• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, April 22, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಶ್ರೀಸಾಮಾನ್ಯರ ಸವಾಲುಗಳೂ ಭಾವನಾತ್ಮಕ ವಿವಾದಗಳೂ

ಜನಸಾಮಾನ್ಯರು ಸಂಕಟದಲ್ಲಿರುವಾಗ ಭಾವನಾತ್ಮಕ ವಿಷಯಗಳು ಮುನ್ನಲೆಗೆ ಬರುತ್ತವೆ

ಪ್ರತಿಧ್ವನಿ by ಪ್ರತಿಧ್ವನಿ
February 18, 2026
in Top Story, ಕರ್ನಾಟಕ, ದೇಶ, ರಾಜಕೀಯ
0
ಶ್ರೀಸಾಮಾನ್ಯರ ಸವಾಲುಗಳೂ ಭಾವನಾತ್ಮಕ ವಿವಾದಗಳೂ
Share on WhatsAppShare on FacebookShare on Telegram

ತಳಮಟ್ಟದ ಸಮಾಜದಲ್ಲಿ ತಮ್ಮ ಬದುಕಿನ ನಾಳೆಗಳನ್ನು ಧ್ಯಾನಿಸುತ್ತಲೇ ನಿತ್ಯ ಜೀವನದ ಕಷ್ಟ ಕಾರ್ಪಣ್ಯಗಳನ್ನು ಎದುರಿಸುವ ಶ್ರಮಿಕ ಜನತೆ ಸದಾ ಕಾಲವೂ ಆಳುವ ಸರ್ಕಾರದ ಕಡೆ ನೋಡುತ್ತಲೇ ಇರುತ್ತಾರೆ. ಚುನಾಯಿತ ಸರ್ಕಾರಗಳು ನಮ್ಮ ಅನಿಶ್ಚಿತತೆಯನ್ನು ನಿವಾರಿಸುವರೋ ಇಲ್ಲವೋ ಎಂಬ ಆತಂಕದ ನಡುವೆಯೇ ತಮ್ಮ ದುಡಿಮೆಯನ್ನು ಮುಂದುವರೆಸುತ್ತಿರುತ್ತಾರೆ. ಈ ಸಾಮಾನ್ಯ ಜನರನ್ನು ಬಾಧಿಸುವ ಸರ್ಕಾರದ ಆಡಳಿತ-ಆರ್ಥಿಕ ನೀತಿಗಳು ವಿದೇಶಾಂಗ ಒಪ್ಪಂದಗಳಿಂದ ಜಿಎಸ್ಟಿವರೆಗೂ ವಿಸ್ತರಿಸುತ್ತವೆ. ಈ ಜನರನ್ನು ಸದಾ ಭ್ರಮಾಧೀನರನ್ನಾಗಿಯೇ ಇರಿಸುವ ಒಂದು ತಂತ್ರವನ್ನು ವಿಶ್ವದ ಎಲ್ಲ ಪ್ರಜಾಪ್ರಭುತ್ವಗಳೂ ಅಳವಡಿಸಿಕೊಂಡಿವೆ. ಬಂಡವಾಳಶಾಹಿ ಆರ್ಥಿಕತೆ ಸೃಷ್ಟಿಸುವ ಅಭದ್ರತೆ, ಅನಿ಼ಶ್ಚಿತತೆ ಮತ್ತು ಆತಂಕಗಳು ಈ ಜನತೆಯಲ್ಲಿ ಹತಾಶೆ ಮೂಡಿಸುತ್ತಿರುವಂತೆಲ್ಲಾ ಸಂಭಾವ್ಯ ಜನಾಕ್ರೋಶವನ್ನು ತಣ್ಣಗೆ ಮಾಡುವ ತಂತ್ರಗಳನ್ನೂ ಚುನಾಯಿತ ಸರ್ಕಾರಗಳು ಅನುಸರಿಸುತ್ತಿರುತ್ತವೆ.

ADVERTISEMENT
Prathap Simha on Siddaramaiah: ಎಲೆಕ್ಷನ್ ಟೈಂನಲ್ಲಿ ಅಷ್ಟೇ ಗೃಹ ಲಕ್ಷ್ಮಿ ಹಣ ಹಾಕಿದ್ದಾರೆ...! #pratidhvani

ಇಂತಹ ಸಂದಿಗ್ಧ ಪರಿಸ್ಥಿತಿಗಳಲ್ಲಿ ಆಡಳಿತಾರೂಢ ಪಕ್ಷಗಳಿಗೆ ಜನರ ಗಮನವನ್ನು ಬೇರೆಡೆಗೆ ಸೆಳೆಯುವ ಭಾವನಾತ್ಮಕ ವಿಚಾರಗಳು ಉಪಯುಕ್ತವಾಗಿ ಕಾಣುತ್ತವೆ. ದೈವ ನಂಬಿಕೆ, ಪೂಜಾಸ್ಥಳ ವಿವಾದ, ಧಾರ್ಮಿಕ-ಕೋಮು ಸಂಘರ್ಷ, ಭಾಷಾ-ಗಡಿ ವಿವಾದ, ಜಾತಿ ಘರ್ಷಣೆ ಇವೆಲ್ಲವೂ ಸಾಮಾನ್ಯವಾಗಿ ಬಳಸಲಾಗುವ ವಿಚಾರಗಳು. ಭಾರತದಂತಹ ಸಾಂಪ್ರದಾಯಿಕ ಸಮಾಜದಲ್ಲಿ ಶ್ರದ್ಧೆ-ನಂಬಿಕೆಗಳು ಭಾವನಾತ್ಮಕ ನೆಲೆಯಲ್ಲಿ ಆರಾಧನೆ ಮತ್ತು ಆಚರಣೆಯಲ್ಲೇ ವ್ಯಕ್ತವಾಗುವುದರಿಂದ, ಜನಸಾಮಾನ್ಯರ ಭಾವನೆಗಳನ್ನು ಬಂಡವಾಳವಾಗಿ ಬಳಸಿಕೊಳ್ಳುವುದು ಸುಲಭ. ಚಾರಿತ್ರಿಕ ನಾಯಕರು, ದಾರ್ಶನಿಕ ವ್ಯಕ್ತಿಗಳೂ ಸಹ ಕೆಲವೊಮ್ಮೆ ಈ ಭಾವನಾ ಲಹರಿಯ ಸುಳಿಯಲ್ಲಿ ಸಿಲುಕುವಂತಾಗುತ್ತದೆ.

