ಹೆಣ್ಣುಮಕ್ಕಳು ಮೊಬೈಲ್ ಬಳಸುವುದರಿಂದ ಅತ್ಯಾಚಾರ ಹೆಚ್ಚಿದೆ: ವಿವಾದ ಸೃಷ್ಟಿಸಿದ ಉ.ಪ್ರ ಮಹಿಳಾ ಆಯೋಗದ ಸದಸ್ಯೆ

ಪ್ರತಿ ಬಾರಿ ಅತ್ಯಾಚಾರ ನಡೆದಾಗಲೂ ಸಮಾಜ ಹೆಣ್ಣಿನ ನಡತೆಯತ್ತ, ಬಟ್ಟೆಯತ್ತ, ಕೈ ತೋರಿಸಿಕೊಂಡೇ ಬಂದಿದೆ. ಈ ಮೂಲಕ ಗಂಡನ್ನು, ಅವನ ಕೆಟ್ಟತನವನ್ನು ಸಮರ್ಥಿಸುವ, ಹೊಣೆಗಾರಿಕೆಯನ್ನು ಹೆಣ್ಣಿಗೆ ವರ್ಗಾಯಿಸುವುದು ಒಂದು ಸಂಪ್ರದಾಯದಂತೆ ನಡೆದುಕೊಂಡು ಬಂದಿದೆ. ಆದರೆ ಈವರೆಗೆ ಜನಸಾಮಾನ್ಯರು, ಅಶಿಕ್ಷಿತರು, ಸಮಾಜದ ಆಗು ಹೋಗುಗಳ ಅರಿವಿಲ್ಲದವರು ಇಂತಹ ಹೇಳಿಕೆ ನೀಡುತ್ತಿದ್ದಾರೆ ಎಂದು ಪ್ರಜ್ಞಾವಂತ ಸಮಾಜ ನಂಬಿತ್ತು. ಆದರೆ ಹೊಸ ಭಾರತದಲ್ಲಿ ಸುಶಿಕ್ಷಿತರು, ಉನ್ನತ ಅಧಿಕಾರದ ಸ್ಥಾನದಲ್ಲಿರುವವರೂ ಇಂತಹ ಬೀಸು ಹೇಳಿಕೆ ನೀಡುತ್ತಿರುವುದು ಖೇದಕರ.

ಹೊಸ ಬೆಳವಣಿಗೆಯೊಂದರಲ್ಲಿ, ”ಬಾಲಕಿಯರಿಗೆ ಮೊಬೈಲ್ ಫೋನ್ ನೀಡಬಾರದು. ಅದು ಅತ್ಯಾಚಾರಕ್ಕೆ ಕಾರಣವಾಗುತ್ತದೆ” ಎಂದು ಹೇಳಿ ಉತ್ತರ ಪ್ರದೇಶದ ಮಹಿಳಾ ಆಯೋಗದ ಸದಸ್ಯೆ ಮೀನಾ ಕುಮಾರಿ ವಿವಾದವನ್ನು ಸೃಷ್ಟಿಸಿದ್ದಾರೆ. ಮಹಿಳಾ ಆಯೋಗದ ಸದಸ್ಯೆ ಈ ರೀತಿಯ ಹೇಳಿಕೆ ನೀಡಿದ ವಿಡಿಯೋ ಗುರುವಾರ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

“ನಾವು ನಮ್ಮ ಹೆಣ್ಣುಮಕ್ಕಳ ಮೇಲೆ ನಿಗಾ ಇಡಬೇಕು . ಅವರು ಎಲ್ಲಿಗೆ ಹೋಗುತ್ತಿದ್ದಾರೆ, ಯಾರೊಂದಿಗೆ ಸಮಯ ಕಳೆಯುತ್ತಾರೆ ಎಂಬುದನ್ನು ನಾವು ತಿಳಿದುಕೊಳ್ಳಬೇಕು . ಹುಡುಗಿಯರು ಮೊಬೈಲ್‌ಗಳಲ್ಲಿ ಹುಡುಗರೊಂದಿಗೆ ಸ್ನೇಹ ಬೆಳೆಸುತ್ತಾರೆ ಮತ್ತು ನಂತರ ಅವರು ಅವರೊಂದಿಗೆ ಓಡಿಹೋಗುತ್ತಾರೆ ಎಂದು ಕಂಡುಬಂದಿದೆ ” ಎಂದು ಮೀನಾಕುಮಾರಿ ಹೇಳುತ್ತಿರುವುದು ವೀಡಿಯೊದಲ್ಲಿ ರೆಕಾರ್ಡ್ ಆಗಿದೆ.

