ಸರ್ಕಾರ ಕೋವಿಡ್ ಲಸಿಕೆ ವಿತರಣೆಯಲ್ಲಿ ವಿಪಲಗೊಂಡ ಹಿನ್ನಲೆ ಕರ್ನಾಟಕ ರಕ್ಷಣ ವೇದಿಕೆ ಜೂನ್ 10 ರಂದು ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ ನೀಡಿದೆ. “ಉಚಿತ ಲಸಿಕೆ ಕೊಡಿ, ಇಲ್ಲವೇ ಅಧಿಕಾರ ಬಿಡಿ” ಎಂದು ರಾಜ್ಯ ಮತ್ತು ಒಕ್ಕೂಟ ಸರ್ಕಾರಗಳನ್ನು ಒತ್ತಾಯಿಸುವುದಾಗಿ ತಿಳಿಸಿದೆ.
ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ಟಿ.ಎ.ನಾರಾಯಣಗೌಡರ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಪದಾಧಿಕಾರಿಗಳು ಮತ್ತು ಜಿಲ್ಲಾಧ್ಯಕ್ಷರ ಜೂಮ್ ಸಭೆಯಲ್ಲಿ ಈ ಐತಿಹಾಸಿಕ ನಿರ್ಣಯ ಅಂಗೀಕರಿಸಲಾಗಿದ್ದು, ನಾರಾಯಣಗೌಡರ ಜನ್ಮದಿನವೂ ಆಗಿರುವ ಜೂ.10ರಂದು ಲಕ್ಷಾಂತರ ಕರವೇ ಕಾರ್ಯಕರ್ತರು ‘ಪ್ರತಿಭಟನಾ ದಿನ’ವನ್ನಾಗಿ ಆಚರಿಸಿ, ರಾಜ್ಯದ ಸಮಸ್ತ ಜನತೆಯ ಹಕ್ಕೊತ್ತಾಯವನ್ನು ಮಂಡಿಸಲಿದ್ದಾರೆ.

ಕರ್ನಾಟಕದ ಪ್ರತಿಯೊಬ್ಬರಿಗೂ ಜೂನ್ ತಿಂಗಳ ಅಂತ್ಯದೊಳಗೆ ಮೊದಲನೇ ಡೋಸ್ ಕೋವಿಡ್ ಲಸಿಕೆ ಮತ್ತು ಸೆಪ್ಟೆಂಬರ್ ತಿಂಗಳ ಅಂತ್ಯದೊಳಗೆ ಎರಡನೇ ಡೋಸ್ ಉಚಿತವಾಗಿ ನೀಡಬೇಕು. ಚುನಾವಣಾ ಬೂತ್ ಗಳು, ಪೊಲೀಯೋ ವ್ಯಾಕ್ಸಿನ್ ಬೂತ್ ರಚನೆ ಮಾಡುವ ಹಾಗೆ ನಾಗರಿಕರು ನಡೆದುಹೋಗುವಷ್ಟು ಹತ್ತಿರದಲ್ಲೇ ಲಸಿಕೆ ಬೂತ್ ಸ್ಥಾಪಿಸಿ, ಜನರನ್ನು ಕಾಯಿಸದೆ, ಸತಾಯಿಸದೆ ಲಸಿಕೆಗಳನ್ನು ನೀಡಬೇಕು ಎಂಬುದು ಕರ್ನಾಟಕ ರಕ್ಷಣಾ ವೇದಿಕೆಯ ಹಕ್ಕೊತ್ತಾಯ ಎಂದು ತಿಳಿಸಿದೆ.

2020 ರ ಮಾರ್ಚ್ ತಿಂಗಳಲ್ಲಿ ಕೋವಿಡ್-19 ಭಾರತಕ್ಕೆ ಕಾಲಿಟ್ಟ ನಂತರ ಸಾಮಾನ್ಯ ಜನರ ಬದುಕು ನರಕವಾಗಿ ಹೋಗಿದೆ. ಕೋವಿಡ್ ನಿಂದಾಗಿ ಅಪಾರ ಪ್ರಮಾಣದ ಸಾವುನೋವಾಗಿದೆ. ಮಕ್ಕಳು ಅಪ್ಪ ಅಮ್ಮಂದಿರನ್ನು ಕಳೆದುಕೊಂಡು ಅನಾಥರಾಗಿದ್ದಾರೆ. ಅದರ ಜತೆಗೆ ಒಕ್ಕೂಟ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಹೇರುತ್ತ ಬಂದಿರುವ ಲಾಕ್ ಡೌನ್ ಇತ್ಯಾದಿ ಕ್ರಮಗಳಿಂದಾಗಿ ಬಡತನ, ನಿರುದ್ಯೋಗ ಹೆಚ್ಚುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದೆ.
ಕಳೆದ ವರ್ಷದಿಂದಲೂ ಸಹ ಸರ್ಕಾರಗಳು ಜನರ ಮೇಲೆ ಜವಾಬ್ದಾರಿಗಳನ್ನು ಹೊರಿಸಿದವೇ ಹೊರತು ಜನರ ಜೀವ ರಕ್ಷಣೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಿಲ್ಲ. ಪಶ್ಚಿಮದ ದೇಶಗಳು ಕಳೆದ ವರ್ಷ ಜೂನ್ ತಿಂಗಳಿನಿಂದಲೇ ಕೋವಿಡ್ ಲಸಿಕೆಗಾಗಿ ಸಕಲ ಪ್ರಯತ್ನಗಳನ್ನು ನಡೆಸಿ, ಶೇ.50-60ರಷ್ಟು ಮಂದಿಗೆ ಲಸಿಕೆ ನೀಡಿದ ಪರಿಣಾಮವಾಗಿ ಎರಡನೇ ಅಲೆಯ ಹೊಡೆತದಿಂದ ಪಾರಾದವು. ಆದರೆ ನಮ್ಮಲ್ಲಿ ಮಾತ್ರ, ಒಕ್ಕೂಟ ಸರ್ಕಾರದ ಬೇಜವಾಬ್ದಾರಿ ನೀತಿಗಳಿಂದಾಗಿ ದೇಶದ ಶೇ.5ರಷ್ಟು ನಾಗರಿಕರಿಗೂ ಎರಡು ಡೋಸ್ ಲಸಿಕೆ ನೀಡಲಾಗಿಲ್ಲ. ಬದಲಾಗಿ ಭಾರತೀಯರ ಜೀವ ಕಾಪಾಡಬೇಕಿದ್ದ ಆರುವರೆ ಕೋಟಿ ಡೋಸ್ ಲಸಿಕೆಯನ್ನು ವಿದೇಶಗಳಿಗೆ ಕಳುಹಿಸಲಾಯಿತು ಎಂದು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಗಿದೆ.

ಲಸಿಕೆಗಳನ್ನು ನೀಡುವ ವಿಷಯದಲ್ಲಿ ಒಕ್ಕೂಟ ಸರ್ಕಾರದ ಬೇಜವಾಬ್ದಾರಿ, ತಾರತಮ್ಯದ ಕುರಿತು ಈಗಾಗಲೇ ದೇಶದ ಸರ್ವೋಚ್ಛ ನ್ಯಾಯಾಲಯ ಕೂಡ ಆಕ್ಷೇಪಗಳನ್ನು ಎತ್ತಿದೆ. ಒಕ್ಕೂಟ ಸರ್ಕಾರ ಡಿಸೆಂಬರ್ ತಿಂಗಳೊಳಗೆ 200 ಕೋಟಿ ಡೋಸ್ ಲಸಿಕೆ ಒದಗಿಸಲಾಗುವುದು ಎಂದು ಹೇಳುತ್ತಿದೆ. ಆದರೆ ಸದ್ಯದ ವಾಸ್ತವಿಕ ಚಿತ್ರಣ ಹಾಗಿಲ್ಲ. ಒಕ್ಕೂಟ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ಮೇಲಿನ ನಂಬಿಕೆ ಈಗಾಗಲೇ ಕುಸಿದು ಹೋಗಿದೆ. ಹೀಗಾಗಿ ನಾವು ಬೀದಿಗಿಳಿದು ಪ್ರತಿಭಟನೆ ನಡೆಸದೆ ಬೇರೆ ದಾರಿ ಕಾಣುತ್ತಿಲ್ಲ. ಕೋವಿಡ್ ಮೂರನೇ ಅಲೆ ಸೆಪ್ಟೆಂಬರ್, ಅಕ್ಟೋಬರ್ ತಿಂಗಳೊಳಗೆ ಅಪ್ಪಳಿಸಿದೆ ಎಂದು ತಜ್ಞರು, ವಿಜ್ಞಾನಿಗಳು ಈಗಾಗಲೇ ಅಂದಾಜು ಮಾಡಿದ್ದಾರೆ. ಅಷ್ಟರೊಳಗೆ ಲಸಿಕೆ ಪಡೆಯದವರ ಜೀವಗಳು ಅಪಾಯಕ್ಕೆ ಸಿಲುಕಲಿವೆ. ಇದಕ್ಕೆ ನಾವು ಅವಕಾಶ ನೀಡಕೂಡದು. ಲಸಿಕೆ ಎಲ್ಲಿಂದ ತರುತ್ತಾರೋ ತರಲಿ, ಕರ್ನಾಟಕದ ಪ್ರತಿಯೊಬ್ಬ ನಾಗರಿಕರಿಗೂ ಸೆಪ್ಟೆಂಬರ್ ತಿಂಗಳೊಳಗೆ ಎರಡೂ ಡೋಸ್ ಸಂಪೂರ್ಣವಾಗಿ ಉಚಿತ ಲಸಿಕೆ ನೀಡಬೇಕು. ಖಾಸಗಿ ಆಸ್ಪತ್ರೆಗಳ ದುಬಾರಿ ಬೆಲೆಯ ಲಸಿಕೆ ದಂಧೆ ನಿಲ್ಲಿಸಬೇಕು. ಪ್ರತಿಯೊಂದು ಡೋಸ್ ಲಸಿಕೆಯನ್ನೂ ಸರ್ಕಾರವೇ ನೀಡಬೇಕು. ಇದು ಸಾಧ್ಯವಿಲ್ಲ ಎನ್ನುವುದಾದರೆ, ಈ ಸರ್ಕಾರಗಳು ರಾಜೀನಾಮೆ ಕೊಟ್ಟು ತೊಲಗಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಆಗ್ರಹಿಸಿದೆ.

ಪ್ರತಿಭಟನೆ ಸ್ವರೂಪ:
ನಾಡಿನ ಎಲ್ಲ ಜಿಲ್ಲೆ, ತಾಲ್ಲೂಕು, ಹೋಬಳಿ, ಹಳ್ಳಿಗಳಲ್ಲಿರುವ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಮತ್ತು ಈ ಪ್ರತಿಭಟನೆಯನ್ನು ಬೆಂಬಲಿಸುವ ಸಂಘ ಸಂಸ್ಥೆಗಳು, ಸಾಮಾಜಿಕ ಕಾರ್ಯಕರ್ತರು, ಸಾಮಾನ್ಯ ಜನರು ತಾವು ಇರುವ ಸ್ಥಳಗಳಲ್ಲೇ ತಮ್ಮ ತಮ್ಮ ಮನೆಗಳಿಂದ ಹೊರಬಂದು, ಪ್ರಚಾರ ಫಲಕಗಳನ್ನು (ಪ್ಲಕಾರ್ಡ್) ಹಿಡಿದು ಪ್ರತಿಭಟಿಸುತ್ತಾರೆ. ಈ ಸಂದರ್ಭದಲ್ಲಿ ಕೋವಿಡ್ ನಿಯಮಾವಳಿಗಳನ್ನು ಕಡ್ಡಾಯವಾಗಿ ಪಾಲಿಸಲಾಗುವುದು. ಮಾಸ್ಕ್ ಧರಿಸಲಾಗುವುದು, ದೈಹಿಕ ಅಂತರ ಕಾಪಾಡಲಾಗುವುದು ಕಡ್ಡಾಯ.
ಒಂದು ಸಾವಿರಕ್ಕೂ ಹೆಚ್ಚು ಪ್ರತಿಭಟನೆಗಳ ಫೊಟೋ, ವಿಡಿಯೋಗಳನ್ನು ಗೂಗಲ್ ಡ್ರೈವ್ ಲಿಂಕ್ ಮೂಲಕ ಸರ್ಕಾರಕ್ಕೆ, ಮಾಧ್ಯಮಗಳಿಗೆ ತಲುಪಿಸಲಾಗುವುದು.
ಕೋವಿಡ್ ಲಸಿಕೆ ಪ್ರತಿಯೊಬ್ಬ ನಾಗರಿಕನ ಹಕ್ಕು. ಸರ್ಕಾರ ಅದನ್ನು ಮಾರಾಟಕ್ಕೆ ಇಡಕೂಡದು. ಪ್ರತಿಯೊಬ್ಬರಿಗೂ ಅದು ಉಚಿತವಾಗಿ ಸಿಗಬೇಕು, ಕಾಲಮಿತಿಯೊಳಗೆ ಸಿಗಬೇಕು ಎಂಬುದು ಕರ್ನಾಟಕ ರಕ್ಷಣಾ ವೇದಿಕೆಯ ಉದ್ದೇಶವಾಗಿದ್ದು, ಈ ಪ್ರತಿಭಟನೆಯಲ್ಲಿ ರಾಜ್ಯದ ಸರ್ವಜನತೆಯೂ ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ವಿನಂತಿಸಿದೆ.