—–ನಾ ದಿವಾಕರ—–
ಚಿಕಿತ್ಸಕ ಗುಣವಿಲ್ಲದ ಸಮಾಜದಲ್ಲಿ ಮಹಿಳಾ ದೌರ್ಜನ್ಯಗಳನ್ನು ತಡೆಯುವುದಾದರೂ ಹೇಗೆ ?
ನಾಗರಿಕತೆಯನ್ನು ರೂಢಿಸಿಕೊಂಡಿರುವ ಒಂದು ಆಧುನಿಕ ಸಮಾಜದಲ್ಲಿ ಕನಿಷ್ಠ ಇರಬೇಕಾದ್ದು ಮನುಷ್ಯರ ನಡುವೆ ಒಂದು ಪ್ರೀತಿ ಬಾಂಧವ್ಯದ ಸೂಕ್ಷ್ಮ ಸಂವೇದನೆ ಮತ್ತು ಪರಸ್ಪರ ಗೌರವಾದರದಿಂದ ಕಾಣುವ ಔದಾತ್ಯ. ಈ ಗುಣಗಳನ್ನು ಮೈಗೂಡಿಸಿಕೊಳ್ಳದ ಯಾವುದೇ ಸಮಾಜವಾದರೂ ಕಾಲಕಾಲಕ್ಕೆ ಮನುಜ ಸೂಕ್ಷ್ಮತೆಯನ್ನು ಕದಡುವಂತಹ ಘಟನೆಗಳಿಗೆ ಸಾಕ್ಷಿಯಾಗುತ್ತಲೇ ಇರುತ್ತದೆ. ʼ ಮಾನವೀಯತೆ ʼ ಎಂಬ ಉದಾತ್ತ ಪರಿಕಲ್ಪನೆ ಸಮಾಜದ ಎಲ್ಲ ಸ್ತರಗಳಲ್ಲಿ, ವಿಭಿನ್ನ ಆಯಾಮಗಳಲ್ಲಿ ವ್ಯಕ್ತವಾಗುತ್ತಲೇ ಇದ್ದರೂ, ಇದಕ್ಕೆ ಸಮಾನಾಂತರವಾಗಿ ಸಾಮಾಜಿಕ-ಸಾಂಸ್ಕೃತಿಕ ನೆಲೆಗಳಲ್ಲಿ ಬೆಳೆದುಬರುವ ʼ ಅಮಾನುಷ ʼ ಲಕ್ಷಣಗಳೂ ಸಹ ಸಮಾಜದ ವಿವಿಧ ವರ್ಗಗಳಲ್ಲಿ ಮನೆಮಾಡಿರುತ್ತವೆ. ಸಹಜೀವಿಯನ್ನು ನಿಕೃಷ್ಟವಾಗಿ ನೋಡುವ ಅಥವಾ ದೌರ್ಜನ್ಯಕ್ಕೊಳಗಾಗಬಹುದಾದ ಜೀವಿಯಾಗಿ ನೋಡುವ ಒಂದು ಮನಸ್ಥಿತಿಯನ್ನು ಈ ʼ ಅಮಾನುಷ ʼ ಲಕ್ಷಣಗಳು ಪೋಷಿಸುತ್ತಲೇ ಬರುತ್ತವೆ. ಭಾರತದ ಸಂದರ್ಭದಲ್ಲಿ ಈ ನಿಷ್ಕಾರುಣ್ಯ ಅಮಾನುಷತೆಯನ್ನು ಮೂರು ನೆಲೆಗಳಲ್ಲಿ ಗುರುತಿಸಬಹುದು.
ಮೊದಲನೆಯದು ಶತಮಾನಗಳಿಂದ ಬೇರೂರಿರುವ ಜಾತಿ ವ್ಯವಸ್ಥೆಯಲ್ಲಿ ಮತ್ತು ಅದರೊಳಗಿನ ಶ್ರೇಷ್ಠ-ಕನಿಷ್ಠ-ಬಹಿಷ್ಕೃತ ಎಂಬ ವಿಂಗಡನೆಗಳಲ್ಲಿ. ಇಲ್ಲಿ ಜಾತಿಯ ಪರಿಕಲ್ಪನೆಯೇ ಅಪರಾಧಗಳನ್ನು ನಿರ್ವಚಿಸುತ್ತದೆ. ಕೆಳಸ್ತರದ ಜಾತಿಗಳು ಎದುರಿಸುವ ದೌರ್ಜನ್ಯ, ತಾರತಮ್ಯ, ಅತ್ಯಾಚಾರ, ಅಸ್ಪೃಶ್ಯತೆ ಮುಂತಾದುವನ್ನು ಸಾಂಸ್ಥಿಕವಾಗಿ ಸಮರ್ಥಿಸುವ ಅಥವಾ ಕೆಲವೊಮ್ಮೆ ಹೇರುವ ಒಂದು ಸಾಮಾಜಿಕ-ಸಾಂಸ್ಕೃತಿಕ ವಾತಾವರಣವನ್ನು ಸಹನೀಯಗೊಳಿಸಲಾಗುತ್ತದೆ. ದೌರ್ಜನ್ಯಕ್ಕೀಡಾದವರ ನೋವು, ಸಂಕಟ ಅಥವಾ ಯಾತನೆಗಳು ಶಮನಗೊಳಿಸಬಹುದಾದ ವಿದ್ಯಮಾನಗಳಾಗುತ್ತವೆಯೇ ಹೊರತು, ಈ ದುರವಸ್ಥೆಯ ಮೂಲ ಕಾರಣಗಳನ್ನು ಶೋಧಿಸಿ ಕೊನೆಗೊಳಿಸುವ ಪ್ರಯತ್ನಗಳು ನಡೆಯುವುದಿಲ್ಲ. ಮೆಲ್ನೋಟಕ್ಕೆ ಕಾಣುವ ಅಂತಹ ಸಪ್ರಯತ್ನಗಳನ್ನೂ ಸಹ ವಕ್ರದೃಷ್ಟಿಯಿಂದಲೇ ನೋಡುವ ಸಾಂಸ್ಕೃತಿಕ ಜಗತ್ತನ್ನೂ ಸಹ ಪೋಷಿಸಿಕೊಂಡು ಬರಲಾಗುತ್ತದೆ.
