ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರ ದಾಳಿಯ ಬಳಿಕ ಭಾರತ ಮತ್ತು ಪಾಕಿಸ್ತಾನ ನಡುವಿನ ಸಿಂಧೂ ನದಿ ನೀರಿನ ವಿವಾದ ಮತ್ತೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಪಾಕಿಸ್ತಾನಕ್ಕೆ ಹರಿಯುವ ನೀರಿನ ವಿಷಯದಲ್ಲಿ ಭಾರತ ಕಠಿಣ ನಿಲುವು ತಾಳಿದ ಬೆನ್ನಲ್ಲೇ, ಪಾಕಿಸ್ತಾನದ ಮಾಜಿ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಜರ್ದಾರಿ ಮತ್ತೊಮ್ಮೆ ಭಾರತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಿಂಧೂ ನದಿ ಭಾರತ ಮತ್ತು ಪಾಕಿಸ್ತಾನ ಎರಡೂ ದೇಶಗಳಿಗೆ ಸೇರಿರುವ ನದಿಯಾಗಿದ್ದು, ಅದರ ನೀರಿನ ಮೇಲೆ ಪಾಕಿಸ್ತಾನಕ್ಕೂ ಸಮಾನ ಹಕ್ಕು ಇದೆ ಎಂದು ಬಿಲಾವಲ್ ಹೇಳಿದ್ದಾರೆ. ಭಾರತ ಏಕಪಕ್ಷೀಯವಾಗಿ ಸಿಂಧೂ ಜಲ ಒಪ್ಪಂದವನ್ನು ಉಲ್ಲಂಘಿಸಿದೆ ಎಂದು ಆರೋಪಿಸಿದ ಅವರು, ಪಾಕಿಸ್ತಾನ ತನ್ನ ಹಕ್ಕಿಗಾಗಿ ಹೋರಾಟವನ್ನು ಮುಂದುವರಿಸಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

1960ರಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಸಿಂಧೂ ಜಲ ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು. ಆದರೆ ಇತ್ತೀಚಿನ ಬೆಳವಣಿಗೆಗಳು ಆ ಒಪ್ಪಂದದ ಆತ್ಮಕ್ಕೆ ವಿರುದ್ಧವಾಗಿವೆ ಎಂದು ಬಿಲಾವಲ್ ಟೀಕಿಸಿದ್ದಾರೆ. ಪಾಕಿಸ್ತಾನದ ಹಕ್ಕುಗಳನ್ನು ಕಸಿದುಕೊಳ್ಳಲು ಅವಕಾಶ ನೀಡುವುದಿಲ್ಲ. ಅಗತ್ಯವಿದ್ದರೆ ಸಶಸ್ತ್ರ ಹೋರಾಟದ ಹಾದಿಯನ್ನೂ ಪರಿಗಣಿಸಬೇಕಾಗಬಹುದು ಎಂದು ಅವರು ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಭಾರತ, ಪಾಕಿಸ್ತಾನ ನಿರಂತರವಾಗಿ ಭಯೋತ್ಪಾದಕ ಸಂಘಟನೆಗಳಿಗೆ ಆಶ್ರಯ ಮತ್ತು ಬೆಂಬಲ ನೀಡುತ್ತಿರುವುದೇ ಪ್ರಮುಖ ಸಮಸ್ಯೆ ಎಂದು ಸ್ಪಷ್ಟಪಡಿಸಿದೆ. ಭಯೋತ್ಪಾದನೆಗೆ ಪಾಕಿಸ್ತಾನ ಬೆಂಬಲ ನೀಡುವವರೆಗೆ ಸಿಂಧೂ ಜಲ ಒಪ್ಪಂದವನ್ನು ಹಿಂದಿನ ರೀತಿಯಲ್ಲಿ ಮುಂದುವರಿಸುವ ಪ್ರಶ್ನೆಯೇ ಇಲ್ಲ ಎಂದು ಭಾರತ ತನ್ನ ನಿಲುವು ಪುನರುಚ್ಚರಿಸಿದೆ.1960ರ ಒಪ್ಪಂದವು ಪರಸ್ಪರ ವಿಶ್ವಾಸ ಮತ್ತು ಸಹಕಾರದ ಆಧಾರದ ಮೇಲೆ ರೂಪುಗೊಂಡಿತ್ತು. ಆದರೆ ಇಂದಿನ ಪರಿಸ್ಥಿತಿಯಲ್ಲಿ ಆ ವಿಶ್ವಾಸ ಕುಸಿದಿರುವುದರಿಂದ, ಪಾಕಿಸ್ತಾನ ತನ್ನ ನೀತಿಯಲ್ಲಿ ಬದಲಾವಣೆ ತರುವವರೆಗೆ ಒಪ್ಪಂದದ ಅನುಷ್ಠಾನ ಸಾಧ್ಯವಿಲ್ಲ ಎಂಬುದನ್ನು ಭಾರತ ಜಾಗತಿಕ ವೇದಿಕೆಗಳಲ್ಲೂ ಸ್ಪಷ್ಟಪಡಿಸಿದೆ.