ದೇಶಭಕ್ತಿ ರಾಜಕೀಯ ಅಸ್ತ್ರವಾಗಿ

ದುರದೃಷ್ಟವಶಾತ್ ಸೂಕ್ಷ್ಮ ಸಂವೇದನೆ ಮತ್ತು ಸಾರ್ವತ್ರಿಕ ಪ್ರಜ್ಞೆ ಇಲ್ಲದಿರುವುದರಿಂದ ಭಾರತದ ರಾಜಕೀಯ ಪಕ್ಷಗಳಿಗೆ ರಾಷ್ಟ್ರಗೀತೆ ʼ ಜನಗಣಮನ ʼ ಮತ್ತು ರಾಷ್ಟ್ರೀಯತೆಯ ಹಾಡು ʼ ವಂದೇ ಮಾತರಂ ʼ ಸಹ ಇದೇ ರೀತಿಯಲ್ಲಿ ಬಳಸಬಹುದಾದ ಅಸ್ತ್ರಗಳಂತೆ ಕಾಣುತ್ತವೆ. ಈ ಎರಡೂ ಗೀತೆಗಳ ಗಾಯನವನ್ನು ಪರಸ್ಪರ ವಿರೋಧಿ ನೆಲೆಯಲ್ಲೇ ವ್ಯಾಖ್ಯಾನಿಸುವ ಒಂದು ಪರಂಪರೆಯನ್ನು ಸ್ವತಂತ್ರ ಭಾರತ ಅಳವಡಿಸಿಕೊಂಡಿದೆ. ರಾಷ್ಟ್ರಗೀತೆ ದೇಶದ ಅಖಂಡತೆ ಮತ್ತು ಸಾರ್ವಭೌಮತ್ವದ ಸಂಕೇತವಾಗಿ ಸಮಸ್ತ ಜನಕೋಟಿಯ ಮನ್ನಣೆ ಗಳಿಸಿದೆ. ರಾಷ್ಟ್ರೀಯತೆಯ ಗೀತೆ ಎಂದು ಪರಿಗಣಿಸಲ್ಪಡುವ ವಂದೇಮಾತರಂ ಭಾರತದ ಬಹುತ್ವ ಸಂಸ್ಕೃತಿಯನ್ನು ಪುರಸ್ಕರಿಸುವುದಿಲ್ಲ. ಹಿಂದೂ ಧಾರ್ಮಿಕ ನಂಬಿಕೆಗಳಿಗೆ ಪೂರಕವಾಗಿ ರಚಿಸಲಾಗಿರುವ ಈ ಗೀತೆಗೂ ಕೇಂದ್ರ ಸರ್ಕಾರ ರಾಷ್ಟ್ರಗೀತೆಯ ಸ್ಥಾನಮಾನವನ್ನೇ ನೀಡಲು ಮುಂದಾಗಿದೆ.

ಸ್ವಾತಂತ್ರ್ಯಪೂರ್ವದ ಬ್ರಿಟೀಷ್ ವಸಾಹತುಶಾಹಿ ವಿರೋಧಿ ಸಂಗ್ರಾಮದಲ್ಲಿ ʼ ವಂದೇಮಾತರಂ ʼ ಗೀತೆಯ ಮೊದಲ ಎರಡು ಚರಣಗಳು ಸ್ವಾತಂತ್ರ್ಯ ಹೋರಾಟಗಾರರನ್ನು ಹುರಿದುಂಬಿಸುವ ಒಂದು ರಾಷ್ಟ್ರೀಯತೆಯ ಗೀತೆಯಾಗಿದ್ದುದು ವಾಸ್ತವ. ರಾಷ್ಟ್ರೀಯ ಭಾವೈಕ್ಯತೆ ಮತ್ತು ರಾಷ್ಟ್ರೀಯತೆಯನ್ನು ಜನಸಾಮಾನ್ಯರಲ್ಲಿ ಉದ್ಧೀಪನಗೊಳಿಸುವ ಒಂದು ಗೀತೆಯಾಗಿ ʼವಂದೇಮಾತರಂʼ ಒಂದು ಘೋಷಣೆಯಾಗಿ ಬಳಕೆಯಾಗಿತ್ತು. ಇದು ಫಲಕಾರಿಯಾಗಿದ್ದುದನ್ನೂ ಅಲ್ಲಗಳೆಯಲಾಗುವುದಿಲ್ಲ. ಆದರೆ ಸ್ವಾತಂತ್ರ್ಯಾನಂತರ ಈ 78 ವರ್ಷಗಳಲ್ಲಿ ಭಾರತೀಯ ರಾಷ್ಟ್ರೀಯತೆಯ ಕಲ್ಪನೆ ಮರುವ್ಯಾಖ್ಯಾನಕ್ಕೊಳಪಟ್ಟಿದೆ, ಮರುನಿರ್ವಚನೆಗೆ ಒಳಗಾಗಿದೆ. ವರ್ತಮಾನದ ಭಾರತ ಎಲ್ಲ ಧರ್ಮಗಳನ್ನೂ ಸಮಾನವಾಗಿ ನೋಡುವ ಬಹುತ್ವದ ಕಲ್ಪನೆಯನ್ನು ಸಾಂವಿಧಾನಿಕವಾಗಿ ಒಪ್ಪಿಕೊಂಡು ಮುನ್ನಡೆದಿದೆ. ಜನಗಣಮನ ಈ ಬಹುತ್ವದ ಸಂಕೇತವಾಗಿ ಕಾಣುತ್ತದೆ ಆದರೆ ವಂದೇಮಾತರಂ ಗೀತೆಯಲ್ಲಿ ಈ ವಿಶಾಲ ವ್ಯಾಪ್ತಿಯನ್ನು ಕಾಣಲಾಗುವುದಿಲ್ಲ. ಅದು ನಿರ್ದಿಷ್ಟವಾಗಿ ಹಿಂದೂ ಧರ್ಮ ಹಾಗೂ ಅದರೊಳಗಿನ ಕೆಲವು ವರ್ಗಗಳ ಭಾವನೆಗಳಿಗೆ ನಿಲುಕುತ್ತದೆ.

Prathap Simha : ಸಿದ್ದರಾಮಯ್ಯ ಸುಳ್ಳು ಹೇಳ್ಕೊಂಡೇ ಸರ್ಕಾರ ನಡೆಸ್ತಾವ್ರೆ #pratidhvani

ಈ ತಾತ್ವಿಕ ಭಿನ್ನತೆಯೇ ವಂದೇಮಾತರಂ ಗಾಯನವನ್ನು ಸದಾ ವಿವಾದಾಸ್ಪದವಾಗಿಸುತ್ತಿದೆ. ವಾಸ್ತವವಾಗಿ ಈ ಗೀತೆಯನ್ನು ಅಥವಾ ಗಾಯನವನ್ನು ಯಾವ ಸಮುದಾಯಗಳೂ ಖಂಡಿಸುವುದಿಲ್ಲ ಅಥವಾ ನಿಂದನೀಯವಾಗಿ ವ್ಯಾಖ್ಯಾನಿಸುವುದಿಲ್ಲ. ಹಾಗೆಯೇ ಹಿಂದೂ ಧರ್ಮದೊಡನೆ ಗುರುತಿಸಿಕೊಳ್ಳುವ ಎಲ್ಲ ಸಮುದಾಯಗಳೂ, ವ್ಯಕ್ತಿಗಳೂ ಈ ಗೀತೆಯ ಗಾಯನವನ್ನು ಮುಕ್ತವಾಗಿ ಒಪ್ಪುವುದೂ ಇಲ್ಲ. ದೇಶ ಎಂಬ ಕಲ್ಪನೆಗೆ ದೈವೀಕ ಸ್ವರೂಪ ಕೊಟ್ಟು, ಸ್ತುತಿಗೀತೆಯ ಮೂಲಕ ಆವಾಹನೆ ಮಾಡುವ ಸಂಸ್ಕೃತಿಯನ್ನು ಭಾರತದ ಎಲ್ಲ ಸಮುದಾಯಗಳೂ ಒಪ್ಪುವುದಿಲ್ಲ ಎನ್ನುವುದು ಚಾರಿತ್ರಿಕ ಸತ್ಯ. ನಿರೀಶ್ವರವಾದಿಗಳು, ಅನ್ಯ ಧರ್ಮೀಯರು, ವೈಚಾರಿಕ ಮನೋಭಾವದ ನಾಸ್ತಿಕರು, ಈ ಗೀತೆಯ ಗಾಯನವನ್ನು ತಾತ್ವಿಕವಾಗಿ ವಿರೋಧಿಸುತ್ತಾರೆ. ಹಾಗಾಗಿಯೇ ವಂದೇಮಾತರಂ ಗಾಯನವನ್ನು ಕಡ್ಡಾಯಗೊಳಿಸುವ ಯಾವುದೇ ಪ್ರಯತ್ನಗಳು ವಿರೋಧ ಎದುರಿಸುತ್ತವೆ.