ಹೆಚ್ಚುತ್ತಿರುವ ಅತ್ಯಾಚಾರ ಘಟನೆಗಳಿಗೆ ಸಂತ್ರಸ್ತರ ತಾಯಂದಿರನ್ನು ಕುಮಾರಿ ದೂಷಿಸಿದ್ದಾರೆ. “ಅತ್ಯಾಚಾರಕ್ಕೆ ತಾಯಂದಿರು ಕಾರಣ ಎಂದು ನಾನು ಭಾವಿಸುತ್ತೇನೆ. ಅವರು ತಮ್ಮ ಹೆಣ್ಣುಮಕ್ಕಳ ಚಟುವಟಿಕೆಗಳನ್ನು ಮೇಲ್ವಿಚಾರಣೆ ಮಾಡುವುದಿಲ್ಲ” ಎಂದು ಅವರು ಹೇಳಿದ್ದಾರೆ. ಅಲ್ಲದೆ ಹೆಣ್ಣುಮಕ್ಕಳಿಗೆ ಮೊಬೈಲ್ ಫೋನ್ ನೀಡದಂತೆ ಪೋಷಕರಿಗೆ ಮನವಿ ಮಾಡಿದ್ದಾರೆ.

ಅವರ ಹೇಳಿಕೆಗೆ ಸಂಬಂಧಿಸಿದಂತೆ ವಿರೋಧ ಪಕ್ಷಗಳು ಮಹಿಳಾ ಆಯೋಗದ ಸದಸ್ಯರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ ಮತ್ತು ಅವರು ಬೇಷರತ್ತಾಗಿ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ.

 ”ಸ್ವತಃ ಮಹಿಳೆಯಾಗಿದ್ದುಕೊಂಡು ಮೀನಾ ಕುಮಾರಿ ಇಂತಹ ಹೇಳಿಕೆ ನೀಡಿದ್ದು ನಿಜಕ್ಕೂ ನಾಚಿಕೆಗೇಡಿನ ಸಂಗತಿ . ಅತ್ಯಾಚಾರಗಳ ಆಪಾದನೆಯನ್ನು ಹೆತ್ತವರ ಮೇಲೆ ವರ್ಗಾಯಿಸುವುದು ಹಾಸ್ಯಾಸ್ಪದವಾಗಿದೆ . ಆ್ಯಂಟಿ ರೋಮಿಯೋ ದಳದ ಬಗ್ಗೆ ಏನು ಹೇಳುತ್ತೀರಿ? ಅದರ ಜವಾಬ್ದಾರಿ ಏನು?” ಎಂದು ಹಿರಿಯ ಸಮಾಜವಾದಿ ಪಕ್ಷದ (ಎಸ್‌ಪಿ) ಮುಖಂಡ ಅನುರಾಗ್ ಭದೌರಿಯಾ ಕೇಳಿದ್ದಾರೆ. ಯುಪಿ ಕಾಂಗ್ರೆಸ್ ಅಧ್ಯಕ್ಷ ಅಜಯ್ ಕುಮಾರ್ ಲಾಲೂ ಅವರು ಮೀನಾ ಕುಮಾರಿ ತಮ್ಮ ಹೇಳಿಕೆಗೆ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದ್ದಾರೆ.

ಇತ್ತೀಚೆಗೆ ಉತ್ತರಾಖಂಡ ಮುಖ್ಯಮಂತ್ರಿ ತಿರಾತ್ ಸಿಂಗ್ ರಾವತ್ ರಿಪ್ಪ್‌ಡ್ ಜೀನ್ಸ್ ಧರಿಸಿರುವ ಮಹಿಳೆಯ ಬಗ್ಗೆ ಮಾತಾಡುತ್ತಾ “ಇಂತಹ ಮಹಿಳೆಯರು ಸಮಾಜಕ್ಕೆ ಯಾವ ಸಂದೇಶ ಕೊಡಬಲ್ಲರು?” ಎಂದು ಕೀಳು ಮಟ್ಟದ ಹೇಳಿಕೆ ನೀಡಿದ್ದರು. ಭಾರತವು ಪಾಶ್ಚಿಮಾತ್ಯ ಸಂಸ್ಕೃತಿಯನ್ನು ಅಳವಡಿಸಿಕೊಂಡಾಗಿನಿಂದಲೂ ಮಹಿಳೆಯರ ಮೇಲಿನ ಅಪರಾಧಗಳು ಹೆಚ್ಚಾಗಿದೆ ಎಂದು ಮಧ್ಯಪ್ರದೇಶ ಸರ್ಕಾರದ ರೈತರ ಕಲ್ಯಾಣ ಮತ್ತು ಕೃಷಿ ಇಲಾಖೆ ಸಚಿವರಾದ ಕಮಲ್ ಪಟೇಲ್ ಹೇಳಿರುವುದನ್ನೂ ಇಲ್ಲಿ ಸ್ಮರಿಸಿಕೊಳ್ಳಬಹದು. 

ರಿಪ್ಪ್‌ಡ್ ಜೀನ್ಸ್, ಪಾಶ್ಚಿಮಾತ್ಯ ಸಂಸ್ಕೃತಿಯನ್ನು ಅತ್ಯಾಚಾರದ ಹೊಣೆಗಾರರನ್ನಾಗಿ ಮಾಡಿದ್ದಾಯ್ತು, ಈಗ ಮೊಬೈಲ್‌ನ ಸರದಿ. ಒಟ್ಟಿನಲ್ಲಿ ಸಂತ್ರಸ್ತೆಯನ್ನೇ ಅಪರಾಧದ ಹೊಣೆಗಾರಿಕೆಯನ್ನು ಹೊರುವಂತೆ ಮಾಡುವ ಷಡ್ಯಂತ್ರದಲ್ಲಿ ಮಹಿಳೆಯರೂ ಭಾಗಿಯಾಗಿರುವುದು ದುರಂತ. ಇವರೆಲ್ಲರೂ ಇತ್ತೀಚೆಗೆ ಸುಪ್ರೀಂ ಕೋರ್ಟ್ “ರಾತ್ರಿಯಲ್ಲಿ ಏಕಾಂಗಿಯಾಗಿ ಹೊರಹೋಗುವುದು ಅಥವಾ ಕೆಲವು ನಿರ್ದಿಷ್ಟ ಬಟ್ಟೆಗಳನ್ನು ಧರಿಸಿರುವುದು ಮಹಿಳೆಯರ ಮೇಲೆ ಹಲ್ಲೆಗೆ ಸಮರ್ಥನೆಯಾಗುವುದಿಲ್ಲ” ಎಂದು ನೀಡಿದ ತೀರ್ಪನ್ನು ಮತ್ತೊಮ್ಮೆ ಓದಿಕೊಳ್ಳುವುದು ಒಳಿತು.

Related posts

Latest posts

ಕುಂಭ ಮೇಳ ಸಂದರ್ಭದಲ್ಲಿ ಮಾಡಿದ 1 ಲಕ್ಷ ಕೋವಿಡ್-19 ಪರೀಕ್ಷೆಗಳು ನಕಲಿ: ತನಿಖಾ ವರದಿ

ಹರಿದ್ವಾರದ ಕುಂಭ ಮೇಳ ಸಂದರ್ಭದಲ್ಲಿ ಮಾಡಲಾಗಿದ ನಾಲ್ಕು ಲಕ್ಷ ಕೋವಿಡ್ ಟೆಸ್ಟ್ ಫಲಿತಾಂಶಗಳಲ್ಲಿ ಹಲವು ನಕಲಿ ಎಂದು ಉತ್ತರಾಖಂಡ ಆರೋಗ್ಯ ಇಲಾಖೆ ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ. ವಿವರವಾದ ತನಿಖೆಯ 1,600 ಪುಟಗಳಲ್ಲಿ...

ನನ್ನ ಹೇಳಿಕೆಯಿಂದ ನಾನು ಹಿಂದೆ ಸರಿಯಲ್ಲ : ನಟ ಚೇತನ್ ಸ್ಪಷ್ಟನೆ

ಬ್ರಾಹ್ಮಣ್ಯ ವಿರೋಧಿ ಹೇಳಿಕೆ ಎಂಬ ಆರೋಪದ ಅಡಿ ಇಂದು ಬಸವನಗುಡಿ ಪೊಲೀಸರ ಮುಂದೆ ಹಾಜರಾದ ನಟ ಚೇತನ್ ತನ್ನ ಹೇಳಿಕೆಯ ಬಗ್ಗೆ ಪೊಲೀಸರ ಮುಂದೆ ಸ್ಪಷ್ಟನೆ ದಾಖಲಿಸಿದ್ದಾರೆ. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ...

ಚಿಕ್ಕಬಳ್ಳಾಪುರ: ಅರ್ಹ ಫಲಾನುಭವಿಗಳನ್ನು ಗುರುತಿಸುವಲ್ಲಿ ವಿಫಲ: ರೈತರಿಗೆ ಸಿಗುತ್ತಿಲ್ಲ ಪರಿಹಾರ ಧನ

ಕೊರೋನಾ ಲಾಕ್ಡೌನ್ ಸಮಯದಲ್ಲಿ ಸಂಕಷ್ಟಕ್ಕೊಳಗಾದ ರೈತರಿಗೆ ಸರ್ಕಾರ ಪರಿಹಾರದ ಅಭಯ ಕೊಟ್ಟಿತು. ಆದರೆ ಅರ್ಹ ಫಲಾನುಭವಿಗಳನ್ನ ಗುರುತಿಸುವಲ್ಲಿ ವಿಫಲವಾದ ಪರಿಣಾಮ ನಿಜವಾದ ರೈತರಿಗೆ ಪರಿಹಾರ ಸಿಗದಂತಾಗಿದೆ. ಈ ಕುರಿತು ಚಿಕ್ಕಬಳ್ಳಾಪುರದಲ್ಲಿ ರೈತರು ತಮ್ಮ...