ಸಚಿವ ಸಂಪುಟ ವಿಸ್ತರಣೆ, ಖಾತೆಗಳ ಮರುಹಂಚಿಕೆ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿಯೊಳಗೆ ಅಪಸ್ವರಗಳು ಎದ್ದಿವೆ. ಖಾತೆ ಬದಲಾವಣೆ ಆದ ಹಾಗೂ ಖಾತೆ ಸಿಗದ ಸಚಿವಾಕಾಂಕ್ಷಿ ಶಾಸಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪಕ್ಷದ ಆಂತರಿಕ ಮೂಲಗಳ ಪ್ರಕಾರ ಕೆಲ ಶಾಸಕರು ಈಗಾಗಲೇ ರಾಜಿನಾಮೆಯ ಬೆದರಿಕೆಯನ್ನೂ ಹಾಕಿದ್ದಾರೆ.
ಬಿಜೆಪಿ ಪಾಳಯದಲ್ಲಿ ತೀವ್ರ ಬದಲಾವಣೆಗಳು ನಡೆಯುತ್ತಿರುವ ಹೊತ್ತಲ್ಲೆ, ಗೃಹ ಸಚಿವ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಮುಖ್ಯಮಂತ್ರಿ, ಜೆಡಿಎಸ್ ನಾಯಕ ಹೆಚ್ ಡಿ ಕುಮಾರಸ್ವಾಮಿ ಭೇಟಿ ಸಾಕಷ್ಟು ಕುತೂಹಲ ಮೂಡಿಸಿದೆ. ಅದಾಗ್ಯೂ, ಇಬ್ಬರೂ ರಾಜಕೀಯ ವಿಚಾರಗಳನ್ನು ಮಾತ್ರ ಚರ್ಚಿಸಲಾಗಿದೆ ಎಂದು ತೆರೆ ಎಳೆದಿದ್ದಾರೆ.
ಖಾತೆ ಪುನರ್ ಹಂಚಿಕೆಯಲ್ಲಿ ಗೃಹ ಸಚಿವರಾಗಿರುವ ಬಸವರಾಜ ಬೊಮ್ಮಾಯಿ ಅವರಿಗೆ ಈ ಹಿಂದೆ ಇದ್ದ ಗುಪ್ತಚರ ಇಲಾಖೆ ಕೈಬಿಟ್ಟು ಹೋಗಿದೆ. ಇದೇ ಸಂದರ್ಭದಲ್ಲಿ ಆರ್ ಟಿ ನಗರದ ಬೊಮ್ಮಾಯಿ ನಿವಾಸಕ್ಕೆ ಆಗಮಿಸಿದ ಹೆಚ್ ಡಿ ಕುಮಾರಸ್ವಾಮಿ, ಬಸವರಾಜ ಬೊಮ್ಮಾಯಿ ಜೊತೆ ಸುಮಾರು ಹೊತ್ತು ಚರ್ಚೆ ನಡೆಸಿದ್ದಾರೆ.
ಬಸವರಾಜ್ ಬೊಮ್ಮಾಯಿ ಭೇಟಿ ಬಳಿಕ ಮಾತನಾಡಿದ ಕುಮಾರಸ್ವಾಮಿ, ರಾಜಕೀಯ ಬೆಳವಣಿಗೆ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ ಎಂದು ರಾಜಕೀಯ ವಿಚಾರದ ಚರ್ಚೆಯಾಗಿದೆ ಎಂಬ ಸುದ್ದಿಯನ್ನು ಅಲ್ಲಗಳೆದಿದ್ದಾರೆ.
“ನಮ್ಮದು ಹಳೆಯ ಸ್ನೇಹವಾಗಿದ್ದು, ಪಕ್ಷ ಬೇರೆಯಾದರೂ ಈವರೆಗೂ ಬೊಮ್ಮಾಯಿ ನಾವು ಒಂದೇ ಕುಟುಂಬದರಂತೆ ಇದ್ದೇವೆ. ತಂದೆ ದೇವೇಗೌಡರು ಹಾಗೂ ಎಸ್.ಆರ್.ಬೊಮ್ಮಾಯಿ ಸ್ನೇಹಿತರಾಗಿದ್ದವರು. ಹೀಗಾಗಿ ಬಸವರಾಜ ಬೊಮ್ಮಾಯಿ ತಂದೆಯವರ ಕಾಲದಿಂದಲೂ ಅವರ ಕುಟುಂಬದ ಜೊತೆ ಸ್ನೇಹವಿದೆ” ಎಂದು ಹೇಳಿದ್ದಾರೆ.
ಪಕ್ಷಗಳ ರಾಜಕೀಯ ಚರ್ಚೆ ಆಗಿಲ್ಲ ಎಂಬುದನ್ನು ಒತ್ತಿ ಹೇಳಿದ ಕುಮಾರಸ್ವಾಮಿ ಬೊಮ್ಮಾಯಿಯನ್ನು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೆ ಮನವೊಲಿಸಲೂ ಬಂದಿಲ್ಲ. ಮತಕ್ಷೇತ್ರದ ಕೆಲ ನೇಮಕಾತಿ ವಿಚಾರದ ಬಗ್ಗೆ ಚರ್ಚಿಸಿದ್ದೇವೆ ಅಷ್ಟೇ. ಅದನ್ನು ಬಿಟ್ಟು ಬೇರೆಯಾವುದೇ ಚರ್ಚೆ ಆಗಿಲ್ಲ ಎಂದು ಹೇಳಿದ್ದಾರೆ.
ಯಾವುದೇ ರಾಜಕೀಯ ವಿಚಾರ ಚರ್ಚೆ ಆಗಿಲ್ಲ ಬಸವರಾಜ ಬೊಮ್ಮಾಯಿ ಅವರೂ ಹೇಳಿದ್ದಾರೆ.
“ಕುಮಾರಸ್ವಾಮಿ ಭೇಟಿಗೆ ವಿಶೇಷ ಅರ್ಥ ಕಲ್ಪಿಸುವುದು ಬೇಡ. ಕುಮಾರಸ್ವಾಮಿ ನಾನು ತುಂಬಾ ಹಳೇ ಸ್ನೇಹಿತರು, ನನ್ನ ತಂದೆ ಕಾಲದಿಂದಲೇ ದೇವೇಗೌಡರ ಕುಟುಂಬದ ಜೊತೆ ಉತ್ತಮ ಬಾಂಧವ್ಯ ಇದೆ. ನಿನ್ನೆ ಅವರು ಭೇಟಿ ಮಾಡಬೇಕೆಂದಿದ್ದರು. ಕ್ಷೇತ್ರದ ಅಭಿವೃದ್ಧಿ ವಿಚಾರಗಳ ಬಗ್ಗೆ ಚರ್ಚೆಯಾಗಿದೆಯೇ ಹೊರತು ಬೇರೆ ಯಾವುದೇ ರಾಜಕೀಯ ಚರ್ಚೆ ನಡೆದಿಲ್ಲ” ಎಂದು ಬೊಮ್ಮಾಯಿ ತಿಳಿಸಿದ್ದಾರೆ.