ಎರಡನೆಯದು, ಈ ಅಮಾನುಷ ಲಕ್ಷಣಗಳಿಗೆ ಸಾಮಾಜಿಕ ಅಂತಸ್ತು, ಸಾಂಸ್ಕೃತಿಕ ಔನ್ನತ್ಯ ಮತ್ತು ಆರ್ಥಿಕ ಸ್ಥಾನಮಾನಗಳನ್ನು ಆರೋಪಿಸುವ ಮೂಲಕ, ಈ ನೆಲೆಗಳಲ್ಲಿ ವಂಚನೆಗೊಳಗಾದ ತಳಸಮಾಜದ ಮನುಷ್ಯರನ್ನು ʼದುರ್ಬಲರು ʼ ಅಥವಾ vulnerable ಎಂದು ಪರಿಗಣಿಸಲಾಗುತ್ತದೆ. ಬಹುಮಟ್ಟಿಗೆ ಶ್ರಮಿಕ ವರ್ಗಗಳನ್ನೇ ಪ್ರತಿನಿಧಿಸುವ ಈ ಒಂದು ಕೆಳಸ್ತರದ ಸಮಾಜದಲ್ಲಿ ಜಾತಿ-ಧರ್ಮ-ಪಂಗಡಗಳ ಚೌಕಟ್ಟಿನಿಂದಾಚೆಗೂ ಗುರುತಿಸಬಹುದಾದ ವಿದ್ಯಮಾನ ಎಂದರೆ , ಇಲ್ಲಿ ಮೇಲ್‌ಸ್ತರದ ಗಣ್ಯ ಸಮಾಜದಿಂದ ಸಂಭವಿಸುವ ಎಂತಹುದೇ ಅಮಾನುಷ ಕೃತ್ಯಗಳಾದರೂ ಅದನ್ನು ಒಂದೋ ನಿರ್ಲಕ್ಷಿಸಲಾಗುತ್ತದೆ ಅಥವಾ ಕೆಲವೊಮ್ಮೆ ಸಮರ್ಥಿಸಲಾಗುತ್ತದೆ. ಇನ್ನೂ ಕ್ರೂರ ಎಂದರೆ ಇಲ್ಲಿ ಹಲ್ಲೆಗೊಳಗಾಗುವವರೇ ತಪ್ಪಿತಸ್ಥರಾಗಿಬಿಡುತ್ತಾರೆ. ಆಕ್ರಮಣಕಾರರು ಅಥವಾ ಹಲ್ಲೆಕೋರರು ಮೇಲ್‌ಸ್ತರದ ಸಮಾಜದ ಯಾವುದೋ ಒಂದು ಚೌಕಟ್ಟಿನೊಳಗೆ ರಕ್ಷಿಸಲ್ಪಡುತ್ತಾರೆ.
ಮೂರನೆಯ, ಅತ್ಯಂತ ಮುಖ್ಯ ಅಂಶ ಎಂದರೆ ಈ ಅಮಾನುಷ ಚಟುವಟಿಕೆಗಳಿಗೆ ತುತ್ತಾಗುವುದು ಸಾಮಾನ್ಯವಾಗಿ ಮಹಿಳೆಯೇ ಆಗಿರುತ್ತಾಳೆ. ಜಾತಿ-ಮತ-ಧರ್ಮ-ಸಾಮಾಜಿಕ ಸ್ಥಾನಮಾನಗಳ ಚೌಕಟ್ಟಿನ ಒಳಹೊಕ್ಕು ನೋಡಿದರೂ ಇಲ್ಲಿ ಕಾಣುವ ಸಮಾನ ಎಳೆ ಎಂದರೆ ಮಹಿಳೆ ಅಥವಾ ಮಹಿಳಾ ಸಂಕುಲ ನಿರಂತರ ದೌರ್ಜನ್ಯಕ್ಕೀಡಾಗುತ್ತಿರುತ್ತದೆ. ಕೌಟುಂಬಿಕ, ವೈವಾಹಿಕ, ಸಾಮಾಜಿಕ, ಸಾಂಸ್ಕೃತಿಕ, ಸಾಮುದಾಯಿಕ, ಮತೀಯ ಅಥವಾ ಜಾತೀಯ – ಈ ಯಾವುದೇ ಸ್ತರದಲ್ಲಿ ಗಮನಿಸಿದರೂ ಅಲ್ಲಿ ಮಹಿಳೆ ಬಲಿಪಶು ಆಗಿರುತ್ತಾಳೆ. ಮಹಿಳಾ ಸಂಕುಲದ ಮೇಲೆ ನಿರಂತರವಾಗಿ ನಡೆಯುವ ದೌರ್ಜನ್ಯಗಳ ಮೂಲ ಭಾರತೀಯ ಸಮಾಜ ಇಂದಿಗೂ ಅಪ್ಪಿಕೊಂಡಿರುವ ಪಿತೃಪ್ರಧಾನ ವ್ಯವಸ್ಥೆ ಮತ್ತು ಅದರೊಳಗಿನ ಯಜಮಾನಿಕೆ ಸಂಸ್ಕೃತಿಯೇ ಆಗಿರುತ್ತದೆ. ಈ ವ್ಯವಸ್ಥೆಗೆ ಸಾಂಸ್ಥಿಕವಾಗಿ ಆಸರೆ ನೀಡುವ ಸಮಾಜವೇ ಆಳ್ವಿಕೆ-ಆಡಳಿತದ ಎಲ್ಲ ಸ್ತರಗಳನ್ನೂ ಆಕ್ರಮಿಸಿರುತ್ತದೆ.
ಮಹಿಳಾ ದೌರ್ಜನ್ಯಗಳ ಚಾರಿತ್ರಿಕ ಎಳೆ
1972ರ ಮಥುರಾದಿಂದ 2024ರ ಕೊಲ್ಕತ್ತಾವರೆಗೂ ದಾಖಲಿಸಬಹುದಾದ ಈ “ಹಲ್ಲೆಗೊಳಗಾದ ಮಹಿಳಾ ಸಂಕುಲದ ಯಾತನೆಯ ಧ್ವನಿ” ಯನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಕಾನೂನಾತ್ಮಕವಾಗಿ ಅಪರಾಧ ಎಂದು ನಿರ್ವಚಿಸಲ್ಪಡುವ ಅಮಾನುಷ ಹೀನ ಕೃತ್ಯಗಳೆಲ್ಲವೂ ಪುರುಷ ಪ್ರಧಾನ ಸಮಾಜದೊಳಗೆ ಸದ್ದಿಲ್ಲದೆ ಅಡಗಿಹೋಗುವುದನ್ನು ಗುರುತಿಸಬಹುದು. ಬಿಗಿಯಾದ ಕಾನೂನು, ಕಠಿಣ ಶಿಕ್ಷೆ ಅಥವಾ ತ್ವರಿತ ನ್ಯಾಯ ನಿರ್ಣಯಗಳು ಆಡಳಿತಾತ್ಮಕವಾಗಿ ಅಪ್ಯಾಯಮಾನ ಎನಿಸಿದರೂ, ಈ ಉಪಕ್ರಮಗಳನ್ನು ತಾರ್ಕಿಕವಾಗಿ ಅನುಷ್ಠಾನಗೊಳಿಸುವ ಹಾದಿಯಲ್ಲಿ ಮತ್ತದೇ ಪಿತೃಪ್ರಧಾನ ಸಮಾಜ ಮೇಲುಗೈ ಸಾಧಿಸಿರುತ್ತದೆ. ಇದರ ಒಂದು ಆಯಾಮವನ್ನು 1992ರ ಭಾವರಿ ದೇವಿಯ ಘಟನೆಯಲ್ಲಿ ಕಾಣುವಷ್ಟೇ ನಿಷ್ಕೃಷ್ಟವಾಗಿ 2002ರ ಬಿಲ್ಕಿಸ್ ಬಾನೋ ಅಥವಾ 2018ರ ಹಾಥ್ರಸ್‌ನಲ್ಲೂ ಕಾಣಬಹುದು.
ಅಂದರೆ ಆಧುನಿಕ ಭಾರತ ತನ್ನ ದಶಕಗಳ ಪಯಣದಲ್ಲಿ ಎಷ್ಟೇ ಭೌತಿಕ ಸಾಧನೆಗಳನ್ನು ಮಾಡಿದ್ದರೂ, ಮಾನವೀಯ ನೆಲೆಯಲ್ಲಿ ಇಂದಿಗೂ ಸಹ ಮನುಜ ಸೂಕ್ಷ್ಮತೆ-ಲಿಂಗ ಸೂಕ್ಷ್ಮತೆಯನ್ನು ಪಡೆದುಕೊಂಡಿಲ್ಲ ಎಂದಾಯಿತು. ಅಮೃತ ಕಾಲದತ್ತ ಧಾವಿಸುತ್ತಿರುವ ಡಿಜಿಟಲ್ ಯುಗದಲ್ಲೂ ಮಹಿಳೆ ತನ್ನ ಸ್ವ-ರಕ್ಷಣೆಗಾಗಿ ತಾನೇ ಜವಾಬ್ದಾರಿ ಹೊತ್ತು ತಿರುಗಬೇಕಾದ ಪರಿಸ್ಥಿತಿಯನ್ನು ಎದುರಿಸುತ್ತಿರುವುದು ಈ ವಿಕೃತಿಯ ಸಂಕೇತ. ಮಹಿಳಾ ಸಬಲೀಕರಣದ ಉದಾತ್ತ ಯೋಜನೆಗಳಾಗಲೀ, ಬೇಟಿ ಪಢಾವೋ ಬೇಟಿ ಬಚಾವೋ ಎಂಬ ಆದರ್ಶಪ್ರಾಯ ಕಾರ್ಯಕ್ರಮಗಳಾಗಲೀ, ಈ ಸ್ವ-ರಕ್ಷಣೆಯ ಬೇಲಿಗಳನ್ನು ಸುಭದ್ರಗೊಳಿಸಲಾಗುತ್ತಿಲ್ಲ. ಅಥವಾ ಮಹಾತ್ಮ ಗಾಂಧಿ ಅಪೇಕ್ಷಿಸಿದಂತೆ “ ಮಹಿಳೆ ನಡುರಾತ್ರಿಯಲ್ಲೂ ಏಕಾಂಗಿಯಾಗಿ ವಿಶ್ವಾಸದಿಂದ ” ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿಲ್ಲ. “ ಅಷ್ಟು ಹೊತ್ತಿನಲ್ಲಿ ಆಕೆ ಅಲ್ಲಿಗೆ ಏಕೆ ಹೋಗಬೇಕಿತ್ತು ? ” ಎಂಬ ಪ್ರಶ್ನೆ ಸಾರ್ವತ್ರಿಕವಾಗಿ ಸ್ವೀಕೃತವಾಗಿಬಿಟ್ಟಿದೆ.
ಕಳೆದ ವಾರ ಕೊಲ್ಕತ್ತಾದ ಆರ್.ಜಿ. ಕಾರ್ ಆಸ್ಪತ್ರೆಯಲ್ಲಿ ನಡುರಾತ್ರಿಯಲ್ಲಿ ಸಾಮೂಹಿಕ ಅತ್ಯಾಚಾರಕ್ಕೀಡಾಗಿ ಕೊಲೆಯಾದ ವೈದ್ಯಕೀಯ ವಿದ್ಯಾರ್ಥಿನಿಯ ಬಗ್ಗೆಯೂ ಸಂಸ್ಥೆಯ ಪ್ರಾಂಶುಪಾಲ ಡಾ. ಸಂದೀಪ್ ಕುಮಾರ್ ಘೋಷ್ “ ನಡುರಾತ್ರಿ ಸೆಮಿನಾರ್ ಹಾಲ್‌ಗೆ ಏಕಾಂಗಿಯಾಗಿ ಹೋದದ್ದು ಆ ಹುಡುಗಿಯ ಬೇಜವಾಬ್ದಾರಿತನ ” ಎಂದು ಹೇಳಿದ್ದಾರೆ. ಈ ಹೇಳಿಕೆಯಿಂದ ಉದ್ರಿಕ್ತರಾದ ಜನರ ಆಕ್ರೋಶಕ್ಕೆ ಮಣಿದು ಡಾ. ಘೋಷ್ ಕೂಡಲೇ ರಾಜೀನಾಮೆ ಸಲ್ಲಿಸಿದ್ದಾರೆ. ಕೊಲ್ಕತ್ತಾದ ಆರ್. ಜಿ. ಕಾರ್ ಆಸ್ಪತ್ರೆಯ ದ್ವಿತೀಯ ವರ್ಷದ ಸ್ನಾತಕೋತ್ತರ ವಿದ್ಯಾರ್ಥಿನಿ 36 ಗಂಟೆಗಳ ಸತತ ದುಡಿಮೆಯ ನಂತರ ವಿಶ್ರಾಂತಿ ಪಡೆಯಲು ರಾತ್ರಿ 2 ಗಂಟೆಗೆ ಸೆಮಿನಾರ್ ಹಾಲ್‌ಗೆ ಹೋಗಿದ್ದಾರೆ. ಸಾಮಾನ್ಯವಾಗಿ ಎಲ್ಲ ಆಸ್ಪತ್ರೆಗಳಂತೆಯೇ ಇಲ್ಲೂ ಸಹ ವೈದ್ಯರಿಗೆ ಕೆಲಸದ ನಂತರ ವಿಶ್ರಮಿಸಲು ಪ್ರತ್ಯೇಕ ಕೋಣೆಗಳು ಇಲ್ಲ. ಹಾಗಾಗಿ ಅವರು Waiting Room ಗಳಲ್ಲಿ ಅಥವಾ ಖಾಲಿ ಇರುವ ಹಾಲ್‌ನಲ್ಲಿ, ರೋಗಿಗಳ ಹಾಸಿಗೆಯ ಮೇಲೆ ವಿಶ್ರಮಿಸಬೇಕಾಗುತ್ತದೆ.