ಅಧಿಕಾರ ರಾಜಕಾರಣದ ಹಿತಾಸಕ್ತಿ

ಈ ತಾತ್ವಿಕ ವಿರೋಧದ ದನಿಯೇ ಬಿಜೆಪಿ ಮತ್ತು ಸಂಘಪರಿವಾರದ ದೃಷ್ಟಿಯಲ್ಲಿ ರಾಜಕೀಯ ಅಸ್ತ್ರಗಳಾಗಿ ಕಾಣುತ್ತವೆ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಎಲ್ಲ ತತ್ವ-ಸಿದ್ದಾಂತಗಳ ಪ್ರತಿಪಾದಕರೂ ʼ ವಂದೇಮಾತರಂ ʼ ಘೋಷಣೆಯನ್ನು ಪ್ರತಿರೋಧದ ಅಸ್ತ್ರವಾಗಿ ಬಳಸುತ್ತಿದ್ದರು. ಆದರೆ ಸ್ವತಂತ್ರ ಭಾರತದಲ್ಲಿ ಅದೇ ಮನೋಭಾವವನ್ನು ಅಪೇಕ್ಷಿಸಲಾಗುವುದಿಲ್ಲ. ಏಕೆಂದರೆ ಇಂದು ನಮಗೆ ಸಮಾನ ಶತ್ರು ಯಾರೂ ಇಲ್ಲ. ಸಂಕೋಲೆಗಳಲ್ಲಿ ಬಂಧಿಸಿರುವ ಬಾಹ್ಯ ಶಕ್ತಿಗಳೂ ಇಲ್ಲ. ರಾಜಕೀಯ ವಿಮೋಚನೆಗಾಗಿ ಹೋರಾಡಬೇಕಾದ ಅವಶ್ಯಕತೆ ಇಲ್ಲ. ಹಾಗಾಗಿ ಈ ಗೀತೆಯನ್ನು ರಾಜಕೀಯ ಬತ್ತಳಿಕೆಯಲ್ಲಿ ಇಡಲಾಗುವುದಿಲ್ಲ. ಭೌಗೋಳಿಕ ರಾಷ್ಟ್ರವನ್ನು ದೈವೀಕ ರೂಪದಲ್ಲಿ, ಭಾರತ ಮಾತೆಯ ರೂಪದಲ್ಲಿ ನೋಡುವ ಬಲಪಂಥೀಯ ಪಕ್ಷ, ಸಂಘಟನೆಗಳಿಗೆ ವಂದೇಮಾತರಂ ಅಪ್ಯಾಯಮಾನವಾಗಬಹುದು. ಇದೇನೂ ಅಪರಾಧವಲ್ಲ.

Prathap Simha on Siddaramaiah: ಚುನಾವಣೆ ವೇಳೆ ಅಷ್ಟೇ ಮಹಿಳೆಯರ ಅಕೌಂಟ್‌ಗೆ ಹಣ ಬಂದಿದೆ! #pratidhvani

.ಆದರೆ ಈ ಗೀತೆಯನ್ನು ಸಾರ್ವತ್ರೀಕರಿಸಿ ದೇಶದ ಸಮಸ್ತ ಜನತೆಯ ಮೇಲೆ ಹೇರಿದಾಗ. ಗಾಯನವನ್ನು ಕಡ್ಡಾಯಗೊಳಿಸುವಾಗ ಅಥವಾ ಅನ್ಯ ಧರ್ಮೀಯರ ಭಾವನೆಗಳನ್ನು ಕೆರಳಿಸುವ ಉದ್ದೇಶದಿಂದ ಈ ಗೀತೆಯ ತಾತ್ವಿಕ ಔದಾತ್ಯವನ್ನೂ ಮರೆತು, ಭಾವವೇಶದ ಅಸ್ತ್ರವನ್ನಾಗಿ ಬಳಸಿದಾಗ, ಒಂದು ವರ್ಗದ ಅಥವಾ ಕೆಲವು ವರ್ಗಗಳ ಜನರನ್ನು ಭಾವನಾತ್ಮಕವಾಗಿ ಘಾಸಿಗೊಳಿಸುತ್ತದೆ. ಜೈ ಶ್ರೀರಾಂ, ಹನುಮಾನ್ ಚಾಲೀಸಾ ಮುಂತಾದ ಸಾಂಕೇತಿಕ ಘೋಷಣೆಗಳನ್ನು ಬಳಸುವ ಹಾಗೆ ವಂದೇಮಾತರಂ ಬಳಸುವುದು, ಬಂಕಿಮ ಚಂದ್ರರಿಗೆ ಮತ್ತು ಆ ಗೀತೆಗೆ ಅವಮಾನಿಸಿದಂತಾಗುತ್ತದೆ. ಸಾರ್ವತ್ರಿಕ ಸಮ್ಮತಿ ಇಲ್ಲದಿದ್ದರೂ, ವಂದೇಮಾತರಂ ಗೀತೆಗೆ ಸಾರ್ವಜನಿಕ ಮನ್ನಣೆ ಇದೆ ಏಕೆಂದರೆ ಅದು ಒಂದು ಸಮುದಾಯದ ಭಾವನೆಗಳನ್ನು ಬಿಂಬಿಸುತ್ತದೆ. ಆದರೆ ಸಾರ್ವತ್ರಿಕ ಮನ್ನಣೆಯನ್ನು ಅಪೇಕ್ಷಿಸಲಾಗುವುದಿಲ್ಲ.

