ಅತಿಥಿ ಎನ್ನುವ ಪದವೇ ಸಾಪೇಕ್ಷವಾದುದು. ವ್ಯಕ್ತಿಗತ-ಕೌಟುಂಬಿಕ ನೆಲೆಯಲ್ಲಿ ಅತಿಥಿ ಎಂದರೆ ಆದರಿಸಲ್ಪಡುವ ಮತ್ತು ಗೌರವಯುತವಾಗಿ ಕಾಣಲ್ಪಡುವ ವ್ಯಕ್ತಿ ಎಂದು ಅರ್ಥೈಸಬಹುದು. ಆದರೆ ಮೂಲತಃ ಅತಿಥಿ ಎನ್ನುವುದು ಆತಿಥ್ಯವನ್ನು ಅವಲಂಬಿಸಿರುತ್ತದೆ. ಆತಿಥೇಯ ನೆಲೆಗಳಲ್ಲೇ ಅತಿಥಿಗಳ ಸ್ಥಾನಮಾನಗಳೂ ನಿರ್ಧರಿಸಲ್ಪಡುತ್ತವೆ. ಈ ಸಾಪೇಕ್ಷತೆಯ ನೆಲೆಯಲ್ಲೇ ನೋಡಿದಾಗ, ಅತಿಥಿ ಎಂದರೆ ಆತಿಥೇಯರಿಗೆ ಅವಶ್ಯಕತೆ ಇದ್ದಾಗ ಆದರಿಸಲ್ಪಡುವವರು ಎಂಬ ಅರ್ಥ ಬರುತ್ತದೆ. ಇದನ್ನು ಮಾರುಕಟ್ಟೆ ಅರ್ಥವ್ಯವಸ್ಥೆಯಲ್ಲಿಟ್ಟು ನೋಡಿದಾಗ ಶಾಲಾ ಕಾಲೇಜುಗಳಿಗೆ ನೇಮಕವಾಗುವ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗೆ ಖಾಯಂ ನೌಕರಿಯನ್ನು ಒದಗಿಸುವ ಬದಲಾಗಿ, ಗುತ್ತಿಗೆ ಆಧಾರದ ಮೇಲೆ, ಅವಶ್ಯಕತೆಗನುಗುಣವಾಗಿ ನೇಮಿಸಿಕೊಳ್ಳುವ ಒಂದು ಪ್ರಕ್ರಿಯೆಯನ್ನೇ ನಮ್ಮ ಸರ್ಕಾರಗಳು “ ಅತಿಥಿ ಉಪನ್ಯಾಸಕ ” ಎಂದು ಗೌರವಯುತವಾಗಿ ಕರೆಯತ್ತದೆ. ಈ ಪದ್ಧತಿಗೆ ನಾಲ್ಕು ದಶಕಗಳ ಇತಿಹಾಸ ಇದ್ದರೂ, ಕಳೆದ ಎರಡು ದಶಕಗಳಲ್ಲಿ ಶೈಕ್ಷಣಿಕ ನೀತಿಗಳಲ್ಲಿ ಆಗುತ್ತಿರುವ ಮಾರ್ಪಾಡುಗಳು ಮತ್ತು ಶಿಕ್ಷಣದ ವಾಣಿಜ್ಯೀಕರಣ ಪ್ರಕ್ರಿಯೆ ಅತಿಥಿ ಉಪನ್ಯಾಸಕ ಹುದ್ದೆಗೆ ಮಾರಕವಾಗಿ ಪರಿಣಮಿಸುತ್ತಿದೆ.