ಕೊಲ್ಕತ್ತಾ ಘಟನೆಯ ಸುತ್ತ
ಆಗಸ್ಟ್ 9ರ ಮುಂಜಾನೆ ಈ ವೈದ್ಯಕೀಯ ವಿದ್ಯಾರ್ಥಿನಿಯ ಅತ್ಯಾಚಾರಕ್ಕೊಳಗಾದ ವಿವಸ್ತ್ರ ಮೃತ ದೇಹ ಸೆಮಿನಾರ್ ಹಾಲ್‌ನಲ್ಲಿ ಕಂಡಿದೆ. ಸುಮಾರು ಹನ್ನೊಂದು ಗಂಟೆಯ ವೇಳೆಗೆ ಆಕೆಯ ಪೋಷಕರಿಗೆ ಕರೆ ಮಾಡಿದ ಆಸ್ಪತ್ರೆಯ ಒಬ್ಬ ಅಧಿಕಾರಿ, ವಿಷಯವನ್ನು ತಿಳಿಸಿದ್ದಾರೆ. ಇಪ್ಪತ್ತು ನಿಮಿಷಗಳ ನಂತರ ದುಃಖತಪ್ತ ಪೋಷಕರಿಗೆ ಕರೆಮಾಡಿದ ಇದೇ ಅಧಿಕಾರಿ, ತರಬೇತಿಯಲ್ಲಿದ್ದ ವೈದ್ಯಕೀಯ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಹೇಳಿದ್ದಾರೆ. ಮೂರು ಗಂಟೆಗಳು ಕಾಯಿಸಿ ಪೋಷಕರಿಗೆ ಅವರ ಮಗಳ ದೇಹವನ್ನು ತೋರಿಸಲಾಗಿದೆ. ಮರುದಿನ , ಆಗಸ್ಟ್ 10ರ ಸಂಜೆ ನಾಲ್ಕರ ವೇಳೆಗೆ ಸಲ್ಲಿಸಿದ ತನಿಖಾ ವರದಿಯಲ್ಲಿ ಮೃತ ದೇಹದ ಮೇಲೆ ಹತ್ತು ಗಾಯಗಳಿರುವುದಾಗಿ ಹೇಳಲಾಗಿದೆ. ಯೋನಿಯಿಂದ, ಎರಡೂ ಕಣ್ಣುಗಳಿಂದ ಮತ್ತು ಬಾಯಿಂದ ರಕ್ತ ಹರಿದಿರುವುದು ವರದಿಯಾಗಿದೆ. ಮುಖ, ಕತ್ತು, ಉಗುರುಗಳು, ಬಲಗೈ , ಎಡಗಾಲು ಮತ್ತು ಹೊಟ್ಟೆಯ ಮೇಲೆ ಗಾಯಗಳಾಗಿರುವುದು ಕಂಡುಬಂದಿದೆ.
ಆಸ್ಪತ್ರೆಯಲ್ಲಿ ನಿಯೋಜಿತವಾಗಿದ್ದ ನಾಗರಿಕ ಪೊಲೀಸ್ ಸ್ವಯಂ ಸೇವಕ (Civic Police Volunteer) ಸಂಜಯ್ ರಾಯ್ ಎಂಬಾತನನ್ನು ಈ ಘಟನೆಯ ಪ್ರಥಮ ಆರೋಪಿಯಾಗಿ ಬಂಧಿಸಲಾಗಿದೆ. ಗುತ್ತಿಗೆಯ ಮೇಲೆ ಕೆಲಸ ಮಾಡುವ ಈ ಸಿಬ್ಬಂದಿಗಳಿಗೆ ಶಾಶ್ವತ ನೌಕರಿ ಇರುವುದಿಲ್ಲ. ಇವರ ನೇಮಕ ಪ್ರಕ್ರಿಯೆಗೂ ಯಾವುದೇ ನಿಗದಿತ ನಿಯಮಗಳನ್ನು ರೂಪಿಸಲಾಗಿಲ್ಲ. ಆಡಳಿತಾರೂಢ ಪಕ್ದ ಮರ್ಜಿಗೆ ಅನುಸಾರವಾಗಿ ನೇಇಸಲಾಗುತ್ತದೆ. ಕೊಲ್ಕತ್ತಾದ 37 ಸಾವಿರ ಪೊಲೀಸರ ಪೈಕಿ 7200 ಸ್ವಯಂ ಸೇವಕ ಸಿಬ್ಬಂದಿ ಇದ್ದಾರೆ. ಮೃತ ವೈದ್ಯಕೀಯ ವಿದ್ಯಾರ್ಥಿನಿಯ ದೇಹದ ಮೇಲಿನ ಗಾಯಗಳನ್ನು ಗಮನಿಸಿದರೆ ಇದು ಸಾಮೂಹಿಕ ಅತ್ಯಾಚಾರ/ಹತ್ಯೆ ಎನ್ನುವುದು ಖಚಿತವಾಗುತ್ತದೆ ಎಂದು ಹೇಳಲಾಗುತ್ತಿದೆ. ಈ ಕೃತ್ಯದಲ್ಲಿ ಆಸ್ಪತ್ರೆಯ ವೈದ್ಯರೂ, ಇತರ ಸಿಬ್ಬಂದಿಗಳೂ ಭಾಗಿಯಾಗಿರುವ ಸಾಧ್ಯತೆಗಳನ್ನು ಅಲ್ಲಗಳೆಯಲಾಗದು ಎಂದು ಹೇಳಲಾಗುತ್ತಿದೆ.
