ಸಾಮಾನ್ಯ ಸಮಯಗಳಿಗಿಂತ ಚುನಾವಣೆಯ ಸಂಧರ್ಭದಲ್ಲಿ ಮಾಡುವ ಭಾಷಣವು ವಿಭಿನ್ನವಾಗಿರುತ್ತವೆ, ಚುನಾವಣಾ ಸಂದರ್ಭದಲ್ಲಿ ಬೇರೆ ಏನೂ ಉದ್ದೇಶವಿಲ್ಲದೆ ಕೇವಲ ʼಮಹೌಲ್ʼ (ವಾತಾವರಣ) ಸೃಷ್ಟಿಸಲು ಹೇಳಲಾಗುತ್ತದೆ ಎಂದು ಈಶಾನ್ಯ ದೆಹಲಿ ಗಲಭೆ ವೇಳೆಯ ಧ್ವೇಷ ಭಾಷಣಗಳಿಗೆ ಸಂಬಂಧಿಸಿದ ಪ್ರಕರಣದ ವಿಚಾರಣೆ ವೇಳೆ ದೆಹಲಿ ಹೈಕೋರ್ಟ್ ಹೇಳಿದೆ ಎಂದು ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ʼಏನನ್ನಾದರೂ ನಗುವಿನೊಂದಿಗೆ ಹೇಳಿದರೆ ಅದರಲ್ಲಿ ಯಾವುದೇ ಅಪರಾಧವಿಲ್ಲ. ಆದರೆ, ನಿಂದನಾತ್ಮಕವಾಗಿ ಹೇಳಿದರೆ ಅಲ್ಲಿ ಅಪರಾಧದ ಉದ್ದೇಶ ಇರಬಹುದು ಎಂದು ನ್ಯಾಯಮೂರ್ತಿ ಚಂದ್ರ ಧಾರಿ ಸಿಂಗ್ ಹೇಳಿದ್ದಾರೆ.
ದ್ವೇಷಪೂರಿತ ಭಾಷಣ ಮಾಡಿದ ಕೇಂದ್ರ ಸಚಿವ ಅನುರಾಗ್ ಠಾಕೂರ್ ಮತ್ತು ಸಂಸದ ಪರ್ವೇಶ್ ವರ್ಮಾ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಮಾಡಿದ ಮನವಿಯನ್ನು ತಿರಸ್ಕರಿಸಿದ ಕೆಳ ನ್ಯಾಯಾಲಯದ ಆದೇಶದ ವಿರುದ್ಧ ಸಿಪಿಐ(ಎಂ) ನಾಯಕಿ ಬೃಂದಾ ಕಾರಟ್ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ನ್ಯಾಯಾಲಯ ವಿಚಾರಣೆ ನಡೆಸುತ್ತಿದೆ.
ʼಅವು ಚುನಾವಣಾ ಭಾಷಣಗಳೇ? ಅದು ಚುನಾವಣಾ ಭಾಷಣವೋ ಅಥವಾ ಸಾಮಾನ್ಯ ಸಮಯದ ಭಾಷಣವೋ? ಚುನಾವಣಾ ಸಮಯದಲ್ಲಿ ಯಾವುದೇ ಭಾಷಣ ಮಾಡಿದರೆ ಅದು ಬೇರೆ ವಿಷಯ. ನೀವು ಸಾಮಾನ್ಯ ಸಂದರ್ಭದಲ್ಲಿ ಭಾಷಣ ಮಾಡುತ್ತಿದ್ದರೆ, ಅದು ಏನನ್ನಾದರೂ ಪ್ರಚೋದಿಸುತ್ತದೆ. ಚುನಾವಣಾ ಭಾಷಣದಲ್ಲಿ, ರಾಜಕಾರಣಿಗಳು ರಾಜಕಾರಣಿಗಳಿಗೆ ಅನೇಕ ವಿಷಯಗಳನ್ನು ಹೇಳುತ್ತಾರೆ … ಅದು ಕೂಡ ತಪ್ಪು ಆದರೆ ನಾನು ಕೃತ್ಯದ ಅಪರಾಧವನ್ನು ನೋಡಬೇಕಾಗಿದೆ, ”ಎಂದು ಅವರು ಹೇಳಿದ್ದಾರೆ.
ಇಲ್ಲದಿದ್ದರೆ ಚುನಾವಣೆಯ ಸಮಯದಲ್ಲಿ ಎಲ್ಲಾ ರಾಜಕಾರಣಿಗಳ ವಿರುದ್ಧ ಸಾವಿರಾರು ಎಫ್ಐಆರ್ಗಳನ್ನು ದಾಖಲಿಸಬಹುದು ಎಂದು ನ್ಯಾಯಪೀಠ ಹೇಳಿದೆ.
“ನೀವು ನಗುಮುಖದಿಂದ ಏನನ್ನಾದರೂ ಹೇಳುತ್ತಿದ್ದರೆ ಯಾವುದೇ ಅಪರಾಧವಿಲ್ಲ, ನೀವು ಏನಾದರೂ ಆಕ್ಷೇಪಾರ್ಹವಾಗಿ ಹೇಳಿದರೆ ಅದು ಅಪರಾಧ. ನೀವು ಪರಿಶೀಲಿಸಿ ಮತ್ತು ಸಮತೋಲನ ಮಾಡಬೇಕು. ಇಲ್ಲದಿದ್ದರೆ, ಚುನಾವಣೆಯ ಸಮಯದಲ್ಲಿ ಎಲ್ಲಾ ರಾಜಕಾರಣಿಗಳ ವಿರುದ್ಧ 1,000 ಎಫ್ಐಆರ್ಗಳನ್ನು ದಾಖಲಿಸಬೇಕಾದೀತು” ಎಂದು ಪೀಠ ಹೇಳಿದೆ.
“ನಾವು ಸಹ ಪ್ರಜಾಪ್ರಭುತ್ವದಲ್ಲಿ ಇರುವುದರಿಂದ … ನಿಮಗೆ ಮಾತನಾಡುವ ಹಕ್ಕು ಇವೆ. ಆ ಭಾಷಣವನ್ನು ಯಾವಾಗ ಮತ್ತು ಯಾವ ಸಮಯದಲ್ಲಿ ಮಾಡಲಾಯಿತು ಮತ್ತು ಉದ್ದೇಶವೇನು? ಚುನಾವಣೆಯಲ್ಲಿ ಗೆಲ್ಲುವ ಉದ್ದೇಶವೇ ಅಥವಾ ಅಪರಾಧ ಮಾಡಲು ಸಾರ್ವಜನಿಕರನ್ನು ಪ್ರಚೋದಿಸುವ ಉದ್ದೇಶವೇ?. ಎರಡೂ ಎರಡು ವಿಭಿನ್ನ ವಿಷಯಗಳು” ಎಂದು ಪೀಠ ಹೇಳಿದೆ.
ವರ್ಮಾ ಅವರ ಭಾಷಣಕ್ಕೆ ಸಂಬಂಧಿಸಿದ ಸಲ್ಲಿಕೆಯನ್ನು ಉಲ್ಲೇಖಿಸಿ, ಅದರಲ್ಲಿ ಅವರು “ಈ ಮಂದಿ ನಿಮ್ಮ ಮನೆಗೆ ನುಗ್ಗಿ ನಿಮ್ಮ ಹೆಣ್ಣುಮಕ್ಕಳನ್ನು ಎತ್ತ್ತಿಕೊಂಡು ಹೋಗಿ ರೇಪ್ ಮಾಡಲಿದ್ದಾರೆ…” ಎಂದು ಹೇಳಿದ್ದರೆ, ಅದರಲ್ಲಿ ‘ಈ ಮಂದಿ’ ಯಾರನ್ನು ಸೂಚಿಸುತ್ತದೆ ಮತ್ತು ಅದು ನಿರ್ದಿಷ್ಟ ಸಮುದಾಯವನ್ನು ಉಲ್ಲೇಖಿಸುತ್ತದೆ ಎಂದು ಅರ್ಜಿದಾರರು ಹೇಗೆ ತೀರ್ಮಾನಿಸಿದ್ದಾರೆ ಎಂದು ನ್ಯಾಯಾಲಯ ಕೇಳಿದೆ. ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ಆದಿತ್ ಪೂಜಾರಿ, ಇದನ್ನು ಶಾಹೀನ್ ಬಾಗ್ ಹಿನ್ನೆಲೆಯಲ್ಲಿ ಹೇಳಲಾಗಿದೆ ಎಂದು ವಾದಿಸಿದರು.
ಹಾಗಾದರೆ, ಒಂದು ನಿರ್ದಿಷ್ಟ ಸಮುದಾಯ ಮಾತ್ರ ಪ್ರತಿಭಟನೆಯಲ್ಲಿದೆಯೇ ಎಂದು ನ್ಯಾಯಾಲಯ ಕೇಳಿದೆ. “ಹಾಗೆಂದು ಎಲ್ಲಿದೆ ? ಏಕೆಂದರೆ ಪ್ರತಿಭಟನೆಯು ಒಂದು ನಿರ್ದಿಷ್ಟ ಸಮುದಾಯಕ್ಕೆ ಮಾತ್ರ ಎಂದು ನೀವು ಹೇಳುತ್ತಿದ್ದರೆ ಮತ್ತು ಇನ್ನೊಂದು ಸಮುದಾಯವು ಆಂದೋಲನವನ್ನು ಬೆಂಬಲಿಸುತ್ತಿಲ್ಲ ಎಂದು ನೀವು ಹೇಳುತ್ತಿದ್ದೀರ? ಆ ಆಂದೋಲನವನ್ನು ಈ ದೇಶದ ಇತರ ಎಲ್ಲ ನಾಗರಿಕರು ಬೆಂಬಲಿಸಿದ್ದರೆ, ಅರ್ಜಿದಾರರು ಭಾಷಣವನ್ನು ಕೇವಲ ಒಂದು ಸಮುದಾಯದ ಕಡೆಗೆ ಗುರಿಪಡಿಸಲಾಗಿದೆ ಎಂದು ಹೇಗೆ ವಾದಿಸುತ್ತಾರೆ ಎಂದು ನ್ಯಾಯಾಲಯ ಪ್ರಶ್ನಿಸಿತು.
