Pratidhvani
Advertisement
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ
No Result
View All Result
Pratidhvani
No Result
View All Result

ಸಂಗೀತ ವಿಶ್ವವಿದ್ಯಾಲಯದಲ್ಲಿ ಅಮಾನುಷತೆಯ ಅಪಸ್ವರ

80 ದಿನಗಳ ಮುಷ್ಕರಕ್ಕೂ ಮಣಿಯದ ಸಂಸ್ಥೆಯಲ್ಲಿ ಸಂವೇದನೆಯ ಸ್ವರವನ್ನು ಹೆಕ್ಕಿತೆಗೆಯಬೇಕಿದೆ
ನಾ ದಿವಾಕರ

ನಾ ದಿವಾಕರ

May 11, 2022
Share on FacebookShare on Twitter

ನವ ಉದಾರವಾದ ಮತ್ತು ಬಂಡವಾಳದ ಜಾಗತೀಕರಣ ಸೃಷ್ಟಿಸಿರುವ ಮಾರುಕಟ್ಟೆ ವ್ಯವಸ್ಥೆಯಲ್ಲಿ ಮಾನವ ಸಮಾಜದ ಎಲ್ಲ ಅಂಗಗಳೂ ತಮ್ಮ ಸ್ವಂತಿಕೆಯನ್ನು ಕಳೆದುಕೊಂಡು ಬೆತ್ತಲಾಗುತ್ತಿವೆ. ಉತ್ಪಾದನಾ ವಲಯದಿಂದ ಸೇವಾವಲಯದವರೆಗೆ ವಿಸ್ತರಿಸಿರುವ ಬಂಡವಾಳ ವ್ಯವಸ್ಥೆಯ ಕ್ರೂರ ತೋಳುಗಳು, ಸಮಾಜ ನಿರ್ಮಾಣಕ್ಕೆ ಅಗತ್ಯವಾದ ಶಿಕ್ಷಣ, ಕಲೆ, ಸಂಸ್ಕೃತಿ, ಸಂವಹನ ಮತ್ತು ಮನುಜ ಸಂಬಂಧದ ಸೂಕ್ಷ್ಮ ಎಳೆಗಳನ್ನೂ ಆವರಿಸಿಕೊಂಡು, ಮಾರುಕಟ್ಟೆಗಳ ಹರಾಜು ಕಟ್ಟೆಗಳ ಮೇಲೆ ಪ್ರದರ್ಶನಕ್ಕಿಡುತ್ತಿವೆ.  ಪಾಶ್ಚಿಮಾತ್ಯ ಮತ್ತು ಐರೋಪ್ಯ ರಾಷ್ಟ್ರಗಳಲ್ಲಿ 1950ರಲ್ಲೇ ಆರಂಭವಾದ ನವ ಉದಾರವಾದದ ಪಯಣ ಭಾರತವನ್ನು ಪ್ರವೇಶಿಸಿದ್ದು 1980ರ ನಂತರದಲ್ಲೇ ಆದರೂ, ಕಳೆದ ನಾಲ್ಕು ದಶಕಗಳಲ್ಲಿ ಈ ಬೃಹತ್‌ ದೇಶದ ಸಾಂವಿಧಾನಿಕ ಬುನಾದಿಯನ್ನೂ ಶಿಥಿಲಗೊಳಿಸುವ ರೀತಿಯಲ್ಲಿ ಸಮಾಜದ ಎಲ್ಲ ವಲಯಗಳನ್ನೂ ನಿಷ್ಕ್ರಿಯಗೊಳಿಸುತ್ತಿದೆ. ಈ ಪ್ರಕ್ರಿಯೆಯನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವ ಸಲುವಾಗಿಯೇ ಬಂಡವಾಳ ಮಾರುಕಟ್ಟೆಯು ರಾಜಕೀಯ ಕ್ಷೇತ್ರದಲ್ಲೂ ಪಾರಮ್ಯ ಸಾಧಿಸಿದ್ದು, ಚುನಾಯಿತ ಸರ್ಕಾರಗಳ ಆಡಳಿತ ನೀತಿಗಳನ್ನು ನಿರ್ದೇಶಿಸುತ್ತಿವೆ. ಹಾಗಾಗಿಯೇ ಯಾವುದೇ ಬಂಡವಳಿಗ ಪಕ್ಷಗಳು, ಸಂವಿಧಾನಬದ್ಧತೆಯ ಹೊರತಾಗಿಯೂ, ಮಾರುಕಟ್ಟೆ ವ್ಯವಸ್ಥೆಯ ವಿರುದ್ಧ ಸೊಲ್ಲೆತ್ತುವುದಿಲ್ಲ.

ಹೆಚ್ಚು ಓದಿದ ಸ್ಟೋರಿಗಳು

ಬ್ರಾಹ್ಮಣ್ಯದ ಕ್ರೌರ್ಯ.. ದಲಿತರ ಮಾನವತಾವಾದ.. ನಂಗೇಲಿಯ ʼಪುಝುʼ : ಮಲಯಾಳಂನಲ್ಲಿ ಮತ್ತೊಂದು ʻಅಸ್ಪ್ರಶ್ಯ ಕಥಾʼಹಂದರ ಹೊಂದಿರುವ ಸಿನಿಮಾ !

ಸಿಕ್ಕುಗಳಲ್ಲಿ ಶಾಲಾ ಉಡುಪು

ಸಾಂತ್ವನದ ನೆಲೆಗಳ ಸಾಂಸ್ಥೀಕರಣವೂ ಸೌಹಾರ್ದತೆಯ ಹಂಬಲವೂ

2020ರ ಹೊಸ ಶಿಕ್ಷಣ ನೀತಿಯ ಮೂಲಕ ಭಾರತವನ್ನು ಡಿಜಿಟಲ್‌ ಶಿಕ್ಷಣದ ಉತ್ತುಂಗಕ್ಕೆ ಕೊಂಡೊಯ್ಯುವ ಪ್ರಯತ್ನದಲ್ಲಿರುವ ಭಾರತದ ಆಳುವ ವರ್ಗಗಳ ಪ್ರಥಮ ಹೆಜ್ಜೆಯನ್ನೂ ಸಹ 1980ರ ಸಂದರ್ಭದಲ್ಲೇ ಗುರುತಿಸಬಹುದು. ಉನ್ನತ ಶಿಕ್ಷಣ ಸಂಸ್ಥೆಗಳ ವಾಣಿಜ್ಯೀಕರಣ ಪ್ರಕ್ರಿಯೆಗೆ ನಾಂದಿ ಹಾಡಿದ ಇಂದಿರಾ-ರಾಜೀವ್‌ಗಾಂಧಿ ಸರ್ಕಾರ ಕಟ್ಟಿದ ಕಾರ್ಪೋರೇಟ್‌ ಸಾಮ್ರಾಜ್ಯದ ಅಡಿಗಲ್ಲುಗಳನ್ನು ಮತ್ತಷ್ಟು ಭದ್ರಪಡಿಸಿದ್ದು 1991ರ ನಂತರದ ಸರ್ಕಾರಗಳು. ಅಂದು ಸಂಶೋಧನೆ ಮತ್ತು ಅಧ್ಯಯನ ಕ್ಷೇತ್ರದ ಅತ್ಯುನ್ನತ ಸಂಸ್ಥೆಗಳಿಂದ ಆರಂಭವಾದ ಖಾಸಗೀಕರಣ ಮತ್ತು ವಾಣಿಜ್ಯೀಕರಣ ಪ್ರಕ್ರಿಯೆ ಇಂದಿನ ಡಿಜಿಟಲ್‌ ಯುಗದಲ್ಲಿ ತಾರ್ಕಿಕ ಅಂತ್ಯ ಕಾಣುತ್ತಿದೆ. ದೇಶದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳನ್ನು ದುರ್ಬಲಗೊಳಿಸುತ್ತಲೇ ಖಾಸಗಿ ವಿಶ್ವವಿದ್ಯಾಲಯಗಳನ್ನು ಪೋಷಿಸಿದ ಸರ್ಕಾರಗಳು, ನೂರಾರು ಪರಿಭಾವಿತ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸುವ ಮೂಲಕ ಬೋಧನೆ, ಅಧ್ಯಯನ ಮತ್ತು ಸಂಶೋಧನೆಯ ನಿರ್ವಹಣೆಯ ಜವಾಬ್ದಾರಿಯನ್ನು ಕಾರ್ಪೋರೇಟ್‌ ವಲಯಕ್ಕೆ ಒಪ್ಪಿಸಲಾರಂಭಿಸಿದ್ದು 1998ರ ವಾಜಪೇಯಿ ಆಡಳಿತಾವಧಿಯಲ್ಲಿ. ಈ ಪ್ರಯತ್ನಗಳಿಗೆ ನರೇಂದ್ರ ಮೋದಿ ಸರ್ಕಾರ ಹೊಸ ಶಿಕ್ಷಣ ನೀತಿಯ ಮೂಲಕ ಸ್ಪಷ್ಟ ರೂಪ ನೀಡುತ್ತಿದೆ.

ದೇಶದ ಎಲ್ಲ ವಿಶ್ವವಿದ್ಯಾಲಯಗಳಲ್ಲಿ ಮತ್ತು ಶೈಕ್ಷಣಿಕ ಅಧ್ಯಯನ ಕೇಂದ್ರಗಳಲ್ಲಿ ಹಾಗೂ ಶಾಲಾ ಕಾಲೇಜುಗಳಲ್ಲಿ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯನ್ನು ಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳುವ ಪ್ರಕ್ರಿಯೆ ಆರಂಭವಾದದ್ದೂ 1980ರಿಂದಲೇ. ಮಾರುಕಟ್ಟೆ ವ್ಯವಸ್ಥೆಗೆ ತೆರೆದುಕೊಳ್ಳುತ್ತಿದ್ದ ಭಾರತದ ಆರ್ಥಿಕತೆಯಲ್ಲಿ ಬಂಡವಾಳ ಹೂಡಿಕೆದಾರರಿಗೆ ಪ್ರಶಸ್ತವಾದ ಭೂಮಿಕೆಯನ್ನು ಸೃಷ್ಟಿಸುವ ನಿಟ್ಟಿನಲ್ಲಿ ಇದು ಪ್ರಥಮ ಹೆಜ್ಜೆಯಾಗಿತ್ತು. ಯುಜಿಸಿ ನಿಯಮಾನುಸಾರವೇ ನೇಮಕವಾಗುತ್ತಿದ್ದ ವಿಶ್ವವಿದ್ಯಾಲಯದ ಬೋಧಕ ಸಿಬ್ಬಂದಿಗೆ ಜೀವನೋಪಾಯಕ್ಕೆ ಅವಶ್ಯವಾದಷ್ಟು ವೇತನ ಲಭ್ಯವಾಗುತ್ತಿದ್ದರೂ, ಖಾಯಂ ನೌಕರಿ ಹೊಂದಿರುವವರಿಗೆ ಹೋಲಿಸಿದರೆ ಅಜಗಜಾಂತರ ಅಂತರ ಇರುವುದು ಇಂದಿಗೂ ವಾಸ್ತವ. ಗುತ್ತಿಗೆ ಆಧಾರಿತ ಬೋಧಕ ಸಿಬ್ಬಂದಿಯನ್ನು ನೇಮಿಸುವ ಪ್ರಕ್ರಿಯೆ ಪ್ರಾಥಮಿಕ ಹಂತದಿಂದ ಕಾಲೇಜು ಶಿಕ್ಷಣದವರೆಗೂ ವ್ಯಾಪಿಸಲಾರಂಭಿಸಿದ್ದು 1998ರ ನಂತರ. 2000ದ ನಂತರದಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಕಾರ್ಪೋರೇಟ್‌ ಪ್ರವೇಶವಾದ ನಂತರ ಹೊರಗುತ್ತಿಗೆಯ ಪದ್ಧತಿಯೂ ಜಾರಿಗೆ ಬಂದಿತ್ತು. ಸಂಸ್ಥೆಗಳಿಗೆ ದುಡಿಮೆಗಾರರನ್ನು ಪೂರೈಸುವ ಹೊರಗುತ್ತಿಗೆ ಉದ್ದಿಮೆಗಳು, ನಿರುದ್ಯೋಗದಿಂದ ಬಳಲುತ್ತಿದ್ದ ಪೀಳಿಗೆಗೆ ಕಡಿಮೆ ವೇತನ ನೀಡುವ ಮೂಲಕ, ಶಿಕ್ಷಣ ಸಂಸ್ಥೆಗಳನ್ನೂ ಪ್ರವೇಶಿಸಿದ್ದವು.