ಹಾಗಾಗಿ ಈ ಗೀತೆಯ ಗಾಯನವನ್ನು ತಾತ್ವಿಕ ನೆಲೆಯಲ್ಲಿ ವಿರೋಧಿಸಲಾಗುವುದೇ ಹೊರತು, ಗೀತೆಯನ್ನೇ ಖಂಡಿಸುವುದನ್ನು ಕಾಣಲಾಗುವುದಿಲ್ಲ. ಈ ಬಹುತ್ವ ಸಂಸ್ಕೃತಿಯೇ ಭಾರತದ ಸೌಂದರ್ಯ ಎಂಬ ವಾಸ್ತವವನ್ನು ನಾವು ಅರ್ಥಮಾಡಿಕೊಳ್ಳಬೇಕಿದೆ. ಆದರೆ ಈ ಬಹುತ್ವ ಸಂಸ್ಕೃತಿಯನ್ನೇ ಅಲ್ಲಗಳೆಯುವ ಕೇಂದ್ರ ಬಿಜೆಪಿ ಸರ್ಕಾರದ ಪ್ರಯತ್ನಗಳಿಗೆ ಈಗ ʼ ವಂದೇಮಾತರಂ ʼ ಸಹ ಒಂದು ಅಸ್ತ್ರವಾಗಿ ಪರಿಣಮಿಸಿದೆ. ಜನವರಿ 26ರಂದು ಕೇಂದ್ರ ಗೃಹ ಸಚಿವಾಲಯ ಹೊರಡಿಸಿರುವ ಅಧಿಸೂಚನೆ ಈಗ ಮತ್ತೊಮ್ಮೆ ʼವಂದೇ ಮಾತರಂ ʼ ಗಾಯನವನ್ನು ವಿವಾದಾಸ್ಪದವಾಗಿಸಿದೆ. ಸರ್ಕಾರಿ ಸಮಾರಂಭಗಳಲ್ಲಿ, ಕಾರ್ಯಕ್ರಮಗಳಲ್ಲಿ, ಶಾಲಾ ಕಾಲೇಜುಗಳಲ್ಲಿ ರಾಷ್ಟ್ರಗೀತೆ ಹಾಡುವ ಮುನ್ನ ವಂದೇಮಾತರಂ ಗೀತೆಯ ಎಲ್ಲ ಆರು ಚರಣಗಳನ್ನೂ ಹಾಡುವುದು ಕಡ್ಡಾಯ ಎಂದು ಗೃಹಸಚಿವಾಲಯ ಅಧಿಸೂಚನೆ ಹೊರಡಿಸಿದ್ದು , ಈ ಸಂದರ್ಭದಲ್ಲಿ ಹಾಜರಿರುವ ಸಮಸ್ತರೂ ಎದ್ದು ನಿಂತು ಗೌರವ ಸೂಚಿಸುವಂತೆ ಆದೇಶಿಸಲಾಗಿದೆ.

DKS On Mahadevappa : ಮಹದೇವಪ್ಪ ಮಾತಿಗೆ ಡಿಕೆಶಿ ಶಾಕಿಂಗ್‌ ಹೇಳಿಕೆ.. #pratidhvani

ಸರ್ಕಾರದ ಈ ಕ್ರಮವನ್ನು ದೇಶಭಕ್ತಿಯ ಸಂಕೇತ ಎಂದು ನೋಡುವುದಕ್ಕಿಂತಲೂ, ದೇಶಭಕ್ತಿಯ ಹೆಸರಿನಲ್ಲಿ ಅಥವಾ ರಾಷ್ಟ್ರದ ಹೆಮ್ಮೆಯ ಹೆಸರಿನಲ್ಲಿ ಸಾಂವಿಧಾನಿಕ ಕಟ್ಟಳೆ ಎಂದು ಭಾವಿಸಬಹುದು. ಈ ನಿಟ್ಟಿನಲ್ಲಿ 1937ರ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಚರ್ಚೆಗಳನ್ನು ಹಾಗೂ ಸುಪ್ರೀಂಕೋರ್ಟ್ನ ಬಿಜೋ ಎಮಾನುಯೆಲ್ vs ಕೇರಳ ಸರ್ಕಾರ ಮತ್ತಿತರರು ಮೊಕದ್ದಮೆಯ ತೀರ್ಪನ್ನು ಗಮನಿಸುವುದು ಸೂಕ್ತ. ಸ್ವಾತಂತ್ರ್ಯ ಪೂರ್ವ ನಾಯಕರ ಹಾಗೂ ಸಂವಿಧಾನ ಕರ್ತೃಗಳ ದೂರಗಾಮಿ ದೃಷ್ಟಿಕೋನ ಹಾಗು ವಿಶಾಲ ಗ್ರಹಿಕೆ ಎರಡನ್ನೂ ಕಳೆದುಕೊಂಡಿರುವ ವರ್ತಮಾನದ ಭಾರತ ಈ ಸೂಕ್ಷ್ಮಗಳ ಮರು ಅವಲೋಕನ ಮಾಡಬೇಕಿದೆ. ತನ್ಮೂಲಕ ಭಾರತದ ಬಹುತ್ವ ಸಂಸ್ಕೃತಿಯನ್ನು ಸಂರಕ್ಷಿಸುವ ಹಾದಿಗಳನ್ನು ಸುಗಮಗೊಳಿಸಬೇಕಿದೆ.

1937ರ ಒಪ್ಪಂದ ದೌರ್ಬಲ್ಯವಲ್ಲ –ವಿವೇಕಯುತ

ಅಕ್ಟೋಬರ್ 1937ರಲ್ಲಿ ಸಭೆ ಸೇರಿದ್ದ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಚರ್ಚೆಗಳಲ್ಲಿ ಅಂತಿಮ ನಿರ್ಣಯವನ್ನು ಸಭೆಗೆ ಮಂಡಿಸಿದ್ದವರು ಬಾಬು ರಾಜೇಂದ್ರಪ್ರಸಾದ್. ಸರ್ದಾರ್ ವಲ್ಲಭಾಯ್ ಪಟೇಲ್ ಇದನ್ನು ಅನುಮೋದಿಸಿದ್ದರು. ಮಹಾತ್ಮ ಗಾಂಧಿ ಈ ಸಭೆಯ ವಿಶೇಷ ಅತಿಥಿಯಾಗಿದ್ದರು. ಸರ್ವಾನುಮತದ ಈ ನಿರ್ಣಯದಲ್ಲಿ, ಮುಸ್ಲಿಂ ಸಂಗಾತಿಗಳು ವಂದೇಮಾತರಂ ಗೀತೆಯ ಕೆಲವು ಸಾಲುಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದನ್ನು ಸಮ್ಮತಿಸಿ, ಮೊದಲ ಎರಡು ಚರಣಗಳನ್ನು ಮಾತ್ರ ರಾಷ್ಟ್ರೀಯ ಗೀತೆಯಾಗಿ ಅಳವಡಿಸಬೇಕು ಮತ್ತು ರಾಷ್ಟ್ರಮಟ್ಟದ ಸಮಾವೇಶಗಳಲ್ಲಿ ಹಾಡಬೇಕು ಎಂದು ನಿರ್ಧರಿಸಲಾಗಿತ್ತು. ಈ ಪ್ರಸ್ತಾವನೆಗಳು ಯಾವುದೇ ರೀತಿಯಲ್ಲೂ ಆಕ್ಷೇಪಾರ್ಹವಾಗಲಾರದು ಎಂದು ಅಂತಿಮ ನಿರ್ಣಯದಲ್ಲಿ ಹೇಳಲಾಗಿತ್ತು.

