ಕಾಲಮಿತಿಯೊಳಗೆ ಲಸಿಕೆ‌ ಕೊಡಿ, ಕೋವಿಡ್ನಿಂದ ರಕ್ಷಣೆ ನೀಡಿ- ಕರ್ನಾಟಕ ರಕ್ಷಣಾ ವೇದಿಕೆ

ಜೂ. 10 ರಂದು‌  ಕರ್ನಾಟಕ ರಕ್ಷಣಾ ವೇದಿಕೆ ನಡೆಸುತ್ತಿರುವ ಚಳವಳಿ ನಿಗದಿಯಾದಂತೆ ನಡೆಯುತ್ತದೆ. ಜೂನ್ ಅಂತ್ಯದೊಳಗೆ ಲಸಿಕೆಯ ಮೊದಲ ಡೋಸ್, ಸೆಪ್ಟೆಂಬರ್ ಅಂತ್ಯದೊಳಗೆ ಎರಡನೇ ಡೋಸ್ ಕರ್ನಾಟಕದ ಪ್ರತಿಯೊಬ್ಬ ನಾಗರಿಕನಿಗೂ ಸಿಗಬೇಕು ಎಂಬ ಬೇಡಿಕೆಯೊಂದಿಗೆ ಈ ಚಳವಳಿ ನಡೆಸಲಾಗುತ್ತದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ತಿಳಿಸಿದೆ.

ಈಗಾಗಲೇ ನಮ್ಮೆಲ್ಲ ಕಾರ್ಯಕರ್ತರಿಗೆ ಕರೆ ನೀಡಿದಂತೆ, ಕೋವಿಡ್ ನಿಯಮಾವಳಿಗಳನ್ನು ಪಾಲಿಸುತ್ತ, ಎಲ್ಲರೂ ಶಾಂತಿಯುತವಾಗಿ ಪ್ರತಿಭಟನೆಗಳನ್ನು ನಡೆಸಬೇಕು. ಈ ಮೂಲಕ ಸಮಸ್ತ ಕನ್ನಡದ ಜನತೆಗೆ ಕಾಲಮಿತಿಯೊಳಗೆ ಲಸಿಕೆ‌ ನೀಡಿ, ಅವರಿಗೆ ಕೋವಿಡ್ ನಿಂದ ರಕ್ಷಣೆ ನೀಡಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ  ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಅವರು ಮನವಿ ಮಾಡಿದ್ದಾರೆ.

ಪ್ರಧಾನಮಂತ್ರಿ ನರೇಂದ್ರಮೋದಿಯವರು ಜೂ.21 ರಿಂದ ದೇಶದ ಎಲ್ಲ ನಾಗರಿಕರಿಗೂ ಉಚಿತ ಲಸಿಕೆ‌ ಕೊಡುವುದಾಗಿ ಇಂದು ಘೋಷಿಸಿದ್ದಾರೆ. ಇದು ಸ್ವಾಗತಾರ್ಹ ಬೆಳವಣಿಗೆ. ಕರ್ನಾಟಕ ರಕ್ಷಣಾ‌ ವೇದಿಕೆ ಹಮ್ಮಿಕೊಂಡಿರುವ ಹೋರಾಟಕ್ಕೆ ಭಾಗಶಃ ಯಶಸ್ಸು ದೊರೆತಂತಾಗಿದೆ. ಆದರೆ ಬೇಗನೇ ಲಸಿಕೆ ನೀಡಬೇಕೆಂಬ ನಮ್ಮ ಹೋರಾಟ ಮುಂದುವರೆಯಲಿದೆ ಎಂದು ತಿಳಿಸಿದ್ದಾರೆ.

