NEET-UG ಮರುಪರೀಕ್ಷೆಯ ನಕಲಿ ಪ್ರಶ್ನೆಪತ್ರಿಕೆಗಳನ್ನು ಟೆಲಿಗ್ರಾಮ್ ಮೂಲಕ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ರಾಜಸ್ಥಾನದ ಭಿಲ್ವಾರ ಮೂಲದ 19 ವರ್ಷದ ವಿದ್ಯಾರ್ಥಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಆಕಾಶ್ ಚೌಧುರಿ ಎಂದು ಗುರುತಿಸಲಾಗಿದೆ.ದಿಲ್ಲಿಯಿಂದ ಲಭಿಸಿದ ಗುಪ್ತಚರ ಮಾಹಿತಿಯ ಆಧಾರದಲ್ಲಿ ರಾಜಸ್ಥಾನ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ಪಟೇಲ್ ನಗರದಲ್ಲಿರುವ ಆತನ ನಿವಾಸದ ಮೇಲೆ ಶುಕ್ರವಾರ ಮುಂಜಾನೆ ದಾಳಿ ನಡೆಸಿ ವಶಕ್ಕೆ ಪಡೆದಿದ್ದಾರೆ.

ತನಿಖೆ ವೇಳೆ ಆಕಾಶ್ ಚೌಧುರಿ ತನ್ನ ಗುರುತನ್ನು ಮರೆಮಾಚಲು ಅಮೆರಿಕ ಮೂಲದ VPN ಹಾಗೂ ಪ್ರಾಕ್ಸಿ ನೆಟ್‌ವರ್ಕ್‌ಗಳನ್ನು ಬಳಸಿಕೊಂಡು ‘ಪೇಪರ್ ಮಾಫಿಯಾ’ ಎಂಬ ಹೆಸರಿನ ಟೆಲಿಗ್ರಾಮ್ ಚಾನೆಲ್ ನಿರ್ವಹಿಸುತ್ತಿದ್ದ ಎಂಬುದು ಬೆಳಕಿಗೆ ಬಂದಿದೆ.
ಈ ಚಾನೆಲ್‌ನಲ್ಲಿ ಸುಮಾರು 52 ಸದಸ್ಯರಿದ್ದು, ಪ್ರತಿ ಪ್ರಶ್ನೆಪತ್ರಿಕೆಗೆ 4 ಸಾವಿರ ರೂಪಾಯಿ ವಸೂಲಿ ಮಾಡಲಾಗುತ್ತಿತ್ತು. ಕ್ಯೂಆರ್ ಕೋಡ್ ಮೂಲಕ ಹಣ ಸಂಗ್ರಹಿಸುತ್ತಿದ್ದನೆಂದು ಪೊಲೀಸರು ತಿಳಿಸಿದ್ದಾರೆ.
ಜೈಪುರದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ತಯಾರಿ ನಡೆಸುತ್ತಿದ್ದ ಆಕಾಶ್, NEET ತಯಾರಿ ಪುಸ್ತಕಗಳಲ್ಲಿದ್ದ ಪ್ರಶ್ನೆಗಳನ್ನು ಸ್ಕ್ಯಾನ್ ಮಾಡಿ ಅವುಗಳನ್ನು ನಿಜವಾದ ಪರೀಕ್ಷೆಯ ಪ್ರಶ್ನೆಪತ್ರಿಕೆಗಳೆಂದು ಬಿಂಬಿಸಿ ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದ ಎಂದು ಆರೋಪಿಸಲಾಗಿದೆ.

ಪೊಲೀಸರ ದಾಳಿಯ ವೇಳೆ ಮೊಬೈಲ್ ಫೋನ್, NEET ಅಧ್ಯಯನ ಸಾಮಗ್ರಿಗಳು ಹಾಗೂ ಹಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.ಆರೋಪಿಯ ವಿರುದ್ಧ ವಂಚನೆ, ನಕಲಿ ಪ್ರಶ್ನೆಪತ್ರಿಕೆಗಳ ಮಾರಾಟ, ಮಾಹಿತಿ ತಂತ್ರಜ್ಞಾನ (ಐಟಿ) ಕಾಯ್ದೆಯ ವಿವಿಧ ಸೆಕ್ಷನ್‌ಗಳು ಹಾಗೂ ಸಾರ್ವಜನಿಕ ಪರೀಕ್ಷೆಗಳ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.