ಈಗಿನ ಬಿಜೆಪಿ ನಾಯಕರು ವ್ಯಾಖ್ಯಾನಿಸುವ ಹಾಗೆ ಇದು ಹೇಡಿತನವಲ್ಲ, ವಿವೇಕದ ಕ್ರಮವಾಗಿತ್ತು. ಬಂಕಿಮ್ ಚಂದ್ರ ಚಟರ್ಜಿ ಅವರ ವಂದೇಮಾತರಂ ಗೀತೆಯಲ್ಲಿ ದುರ್ಗೆ, ಸರಸ್ವತಿ, ಲಕ್ಷ್ಮಿ ಮೊದಲಾದ ದೇವತೆಯರ ಹೆಸರುಗಳು ಉಲ್ಲೇಖವಾಗುತ್ತವೆ. ಅಷ್ಟೇ ಅಲ್ಲದೆ, ಮಾತೃಭೂಮಿಯನ್ನು ಹತ್ತು ಆಯುಧಗಳನ್ನು ಹೊಂದಿರುವ ದುರ್ಗೆಗೆ ಹೋಲಿಸಿ ಹಾಡಲಾಗುತ್ತದೆ. ವರ್ತಮಾನದ ಪರಿಸ್ಥಿತಿಯಲ್ಲಿ ಒಬ್ಬ ಮುಸ್ಲಿಂ ನಾಗರಿಕ ಅಧಿಕಾರಿ, ಕ್ರೈಸ್ತ ಶಾಲಾ ಶಿಕ್ಷಕ/ಶಿಕ್ಷಕಿ , ಸಿಖ್ ಸೈನಿಕ, ಬೌದ್ಧ ಬಿಕ್ಕು ಅಥವಾ ನಾಸ್ತಿಕ ವಿಜ್ಞಾನಿ ಈ ಚರಣಗಳನ್ನು ಹಾಡುವಾಗ ಶ್ರದ್ಧೆಯಿಂದ ಎದ್ದುನಿಂತು ಗೌರವಿಸುವುದನ್ನು ಹೇಗೆ ನಿರೀಕ್ಷಿಸಲು ಸಾಧ್ಯ ? ಇದು ಏಕತೆಯನ್ನು ಬೆಳೆಸುವ ವಿಧಾನ ಆಗಲಾರದು. ಬದಲಾಗಿ ಸೆಕ್ಯುಲರ್ ಗಣತಂತ್ರದ ಮೇಲೆ ಧಾರ್ಮಿಕತೆಯನ್ನು ಹೇರಿದಂತಾಗುತ್ತದೆ.

1937ರಲ್ಲಿ ರವೀಂದ್ರ ನಾಥ ಠಾಗೋರ್ ಸಹ ಮೊದಲ ಎರಡು ಚರಣಗಳನ್ನಷ್ಟೇ ಉಳಿಸಿಕೊಳ್ಳಲು ಒಪ್ಪಿಗೆ ಸೂಚಿಸಿದ್ದರು . ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸಕ್ರಿಯವಾಗಿದ್ದ ಪ್ರತಿಯೊಬ್ಬರೂ ಸಹ ಈ ಚರಣಗಳಿಗೆ ಯಾವುದೇ ಆಕ್ಷೇಪ ಸಲ್ಲಿಸಿರಲಿಲ್ಲ, ಏಕೆಂದರೆ ಇದು ಮತ್ತೊಬ್ಬರ ಧಾರ್ಮಿಕ ನಂಬಿಕೆಯನ್ನು ಘಾಸಿಗೊಳಿಸುವುದಿಲ್ಲ. ಇದು ಸ್ವಾತಂತ್ರ್ಯ ಹೋರಾಟದ ಮುಂಚೂಣಿ ನಾಯಕರು ಕೈಗೊಂಡ ವಿವೇಕಯುತ ನಿರ್ಧಾರವಾಗಿತ್ತು. 1950ರ ಜನವರಿ 24ರಂದು ರಾಷ್ಟ್ರಪತಿ ರಾಜೇಂದ್ರ ಪ್ರಸಾದ್ ʼಜನ ಗಣ ಮನʼ ಭಾರತದ ರಾಷ್ಟ್ರಗೀತೆ ಎಂದು ಘೋಷಿಸಿದರು. ವಂದೇಮಾತರಂ ಸಮಾನವಾಗಿ ಗೌರವಿಸಲ್ಪಡುತ್ತದೆ ಎಂದೂ ಘೋಷಿಸಿದ್ದರು. ಇಲ್ಲಿ ಗಮನಿಸಬೇಕಾದ ಸಂಗತಿ ಎಂದರೆ ಸಂವಿಧಾನ ಸಭೆಯಲ್ಲಿ (Constituent Assembly) ರಾಷ್ಟ್ರೀಯ ಗೀತೆಯ ಮೊದಲ ಎರಡು ಚರಣಗಳನ್ನು ಮಾತ್ರ ಅನುಮೋದಿಸಲಾಗಿತ್ತು. ಆನಂತರದ ನಾಲ್ಕು ಚರಣಗಳು ನಿರ್ದಿಷ್ಟ ದೇವ-ದೇವತೆಗಳನ್ನು ಉಲ್ಲೇಖಿಸುವುದರಿಂದ ಸೆಕ್ಯುಲರ್ ಗಣತಂತ್ರದಲ್ಲಿ ಅಧಿಕೃತ ಮಾನ್ಯತೆ ಪಡೆಯಲಾಗುವುದಿಲ್ಲ ಎಂದು ತೀರ್ಮಾನಿಸಲಾಗಿತ್ತು.

ಸಂವಿಧಾನದ ಅನುಚ್ಛೇದ 51(ಎ) “ ಭಾರತದ ಪ್ರತಿಯೊಬ್ಬ ಪ್ರಜೆಯೂ ರಾಷ್ಟ್ರ ಧ್ವಜ ಮತ್ತು ರಾಷ್ಟ್ರಗೀತೆಗೆ ಬದ್ಧರಾಗಿರಬೇಕು,,,,,” ಎಂದು ಹೇಳುತ್ತದೆಯೇ ಹೊರತು, ರಾಷ್ಟ್ರೀಯ ಗೀತೆಯ ಪ್ರಸ್ತಾಪ ಮಾಡುವುದಿಲ್ಲ. 1976ರಲ್ಲಿ 42ನೆ ಸಂವಿಧಾನ ತಿದ್ದುಪಡಿಯಲ್ಲಿ ಮೂಲಭೂತ ಕರ್ತವ್ಯಗಳನ್ನು ಅಳವಡಿಸಿದಾಗಲೂ ನಿರ್ದಿಷ್ಟವಾಗಿ ರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆಯನ್ನು ಮಾತ್ರ ಉಲ್ಲೇಖಿಸಲಾಗಿತ್ತು. ಇದು ಕಣ್ತಪ್ಪಿ ನಡೆದದ್ದಲ್ಲ , ಪ್ರಭುತ್ವದ ಆಯ್ಕೆಯಾಗಿತ್ತು. 1971ರ ರಾಷ್ಟ್ರೀಯ ಗೌರವಕ್ಕೆ ಅವಮಾನ (ನಿರ್ಬಂಧಕ) ಕಾಯ್ದೆಯಲ್ಲೂ ಸಹ ರಾಷ್ಟ್ರಗೀತೆ, ಸಂವಿಧಾನ ಮತ್ತು ರಾಷ್ಟ್ರಧ್ವಜಗಳನ್ನು ಉಲ್ಲೇಖಿಸಲಾಗಿದೆ. ಈ ಕಾಯ್ದೆಯಲ್ಲಿ ವಂದೇಮಾತರಂ ಪ್ರಸ್ತಾಪ ಇರುವುದಿಲ್ಲ ಅಥವಾ ಅದನ್ನು ಹಾಡದೆ ಇರುವುದಕ್ಕೆ ದಂಡ ವಿಧಿಸುವ ನಿಯಮವೂ ಇರುವುದಿಲ್ಲ.