ಈ ಹೀನ ಘಟನೆಗೆ ಪ್ರತಿಕ್ರಿಯಿಸಿರುವ ಪಶ್ಚಿಮಬಂಗಾಲದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ “ ಇಂತಹ ಘಟನೆಗಳು ಇತರ ರಾಜ್ಯಗಳಲ್ಲೂ ಸಂಭವಿಸುತ್ತಲೇ ಇರುತ್ತವೆ ,,,,,” ಎಂದು ಹೇಳುವ ಮೂಲಕ ಒಂದು ಅಮಾನುಷ ಹೀನ ಕೃತ್ಯವನ್ನು ರಾಜಕೀಯ ಮಸೂರದಿಂದ ನೋಡುವ ಪರಂಪರೆಗೆ ಸಾಕ್ಷಿಯಾಗಿದ್ದಾರೆ. ಈ ಹಿಂದೆಯೂ ಮಹಿಳೆಯರ ಮೇಲೆ ಅತ್ಯಾಚಾರಗಳು ಸಂಭವಿಸಿದಾಗ ಮಮತಾ ದೀದಿ ಇದೇ ರೀತಿಯ ಅಸೂಕ್ಷ್ಮ ಹೇಳಿಕೆಗಳನ್ನು ನೀಡಿರುವುದುಂಟು. ಭಾರತದ ರಾಜಕಾರಣದಲ್ಲಿ ಇದೇನೂ ಅಚ್ಚರಿ ಮೂಡಿಸುವುದಿಲ್ಲ ಹೈಕೋರ್ಟ್ ಚೀಮಾರಿ ಹಾಕಿದ ನಂತರ ಕೋರ್ಟ್ ಆದೇಶದ ಮೇರೆಗೆ ಪ್ರಕರಣವನ್ನು ಸಿಬಿಐಗೆ ಒಪ್ಪಿಸಲಾಗಿದ್ದು, ಅಪರಾಧಿಗೆ ಆದಷ್ಟು ಬೇಗನೆ ಗಲ್ಲು ಶಿಕ್ಷೆ ನೀಡಬೇಕು ಎಂದು ಮಮತಾದೀದಿ ಆಗ್ರಹಿಸಿದ್ದಾರೆ. ಇದೊಂದು ಅಸಹಜ ಸಾವು ಆಗಿದ್ದರೂ ಪ್ರಾಂಶುಪಾಲರು ದೂರು ದಾಖಲಿಸದಿದ್ದುದನ್ನು ಹೈಕೋರ್ಟ್ ಖಂಡಿಸಿದೆ. ರಾಜೀನಾಮೆ ನೀಡಿರುವ ಪ್ರಾಂಶುಪಾಲ ಸಂದೀಪ್ ಘೋಷ್ ಅವರಿಗೆ ವರ್ಗಾವಣೆಯ ಮೂಲಕ ಮತ್ತೊಂದೆಡೆ ಸ್ಥಾನ ಕಲ್ಪಿಸುವುದಕ್ಕೂ ಹೈಕೋರ್ಟ್ ಆಕ್ಷೇಪ ವ್ಯಕ್ತಪಡಿಸಿದೆ.
ಕಾನೂನು ಶಿಕ್ಷೆಗಳಿಂದಾಚೆಗೆ ,,,
ಭಾರತ ತನ್ನ 78ನೆಯ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮದಿಂದ ಆಚರಿಸುತ್ತಿರುವ ಹೊತ್ತಿನಲ್ಲೇ ಕೊಲ್ಕತ್ತಾದ ಸಾಮೂಹಿಕ ಅತ್ಯಾಚಾರ/ಹತ್ಯೆಯ ಸುದ್ದಿ ಇಡೀ ದೇಶವನ್ನು ತಲ್ಲಣಗೊಳಿಸಿದೆ. ಇದೇ ವೇಳೆ ಬಿಹಾರದ ಮುಝಫರ್‌ಪುರ ಜಿಲ್ಲೆಯಲ್ಲಿ ದಲಿತ ಅಪ್ರಾಪ್ತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದ್ದು ಛಿದ್ರಗೊಂಡ ಆಕೆಯ ದೇಹವನ್ನು ಎರಡು ದಿನಗಳ ಬಳಿಕ ಪಾರೂ ಎಂಬ ಗ್ರಾಮದ ಕೊಳದಲ್ಲಿ ಕಂಡುಹಿಡಿಯಲಾಗಿದೆ. ಉತ್ತರಖಾಂಡದ ಖಾಸಗಿ ಆಸ್ಪತ್ರೆಯ ನರ್ಸ್ ಒಬ್ಬರ ಮೇಲೆ ವ್ಯಕ್ತಿಯೊಬ್ಬ ಅತ್ಯಾಚಾರ ಎಸಗಿ ಕಲ್ಲಿನಿಂದ ಜಜ್ಜಿ ಹತ್ಯೆ ಮಾಡಿ, ಸಮೀಪದ ಗ್ರಾಮವೊಂದರ ಖಾಲಿ ನಿವೇಶನದಲ್ಲಿ ಮೃತ ದೇಹವನ್ನು ಎಸೆದಿರುವುದು ವರದಿಯಾಗಿದೆ. ಮತ್ತೊಂದು ಘಟನೆಯಲ್ಲಿ ಕೊಯಮತ್ತೂರು ವೈದ್ಯಕೀಯ ಕಾಲೇಜು ಆಸ್ಪತ್ರೆಯ ವೈದ್ಯ ವಿದ್ಯಾರ್ಥಿನಿಯ ಮಾನಭಂಗಕ್ಕೆ ಯತ್ನಿಸಿದ ಆರೋಪದ ಮೇಲೆ ವಲಸೆ ಕಾರ್ಮಿಕನೊಬ್ಬನನ್ನು ಬಂಧಿಸಲಾಗಿದೆ.
ಈ ದಾರುಣ ಸನ್ನಿವೇಶದ ನಡುವೆಯೇ ತಮ್ಮ 78ನೆ ಸ್ವಾತಂತ್ರ್ಯೋತ್ಸವದ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಮಹಿಳೆಯರ ಮೇಲಿನ ದೌರ್ಜನ್ಯಗಳನ್ನು ತ್ವರಿತವಾಗಿ ತನಿಖೆಗೊಳಪಡಿಸಿ ಅಪರಾಧಿಗಳಿಗೆ ಉಗ್ರ ಶಿಕ್ಷೆ ವಿಧಿಸಬೇಕು ಎಂದು ಕರೆ ನೀಡಿದ್ದಾರೆ. ಇಂತಹ ಹೀನ ಕೃತ್ಯಗಳ ಎಸಗುವವರ ವಿರುದ್ಧ Prima facie ಪ್ರಕರಣವನ್ನು ದಾಖಲಿಸಬೇಕು, ಹೀಗೆ ಶಿಕ್ಷೆಯಾಗುವ ಅಪರಾಧಿಗಳ ಬಗ್ಗೆ, ಅವರಿಗೆ ನೀಡುವ ಮರಣದಂಡನೆಯಂತಹ ಉಗ್ರ ಶಿಕ್ಷೆಯ ಬಗ್ಗೆ ಸಮಾಜಕ್ಕೆ ವ್ಯಾಪಕವಾಗಿ ತಿಳಿಸುವುದರ ಮೂಲಕ ಸಮಾಜದಲ್ಲಿ ಅಪರಾಧ ಎಸಗುವ ವ್ಯಕ್ತಿಗಳಲ್ಲಿ ಭೀತಿಯನ್ನು ಉಂಟುಮಾಡಬೇಕು ಎಂದೂ ಹೇಳಿದ್ದಾರೆ. ಸಮಾಜದಲ್ಲಿ ಕಾನೂನು ಮತ್ತು ಶಿಕ್ಷೆಯ ಬಗ್ಗೆ ಭಯ ಮೂಡಿಸುವುದರಿಂದ ಅಪರಾಧಗಳು ಕಡಿಮೆಯಾಗುತ್ತದೆ ಎನ್ನುವುದು ಮೇಲ್ನೋಟಕ್ಕೆ ಸರಿ ಎನಿಸಿದರೂ, ಮಹಿಳೆಯರ ಮೇಲೆ ಅವ್ಯಾಹತವಾಗಿ ನಡೆಯುತ್ತಿರುವ ಅತ್ಯಾಚಾರ/ಹತ್ಯೆಗಳು ಈ ನಂಬಿಕೆಯನ್ನು ಹುಸಿಗೊಳಿಸುತ್ತದೆ.
ಏಕೆಂದರೆ ಪಿತೃಪ್ರಧಾನ ವ್ಯವಸ್ಥೆ ರೂಪಿಸುವ ಸಮಾಜದಲ್ಲಿ ಶಿಕ್ಷೆಯ ಬಗ್ಗೆ ಸಾಮಾನ್ಯ ಜನರಲ್ಲಿ ಭಯ ಇದ್ದರೂ ಸಹ ಅತ್ಯಾಚಾರ/ಹತ್ಯೆಯಂತಹ ಅಮಾನುಷ ಕೃತ್ಯಗಳನ್ನು ಎಸಗುವವರಿಗೆ ಸಮಾಜದಿಂದ, ಆಡಳಿತ ವ್ಯವಸ್ಥೆಯಿಂದ, ಅಧಿಕಾರ ಕೇಂದ್ರಗಳಿಂದ, ಜಾತಿ ಸಮುದಾಯಗಳಿಂದ, ಧಾರ್ಮಿಕ ನೆಲೆಗಳಿಂದ ಸಾಂಸ್ಥಿಕ-ಸಾಂಘಿಕ ಅಭಯ/ಶ್ರೀರಕ್ಷೆ ಇರುವುದನ್ನು ಹೇಗೆ ಹೋಗಲಾಡಿಸುವುದು ? ಹಾಥ್ರಸ್‌ನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ/ಹತ್ಯೆಯಲ್ಲಿ ನಡುರಾತ್ರಿ ದಹಿಸಲ್ಪಟ್ಟ ಸಂತ್ರಸ್ತೆಯನ್ನು ಹೇಗೆ ನೋಡುವುದು ? ಆಂಧ್ರಪ್ರದೇಶದಲ್ಲಿ ವೈದ್ಯೆಯೊಬ್ಬರ ಅತ್ಯಾಚಾರ ಹತ್ಯೆ ನಡೆದ ನಂತರ ನಾಲ್ವರು ಶಂಕಿತರನ್ನು ಎನ್ಕೌಂಟರ್ ಮೂಲಕ ಹತ್ಯೆ ಮಾಡಿರುವುದನ್ನು ಹೇಗೆ ಪರಿಭಾವಿಸುವುದು ? 2017ರಲ್ಲಿ ಉತ್ತರಪ್ರದೇಶದ ಉನ್ನಾವೋ ಗ್ರಾಮದಲ್ಲಿ, ಒಂದು ಕಾಲದಲ್ಲಿ ಬಿಜೆಪಿಯೊಡನೆ ಇದ್ದ ಮಾಜಿ ಶಾಸಕನೊಬ್ಬ ದಲಿತ ಬಾಲಕಿಯ ಅತ್ಯಾಚಾರ ಎಸಗಿ ಹತ್ಯೆ ಮಾಡಿದ ಪ್ರಕರಣವನ್ನು ಹೇಗೆ ನೋಡುವುದು ? ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಬಿಜೆಪಿಯ ಮಾಜಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಇಂದಿಗೂ ಪಕ್ಷದ ಸದಸ್ಯರಾಗಿಯೇ ಇರುವುದನ್ನು ಹೇಗೆ ಪರಿಗಣಿಸುವುದು ?