ಈ ಎರಡು ದಶಕಗಳ ಅಂತರದಲ್ಲಿ ಶೈಕ್ಷಣಿಕ ವಲಯದಲ್ಲಿ ಲಕ್ಷಾಂತರ ಹುದ್ದೆಗಳು ಸೃಷ್ಟಿಯಾದವು. ಆದರೆ ಖಾಯಂ ನೌಕರಿ ಮರೀಚಿಕೆಯಾಗಿತ್ತು. ಗುತ್ತಿಗೆ ಆಧಾರಿತ ಬೋಧಕ ಮತ್ತು ಬೋಧಕೇತರ ಹುದ್ದೆಗಳನ್ನು ಸರ್ಕಾರಿ ಶಾಲಾ ಕಾಲೇಜುಗಳಲ್ಲೂ ಸೃಷ್ಟಿಸಲಾಯಿತು. ವಿಶ್ವವಿದ್ಯಾಲಯಗಳೂ ಸಹ ಇದೇ ಹಾದಿಯನ್ನು ಅನುಸರಿಸಿದವು. ಗುತ್ತಿಗೆ ಆಧಾರಿತ ಕಾರ್ಮಿಕರು ಯಾವುದೇ ಕ್ಷೇತ್ರದಲ್ಲಿದ್ದರೂ ಅನಿಶ್ಚಿತತೆಯಿಂದಲೇ ಕಾರ್ಯ ನಿರ್ವಹಿಸಬೇಕಾಗುತ್ತದೆ. ನಿವೃತ್ತಿಯ ನಂತರದ ಬದುಕಿನ ಕನಸನ್ನೂ ಕಾಣದಂತೆ ತಮ್ಮ ಜೀವನ ಮತ್ತು ಜೀವನೋಪಾಯದ ಮಾರ್ಗವಾಗಿ ತಮ್ಮ ಕಾಯಕವನ್ನು ಕಾಪಾಡಿಕೊಳ್ಳಬೇಕಾದ ಅನಿವಾರ್ಯತೆಗೆ ಒಳಗಾಗುತ್ತಾರೆ. ಶಾಲಾ ಕಾಲೇಜು ಆಡಳಿತ ಮಂಡಲಿಯ, ವಿಶ್ವವಿದ್ಯಾಲಯದ ಸೆನೇಟ್‌ ಮತ್ತು ಸಿಂಡಿಕೇಟ್‌ಗಳ ಮುಲಾಜಿಗೆ ಒಳಗಾಗುತ್ತಲೇ, ಹೊಂದಾಣಿಕೆಯತ್ತ ಯೋಚಿಸಬೇಕಾಗುತ್ತದೆ. ಉದ್ಯೋಗ ಭದ್ರತೆಗೂ ಆಡಳಿತ ಮಂಡಲಿಯ ವಿವೇಚನೆಗೂ ನೇರ ಸಂಬಂಧ ಇರುವುದರಿಂದ ಈ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಅನಿಶ್ಚಿತತೆಯ ನಡುವೆಯೇ ಕಾಲ ಕಳೆಯಬೇಕಾಗುತ್ತದೆ. ಶಿಕ್ಷಣ ವ್ಯವಸ್ಥೆಯ ವಾಣಿಜ್ಯೀಕರಣ ಪ್ರಕ್ರಿಯೆ ಚುರುಕಾದಂತೆ, 2010ರ ನಂತರ ಕಾರ್ಪೋರೇಟ್‌ ಉದ್ದಿಮೆಯ ಪಾರಮ್ಯ ಹೆಚ್ಚಾಗತೊಡಗಿದ ಕಾರಣ ಈ ತಾತ್ಕಾಲಿಕ ಹುದ್ದೆಗಳೂ ಈಗ ಅಪಾಯಕ್ಕೊಳಗಾಗಿದ್ದು, ಶೈಕ್ಷಣಿಕ ಸಂಸ್ಥೆಗಳ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಮತ್ತಷ್ಟು ಅಭದ್ರತೆಯನ್ನು ಎದುರಿಸುವಂತಾಗಿದೆ. ಶಿಕ್ಷಣವನ್ನು ಸಂಪೂರ್ಣ ಖಾಸಗೀಕರಣಗೊಳಿಸಿ ಕಾರ್ಪೋರೇಟ್‌ ಸಂಸ್ಥೆಗಳಿಗೆ ಒಪ್ಪಿಸುವ ಸಲುವಾಗಿಯೇ ಹೊಸ ಶಿಕ್ಷಣ ನೀತಿಯನ್ನೂ ಜಾರಿಗೊಳಿಸಲಾಗಿದೆ.