ಈಗ ಭಾರತ ಶಿಕ್ಷಣದ ವಾಣಿಜ್ಯೀಕರಣ ಹಂತದಿಂದ ಕಾರ್ಪೋರೇಟೀಕರಣ ಹಂತಕ್ಕೆ ಮುನ್ನಡೆದಿದೆ. ಪ್ರಾಥಮಿಕ ಶಿಕ್ಷಣದಿಂದ ಅತ್ಯುನ್ನತ ಶಿಕ್ಷಣದವರೆಗೆ ಕಾರ್ಪೋರೇಟ್ ಬಂಡವಾಳ ಹೂಡಿಕೆಗೆ ಅವಕಾಶ ಮಾಡಿಕೊಡುವುದರ ಮೂಲಕ ಶಿಕ್ಷಣ ಮತ್ತು ವಿದ್ಯಾಭ್ಯಾಸವನ್ನು ಮಾರುಕಟ್ಟೆ ಉತ್ಪಾದಕೀಯತೆಯ ಚೌಕಟ್ಟಿನಲ್ಲಿ ಅಳೆಯಲಾಗುತ್ತಿದೆ. ಬೌದ್ಧಿಕ ಜ್ಞಾನಾಭಿವೃದ್ಧಿ ಮತ್ತು ಸಂಶೋಧನೆಯ ಕ್ಷೇತ್ರಗಳನ್ನು ಬಂಡವಾಳ ಮಾರುಕಟ್ಟೆಯ ಲಾಭ ನಷ್ಟದ ವ್ಯಾಪ್ತಿಯಲ್ಲೇ ರೂಪಿಸಲಾಗುತ್ತಿದ್ದು, ಶಿಕ್ಷಣ ಕ್ಷೇತ್ರದ ಉತ್ಪಾದಕೀಯತೆಯನ್ನು ಅಳೆಯಲು ಬೌದ್ಧಿಕ ಮಾನದಂಡಗಳ ಬದಲು ಮಾರುಕಟ್ಟೆ ಮಾನದಂಡಗಳನ್ನು ಅನುಸರಿಸಲಾಗುತ್ತಿದೆ. ಈ ಪ್ರಕ್ರಿಯೆಯಲ್ಲಿ ಮಕ್ಕಳಿಗೆ ಶಿಕ್ಷಣ ನೀಡಲು ನೇಮಕಗೊಳ್ಳುವ ಬೋಧಕರ ವೇತನ ಮತ್ತಿತರ ಸವಲತ್ತುಗಳನ್ನು ಸಹ ಮಾರುಕಟ್ಟೆಯ ಲೆಕ್ಕಾಚಾರದಲ್ಲೇ ನಿಷ್ಕರ್ಷೆ ಮಾಡಲಾಗುತ್ತದೆ.
Also Read : ದುಡಿಯುವ ಜನರ ಬದುಕಿಗೆ ಕಾಯಕಲ್ಪ ಒದಗಿಸದ ಸರ್ಕಾರ ಏಕಾದರೂ ಇರಬೇಕು?
ಹಾಗಾಗಿ ಇತರ ಔದ್ಯಮಿಕ-ಔದ್ಯೋಗಿಕ ವಲಯದಂತೆಯೇ ಶೈಕ್ಷಣಿಕ ವಲಯದಲ್ಲೂ ಬೋಧಕ, ಬೋಧಕೇತರ ಸಿಬ್ಬಂದಿ ತಮ್ಮ ಜೀವನ ಮತ್ತು ಜೀವನೋಪಾಯದ ಸವಾಲನ್ನು ಎದುರಿಸುವಂತಾಗಿದೆ. ಒಂದು ವರದಿಯ ಪ್ರಕಾರ ರಾಜ್ಯದ 430 ಸರ್ಕಾರಿ ಪದವಿ ಕಾಲೇಜುಗಳಲ್ಲಿ 14183 ಅತಿಥಿ ಉಪನ್ಯಾಸಕರು ಸೇವೆ ಸಲ್ಲಿಸುತ್ತಿದ್ದಾರೆ. ಇವರ ಪೈಕಿ ಪುರುಷರು 7085 ಮತ್ತು ಮಹಿಳೆಯರು 7482 ಇದ್ದಾರೆ. ಯುಜಿಸಿ ಅರ್ಹತೆ ಇರುವ ಅಂದರೆ ಪಿಹೆಚ್ಡಿ ಮತ್ತು ಎಂಫಿಲ್ ಮಾಡಿರುವ ಉಪನ್ಯಾಸಕರಿಗೆ ಮಾಸಿಕ 11000/- ಮತ್ತು ಇತರರಿಗೆ ಮಾಸಿಕ 13000/- ವೇತನ ನೀಡಲಾಗುತ್ತಿದೆ. ಈ ವೇತನವನ್ನು ಗೌರವಧನದ ರೂಪದಲ್ಲಿ ನೀಡುವುದರಿಂದ, ಉಪನ್ಯಾಸಕರಿಗೆ ಕೆಲಸ ಲಭ್ಯವಿದ್ದಾಗ ಮಾತ್ರವೇ ವೇತನ ದೊರೆಯುತ್ತದೆ. ವರ್ಷದಲ್ಲಿ ಒಂಬತ್ತು ಅಥವಾ ಹತ್ತು ತಿಂಗಳ ವೇತನ ಮಾತ್ರ ದೊರೆಯುತ್ತದೆ. ಇಎಸ್ಐ, ಭವಿಷ್ಯನಿಧಿ, ಗ್ರಾಚ್ಯುಯಿಟಿ ಮುಂತಾದ ಯಾವುದೇ ಸೇವಾ ಸೌಲಭ್ಯಗಳು ಲಭ್ಯವಾಗುವುದಿಲ್ಲ.
ಖಾಸಗಿ ಅನುದಾನಿತ ಮತ್ತು ಅನುದಾನರಹಿತ ಶಾಲೆಗಳಲ್ಲೂ ಹೆಚ್ಚಿನ ಪ್ರಮಾಣದಲ್ಲಿ ಅತಿಥಿ ಉಪನ್ಯಾಸಕರನ್ನೇ ನೇಮಿಸಲಾಗುತ್ತಿದ್ದು ಕೆಲವು ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ 50 ಸಾವಿರಕ್ಕೂ ಹೆಚ್ಚು ಮಾಸಿಕ ವೇತನವನ್ನು ನೀಡಲಾಗುತ್ತಿದೆ. ಈ ಬೋಧಕರಿಗೂ ಸೇವಾ ಸೌಲಭ್ಯಗಳನ್ನು ಒದಗಿಸಲಾಗುತ್ತಿಲ್ಲ ಎನ್ನುವುದೂ ಚಿಂತೆಗೀಡುಮಾಡುವ ವಿಚಾರವೇ ಆಗಿದೆ. ವರ್ಷದಲ್ಲಿ ಕೆಲವು ತಿಂಗಳ ಕಾಲ ವಾರದಲ್ಲಿ ಮೂರು ನಾಲ್ಕು ದಿನಗಳು ಮಾತ್ರ ಕಾರ್ಯನಿರ್ವಹಿಸುವ ಅತಿಥಿ ಉಪನ್ಯಾಸಕರು ಖಾಯಂ ಉಪನ್ಯಾಸಕರಂತೆ ವಾರದಲ್ಲಿ ಕನಿಷ್ಠ 16 ರಿಂದ 20 ಗಂಟೆಗಳ ಬೋಧನೆ ಮಾಡದಿರುವುದರಿಂದ ಇವರನ್ನು ಖಾಯಂಗೊಳಿಸುವುದು ಸಾಧ್ಯವಿಲ್ಲ ಎನ್ನಲಾಗುತ್ತಿದೆ. ತಮ್ಮ ಬೋಧನಾ ಕಾರ್ಯದೊಂದಿಗೆ ಪರೀಕ್ಷಾ ಕಾರ್ಯ, ಮೌಲ್ಯಮಾಪನ, ನ್ಯಾಕ್ ಕಾರ್ಯಗಳು, ಜಾಗೃತದಳದ ಕಾರ್ಯ ಹೀಗೆ ಇತರ ಕೆಲಸಗಳನ್ನೂ ನಿಭಾಯಿಸಬೇಕಾದ ಅತಿಥಿ ಉಪನ್ಯಾಸಕರು ಅಗತ್ಯಕ್ಕಿಂತಲೂ ಹೆಚ್ಚಿನ ದುಡಿಮೆಯನ್ನೇ ಮಾಡುತ್ತಿದ್ದಾರೆ.

“ ಸಮಾನ ಕೆಲಸಕ್ಕೆ ಸಮಾನ ವೇತನ ” ಎಂಬ ನೀತಿಯನ್ನು ಅಂತರರಾಷ್ಟ್ರೀಯ ಕಾರ್ಮಿಕ ಸಂಸ್ಥೆ (ಐಎಲ್ಒ) ಅಧಿಕೃತವಾಗಿ ಮಾನ್ಯ ಮಾಡಿದೆ. ಆದರೆ ಬೋಧಕ ವೃತ್ತಿಯ ವೇತನಶ್ರೇಣಿಯಲ್ಲಿ ಅಜಗಜಾಂತರ ವ್ಯತ್ಯಾಸವನ್ನು ಕಾಣಬಹುದು. ವಿಶ್ವವಿದ್ಯಾಲಯಗಳ, ಕಾಲೇಜುಗಳ ಖಾಯಂ ಉಪನ್ಯಾಸಕರು ಒಂದು ಲಕ್ಷ, ಒಂದೂವರೆ ಲಕ್ಷ ವೇತನ ಪಡೆದರೆ, ಅಷ್ಟೇ ಕೆಲಸ ನಿರ್ವಹಿಸುವ ಅತಿಥಿ ಉಪನ್ಯಾಸಕರು 50 ಸಾವಿರಕ್ಕೆ ದುಡಿಯಬೇಕಿದೆ. ಇಷ್ಟೇ ಕೆಲಸ ನಿಭಾಯಿಸುವ ಸರ್ಕಾರಿ ಕಾಲೇಜುಗಳ ಅತಿಥಿ ಉಪನ್ಯಾಸಕರು ಕೇವಲ 11 ಅಥವಾ 13 ಸಾವಿರ ರೂಗಳ ವೇತನವನ್ನಷ್ಟೇ ಪಡೆಯುತ್ತಿದ್ದಾರೆ. ಇಂದು ಮುಷ್ಕರ ನಿರತರಾಗಿರುವ 14 ಸಾವಿರ ಅತಿಥಿ ಉಪನ್ಯಾಸಕರ ಪೈಕಿ ಬಹುಪಾಲು ಕುಟುಂಬಸ್ಥರೇ ಆಗಿದ್ದಾರೆ. 20 ವರ್ಷಗಳಿಂದಲೂ ಇದೇ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಬೋಧಕ ಸಿಬ್ಬಂದಿಯ ಕೌಶಲಾಭಿವೃದ್ಧಿಯ ಯಾವುದೇ ಕ್ರಮಗಳನ್ನು ಸರ್ಕಾರವಾಗಲೀ, ವಿಶ್ವವಿದ್ಯಾಲಯಗಳಾಗಲೀ ರೂಪಿಸದೆ ಇರುವುದರಿಂದ, ಈ ಉಪನ್ಯಾಸಕರಲ್ಲಿ ಅನೇಕರಿಗೆ ಖಾಸಗಿ ಕೋಚಿಂಗ್ ಸೆಂಟರ್ಗಳನ್ನು ಆಶ್ರಯಿಸುವುದೂ ದುಸ್ತರವಾಗುತ್ತದೆ. ನಿವೃತ್ತಿಯ ಅಂಚಿನಲ್ಲಿರುವ ನೂರಾರು ಉಪನ್ಯಾಸಕರು ಇಂದು ಅನಿಶ್ಚಿತ ಭವಿಷ್ಯ ಎದುರಿಸುತ್ತಿದ್ದಾರೆ.
ಕೋವಿದ್ ಸಂದರ್ಭದಲ್ಲಿ ನೂರಾರು ಖಾಸಗಿ ಕಾಲೇಜುಗಳನ್ನು ಮುಚ್ಚಿದ್ದರಿಂದ ಸಾವಿರಾರು ಅತಿಥಿ ಉಪನ್ಯಾಸಕರು ತಮ್ಮ ನೌಕರಿ ಕಳೆದುಕೊಂಡು, ಸಣ್ಣ ವ್ಯಾಪಾರದಲ್ಲಿ ತೊಡಗಿರುವುದನ್ನೂ ಕಂಡಿದ್ದೇವೆ. 90ಕ್ಕೂ ಹೆಚ್ಚು ಶಿಕ್ಷಕರು ಕೋವಿದ್ಗೆ ಬಲಿಯಾದರೆ, 15 ಶಿಕ್ಷಕರು ಆತ್ಮಹತ್ಯೆಗೆ ಶರಣಾಗಿದ್ದಾರೆ. 40 ಶಿಕ್ಷಕರು ತಮ್ಮ ಔಷಧಿ ವೆಚ್ಚವನ್ನು ಭರಿಸಲಾಗದೆ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಸರ್ಕಾರ ನಿರ್ಲಿಪ್ತವಾಗಿದೆ. ಆಡಳಿತ ವ್ಯವಸ್ಥೆಯ ಕ್ರೌರ್ಯಕ್ಕೆ ಇದೂ ಒಂದು ಸಾಕ್ಷಿ ಎನ್ನಬಹುದು. 14 ಸಾವಿರ ಶಿಕ್ಷಕರು ಎಂದರೆ ಸರಾಸರಿ ಕನಿಷ್ಟ 12 ಸಾವಿರ ಕುಟುಂಬಗಳಲ್ಲವೇ ? ಈ ಕುಟುಂಬಗಳನ್ನು ನಿರ್ವಹಿಸುವುದಾದರೂ ಹೇಗೆ, ಅವರ ಮಕ್ಕಳಿಗೆ ವಿದ್ಯಾಭ್ಯಾಸ ಒದಗಿಸುವುದು ಹೇಗೆ ? ಇವರಲ್ಲಿ ಎಷ್ಟು ಜನ ಉಪನ್ಯಾಸಕರು ಸರ್ಕಾರಿ ಶಾಲೆಗಳನ್ನು ಅವಲಂಬಿಸಿದ್ದಾರೆ ? ಈ ಎಲ್ಲ ಜಟಿಲ ಪ್ರಶ್ನೆಗಳು ಈ ಸಂದರ್ಭದಲ್ಲಿ ಚರ್ಚೆಗೊಳಗಾಗಬೇಕಿದೆ.
ಕಳೆದ ವರ್ಷ ಕೋವಿದ್ ಸಂಕಷ್ಟದ ನಡುವೆಯೇ ರಾಜ್ಯ ಸರ್ಕಾರ ಸರ್ಕಾರಿ ಶಾಲೆಗಳಿಗೆ 18 ಸಾವಿರ ಅತಿಥಿ ಶಿಕ್ಷಕರನ್ನು ನೇಮಿಸಿದೆ. ರಾಜ್ಯದಲ್ಲಿ ಒಟ್ಟು 2 ಲಕ್ಷ 57 ಸಾವಿರ ಬೋಧಕ ಹುದ್ದೆಗಳು ಖಾಲಿ ಉಳಿದಿವೆ. ವಿಶ್ವವಿದ್ಯಾಲಯಗಳಲ್ಲಿ, ಶಾಲಾ ಕಾಲೇಜುಗಳಲ್ಲಿ ಬೋಧಕ ಸಿಬ್ಬಂದಿಯ ಕೊರತೆ ತೀವ್ರವಾಗಿದ್ದು ಅನೇಕ ಪಠ್ಯಗಳಿಗೆ ಬೋಧಕರೇ ಲಭ್ಯವಾಗುತ್ತಿಲ್ಲ. ಇದೇ ವೇಳೆ ನಿರುದ್ಯೋಗ ಪದವೀಧರರ ಸಂಖ್ಯೆಯೂ ಹೆಚ್ಚಾಗುತ್ತಲೇ ಇದೆ. ಆದರೂ ಸರ್ಕಾರಗಳು ಖಾಯಂ ನೌಕರಿ ನೀಡಲು ಮುಂದಾಗುತ್ತಿಲ್ಲ. ಇತ್ತ ಗುತ್ತಿಗೆ ಆಧಾರದ ಮೇಲೆ ನೇಮಿಸಲ್ಪಡುವ ಉಪನ್ಯಾಸಕರಿಗೆ, ಶಿಕ್ಷಕರಿಗೆ ದಿನಗೂಲಿ ವೇತನಕ್ಕಿಂತಲೂ ಕಡಿಮೆ ವೇತನ ನೀಡುವ ಮೂಲಕ ಶೋಷಣೆ ಮಾಡುತ್ತಿದೆ. ಶಿಕ್ಷಣ ವ್ಯವಸ್ಥೆಯಲ್ಲಿ ಕಾರ್ಪೋರೇಟ್ ಬಂಡವಾಳ ಹೂಡಿಕೆ ಹೆಚ್ಚಾಗುತ್ತಿರುವಂತೆಲ್ಲಾ ಈ ಬೋಧಕರ ಸಮಸ್ಯೆ ಇನ್ನೂ ಬಿಗಡಾಯಿಸುತ್ತಲೇ ಹೋಗುತ್ತದೆ.
ಶಿಕ್ಷಣ ವ್ಯವಸ್ಥೆ ಒಂದು ಸ್ವಸ್ಥ ಸಮಾಜದ ತಳಪಾಯವನ್ನು ನಿರ್ಮಿಸುತ್ತದೆ. ಪ್ರಾಥಮಿಕ ಹಂತದಿಂದ ಉನ್ನತ ಶಿಕ್ಷಣದವರೆಗೆ ಶಿಕ್ಷಕರು ಸಮಾಜವನ್ನು ಕಟ್ಟುವ ಕಾಯಕದಲ್ಲಿ ತೊಡಗಿರುತ್ತಾರೆ. ಇಲ್ಲಿ ಕಂಡುಬರಬಹುದಾದ ಅದಕ್ಷತೆ, ಅಪ್ರಾಮಾಣಿಕತೆ, ಅಶಿಸ್ತು ಮುಂತಾದ ಅಪವಾದಗಳು ಸಾರ್ವತ್ರಿಕವಾದ ಲಕ್ಷಣಗಳಾದ್ದರಿಂದ ಇವುಗಳನ್ನು ಬದಿಗಿಟ್ಟು ಯೋಚಿಸಬೇಕಾಗುತ್ತದೆ. ಮಕ್ಕಳಿಗೆ ಸುಭದ್ರ ಭವಿಷ್ಯವನ್ನು ರೂಪಿಸಲು ನಿತ್ಯ ದುಡಿಯುವ ಶಿಕ್ಷಕರಿಗೆ ತಮ್ಮ ಬದುಕೇ ಅತಂತ್ರ ಸ್ಥಿತಿಯಲ್ಲಿದ್ದರೆ, ಉತ್ತಮ ಶಿಕ್ಷಣ ಅಥವಾ ಬೋಧನೆಯನ್ನು ಹೇಗೆ ನಿರೀಕ್ಷಿಸಲಾದೀತು ? ಈ ವರ್ಗ ಎರಡು ದಶಕಗಳಿಂದ ಇದೇ ಅನಿಶ್ಚಿತತೆಯನ್ನು ಎದುರಿಸುತ್ತಿದೆ, ನೂತನ ಶಿಕ್ಷಣ ನೀತಿ ಈ ಅನಿಶ್ಚಿತತೆಯನ್ನು ಮತ್ತಷ್ಟು ತೀವ್ರಗೊಳಿಸಲಿದೆ.
ಕೋವಿದ್ ಮೊದಲನೆ ಅಲೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ತಮ್ಮ ಸರ್ಕಾರ ಸಾಮಾನ್ಯ ಜನರ ಜೀವನ ಮತ್ತು ಜೀವನೋಪಾಯ ಎರಡನ್ನೂ ರಕ್ಷಿಸುತ್ತದೆ ಎಂದು ಆಶ್ವಾಸನೆ ನೀಡಿದ್ದರು. ಈ ಆಡಂಭರದ ಮಾತುಗಳು ಅರ್ಥಹೀನ ಎನ್ನುವುದಕ್ಕೆ ಅತಿಥಿ ಉಪನ್ಯಾಸಕರ ಬವಣೆಯೇ ಸಾಕ್ಷಿಯಾಗಿ ಕಾಣುತ್ತದೆ. ತಮ್ಮದೇ ಆದ ಸುಭದ್ರ ಬದುಕು ಕಟ್ಟಿಕೊಳ್ಳಲು ಶಕ್ತರಾಗದ, ನಿಶ್ಚಿತ ಜೀವನೋಪಾಯದ ಮಾರ್ಗಗಳನ್ನು ಕಾಣಲಾಗದ ಒಂದು ಬೃಹತ್ ಸಮೂಹ ಇಂದು ಭವಿಷ್ಯದ ಪೀಳಿಗೆಗೆ ವಿದ್ಯಾಭ್ಯಾಸದ ಮೂಲಕ ಸುಭದ್ರ ಜೀವನ-ಜೀವನೋಪಾಯವನ್ನು ರೂಪಿಸಲು ಶ್ರಮಿಸುತ್ತಿದೆ. ಅತಿಥಿ ಉಪನ್ಯಾಸಕರು ಈ ಸಮೂಹದ ಒಂದು ಭಾಗವಾಗಿದ್ದಾರೆ.
ಗುತ್ತಿಗೆ ಆಧಾರಿತ ನೌಕರಿ ನವ ಉದಾರವಾದಿ ಆರ್ಥಿಕ ನೀತಿಯ ಮೂಲ ಮಂತ್ರವಾಗಿದ್ದು ಇದು ಎಲ್ಲ ಆರ್ಥಿಕ ವಲಯಗಳನ್ನೂ ಆವರಿಸಿದೆ. ದುಡಿಮೆಯನ್ನು ಮಾರುಕಟ್ಟೆಯ ಕಚ್ಚಾವಸ್ತುವಿನಂತೆ ಪರಿಗಣಿಸುವ ಅರ್ಥವ್ಯವಸ್ಥೆಯಲ್ಲಿ ಶ್ರಮದ ಮೌಲ್ಯವೂ ಬಂಡವಾಳ ಮಾರುಕಟ್ಟೆಯ ಲಾಭ ನಷ್ಟಗಳ ನಡುವೆ ನಿರ್ಧರಿಸಲ್ಪಡುತ್ತದೆ. ಈ ಮಾರುಕಟ್ಟೆ ಅರ್ಥನೀತಿಗೆ ಈಗ ಶಿಕ್ಷಕ ವೃತಿಯೂ ಒಳಪಟ್ಟಿದೆ. ತಮ್ಮ ನೌಕರಿಯ ಭದ್ರತೆ ಮತ್ತು ಸೇವಾ ಸವಲತ್ತುಗಳಿಗಾಗಿ ಹೋರಾಡುತ್ತಿರುವ ಅತಿಥಿ ಉಪನ್ಯಾಸಕರು, ತಮ್ಮಂತೆಯೇ ಅನಿಶ್ಚಿತತೆ, ಅಭದ್ರತೆಯನ್ನು ಎದುರಿಸುತ್ತಿರುವ ಕೋಟ್ಯಂತರ ದುಡಿಮೆಗಾರರತ್ತ ಗಮನ ಹರಿಸುವ ಮೂಲಕ, ಹಣಕಾಸು ಬಂಡವಾಳದ ಶೋಷಕ ವ್ಯವಸ್ಥೆಯ ವಿರುದ್ಧ ಸಮಗ್ರ ಹೋರಾಟವನ್ನು ರೂಪಿಸಲು ಸಜ್ಜಾಗಬೇಕಿದೆ. ಇಂದು ಮುಷ್ಕರನಿರತರಾಗಿರುವ 14 ಸಾವಿರ ಶಿಕ್ಷಕರ ಭವಿಷ್ಯವೇ ಮುಂದಿನ ಪೀಳಿಗೆಯ ಲಕ್ಷಾಂತರ ಮಕ್ಕಳ ಭವಿಷ್ಯವನ್ನೂ ನಿರ್ಧರಿಸುತ್ತದೆ.
ಮಾರುಕಟ್ಟೆ ವ್ಯವಸ್ಥೆಯಲ್ಲಿ ಉತ್ಪಾದಕ ಸರಕುಗಳಾಗುವ ದುಡಿಮೆಗಾರರು ತಮ್ಮ ಶ್ರಮವನ್ನು ಬಿಕರಿ ಮಾಡುವ ಮುನ್ನ “ಜೀವನ-ಜೀವನೋಪಾಯ”ದ ಬಗ್ಗೆ ಯೋಚಿಸುವಂತಾಗಬೇಕಿದೆ. ಮಾರುಕಟ್ಟೆ ಎಲ್ಲವನ್ನೂ ಖರೀದಿಸುತ್ತದೆ, ಎಲ್ಲವನ್ನೂ ಬಳಸಿ ಬಿಸಾಡುತ್ತದೆ ಆದರೆ ಏನನ್ನೂ ಸಂರಕ್ಷಿಸುವುದಿಲ್ಲ. ಏಕೆಂದರೆ ಹಣಕಾಸು ಬಂಡವಾಳದ ಮಹಾಪೂರದಲ್ಲಿ ಶ್ರಮ ಮತ್ತು ಶ್ರಮಿಕರ ಬದುಕು ಎರಡೂ ಕೊಚ್ಚಿಹೋಗುತ್ತಲೇ ಇರುತ್ತದೆ. ಈ ವಾಸ್ತವವನ್ನು ಅರಿತರೆ ಶ್ರಮಜೀವಿಗಳ ಬದುಕಿನಲ್ಲಿ ಹೊಸ ದಿಗಂತವನ್ನು ಕಾಣುವುದು ಸಾಧ್ಯ.