ಸುಪ್ರೀಂಕೋರ್ಟ್ ತೀರ್ಪಿನ ಮಹತ್ವ

ಜುಲೈ 1985ರಲ್ಲಿ ಕೇರಳದ ಬಿಜೋ, ಬಿನು ಮೊಲ್ ಮತ್ತು ಬಿಂದು ಎಮ್ಯಾನುಯೆಲ್ ಎಂಬ ಮೂವರು ಮಕ್ಕಳನ್ನು ಶಾಲೆಯಿಂದ ಉಚ್ಛಾಟಿಸಲಾಯಿತು. ಇವರು ಜಹೋವಾ ಪಂಥಕ್ಕೆ ಸೇರಿದವರಾಗಿದ್ದರು. ಪ್ರತಿದಿನ ರಾಷ್ಟ್ರಗೀತೆ ಹಾಡುವಾಗ ಗೌರವದಿಂದ ಎದ್ದು ನಿಲ್ಲುತ್ತಿದ್ದರು. ಆದರೆ ಹಾಡುತ್ತಿರಲಿಲ್ಲ. ಯಾರಿಗೋ ತೊಂದರೆ ಕೊಡದೆ, ಅಡ್ಡಿಪಡಿಸದೆ ನಿಂತಿರುತ್ತಿದ್ದರು. ಈ ಪ್ರಸಂಗದಲ್ಲಿ ರಾಜ್ಯ ಸಚಿವರೊಬ್ಬರು ಪ್ರವೇಶಿಸಿದ ಕಾರಣ ಈ ಮಕ್ಕಳನ್ನು ಶಾಲೆಯಿಂದ ಉಚ್ಛಾಟಿಸಲಾಯಿತು. ಕೇರಳ ಹೈಕೋರ್ಟ್ ಈ ಉಚ್ಛಾಟನೆಯನ್ನು ಅನುಮೋದಿಸಿ ತೀರ್ಪು ನೀಡಿತ್ತು. ಆದರೆ ಸುಪ್ರೀಂಕೋರ್ಟ್ ಶಾಲೆಯ ಕ್ರಮವನ್ನು ಖಂಡಿಸಿ, ವಿದ್ಯಾರ್ಥಿಗಳ ಪರವಾಗಿ ತೀರ್ಪು ನೀಡಿತ್ತು. ಈ ಉಚ್ಛಾಟನೆಯು ಧಾರ್ಮಿಕ ಹಾಗೂ ಮುಕ್ತ ವಾಕ್ ಸ್ವಾತಂತ್ರ್ಯದ ಮೂಲಭೂತ ಹಕ್ಕಿನ ಉಲ್ಲಂಘನೆಯಾಗುತ್ತದೆ ಎಂದು ನ್ಯಾಯಮೂರ್ತಿ ಚಿನ್ನಪ್ಪ ರೆಡ್ಡಿ ಅಂತಿಮ ತೀರ್ಪಿನಲ್ಲಿ ಹೇಳಿದ್ದರು.

DK Shivakumar  : ಶಾಸಕರನ್ನು ಬೀದಿನಾಯಿಗೆ ಹೋಲಿಸಿದ್ರಾ ಸಚಿವ ಹೆಚ್.ಸಿ. ಮಹದೇವಪ್ಪ?  #pratidhvani

ಈ ತೀರ್ಪಿನಲ್ಲಿ ನ್ಯಾಯಮೂರ್ತಿಗಳು ದಾಖಲಿಸಿದ “ ರಾಷ್ಟ್ರಗೀತೆಯನ್ನು ಹಾಡುವಾಗ ಎದ್ದು ನಿಲ್ಲುವ ಮೂಲಕ ಸೂಕ್ತ ಗೌರವವನ್ನು ಸಲ್ಲಿಸಲಾಗಿದೆ. ಹಾಡುವುದರಲ್ಲಿ ಭಾಗವಹಿಸದ ನಡೆಯನ್ನು ಅಗೌರವ ಸೂಚಕ ಎಂದು ಪರಿಗಣಿಸಲಾಗುವುದಿಲ್ಲ ” ಎಂಬ ಅಭಿಪ್ರಾಯವು ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಹುದು. ಹಾಡುವುದರಲ್ಲಿ ಭಾಗಿಯಾಗಲಿಲ್ಲ ಎಂದ ಕಾರಣಕ್ಕೆ ರಾಷ್ಟ್ರಗೀತೆಗೆ ಅಗೌರವ ತೋರಿದಂತೆ ಭಾವಿಸಲಾಗುವುದಿಲ್ಲ, ಮೌನವಾಗಿ ಗೌರವಯುತವಾಗಿ ಎದ್ದು ನಿಲ್ಲುವುದು ಕಾನೂನು ಉಲ್ಲಂಘನೆಯಾಗುವುದಿಲ್ಲ. ಮುಕ್ತ ವಾಕ್ ಸ್ವಾತಂತ್ರ್ಯದ ಒಂದು ಭಾಗವಾಗಿ ಮಕ್ಕಳ ಮೌನವಾಗಿರುವ ಹಕ್ಕು ಸಹ ಸಾಂವಿಧಾನಿಕವಾಗಿ ರಕ್ಷಿಸಲ್ಪಡುತ್ತದೆ ಎಂದು ನ್ಯಾಯಮೂರ್ತಿಗಳು ಹೇಳಿದ್ದರು. ಈ ಚಾರಿತ್ರಿಕ ತೀರ್ಪಿನ ಹಿನ್ನೆಲೆಯಲ್ಲಿ ನೋಡಿದಾಗ ಗೃಹಸಚಿವಾಲಯದ ಆದೇಶವು ಸಂವಿಧಾನಕ್ಕೆ ವಿರುದ್ಧವಾಗಿ ಕಾಣುತ್ತದೆ.

ಗೃಹ ಸಚಿವಾಲಯದ ಆದೇಶದ ಅನುಸಾರ ಎಲ್ಲ ನಾಗರಿಕ ಸಭೆಗಳಲ್ಲಿ, ರಾಷ್ಟ್ರಾಧ್ಯಕ್ಷರ ಸಮಾರಂಭಗಳಲ್ಲಿ, ಧ್ವಜ ಸಮಾರಂಭಗಳಲ್ಲಿ ವಂದೇಮಾತರಂ ಗೀತೆಯ ಆರು ಚರಣಗಳನ್ನು ಹಾಡುವುದು ಕಡ್ಡಾಯವಾಗುತ್ತದೆ. ಶಾಲೆಗಳಲ್ಲಿ ಆರಂಭದಲ್ಲೇ ಇದನ್ನು ಹಾಡಬೇಕಾಗುತ್ತದೆ. 1937ರ ನಿರ್ಣಯದಲ್ಲಿ ಹೊರಗುಳಿಸಲಾದ ಸಾಲುಗಳೂ ಸಹ ಇಲ್ಲಿ ಕಡ್ಡಾಯವಾಗಿ ಹಾಡಬೇಕಾಗುತ್ತದೆ. ರಾಷ್ಟ್ರಗೀತೆಯನ್ನು ಹಾಡುವುದೇ ಕಡ್ಡಾಯ ಮಾಡಲಾಗುವುದಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿರುವಾಗ, ಸಂವಿಧಾನದ ಅನುಚ್ಛೇದ 51ಎ ಇದಕ್ಕೆ ರಕ್ಷಣೆ ನೀಡುವಾಗ, ಕಾನೂನಾತ್ಮಕವಾಗಿ ನಿರ್ದಿಷ್ಟ ಕಾಯ್ದೆಯ ರಕ್ಷಣೆಯೂ ಇರುವಾಗ, ರಾಷ್ಟ್ರೀಯ ಗೀತೆಯನ್ನು ಹಾಡಲು ಕಡ್ಡಾಯ ಮಾಡುವುದು ಸಾಧ್ಯವಿಲ್ಲ.