ಖಾಸಗಿ ಆಸ್ಪತ್ರೆಗಳಲ್ಲಿ ಶೇ.25 ರಷ್ಟು ಲಸಿಕೆ ಕೊಡುವ ಕಾರ್ಯಕ್ರಮ ಮುಂದುವರೆದರೆ ಮತ್ತೆ ಕಾಳಸಂತೆ ವ್ಯವಹಾರಗಳು, ದುಬಾರಿ ಬೆಲೆಯ ಹೊರೆ, ಅನಾರೋಗ್ಯಕರ ಸ್ಪರ್ಧೆ ಏರ್ಪಡುವುದರಿಂದ, ಖಾಸಗಿ ಆಸ್ಪತ್ರೆಗಳಿಗೆ ಸರ್ಕಾರವೇ ಲಸಿಕೆ ಹಣ ಪಾವತಿಸಿ ಅಲ್ಲೂ ಸಹ ಉಚಿತವಾಗಿಯೇ ಸಾರ್ವಜನಿಕರಿಗೆ ಲಸಿಕೆ ನೀಡಬೇಕೆಂದು ಆಗ್ರಹಿಸಲಾಗಿದೆ.

ಲಸಿಕೆಯೆಂಬುದು ಭಾರತದ ಪ್ರತಿಯೊಬ್ಬ ನಾಗರಿಕನ ಹಕ್ಕು. ಅದರ ಹಂಚಿಕೆಯೂ ಸಮಾನತೆಯ ಆಶಯಕ್ಕೆ ಧಕ್ಕೆಯಾಗದಂತೆ ಇರಬೇಕು. ಹೀಗಾಗಿ ಎಲ್ಲ ರಾಜ್ಯಗಳಿಗೂ ಜನಸಂಖ್ಯೆ ಆಧಾರದಲ್ಲಿ‌ ಲಸಿಕೆ ವಿತರಣೆಯಾಗಬೇಕು. ಉತ್ತರದ ರಾಜ್ಯಗಳಿಗೆ ಹೆಚ್ಚು, ದಕ್ಷಿಣದ ರಾಜ್ಯಗಳಿಗೆ ಕಡಿಮೆ ಲಸಿಕೆ ನೀಡಿದ್ದನ್ನು ನಾವು ನೋಡಿದ್ದೇವೆ. ಈ ಅನ್ಯಾಯ ಕೊನೆಗೊಳ್ಳಬೇಕು. ಪ್ರಧಾನ ಮಂತ್ರಿಗಳು ಉಚಿತವಾಗಿ ಲಸಿಕೆ ಕೊಡುವುದಾಗಿ ಘೋಷಿಸಿದ್ದರೂ, ಎಷ್ಟು ದಿನಗಳೊಳಗೆ ಲಸಿಕೆ ಕೊಡುತ್ತೇವೆ ಎಂಬುದನ್ನು ಹೇಳಿಲ್ಲ. ಮತ್ತೊಂದು ಅಲೆ ಬಂದು ಇನ್ನಷ್ಟು ಜೀವಗಳು ಹೋಗುವಂತಾದರೆ ಉಚಿತ ಲಸಿಕೆಗೆ ಅರ್ಥವಿರುವುದಿಲ್ಲ. ಕೋವಿಡ್ ಮೂರನೇ ಅಲೆ ಅಕ್ಟೋಬರ್ ನಲ್ಲಿ ಬರುವ ಸಾಧ್ಯತೆ ಇರುವುದರಿಂದ ಅಷ್ಟರೊಳಗೆ ಎರಡೂ ಡೋಸ್ ಲಸಿಕೆ ಎಲ್ಲ ನಾಗರಿಕರಿಗೂ‌ ಸಿಗಬೇಕೆಂದು ಆಗ್ರಹಿಸಲಾಗಿದೆ.

