ಸಂಘ ಪರಿವಾರದ ಕಪೋಲ ಕಲ್ಪಿತ ‘ಲವ್ ಜಿಹಾದ್’ ಮತ್ತು ಅದರ ವಿರುದ್ಧ ಕೆಲವು ರಾಜ್ಯ ಸರ್ಕಾರಗಳು ತಂದಿರುವ ಕಾನೂನು ದೇಶದಲ್ಲೆಡೆ ಸದ್ದು ಮಾಡುತ್ತಿದೆ. ಅದರ ನಡುವೆ ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ಅವರು “ಹಿಂದು ಹುಡುಗರು ಹಿಂದು ಹುಡುಗಿಯರಿಗೆ ಸುಳ್ಳು ಹೇಳುವುದೂ ‘ಲವ್ ಜಿಹಾದ್’ನಲ್ಲಿ ಒಳಪಡುತ್ತದೆ” ಎಂದು ಹೇಳುವ ಮೂಲಕ ಹೊಸ ಚರ್ಚೆ ಹುಟ್ಟುಹಾಕಿದ್ದಾರೆ.
ವಿವಾಹದ ಸಂದರ್ಭದಲ್ಲಿ ಬಲವಂತದ ಮತಾಂತರ ಮತ್ತು ಗುರುತನ್ನು ಮರೆಮಾಚುವ ವಿರುದ್ಧದ ಕಾನೂನನ್ನು ಬೆಂಬಲಿಸುತ್ತಾ ವಧು-ವರರು ಮದುವೆಗೆ ಒಂದು ತಿಂಗಳು ಮೊದಲೇ ತಮ್ಮ ಧರ್ಮ ಮತ್ತು ಆದಾಯದ ಅಧಿಕೃತ ದಾಖಲೆಗಳಲ್ಲಿ ಬಹಿರಂಗಪಡಿಸುವುದು ಕಡ್ಡಾಯ ಎನ್ನುವ ಕಾನೂನನ್ನು ರಾಜ್ಯದಲ್ಲಿ ಶೀಘ್ರದಲ್ಲೇ ತರಲಿದ್ದೇವೆ ಎಂದು ಹೇಳಿದ್ದಾರೆ.
ಈ ‘ ಮ್ಯಾರೇಜ್ ಬಿಲ್’ನ ಉದ್ದೇಶವು ‘ಲವ್ ಜಿಹಾದ್’ ನ ಭೀತಿಯನ್ನು ಪರಿಶೀಲಿಸುವುದಾಗಿದೆ ಮತ್ತು ಇದು ಎಲ್ಲಾ ಸಮುದಾಯಗಳನ್ನು ಒಳಗೊಳ್ಳಲಿದೆ ಎಂದು ಶರ್ಮಾ ಹೇಳಿದ್ದಾರೆ. “ಲವ್ ಜಿಹಾದ್ ಎಂದರೆ ಮುಸ್ಲಿಂ ಹಿಂದೂವನ್ನು ಮೋಸ ಮಾಡುವುದು ಎಂದಲ್ಲ. ಇದು ಹಿಂದೂಗಳಲ್ಲೂ ಆಗಬಹುದು. ಹಿಂದೂ ಹುಡುಗ ಹಿಂದೂ ಹುಡುಗಿಯನ್ನು ಮದುವೆಯಾಗಲು ಸಂಶಯಾಸ್ಪದ ವಿಧಾನಗಳನ್ನು ಬಳಸಿದರೆ ಅದು ಸಹ ‘ಲವ್ ಜಿಹಾದ್’ ಆಗಲಿದೆ ”ಎಂದು ಶರ್ಮಾ ಶನಿವಾರ ಸುದ್ದಿಗಾರರಿಗೆ ತಿಳಿಸಿದರು.
‘ಹಿಂದು ಹುಡುಗಿಗೆ ಹಿಂದು ಹುಡುಗ ಸುಳ್ಳು ಹೇಳುವುದೂ ಲವ್ ಜಿಹಾದ್’ ಎಂದು ಪ್ರತಿಪಾದಿಸಿದ ಅವರು, ಹಸು ಸಂರಕ್ಷಣಾ ಮಸೂದೆ ಮತ್ತು ಎರಡು ಮಕ್ಕಳ ನೀತಿಯ ನಂತರ ಅಸ್ಸಾಂ ಅಸೆಂಬ್ಲಿಯಲ್ಲಿ ಶೀಘ್ರದಲ್ಲೇ ಕಾನೂನನ್ನು ಪರಿಚಯಿಸಲಾಗುವುದು ಎಂದು ಹೇಳಿದರು. ಯುಪಿ, ಮಧ್ಯಪ್ರದೇಶ, ಗುಜರಾತ್ ನಂತರ ಇಂತಹ ಮತಾಂತರ ವಿರೋಧಿ ಮಸೂದೆಯನ್ನು ಅಂಗೀಕರಿಸಲಿರುವ ಬಿಜೆಪಿ ಆಡಳಿತದ ರಾಜ್ಯ ಅಸ್ಸಾಂ ಆಗಲಿದೆ.
“ನಾವು ಇದನ್ನು ನಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಉಲ್ಲೇಖಿಸಿದ್ದೇವೆ. ನಮ್ಮ ಸರ್ಕಾರ ಕೇವಲ ಎರಡು ತಿಂಗಳಷ್ಟು ಹಳೆಯದು. ಮೊದಲು ನಾವು ಹಸು ಸಂರಕ್ಷಣಾ ಕಾನೂನನ್ನು ತರುತ್ತೇವೆ, ಮುಂದಿನ ತಿಂಗಳು ನಾವು ಎರಡು ಮಕ್ಕಳ ಕಾನೂನನ್ನು ತರುತ್ತೇವೆ ಮತ್ತು ನಂತರ ಮ್ಯಾರೇಜ್ ಬಿಲ್ ತರುತ್ತೇವೆ” ಎಂದು ಶರ್ಮಾ ಹೇಳಿದ್ದಾರೆ.
“ಹಿಂದೂ ಕೂಡ ಹಿಂದೂವನ್ನು ಮೋಸ ಮಾಡಬಾರದು ಎಂದು ನಾವು ಭಾವಿಸುವುದರಿಂದ ‘ಲವ್ ಜಿಹಾದ್’ ಎನ್ನುವ ಪದವನ್ನು ಬಳಸಲು ಬಯಸುವುದಿಲ್ಲ. ನಾವು ಒಂದು ಕಾನೂನನ್ನು ತರುತ್ತೇವೆ, ಆದರೆ ಅದು ಕೇವಲ ಮುಸ್ಲಿಮರ ವಿರುದ್ಧ ಮಾತ್ರವಲ್ಲ ಆಗುವುದಿಲ್ಲ. ನಮ್ಮ ಕಾನೂನು ಹಿಂದೂಗಳು ಮತ್ತು ಮುಸ್ಲಿಮರ ವಿಷಯದಲ್ಲಿ ಸಮಾನವಾಗಿರುತ್ತದೆ “ಎಂದು ಮುಖ್ಯಮಂತ್ರಿ ಹೇಳಿದರು.