ಬಿಜೆಪಿ ಚನ್ನಗಿರಿ ಕ್ಷೇತ್ರದ ಶಾಸಕ ಮಾಡಾಳು ವಿರೂಪಾಕ್ಷಪ್ಪ ಪುತ್ರ ಪ್ರಶಾಂತ್ ಮಾಡಾಳ್ ಕಚೇರಿ ಹಾಗು ಮನೆ ಮೇಲೆ ಲೋಕಾಯುಕ್ತ ದಾಳಿ ನಡೆದಿತ್ತು. ಬರೋಬ್ಬರಿ 8 ಕೋಟಿ ರೂಪಾಯಿಗೂ ಹೆಚ್ಚು ಹಣ ಸಿಕ್ಕಿತ್ತು. ಮಾಡಾಳು ವಿರೂಪಾಕ್ಷಪ್ಪ ಕರ್ನಾಟಕ ಸೋಪ್ ಅಂಡ್ ಡಿಟರ್ಜೆಂಟ್ ಸಂಸ್ಥೆಯ ನಿಗಮ ಮಂಡಳಿ ಅಧ್ಯಕ್ಷರಾಗಿದ್ದು, ಟೆಂಡರ್ ಕೊಡಿಸುವ ಭರವಸೆ ಮೇರೆಗೆ ಲಂಚಕಕ್ಕಾಗಿ ಬೇಡಿಕೆ ಇಟ್ಟಿದ್ದರು ಎಂದು ಉದ್ಯಮಿ ಶ್ರೇಯಸ್ ಕಶ್ಯಪ್ ಎಂಬುವರು ದೂರು ನೀಡಿದ್ದರು. ಲೋಕಾಯುಕ್ತ ದಾಳಿ ಬಳಿಕ ಅಬ್ಬರಿಸಿದ್ದ ಲೋಕಾಯುಕ್ತರು, ಆ ಬಳಿಕ ಠುಸ್ ಆಗಿದ್ದರು. ಮಾರ್ಚ್ 2ರಂದು ದಾಳಿ ನಡೆದ ಬಳಿಕ 6 ದಿನಗಳಾದರೂ FIRನಲ್ಲಿ A1 ಆರೋಪಿ ಎಂದು ದಾಖಲಾಗಿದ್ದ ಮಾಡಾಳ್ ವಿರೂಪಾಕ್ಷಗೆ ನೋಟಿಸ್ ನೀಡಿರಲಿಲ್ಲ. ಆದರೂ ಮಾಡಾಳ್ ವಿರೂಪಾಕ್ಷಪ್ಪ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಕೆ ಮಾಡಿದ್ದರು. ಇದೀಗ ಹೈಕೋರ್ಟ್ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದ್ದು, ಮುಂದಿನ 48 ಗಂಟೆಯ ಒಳಗಾಗಿ ಲೋಕಾಯುಕ್ತರ ಎದುರು ಹಾಜರಾಗಿ ಮಾಹಿತಿ ನೀಡಬೇಕು ಎಂದು ಷರತ್ತು ವಿಧಿಸಿದೆ.
ವಿಚಾರಣೆಗೆ ಕರೆಯದೇ ವಿಚಾರಣೆಗೆ ಹಾಜರು..!!
ಯಾವುದೇ ಒಂದು ಪ್ರಕರಣದಲ್ಲಿ ಆರೋಪಿಯನ್ನು ವಿಚಾರಣೆ ಮಾಡಬೇಕಿದ್ದರೆ ಪೊಲೀಸರು ಅಥವಾ ತನಿಖಾ ಅಧಿಕಾರಿಗಳು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಬೇಕು. ಕೋರ್ಟ್ ನಿರೀಕ್ಷಣಾ ಮಧ್ಯಂತರ ಜಾಮೀನು ಮಂಜೂರು ಮಾಡಿದ ಹುಟ್ಟೂರು ಚನ್ನಗಿರಿಯಲ್ಲಿ ಕಾರ್ಯಕರ್ತರ ಜೊತೆಗೆ ಬೃಹತ್ ಮೆರವಣಿಗೆ ಮಾಡುವ ಮೂಲಕ ಸಂಭ್ರಮಾಚರಣೆ ಮಾಡಿದ್ದಾರೆ. ಇ ವೇಳೆ ಮಾಧ್ಯಮಗಳ ಜೊತೆಗೆ ಮಾತನಾಡಿರುವ ಮಾಡಾಳ್ ವಿರೂಪಾಕ್ಷಪ್ಪ, ಇಲ್ಲೀವರೆಗೂ ನನಗೆ ಲೋಕಾಯುಕ್ತ ಪೊಲೀಸ್ರಿಂದ ನೋಟಿಸ್ ಬಂದಿಲ್ಲ. ಆದರೂ ನಾನು ಕೋರ್ಟ್ ಸೂಚನೆಯಂತೆ ಬುಧವಾರ ಲೋಕಾಯುಕ್ತ ಕಚೇರಿಗೆ ಹಾಜರಾಗ್ತೇನೆ ಎಂದಿದ್ದಾರೆ. ಇನ್ನು ನಮ್ಮ ಮನೆಯಲ್ಲಿ ಸಿಕ್ಕ ಹಣ, ನಮ್ಮ ಅಡಿಕೆ ತೋಟ ಸೇರಿದಂತೆ ಬೇರೆ ಬೇರೆ ವ್ಯವಹಾರದಿಂದ ಬಂದಿರುವ ಹಣ, ಭ್ರಷ್ಟಾಚಾರದ ಹಣವಲ್ಲ. ಇನ್ನು ಕಚೇರಿಯಲ್ಲಿ ಸಿಕ್ಕ ಹಣ ಯಾರೋ ಇಬ್ಬರು ಹುಡುಗರು ನಮ್ಮ ಕಚೇರಿಗೆ ಬಂದು ಹಣ ಇಟ್ಟು ಓಡಿ ಹೋಗಿದ್ದಾರೆ. ನಮ್ಮ ಚನ್ನಗಿರಿ ಭಾಗದಲ್ಲಿ ಅಡಿಕೆ ಬೆಳೆಯುವ ಹಿನ್ನೆಲೆಯಲ್ಲಿ ಮೂರ್ನಾಲ್ಕು ಕೋಟಿ ಹಣ ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಇರುತ್ತೆ ಎನ್ನುವ ಮೂಲಕ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಅಧಿಕಾರಿಗಳ ವರ್ಗಾವಣೆ, ಮಾಡಾಳು ಉಚ್ಛಾಟನೆ..!
ಲೋಕಾಯುಕ್ತ ಪೊಲೀಸ್ರು ನೋಟಿಸ್ ನೀಡಿಲ್ಲ ಅನ್ನೋ ವಿಚಾರದ ಜೊತೆಗೆ ಇಬ್ಬರು ಅಧಿಕಾರಿಗಳಾದ ಡಿವೈಎಸ್ಪಿ ಪ್ರಮೋದ್ ಕುಮಾರ್ ಹಾಗು ಇನ್ಸ್ಪೆಕ್ಟರ್ ಕುಮಾರಸ್ವಾಮಿ ಅವರನ್ನು ಸರ್ಕಾರ ವರ್ಗಾವಣೆ ಮಾಡಿದೆ ಎನ್ನುವ ವಿಚಾರ ಭಾರೀ ಸದ್ದು ಮಾಡಿದೆ. ಲೋಕಾಯುಕ್ತ ದಾಳಿ ನಡೆದ ಬಳಿಕ ಬಿಜೆಪಿ ಸರ್ಕಾರ ಹಸ್ತಕ್ಷೇಪ ಮಾಡಿಲ್ಲ, ಸ್ವತಂತ್ರ ಸಂಸ್ಥೆ ಸ್ವತಂತ್ರ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಸ್ವತಃ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದರು. ಅದಾದ ಕೆಲವೇ ಗಂಟೆಗಳಲ್ಲಿ ಲೋಕಾಯುಕ್ತ ದಾಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಡಿವೈಎಸ್ಪಿ ಪ್ರಮೋದ್ ಕುಮಾರ್ ಹಾಗು ಇನ್ಸ್ಪೆಕ್ಟರ್ ಕುಮಾರಸ್ವಾಮಿ ಇಬ್ಬರು ಅಧಿಕಾರಿಗಳು ಸರ್ಕಾರ ವರ್ಗಾವಣೆ ಮಾಡಿ ಆದೇಶ ಮಾಡಿತು ಎನ್ನುವುದು ಗಮನಿಸಬೇಕಾದ ಸಂಗತಿ. ಇನ್ನು ನಿರೀಕ್ಷಣಾ ಜಾಮೀನು ಮಂಜೂರು ಆಗ್ತಿದ್ದ ಬಿಜೆಪಿ ಹೈಕಮಾಂಡ್ ಪಕ್ಷದಿಂದ ಉಚ್ಚಾಟನೆ ಮಾಡುವ ನಿರ್ಧಾರ ಕೈಗೊಂಡಿದೆ. ಇದೊಂದು ರೀತಿಯಲ್ಲಿ ನಾ ಹೊಡೆದಂಗೆ ಮಾಡ್ತೇನೆ, ನೀನು ಅತ್ತಂತೆ ಮಾಡು ಎನ್ನುವ ರೀತಿಯಲ್ಲಿ ಮಾಡಾಳು ವಿರೂಪಾಕ್ಷಪ್ಪ ಹಾಗು ಭಾರತೀಯ ಜನತಾ ಪಾರ್ಟಿ ಸರ್ಕಾರ ರಾಜ್ಯದ ಜನರ ಕಣ್ಣಿಗೆ ಮಣ್ಣೆರೆಚುವ ಕಾಯಕ ಶುರು ಮಾಡಿದೆ.
