ಭಾರತ ದೇಶದಲ್ಲಿರುವ ಮುಸ್ಲಿಮರು ಯಾವುದೇ ಅಡೆತಡೆ ಅಥವಾ ಅಭದ್ರತೆಯನ್ನು ಎದುರಿಸುತ್ತಿಲ್ಲ. ಇಲ್ಲಿ ಮುಸ್ಲಿಂರು ಸುರಕ್ಷಿತರು ಎಂದು ಇಂಡಿಯನ್ ಗ್ರ್ಯಾಂಡ್ ಮುಫ್ತಿ ಕಾಂತಪುರಂ ಎ.ಪಿ.ಅಬೂಬಕರ್ ಮುಸ್ಲಿಯಾರ್ ಹೇಳಿದ್ದಾರೆ.

ಕೇರಳದ ಪ್ರಭಾವಿ ಸುನ್ನಿ ನಾಯಕ, ಭಾರತದ ಗ್ರ್ಯಾಂಡ್ ಮುಫ್ತಿ ಎ.ಪಿ. ಅಬೂಬಕರ್ ಮುಸ್ಲಿಯಾರ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ದೆಹಲಿಯಲ್ಲಿ ಸೋಮವಾರ ಭೇಟಿಯಾಗಿದ್ದಾರೆ. ಮೋದಿ ಅವರನ್ನು ಭೇಟಿಯಾದ ನಂತರ ಸಂದರ್ಶನದಲ್ಲಿ ಮಾತನಾಡಿದ ಅವರು,ಮುಸ್ಲಿಮರ ಸುರಕ್ಷತೆಯ ಬಗ್ಗೆ ಯಾವುದೇ ಕಳವಳ ಇಲ್ಲ. ದೇಶದಲ್ಲಿ ನಮ್ಮ ಸಮುದಾಯ ಸುರಕ್ಷಿತವಾಗಿದೆ ಎಂದು ಹೇಳಿದರು.ಭಾರತದಲ್ಲಿ ಶಾಂತಿ ಮತ್ತು ನೆಮ್ಮದಿ ಇರಬೇಕು. ದೇಶದ ಪ್ರಗತಿಗಾಗಿ ಏಕತೆ, ಶಾಂತಿ ಹಾಗೂ ಸಾಮೂಹಿಕ ಪ್ರಯತ್ನಗಳ ಅಗತ್ಯವಿದೆ.ಎಲ್ಲರೂ ಸುರಕ್ಷಿತರಾಗಿರುವುದರಿಂದ ಈ ದೇಶದಲ್ಲಿ ಮುಸ್ಲಿಮರಿಗೆ ಯಾವುದೇ ಸಮಸ್ಯೆ ಇಲ್ಲ ಎಂದರು.

ಪ್ರಧಾನಿ ಜೊತೆಗೆ ರಾಷ್ಟ್ರೀಯ ಅಭಿವೃದ್ಧಿ ಮತ್ತು ಸಾಮಾಜಿಕ ಸಾಮರಸ್ಯದ ಬಗ್ಗೆ ಮಾತನಾಡಿದ್ದೇನೆ.ಎಲ್ಲ ಸಮುದಾಯಗಳು ಒಟ್ಟಾಗಿ ಸೇರಿ ಕೆಲಸ ಮಾಡಬೇಕು. ಶಾಂತಿ ಮತ್ತು ಏಕತೆ ಇಂದಿನ ಅಗತ್ಯ. ದೇಶದ ಜನರು ಜಾತಿ ಮತ್ತು ಧಾರ್ಮಿಕ ಭಿನ್ನತೆಗಳನ್ನು ಮೀರಿ ಮಾನವೀಯತೆಗಾಗಿ ನಿಲ್ಲಬೇಕು ಎಂದು ಹೇಳಿದರು.