ವಿಳಂಬವೋ ತ್ವರಿತವೋ ಕಾನೂನು ಹಾಗೂ ನ್ಯಾಯ ವ್ಯವಸ್ಥೆ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಆರೋಪಿಗೆ ಶಿಕ್ಷೆ ವಿಧಿಸುತ್ತದೆ. ನಿರ್ಭಯ ಒಂದು ಜ್ವಲಂತ ನಿದರ್ಶನ. ಆದರೆ ಅದೆಷ್ಟು ನಿರ್ಭಯಗಳು ಆಗಿಹೋಗಿದ್ದಾರೆ, ಕಳೆದ 12 ವರ್ಷಗಳಲ್ಲಿ. ವರ್ಮಾ ಆಯೋಗದ ಶಿಫಾರಸುಗಳನ್ನು ಆಧರಿಸಿ ಇಂತಹ ಹೀನ ಕೃತ್ಯಗಳಲ್ಲಿ ಮರಣದಂಡನೆ ವಿಧಿಸುವ ಕಾನೂನು ಜಾರಿಯಾಗಿದ್ದರೂ, ಅತ್ಯಾಚಾರಗಳು ಕಡಿಮೆಯಾಗಿಲ್ಲ ಎಂದರೆ ಕಾನೂನು ಮತ್ತು ಶಿಕ್ಷೆ ಸಮಾಜದಲ್ಲಿನ ಕ್ರೌರ್ಯಹಿಂಸೆಯನ್ನು ಕಡಿಮೆ ಮಾಡಲು ಸಾಧ್ಯವಾಗಿಲ್ಲ ಎಂದೇ ಅರ್ಥ. ಅತ್ಯಾಚಾರದ ಆರೋಪಿಗೆ ಕ್ಷಣಮಾತ್ರದಲ್ಲಿ ಗಲ್ಲುಶಿಕ್ಷೆ ವಿಧಿಸುವ ಇಸ್ಲಾಮಿಕ್ ರಾಷ್ಟ್ರಗಳಲ್ಲೂ ಸಹ ಈ ಅಮಾನುಷ ಘಟನೆಗಳು ಸಂಭವಿಸುತ್ತಲೇ ಇರುತ್ತವೆ. ಅಂದರೆ ಕಾನೂನು-ಶಿಕ್ಷೆಯ ಭಯ ಒಂದೇ ಮಹಿಳಾ ದೌರ್ಜನ್ಯಗಳನ್ನು, ಅತ್ಯಾಚಾರ/ಹತ್ಯೆಗಳನ್ನು ಕಡಿಮೆಮಾಡುವುದಿಲ್ಲ.
ಸಾಮಾಜಿಕ-ನಾಗರಿಕ ಜವಾಬ್ದಾರಿ
ಹೀಗೆ ಭಾವಿಸುವುದು ಆಧುನಿಕ ಸಮಾಜದ ಒಂದು ಭ್ರಮೆ. ಮೂಲತಃ ಮಹಿಳಾ ದೌರ್ಜನ್ಯ ಎನ್ನುವುದು ಸಮಾಜದಲ್ಲಿ ಅಂತರ್ಗತವಾಗಿರುವ ಮಹಿಳಾ ದ್ವೇಷ (Misogyny)̧, ಮಹಿಳೆಯನ್ನು ಭೋಗದ ವಸ್ತುವನ್ನಾಗಿ ನೋಡುವ ಪುರುಷ ವಕ್ರದೃಷ್ಟಿ, ಮಹಿಳೆಯನ್ನು ಸದಾ ಅಧೀನಳನ್ನಾಗಿಯೇ ನೋಡುವ ಯಜಮಾನಿಕೆಯ ಸಂಸ್ಕೃತಿ, ಮಹಿಳೆಯ ಮೇಲೆ ನಡೆಯುವ ಅಮಾನುಷ/ಹೀನ ದಾಳಿಗಳಿಗೆ ಸಂಸ್ಕೃತಿ, ಪರಂಪರೆಯ ಹೆಸರಿನಲ್ಲಿ ಆಕೆಯನ್ನೇ ತಪ್ಪಿತಸೃಳನ್ನಾಗಿ ಮಾಡುವ ಸಮಾಜದ ಧೋರಣೆ ಮತ್ತು ಇವೆಲ್ಲವುಗಳನ್ನೂ ತನ್ನ ಒಡಲಲ್ಲಿಟ್ಟುಕೊಂಡು ವ್ಯವಸ್ಥಿತವಾಗಿ ಪೋಷಿಸುವ ಒಂದು ಪಿತೃಪ್ರಧಾನ ವ್ಯವಸ್ಥೆಯ ಸಾಂಸ್ಥಿಕ ನೆಲೆಗಳು. ಇದನ್ನು ಎದುರಿಸುವುದು ಹೇಗೆ ? ಯಾವ ನೆಲೆಗಟ್ಟಿನಲ್ಲಿ ? ಯಾವ ಆಯಾಮಗಳಲ್ಲಿ ? ಯಾವ ಮಾರ್ಗಗಳಲ್ಲಿ ?
ಈ ಪ್ರಶ್ನೆಗಳಿಗೆ ಉತ್ತರ ಶೋಧಿಸಿದರೆ ನಮಗೆ ಮಹಿಳಾ ಸಂವೇದನೆ, ಲಿಂಗ ಸೂಕ್ಷ್ಮತೆ ಮತ್ತು ಲಿಂಗ ಸಮಾನತೆಯ ಬಗ್ಗೆ ಭಾರತೀಯ ಸಮಾಜದಲ್ಲಿ ಈಗಲೂ ಗಟ್ಟಿಯಾಗಿ ತಳವೂರಿರುವ ಪಿತೃಪ್ರಾಧಾನ್ಯ ಮೌಲ್ಯಗಳು ಸಿಗುತ್ತವೆ. ಈ ಮೌಲ್ಯಗಳನ್ನು ಎಲ್ಲ ಸಮಾಜಗಳ ಎಲ್ಲ ಸ್ತರಗಳಲ್ಲೂ ಹಂತಹಂತವಾಗಿ ಉತ್ತೇಜಿಸುತ್ತಲೇ ಬರಲಾಗುತ್ತಿದೆ. “ ಯಾವುದೇ ಹೆಣ್ಣಿನ ಮೇಲೆ ನಡೆಯುವ ದಾಳಿ ಆ ಸಹಜೀವಿಯ ಹೆಣ್ತನದ ಘನತೆಯ ಮೇಲೆ ನಡೆಯುವ ಆಕ್ರಮಣ ” ಎಂಬ ಅರಿವನ್ನು ಬಾಲ್ಯದಿಂದಲೇ ಮೂಡಿಸುವ ನಿಟ್ಟಿನಲ್ಲಿ ಗಂಡುಕುಲವನ್ನು ಸಲಹುವ ಅವಶ್ಯಕತೆ ಎದ್ದು ಕಾಣುತ್ತದೆ. ಇದು ಸರ್ಕಾರಕ್ಕಿಂತಲೂ ಪ್ರತಿ ಕುಟುಂಬಗಳ ಜವಾಬ್ದಾರಿಯಾಗಬೇಕು. ಪ್ರತಿಯೊಂದು ಸಂಘಟನೆ, ರಾಜಕೀಯ ಪಕ್ಷ, ಸಾಂಸ್ಕೃತಿಕ ಸಂಸ್ಥೆ ಹಾಗೂ ಸಮುದಾಯಗಳ ಆದ್ಯತೆಯಾಗಬೇಕು. ಸಾಮೂಹಿಕವಾಗಿ, ವ್ಯಕ್ತಿಗತ ನೆಲೆಯಲ್ಲಿ ನಡೆಯುವ ಅತ್ಯಾಚಾರ/ಹತ್ಯೆಗಳು ನಮ್ಮ ಪ್ರಜ್ಞೆಯನ್ನು ಖಂಡಿತವಾಗಿಯೂ ಕಲಕುತ್ತವೆ.
ಆದರೆ ಆ ಪ್ರತಿಕ್ರಿಯಾತ್ಮಕ ಸಂವೇದನೆಯನ್ನು ದಾಟಿ ಯೋಚಿಸಬೇಕಾದ ತುರ್ತು ಇಂದು ಎದುರಾಗಿದೆ. ಹೀಗೆ ದೌರ್ಜನ್ಯಕ್ಕೊಳಗಾದ ಹೆಣ್ಣನ್ನು ನಾವೇ ಸೃಷ್ಟಿಸಿಕೊಂಡಿರುವ ಜಾತಿ-ಮತ-ಧರ್ಮ-ಸಮುದಾಯಗಳ ಅಸ್ಮಿತೆಗಳ ಚೌಕಟ್ಟುಗಳಲ್ಲಿಟ್ಟು, ಹಲ್ಲೆಗೊಳಗಾದ ಮಹಿಳೆಯನ್ನು ತಪ್ಪಿತಸ್ಥಳನ್ನಾಗಿ ಮಾಡಿ ಅಪರಾಧಿಗಳನ್ನು ಸಮರ್ಥಿಸುವ, ರಕ್ಷಿಸುವ, ಸಮ್ಮಾನಿಸುವ, ಸನ್ಮಾನಿಸುವ ಒಂದು ಸಮಾಜದಲ್ಲಿ ನಾವಿದ್ದೇವೆ. ಹಾಗಾಗಿಯೇ ಕಥುವಾದಲ್ಲಿ ಬಲಿಯಾದ ಎಂಟು ವರ್ಷದ ಹಸುಳೆಯ ಹಾಗೇ ಗುಜರಾತ್‌ನಲ್ಲಿ ನರಕಯಾತನೆ ಅನುಭವಿಸಿದ ಬಿಲ್ಕಿಸ್ ಬಾನೋ ಸಹ ಅನಾಥರಾಗಿ ಕಾಣುತ್ತಾರೆ. ತನ್ನ ಬೂಟುಗಳನ್ನು ಕಳಚಿಟ್ಟು ದೇಶದ ಎದುರು ಕಣ್ಣೀರುಗರೆದ ಸಾಕ್ಷಿ ಮಲ್ಲಿಕ್ ಏಕಾಂಗಿಯಾಗಿ ಕಾಣುತ್ತಾರೆ. ನಡುರಾತ್ರಿಯಲ್ಲಿ ದಹಿಸಲ್ಪಟ್ಟ ಹಾಥ್ರಸ್‌ನ ನತದೃಷ್ಟೆ ಶಾಶ್ವತವಾಗಿ ವಿಸ್ಮೃತಿಗೆ ಜಾರಿಬಿಡುತ್ತಾಳೆ.
ಇಲ್ಲಿ ಅಪರಾಧಿಯಾಗಿ ನಿಲ್ಲಬೇಕಿರುವುದು ನಮ್ಮ ಪಿತೃಪ್ರಧಾನ ಸಮಾಜ ಮತ್ತು ಅದನ್ನು ನಿರ್ದೇಶಿಸುವ, ಸಮರ್ಥಿಸುವ, ಪೋಷಿಸುವ ಸಾಂಸ್ಥಿಕ ನೆಲೆಗಳು. ಮಹಿಳಾ ದೌರ್ಜನ್ಯದ ಆರೋಪಗಳನ್ನು ಹೊತ್ತ ಎಲ್ಲರನ್ನೂ ತಮ್ಮ ಪಕ್ಷದಿಂದ ಉಚ್ಛಾಟಿಸುವ ಅಥವಾ ಅಮಾನತಿನಲ್ಲಿಡುವ ನಿರ್ಧಾರವನ್ನು ಎಲ್ಲ ರಾಜಕೀಯ ಪಕ್ಷಗಳೂ ತಳೆಯುವುದೇ ಆದರೆ ಅದು ದೇಶಕ್ಕೆ ಒಂದು ಸಂದೇಶವನ್ನು ನೀಡಲು ಸಾಧ್ಯ ? ಆದರೆ ವರ್ತಮಾನದ ಸಂದರ್ಭದಲ್ಲಿ ಇದು ಹಗಲುಗನಸಿನಂತೆಯೇ ಕಾಣುತ್ತದೆ. ಯಾತನೆಯಿಂದ ನೊಂದ, ಬೆಂದ, ಇಲ್ಲವಾದ ಮಹಿಳೆಯರಿಗಾಗಿ ಮಿಡಿಯುವ ಕೆಲವೇ ಮನಸ್ಸುಗಳು ಕತ್ತಲಲ್ಲಿ ಮೋಂಬತ್ತಿ ಹಿಡಿದು ತಮ್ಮ ನೋವನ್ನು ಹಂಚಿಕೊಳ್ಳುತ್ತಲೇ ಇವೆ. ಈ ಮೇಣದ ಬತ್ತಿಯ ಬೆಳಕು ಪುರುಷಪ್ರಧಾನ ಸಮಾಜವನ್ನು ಕತ್ತಲಿಂದ ಹೊರತರಲಾಗುತ್ತಿಲ್ಲವಷ್ಟೆ . ಇದು ನಮ್ಮ ಮುಂದಿನ ಜಿಜ್ಞಾಸೆ, ಸವಾಲು, ಸಮಸ್ಯೆ.
-೦-೦-೦-೦-೦-