ಹೈಕೋರ್ಟ್ ನಲ್ಲಿ ಸರ್ಕಾರ ವಾದ ಮಾಡದೆ ಕಳ್ಳಾಟ..!
ಕೋರ್ಟ್ ಯಾವಾಗಲೂ ಸಮರ್ಥ ವಾದ ಹಾಗು ಸಾಕ್ಷಿಗಳನ್ನು ಪರಿಗಣಿಸಿ ತೀರ್ಮಾನ ಮಾಡುತ್ತದೆ. ಸರ್ಕಾರ ಯಾವ ಮಟ್ಟದಲ್ಲಿ ಈ ಕೇಸ್ಗೆ ಎಳ್ಳು ನೀರು ಬಿಡುವ ಕೆಲಸ ಮಾಡಿತ್ತು ಎಂದರೆ ಬೆಳ್ಳಂಬೆಳಗ್ಗೆ ಇಬ್ಬರು ಹಿರಿಯ ಅಧಿಕಾರಿಗಳ ವರ್ಗಾವಣೆ ಮಾಡಿತ್ತು. ಅದರ ಬೆನ್ನಲ್ಲೇ ಲೋಕಾಯುಕ್ತ ಪರವಾದ ಹಿರಿಯ ವಕೀಲ ಬಿ.ಬಿ ಪಾಟೀಲ್ ಗೈರಾಗುವಂತೆ ನೋಡಿಕೊಳ್ತು. ಬಿಜೆಪಿ ಶಾಸಕ ವಿರೂಪಾಕ್ಷಪ್ಪ ಪರವಾಗಿ ಹಿರಿಯ ವಕೀಲ ಸುಮನ್ ವಾದ ಮಂಡನೆ ಮಾಡಿದರೆ ಲೋಕಾಯುಕ್ತರ ಪರವಾಗಿ ಕಿರಿಯ ವಕೀಲ ತಡಬಡಾಯಿಸುವಂತೆ ಮಾಡಿತ್ತು. ಇನ್ನು ಸ್ವತಃ ಹೈಕೋರ್ಟ್ ಜಸ್ಟೀಸ್ ನಟರಾಜನ್ 6 ದಿನ ಆಗಿದೆ ಇನ್ನೂ ಬಂಧನವಾಗಿಲ್ಲ. ಮುಂದಿನ ನಾಲ್ಕು ದಿನ ತಡೆಯಿರಿ ನೋಡೋಣ ಎಂದು ಚಟಾಕಿ ಹಾರಿಸಿದ್ರು. ಈ ವೇಳೆ ಅನಾರೋಗ್ಯದ ಮಾಹಿತಿ ಕೊಟ್ಟ ಮಾಡಾಳ್ ವಿರೂಪಾಕ್ಷಪ್ಪ ಪರ ವಕೀಲರು, ಮಧ್ಯಂತರ ನಿರೀಕ್ಷಣಾ ಜಾಮೀನು ಪಡೆದುಕೊಳ್ಳುವಲ್ಲಿ ಯಶಸ್ವಿಯಾದರು. ಲೋಕಾಯುಕ್ತರ ಮುಂದೆ 48 ಗಂಟೆಗಳಲ್ಲಿ ಹಾಜರಾಗಬೇಕು, ಲೋಕಾಯುಕ್ತರು ಅರೆಸ್ಟ್ ಮಾಡಬಾರದು ಅಂತಾ ಹೇಳ್ತಿದ್ದ ಹಾಗೆ ಚನ್ನಗಿರಿ ಕ್ಷೇತ್ರದಲ್ಲಿ ಮಾಡಾಳ್ ವಿರೂಪಾಕ್ಷಪ್ಪ ರೋಡ್ ಶೋ ಮಾಡಿ ಅಬ್ಬರಿಸಿದ್ರು. ಆದರೆ ಸರ್ಕಾರ ಮಾತ್ರ ರಾಜ್ಯದ ಜನರ ಕಣ್ಣಿಗೆ ಮಣ್ಣೆರೆಚುವ ಕೆಲಸವನ್ನು ಮಾಡುತ್ತಲೇ ಸಾಗಿದೆ.