 ಸಂಗೀತ ವಿವಿಯ ಅಪಸ್ವರಗಳು

ಈ ಬೆಳವಣಿಗೆಗಳ ಹಿನ್ನೆಲೆಯಲ್ಲೇ ಮೈಸೂರಿನ ಗಂಗೂಬಾಯಿ ಹಾನಗಲ್‌ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ 21 ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯ 80 ದಿನಗಳ ಮುಷ್ಕರವನ್ನೂ ನೋಡಬೇಕಿದೆ. 2008-09ರಲ್ಲಿ ಮಹದಾಕಾಂಕ್ಷೆಗಳೊಂದಿಗೆ ಆರಂಭವಾದ ಈ ಸಂಸ್ಥೆ ನಿರೀಕ್ಷಿತ ಮಟ್ಟದಲ್ಲಿ ಬೆಳೆಯಲು ಸಾಧ್ಯವಾಗಿಲ್ಲವಾದರೂ, ಪ್ರಸಕ್ತ ಆಡಳಿತ ಮಂಡಲಿಯ ಅಮಾನುಷತೆಯ ಕಾರಣಕ್ಕಾಗಿ ಸುದ್ದಿಯಲ್ಲಿರುವುದು ದುರಂತವಾಸ್ತವ. ಈ ಸಂಸ್ಥೆಯಲ್ಲಿ ಆರಂಭದಿಂದಲೂ ಕರ್ತವ್ಯ ನಿರ್ವಹಿಸಿಕೊಂಡು ಬರುತ್ತಿರುವ 21 ಜನ ತಾತ್ಕಾಲಿಕ ಬೋಧಕೇತರ ಸಿಬ್ಬಂದಿಗಳಿಗೆ, ಲಭ್ಯವಾಗುವ ಅನುದಾನದಲ್ಲೇ ಕ್ರೋಢೀಕೃತ ವೇತನ ನೀಡಲಾಗುತ್ತಿತ್ತು. ಖಾಯಂ ಸಿಬ್ಬಂದಿಯ ಮೂಲ ವೇತನಕ್ಕಿಂತಲೂ 10 ರೂ ಕಡಿಮೆ ವೇತನ ನೀಡುವ ಮೂಲಕ ಈ ತಾತ್ಕಾಲಿಕ ಬೋಧಕೇತರ ಸಿಬ್ಬಂದಿಗೆ 2021ರವರೆಗೂ ವೇತನ ಪಾವತಿಸಲಾಗಿದ್ದು, ಒಪ್ಪಂದದ ಅನುಸಾರ ಪ್ರತಿ ಆರು ತಿಂಗಳಿಗೊಮ್ಮೆ ನೇಮಕಾತಿಯನ್ನು ಪರಿಷ್ಕರಿಸಲಾಗುತ್ತಿತ್ತು. 2019ರಲ್ಲಿ ಆರನೆ ವೇತನ ಆಯೋಗದ ಆದೇಶದನ್ವಯ ವೇತನ ಪರಿಷ್ಕರಣೆಯನ್ನೂ ಮಾಡಲಾಗಿತ್ತು.

ಆದರೂ ಅನುದಾನದ ಕೊರತೆಯ ನೆಪದಲ್ಲಿ ಈ ಬೋಧಕೇತರ ಸಿಬ್ಬಂದಿಗೆ ಏಪ್ರಿಲ್‌ 2021ರಿಂದಲೂ ವೇತನ ನೀಡಲಾಗಿಲ್ಲ. ಆಡಳಿತ ಮಂಡಲಿಯ ಈ ನಿರ್ಧಾರದ ವಿರುದ್ಧ ಎಂಟು ಸಿಬ್ಬಂದಿಗಳು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಇನ್ನುಳಿದ 13 ಜನರು, ಸಂಗೀತ ವಿಶ್ವವಿದ್ಯಾಲಯದಲ್ಲಿ ಏನಿಲ್ಲದಿದ್ದರೂ, ಸಂವೇದನೆಯಂತೂ ಇರುತ್ತದೆ ಎಂಬ ವಿಶ್ವಾಸದೊಂದಿಗೆ ತಮ್ಮ ಸೇವೆಯನ್ನು ವೇತನರಹಿತವಾಗಿ ಮುಂದುವರೆಸಿದ್ದರು. ಹತ್ತು ತಿಂಗಳ ಕಾಲ ಯಾವುದೇ ವೇತನ ಪಡೆಯದೆ ಕಾರ್ಯನಿರ್ವಹಿಸಿದ ಈ ಸಿಬ್ಬಂದಿಯನ್ನು ವಿಶ್ವವಿದ್ಯಾಲಯದ ಉಪಕುಲಪತಿಗಳು 07-02-2022ರ ಆದೇಶದನ್ವಯ ಏಕಾಏಕಿ ಹೊರಹಾಕಿದ್ದಾರೆ. ಹೀಗಾಗಿ ಬದುಕಿನ ತಾಳ ಲಯ ತಪ್ಪಿದಂತಾಗಿರುವ ಸಂಗೀತ ವಿಶ್ವವಿದ್ಯಾಲಯದ 21 ಜನ ಬೋಧಕೇತರ ಸಿಬ್ಬಂದಿ, ತಾವು ದುಡಿಮೆ ಮಾಡಿದ 10 ತಿಂಗಳ ವೇತನಕ್ಕಾಗಿ ಮತ್ತು ಮರು ನೇಮಕಾತಿಗಾಗಿ ಪ್ರತಿಭಟನೆಯ ಹಾದಿ ಹಿಡಿಯುವ ಮೂಲಕ ಪ್ರತಿರೋಧದ ಕಲೆಯನ್ನು ಅನಿವಾರ್ಯವಾಗಿ ಪ್ರದರ್ಶನ ಮಾಡಬೇಕಿದೆ. ವಿಶ್ವವಿದ್ಯಾಲಯದ ಉಪಕುಲಪತಿಗಳು ಯಾವುದೇ ಪೂರ್ವ ಸೂಚನೆ ನೀಡದೆ ಈ ಸಿಬ್ಬಂದಿಯನ್ನು ಹೊರಹಾಕುವ ಮೂಲಕ 21 ಕುಟುಂಬಗಳನ್ನು ನಿರ್ಗತಿಕರನ್ನಾಗಿ ಮಾಡಿದ್ದಾರೆ. ಅಕ್ಷರಶಃ ಬೀದಿಪಾಲಾಗಿರುವ 21 ಜನ ಬೋಧಕೇತರ ಸಿಬ್ಬಂದಿ ತಮ್ಮ ಜೀವನ ನಿರ್ವಹಣೆಯೂ ದುಸ್ತರವಾಗಿರುವ ಸನ್ನಿವೇಶದಲ್ಲಿ ಹಗಲು ರಾತ್ರಿ ಎನ್ನದೆ, ಮಳೆ ಗಾಳಿಯನ್ನು ಲೆಕ್ಕಿಸದೆ, ಕಳೆದ 80 ದಿನಗಳಿಂದ ಸಂಸ್ಥೆಯ ಮುಂದೆಯೇ ತಮ್ಮ ಪ್ರತಿರೋಧದ ರಾಗಾಲಾಪದೊಂದಿಗೆ, ಸಂಗೀತ ವಿಶ್ವವಿದ್ಯಾಲಯದಲ್ಲಿ  ನಿದ್ರಾವಸ್ಥೆಯಲ್ಲಿರುವ ಅಧಿಕಾರಿ ವರ್ಗವನ್ನು ಎಚ್ಚರಿಸಲು ಪ್ರಯತ್ನಿಸುತ್ತಿದ್ದಾರೆ.