ಚುನಾವಣೆಯೇ ಇರಲಿ ಅಥವಾ ಚುನಾವಣೆ ಇಲ್ಲದಿರಲಿ, ಹೇಳಿಕೆಗಳಲ್ಲಿ ಕೆಲವು ರೀತಿಯ ಪ್ರಚೋದನೆ ಇದೆ ಎಂದು ಪೂಜಾರಿ ವಾದ ಮಾಡಿದ್ದಾರೆ.
“ನೀವು ಕೇವಲ ಮಹೌಲ್ (ವಾತಾವರಣ) ಮತ್ತು ಇದೆಲ್ಲವನ್ನು ಸೃಷ್ಟಿಸುವುದಕ್ಕಾಗಿ ಏನನ್ನಾದರೂ ಹೇಳಿದ್ದೀರಿ ಎಂದು ಭಾವಿಸೋಣ ಮತ್ತು ಇತರ ಕೆಲವು ರಾಜಕೀಯ ಪಕ್ಷಗಳು ಬೇರೇನಾದರೂ ಹೇಳುವುದರಿಂದ ಯಾವುದೇ ಅಪರಾಧದ ಉದ್ದೇಶ ಇಲ್ಲ ಎಂದು ನಾನು ಭಾವಿಸುತ್ತೇನೆ. ಪ್ರತಿಯೊಬ್ಬರೂ ತಮ್ಮ ಕ್ಷೇತ್ರಗಳನ್ನು ಉದ್ದೇಶಿಸಿ ತಮ್ಮ ಮತದಾರರನ್ನು ಸಜ್ಜುಗೊಳಿಸುತ್ತಿದ್ದಾರೆ. ಕ್ಷೇತ್ರವನ್ನು ಸಜ್ಜುಗೊಳಿಸುವ ಉದ್ದೇಶದಿಂದ ಆ ಭಾಷಣ ಮಾಡಲಾಗಿದೆ,” ಎಂದು ನ್ಯಾಯಾಲಯ ಹೇಳಿದೆ.
ಕಾರಟ್ ಅರ್ಜಿಯ ತೀರ್ಪನ್ನು ನ್ಯಾಯಾಲಯ ಶುಕ್ರವಾರ ಕಾಯ್ದಿರಿಸಿತ್ತು. ಈ ಹಿಂದೆ ಪೊಲೀಸರು ಕೆಳ ನ್ಯಾಯಾಲಯದ ತೀರ್ಪನ್ನು ಸಮರ್ಥಿಸಿಕೊಂಡಿದ್ದರು. CAA ವಿರೋಧಿ ಪ್ರತಿಭಟನೆಗಳಿಗೆ ಸಂಬಂಧಿಸಿದಂತೆ ಠಾಕೂರ್ ಮತ್ತು ವರ್ಮಾ ವಿರುದ್ಧ ಎಫ್ಐಆರ್ ದಾಖಲಿಸಲು ಫೆಬ್ರವರಿ 2020 ರಲ್ಲಿ ಕಾರಟ್ ಮತ್ತು ಸಿಪಿಐ(ಎಂ) ನಾಯಕ ಕೆಎಂ ತಿವಾರಿ ಅವರು ಸಲ್ಲಿಸಿದ ದೂರನ್ನು ಕೆಳ ನ್ಯಾಯಾಲಯವು ಆಗಸ್ಟ್ 26, 2020 ರಂದು ವಜಾಗೊಳಿಸಿತ್ತು. 9 ತಿಂಗಳ ಹಿಂದೆಯೇ ದೂರು ದಾಖಲಾಗಿದ್ದು, ಎಫ್ಐಆರ್ ದಾಖಲಾತಿಯಲ್ಲಿ ಸಾಕಷ್ಟು ವಿಳಂಬವಾಗುತ್ತಿದೆ ಎಂದು ಹೈಕೋರ್ಟ್ನಲ್ಲಿ ಸಲ್ಲಿಸಿದ ಅರ್ಜಿಯಲ್ಲಿ ವಾದಿಸಲಾಗಿತ್ತು.