ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆಯ ಬೆನ್ನಲ್ಲೇ ಆಡಳಿತಾರೂಢ ಕಾಂಗ್ರೆಸ್‌ನಲ್ಲಿ ಅಸಮಾಧಾನದ ಹೊಗೆ ಜೋರಾಗಿದೆ. ನೂತನ ಸಚಿವರ ಪಟ್ಟಿಯಲ್ಲಿ ಹಲವು ಹಿರಿಯ ಹಾಗೂ ಪ್ರಭಾವಿ ನಾಯಕರಿಗೆ ಅವಕಾಶ ದೊರೆಯದ ಹಿನ್ನೆಲೆಯಲ್ಲಿ ರಾಜ್ಯದ ವಿವಿಧ ಭಾಗಗಳಲ್ಲಿ ಬೆಂಬಲಿಗರ ಆಕ್ರೋಶ ಭುಗಿಲೆದ್ದಿದೆ.ಇಂದು ಸಂಜೆ ರಾಜಭವನದಲ್ಲಿ ನೂತನ ಸಚಿವರ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯಲಿರುವ ವೇಳೆ, ಸಚಿವ ಸ್ಥಾನ ಕೈತಪ್ಪಿದ ನಾಯಕರ ಬೆಂಬಲಿಗರು ಪ್ರತಿಭಟನೆಗೆ ಇಳಿದಿದ್ದಾರೆ.

ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಮೈಸೂರಿನ ಶಾಸಕ ತನ್ವೀರ್ ಸೇಠ್ ಅವರ ಬೆಂಬಲಿಗರು ರಸ್ತೆಗಿಳಿದು ಪ್ರತಿಭಟನೆ ನಡೆಸಿದರು. ಪ್ರತಿಭಟನೆಯ ವೇಳೆ ಆಕ್ರೋಶಗೊಂಡಿದ್ದ ಒಬ್ಬ ಬೆಂಬಲಿಗ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ತಕ್ಷಣವೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ. ಈ ಘಟನೆ ಕಾರ್ಯಕರ್ತರ ಅಸಮಾಧಾನದ ತೀವ್ರತೆಯನ್ನು ಬಿಂಬಿಸಿದೆ.

ಇನ್ನೊಂದೆಡೆ, ವಿಜಯಪುರ ಜಿಲ್ಲೆಯ ಇಂಡಿ ಕ್ಷೇತ್ರದ ಶಾಸಕ ಯಶವಂತರಾಯ ಗೌಡ ಪಾಟೀಲ್ ಅವರಿಗೆ ಸಚಿವ ಸ್ಥಾನ ದೊರೆಯದ ಹಿನ್ನೆಲೆಯಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿದೆ. ತಮ್ಮನ್ನು ಸಂಪುಟದಲ್ಲಿ ಪರಿಗಣಿಸದಿರುವುದನ್ನು ವಿರೋಧಿಸಿ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ ಎನ್ನಲಾಗಿದೆ. ಈ ಬೆಳವಣಿಗೆ ಕಾಂಗ್ರೆಸ್ ವಲಯದಲ್ಲಿ ಹೊಸ ರಾಜಕೀಯ ಚರ್ಚೆಗೆ ಕಾರಣವಾಗಿದೆ.

ಸಚಿವ ಸಂಪುಟ ವಿಸ್ತರಣೆಯ ನಂತರ ಉಂಟಾಗಿರುವ ಅಸಮಾಧಾನ, ಪ್ರತಿಭಟನೆ ಹಾಗೂ ರಾಜೀನಾಮೆಯ ಬೆಳವಣಿಗೆಗಳು ಆಡಳಿತಾರೂಢ ಪಕ್ಷದ ಹೈಕಮಾಂಡ್‌ಗೆ ಹೊಸ ಸವಾಲಾಗಿ ಪರಿಣಮಿಸಿವೆ. ಅಸಮಾಧಾನಗೊಂಡ ನಾಯಕರನ್ನು ಮನವೊಲಿಸುವ ಪ್ರಯತ್ನಗಳು ಮುಂದುವರಿಯುವ ಸಾಧ್ಯತೆ ಇದೆ.