ಈ 21 ಸಿಬ್ಬಂದಿಗಳಲ್ಲಿ ಇಬ್ಬರು ನಿವೃತ್ತರಾಗಿದ್ದಾರೆ. ಎಲ್ಲರೂ ಸಂಸಾರಸ್ಥರೇ ಆಗಿದ್ದಾರೆ. 12 ವರ್ಷಗಳಿಂದ ಸಂಸ್ಥೆಗಾಗಿ ದುಡಿದು ಈ ಸಂಸ್ಥೆಯನ್ನು ಉಳಿಸಿ ಬೆಳೆಸಿದ್ದಾರೆ. ಇವರನ್ನೇ ನಂಬಿ ಬದುಕುತ್ತಿರುವ ಕುಟುಂಬ ಸದಸ್ಯರಿದ್ದಾರೆ. ಮಹಿಳೆಯರನ್ನೂ ಒಳಗೊಂಡ ಈ ಸಿಬ್ಬಂದಿ ವರ್ಗ ಕಳೆದ 15 ತಿಂಗಳಿಂದ ವೇತನವಂಚಿತರಾಗಿದ್ದಾರೆ.  ಶಾಲೆ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳೊಂದಿಗೆ ಬದುಕು ಸವೆಸುತ್ತಿದ್ದಾರೆ. ಮಕ್ಕಳಿಗೆ ಶಾಲಾ ಶುಲ್ಕವನ್ನೂ ಭರಿಸಲಾಗದೆ, ಸಂಸಾರದಲ್ಲಿ ಒಪ್ಪೊತ್ತಿನ ಊಟಕ್ಕೂ ತೊಂದರೆ ಅನುಭವಿಸುತ್ತಿರುವ ಈ ಸಿಬ್ಬಂದಿಯ ಬವಣೆಯನ್ನು ಗಮನಿಸದಷ್ಟು ಅಮಾನುಷತೆ ಆಡಳಿತ ವ್ಯವಸ್ಥೆಯಲ್ಲಿ ಢಾಳಾಗಿ ಕಾಣುತ್ತಿದೆ. ಫೆಬ್ರವರಿ 2022ರವರೆಗೂ ಇವರಿಂದ ದುಡಿಮೆ ಮಾಡಿಸಿಕೊಂಡಿರುವ ಒಂದು ಸಂಸ್ಥೆ ಅನುದಾನದ ಕೊರತೆ ಎಂದು ಹೇಳಿ ಶ್ರಮಕ್ಕೆ ತಕ್ಕ ವೇತನ ನೀಡದಿರುವುದು ಅಮಾನುಷ ಕ್ರೌರ್ಯ ಅಲ್ಲವೇ ? ಲಕ್ಷಾಂತರ ರೂಗಳ ವೇತನ ಪಡೆಯುವ ಉಪಕುಲಪತಿಗಳು, ಕುಲಸಚಿವರು ತಮ್ಮ ಐಷಾರಾಮಿ ಕಾರುಗಳಲ್ಲಿ ಓಡಾಡುವಾಗ ತಮ್ಮ ವೃತ್ತಿ-ಕುಲಬಾಂಧವರೇ ನಿರ್ಗತಿಕರಾಗಿ ಸಂಸ್ಥೆಯ ಮುಂದೆ ಕುಳಿತಿರುವುದನ್ನು ಗಮನಿಸಲೇಬೇಕಲ್ಲವೇ ? ಸಂಯಮ, ಸೌಜನ್ಯ, ಸಂವೇದನೆ ಮತ್ತು ವಿನಯ ವಿನಮ್ರತೆ ಇವೆಲ್ಲವೂ ಸಂಗೀತ ಲೋಕದ ಆಕರಗಳು. ಈ ಲೋಕದ ವಿಸ್ತರಣೆಗಾಗಿಯೇ ಸ್ಥಾಪಿಸಲಾಗಿರುವ ಒಂದು ಶೈಕ್ಷಣಿಕ ಸಂಸ್ಥೆಯ ನಿರ್ವಾಹಕರಲ್ಲಿ ಇದಾವ ಲಕ್ಷಣಗಳೂ ಇಲ್ಲದಿರುವುದು ವಿಡಂಬನೆ ಎನಿಸಿದರೂ ವಾಸ್ತವ. ಸರ್ಕಾರ ಈಗಾಗಲೇ ನೀಡಿರುವ ಅನುದಾನದಲ್ಲೂ ಬೋಧಕ ಸಿಬ್ಬಂದಿಗೆ ಮಾತ್ರ ವೇತನ ಪಾವತಿಸಿ, ಈ ಅಮಾಯಕ ಸಿಬ್ಬಂದಿಯನ್ನು ನಿರ್ಗತಿಕರನ್ನಾಗಿ ಮಾಡಿರುವ ಸಂಸ್ಥೆಯ ಆಡಳಿತ ಮಂಡಲಿಗೆ  ಕೊಂಚ ಮಟ್ಟಿಗಾದರೂ ನೈತಿಕತೆ        ಇರಬೇಕಲ್ಲವೇ ?

