸಚಿವ ಸ್ಥಾನ ನೀಡಲಾಗಿದೆ.

ಈ ಬಾರಿಯ ಸಂಪುಟದಲ್ಲಿ ಬ್ರಾಹ್ಮಣ ಸಮುದಾಯಕ್ಕೆ ಯಾವುದೇ ಸ್ಥಾನ ದೊರಕಿಲ್ಲ. ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದ ಹಿರಿಯ ನಾಯಕರು ದಿನೇಶ್ ಗುಂಡೂರಾವ್ ಹಾಗೂ ಆರ್.ವಿ. ದೇಶಪಾಂಡೆ ಅವರಿಗೆ ಅವಕಾಶ ಸಿಕ್ಕಿಲ್ಲ. ಇದೇ ವೇಳೆ, ಬೆಳಗಾವಿಯ ಪ್ರಭಾವಿ ನಾಯಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೂ ಸಚಿವ ಸ್ಥಾನ ಕೈತಪ್ಪಿರುವುದು ಚರ್ಚೆಗೆ ಕಾರಣವಾಗಿದೆ.
ಸಚಿವ ಸ್ಥಾನ ದೊರಕದ ಹಿನ್ನೆಲೆಯಲ್ಲಿ ಕೆಲವು ಆಕಾಂಕ್ಷಿಗಳಲ್ಲಿ ಅಸಮಾಧಾನ ವ್ಯಕ್ತವಾಗಿದೆ. ಹಿರಿಯ ಶಾಸಕ ಬಿ.ಆರ್. ಪಾಟೀಲ್ ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿವಾಸಕ್ಕೆ ಭೇಟಿ ನೀಡಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಸಿದ್ದರಾಮಯ್ಯ ಅವರ ಆಪ್ತ ನಾಯಕ ಹೆಚ್.ಸಿ. ಮಹದೇವಪ್ಪ ಹಾಗೂ ದಲಿತ ಎಡಗೈ ಸಮುದಾಯದ ಮುಖಂಡ ಆರ್.ಬಿ. ತಿಮ್ಮಾಪುರ್ ಅವರಿಗೂ ಸಚಿವ ಸ್ಥಾನ ಸಿಗದಿರುವುದು ಗಮನ ಸೆಳೆದಿದೆ.

ಜಿಲ್ಲಾವಾರು ಲೆಕ್ಕಾಚಾರ
ರಾಮನಗರ ಜಿಲ್ಲೆ ಈ ಬಾರಿ ವಿಶೇಷ ಗಮನ ಸೆಳೆದಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಜೊತೆಗೆ ಶಾಸಕ ಹೆಚ್.ಸಿ. ಬಾಲಕೃಷ್ಣ ಅವರಿಗೂ ಸಚಿವ ಸ್ಥಾನ ದೊರೆತಿದ್ದು, ಜಿಲ್ಲೆಗೆ ಎರಡು ಸ್ಥಾನಗಳ ಲಾಭವಾಗಿದೆ.
ಮಂಡ್ಯ ಜಿಲ್ಲೆಯಿಂದ ಎನ್. ಚಲುವರಾಯಸ್ವಾಮಿ ಮತ್ತು ಎಂ.ಪಿ. ನರೇಂದ್ರಸ್ವಾಮಿ ಇಬ್ಬರೂ ಸಚಿವರಾಗಿದ್ದು, ಒಕ್ಕಲಿಗ ಹಾಗೂ ದಲಿತ ಸಮುದಾಯಗಳ ಸಮತೋಲನ ಸಾಧಿಸಲು ಕಾಂಗ್ರೆಸ್ ಪ್ರಯತ್ನಿಸಿದೆ.
ಕೊಪ್ಪಳ ಜಿಲ್ಲೆಯಿಂದ ಬಸವರಾಜ ರಾಯರೆಡ್ಡಿ ಮತ್ತು ಶಿವರಾಜ್ ತಂಗಡಗಿ ಸಚಿವರಾಗಿದ್ದರೆ, ಬಾಗಲಕೋಟೆ ಜಿಲ್ಲೆಯಿಂದ ವಿಜಯಾನಂದ ಕಾಶಪ್ಪನವರ್ ಅವರಿಗೆ ಅವಕಾಶ ಸಿಕ್ಕಿದೆ.
ಬೆಳಗಾವಿ ಜಿಲ್ಲೆಯಲ್ಲಿ ಲಕ್ಷ್ಮಣ್ ಸವದಿ ಮತ್ತು ಅಶೋಕ್ ಪಟ್ಟಣ್ ಅವರಿಗೆ ಸಚಿವ ಸ್ಥಾನ ನೀಡುವ ಮೂಲಕ ಉತ್ತರ ಕರ್ನಾಟಕಕ್ಕೆ ಮಹತ್ವ ನೀಡಲಾಗಿದೆ.

ಕುರುಬ ಸಮುದಾಯಕ್ಕೆ ಪರಿಷತ್ ಮೂಲಕ ಅವಕಾಶ
ಕುರುಬ ಸಮುದಾಯದ ಪ್ರಾತಿನಿಧ್ಯವನ್ನು ಹೆಚ್ಚಿಸುವ ಉದ್ದೇಶದಿಂದ ವಿಧಾನ ಪರಿಷತ್ ಸದಸ್ಯರಾದ ಯತೀಂದ್ರ ಸಿದ್ದರಾಮಯ್ಯ ಹಾಗೂ
ಗಾಯತ್ರಿ ಶಾಂತೇಗೌಡ ಅವರಿಗೆ ಸಚಿವ ಸ್ಥಾನ ನೀಡಲಾಗಿದೆ. ಡಿ ಕೆ ಶಿವಕುಮಾರ್ ನೇತೃತ್ವದ ಹೊಸ ಸಚಿವ ಸಂಪುಟದಲ್ಲಿ ಸಾಮಾಜಿಕ ಸಮತೋಲನ, ಪ್ರಾದೇಶಿಕ ಪ್ರಾತಿನಿಧ್ಯ ಮತ್ತು ಚುನಾವಣಾ ರಾಜಕೀಯದ ಲೆಕ್ಕಾಚಾರ ಸ್ಪಷ್ಟವಾಗಿ ಗೋಚರಿಸುತ್ತಿದ್ದು, ಮುಂದಿನ ದಿನಗಳಲ್ಲಿ ಅಸಮಾಧಾನಿತ ನಾಯಕರನ್ನು ಪಕ್ಷ ಹೇಗೆ ಸಮಾಧಾನಪಡಿಸುತ್ತದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.






