ಅದೆಷ್ಟೇ ಜಾಗೃತಿ ಮೂಡಿಸಿದರೂ, ಎಷ್ಟೇ ಹೇಳಿದರು ಬೆಂಗಳೂರಿನಲ್ಲಿ ಫ್ಲೆಕ್ಸ್, ಬ್ಯಾನರ್ ರಾರಾಜಿಸುತ್ತಲೇ ಇರುತ್ತೆ. ಇದಕ್ಕೊಂದು ಕಡಿವಾಣ ಹಾಕೋದಕ್ಕೆ ಬಿಬಿಎಂಪಿ ಅಧಿಕಾರಿಗಳಿಗೆ ಇದುವರೆಗೆ ಸಾಧ್ಯ ಆಗಿರಲಿಲ್ಲ. ಆದ್ರೀಗ ಬಿಬಿಎಂಪಿ ಮಾತಿಗೆ ಬಗ್ಗದವನಿಗೆ ದೊಣ್ಣೆಯ ಏಟು ಎಂಬಂತೆ ಬ್ಯಾನರ್, ಫ್ಲೆಕ್ಸ್ ಹಾವಳಿಯ ಬುಡಕ್ಕೆ ಕೈ ಹಾಕಿದೆ. ಅಷ್ಟಕ್ಕೂ ಈ ಬಾರಿ ಬಿಬಿಎಂಪಿ ಮಾಡಿದ್ದೇನು..? ಅನ್ನೋದೇ ಇಲ್ಲಿನ ಇಂಟ್ರೆಸ್ಟಿಂಗ್ ವಿಚಾರ.
ಮಾತಿಗೆ ಬಗ್ಗದವರಿಗೆ ದೊಣ್ಣೆ ಏಟು ಎಂಬ ಗಾದೆ ಮಾತು ಹಿಡಿದ ಪಾಲಿಕೆ ಅಧಿಕಾರಿಗಳು
ಬೆಂಗಳೂರಿನ ಅಂದಕ್ಕೆ ಕುತ್ತು ಬರುವಂತೆ ಅನಧಿಕೃತವಾಗಿ ಫ್ಲೆಕ್ಸ್ ಬ್ಯಾನರ್ ಅನ್ನು ಕಂಡಕಂಡಲ್ಲಿ ಅಳವಡಿಕೆ ಮಾಡುತ್ತಾರೆ. ಈಗಾಗಲೇ ಈ ಬಗ್ಗೆ ಹೈ ಕೋರ್ಟ್ ಕೂಡ ಬಿಬಿಎಂಪಿ ನಿಯಮದ ಅಡಿಯಲ್ಲಿ ಬ್ಯಾನರ್, ಫ್ಲೆಕ್ಸ್, ಕಟೌಟ್ ಗಳನ್ನು ಹಾಕಬಾರದು ಎಂದು ಸ್ಪಷ್ಟವಾಗಿ ಹೇಳಿದೆ. ಇದು ಬೃಹತ್ ಬೆಂಗಳೂರಿನ ಅಂದವನ್ನು ಕೆಡಿಸುತ್ತದೆ. ಆದರೆ ಈ ಬಗ್ಗೆ ಎಷ್ಟೇ ಹೇಳಿದರೂ ಜನರು ಮಾತ್ರ ಫ್ಲೆಕ್ಸ್, ಬ್ಯಾನರ್, ಕಟೌಟ್ ಗಳನ್ನು ಹಾಕುತ್ತಲೇ ಇದ್ದರು ಆದರೀಗ ಮತ್ತೊಂದು ಹಂತಕ್ಕೆ ಬಿಬಿಎಂಪಿ ಹಾಗೂ ಫ್ಲೆಕ್ಸ್ ಬ್ಯಾನರ್ ಕಟ್ಟುವವರ ನಡುವಿನ ಸಮರ ಹೋಗಿದೆ. ಮಾತಿಗೆ ಬಗ್ಗದವರಿಗೆ ದೊಣ್ಣೆ ಏಟು ಎಂಬ ಗಾದೆ ಮಾತಿನಂತೆ ಪಾಲಿಕೆ ಅಧಿಕಾರಿಗಳು ಅನಧಿಕೃತ ಪ್ಲೆಕ್ಸ್ ಬ್ಯಾನರ್ ಗಳನ್ನು ಬುಡಸಮೇತ ಕಿತ್ತುಹಾಕಲು ಹೊರಟಿದ್ದಾರೆ.