DKS On Mahadevappa : ಮಹದೇವಪ್ಪ ಮಾತಿಗೆ ಡಿಕೆಶಿ ಶಾಕಿಂಗ್‌ ಹೇಳಿಕೆ.. #pratidhvani

ಸಂವಿಧಾನದ ಚೌಕಟ್ಟಿನಲ್ಲಿ ಗಣತಂತ್ರ

ಗೃಹ ಸಚಿವಾಲಯದ ಆದೇಶವು ಈ ನಿಯಮಗಳನ್ನು ಸ್ಪಷ್ಟವಾಗಿ ಉಲ್ಲಂಘಿಸುತ್ತದೆ. ಜನತೆಗೆ ರಾಷ್ಟ್ರೀಯ ಗೀತೆಯಲ್ಲಿ ಬರುವ ಧಾರ್ಮಿಕ ಶ್ಲೋಕಗಳನ್ನೂ ಹಾಡುವುದು ಕಡ್ಡಾಯವಾಗುತ್ತದೆ. ಇದು ಧಾರ್ಮಿಕ ಅಲ್ಪಸಂಖ್ಯಾತರ ಮೇಲಿನ ಹೇರಿಕೆಯಾಗುತ್ತದೆ. ಇದು ಕೇವಲ ಔಪಚಾರಿಕ ಕ್ರಮ ಎನಿಸಿಕೊಳ್ಳುವುದಿಲ್ಲ. ಬದಲಾಗಿ ಜನತೆಯ ಪ್ರಜ್ಞೆಯನ್ನು ಘಾಸಿಗೊಳಿಸುತ್ತದೆ. ಸಂವಿಧಾನದ ಅನುಚ್ಛೇದ 25 ಈ ನಿಟ್ಟಿನಲ್ಲಿ ಜನರಿಗೆ ರಕ್ಷಣೆ ಒದಗಿಸುತ್ತದೆ. ಭಾರತದ ಸಂಸ್ಥಾಪಕರು, ಸಂವಿಧಾನ ಕರ್ತೃಗಳು ವೈವಿಧ್ಯಮಯ ಸಂಸ್ಕೃತಿಗಳ, ನಾಗರಿಕತೆಗಳ ಒಂದು ಒಕ್ಕೂಟವಾಗಿ ಭವಿಷ್ಯದ ಭಾರತವನ್ನು ಕಟ್ಟಲು ನಿರ್ಧರಿಸಿದ್ದರು. ನೈಜ ದೇಶಭಕ್ತಿ ಪ್ರದರ್ಶಿಸಲು ಎಲ್ಲರೂ ಒಂದೇ ರೀತಿಯಲ್ಲಿ ರಾಷ್ಟ್ರಗೀತೆಯನ್ನು ಹಾಡಬೇಕಾಗಿಲ್ಲ ಎಂಬ ದೂರಗಾಮಿ ದೃಷ್ಟಿಕೋನವನ್ನು ವ್ಯಕ್ತಪಡಿಸಿದ್ದರು.

 


ವಂದೇಮಾತರಂ ಗೀತೆಯ ಮೊದಲೆರಡು ಚರಣಗಳು ಮಾತೃಭೂಮಿಯ ನದಿಗಳು, ತಂಗಾಳಿ, ಫಲ ಸಂಪತ್ತು , ಬೆಳದಿಂಗಳ ರಾತ್ರಿಯನ್ನು ಗೌರವದಿಂದ ಸಂಭ್ರಮಿಸುತ್ತವೆ. ಇದು ಪ್ರತಿಯೊಬ್ಬ ಭಾರತೀಯ ಪ್ರಜೆಗೂ ಸೇರುವಂತಹುದು. ಆನಂತರದ ಚರಣಗಳು ಸುಂದರವಾದ ಭಕ್ತಿ ಗೀತೆಯಾಗಿದ್ದು ಒಂದು ಧರ್ಮದ ದೇವರುಗಳಿಗೆ ಸಮರ್ಪಿತವಾಗಿರುತ್ತದೆ. ಈ ಎರಡನ್ನೂ ಬೆರೆಸಿ ಎಲ್ಲರೂ ಇದನ್ನು ಹಾಡುವಂತೆ ಒತ್ತಾಯಿಸುವುದು ಭಾರತೀಯ ಗಣತಂತ್ರದ ಸಂಸ್ಥಾಪಕ ತತ್ವಗಳನ್ನು ಮತ್ತು ಭರವಸೆಗಳನ್ನು ಉಲ್ಲಂಘಿಸಿದಂತಾಗುತ್ತದೆ. ಇಲ್ಲಿ ವಂದೇಮಾತರಂ ಗೀತೆಗೆ ಯಾರೂ ಸಹ ಅಗೌರವ ಸೂಚಿಸುತ್ತಿಲ್ಲ. ಆದರೆ ಸೆಕ್ಯುಲರ್ ದೇಶದಲ್ಲಿ ಸರ್ಕಾರವು ದೇಶಭಕ್ತಿಯ ಹೆಸರಿನಲ್ಲಿ ಜನರ ಮೇಲೆ ಧಾರ್ಮಿಕ ಆಚರಣೆಯನ್ನು ಹೇರುವುದರ ಔಚಿತ್ಯವನ್ನು ಪ್ರಶ್ನಿಸಲಾಗುತ್ತಿದೆ.

ಸಂವಿಧಾನದ ನೈಜ ಆಶಯಗಳ ವ್ಯಾಖ್ಯಾನ ಮತ್ತು ಬಿಜೋ ಎಮ್ಯಾನುಯೆಲ್ ಮೊಕದ್ದಮೆಯ ಸುಪ್ರೀಂಕೋರ್ಟ್ ತೀರ್ಪಿನ ಗ್ರಹಿಕೆ ವರ್ತಮಾನದ ಸಂದರ್ಭದಲ್ಲಿ ಅತ್ಯವಶ್ಯವಾಗಿದೆ. ಗೃಹಸಚಿವಾಲಯದ ಆದೇಶವು 1937ರ ಒಪ್ಪಂದವನ್ನು ಉಲ್ಲಂಘಿಸುತ್ತದೆ. ಅನುಚ್ಛೇದ 51ಎ ಯನ್ನು ಅಲ್ಲಗಳೆಯುತ್ತದೆ. ಸುಪ್ರೀಂಕೋರ್ಟ್ ತೀರ್ಪನ್ನು ತಾತ್ವಿಕವಾಗಿ ನಿರಾಕರಿಸುತ್ತದೆ. ಭಾರತೀಯ ಗಣತಂತ್ರ ಎಲ್ಲರಿಗೂ ಸೇರಿದೆ. ರಾಷ್ಟ್ರಗೀತೆಗೆ ಮೌನವಾಗಿ ಎದ್ದುನಿಂತು ಗೌರವ ಸೂಚಿಸುವವರಿಗೆ ಸಲ್ಲುವಷ್ಟೇ, ಹಾಡುವವರಿಗೂ ಸಲ್ಲುತ್ತದೆ. ದೇಶಭಕ್ತಿಯ ಹೆಸರಿನಲ್ಲಿ ಈ ತತ್ವವನ್ನು ಉಲ್ಲಂಘಿಸುವುದು ಸರ್ವಥಾ ಸಮರ್ಥನೀಯವಲ್ಲ. ಸಮಸ್ತ ಜನತೆಯನ್ನೂ ಸಮಾನವಾಗಿ ಕಾಣುವ ಭಾರತೀಯ ಸಂವಿಧಾನ, ಏಕರೂಪದ ಉಪಾಸನಾ ವಿಧಾನಗಳನ್ನು ಅಪೇಕ್ಷಿಸುವುದಿಲ್ಲ.

