ಆಡಳಿತದ ಪರ ಇರುವ ಮಾಧ್ಯಮಗಳು ಸರ್ಕಾರವನ್ನು ಎಲ್ಲೂ ಇಕ್ಕಟ್ಟಿಗೆ ಸಿಲುಕಿಸದೆ, ಸರ್ಕಾರ ಹೇಳಿದ್ದನ್ನೇ ಪ್ರಚಾರ ಮಾಡುತ್ತಾ ಆಡಳಿತ ಪರ ಅಭಿಪ್ರಾಯ ಜನಸಮುದಾಯದಲ್ಲಿ ರೂಪುಗೊಳ್ಳುವಂತೆ ಮಾಡುತ್ತಿದ್ದರೆ ಮತ್ತೊಂದೆಡೆ ತನ್ನ ವಿರುದ್ಧ ಬರೆಯುವ, ಸುದ್ದಿ ಪ್ರಸಾರ ಮಾಡುವ, ತನ್ನನ್ನು ವಿಮರ್ಶಿಸುವ ಮಾಧ್ಯಮಗಳನ್ನು ಸರ್ಕಾರವೇ ಕಾನೂನಿನ ಹೆಸರಲ್ಲಿ ನಿಯಂತ್ರಿಸಲು ಪ್ರಯತ್ನಿಸುತ್ತಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತದಲ್ಲಿ ಪತ್ರಿಕಾ ಸ್ವಾತಂತ್ರ್ಯ ದಮನ ಮಾಡುತ್ತಿರುವುದರ ಕುರಿತಾಗಿ ಟೀಕೆ, ಅಭಿಪ್ರಾಯಗಳು ವ್ಯಕ್ತವಾಗುತ್ತಿದ್ದರೂ ಒಕ್ಕೂಟ ಸರ್ಕಾರ ತನಗೂ ಅದಕ್ಕೂ ಸಂಬಂಧವಿಲ್ಲದಂತೆ ಮೌನವಾಗಿದೆ. ಈ ನಡುವೆ 2014 ಮತ್ತು 2021 ರ ನಡುವೆ ವೆಬ್ ಪುಟಗಳು, ವೆಬ್‌ಸೈಟ್‌ಗಳು, ಸೋಷಿಯನ್ ಮೀಡಿಯಾ ಪೇಜ್ಗಳು ಸೇರಿದಂತೆ 25,368 URL ಗಳನ್ನು ಸರ್ಕಾರ ನಿರ್ಬಂಧಿಸಿದೆ ಎಂಬ ಆಘಾತಕಾರಿ ಮಾಹಿತಿ ಹೊರ ಬಿದ್ದಿದೆ. ಈ ಮಾಹಿತಿಯನ್ನು ಸ್ವತಃ ಸರ್ಕಾರದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವೇ ಬಿಡುಗಡೆ ಮಾಡಿದೆ.
ಅಲ್ಲದೆ 2021-22ರ ಅವಧಿಯಲ್ಲಿ 56 ಯೂಟ್ಯೂಬ್ ಆಧಾರಿತ ಸುದ್ದಿ ಚಾನೆಲ್‌ಗಳು ಮತ್ತು ಅವರ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಸಾರ್ವಜನಿಕ ಸೇವೆಯಿಂದ ನಿರ್ಬಂಧಿಸಲು ಸಹ ಇದು ನಿರ್ದೇಶನಗಳನ್ನು ನೀಡಿದೆ. ಮಾಹಿತಿ ತಂತ್ರಜ್ಞಾನ ಕಾಯಿದೆ 2000ದ ಸೆಕ್ಷನ್ 69ಎ ಉಲ್ಲಂಘನೆಯನ್ನು ಉಲ್ಲೇಖಿಸಿ ಇದೆಲ್ಲವನ್ನೂ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದೆ.
ಈ ಮಾಹಿತಿಯನ್ನು ಸಚಿವಾಲಯವು ಕೇರಳದ ಕಾಂಗ್ರೆಸ್ ಸಂಸದ ಟಿ.ಎನ್. ಪ್ರತಾಪನ್ ಅವರ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ನೀಡಿದೆ. ತಮ್ಮ ಪ್ರಶ್ನೆಯಲ್ಲಿ
ಅವರು “2014 ರಿಂದ ಸುದ್ದಿ ವಾಹಿನಿಗಳು ಎದುರಿಸಿದ ಸರ್ಕಾರಿ ಅಡಚಣೆಗಳ ಡೇಟಾ ಮತ್ತು ವಿವರಗಳನ್ನು ಸರ್ಕಾರ ಹೊಂದಿದೆಯೇ ಮತ್ತು ಹಾಗಿದ್ದರೆ, ಅದರ ವಿವರಗಳೇನು?” ಎಂದು ಕೇಳಿದ್ದರು. ಅಲ್ಲದೆ 2014 ರಿಂದ ಸರ್ಕಾರವು ನಿಷೇಧಿಸಿದ, ನಿಲ್ಲಿಸಿದ, ಪ್ರಕಟಣೆ ಅಥವಾ ಪ್ರಸಾರಕ್ಕೆ ಅಡ್ಡಿಪಡಿಸಿದ ಸುದ್ದಿ ವಾಹಿನಿಗಳು, ಪತ್ರಿಕೆಗಳು, ಮಾಧ್ಯಮ ವೇದಿಕೆಗಳು, ಆನ್‌ಲೈನ್ ಮಾಧ್ಯಮ ವೆಬ್‌ಸೈಟ್‌ಗಳು ಮತ್ತು ಸಾಮಾಜಿಕ ಮಾಧ್ಯಮ ಖಾತೆಗಳ ಸಂಖ್ಯೆಯನ್ನು ಸಹ ಅವರು ಕೇಳಿದ್ದರು.
ಅವರ ಪ್ರಶ್ನೆಗೆ ಉತ್ತರವಾಗಿ, ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಸಿಂಗ್ ಠಾಕೂರ್ ಅವರು ಸದನದಲ್ಲಿ ಹೇಳಿಕೆಯನ್ನು ಮಂಡಿಸಿ “ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು (MeiTY) Information Technology Act, 2000 ಸೆಕ್ಷನ್ 69 Aಯ ಉಲ್ಲಂಘನೆಗಾಗಿ ಕಂಟೆಂಟ್ ಅನ್ನು ನಿರ್ಬಂಧಿಸುವಂತೆ ನಿರ್ದೇಶನಗಳನ್ನು ನೀಡಲು ಅಧಿಕಾರ ಹೊಂದಿದೆ. 2014-2021 ರ ಅವಧಿಯಲ್ಲಿ ಈ ನಿಬಂಧನೆಗಳ ಅಡಿಯಲ್ಲಿ MeiTY ನಿಂದ ನಿರ್ಬಂಧಿಸಲಾದ ವೆಬ್ ಪುಟಗಳು, ವೆಬ್‌ಸೈಟ್‌ಗಳು, ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿನ ಪುಟಗಳನ್ನು ಒಳಗೊಂಡಿರುವ ಒಟ್ಟು URL ಗಳ ಸಂಖ್ಯೆ 25,368 ಆಗಿದೆ” ಎಂದಿದ್ದಾರೆ. ಅಲ್ಲದೆ ಫೆಬ್ರವರಿ 25, 2021 ರಂದು ಮಾಹಿತಿ ತಂತ್ರಜ್ಞಾನ ಕಾಯಿದೆಯ ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮಾಧ್ಯಮ ನೀತಿ ಸಂಹಿತೆ ನಿಯಮಗಳು ಡಿಜಿಟಲ್ ಸುದ್ದಿ ಪ್ರಕಾಶಕರ ಕಂಟೆಂಟ್‌ಗಳನ್ನು ನಿರ್ಬಂಧಿಸಲು ಸಹ ಅನುಮತಿ ನೀಡುತ್ತದೆ ಎಂದು ಅವರು ಹೇಳಿದ್ದಾರೆ. “ಅದರಂತೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು 2021-2022ರ ಅವಧಿಯಲ್ಲಿ 56 ಯೂಟ್ಯೂಬ್ ಆಧಾರಿತ ಸುದ್ದಿ ಚಾನೆಲ್‌ಗಳು ಮತ್ತು ಅವರ ಸಾಮಾಜಿಕ ಮಾಧ್ಯಮ ಖಾತೆಗಳನ್ನು ನಿರ್ಬಂಧಿಸಲು ನಿರ್ದೇಶನಗಳನ್ನು ನೀಡಿದೆ” ಎಂದು ಅವರು ಸಂಸತ್ತಿಗೆ ತಿಳಿಸಿದ್ದಾರೆ. ಆದರೆ ಈ ಹೊಸ ಐಟಿ ನಿಯಮಗಳನ್ನು ಭಾರತದಾದ್ಯಂತ ವಿವಿಧ ಉಚ್ಚ ನ್ಯಾಯಾಲಯಗಳಲ್ಲಿ ಹಲವಾರು ಸುದ್ದಿವಾಹಿನಿಗಳು ಪ್ರಶ್ನಿಸಿವೆ.
ಪ್ರತಾಪನ್ ಅವರು ಕೇರಳದ ಸುದ್ದಿ ಮಾಧ್ಯಮವಾದ ಮೀಡಿಯಾ ಒನ್ ಅನ್ನು ನಿಷೇಧಿಸಿರುವ ಬಗ್ಗೆ ” ಮೀಡಿಯಾ ಒನ್‌ಗೆ ತಮ್ಮ ಪ್ರಸಾರವನ್ನು ಮುಂದುವರಿಸಲು ಏಕೆ ಅನುಮತಿ ನೀಡಲಿಲ್ಲ ಎಂಬುವುದರ ಬಗ್ಗೆ ಸರ್ಕಾರವು ವಿವರವಾದ ವಿವರಣೆಯನ್ನು ನೀಡಿದೆಯೇ ” ಎಂಬ ಪ್ರಶ್ನೆಯನ್ನೂ ಕೇಳಿದ್ದು “ಸರ್ಕಾರವು ಕಾನೂನು ಮತ್ತು ನಿಗದಿಪಡಿಸಿದ ಪ್ರಕ್ರಿಯೆಯನ್ನು ಅನುಸರಿಸಿದೆ. ಟಿವಿ ನ್ಯೂಸ್ ಚಾನೆಲ್ ‘ಮೀಡಿಯಾ ಒನ್’ಗೆ ಅನುಮತಿ ರದ್ದುಗೊಳಿಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಮೊದಲು ಅಗತ್ಯ ಕಾರ್ಯವಿಧಾನವನ್ನು ಅನುಸರಿಸಿದೆ .
ಈ ವಿಷಯವು ಈಗ ಸುಪ್ರೀಂ ಕೋರ್ಟ್‌ನಲ್ಲಿದೆ” ಎಂದು ಸಚಿವರು ಉತ್ತರಿಸಿದ್ದಾರೆ. .
ಜನವರಿ31ರಂದು “ರಾಷ್ಟ್ರೀಯ ಭದ್ರತೆಯ ಆತಂಕದ” ಅಡಿಯಲ್ಲಿ ಮಲಯಾಳಂ ಸುದ್ದಿ ವಾಹಿನಿ ಮೀಡಿಯಾ ಒನ್‌ನ ಪ್ರಸಾರವನ್ನು ಕೇಂದ್ರ ಸರ್ಕಾರವು ಮುಂದಿನ ಆದೇಶದವರೆಗೆ ನಿಷೇಧಿಸಿದ್ದು ಇತ್ತೀಚೆಗೆ ಸುಪ್ರೀಂ ಕೋರ್ಟ್ ಸರ್ಕಾರದ ಈ ಆದೇಶವನ್ನು ತಡೆಹಿಡಿದಿದೆ.