ಫ್ಲೆಕ್ಸ್, ಬ್ಯಾನರ್ ಅಳವಡಿಸುವವರಲ್ಲ.. ಈ ಬಾರಿ ಬಿಬಿಎಂಪಿ ಅಧಿಕಾರಿಗಳ ಟಾರ್ಗೆಟ್ಟೇ ಬೇರೆ
ಅನಧಿಕೃತ ಫ್ಲೆಕ್ಸ್ ಬ್ಯಾನರ್ ವಿರುದ್ದ ಸಮರ ಸಾರಿದ ಪಾಲಿಕೆ ಅಧಿಕಾರಿಗಳ ಹೊಸ ವರಸೆ ಇದು. ಫ್ಲೆಕ್ಸ್ , ಬ್ಯಾನರ್ ತಯಾರಿಕಾ ಘಟಕಗಳ ಮೇಲೆಯೇ ಪಾಲಿಕೆ ಅಧಿಕಾರಿಗಳು ಈ ಬಾರಿ ಗುರಿಯಿಟ್ಟಿದ್ದಾರೆ. ಒಂದೇ ವಾರದಲ್ಲಿ 2500ಕ್ಕೂ ಹೆಚ್ಚು ಪ್ಲೆಕ್ಸ್, ಬ್ಯಾನರ್ ತೆರವಾಗಿದ್ದಲ್ಲದೆ, 20ಕ್ಕೂ ಹೆಚ್ಚು ದೂರು ದಾಖಲಾಗಿದೆ. ಬೆಂಗಳೂರಲ್ಲಿ ಸಂಪೂರ್ಣವಾಗಿ ಅನಧಿಕೃತ ಪ್ಲೆಕ್ಸ್ ಬ್ಯಾನರ್ ತೆರವು ಕಾರ್ಯಾಚರಣೆಗೆಂದೇ ಪಾಲಿಕೆ ತಂಡ ರೆಡಿ ಮಾಡಿದೆ. ಪ್ರತಿ ವಾರ್ಡ್ ನಲ್ಲೂ ರೆವಿನ್ಯೂ ಇನ್ಸ್ಪೆಕ್ಟರ್ ನೇತೃತ್ವದಲ್ಲಿ ವಿಶೇಷ ತಂಡ ರಚನೆ ಮಾಡಲಾಗಿದೆ. ಈ ತಂಡ ನಿತ್ಯ ತೆರವು ಕಾರ್ಯಾಚರಣೆ ಮಾಡಲಿದ್ದು, ಫ್ಲೆಕ್ಸ್, ಬ್ಯಾನರ್ ಮುದ್ರಿಸುವ ಅಂಗಡಿಗಳ ಮೇಲೂ ಕಣ್ಣಿಟ್ಟಿದೆ. ಈಗಾಗಲೇ ನಗರದ ಕಾಟನ್ ಪೇಟೆ, ನ್ಯೂತರಗುಪೇಟೆ, ಚಿಕ್ಕ ಪೇಟೆ ಭಾಗದಲ್ಲಿ ಫ್ಲೆಕ್ಸ್, ಬ್ಯಾನರ್ ಮುದ್ರಣಾಲಯಕ್ಕೆ ಬೀಗ ಹಾಕಲಾಗಿದೆ. ಇದೇ ಮಾದರಿಯಲ್ಲಿ ಬೆಂಗಳೂರಿನ ಎಲ್ಲಾ ವಲಯಗಳಲ್ಲೂ ಪ್ಲೆಕ್ಸ್ ಪ್ರಿಂಟಿಂಗ್ ಪ್ರೆಸ್ ಮೇಲೆಯೇ ಕಣ್ಣಿಡಲು ಬಿಬಿಎಂಪಿ ತೀರ್ಮಾನಿಸಿದೆ ಎಂದು ಬಿಬಿಎಂಪಿ ಸ್ಪೆಷಲ್ ಕಮಿಷನರ್ ದೀಪಕ್ ಹೇಳಿದ್ದಾರೆ.
ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ನಿಲ್ಲದ ಅನಧಿಕೃತ ಫ್ಲೆಕ್ಸ್ ಬ್ಯಾನರ್ ಹಾವಳಿ
ಒಟ್ಟಾರೆ ಬೆಂಗಳೂರು ನಗರದಲ್ಲಿ ಹಾಕಲಾಗುವ ಫ್ಲೆಕ್ಸ್, ಬ್ಯಾನರ್, ಕಟೌಟ್ ಗಳ ಸಂಖ್ಯೆಯೇ ಅಪರಿಮಿತ. ಎಲ್ಲೇ ಕಾಣ್ಣಾಯಿಸಿದರೂ ಬ್ಯಾನರ್ ಗಳೇ ನೇತಾಡುತ್ತಿರುತ್ತವೆ. ಇದನ್ನು ಬಿಬಿಎಂಪಿ ಬ್ಯಾನ್ ಮಾಡಿದ್ದರೂ ಕೂಡ ಜನರು, ರಾಜಕಾರಣಿಗಳು ರಾಜಾರೋಷವಾಗಿ ಹಾಕಿ ತಿರುಗಾಡುತ್ತಾರೆ. ಆದರೀಗ ಇಂಥಾ ಫ್ಲೆಕ್ಸ್, ಬ್ಯಾನರ್, ಕಟೌಟ್ ಗಳನ್ನು ತಯಾರಿಸಿ ಕೊಡುವ ಪ್ರಿಂಟಿಂಗ್ ಪ್ರೆಸ್ ಗಳ ಮೇಲೆಯೇ ಬಿಬಿಎಂಪಿ ಅಧಿಕಾರಿಗಳ ಕಣ್ಣು ಬಿದ್ದಿದ್ದೆ. ಆದರೆ ಇದು ಎಷ್ಟರ ಮಟ್ಟಿಗೆ ಫ್ಲೆಕ್ಸ್ ಮುಕ್ತ ಬೆಂಗಳೂರು ಎಂಬ ಕನಸನ್ನು ನನಸು ಮಾಡುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ.