ಮಹಾರಾಷ್ಟ್ರದಲ್ಲಿ ಶಿವ ಸೇನೆಯನ್ನು ಮುಗಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂಬ ಆರೋಪಗಳ ಹಿನ್ನಲೆಯಲ್ಲಿ ಶಿವಸೇನೆಯ ವರಿಷ್ಠ ಕಮಲ ಪಕ್ಷದ ಮುಖಂಡರಿಗೆ ತಿರುಗೇಟು ನೀಡಿದ್ದು, ಇದುವರೆಗ ಜಲ್ಗಾಂವ್ ನಲ್ಲಿ ‘ಗುಲಾಬಿ’ಯನ್ನಷ್ಟೇ ನೋಡಿದೆ, ಆದ್ರೆ ಇನ್ನು ಮುಂದೆ ಅಲ್ಲಿ ಶಿವ ಸೈನಿಕರ ಮುಳ್ಳು ಚುಚ್ಚಲಿದೆ ಎಂದು ಹೇಳಿದ್ದಾರೆ.
ಇದೀಗ ಶಿಂಧೆ ಬಣದಲ್ಲಿರುವ ಶಿವಸೇನೆಯ ಬಂಡಾಯ ನಾಯಕ ಮತ್ತು ಮಾಜಿ ಸಚಿವ ಗುಲಾಬ್ ರಾವ್ ಪಾಟೀಲ್ ಅವರನ್ನು ಉಲ್ಲೇಖಿಸಿ ಉದ್ಭವ್ ಅವರು ವಶಿಮ್ ಮತ್ತು ಜಲ್ಗಾಂವ್ ಪ್ರದೇಶದ ಪಕ್ಷದ ಉಸ್ತುವಾರಿಗಳೊಂದಿಗೆ ನಡೆಸಿದ ಸಭೆಯ ಬಳಿಕ ಉದ್ಧವ್ ಈ ರೀತಿಯಾಗಿ ಪ್ರತಿಕ್ರಿಯಿಸಿದ್ದಾರೆ.
‘ನಾವೆಲ್ಲರೂ ಅವರನ್ನು ನಿಯತ್ತು ಮತ್ತು ಪ್ರೀತಿಯೊಂದಿಗೆ ಅವರೆಲ್ಲರನ್ನು ನೋಡಿಕೊಂಡೆವು, ಆದ್ರೆ ಮನೆ ಮಕ್ಕಳೇ ದ್ರೋಹಿಗಳಾದರು. ಹಾವಿಗೆ ಎಷ್ಟೇ ಹಾಲನ್ನೆರದರೂ ಅದು ಕಚ್ಚಬೇಕೆಂದರೆ ಕಚ್ಚದೇ ಬಿಡುವುದಿಲ್ಲ. ವಾಶಿಮ್ ನಲ್ಲಿ ನಮಗೆ ಹಲವು ಸವಾಲುಗಳು ಎದುರಾಯ್ತು, ಆದ್ರೂ ನಾವು ಅವರ ಕೈಬಿಟ್ಟಿರ್ಲಿಲ್ಲ’ ಎಂದು ಉದ್ಧವ್ ಅವರು ಈ ಸಭೆಯಲ್ಲಿ ಹೇಳಿರುವುದನ್ನು ‘ಟೈಮ್ಸ್ ಆಫ್ ಇಂಡಿಯಾ’ ವರದಿ ಮಾಡಿದೆ.

ಇನ್ನು, ಸಂಜಯ್ ರಾವತ್ ಅವರ ಮೇಲಿ ಇ.ಡಿ. ದಾಳಿಯೂ ಸಹ ಪಕ್ಷವನ್ನು ಮುಗಿಸುವ ಸಂಚಿನ ಒಂದು ಭಾಗವಾಗಿದೆ ಎಂದು ಉದ್ಧವ್ ಇದೇ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ್ದಾರೆ. ಇ.ಡಿ. ಮೇಲಿನ ಭಯದಿಂದ ಸೇನೆಯ ಯಾವುದೇ ಸಂಸದರು ಅಥವಾ ಶಾಸಕರು ತಮ್ಮ ಬಣಕ್ಕೆ ಬರಬಾರದು ಎಂಬ ಮುಖ್ಯಮಂತ್ರಿ ಏಕನಾಥ ಶಿಂಧೆ ಅವರು ಹೇಳಿಕೆಗೆ ಪಕ್ಷದ ಮುಖವಾಣಿ ‘ಸಾಮ್ನಾ’ದ ಸಂಪಾದಕೀಯದಲ್ಲಿ ಖಡಕ್ ಪ್ರತಿಕ್ರಿಯೆ ನೀಡಿರುವ ಉದ್ಧವ್ ಅವರು, ‘ಒಂದುವೇಳೆ ಶಿವಸೇನೆಯ ಬಂಡಾಯ ಸಂಸದರು ಮತ್ತು ಶಾಸಕರು ಈ ಮಾತನ್ನು ಗಂಭೀರವಾಗಿ ಪರಿಗಣಿಸಿದಲ್ಲಿ, ಶಿಂಧೆ ಶಿಬಿರ ಖಾಲಿಯಾಗಲಿದೆ ಮತ್ತು ‘ಶಿಂಧೆಶಾಹಿ’ ಅಂತ್ಯಗೊಳ್ಳಲಿದೆ ಎಂದು ಬರೆದುಕೊಂಡಿದ್ದಾರೆ. ಶಿಂಧೆ ಬಣದಲ್ಲಿರುವ ಅರ್ಧದಷ್ಟು ಜನ ಇ.ಡಿ. ಭಯದ ಕಾರಣದಿಂದಲೇ ಶಿಂಧೆ ಬಣದ ದಾರಿ ತುಳಿದಿದ್ದಾರೆ ಎಂಬ ವಿಚಾರ ಲೋಕಕ್ಕೇ ತಿಳಿದಿದೆ ಎಂದೂ ಸಹ ಸಾಮ್ನಾ ಸಂಪಾದಕೀಯದಲ್ಲಿ ಉಲ್ಲೇಖಿಸಲಾಗಿದೆ.