ಪ್ರತಿ ಚುನಾವಣೆಗಳ ಸಂದರ್ಭದಲ್ಲಿ ಸ್ಥಾಪಿಸಲಾಗುವ ಮತದಾನದ ಬೂತ್ ಗಳ‌ ಮಾದರಿಯಲ್ಲೇ ಜನರಿಗೆ ಅತಿಹೆಚ್ಚು ಹತ್ತಿರದಲ್ಲೇ ಲಸಿಕೆ ಬೂತ್ ಗಳನ್ನು ಸ್ಥಾಪಿಸಬೇಕು. ಲಸಿಕೆಗಾಗಿ ನೋಂದಾವಣಿ ಪ್ರಕ್ರಿಯೆಯನ್ನು ಕನಿಷ್ಠಗೊಳಿಸಿ, ಪ್ರತಿಯೊಬ್ಬನಿಗೂ ಲಸಿಕೆ‌ ಸಿಗುವಂತೆ ನೋಡಿಕೊಳ್ಳಬೇಕು. ಲಸಿಕೆ ಜನಸಾಮಾನ್ಯರ ಬಳಿಗೇ ಹೋಗುವಂತಾಗಬೇಕು ಎಂದು  ಕರ್ನಾಟಕ ರಕ್ಷಣಾ ವೇದಿಕೆ ಒತ್ತಾಯಿಸಿದೆ.

Related posts

Latest posts

ಕುಂಭ ಮೇಳ ಸಂದರ್ಭದಲ್ಲಿ ಮಾಡಿದ 1 ಲಕ್ಷ ಕೋವಿಡ್-19 ಪರೀಕ್ಷೆಗಳು ನಕಲಿ: ತನಿಖಾ ವರದಿ

ಹರಿದ್ವಾರದ ಕುಂಭ ಮೇಳ ಸಂದರ್ಭದಲ್ಲಿ ಮಾಡಲಾಗಿದ ನಾಲ್ಕು ಲಕ್ಷ ಕೋವಿಡ್ ಟೆಸ್ಟ್ ಫಲಿತಾಂಶಗಳಲ್ಲಿ ಹಲವು ನಕಲಿ ಎಂದು ಉತ್ತರಾಖಂಡ ಆರೋಗ್ಯ ಇಲಾಖೆ ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ. ವಿವರವಾದ ತನಿಖೆಯ 1,600 ಪುಟಗಳಲ್ಲಿ...

ನನ್ನ ಹೇಳಿಕೆಯಿಂದ ನಾನು ಹಿಂದೆ ಸರಿಯಲ್ಲ : ನಟ ಚೇತನ್ ಸ್ಪಷ್ಟನೆ

ಬ್ರಾಹ್ಮಣ್ಯ ವಿರೋಧಿ ಹೇಳಿಕೆ ಎಂಬ ಆರೋಪದ ಅಡಿ ಇಂದು ಬಸವನಗುಡಿ ಪೊಲೀಸರ ಮುಂದೆ ಹಾಜರಾದ ನಟ ಚೇತನ್ ತನ್ನ ಹೇಳಿಕೆಯ ಬಗ್ಗೆ ಪೊಲೀಸರ ಮುಂದೆ ಸ್ಪಷ್ಟನೆ ದಾಖಲಿಸಿದ್ದಾರೆ. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ...

ಚಿಕ್ಕಬಳ್ಳಾಪುರ: ಅರ್ಹ ಫಲಾನುಭವಿಗಳನ್ನು ಗುರುತಿಸುವಲ್ಲಿ ವಿಫಲ: ರೈತರಿಗೆ ಸಿಗುತ್ತಿಲ್ಲ ಪರಿಹಾರ ಧನ

ಕೊರೋನಾ ಲಾಕ್ಡೌನ್ ಸಮಯದಲ್ಲಿ ಸಂಕಷ್ಟಕ್ಕೊಳಗಾದ ರೈತರಿಗೆ ಸರ್ಕಾರ ಪರಿಹಾರದ ಅಭಯ ಕೊಟ್ಟಿತು. ಆದರೆ ಅರ್ಹ ಫಲಾನುಭವಿಗಳನ್ನ ಗುರುತಿಸುವಲ್ಲಿ ವಿಫಲವಾದ ಪರಿಣಾಮ ನಿಜವಾದ ರೈತರಿಗೆ ಪರಿಹಾರ ಸಿಗದಂತಾಗಿದೆ. ಈ ಕುರಿತು ಚಿಕ್ಕಬಳ್ಳಾಪುರದಲ್ಲಿ ರೈತರು ತಮ್ಮ...