ಅಂಬೇಡ್ಕರ್ ಅವರು ಸಂವಿಧಾನ ರಚನಾ ಸಭೆಯ ಅಧ್ಯಕ್ಷರಾಗಿರದಿದ್ದರೆ ದೇಶದ ಇವತ್ತಿನ ಪರಿಸ್ಥಿತಿ ಏನಾಗಿರುತ್ತಿತ್ತು ಅಂತ ಊಹಿಸಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಪ್ರೊ. ಕೆ.ಎಸ್ ಭಗವಾನ್ ಕುರಿತ ಸಮಸದ್ವಿವೇಕ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಿದ್ದರಾಮಯ್ಯ, ʼನಮ್ಮ ದೇಶ ಬಹಳಷ್ಟು ಮೌಢ್ಯಗಳಿಂದ ಕೂಡಿದ ದೇಶ. ಬ್ರಹ್ಮ ಹಣೆಯ ಮೇಲೆ ಬರೆದಿದ್ದಾನೆಂದು ನಂಬಿಸಿದ್ದಾರೆ. ವೈಜ್ಞಾನಿಕ ಮನೋಭಾವನೆ ಬೆಳೆಸಿಕೊಳ್ಳಬೇಕು. ಎಲ್ಲಾದರೂ ದೇವರು ನೀನು ಕಟುಕನಾಗು ಅಂತಾ ಮೊದಲೇ ಬರೆದಿರುತ್ತಾನಾ? ಜನರು ವೈಜ್ಞಾನಿಕವಾಗಿ ಯೋಚನೆ ಮಾಡುವುದನ್ನೇ ಮರೆತು ಬಿಟ್ಟಿದ್ದಾರೆ. ಅಸ್ಪೃಶ್ಯನಾಗು ನೀನು ಅಂತಾ ದೇವರು ಬರೆದಿದ್ದಾನಾ? ಹಾಗಾದರೆ ಅವರಿಗೆ ವಿಮೋಚನೇ ಇಲ್ಲವಾ? ಅಂಬೇಡ್ಕರ್ ಅಸ್ಪೃಶ್ಯ ಸಮುದಾಯದಲ್ಲಿ ಹುಟ್ಟಲಿಲ್ಲ ಅಂದಿದ್ದರೆ ಅಸ್ಪೃಶ್ಯತೆಗೆ ವಿಮೋಚನೆ ಸಿಗುತ್ತಿರಲಿಲ್ಲʼ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಕೆಲವೊಂದು ವಿಚಾರಗಳನ್ನು ಹೇಳಲಾಗದ ಸ್ಥಿತಿ ತಂದಿಟ್ಟಿದ್ದಾರೆ. ನಾನು ಹೇಳುವ ಮಾತುಗಳನ್ನು ಬೇರೆ ರೀತಿ ಬಿಂಬಿಸುತ್ತಿದ್ದಾರೆ. ಹೀಗಾಗಿ ನಾನು ಹೆಚ್ಚು ಮಾತನಾಡುವುದಿಲ್ಲ. ಸಾರ್ವಜನಿಕವಾಗಿ ಕೆಲವೊಂದನ್ನು ಮಾತನಾಡಲು ಆಗಲ್ಲ ಎಂದು ಅವರು ಹೇಳಿದ್ದಾರೆ.

ನಾನು ಸಿಎಂ ಆಗಿದ್ದಾಗ ಮೌಢ್ಯ ವಿರೋಧಿ ಕಾಯ್ದೆ ತಂದಿದ್ದೆ. ಮೌಢ್ಯ ವಿರೋಧಿ ಕಾಯ್ದೆ ಕುರಿತು ಅಪಪ್ರಚಾರ ಮಾಡಿದರು. ಪಟ್ಟಭದ್ರ ಹಿತಾಸಕ್ತಿ ಜನರು ಮೌಢ್ಯ ವಿರೋಧಿ ಕಾಯ್ದೆಯನ್ನು ವಿರೋಧ ಮಾಡುತ್ತಿದ್ದಾರೆ. ಈ ಸಮಾಜದಲ್ಲಿ ಈ ಜಾತಿ ವ್ಯವಸ್ಥೆ ಅಷ್ಟು ಸುಲಭವಾಗಿ ಹೋಗುವುದಿಲ್ಲ. ಮುಂದೊಂದು ದಿನ ಬದಲಾವಣೆ ಆಗುತ್ತೆಂಬ ನಂಬಿಕೆ ಇದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಆ ಬದಲಾವಣೆಯೇ ನಮ್ಮಂತಹ ರಾಜಕಾರಣಿಗಳ ಉದ್ದೇಶವಾಗಬೇಕು. ಅಂಬೇಡ್ಕರ್ ಅವರ ಹಾದಿಯಲ್ಲಿ ರಾಜಕಾರಣಿಗಳು ಹೋದರೆ ಆ ಬದಲಾವಣೆ ಬೇಗನೇ ಆಗುತ್ತದೆ ಎಂದು ಮಾಜಿ ಸಿಎಂ ವಿಶ್ವಾಸ ವ್ಯಕ್ತಪಡಿಸಿದ್ದಾರೆ.






