ಭಾರತದ ಕುಸ್ತಿಪಟುಗಳ ಅಮೋಘ ಪ್ರದರ್ಶನದಿಂದ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಕುಸ್ತಿಯಲ್ಲಿ ಒಂದೇ ದಿನ 3 ಚಿನ್ನ ಹಾಗೂ 1 ಬೆಳ್ಳಿ ಪದಕಗಳನ್ನು ಕೊಳ್ಳೆ ಹೊಡೆದಿದ್ದಾರೆ.
ಇಂಗ್ಲೆಂಡ್ ನ ಬರ್ಮಿಂಗ್ ಹ್ಯಾಂನಲ್ಲಿ ಶುಕ್ರವಾರ ನಡೆದ ಫೈನಲ್ ಗಳಲ್ಲಿ ಭಜರಂಗ್ ಪೂನಿಯಾ ಪುರುಷರ 65 ಕೆಜಿ ವಿಭಾಗ, ಸಾಕ್ಷಿ ಮಲಿಕ್ ಮಹಿಳೆಯರ 62 ಕೆಜಿ ಹಾಗೂ ದೀಪಕ್ ಪೂನಿಯಾ ಪುರುಷರ 86 ಕೆಜಿ ವಿಭಾಗದಲ್ಲಿ ಚಿನ್ನದ ಪದಕ ಗೆದ್ದರೆ, ಅನ್ಸು ಮಲಿಕ್ ವನಿತೆಯರ 57 ಕೆಜಿ ವಿಭಾಗದ ಫ್ರೀಸ್ಟೈಲ್ ಬೆಳ್ಳಿ ಪದಕ ಗೆದ್ದುಕೊಂಡರು.
ಸಾಕ್ಷಿ ಮಲಿಕ್ ಮಹಿಳೆಯರ 62 ಕೆಜಿ ವಿಭಾಗದಲ್ಲಿ ಚಿನ್ನದ ಪದಕ ಗೆದ್ದ ಸಾಧನೆ ಮಾಡಿದ್ದಾರೆ. ಭಜರಂಗ್ ಪೂನಿಯಾ ಪುರುಷರ 65 ಕೆಜಿ ವಿಭಾಗದಲ್ಲಿ ಚಿನ್ನದ ಪದಕ ಜಯಿಸಿದ ಸಾಧನೆ ಮಾಡಿದರು.
ಹಾಲಿ ಚಾಂಪಿಯನ್ ಭಜರಂಗ್ ಪೂನಿಯಾ 65 ಕೆಜಿ ವಿಭಾಗದಲ್ಲಿ ಕೆನಡಾದ ಲಚ್ಲನ್ ಮೆಕ್ ನೀಲ್ ಅವರನ್ನು ಮಣಿಸಿ ಚಿನ್ನದ ಪದಕ ಗೆದ್ದ ಸಾಧನೆ ಮಾಡಿದರೆ, ಸಾಕ್ಷಿ ಮಲಿಕ್ 62 ಕೆಜಿ ವಿಭಾಗದ ಫೈನಲ್ ನಲ್ಲಿ ಕೆನಡಾದ ಆನಾ ಗೊಡಿನೆಜ್ ಗೊನ್ಜಾಲೆಜ್ ವಿರುದ್ಧ ರೋಚಕ ಜಯ ಸಾಧಿಸಿದರು.\

ಪುರುಷರ 86 ಕೆಜಿ ವಿಭಾಗದ ಫೈನಲ್ ನಲ್ಲಿ ದೀಪಕ್ ಪೂನಿಯಾ ಪಾಕಿಸ್ತಾನದ ಮೊಹಮದ್ ಇನಾಮ್ ವಿರುದ್ಧ ರೋಚಕ ಜಯ ಸಾಧಿಸಿ ಚಿನ್ನದ ಪದಕಕ್ಕೆ ಕೊರಳೊಡ್ಡಿದರು.
ಕಾಮನ್ ವೆಲ್ತ್: ಕುಸ್ತಿಯಲ್ಲಿ ಬೆಳ್ಳಿ ಗೆದ್ದ ಅನ್ಸು ಮಲಿಕ್!
ಭಾರತದ ಅನ್ಸು ಮಲಿಕ್ ಫೈನಲ್ ನಲ್ಲಿ ಸೋಲುವ ಮೂಲಕ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕಕ್ಕೆ ತೃಪ್ತರಾಗಿದ್ದಾರೆ.
ಶುಕ್ರವಾರ ನಡೆದ ವನಿತೆಯರ 57 ಕೆಜಿ ವಿಭಾಗದ ಫ್ರೀಸ್ಟೈಲ್ ಕುಸ್ತಿಯಲ್ಲಿ ನೈಜಿರಿಯಾದ ಒಡುನಾಯೊ ಫೊಲೊಸಡೆ ಅಡೆಕುರಿಯೊ ವಿರುದ್ಧ 4-6 ಅಂಕಗಳಿಂದ ಸೋಲುಂಡರು.
ಒಂದು ಹಂತದಲ್ಲಿ ಅನ್ಸು ಮಲಿಕ್ -4ರಿಂದ ಹಿನ್ನಡೆ ಅನುಭವಿಸಿದ್ದರು. ಆದರೆ ಭರ್ಜರಿಯಾಗಿ ತಿರುಗೇಟು ನೀಡಿದರೂ ಆರಂಭದ ಹಿನ್ನಡೆಯಿಂದಾಗಿ ಕೊನೆಯಲ್ಲಿ ಕೇವಲ 2 ಅಂಕಗಳ ಅಂತರದಿಂದ ಸೋಲಬೇಕಾಯಿತು.
ಈ ಮೂಲಕ ಭಾರತ ಕಾಮನ್ ವೆಲ್ತ್ ನಲ್ಲಿ ಒಟ್ಟಾರೆ 9 ಚಿನ್ನದ ಪದಕ ಗೆದ್ದ ಸಾಧನೆ ಮಾಡಿತು. 8 ಬೆಳ್ಳಿ, 7 ಕಂಚು ಸೇರಿದಂತೆ 21 ಪದಕ ಗೆದ್ದು 7ನೇ ಸ್ಥಾನದಲ್ಲಿದೆ. ಅಲ್ಲದೇ ಇನ್ನೂ ಕುಸ್ತಿಯ ಎರಡು ವಿಭಾಗಗಳಲ್ಲಿ ಭಾರತದ ಸ್ಪರ್ಧಿಗಳು ಫೈನಲ್ ಪ್ರವೇಶಿಸಿದ್ದು ಎರಡು ಪದಕ ಖಚಿತವಾಗಿದ್ದು, ಯಾವ ಬಣ್ಣದ್ದು ಎಂಬುದು ತಿಳಿಯಬೇಕಿದೆ.