60 ದಿನಗಳ ಸತತ ಪ್ರತಿಭಟನೆ, ಮುಷ್ಕರದ ನಂತರ ಸರಣಿ ಉಪವಾಸ ಸತ್ಯಾಗ್ರಹ ಆರಂಭಿಸಿರುವ ಈ ಸಿಬ್ಬಂದಿ ವರ್ಗ ಈಗ 80 ದಿನಗಳನ್ನು ಪೂರೈಸಿದ್ದಾರೆ. ಮೈಸೂರಿನ ಪ್ರಗತಿಪರ ಸಂಘಟನೆಗಳು, ಎಡ ಪಂಥೀಯ ಪಕ್ಷ ಮತ್ತು ಸಂಘಟನೆಗಳು, ದಲಿತ ಸಂಘಟನೆಗಳು ಮತ್ತು ಮಹಿಳಾ ಸಂಘಟನೆಗಳು, ನಾಗರಿಕ ಸಂಘಟನೆಗಳು ಈ ಮುಷ್ಕರ ನಿರತರೊಡನೆ ಸಹಾನುಭೂತಿಯೊಂದಿಗೆ ಭಾಗವಹಿಸಿವೆ. ನವ ಭಾರತದಲ್ಲಿ “ ಆಂದೋಲನ ಜೀವಿಗಳು ” ಎಂದೇ ಗುರುತಿಸಲ್ಪಡುವ ಈ ಪ್ರತಿರೋಧದ ದನಿಗಳಿಗೆ ಕಿವಿಯಾಗುವ ಸಂಯಮವನ್ನೂ ಈ ಕ್ಷೇತ್ರದ ಮತ್ತು ಮೈಸೂರಿನ ಹಾಲಿ/ಮಾಜಿ ಶಾಸಕರು/ಸಂಸದರು ತೋರದಿರುವುದು ಆಳುವ ವರ್ಗಗಳಲ್ಲಿ ಅಂತರ್ಗತವಾಗಿರುವ ನಿರ್ಲಿಪ್ತ ನಿಷ್ಕ್ರಿಯತೆಯ ಸಂಕೇತವೇ ಆಗಿದೆ. ಸಂಸದ ಪ್ರತಾಪ್‌ ಸಿಂಹ ಅವರು 75 ದಿನಗಳ ಮುಷ್ಕರದ ನಂತರ ಭೇಟಿ ನೀಡಿ ಸಮಸ್ಯೆ ಬಗೆಹರಿಸುವುದಾಗಿ ಆಶ್ವಾಸನೆ ನೀಡಿರುವುದು ಸ್ವಾಗತಾರ್ಹವೇ ಆದರೂ, ತಮ್ಮ ಜೀವನೋಪಾಯಕ್ಕಾಗಿ ಹೋರಾಟ ನಡೆಸುತ್ತಿರುವ ದುಡಿಮೆಗಾರರತ್ತ ತಿರುಗಿಯೂ ನೋಡದ ಜನಪ್ರತಿನಿಧಿಗಳು ಈ ಸಂದರ್ಭದಲ್ಲಿ ಪ್ರಾಮಾಣಿಕವಾಗಿ ಆತ್ಮವಿಮರ್ಶೆ ಮಾಡಿಕೊಳ್ಳಬೇಕಿದೆ.