Somanna : ಸಿಎಂ ಸಿದ್ರಾಮಯ್ಯ ಬಗ್ಗೆ ಕೇಂದ್ರ ಸಚಿವ ಸೋಮಣ್ಣ ಶಾಕಿಂಗ್ ಸ್ಟೇಟ್​ಮೆಂಟ್ #pratidhvani

ಈ ದೃಷ್ಟಿಯಿಂದ ನೋಡಿದಾಗ, ವಂದೇಮಾತರಂ ಕುರಿತು ಕೇಂದ್ರ ಸರ್ಕಾರದ ಆದೇಶವು ಚರ್ಚಾಸ್ಪದವಾಗುತ್ತದೆ. ಆರೋಗ್ಯಕರ ಚರ್ಚೆಯ ಮೂಲಕ ಇದನ್ನು ಬಗೆಹರಿಸುವುದು ಬಹುತ್ವ ಭಾರತದ ಭವಿಷ್ಯದ ದೃಷ್ಟಿಯಿಂದ ಅವಶ್ಯ. ಗೃಹಸಚಿವಾಲಯದ ಈ ಆದೇಶ ಸಾಂವಿಧಾನಿಕ ಸಿಂಧುತ್ವ ಪಡೆಯಲು ಸಾಧ್ಯವೇ ? ಕಾದುನೋಡಬೇಕಿದೆ.

( ಆಧಾರ : ಸುಪ್ರೀಂಕೋರ್ಟ್ ನೇಮಿಸಿರುವ ಹಿರಿಯ ವಕೀಲ ಸಂಜಯ್ ಹೆಗ್ಡೆ ಅವರ Vande mataram̧ its six stanzas and a settled question – ಲೇಖನದ ಹಿಂದೂ 13 ಫೆಬ್ರವರಿ 2026.)

Tags: BJPcongressIndiaIndian PoliticsKannadaNarendra ModiPoliticssupreme courtVande Matharam
Previous Post

ಟ್ರು ಕಾಲರ್ ಬದಲು ಕೇಂದ್ರ ಸರ್ಕಾರದಿಂದ CNAP ಸೇವೆ: ಏನಿದರ ವಿಶೇಷ?

Next Post

ಭಾರತ ದೇಶದಲ್ಲಿ ಮುಸ್ಲಿಮರು ಸುರಕ್ಷಿತರು-ಎ.ಪಿ.ಅಬೂಬಕರ್ ಮುಸ್ಲಿಯಾರ್

Related Posts

ಸಂವಿಧಾನದ ಅಶಯಗಳು -ಬಾಬು ಜಗಜೀವನ್ ರಾಮ್-
Top Story

ಸಂವಿಧಾನದ ಅಶಯಗಳು -ಬಾಬು ಜಗಜೀವನ್ ರಾಮ್-

by ಪ್ರತಿಧ್ವನಿ
April 21, 2026
0

ವಿಶೇಷ ಲೇಖನ : ನಾ. ದಿವಾಕರ್‌.. (ಡಾ ಬಾಬು ಜಗಜೀವನ್ರಾಮ್ ಅಧ್ಯಯನ, ಸಂಶೋಧನೆ ಮತ್ತು ವಿಸ್ತರಣ ಕೇಂದ್ರ ಹಾಗೂ ಪರಿಶಿಷ್ಟ ಜಾತಿ/ಪಂಗಡ ವಿಶೇಷ ಘಟಕ ಮೈಸೂರು ವಿಶ್ವವಿದ್ಯಾನಿಲಯ...

Read moreDetails
“ನನ್ನ ಚುನಾವಣೆಯ ವೇಳೆ ಮನೆ ಸುತ್ತ ಹಳದಿ ನೀರು, ಏನೇನೋ ಹಾಕಿ ಹೋಗ್ತಿದ್ರು, ಸಿಎಂಗೂ ಮಾಟ ಮಂತ್ರ ಮಾಡಿಸಿದ್ದಾರೆ ಅನ್ಸುತ್ತೆ”

“ನನ್ನ ಚುನಾವಣೆಯ ವೇಳೆ ಮನೆ ಸುತ್ತ ಹಳದಿ ನೀರು, ಏನೇನೋ ಹಾಕಿ ಹೋಗ್ತಿದ್ರು, ಸಿಎಂಗೂ ಮಾಟ ಮಂತ್ರ ಮಾಡಿಸಿದ್ದಾರೆ ಅನ್ಸುತ್ತೆ”

April 21, 2026
ರಾಜ್ಯ ಸರ್ಕಾರಕ್ಕೆ ಚಾಟಿ ಬೀಸಿದ ಹೈಕೋರ್ಟ್‌ : SSLC ಹಿಂದಿ ಗ್ರೇಡ್‌ ವಿವಾದಕ್ಕೆ ನ್ಯಾಯಾಲಯ ಹೇಳಿದ್ದೇನು..?

ರಾಜ್ಯ ಸರ್ಕಾರಕ್ಕೆ ಚಾಟಿ ಬೀಸಿದ ಹೈಕೋರ್ಟ್‌ : SSLC ಹಿಂದಿ ಗ್ರೇಡ್‌ ವಿವಾದಕ್ಕೆ ನ್ಯಾಯಾಲಯ ಹೇಳಿದ್ದೇನು..?

April 21, 2026
ತಮಿಳುನಾಡಿಗೆ ಡಿಎಂಕೆ ಮೈತ್ರಿಕೂಟದಿಂದಲೇ ಭವಿಷ್ಯ: ಡಿಸಿಎಂ ಡಿ.ಕೆ. ಶಿವಕುಮಾರ್‌

ತಮಿಳುನಾಡಿಗೆ ಡಿಎಂಕೆ ಮೈತ್ರಿಕೂಟದಿಂದಲೇ ಭವಿಷ್ಯ: ಡಿಸಿಎಂ ಡಿ.ಕೆ. ಶಿವಕುಮಾರ್‌

April 21, 2026
ಕುಮಾರಸ್ವಾಮಿ ದೊಡ್ಡ ವ್ಯಕ್ತಿ ಇರಬಹುದು, ಆದ್ರೆ ನನಗೂ ಸಣ್ಣ ಅನುಭವವಿದೆ : ಹೆಚ್‌ಡಿಕೆಗೆ ಡಿಕೆಶಿ ಡಿಚ್ಚಿ..

ಕುಮಾರಸ್ವಾಮಿ ದೊಡ್ಡ ವ್ಯಕ್ತಿ ಇರಬಹುದು, ಆದ್ರೆ ನನಗೂ ಸಣ್ಣ ಅನುಭವವಿದೆ : ಹೆಚ್‌ಡಿಕೆಗೆ ಡಿಕೆಶಿ ಡಿಚ್ಚಿ..

April 21, 2026
Next Post
ಭಾರತ ದೇಶದಲ್ಲಿ ಮುಸ್ಲಿಮರು ಸುರಕ್ಷಿತರು-ಎ.ಪಿ.ಅಬೂಬಕರ್ ಮುಸ್ಲಿಯಾರ್

ಭಾರತ ದೇಶದಲ್ಲಿ ಮುಸ್ಲಿಮರು ಸುರಕ್ಷಿತರು-ಎ.ಪಿ.ಅಬೂಬಕರ್ ಮುಸ್ಲಿಯಾರ್

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada