ನಟ ದರ್ಶನ್, ಸದ್ಯ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ದರ್ಶನ್ ಜೈಲಲ್ಲಿದ್ದರೂ ಅವರ ಫ್ಯಾನ್ಸ್ ಮಾತ್ರ ಸಖತ್ ಕ್ರೇಜ್‌ನಲ್ಲೇ ಇದ್ದಾರೆ. ದರ್ಶನ್ ಜೈಲಲ್ಲಿದ್ದಾಗಲೇ ಡೆವಿಲ್ ಸಿನಿಮಾ ರಿಲೀಸ್ ಆಗಿತ್ತು. ಆಗಲೂ ಅಭಿಮಾನಿಗಳು ಆ ಚಿತ್ರವನ್ನು ತಲೆಮೇಲೆ ಹೊತ್ತು ಮೆರೆಸಿದ್ದರು. ಇನ್ನು, ಈ ಹಿಂದೆ ಕರಿಯ ಸಿನಿಮಾ ಕೂಡ ರಿಲೀಸ್ ಆಗಿತ್ತು. ಹಾಗೆಯೇ ಶಾಸ್ತ್ರಿ, ನವಗ್ರಹ ಸಿನಿಮಾಗಳೂ ರೀ ರಿಲೀಸ್ ಆಗಿದ್ದವು. ಜೂ.19 (ಇಂದು) ಅವರ ವೃತ್ತಿ ಬದುಕಿಗೆ ಮತ್ತೊಂದು ಹೊಸ ತಿರುವು ಕೊಟ್ಟಿದ್ದ ಕಲಾಸಿಪಾಳ್ಯ ಸಿನಿಮಾ ರೀ ರಿಲೀಸ್ ಆಗಿದೆ.

ದರ್ಶನ್ ನಟನೆಯ ಸೂಪರ್ ಹಿಟ್ ಚಿತ್ರ ‘ಕಲಾಸಿಪಾಳ್ಯ’ ಮರು ಬಿಡುಗಡೆ ಆಗುತ್ತೆ ಅನ್ನೋ ಸುದ್ದಿ ಬಂದ ತಕ್ಷಣ ಫ್ಯಾನ್ಸ್ ನೋಡಲು ಕಾತರದಿಂದಿದ್ದರು. ಇಪ್ಪತ್ತೊಂದು ವರ್ಷಗಳ ಬಳಿಕ ಈ ಚಿತ್ರ ಮತ್ತೆ ರೀ ರಿಲೀಸ್ ಆಗುತ್ತಿದೆ. ಅಭಿಮಾನಿಗಳಂತೂ ಸಿನಿಮಾ ನೋಡಿ ಫುಲ್ ಖುಷಿಯಾಗಿದ್ದಾರೆ. ಅಂದಹಾಗೆ, ಇಂದು ಬೆಳಗ್ಗೆ ಆರು ಗಂಟೆಗೆ ಮಾಗಡಿ ರಸ್ತೆಯ ಪ್ರಸನ್ನ ಚಿತ್ರಮಂದಿರದಲ್ಲಿ ಸಿನಿಮಾ ನೋಡಿ ಅಭಿಮಾನಿಗಳು ಕುಣಿದು ಕುಪ್ಪಳಿಸಿದ್ದಾರೆ. ಚಿತ್ರಮಂದಿರದ ಆವರಣದಲ್ಲಿ ನಿಜಕ್ಕೂ ಹಬ್ಬದ ವಾತಾವರಣವೇ ನಿರ್ಮಾಣವಾಗಿತ್ತು.

ದೊಡ್ಡ ಕಟೌಟ್ ನಿಲ್ಲಿಸಿ, ಪಟಾಕಿ ಸಿಡಿಸಿ, ಜೈಕಾರ ಹಾಕಿ ‘ಕಲಾಸಿಪಾಳ್ಯ’ದಲ್ಲಿ ಮಿಂಚಿದ ತಮ್ಮ ಪ್ರೀತಿಯ ಹೀರೋನನ್ನು ಅಭಿಮಾನಿಗಳು ಪ್ರೀತಿಯಿಂದ ಸ್ವಾಗತಿಸಿದ್ದಾರೆ. ಚಿತ್ರಮಂದಿರದಲ್ಲಿ ಶೋ ಶುರುವಾಗುತ್ತಿದ್ದಂತೆ ಸ್ಕ್ರೀನ್ ಮುಂದೆ ಕಾಣಿಸಿಕೊಂಡು ಅಭಿಮಾನಿಗಳು ಕುಣಿದು, ಕೇಕೆ, ಶಿಳ್ಳೆ ಹಾಕಿ ಸಂಭ್ರಮಿಸಿದ್ದಾರೆ. ಚಿತ್ರಮಂದಿರದಲ್ಲಿ ಜಾತ್ರೆಯ ವಾತಾವರಣ ಏರ್ಪಟ್ಟಿತ್ತು. ಅಭಿಮಾನಿಗಳ ಸಂಭ್ರಮವಂತೂ ಹೇಳತೀರದು. ಅವರ ಮೆಚ್ಚಿನ ನಾಯಕ ದರ್ಶನ್ ಸದ್ಯ ಜೈಲಲ್ಲಿದ್ದಾರೆ. ಆದರೆ, ಅಭಿಮಾನಿಗಳು, ತಮ್ಮ ಹೀರೋ ಸಿನಿಮಾವನ್ನು ಮೆಚ್ಚಿ ಕೊಂಡಾಡಿದ್ದಾರೆ.

ಕಲಾಸಿಪಾಳ್ಯ ಸಿನಿಮಾ ರೀ ರಿಲೀಸ್ ಆಗುವ ಬಗ್ಗೆ ಹಚ್ಚು ಪ್ರಚಾರ ಇರಲಿಲ್ಲ. ಆದರೆ, ದರ್ಶನ್ ಫ್ಯಾನ್ಸ್ ಮಾತ್ರ ಭವ್ಯವಾಗಿ ಸಿನಿಮಾವನ್ನು ಸ್ವಾಗತಿಸಿದ್ದಾರೆ. ಜೆಪಿ ನಗರದ ಸಿದ್ಧೇಶ್ವರ, ಕೆಜಿ ರಸ್ತೆಯ ನರ್ತಕಿ ಚಿತ್ರಮಂದಿರಗಳಲ್ಲಿ ಕೂಡ ಸಂಭ್ರಮ ಮನೆ ಮಾಡಿತ್ತು. ಇನ್ನು, ರಾಜ್ಯದ ಕೆಲ ಚಿತ್ರಮಂದಿರಗಳಲ್ಲಿ ಈ ವೀಕೆಂಡ್ ಸಿನಿಮಾ ಪ್ರದರ್ಶನವಾಗುತ್ತಿದೆ. ಈ ಹಿಂದೆ ಕೂಡ ದರ್ಶನ್ ನಟನೆಯ ಹಿಟ್ ಸಿನಿಮಾಗಳು ಮರುಬಿಡುಗಡೆ ಆಗಿ ಸದ್ದು ಮಾಡಿದ್ದವು. ಅದರಲ್ಲೂ ಮಾಗಡಿ ರಸ್ತೆಯ ಪ್ರಸನ್ನ ಚಿತ್ರಮಂದಿರದಲ್ಲಿ ಯಾವುದೇ ದರ್ಶನ್ ಸಿನಿಮಾ ಬಿಡುಗಡೆ ಆದ್ರು ಸೆಲೆಬ್ರೇಷನ್ ಜೋರಾಗಿ ಇರುತ್ತದೆ. ‘ಕಲಾಸಿಪಾಳ್ಯ’ ಮರು ಬಿಡುಗಡೆಗೂ ಸಖತ್ ರೆಸ್ಪಾನ್ಸ್ ಸಿಕ್ಕಿದೆ.

2004 ರಲ್ಲಿ ಓಂ ಪ್ರಕಾಶ್ ರಾವ್ ‘ಕಲಾಸಿಪಾಳ್ಯ’ ಸಿನಿಮಾ ನಿರ್ದೇಶಿಸಿದ್ದರು. ದರ್ಶನ್ ಗೆ ಜೋಡಿಯಾಗಿ ರಕ್ಷಿತಾ ಕಾಣಿಸಿಕೊಂಡಿದ್ದರು. ಇವರಿಬ್ಬರ ಕಾಂಬಿನೇಷನ್ ನ ಮೊದಲ ಸಿನಿಮಾ ಇದು. ‘ಕಲಾಸಿಪಾಳ್ಯ’ದ ಲೋಕಲ್ ಹುಡುಗ ಕೆಂಚನ ಪಾತ್ರದಲ್ಲಿ ದರ್ಶನ್ ಅಭಿಮಾನಿಗಳ ಮನ ಗೆದ್ದಿದ್ದರು. ಕೋಟಿ ರಾಮು ಸಿನಿಮಾ ನಿರ್ಮಾಣ ಮಾಡಿ ದೊಡ್ಡ ಸಕ್ಸಸ್ ಕಂಡರು.