80 ದಿನಗಳಿಂದ ಚಳಿ ಮಳೆ ಗಾಳಿಯನ್ನು ಲೆಕ್ಕಿಸದೆ ಸಂಗೀತ ವಿಶ್ವವಿದ್ಯಾಲಯದ ಮುಂಭಾಗದಲ್ಲೇ ಮೊಳಗುತ್ತಿರುವ “ ಬೇಕೇ ಬೇಕು ನ್ಯಾಯ ಬೇಕು  ” ಎಂಬ ಪ್ರತಿರೋಧದ ನಿನಾದಕ್ಕೆ ಜನಪ್ರತಿನಿಧಿಗಳು ಕಿವುಡಾಗಿರುವುದು ವರ್ತಮಾನದ ದುರಂತ. ಇದೇನೂ ಹೊಸತಲ್ಲ. ಸರ್ಕಾರಿ ಕಾಲೇಜುಗಳ ಅತಿಥಿ ಉಪನ್ಯಾಸಕರು ಖಾಯಂ ನೌಕರಿಗಾಗಿ ಒಂದು ತಿಂಗಳಿಗೂ ಹೆಚ್ಚು ಕಾಲ ಮುಷ್ಕರ ನಡೆಸಿದಾಗಲೂ ಇದೇ ನಿಷ್ಕ್ರಿಯತೆಯನ್ನು ಕಾಣಬಹುದಿತ್ತು. ಗುತ್ತಿಗೆ ಆಧಾರಿತ ಸಿಬ್ಬಂದಿಯನ್ನು ಯಾವುದೇ ಕ್ಷಣದಲ್ಲಾದರೂ ಬೀದಿ ಪಾಲು ಮಾಡುವ ಸ್ವಾತಂತ್ರ್ಯ ಮತ್ತು ಸ್ವಾಯತ್ತತೆಯನ್ನು ಎಲ್ಲ ಶೈಕ್ಷಣಿಕ ಸಂಸ್ಥೆಗಳಿಗೂ ನೀಡಲಾಗಿದ್ದು, ಈ ಸಂಸ್ಥೆಯ ಉಪಕುಲಪತಿಗಳೂ ಇದೇ ವಿವೇಚನಾಧಿಕಾರವನ್ನು ಬಳಸಿದ್ದಾರೆ. ಆದರೆ ಈ ನೋವಿನ ದನಿಗಳಿಗೆ, ವೇದನೆಯ ಕೂಗಿಗೆ ಸ್ಪಂದಿಸಬೇಕಾದ ಸಮಾಜ ಎಲ್ಲಿ ಮರೆಯಾಗಿದೆ ? ಸಂಗೀತ ವಿಶ್ವವಿದ್ಯಾಲಯದ ಒಳಾಂಗಣದಲ್ಲಿ ಮೊಳಗುವ ವೀಣೆ, ತಂಬೂರಿ, ಮೃದಂಗ, ತಬಲಗಳ ಲಯಬದ್ಧ ನಾದದೊಂದಿಗೇ ಹೊರಾಂಗಣದ ರಸ್ತೆಯಲ್ಲಿ ಹಸಿದ ಹೊಟ್ಟೆಗಳ ತಳಮಳದ ನಿನಾದವೂ ಘೋಷಣೆಗಳ ಮೂಲಕ ಕೇಳಿಬರುತ್ತಲೇ ಇದೆ. ಈ ನಿನಾದಕ್ಕೆ ಸ್ಪಂದಿಸುವಂತಹ ಮಾನವೀಯ ಮೌಲ್ಯಗಳನ್ನು ಹವಾನಿಯಂತ್ರಿತ ಕೋಣೆಯಲ್ಲಿ ಕುಳಿತ ಅಧಿಕಾರ ವರ್ಗ ಕಳೆದುಕೊಂಡಿದೆ. ವಿಧಾನಸೌಧದಲ್ಲಿ ಕುಳಿತವರೂ ಕಳೆದುಕೊಂಡಿದ್ದಾರೆ.

ಇಂದು ಸಂಗೀತ ವಿಶ್ವವಿದ್ಯಾಲಯದಲ್ಲಿ ಕಾಣುತ್ತಿರುವ ಕ್ಷೋಭೆ  ನಾಳೆ ಮೈಸೂರು ವಿಶ್ವವಿದ್ಯಾಲಯದಲ್ಲೂ ಕಾಣಲು ಸಾಧ್ಯ. ಇದು ಭಾರತದ ಅರ್ಥ ವ್ಯವಸ್ಥೆ ನಡೆಯುತ್ತಿರುವ ಹಾದಿಯಲ್ಲಿನ ಕಂಟಕಗಳು. ಈ 21 ಸಿಬ್ಬಂದಿಗಳ ದನಿಗೆ ದನಿಗೂಡಿಸುವುದು ಎಲ್ಲ ದುಡಿಮೆಗಾರರ ಆದ್ಯತೆ ಮತ್ತು ಕರ್ತವ್ಯವೆಂದೇ ಭಾವಿಸಬೇಕು. ಹೊರಗುತ್ತಿಗೆ ನೌಕರಿ, ಗುತ್ತಿಗೆ ಆಧಾರಿತ ನೌಕರಿ, ಹಂಗಾಮಿ ಮತ್ತು ತಾತ್ಕಾಲಿಕ ನೌಕರಿ, ಅತಿಥಿ ಉಪನ್ಯಾಸಕ ಹುದ್ದೆ ಮತ್ತು ದಿನಗೂಲಿ ಆಧಾರಿತ ನೌಕರಿ ಇವೆಲ್ಲವೂ ಸುಸ್ಥಿರ ಸಮಾಜದ ಅಡಿಪಾಯವನ್ನೇ ಶಿಥಿಲಗೊಳಿಸಲು ಬಂಡವಾಳ ವ್ಯವಸ್ಥೆಯಲ್ಲಿ ಬಳಸಲಾಗುವ ಉಪಕರಣಗಳು. ಇಂದು ಗಂಗೂಬಾಯಿ ಸಂಗೀತ ಮತ್ತು ಪ್ರದರ್ಶಕ ಕಲೆ ವಿಶ್ವವಿದ್ಯಾಲಯದ ಸಿಬ್ಬಂದಿಯ ನೋವಿನ ದನಿಗಳಿಗೆ ಕಿವಿಯಾಗದೆ ಸಮಾಜ ನಿಷ್ಕ್ರಿಯವಾದರೆ, ಬಹುಶಃ ಡಿಜಿಟಲ್‌ ಭಾರತ ಇಂತಹ ಕೋಟ್ಯಂತರ ದನಿಗಳನ್ನು ಸೃಷ್ಟಿಸುವ ವೇಳೆಗೆ ನಿರ್ವೀರ್ಯವಾಗಿಬಿಡುತ್ತದೆ. ಸಂಗೀತ ವಿಶ್ವವಿದ್ಯಾಲಯದ ಲಯಬದ್ಧ ಆಲಾಪನೆಯ ನಡುವೆಯೇ ಈ ಸಂಸ್ಥೆಯೊಳಗಿನ ಅಮಾನುಷ ಕ್ರೌರ್ಯದ ತಪ್ಪು ತಾಳಗಳನ್ನು ಸರಿಪಡಿಸುವ ನೈತಿಕ ಜವಾಬ್ದಾರಿ ಸಾರ್ವಜನಿಕರ ಮೇಲಿದೆ.

RS 500
RS 1500

SCAN HERE

don't miss it !

ಆಂಧ್ರ ಪ್ರದೇಶ ಕಡತ ತೀರಕ್ಕೆ ಅಪ್ಪಳಿಸಿದ ಅಸಾನಿ ಚಂಡಮಾರುತ
ಸಿನಿಮಾ

ಕರಾವಳಿಯಲ್ಲಿ 5 ದಿನ ಭಾರೀ ಮಳೆ: ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚನೆ

by ಪ್ರತಿಧ್ವನಿ
May 16, 2022
ಕರಿ ಸುಬ್ಬು ಅವರು ಕೆಜಿಎಫ್‌ 2 ಬಗ್ಗೆ ಹೇಳಿದೇನು ಗೊತ್ತಾ? | KGF 2 | PRATIDHVANI NEWS | Pratidhvani
ವಿಡಿಯೋ

ಕರಿ ಸುಬ್ಬು ಅವರು ಕೆಜಿಎಫ್‌ 2 ಬಗ್ಗೆ ಹೇಳಿದೇನು ಗೊತ್ತಾ? | KGF 2 | PRATIDHVANI NEWS | Pratidhvani

by ಪ್ರತಿಧ್ವನಿ
May 18, 2022
ತ್ರಿಪುರಾ: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಿಪ್ಲಬ್ ದೇವ್; ಬಿಜೆಪಿ ಆಂತರಿಕ ಕಚ್ಚಾಟ ಕಾರಣ?
ದೇಶ

ತ್ರಿಪುರಾ: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಿಪ್ಲಬ್ ದೇವ್; ಬಿಜೆಪಿ ಆಂತರಿಕ ಕಚ್ಚಾಟ ಕಾರಣ?

by ಪ್ರತಿಧ್ವನಿ
May 14, 2022
ಗಾಯಗೊಂಡ ಅಜಿಂಕ್ಯ ರಹಾನೆ ಐಪಿಎಲ್‌ ನಿಂದ ಹೊರಗೆ
ಕ್ರೀಡೆ

ಗಾಯಗೊಂಡ ಅಜಿಂಕ್ಯ ರಹಾನೆ ಐಪಿಎಲ್‌ ನಿಂದ ಹೊರಗೆ

by ಪ್ರತಿಧ್ವನಿ
May 17, 2022
ನನಗೆ ಮುಸ್ಲಿಮರ ಓಟು ಬೇಡ: ಬಿಜೆಪಿ ಶಾಸಕ ಬಹಿರಂಗ ಹೇಳಿಕೆ
ಕರ್ನಾಟಕ

ನನಗೆ ಮುಸ್ಲಿಮರ ಓಟು ಬೇಡ: ಬಿಜೆಪಿ ಶಾಸಕ ಬಹಿರಂಗ ಹೇಳಿಕೆ

by ಪ್ರತಿಧ್ವನಿ
May 16, 2022
Next Post
ಸಚಿವ ಅರಗ ಜ್ಞಾನೇಂದ್ರಗೆ ಹೈಕಮಾಂಡ್‌ ಬುಲಾವ್‌; ಸಚಿವ ಸ್ಥಾನಕ್ಕೆ ಕುತ್ತು?

ಸಚಿವ ಅರಗ ಜ್ಞಾನೇಂದ್ರಗೆ ಹೈಕಮಾಂಡ್‌ ಬುಲಾವ್‌; ಸಚಿವ ಸ್ಥಾನಕ್ಕೆ ಕುತ್ತು?

ತಾಜ್ ಮಹಲ್ ಇದ್ದ ಜಾಗ ಜೈಪುರದ ರಾಜ ಜೈಸಿಂಗ್ಗೆ ಸೇರಿದ್ದು: ಬಿಜೆಪಿ ಸಂಸದೆ

ತಾಜ್ ಮಹಲ್ ಇದ್ದ ಜಾಗ ಜೈಪುರದ ರಾಜ ಜೈಸಿಂಗ್ಗೆ ಸೇರಿದ್ದು: ಬಿಜೆಪಿ ಸಂಸದೆ

ಲಖೀಂಪುರ್‌ ಖೇರಿ ಹಿಂಸಾಚಾರ; ಸಚಿವರ ಪುತ್ರ ಆಶಿಶ್‌ ಮಿಶ್ರಾ ಭವಿಷ್ಯ ನಾಳೆ ನಿರ್ಧಾರ!

ಜಾಮೀನು ಅರ್ಜಿ ಕುರಿತು ನಿಲುವು ತಿಳಿಸುವಂತೆ ಯುಪಿ ಸರ್ಕಾರಕ್ಕೆ ಸೂಚಿಸಿದ ಸುಪ್ರೀಂ ಕೋರ್ಟ್

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist